ಚೀನಾದ ಏಳಿಗೆಯಲ್ಲೂ ಪಾತ್ರ ವಹಿಸಿದ ಲೀ ಕುವಾನ್ ಯೂ

– ಪ್ರಿಯಾಂಕ್ ಕತ್ತಲಗಿರಿ.

lee-singapore

ಲೀ ಕುವಾನ್ ಯೂ ಅವರು ಮೊನ್ನೆ ( ಮಾರ‍್ಚ್ 23 2015) ತೀರಿಕೊಂಡರು. ಸಿಂಗಾಪುರವನ್ನು ಕಟ್ಟಿದವರು ಎಂದೇ ಲೀ ಕುವಾನ್ ಯೂ ಅವರನ್ನು ಗುರುತಿಸಲಾಗುತ್ತದೆ. ಮಲಾಯ್ ಜನರು, ತಮಿಳರೂ ಮತ್ತು ಚೈನೀಸ್ ಮಂದಿ ಹೆಚ್ಚೆಣಿಕೆಯಲ್ಲಿರುವ ಸಿಂಗಾಪುರದಲ್ಲಿ, ಸಂಪತ್ತು ಹುಟ್ಟಿಸುವಂತಹ ಕೆಲಸಕ್ಕೆ ಕೈ ಹಾಕಿದ ಲೀ ಅವರು, ಅಲ್ಲಿ ನೆಮ್ಮದಿಯೂ ನೆಲೆಯೂರುವಂತೆ ಮಾಡಿದರು. ಲೀ ಅವರೂ ಚೈನೀಸ್ ಮೂಲದವರೇ ಆಗಿದ್ದು, ಚೀನಾದ ಬಗ್ಗೆ ಮತ್ತು ಚೀನಾದ ಒಟ್ಟು ಶಕ್ತಿಯ ಬಗ್ಗೆ ತುಂಬಾ ನಂಬಿಕೆ ಹೊಂದಿದ್ದವರು.

ಚೀನಾದ ಏಳಿಗೆಯಲ್ಲಿ ಲೀ ಅವರ ಪಾತ್ರ:

1949ರಲ್ಲಿ ಮಾವೋ ಜೆಡಾಂಗ್ ಅವರ ಮುಂದಾಳ್ತನದಲ್ಲಿ ಕಮ್ಯುನಿಸ್ಟರ ಆಡಳಿತ ಇಡೀ ಚೀನಾದಲ್ಲಿ ಮೂಡಿತು. ಕಟ್ಟಾ ಕಮ್ಯುನಿಸ್ಟರಾಗಿದ್ದ ಮಾವೋ, ವರ‍್ಗಗಳ ನಡುವೆ ತಿಕ್ಕಾಟವೊಂದೇ ಚೀನಾದ ಮಂದಿ ಕೊಳ್ಳುಬಾಕತನದ ಹಿಂದೆ ಬೀಳದಿರುವಂತೆ ಮಾಡಬಲ್ಲುದು ಎಂಬ ಗಟ್ಟಿ ನಂಬಿಕೆ ಹೊಂದಿದ್ದರು ಎನ್ನಲಾಗುತ್ತದೆ. ಹಾಗಾಗಿ, ಚೀನಾ ಮಂದಿ ನಡುವೆ ತಿಕ್ಕಾಟವನ್ನು ಮಾವೋ ಹುರಿದುಂಬಿಸುತ್ತಿದ್ದರು ಎನ್ನಲಾಗುತ್ತದೆ. ಈ ತಿಕ್ಕಾಟವನ್ನು ಮಾವೋ ಅವರು ಯಾವ ಮಟ್ಟಕ್ಕೆ ಕೊಂಡೊಯ್ದಿದ್ದರು ಎಂದರೆ, 1967-69ರ ಹೊತ್ತಿನಲ್ಲಿ ಶಾಲೆ, ಕಾಲೇಜುಗಳನ್ನು ಮುಚ್ಚಲಾಗಿತ್ತಂತೆ. ತಮ್ಮ ತಂದೆ-ತಾಯಂದಿರ ಎದುರು ತಿರುಗಿ ಬೀಳುವಂತೆ ಮಕ್ಕಳಿಗೇ ಕರೆ ನೀಡಲಾಗಿತ್ತಂತೆ. “ಮಾವೋ ಅವರು ಚೀನಾದ ಹೆಸರುವಾಸಿ ಮುಂದಾಳು ಆಗಿದ್ದರೂ, ಚೀನಾವನ್ನು ಮುನ್ನಡೆಸುವಲ್ಲಿ ಅವರಿಗೆ ಸರಿಯಾದ ನೋಟವೇ ಇರಲಿಲ್ಲ” ಎನ್ನುವುದನ್ನು ತಮ್ಮ ಈ ಅಂಕಣವೊಂದರಲ್ಲಿ ಲೀ ಅವರು ಬರೆದಿದ್ದಾರೆ.

ಮಾವೋ ಅವರ ಸಾವಿನ ಬಳಿಕ ಚೀನಾದ ಚುಕ್ಕಾಣಿ ಹಿಡಿದ ಡೆಂಗ್ ಶಿಯಾವೋಪಿಂಗ್ ಅವರ ಬಗ್ಗೆ ಲೀ ಅವರ ಅಂಕಣದಲ್ಲಿ ಒಳ್ಳೆಯ ಅನಿಸಿಕೆ ಕಾಣುತ್ತದೆ. ಹೆಚ್ಚು ಸದ್ದು-ಗದ್ದಲವಿಲ್ಲದೆ ಚುಕ್ಕಾಣಿ ಹಿಡಿದ ಡೆಂಗ್ ಅವರು, ತಿಕ್ಕಾಟಗಳನ್ನು ಕೊನೆಗಾಣಿಸಿ, ಹಣಕಾಸು ಏಳಿಗೆಯತ್ತ ಗಮನ ಹರಿಸಿದರು. ಇಂದಿಗೆ ಸಾಕಶ್ಟು ಬೆಳೆದು ನಿಂತಿರುವ ಚೀನಾಕ್ಕೆ ಗಟ್ಟಿ ಅಡಿಪಾಯ ಹಾಕಿಕೊಟ್ಟವರು ಡೆಂಗ್ ಶಿಯಾವೋಪಿಂಗ್. ಲೀ ಅವರ ಮಾತುಗಳಲ್ಲಿ ಹೇಳುವುದಾದರೆ, “ಡೆಂಗ್ ಅವರ ಮುಂದಾಳ್ತನವಿಲ್ಲದಿದ್ದರೆ ಇಶ್ಟೊತ್ತಿಗೆ ತನ್ನ ಒಳಗಣ ಕಚ್ಚಾಟದಿಂದ ಇಡೀ ಚೀನಾವೇ ಮುರಿದು ಬೀಳುತ್ತಿತ್ತು”.

1978ರಲ್ಲಿ ಸಿಂಗಾಪುರಕ್ಕೆ ಬಂದಿದ್ದ ಡೆಂಗ್ ಅವರು, ಅಲ್ಲಿನ ಏಳಿಗೆಯನ್ನು ಕಂಡು ತಲೆದೂಗಿದ್ದರಂತೆ. ಆ ಹೊತ್ತಿನಲ್ಲಿ ಡೆಂಗ್ ಅವರನ್ನು ಮಾತನಾಡಿಸಿದ್ದ ಲೀ ಅವರು, “ಚೀನಾವು ಸಿಂಗಾಪುರವನ್ನು ಮೀರಿಸಬಲ್ಲ ಅಳವು ಹೊಂದಿದೆ” ಎಂದಿದ್ದರಂತೆ. ಸಿಂಗಾಪುರದ ಹಣಕಾಸು ನೀತಿಯ ಬಗ್ಗೆ ಹೆಚ್ಚು ತಿಳಿದುಕೊಂಡ ಡೆಂಗ್ ಅವರು, ಚೀನಾಕ್ಕೆ ಮರಳಿದ ಬಳಿಕ ಹೊರಗಣ ಹೂಡಿಕೆಗೆ (foreign investment) ಅನುಕೂಲವಾಗುವಂತೆ ನಾಲ್ಕು ಸ್ಪೆಶಲ್ ಎಕನಾಮಿಕ್ ಜೋನ್‍ಗಳನ್ನು ತೆರೆದು, ಚೀನಾದ ಏಳಿಗೆಗೆ ಮುನ್ನುಡಿ ಬರೆದರು. ಹೊರಜಗತ್ತಿಗೆ ನಿದಾನವಾಗಿ ತೆರೆದುಕೊಂಡ ಚೀನಾ, 2011ರಲ್ಲಿ ವರ‍್ಲ್ಡ್ ಟ್ರೇಡ್ ಆರ‍್ಗನೈಸೇಶನ್ ಕೂಡಾ ಸೇರಿಕೊಂಡಿತು.

“ಸಿಂಗಾಪುರದಿಂದ ನಾವು ಸಾಕಶ್ಟು ಕಲಿಯಬೇಕಿದೆ” ಎಂದು ಡೆಂಗ್ ಅವರು ಆಗಾಗ ಚೀನಾದಲ್ಲಿ ಹೇಳುತ್ತಿದ್ದುದು, ಹೆಚ್ಚೆಚ್ಚು ಚೀನಾದ ಆಡಳಿತ ಮಂದಿ ಸಿಂಗಾಪುರಕ್ಕೆ ಕಲಿಕೆಗಾಗಿ ಬರುವಂತೆ ಮಾಡಿತಂತೆ. ಜನರ ಓಡಾಟಕ್ಕೆ ಏರ‍್ಪಾಡು ಕಟ್ಟುವ ಬಗೆ, ಕಸದ ರಾಶಿಯನ್ನು ದೂರಮಾಡುವ ಬಗೆ, ಜನರ ಆರೈಕೆಗೆ ಏರ‍್ಪಾಡು ಕಟ್ಟುವ ಬಗೆ, ಸುತ್ತಲಿನ ಪರಿಸರವನ್ನು ಕಾಪಾಡಿಕೊಳ್ಳುವ ಬಗೆ, ಹೀಗೆ ಹಲವಾರು ವಿಶಯಗಳಲ್ಲಿ ಪಳಗಲು ಸಿಂಗಾಪುರದ “ನಾನ್ಯಾಂಗ್ ಸೆಂಟರ್ ಪಾರ್ ಪಬ್ಲಿಕ್ ಅಡ್ಮಿನಿಸ್ಟ್ರೇಶನ್” ಸಂಸ್ತೆಯಲ್ಲಿ ಕಲಿಯಲು ಚೀನೀಯರು ದಂಡು ದಂಡಾಗಿ ಬರತೊಡಗಿದರಂತೆ. ಇಲ್ಲಿ ಕಲಿಕೆಯನ್ನು ಚೈನೀಸ್ ನುಡಿಯಲ್ಲಿಯೇ ನೀಡಲಾಗುತ್ತಿತ್ತಂತೆ. ಇತ್ತೀಚೆಗೆ 2010ರಲ್ಲಿ, ಸಿಂಗಾಪುರದ ಇನ್ನೊಂದು ಸಂಸ್ತೆಯಾದ “ಲೀ ಕುವಾನ್ ಯೂ ಸ್ಕೂಲ್ ಆಪ್ ಪಬ್ಲಿಕ್ ಪಾಲಿಸಿ” ಕೂಡಾ ಚೀನಾದ ಆಡಳಿತ ಮಂದಿಗೆ ಕಲಿಕೆ ನೀಡಲು ಶುರುಮಾಡಿದೆಯಂತೆ.

ಸಿಂಗಾಪುರದಲ್ಲಿ ಚೈನೀಸ್ ಮಂದಿ ಹೆಚ್ಚೆಣಿಕೆಯಲ್ಲಿರುವುದರಿಂದ, ಚೀನಾದ ಏಳಿಗೆಯಿಂದ ಉಂಟಾಗುವ ಹಲವಾರು ಕೆಲಸಗಳನ್ನು/ಉದ್ದಿಮೆಗಳನ್ನು ಸಿಂಗಾಪುರದ ಮಂದಿ ಬಾಚಿಕೊಳ್ಳಬಹುದು ಎಂಬ ದೂರದನೋಟ ಲೀ ಕುವಾನ್ ಯೂ ಅವರಿಗಿತ್ತು ಎಂದೆನಿಸುತ್ತದೆ. ಆದ್ದರಿಂದಲೇ, ಚೀನಾದ ಏಳಿಗೆಗೆ ತಕ್ಕುದಾದ ಹಾದಿ ತೋರಿಸುವಲ್ಲಿ ಲೀ ಕುವಾನ್ ಯೂ ಅವರು ಸಾಕಶ್ಟು ದುಡಿದಿದ್ದರು. ಚೀನಾಕ್ಕೆ ನೆರವಾಗುವಂತಹ ಸಂಸ್ತೆಗಳನ್ನೂ ಕಟ್ಟಿದ್ದರು. ಸಿಂಗಾಪುರದಲ್ಲಿ ತಲೆಮಾರುಗಳಿಂದ ನೆಲೆಸಿರುವ ಚೈನೀಸ್ ಮಂದಿಗೆ “ನಿಮ್ಮ ಹಿರಿಯರು ನಿಮಗಾಗಿ ಬಿಟ್ಟುಹೋದ ಆಸ್ತಿಯೇ ನಿಮ್ಮ ಚೈನೀಸ್ ನುಡಿ” ಎಂದು ಲೀ ಆಗಾಗ ಹೇಳುತ್ತಿದ್ದರಂತೆ.

( ಚಿತ್ರ ಸೆಲೆ: en.gmw.cn )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications