ನಾವು ಮತ್ತು ಕಾರು ಹಾರುವಂತಾದರೆ!?

– ಪ್ರಶಾಂತ ಸೊರಟೂರ.

ನಮ್ಮ ಬದುಕನ್ನು ಹಸನಾಗಿಸಬಲ್ಲ ಅರಿಮೆಯ ಉಳುಮೆ ಜಗತ್ತಿನ ಹಲವೆಡೆ ನಡೆಯುತ್ತಿದೆ. ಒಂದೆಡೆ ಹಲವಾರು  ರೋಗಗಳಿಗೆ ಹೊಸ ಹೊಸ ಮದ್ದುಗಳನ್ನು ಕಂಡುಹಿಡಿಯಲಾಗುತ್ತಿದ್ದರೆ ಮತ್ತೊಂದೆಡೆ ನೆಲದಲ್ಲಿ ಎದುರಾಗಲಿರುವ ಜಾಗದ ಕೊರತೆಯನ್ನು ನೀಗಿಸಲು  ಬಾನಂಚಿನಲ್ಲಿ ಬೇರೆ ನೆಲೆಗಳನ್ನು ಹುಡುಕುವಂತ ಕೆಲಸಗಳು ನಡೆಯುತ್ತಿವೆ. ನಮ್ಮ ಮುಂದಿನ ನಾಳೆಗಳನ್ನು ಬೆಳಗಬಲ್ಲ ಇಂತ ಕೆಲವು ಹೊಳಹುಗಳ ಪಟ್ಟಿ ಇಲ್ಲಿದೆ.

1_google_carತಂತಾನೇ ಓಡುವ ಕಾರು

ಇಂದಿನ ಎಡೆಬಿಡದ ಬದುಕಿಗೆ ಕಾರು ತುಂಬಾ ಸಾಮಾನ್ಯವಾಗುತ್ತಿದೆ ಹಾಗೆನೇ ಅದರಿಂದ ಉಂಟಾಗುವ ಅಪಗಾತಗಳು ಕೂಡ ಹೆಚ್ಚಾಗುತ್ತಿವೆ. ಕಾರಿನಲ್ಲಿ ಉಂಟಾಗುವ ಕೊರತೆಗಿಂತ, ಅದನ್ನು ಓಡಿಸುವವರು ಮಾಡುವ ತಪ್ಪುಗಳಿಂದಾಗಿಯೇ ಹೆಚ್ಚಾಗಿ ಅಪಗಾತಗಳು ನಡೆಯುವುದೆಂದು ಕಂಡುಕೊಂಡಾದ ಮೇಲೆ ತಂತಾನೇ ಓಡಬಲ್ಲ ಕಾರಿನ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. 1990 ರಿಂದ ಈಚೆಗೆ ಹಲವು ಅರಕೆಯ ಕೆಲಸಗಳು ನಡೆಯುತ್ತಿದ್ದರೂ ಇಲ್ಲಿಯವರೆಗೆ ರಸ್ತೆಯ ಮೇಲೆ ತೊಡಕಿಲ್ಲದಂತೆ ಓಡಾಡುವ ಯಾವುದೇ ಕಾರು ಬಂದಿಲ್ಲ. ಈ ನಿಟ್ಟಿನಲ್ಲಿ ಮಿಂಬಲೆ ಹುಡಕಾಟವನ್ನು ಬೆರಗುಗೊಳಿಸುವಂತೆ ಅಣಿಗೊಳಿಸಿದ ಗೂಗಲ್, ತಂತಾನೇ ಓಡಬಲ್ಲ ಕಾರಿನಡೆಯೂ ತನ್ನ ಕಯ್ ಚಾಚಿದ್ದು, ಕೆಲವು ವರುಶಗಳಲ್ಲಿ ಈ ಕನಸನ್ನು ನನಸಾಗಿಸುವ ಪ್ರಯತ್ನ ನಡೆಸಿದೆ.

2_flying_Carಹಾರುವ ಕಾರು

ತಂತಾನೇ ಓಡಬಲ್ಲ ಕಾರಿದ್ದರೆ ಅಪಗಾತಗಳನ್ನು ತಡೆಗಟ್ಟಬಹುದು ಆದರೆ ರಸ್ತೆಯ ದಟ್ಟಣೆಗೆ ಏನು ಮಾಡುವುದು ? ಹಾರುವ ಕಾರು ಇಂತದೊಂದು ಕೇಳ್ವಿಗೆ ಉತ್ತರವಾಗಬಲ್ಲದು. ರಸ್ತೆಯಲ್ಲಿ ಓಡುವ ಕಾರು ಮತ್ತು ಬಾನಲ್ಲಿ ಹಾರುವ ವಿಮಾನದ ನಡುವಿನ ನಡೆ ಇದು. ಕಾರು ಮೇಲೆ ಹಾರಬೇಕೆಂದರೆ ಅದು ನೆಲಸೆಳೆತವನ್ನು (earth’s gravity) ಮೀರಬೇಕು ಅಂದರೆ ಅದಕ್ಕೆ ಇದಿರು-ನೆಲಸೆಳೆತ (anti-gravity) ಒದಗಿಸುವಂತ ಚಳಕಗಳು ಎಟುಕಬೇಕು, ಅದೂ ಕಡಿಮೆ ಬೆಲೆಯಲ್ಲಿ. ಹಲವು ದೇಶಗಳಂತೆ, ಅಮೇರಿಕಾದ ನಾಸಾ ಕೂಟವೂ ಈ ಕೆಲಸದಲ್ಲಿ  ಬಿಟ್ಟುಬಿಡದೇ ತೊಡಗಿಕೊಂಡಿದೆ.

3_neeroLagina_ooruನೀರೊಳಗಿನ ಊರು

ನೆಲದಲ್ಲಿ ಜಾಗ ಸಾಕಾಗುತ್ತಿಲ್ಲ ಹಾಗಾದರೆ ನೀರೊಳಗೆ ನಮ್ಮ ಸೂರು ಕಟ್ಟಿಕೊಂಡರೆ ಹೇಗೆ ? ಮೀನಿನಂತೆ ಸುಳುವಾಗಿ ಬದುಕಲು ಆಗದಿದ್ದರೂ ಕಡಲಾಳದಲ್ಲಿ ತಮ್ಮ ನೆಲೆಯನ್ನು ಕಟ್ಟಿಕೊಳ್ಳಲು ಎದುರಾಗುವ ತೊಡಕುಗಳನ್ನು ಮೀರುವ ಹಲವಾರು ಸಂಶೋದನೆಗಳು ನಡೆಯುತ್ತಿವೆ. ಮುಂದೊಮ್ಮೆ ನೆಲದಂತೆ ನೀರಿನೊಳಗೂ ನಮ್ಮ ಶಾಲೆಗಳು ನಡೆದರೇ ಅಚ್ಚರಿ ಪಡಬೇಕಿಲ್ಲ.

4ರೋಬೋಟ ಮನೆಯಾಳು

ಕೆಲಸ ಮಾಡಲು ಮಂದಿ ಸಿಗದಿರುವುದು ಹೆಚ್ಚಾಗಿ ಮುಂದುವರೆದ ದೇಶಗಳಲ್ಲಿ ಎದುರಾಗಿರುವ ದೊಡ್ಡ ತೊಡಕು. ಹಾಗಾದರೆ ಮನೆಯ ಎಲ್ಲ ಕೆಲಸವನ್ನೂ ಮನುಶ್ಯರಂತೆ ಮಾಡುವ ಉಕ್ಕಾಳು (robot) ಮನೆಯಲ್ಲಿದ್ದರೆ ಎಶ್ಟು ಸುಲಬವಲ್ಲವೇ ? ಈ ಬಗೆಯ ರೋಬೋಗಳನ್ನು ಹುಟ್ಟುಹಾಕುವ ಕೆಲಸದಲ್ಲಿ  ಜಪಾನ್ ಎಂದಿನಂತೆ ಮುಂಚೂಣಿಯಲ್ಲಿದೆ. ಅಡುಗೆ ಮಾಡುವುದರಿಂದ ಹಿಡಿದು, ಮುಸುರೆ ತೊಳೆಯುವ, ಕಸ ಗುಡಿಸುವ, ತೋಟ ನೋಡಿಕೊಳ್ಳುವ, ಮಕ್ಕಳಿಗೆ ಬಟ್ಟೆ ತೊಡಿಸುವಂತ ಎಲ್ಲ ಮನೆ ಕೆಲಸಗಳನ್ನೂ ರೋಬೋಟಗಳು ಮಾಡಲಿವೆ.

5_managaLಮಂಗಳಕ್ಕೊಂದು ನೆಗೆತ

ನೆಲದಾಚೆಗೆ, ಬಾನಿನಲ್ಲಿ ನೆಲೆ ಕಟ್ಟಿಕೊಳ್ಳುವುದು ಮಾನವನ ಹೆಬ್ಬಯಕೆಗಳಲ್ಲೊಂದು. ಚಂದ್ರನಲ್ಲಿ ಕಾಲಿರಿಸಿ ಹತ್ತಾರು ವರುಶಗಳಾಗಿದ್ದರೂ, ಬಾನಿನಲ್ಲಿ ನೆಲೆಸುವ ತನ್ನ ಆಶೆಯನ್ನು ಈಡೇರಿಸಿಕೊಳ್ಳಲು ಮನುಶ್ಯರಿಗೆ ಇನ್ನೂ ಆಗುತ್ತಿಲ್ಲ. ಈ ನಿಟ್ಟಿನಲ್ಲಿ ಮನುಶ್ಯರ ಗಮನ ಸೆಳೆದಿರುವ ಇನ್ನೊಂದು ನೆಲೆಯೆಂದರೆ ಮಂಗಳ ಗ್ರಹ. ಇಲ್ಲಿ  ಮನುಶ್ಯರು ಬದುಕಲು ನೆರವಾಗಬಲ್ಲ ನೀರು ಮತ್ತು ಹೊಂದುವ ವಾತಾವರಣವಿದೆ ಎಂದು ತಿಳಿದುಬಂದಿದೆ. ಮಂಗಳ ತಲುಪಲು ಹಲವಾರು ತೊಡಕುಗಳಿದ್ದರೂ ಇತ್ತೀಚಿನ ಅರಕೆಗಳು ಇವುಗಳನ್ನು ನೀಗಿಸುವಲ್ಲಿ ಗೆಲುವಿನ ಹೆಜ್ಜೆ ಹಾಕುತ್ತಿವೆ. ಅಮೇರಿಕಾ 2030 ರವರೆಗೆ ಇದರಲ್ಲಿ ಗೆಲುವು ಗಳಿಸುವ ಗುರಿ ಇಟ್ಟುಕೊಂಡಿದ್ದು, ಬಾರತವೂ ಕೂಡಾ ಇದೇ ವರುಶದ ನವೆಂಬರ ತಿಂಗಳಿನಲ್ಲಿ ಮಂಗಳನತ್ತ ಮಾನವನಿಲ್ಲದ ತನ್ನ ಮೊದಲ ಬಾನಬಂಡಿಯನ್ನು ಕಳಿಸಲು ಸಜ್ಜಾಗಿದೆ.

7_jetpackನಾವೇ ಹಾರುವಂತಾದರೇ !?

ಬೆನ್ನಿನ ಹಿಂದೆ ಚೀಲವನ್ನು ಕಟ್ಟಿಕೊಂಡು ನಾವೇ ಹಾರುವಂತಾದರೆ ಹಾರುವ ಕಾರು ಏಕೆ ಬೇಕು? 1950 ರಶ್ಟು ಹಿಂದೆಯೇ ಜರ‍್ನನ್ ದೇಶ ಇಂತ ಕೆಲಸಕ್ಕೆ ಕಯ್ ಹಾಕಿದರೂ ಇಲ್ಲಿಯವರೆಗೆ ಇದರಲ್ಲಿ ಹವ್ದುದೆನ್ನುವಶ್ಟು ಗೆಲುವು ಸಿಕ್ಕಿಲ್ಲ. ಅಮೇರಿಕಾ ಕೂಡ ಈ ಹಿಂದೆ ನಯಟ್ರೋಜನ್ ಉರುವಲಿನಿಂದ ನಡೆಯಬಲ್ಲ ಚಿಮ್ಮುಚೀಲವನ್ನು (jetpack) ಕಂಡುಹಿಡಿಯಿತಾದರೂ ಅದರಲ್ಲಿ ಹೆಚ್ಚಿನ ಗೆಲುವು ಕಾಣಲಿಲ್ಲ. 2011 ರಲ್ಲಿ  ನ್ಯೂಜಿಲ್ಯಾಂಡನ ಮಾರ‍್ಟಿನ್ ಏರಕ್ರ‍ಾಪ್ಟ್ ಕೂಟ ಮಾಡಿ ತೋರಿಸಿರುವ ಚಿಮ್ಮುಚೀಲ ಮನುಶ್ಯರನ್ನು ಹೊತ್ತು ಸುಮಾರು 30 ನಿಮಿಶಗಳವರೆಗೆ 5000 ಅಡಿಗಳಶ್ಟು ಮೇಲೆ ಕೊಂಡೊಯ್ದದ್ದು ಮುಂದೊಮ್ಮೆ ಇದರಲ್ಲಿ ಹೆಚ್ಚಿನ ಗೆಲುವು ಕಾಣುವ ಆಸೆ ಮೂಡಿಸಿದೆ.

6_food_in_pillಗುಳಿಗೆಯ ಊಟ

ಮಂದಿಯೆಣಿಕೆ ಹೆಚ್ಚಾದಂತೆ ಆಹಾರದ ಕೊರತೆ ಎಲ್ಲೆಡೆ ತಲೆದೋರುತ್ತಿದೆ ಹಾಗಾಗಿ ನೆಲದ ಬೆಳೆ, ಕಡಲಿನಲ್ಲಿ ಸಿಗುವ ಜೀವಿಗಳು ಮುಂದೊಮ್ಮೆ ಆಹಾರಕ್ಕೆ ಸಾಕಾಗಲಿಕ್ಕಿಲ್ಲ. ಇದೆರೆಡೆಗೆ ಬಿರುಸಿನಿಂದ ಅರಕೆ ನಡೆದಿದ್ದು, ಮಯ್ಯಿಗೆ ಬೇಕಾಗುವ ಕೊಬ್ಬು, ಪ್ರೋಟಿನ್, ವಿಟಾಮಿನ್ ಮುಂತಾದ ಪೊರೆತಗಳನ್ನು (nutrients) ಒದಗಿಸಬಲ್ಲ ರಾಸಾಯನಿಕ ಗುಳಿಗೆಗಳನ್ನು ಕಂಡುಹಿಡಿಯಲಾಗುತ್ತಿದೆ. ಕುತ್ತು ಬಂದಾಗಶ್ಟೇ ಅಲ್ಲ ಪ್ರತಿದಿನದ ಊಟವೂ ಮುಂದೆ ಗುಳಿಗೆಗಳಾಗಲಿವೆ !

8_brain-computerನಮಗಿಂತ ಮಿಗಿಲಾದ ಕಂಪ್ಯೂಟರ್

ಎಣಿಕಗಳು (computers) ನಮ್ಮ ಬದುಕನ್ನು ಆವರಿಸಿಕೊಂಡಿದ್ದರೂ ಅವುಗಳಿಗೆ ತನ್ನದೇ ಆದ ತಿಳಿವು ಹೊಮ್ಮಿಸಲು ಇನ್ನೂ ಆಗಿಲ್ಲ. ಮನುಶ್ಯರು ಅವುಗಳ ಒಡಲಿನಲ್ಲಿ ಬರೆದಿಟ್ಟ ಗುಟ್ಟುಬರಹಗಳಂತೆ ನಡೆಯಲಶ್ಟೇ ಅವುಗಳಿಗೆ ಈಗ ಗೊತ್ತು. ಕಂಪ್ಯೂಟರಗಳು ನಮ್ಮಂತೆ ತಮ್ಮದೇ ಆದ ಯೋಚನೆ ಮಾಡುವಂತಾದರೆ ಹೇಗೆ ? ಈ ನಿಟ್ಟಿನಲ್ಲಿ ಮಾಡಿದ ಜಾಣ್ಮೆ (artificial intelligence) ಹೆಚ್ಚಿನ ಮಯ್ಲಿಗಲ್ಲುಗಳನ್ನು ದಾಟುತ್ತಿದ್ದು, 2020 ರವರೆಗೆ ಮನುಶ್ಯರಂತೆ ಯೋಚಿಸಬಲ್ಲ ಎಣಿಕ ಹೊರೆಹೊಮ್ಮಲಿರುವುದಾಗಿ ತಿಳಿದುಬಂದಿದೆ.

ಮಾಹಿತಿ ಸೆಲೆ: http://www.howstuffworks.com/

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. 19/07/2013

    […] ಯಾರಿಗೆ ಬೇಡ? ಹವ್ದು ಕಣ್ರಿ, ಮುಂದಿನ ದಿನಗಳ ಮುಂಚೂಣಿಯ ಹತ್ತು ಹೊಳಹುಗಳಲ್ಲಿ ಒಂದಾದ ಈ ಕಾರು ಈಗ […]

ಅನಿಸಿಕೆ ಬರೆಯಿರಿ:

%d bloggers like this: