ಜೇನುಹುಳವು ಹೂವಿನ ಸಿಹಿ ಕದಿಯುವುದು ಹೇಗೆ?

– ರತೀಶ ರತ್ನಾಕರ.
Honeybee_landing_on_milkthistle02

ಗೂಡಿನಿಂದ ಹೂವಿನತ್ತ ಹಾರಿ, ಹೂವಿನ ಜೇನನ್ನು ಹೀರಿ, ಗೂಡಿಗೆ ಹಿಂದಿರುಗಿ ಸಿಹಿಯನ್ನು ಕೂಡಿಡುವ ಜೇನುಹುಳಗಳ ಕೆಲಸ ನಾವಂದು ಕೊಂಡಶ್ಟು ಸುಲಬವಿಲ್ಲ! ಹೌದು, ಸಿಹಿಯಾದ ಜೇನು ಈ ಜೇನುಹುಳಗಳ ಮೇವು. ತಮ್ಮ ಎಂದಿನ ಕೆಲಸಗಳಿಗೆ ಹುರುಪನ್ನು ಪಡೆದುಕೊಳ್ಳಲು ಹೂವಿನ ಜೇನನ್ನು ಸವಿಯುತ್ತವೆ. ಚಳಿಗಾಲ ಇಲ್ಲವೇ ಮೇವು ಸಿಗದ ಹೊತ್ತಿನಲ್ಲಿ ತಮ್ಮ ಹೊಟ್ಟೆ ತುಂಬಿಸಿಕೊಳ್ಳಲು ಇರಲೆಂದು ಜೇನನ್ನು ಗೂಡಿನಲ್ಲಿ ಕೂಡಿಟ್ಟು ಕಾಪಾಡುತ್ತವೆ.

ಮೊದಲಿಗೆ ಬೇಹುಗಾರ ಹುಳಗಳು ಮೇವು ಸಿಗುವ ಜಾಗವನ್ನು ಹುಡುಕಿ ಹೂವಿನ ಬಂಡು(pollen) ಮತ್ತು ಸಿಹಿಯನ್ನು ಹೊತ್ತು ಗೂಡಿಗೆ ಹಿಂದಿರುಗುತ್ತವೆ. ಗೂಡಿನಲ್ಲಿ ಉಳಿದ ಜೇನುಹುಳಗಳಿಗೆ ‘ಜೇನುಹುಳದ ಕುಣಿತ‘ದ ಮೂಲಕ ಮೇವು ಸಿಗುವ ಜಾಗವನ್ನು ತಿಳಿಸುತ್ತವೆ. ಬಳಿಕ ಉಳಿದ ದುಡಿಮೆಗಾರ ಜೇನುಹುಳಗಳು ಮೇವನ್ನು ಹೊತ್ತು ತರಲು ಹೊರಡುತ್ತವೆ. ಒಂದು ಜೇನುಹುಳವು ಗೂಡಿನಿಂದ ಸುಮಾರು 4 ಕಿಲೋಮೀಟರ್ ದೂರದವರೆಗೂ ಮೇವನ್ನು ಅರಸುತ್ತಾ ಸಾಗುತ್ತದೆ. ಹುಳುವೊಂದು ಒಂದು ಬಾರಿಗೆ ಸುಮಾರು 35-40 ನಿಮಿಶಗಳವರೆಗೆ ಹಾರಾಟವನ್ನು ನಡೆಸಬಲ್ಲದು. ಒಂದೇ ಬಗೆಯ ಸುಮಾರು 200-300 ಹೂವುಗಳಿಂದ 0.05 ಗ್ರಾಂ ನಶ್ಟು ಸಿಹಿಯನ್ನು ಜೇನುಹುಳುವೊಂದು ತನ್ನ ಒಂದು ಹಾರಾಟದಲ್ಲಿ ಹೊತ್ತುತರಬಲ್ಲದು. 0.05 ಗ್ರಾಂ ಸಿಹಿಯು ಜೇನುಹುಳದ ತೂಕದ ಅರ‍್ದದಶ್ಟಾಗಿದೆ. ಒಂದು ದಿನದಲ್ಲಿ ಒಂದು ಹುಳವು ಇಂತಹ 10 ಹಾರಾಟಗಳನ್ನು ನಡೆಸಿ 0.5 ಗ್ರಾಂ ನಶ್ಟು ಸಿಹಿಯನ್ನು ಗೂಡಿಗೆ ಸಾಗಿಸಬಲ್ಲದು. ಒಟ್ಟಾರೆಯಾಗಿ ಸುಮಾರು 10,000 ಹುಳಗಳಿರುವ ಒಂದು ಗೂಡಿನಲ್ಲಿ ಒಂದು ದಿನಕ್ಕೆ ಸುಮಾರು 5 ಕಿಲೋ.ಗ್ರಾಂ ಬಂಡನ್ನು ಕೂಡಿಡಲಾಗುತ್ತದೆ. ಈ 5 ಕಿಲೋ.ಗ್ರಾಂ ಬಂಡು ಬಳಿಕ 1.50 ಕಿ.ಗ್ರಾಂ ಜೇನಾಗಿ ಗೂಡಿನಲ್ಲಿ ಮಾರ‍್ಪಾಡಗುತ್ತದೆ.

ಮೇವಿಗಾಗಿ ಹಾರಾಟ ನಡೆಸುವ ಮುನ್ನ ಹೊರಗಿನ ಗಾಳಿಪಾಡು, ಮೇವಿನ ಗುಣಮಟ್ಟ, ಸಿಗುವ ದೂರ ಮತ್ತು ಮೇವಿನ ಅಳವಿ(quantity)ಯ ಲೆಕ್ಕಾಚಾರವನ್ನು ಹಾಕುತ್ತವೆ. ಮೇವಿನ ವಿವರವನ್ನು ಹುಳಗಳು ಬೇಹುಗಾರ ಹುಳಗಳಿಂದ ಪಡೆಯುತ್ತವೆ. ಬಿಸುಪು (temperature) ನೋಡಿಕೊಂಡು ಜೇನುಹುಳಗಳು ನಡೆಸುವ ಕೆಲಸಗಳು ಹೀಗಿವೆ;

  • < 8 ಡಿಗ್ರಿ ಸೆ. – ಮೇವಿಗಾಗಿ ಹಾರಾಟ ನಡೆಸುವುದಿಲ್ಲ. ಗೂಡನ್ನು ಸುತ್ತುವರಿದು ಗೂಡಿನ ಬಿಸುಪನ್ನು ಹೆಚ್ಚಿಸುವ ಕೆಲಸದಲ್ಲಿ ತೊಡಗುತ್ತವೆ
  • 8 – 16 ಡಿಗ್ರಿ ಸೆ. – ಮೇವಿಗಾಗಿ ಹಾರಾಟ ನಡೆಸುತ್ತವೆ ಆದರೆ ತುಂಬಾ ಹೆಚ್ಚಿನ ಹಾರಾಟ ನಡೆಸುವುದಿಲ್ಲ
  • 16 – 32 ಡಿಗ್ರಿ ಸೆ. – ಮೇವಿಗಾಗಿ ಹಾರಾಟ ನಡೆಸಲು ಸರಿಯಾದ ಬಿಸುಪು. ಹೆಚ್ಚಿನ ಹಾರಾಟ ನಡೆಯುತ್ತದೆ
  • 32 ಡಿಗ್ರಿ ಸೆ. ಗಿಂತ ಹೆಚ್ಚು – ಮೇವಿಗಾಗಿ ಹಾರಾಟ ನಡೆಸುವುದಿಲ್ಲ ಬದಲಾಗಿ ನೀರಿಗಾಗಿ ಹೆಚ್ಚಿನ ಹಾರಾಟ ನಡೆಸುತ್ತವೆ

ಮೇವಿಗಾಗಿ ಹಾರುವ ಮುನ್ನ ಗೂಡಿನಲ್ಲಿರುವ ಜೇನನ್ನು ಸವಿದು ಹಾರುತ್ತವೆ. ಇದರಿಂದ ಅವು ಕೆಲವು ಹೊತ್ತುಗಳ ಕಾಲ ಹಾರಟವನ್ನು ನಡೆಸಬಹುದು. ಜೇನುಹುಳದ ಜಾಡುಹಿಡಿದು ಬರಹದಲ್ಲಿ ನೋಡಿದಂತೆ, ಜೇನುಹುಳದ ಕಣ್ಣು, ಕಾಲು, ರೆಕ್ಕೆ ಒಟ್ಟಾರೆಯಾಗಿ ಜೇನು ಹುಳದ ಮೈ ಅದಕ್ಕೆ ಮೇವು ಹುಡುಕಲು ನೆರವಾಗುವಂತಿದೆ. ಅದರ ಮೈ ಅಂಗಗಳು ಮೇವನ್ನು ಹುಡುಕಲು ಹೇಗೆ ನೆರವಾಗುತ್ತವೆ ಎಂಬುದನ್ನು ನೋಡೋಣ.

ರೆಕ್ಕೆಗಳು:
ಜೇನುಹುಳಕ್ಕೆ ಮುಂಬಾಗದ ರೆಕ್ಕೆ ಮತ್ತು ಹಿಂಬಾಗದ ರೆಕ್ಕೆ ಎಂಬ ಎರಡು ಜೋಡಿ ರೆಕ್ಕೆಗಳಿವೆ. ಸಾಮಾನ್ಯವಾಗಿ ಇತರೆ ಹುಳಗಳು ತಮ್ಮ ರೆಕ್ಕೆಗಳನ್ನು ಹೆಚ್ಚು ಬೀಸಿ ಬಡಿಯುತ್ತವೆ, ಆದರೆ ಜೇನುಹುಳಗಳು ರೆಕ್ಕೆಗಳನ್ನು ಹೆಚ್ಚು ಬೀಸುವ ಬದಲಾಗಿ ಹೆಚ್ಚು ಬಾರಿ ಪಟಪಟನೆ ಬಡಿಯುತ್ತವೆ. ಇತರೆ ಹುಳಗಳು ಸೆಕೆಂಡಿಗೆ 200 ಬಾರಿ ರೆಕ್ಕೆಯನ್ನು ಬಡಿದರೆ ಜೇನುಹುಳಗಳು 240 ಬಾರಿ ರೆಕ್ಕೆಯನ್ನು ಬಡಿಯುತ್ತವೆ. ಈ ರೆಕ್ಕೆ ಬಡಿತದಿಂದಲೇ ಜೇನುಹುಳಗಳು ‘ಜುಂಯ್’ ಎಂಬ ಸದ್ದನ್ನು ಮಾಡುವುದು. ಸಾಮಾನ್ಯ ಹುಳದ ರೆಕ್ಕೆ ಬಡಿತದ ಕೋನವು 145-165 ಡಿಗ್ರಿ ಇದ್ದರೆ ಜೇನುಹುಳದ ರೆಕ್ಕೆ ಬಡಿತದ ಕೋನ ಕೇವಲ 90 ಡಿಗ್ರಿ ಇರುತ್ತದೆ (ಕೆಳಗಿನ ಚಿತ್ರವನ್ನು ಗಮನಿಸಿ).Jenu haarata

ಜೇನುಹುಳದ ಮೈಗೆ ಹೋಲಿಸಿದರೆ ಅದರ ರೆಕ್ಕೆ ಚಿಕ್ಕದಾಗಿದೆ ಹಾಗಾಗಿ ಅದು ಬಡಿತವನ್ನು ಹೆಚ್ಚು ಮಾಡಿ ಹಾರಾಟ ನಡೆಸಬೇಕಾಗುತ್ತದೆ. ಹಾಗಿದ್ದರೂ ಜೇನುಹುಳವು ದೂರಕ್ಕೆ ಹಾರಬಲ್ಲದು, ತನ್ನ ತೂಕದ ಅರ‍್ದದಶ್ಟು ತೂಕವಿರುವ ಹೂವಿನ ಬಂಡನ್ನು ಹೊತ್ತು ತರಬಲ್ಲದು!

ಕಣ್ಣುಗಳು:
ಜೇನುಹುಳಕ್ಕಿರುವ ಸುಳುಗಣ್ಣು(Simple eyes) ಮತ್ತು ಕೂಡುಗಣ್ಣು(compound eyes)ಗಳು ಮರ-ಗಿಡ-ಬಳ್ಳಿಗಳ ನಡುವೆ ಇರುವ ಹೂವುಗಳನ್ನು ಗುರುತಿಸಲು ನೆರವಾಗುವಂತಿವೆ. ಕಣ್ಣುಗಳು ಗುಂಡಾಗಿರುವುದರಿಂದ ತಾನು ಸಾಗುತ್ತಿರುವ ದಾರಿ ಮತ್ತು ನೇಸರನ ನಡುವಿರುವ ಕೋನವನ್ನು ತಿಳಿದುಕೊಳ್ಳಲು ಇವುಗಳಿಗೆ ನೆರವಾಗಿವೆ. ಈ ಹುಳಗಳ ಕಣ್ಣುಗಳು ಕಡುನೇರಳೆ ಬಣ್ಣಗಳನ್ನು ನೋಡುವ ಕಸುವನ್ನು ಹೊಂದಿವೆ. ಜೇನುಹುಳಗಳು ಯಾವ ಯಾವ ಬಣ್ಣಗಳನ್ನು ಗುರುತಿಸುತ್ತವೆ ಎಂದು ತಿಳಿಯುವ ಮೊದಲು ಬಣ್ಣಗಳ ಬಗ್ಗೆ ಕೆಲವು ವಿವರಗಳನ್ನು ನಾವು ಅರಿಯಬೇಕಿದೆ. ಅವುಗಳನ್ನು ಈ ಕೆಳಗೆ ನೀಡಲಾಗಿದೆ.
ಕೆಳಗಿನ ಚಿತ್ರದಲ್ಲಿ ಮನುಶ್ಯರ ಕಣ್ಣಿಗೆ ಕಾಣುವ ಮತ್ತು ಕಣ್ಣಿಗೆ ಕಾಣದ ಬಣ್ಣಗಳ ಪಟ್ಟಿಯನ್ನು ನೀಡಲಾಗಿದೆ. ನೇಸರನಿಂದ ಬರುವ ಬೆಳಕಿನಲ್ಲಿ ಸುಮಾರು 700 ನ್ಯಾನೋ ಮೀಟರ್ ನಿಂದ 400 ನ್ಯಾನೋ ಮೀಟರ್ ಅಲೆಯಗಲ (Wave length) ಇರುವ ಬೆಳಕು ಬೇರೆ ಬೇರೆ ಬಣ್ಣಗಳಾಗಿ (ಕೆಂಕಿಹಹನೀನೇ) ನಮ್ಮ ಕಣ್ಣಿಗೆ ಕಾಣುವಂತಹವು. 400 ನ್ಯಾನೋ ಮೀ. ಗಿಂತ ಕಡಿಮೆ ಇರುವ ಇಲ್ಲವೇ 700 ನ್ಯಾನೋ ಮೀ. ಗಿಂತ ಹೆಚ್ಚು ಅಲೆಯಗಲ ಹೊಂದಿರುವ ಬಣ್ಣಗಳನ್ನು ನಮ್ಮ ಕಣ್ಣು ನೋಡಲಾರದು.Light Spectrum

ಇನ್ನು ಜೇನುಹುಳಗಳ ವಿಶಯಕ್ಕೆ ಬಂದರೆ ಅವು ಸುಮಾರು 600 ರಿಂದ 300 ನ್ಯಾನೋ ಮೀ. ಅಲೆಯಗಲ ಹೊಂದಿರುವ ಬಣ್ಣಗಳನ್ನು ಕಾಣಬಲ್ಲವು. ಅಂದರೆ ಮನುಶ್ಯನಿಗೆ ಹೋಲಿಸಿದರೆ ಜೇನುಹುಳಗಳು ಕಡುನೇರಳೆ ಬಣ್ಣವನ್ನು ಕಾಣಬಲ್ಲವು ಆದರೆ ಕೆಂಪು ಬಣ್ಣವನ್ನು ಕಾಣಲಾರವು! ಉಳಿದಂತೆ ಕಿತ್ತಳೆ, ಹಳದಿ, ಹಸಿರು, ನೀಲಿ ಮತ್ತು ನೇರಳೆ ಬಣ್ಣಗಳನ್ನು ಜೇನುಹುಳದ ಕಣ್ಣು ಗುರುತಿಸಬಲ್ಲದು. ಹಸಿರು ಹಾಸಿನ ಮೇಲೆ ಕೆಂಪು ಹೂವುಗಳಿದ್ದರೆ ಜೇನುಹುಳಗಳು ಅದನ್ನು ಗುರುತಿಸದೇ ಹೋಗಬಹುದು ಆದರೆ ಆ ಕೆಂಪು ಬಣ್ಣದ ಹೂವುಗಳು ಅವುಗಳಿಗೆ ಕಿತ್ತಳೆ ಇಲ್ಲವೇ ಕಂದು ಬಣ್ಣದಲ್ಲಿ ಕಾಣವುದು.Jenu kannu

ಜೇನುಹುಳಗಳು ಕಡುನೇರಳೆ ಬಣ್ಣಗಳನ್ನು ನೋಡಬಹುದಾಗಿರುವುದರಿಂದ ಹೂವಿನ ಆಳದಲ್ಲಿ ಹುದುಗಿರುವ ಬಂಡನ್ನು ಸುಲಬವಾಗಿ ಗುರುತಿಸಬಲ್ಲವು. ಸಾಮಾನ್ಯ ಕಣ್ಣಿಗೆ ಹಾಗು ಕಡುನೇರಳೆ ಬೆಳಕಿನಲ್ಲಿ ಕಾಣಬಹುದಾದ ಹೂವುಗಳ ಚಿತ್ರವನ್ನು ಈ ಕೆಳಗೆ ನೀಡಲಾಗಿದೆ. ಕಡುನೇರಳೆ ಬೆಳಕಿನಲ್ಲಿ ಕಾಣುವ ಹೂವಿನ ಎಸಳುಗಳು ಜೇನುಹುಳಗಳಿಗೆ ತುಂಬಾ ಸುಲಬವಾಗಿ ಕಾಣುವುದನ್ನು ನಾವು ಗಮನಿಸಬಹುದು.ultra - hoovuಹೂವಿನ ದಳಗಳ ಮೇಲೆ ಹೋಗಿ ಕೂರುವ ಹುಳವು ಮೊದಲು ತನ್ನ ಉದ್ದವಾದ ನಾಲಗೆಯನ್ನು ಬಳಸಿ ಹೂವಿನ ಬುಡದಲ್ಲಿರುವ ಸಿಹಿಯನ್ನು ಹೀರುತ್ತವೆ. ಹೂವಿನ ಜೇನು ಇಲ್ಲವೇ ಸಿಹಿಯು ನೀರಿನ ರೂಪದಲ್ಲಿದ್ದು ಸುಕ್ರೋಸ್, ಪ್ರುಕ್ಟೋಸ್ ಮತ್ತು ಗ್ಲೂಕೋಸ್ ಸಕ್ಕರೆಯ ಅಂಶಗಳನ್ನು ಹೊಂದಿರುತ್ತದೆ. ಇದಲ್ಲದೇ ಈ ಸಿಹಿಯಲ್ಲಿ, ಮುನ್ನು (protein), ಉಪ್ಪು, ಹುಳಿ ಮತ್ತು ಕೆಲವು ಎಣ್ಣೆಯ ಅಂಶಗಳನ್ನು ಒಳಗೊಂಡಿರುತ್ತದೆ. ಹೂವಿನ ತಳಿ ಹಾಗು ಪಂಗಡದ ಆದಾರದ ಮೇಲೆ ಅವುಗಳ ಸಿಹಿಯಲ್ಲಿನ ಸಕ್ಕರೆಯ ಅಂಶವು ಸುಮಾರು 3 ರಿಂದ 80 % ವರೆಗೂ ಬೇರೆ ಬೇರೆಯಾಗಿರುತ್ತದೆ. ಹೂವಿನ ಸಿಹಿಯಲ್ಲಿನ ಸಕ್ಕರೆಯು 30% ಗಿಂತ ಕಡಿಮೆಯಿದ್ದರೆ ಅದನ್ನು ಜೇನುಹುಳಗಳು ಹೀರಿಕೊಳ್ಳುವುದಿಲ್ಲ. ಜೇನುಹುಳದ ನಾಲಗೆಯು ಮಾನವನ ನಾಲಗೆಯಶ್ಟು ಬಗೆ ಬಗೆಯ ರುಚಿಗಳನ್ನು ಗುರುತಿಸುವ ಕಸುವನ್ನು ಹೊಂದಿಲ್ಲ ಆದರೆ ಸಿಹಿಯನ್ನು ಗುರುತಿಸುವ ಕಸುವು ತುಂಬಾ ಚೆನ್ನಾಗಿ ರೂಪುಗೊಂಡಿದೆ. ಚಿಕ್ಕ ಚಿಕ್ಕ ಕೂದಲುಗಳಿರುವ ಉದ್ದವಾದ ನಾಲಗೆಯು ಹೂವಿನಲ್ಲಿರುವ ಸಿಹಿಯು ಎಶ್ಟರ ಮಟ್ಟಿಗೆ ಸಕ್ಕರೆಯನ್ನು ಹೊಂದಿದೆ ಎಂದು ಚೆನ್ನಾಗಿ ಗುರುತಿಸಬಲ್ಲದು.

ಹೂವಿನಿಂದ ಹೀರಿಕೊಂಡ ಸಿಹಿಯನ್ನು ಜೇನುಹುಳವು ತನ್ನ ಹೊಟ್ಟೆಯಲ್ಲಿ ತುಂಬಿಕೊಳ್ಳುತ್ತದೆ. ಜೇನುಹುಳದ ಹೊಟ್ಟೆಯ ಸುಮಾರು 90% ಬಾಗದಶ್ಟು ಜಾಗವನ್ನು ಇವು ಸಿಹಿಯನ್ನು ತುಂಬಿಕೊಳ್ಳಲು ಬಳಸುತ್ತವೆ. ಮೊದಲೇ ತಿಳಿಸಿದಂತೆ ಹೊಟ್ಟೆಯಲ್ಲಿ ಸುಮಾರು 0.05 ಗ್ರಾಂ ನಶ್ಟು ಸಿಹಿಯನ್ನು ತುಂಬಿಕೊಳ್ಳಬಹುದು. ಹೊಟ್ಟೆಯಲ್ಲಿರುವ ಸಿಹಿಚೀಲ(nectar sac) ಸಿಹಿಯನ್ನು ತುಂಬಿಕೊಳ್ಳಲು ನೆರವಾಗುತ್ತದೆ. ನಾಲಗೆಯಿಂದ ಹೀರಿಕೊಳ್ಳುವ ಸಿಹಿಯು ತಿನಿಸುಗೊಳವೆಯ (esophagus) ಮೂಲಕ ನೇರವಾಗಿ ಸಿಹಿಚೀಲಕ್ಕೆ ಬರುತ್ತದೆ. ಈ ಸಿಹಿ ಚೀಲಕ್ಕೆ ಒಂದು ತೆರ‍್ಪು(valve) ಇರುತ್ತದೆ ಇದು ಬಂಡು ಚೀಲವನ್ನು ಹೊಟ್ಟೆಯ ಅರಗಿಸುವ ಬಾಗಗಳಿಂದ (ventriculus)ಬೇರ‍್ಪಡಿಸುತ್ತದೆ. ಹುಳಗಳು ಗೂಡಿಗೆ ಹಿಂದಿರುಗಿ ಹಾರುವಾಗ ಹೊಟ್ಟೆಯಲ್ಲಿರುವ ಸ್ವಲ್ಪ ಸಿಹಿಯನ್ನು ಅರಗಿಸಿಕೊಂಡು ಹಾರಲು ಹುರುಪನ್ನು ಪಡೆದುಕೊಳ್ಳುತ್ತವೆ. ಆಗ ಸಿಹಿಚೀಲದ ತೆರ‍್ಪು ತೆರೆದುಕೊಂಡು ಬೇಕಾದಶ್ಟು ಸಿಹಿಯು ಅರಗಿಸುವ ಬಾಗಗಳಿಗೆ ಹರಿಯುತ್ತದೆ. ಹಾಗಾಗಿ ಹೂವಿನಿಂದ ಹೊಟ್ಟೆ ಬಿರಿಯುವಶ್ಟು ಸಿಹಿಯನ್ನು ಹೀರಿಕೊಳ್ಳುವ ಹುಳಗಳು ಗೂಡನ್ನು ತಲುಪುವಾಗ ಅರೆಹೊಟ್ಟೆಯಾಗಿರುವ ಸಾದ್ಯತೆಗಳು ಇರುತ್ತವೆ. ಹೂವಿನಿಂದ ಸಿಹಿಯನ್ನು ಹೀರಲು ನೆರವಾಗುವ ನಾಲಗೆ ಹಾಗು ಸಿಹಿಯನ್ನು ತುಂಬಿಕೊಳ್ಳುವ ಹೊಟ್ಟೆಯ ಚಿತ್ರಗಳನ್ನು ಈ ಕೆಳಗೆ ನೋಡಬಹುದು.anatomyಹೂವಿನಿಂದ ಸಿಹಿಯನ್ನಶ್ಟೆ ಅಲ್ಲದೇ ಹೂವಿನ ಬಂಡನ್ನು(pollen) ಕೂಡ ಹುಳಗಳು ತುಂಬಿಸಿಕೊಳ್ಳುತ್ತವೆ. ಜೇನುಹುಳದ ಹಿಂಗಾಲುಗಳಲ್ಲಿರುವ ಬಂಡಿನ ಬುಟ್ಟಿ (Pollen Basket)ವನ್ನು ಬಳಸುತ್ತವೆ. ಬಂಡು ಚೀಲವು ಚಿಕ್ಕ ಚಿಕ್ಕ ಕೂದಲುಗಳಿಂದ ಕೂಡಿ ಆಗಿರುತ್ತದೆ. ಹೂವಿನ ಬಂಡನ್ನು ಗೂಡಿನಲ್ಲಿರುವ ಮರಿಹುಳ(larvae)ಗಳಿಗೆ ತಿನಿಸಲು ಬಳಸುತ್ತವೆ. ಗೂಡಿನ ಮರಿಹುಳಗಳಿಗೆ ಇದೇ ಊಟವಾಗಿರುತ್ತದೆ. ಆದರೆ ದುಡಿಮೆಗಾರ ಜೇನುಹುಳಗಳು ಬಂಡನ್ನು ತಿನ್ನುವುದಿಲ್ಲ. ಹೂವಿನಿಂದ ಹೂವಿಗೆ ಹಾರಿ ಬಂಡನ್ನು ಹಾಗು ಸಿಹಿಯನ್ನು ಪಡೆಯುವುದರಿಂದ ಒಂದು ಹೂವಿನ ಬಂಡು ಇನ್ನೊಂದು ಹೂವಿಗೆ ಸೇರಿ ಹೂದುಂಬುಗೆ(fertilization) ನಡೆಯುತ್ತದೆ. ಹೆಚ್ಚಾಗಿ ಜೇನುಹುಳಗಳು ಒಂದು ಬಾರಿಗೆ ಒಂದೇ ಬಗೆಯ ಹೂವುಗಳಿಂದ ಮೇವನ್ನು ಪಡೆಯುತ್ತಿರುತ್ತವೆ ಇದರಿಂದ ಹೂದುಂಬುಗೆ ಚೆನ್ನಾಗಿ ನಡೆಯುತ್ತದೆ. ಹೂವು ಹಾಗು ಜೇನುಹುಳಗಳು ಒಂದಕ್ಕೊಂದು ಹೀಗೆ ನೆರವಾಗುತ್ತವೆ.

Apis.mellifera.-.lindsey

ಜೇನುಹುಳದ ಅರಿಗೊಂಬುಗಳು (Antennea) ಮನುಶ್ಯನಿಗಿಂತ 40 ಪಟ್ಟು ಹೆಚ್ಚು ಕಂಪನ್ನು ಗುರುತಿಸುವ ಕಸುವನ್ನು ಹೊಂದಿವೆ. ಬಗೆ ಬಗೆಯ ಹೂವುಗಳನ್ನು ಅವುಗಳ ಕಂಪಿನ ಮೂಲಕ ಗುರುತಿಸಲು ಇದು ನೆರವಾಗುತ್ತದೆ. ಇದಲ್ಲದೇ ಜೇನುಹುಳಗಳಿಗೆ ಹೊತ್ತಿನ ಬಗ್ಗೆ ಹೆಚ್ಚಿನ ಅರಿವು ಇರುತ್ತದೆ. ಗೂಡಿನಿಂದ ಮೇವಿಗಾಗಿ ಹಾರುವಾಗ ನೇಸರನ ದಿಕ್ಕು ಮತ್ತು ಹೂವಿನ ದಿಕ್ಕನ್ನು ಕಂಡು ಹಿಡಿದಿರುತ್ತವೆ (ಜೇನುಹುಳದ ಕುಣಿತ ಬರಹದಲ್ಲಿ ಹೆಚ್ಚಿನ ವಿವರವಿದೆ). ಸುಮಾರು ಒಂದು ಗಂಟೆಯ ಹಾರಾಟ ನಡೆಸಿ ಗೂಡಿಗೆ ಹಿಂದಿರುಗುವಾಗ ಗೂಡಿನ ದಾರಿಯನ್ನು ನೇಸರ ಇರುವ ದಿಕ್ಕಿನ ನೆರವಿನಿಂದ ಪಡೆಯ ಬೇಕಾಗುತ್ತದೆ. ಆದರೆ ನೇಸರನ ಜಾಗ ಬದಲಾಗಿರುತ್ತದೆ ಮತ್ತು ಹುಳಗಳು ತಮ್ಮ ಗೂಡಿನ ದಾರಿ ಕಂಡುಕೊಳ್ಳುವಾಗ ನೇಸರನ ಜಾಗವನ್ನು ಕೂಡ ಲೆಕ್ಕಕ್ಕೆ ತೆಗೆದುಕೊಳ್ಳಬೇಕು. ಹಾಗಾಗಿ ಇವುಗಳಿಗೆ ಹೊತ್ತಿನ ಅರಿವು ಚೆನ್ನಾಗಿರಬೇಕಾಗುತ್ತದೆ.

ಮೇವಿಗಾಗಿ ಹಾರಾಟ ನಡೆಸಿ ಹೂವಿನಿಂದ ಸಿಹಿ ಹಾಗು ಬಂಡನ್ನು ಹೊತ್ತು ತರುವ ಜೇನುಹುಳಗಳು ಸಿಹಿಯನ್ನು ಜೇನಾಗಿ ಹೇಗೆ ಮಾರ‍್ಪಾಡುಗೊಳಿಸುತ್ತವೆ? ಜೇನಿನ ಹಿಂದಿರುವ ತಿರುಳೇನು? ಜೇನನ್ನು ಹೇಗೆ ಕಾಪಾಡುತ್ತವೆ? ಈ ಎಲ್ಲಾ ವಿವರಗಳನ್ನು ಮುಂದಿನ ಬರಹಗಳಲ್ಲಿ ತಿಳಿಯೋಣ.

(ಮಾಹಿತಿ ಮತ್ತು ಚಿತ್ರ ಸೆಲೆ: wikipediawestmtnapairy.cominsect.tamu.edu, iflscience.com, agf.gov.bc, shroomery.org)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: