ಈ ವಾರ ಮತ್ತೆ ಶುರುವಾಗಲಿದೆ ಕೂಡುವಣಿಗಳ ಗುದ್ದಾಟ

ಪ್ರಶಾಂತ ಸೊರಟೂರ.

ನಮ್ಮ ಒಟ್ಟವ (universe) ಹಬ್ಬಲು ತೊಡಗಿದ ಬಿಗ್ ಬ್ಯಾಂಗ್ ನಂತಹ ಪಾಡನ್ನು ಮರುಹುಟ್ಟಿಸಲು ಜಗತ್ತಿನ ಎಲ್ಲಕ್ಕಿಂತ ದೊಡ್ಡ ಸಲಕರಣೆಯೊಂದನ್ನು ಅಣಿಗೊಳಿಸಿದ್ದರ ಕುರಿತು ಕಳೆದ ಬರಹದಲ್ಲಿ ತಿಳಿದುಕೊಂಡೆವು. ಕೂಡುವಣಿಗಳ (protons) ಹಲವು ಸಾವಿರ ಗೊಂಚಲುಗಳನ್ನು ಎದಿರು ದಿಕ್ಕಿನಲ್ಲಿ, ಬೆಳಕಿನ ವೇಗಕ್ಕೆ ಸಾಟಿಯಾಗಿ ಹರಿಸಿ ಅವುಗಳು ಒಂದಕ್ಕೊಂದು ಡಿಕ್ಕಿ ಹೊಡೆಯುವಂತೆ ಮಾಡಿ ಅದರಿಂದ ಹೊರಹೊಮ್ಮುವ ತುಣುಕುಗಳನ್ನು ಒರೆಗೆಹಚ್ಚುವುದು ಈ ಹಮ್ಮುಗೆಯ ಹಿಂದಿರುವ ಗುರಿ.

ಅಣು ನಡುವಣ ಕುರಿತು ಅರಕೆ ನಡೆಸುವ ಯುರೋಪ್ ಒಕ್ಕೂಟ (CERN) ಎಡೆಬಿಡದೇ ಹತ್ತು ವರುಶಗಳಲ್ಲಿ ಈ ಪೆರ‍್ಚೂಟಿಯನ್ನು (machine) ಅಣಿಗೊಳಿಸಿತು. 1998 ರಲ್ಲಿ ಕೈಗೆತ್ತಿಕೊಂಡ ಕಟ್ಟಣೆಯ ಕೆಲಸ 2008 ರಲ್ಲಿ ಕೊನೆಗೊಂಡಾಗ ಇದರಿಂದ ಹಿಂದೆಂದೂ ಕಂಡಿರಲಾರದ ವಿಶಯಗಳು ಹೊರಹೊಮ್ಮಬಹುದು ಅಂತಾ ಅರಿಗರಲ್ಲಿ ಕುತೂಹಲವಿದ್ದರೆ, ಇಲ್ಲಿ ನಡೆಯುವ ಪ್ರಯೋಗಗಳು ಮನುಶ್ಯರ ಹಿಡಿತ ತಪ್ಪಿ ಹೋಗಬಹುದು ಹಾಗಾದಾಗ ಇಡಿ ಜಗತ್ತೇ ತನ್ನ ಕೊನೆಯುಸಿರು ಎಳೆಯಬೇಕಾದೀತು ಅನ್ನುವ ಅಂಜಿಕೆಯೂ ಎಲ್ಲೆಡೆ ಹರಡಿತ್ತು. ಇಂತಹ ಅನುಮಾನಗಳನ್ನು ಒರೆಗೆಹಚ್ಚಲು CERN ಒಕ್ಕೂಟ ಅರಿಗರ ಗುಂಪೊಂದನ್ನು ನೇಮಿಸಿತು. ಈ ನಿಟ್ಟಿನಲ್ಲಿ ಅರಕೆ ನಡೆಸಿದ ಅರಿಗರ ಗುಂಪು, ಕೂಡುವಣಿಗಳ ಗುದ್ದಾಟಕ್ಕೆ ಕಟ್ಟಲು ಹೊರಟಿರುವ ಸಲಕರಣೆಯಿಂದ ತೊಂದರೆ ಇಲ್ಲ ಎಂದು ವರದಿ ಸಲ್ಲಿಸಿತು.

2008 ಸಪ್ಟಂಬರ್ 10, LHC ಯಲ್ಲಿ ಕೂಡುವಣಿಗಳ ಮೊದಲ ಗೊಂಚಲನ್ನು ಹರಿಸಲಾಯಿತು ಆದರೆ ಇದಾದ 9 ದಿನಗಳಲ್ಲೇ ಮಿಂಚಿನ (electrical) ಕೆಲವು ಕೊಂಡಿಗಳನ್ನು ತಪ್ಪಾಗಿ ಜೋಡಿಸಿದ್ದರಿಂದ, ಸೆಳೆಗಲ್ಲುಗಳನ್ನು (magnets) ತಂಪಾಗಿ ಇರಿಸಲು ಬಳಕೆಯಾಗುವ ಹೀಲಿಯಂ ಹೊದಿಕೆ ಹರಿದುಹೋಯಿತು. ಇದರಿಂದಾಗಿ ಸುಮಾರು 50 ಸೆಳೆಗಲ್ಲುಗಳು ಹಾಳಾಗುವುದರ ಜತೆಗೆ ಹೀಲಿಯಂ ಆವಿಯು ಹೆಚ್ಚಿನ ಒತ್ತಡದೊಂದಿಗೆ ಹಲವೆಡೆ ನುಗ್ಗತೊಡಗಿತು. ಕೂಡುವಣಿಗಳು ಹೆಚ್ಚಿನ ವೇಗ ಪಡೆಯುವಂತಾಗಲು ಬಳಕೆಯಾಗುವ ಬರಿದು ಕೊಳವೆಗಳೂ (vacuum pipes) ಹಾನಿಗೊಳಗಾದವು. ಆಗ ಅಲ್ಲಿನ ಅರಿಗರು ಹೊತ್ತಿಗೆ ತಕ್ಕ ಜಾಣ್ಮೆಯಿಂದ ಕೈಗೊಂಡ ಆಗಾತ ತಡೆಯುವ ಕೆಲಸದಿಂದಾಗಿ ಇನ್ನಶ್ಟು ತೊಂದರೆಗಳಾಗುವುದನ್ನು ತಪ್ಪಿಸಿದರು. ಆದರೆ ಈ ಕೇಡಿನಿಂದಾದ ತೊಡಕುಗಳನ್ನು ಸರಿಪಡಿಸಲು ಮತ್ತು ಮತ್ತೊಮ್ಮೆ ಹೀಗಾಗದಂತೆ ಮುನ್ನೆಚ್ಚೆರಿಕೆಯ ಕ್ರಮಗಳನ್ನು ಕೈಗೊಳ್ಳಲು ಮುಂದಿನ ಹಲವು ತಿಂಗಳುಗಳು ಬೇಕಾದವು.

ಇಟ್ಟ ಮೊದಲ ಹೆಜ್ಜೆಯಲ್ಲೇ ಸೋಲಾದರೂ ಎದೆಗುಂದದ ಅರಿಗರ ಗುಂಪು ನವಂಬರ್ 9, 2009 ರಲ್ಲಿ ಮತ್ತೊಮ್ಮೆ ಕೂಡುವಣಿಗಳ ಗೊಂಚಲುಗಳನ್ನು LHC ಯಲ್ಲಿ ಹರಿಸಿತು. ಮೂರು ದಿನಗಳ ಬಳಿಕ ಎದಿರು ದಿಕ್ಕಿನಲ್ಲಿ ಹರಿಸಿದ ಕೂಡುವಣಿಗಳ ಗೊಂಚಲುಗಳು ಮೊದಲ ಬಾರಿಗೆ ಒಂದಕ್ಕೊಂದು ಗುದ್ದಿದವು. ಈ ಗುದ್ದಾಟವು ಸುಮಾರು 450 GeV ಶಕ್ತಿಯನ್ನು ಹೊಂದಿತ್ತು. ಮಾರ‍್ಚ್ 30, 2010 ರಂದು ಸುಮಾರು 3.5 TeV ನಶ್ಟು ಹೇರಳವಾದ ಶಕ್ತಿಯೊಂದಿಗೆ ಕೂಡುವಣಿಗಳು ಡಿಕ್ಕಿ ಹೊಡೆದವು ಈ ಮೂಲಕ ಈ ಗುದ್ದಾಟವು ಮನುಶ್ಯರು ಡಿಕ್ಕಿ ಹೊಡೆಸಿದ ಎಲ್ಲಕ್ಕಿಂತ ಹೆಚ್ಚಿನ ವೇಗದ, ಎಲ್ಲಕ್ಕಿಂತ ಹೇರಳವಾದ ಶಕ್ತಿಯ ಗುದ್ದಾಟ ಎಂದು ದಾಕಲಾಯಿತು.

ಮುಂದಿನ ಹಲವು ತಿಂಗಳುಗಳು LHC ಯಲ್ಲಿ ಕೂಡುವಣಿಗಳ ಹಲವು ಸಾವಿರ ಗುದ್ದಾಟಗಳಾದವು. ಆದರೆ ವಸ್ತುಗಳಿಗೆ ರಾಶಿಯನ್ನು (mass) ಒದಗಿಸುತ್ತವೆ ಎಂದೆಣಿಸಲಾದ ಹಿಗ್ಸ್ ಬೋಸಾನ್ಸ್ ಗಳ  ಸುಳಿವಿರಲಿಲ್ಲ. ಅಶ್ಟೊಂದು ವೇಗದಲ್ಲಿ ಅಪ್ಪಳಿಸುವ ಕೂಡುವಣಿಗಳ ಗುದ್ದುವಿಕೆಯಿಂದ ಹೊಮ್ಮುವ ಕಿರುತುಣುಕುಗಳನ್ನು, ಅವುಗಳು ಬೇರೆ ತುಣುಕುಗಳಾಗಿ ಮಾಯಾವಾಗುವ ಮುನ್ನವೇ ಕಂಡುಹಿಡಿಯುವುದು ಸುಲಬವಾದ ಕೆಲಸವಾಗಿರಲಿಲ್ಲ. ಅರಿಗರು ತಮ್ಮ ಹುಡುಕಾಟವನ್ನು ಎಡೆಬಿಡದೇ ಮುಂದುವರೆಸಿದರು. ಕೊನೆಗೆ ಆ ದಿನ ಬಂದೇ ಬಿಟ್ಟಿತು.

ಜುಲೈ 4, 2012 ATLAS ಮತ್ತು CMS ಕಾಣುವೆಗಳು (detectors) ಕೂಡುವಣಿಗಳ ಗುದ್ದಾಟದಲ್ಲಿ ಹೊಮ್ಮಿ ಮಾಯವಾದ ಹೊಸ ತುಣುಕುಗಳನ್ನು ಕಂಡುಹಿಡಿದಿದ್ದವು. ಆ ದಿನ CERN ಒಕ್ಕೂಟದಲ್ಲಿ ಎಲ್ಲಿಲ್ಲದ ತಲ್ಲಣ, ನಲಿವು. ಇವೇ ಅವು ಅನ್ನುವವರು ಕೆಲವರಾದರೇ, ಇಲ್ಲ ಇನ್ನಶ್ಟು ಒರೆಗೆಹಚ್ಚೋಣ ಅನ್ನುವವರು ಹಲವರು. ಅಂದು ಹೊರಹೊಮ್ಮಿದ ತುಣುಕುಗಳು ಹಿಗ್ಸ್ ಬೋಸಾನ್ಸ್ (Higgs bosons) ತುಣುಕುಗಳೆಂದು ಕೊನೆಗೂ CERN ಒಕ್ಕೂಟ ಸಾರಿತು.

ಇವುಗಳು ಹಿಗ್ಸ್ ಬೋಸಾನ್ ತುಣುಕುಗಳು ಅನ್ನುವುದರಲ್ಲಿ 5 ಕ್ಕೆ 4.5 ರ ಮಟ್ಟದ ನಂಬಿಕೆ ತನಗಿರುವುದಾಗಿ CERN ಒಕ್ಕೂಟ ತಿಳಿಸಿತು. ನಲಿವಿನ ಸಂಗತಿ ಎಂದರೆ ಈ ತುಣುಕುಗಳ ಬಗ್ಗೆ 1960 ರಲ್ಲಿ ಮೊದಲ ಬಾರಿಗೆ ಗಣಿತದ ನೆಲೆಯಲ್ಲಿ ತೋರಿಸಿಕೊಟ್ಟ ಪೀಟರ್ ಹಿಗ್ಸ್ ಕೂಡ ಆ ದಿನದ ಕಾರ‍್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಹಿಗ್ಸ್ ಬೋಸಾನ್ಸ್ ಕಂಡವು ಎಂದು ಸಾರಿದ ಕೂಡಲೇ ಅವರ ಕಣ್ಣಲ್ಲಿ ನಲಿವಿನ ಕಣ್ಣೀರು. ಅರಿಗರಿಗೆ ಇನ್ನೇನು ಬೇಕು, ತಾವು ಅರುಹಿದ ಅರಿಮೆಯು ಬೆಳಕು ಕಂಡಿತಾದರೆ ಸಾಕಲ್ಲವೇ?.

ಹಿಗ್ಸ್ ಬೋಸಾನ್ಸ್ ತುಣುಕುಗಳ ಕುರಿತು ತಿಳಿಸಿಕೊಟ್ಟಿದ್ದಕ್ಕಾಗಿ ಅಕ್ಟೋಬರ್ 8, 2013 ರಂದು ಪೀಟರ್ ಹಿಗ್ಸ್ (Peter Higgs) ಮತ್ತು ಪ್ರಾನ್ಸಿಸ್ ಎಂಗ್ಲರ‍್ಟ್ (François Englert) ಅವರಿಗೆ ನೋಬೆಲ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

2012 ರ ಕೂಡುವಣಿಗಳ ಗುದ್ದಾಟದಲ್ಲಿ ಕಂಡ ಹಿಗ್ಸ್ ಬೋಸಾನ್ಸ್ ತುಣುಕುಗಳು ಕೆಲ ಕ್ಶಣಗಳಲ್ಲಿ ಬೆಳಕಿನ ಕಣಗಳಾದ ಬೆಳಕಿಗಳಾಗಿ (photons) ಮಾರ‍್ಪಟಿದ್ದನ್ನು CMS ಕಾಣುವೆ ಕಂಡರೆ, ಅವುಗಳು ಮುವಾನ್ಸ್ (muons) ತುಣುಕುಗಳಾಗಿ ಬದಲಾದುದನ್ನು ATLAS ಕಾಣುವೆ ಕಂಡಿತು.

higgs-boson-cms-event-2

higgs-boson-atlas-event-1

ಮುಂದಿನ ಹಲವು ತಿಂಗಳುಗಳು ಅಂದು ಕಲೆಹಾಕಿದ ಗುದ್ದಾಟದ ತಿಳಿಹಗಳನ್ನು (data) ಒರೆಗೆಹಚ್ಚುವ ಕೆಲಸದತ್ತ ಸಾಗಿತು. ಹಾಗೆನೇ ಈ ನಿಟ್ಟಿನಲ್ಲಿ ಇನ್ನಶ್ಟು ತಿಳಿಹಗಳನ್ನು ಕಲೆಹಾಕಬೇಕೆಂದರೆ LHC ಗೆ ಇನ್ನಶ್ಟು ಕಸುವು ತುಂಬಬೇಕು ಎಂದು ತೀರ‍್ಮಾನಿಸಿ ಅದನ್ನು 2015 ರ ವರೆಗೆ ಮುಚ್ಚಲಾಯಿತು.

ಮಾರ‍್ಚ್ 17, 2015 ಅಂದರೆ ಕಳೆದ ವಾರ CERN ಒಕ್ಕೂಟ 2012 ರ ಕೂಡುವಣಿಗಳ ಗುದ್ದಾಟದಲ್ಲಿ ಕಲೆಹಾಕಿದ ಮಾಹಿತಿಯ ಆದಾರದ ಮೇಲೆ ಹಿಗ್ಸ್ ಬೋಸಾನ್ಸ್ ಗಳ ರಾಶಿಯನ್ನು ಕಂಡುಹಿಡಿದಿರುವುದಾಗಿ ಸುದ್ದಿಹಾಳೆಗಳಿಗೆ ಸಾರಿತು. ಅದರಂತೆ ಹಿಗ್ಸ್ ಬೋಸಾನ್ಸ್ ತುಣುಕುಗಳು 125.09 ± 0.24 GeV ನಶ್ಟು ರಾಶಿಯನ್ನು ಹೊಂದಿವೆ ಎಂದು ತಿಳಿಸಿತು.

ಸುಮಾರು ಎರಡು ವರುಶಗಳ ಕಾಲ ಹೆಚ್ಚಿನ ಕಸುವು ತುಂಬುವ ಕೆಲಸದಿಂದಾಗಿ ಮುಚ್ಚಲಾಗಿದ್ದ ಜಗತ್ತಿನ ಎಲ್ಲಕ್ಕಿಂತ ದೊಡ್ಡ ಸಲಕರಣೆ ಈ ವಾರ ಹೆಚ್ಚಿನ ಕಸುವಿನೊಂದಿಗೆ ಮತ್ತೆ ತೆರೆದುಕೊಳ್ಳಲಿದೆ. 4 TeV ಇದ್ದ ಶಕ್ತಿಯ ಮೇರೆ ಈಗ ಸುಮಾರು 6.5 TeV ಶಕ್ತಿಗೆ ಏರಿದೆ. ಕೂಡುವಣಿಗಳ ಬಿರುಸಿನ ಕಾಳಗಕ್ಕೆ ಅಂಕಣ ಅಣಿಯಾಗಿದೆ, ಅರಿಮೆಯ ಹೊಸ ಹೊಳಪಿಗಾಗಿ ಜಗತ್ತು ಕಾತುರದಿಂದ ಕಾಯುತ್ತಿದೆ.

(ತಿಳಿವಿನ ಮತ್ತು ತಿಟ್ಟಸೆಲೆಗಳು: CERN, wikipedia.org)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: