ಅಚ್ಚರಿಗೊಳಿಸುವ ಅಮೆಜಾನ್

ಕಿರಣ್ ಮಲೆನಾಡು.

Amazon_pic_1

ಅಮೆಜಾನ್ ನದಿ ತೆಂಕಣ ಅಮೇರಿಕಾ ಪೆರ‍್ನೆಲದಲ್ಲಿರುವ (South American continent) ದೊಡ್ಡ ನದಿ ಹಾಗು ಇದು ನಮ್ಮ ನೆಲದಲ್ಲೇ (Earth) ಹೆಚ್ಚು ಅಗಲವಾದ ನದಿ. ಅಮೆಜಾನ್ ನದಿಯು ದೊಡ್ದದಾದ ಮಳೆಕಾಡನ್ನು ಹಾಗು ಜೀವಿಗಳ ಬೇರ‍್ಮೆಯನ್ನು(Biodiversity) ತನ್ನೊಡಲೊಳಗೆ ಇರಿಸಿಕೊಂಡಿದೆ. ನೆಲದ ಮೇಲೆ ಹೆಚ್ಚು ನೀರಿನ ರಾಶಿಯನ್ನು ಹೊಂದಿದ ಹಾಗು ನೈಲ್ ನದಿಯ ನಂತರದ ಉದ್ದವಾದ ನದಿ ಕೂಡ ಅಮೆಜಾನ್ ಆಗಿದೆ.

ಅಮೆಜಾನ್ ನದಿಯು ಈ ನೆಲದ ಮೇಲಿರುವ ಒಟ್ಟು ಸಿಹಿನೀರಿನಲ್ಲಿ 20% ರಶ್ಟು ಪಾಲನ್ನು ಹೊಂದಿದೆ ಅನ್ನುವ ವಿಶಯ ಬೆರಗುಗೊಳಿಸುವಂತದು! ಅಗಲವಾದ ಈ ನದಿಯಲ್ಲಿ ಹರಿಯುವ ನೀರಿನ ಒಟ್ಟು ರಾಶಿಯು, ಅಳತೆಯಲ್ಲಿ ಅದರ ನಂತರ ಬರುವ ಜಗತ್ತಿನ 8 ದೊಡ್ಡ ನದಿಗಳ ಒಟ್ಟು ನೀರಿನ ರಾಶಿಗಿಂತ ಹೆಚ್ಚು!

ಅಮೆಜಾನ್ ನದಿಯು ಇಡೀ ನೆಲದಲ್ಲಿ ಎಲ್ಲಕ್ಕಿಂತ ದೊಡ್ಡದಾದ ನದಿ ಬೋಗುಣಿಯನ್ನು (river basin) ಹೊಂದಿದೆ. ನೆಲದರಿಗರು ಈ ನದಿಗೆ ಸಿಹಿಗಡಲು (sweet sea) ಎಂದೂ ಕರೆಯುವುದುಂಟು. ಅಮೆಜಾನ್ ನದಿಯ ಹೆಚ್ಚು ಬಾಗ ಬ್ರೆಜಿಲ್ ನಾಡಿನಲ್ಲಿದ್ದು, ಇತರ ಬಾಗವನ್ನು ಪೆರು, ಕೊಲಂಬಿಯಾ, ಬೊಲಿವಿಯಾ, ವೆನಿಜುವೆಲಾ, ಗಯಾನ, ಸುರಿನಾಮ್, ಈಕ್ವೆಡಾರ್ ಮತ್ತು ಪ್ರೆಂಚ್ ಗಯಾನ ನಾಡುಗಳು ಹಂಚಿಕೊಂಡಿವೆ. ಪೋರ‍್ಚುಗೀಸ್ ಮತ್ತು ಸ್ಪಾನಿಶ್ ನುಡಿಗಳಲ್ಲಿ ಅಮೆಜಾನ್ ನದಿಯನ್ನು ರಿಯೊ ಅಮೆಜೊನಸ್ ಎಂದು ಕರೆಯುತ್ತಾರೆ.

Amazon_pic_3_share

ಅಮೆಜಾನ್ ನದಿ ಬೋಗುಣಿ ಮತ್ತು ನದಿಯ ಒಳಹರಿವು:

ಅಮೆಜಾನ್ ನದಿ ಬೋಗುಣಿಯು ಸುಮಾರು 6,915,000 ಚದರ ಕಿ.ಮೀ.ನಶ್ಟು ಹರವನ್ನು ಹೊಂದಿದೆ. ಇದು ತೆಂಕಣ ಅಮೇರಿಕಾ ಪೆರ‍್ನೆಲದ 40% ರಶ್ಟು ಜಾಗದಲ್ಲಿ ಹರಡಿಕೊಂಡಿದೆ. ಅಮೆಜಾನ್ ನದಿಯು ಆಂಡಿಸ್ ಬೆಟ್ಟ ಗುಡ್ಡಗಳ ಸಾಲಿನಲ್ಲಿ ಹುಟ್ಟಿ 6,992 ಕಿ.ಮಿ ಹರಿದು ಅಟ್ಲಾಂಟಿಕ್ ಹಿರಿಗಡಲನ್ನು ಸೇರುತ್ತದೆ. ಅಮೆಜಾನ್ ನದಿಯು ಒಣಬೇಸಗೆಯ ಹೊತ್ತಿನಲ್ಲಿ ಸುಮಾರು 1,11,10 ಚದರ.ಕಿ.ಮೀ.ನಶ್ಟು ನೆಲವನ್ನು ಆವರಿಸಿಕೊಂಡರೆ ಮಳೆಗಾಲದಲ್ಲಿ ನೆರೆಯುಂಟಾದಾಗ ಇದರ ಮೂರರಶ್ಟು ಅಂದರೆ ಸುಮಾರು 3,50,000 ಚ.ಕಿ.ಮೀ. ನೆಲವನ್ನು ಆವರಿಸಿಕೊಳ್ಳುತ್ತದೆ.

ಬೇಸಿಗೆಯಲ್ಲಿ ನದಿಯ ಅಗಲ 11 ಕಿ.ಮೀ. ಗಳಾದರೆ ಮಳೆಗಾಲದಲ್ಲಿ ಈ ನದಿಯು 45 ಕಿ.ಮೀ.ನಶ್ಟು ಅಗಲವಾಗಿ ಹರಿಯುತ್ತದೆ. ಅಮೆಜಾನ್ ನದಿಯು ಅಟ್ಲಾಂಟಿಕ್ ಹಿರಿಗಡಲಿಗೆ ಸಾಗಿಸುವ ಸಿಹಿನೀರಿನ ರಾಶಿಯು ಎಶ್ಟು ಹೇರಳವೆಂದರೆ, ಮಳೆಗಾಲದಲ್ಲಿ ಈ ನದಿಯು ಸೆಕೆಂಡಿಗೆ 3,00,000 ಕ್ಯೂ.ಮೀ ಅಳವಿಗಳಶ್ಟು(Volume) ಸಿಹಿನೀರನ್ನು ಕಡಲಿಗೆ ಸೇರಿಸುತ್ತದೆ!

ಕಡಲಿಗೆ ಸೇರುವೆಡೆ ಈ ನದಿಯ ನೀರಿನ ಬಿರುಸು ಹಾಗು ಒತ್ತಡ ಎಶ್ಟಿದೆಯೆಂದರೆ ಕಡಲತೀರದಿಂದ ಹಲವಾರು ಕಿ.ಮೀ. ಗಳ ದೂರದವರೆಗೂ ಕಡಲ ನೀರು ಸಿಹಿಯಾಗಿಯೇ ಇರುತ್ತದೆ ಹಾಗು ಮಳೆಗಾಲದಲ್ಲಿ ಅಮೆಜಾನ್ ನದಿಯು ಸಾಗರದ ಉಪ್ಪುನೀರನ್ನೇ ಸುಮಾರು 100 ಕಿ.ಮೀ.ಗಳಶ್ಟು ಹಿಮ್ಮೆಟ್ಟಿಸುತ್ತದೆ.
ಮಳೆಗಾಲದಲ್ಲಿ ಅಮೆಜಾನ್ ನದಿಯ ಸರಾಸರಿ ಆಳ ಸುಮಾರು 131 ಅಡಿ ಹಾಗೂ ಸರಾಸರಿ ಅಗಲ 40 ಕಿ.ಮೀ.ಗಳಶ್ಟಿರುತ್ತದೆ. ನವೆಂಬರ್ ತಿಂಗಳಿನಿಂದ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚತೊಡಗಿ ಜೂನ್ ತಿಂಗಳಿನವರೆಗೂ ಮುಂದುವರೆಯುತ್ತದೆ. ನಂತರ ಅಕ್ಟೋಬರ್ ತಿಂಗಳವರೆಗೆ ನೀರು ಇಳಿಮುಕವಾಗಿರುತ್ತದೆ.

ಒಂದರಿಂದ ಆರು ಮೈಲಿಗಳಶ್ಟು ಅಗಲಕ್ಕಿರುವ ಅಮೆಜಾನ್ ನದಿಯಲ್ಲಿ ಅಟ್ಲಾಂಟಿಕ್ ಹಿರಿಗಡಲಿಂದ 1500 ಕಿ.ಮೀ. ಒಳಗಿರುವ ಮನೌಸ್ ವರೆಗೆ ಒಳನಾಡಿನ ಹಡಗಿನಲ್ಲಿ ಓಡಾಟ ಮಾಡಬಹುದು. ಸಣ್ಣ ಗಾತ್ರದ ಹಡಗುಗಳು 3600 ಕಿ.ಮೀ. ಗಳಶ್ಟು ಒಳನಾಡಿನಲ್ಲಿರುವ ಪೆರುವಿನ ಇಕ್ವಿಟೋಸ್ ಪಟ್ಟಣವನ್ನು ತಲುಪಬಲ್ಲವು. ಸಣ್ಣ ನದಿದೋಣಿಗಳು ಇಲ್ಲಿಂದ ಮುಂದೆ ಇನ್ನೂ 785 ಕಿ.ಮೀ. ದೂರದಲ್ಲಿರುವ ಅಚುವಲ್ ಪಾಯಿಂಟ್ ವರೆಗೆ ಸಾಗಬಲ್ಲವು.

ನೂರಕ್ಕೂ ಹೆಚ್ಚು ದೊಡ್ಡದಾದ ಒಳನದಿಗಳಿರುವ ಅಮೆಜಾನ್ ನದಿಯ ಅಗಲವು ಹಲವೆಡೆ 6 ರಿಂದ 10 ಕಿ.ಮೀ. ಗಳಶ್ಟಿರುತ್ತದೆ. ಹಲವು ಜಾಗಗಳಲ್ಲಿ ನದಿಯು ಎರಡು ಕವಲುಗಳಾಗಿ ಒಡೆದು ಬಹುದೂರದವರೆಗೆ ಸಾಗುತ್ತದೆ. ಇಂತಹ ಜಾಗಗಳಲ್ಲಿ ಹಲವಾರು ನೈಸರ‍್ಗಿಕ ಕಾಲುವೆಗಳು ಕವಲುಗಳಾಗಿ ಒಡೆದು ಮತ್ತೆ ಕೂಡಿಕೊಳ್ಳುತ್ತದೆ ಹಾಗಾಗಿ ಅಮೆಜಾನ್ ನದಿಯು ಹಲವಾರು ನಡುಗಡ್ದೆಗಳನ್ನು(Islands) ಹುಟ್ಟುಹಾಕಿದೆ.

ಅಮೆಜಾನ್ ನದಿಯ ಅಳಿವೆ(estuary ) 330 ಕಿ.ಮೀ. ಅಗಲವಾಗಿದೆ. ಇಂಗ್ಲೆಂಡಿನ ತೇಮ್ಸ್ ನದಿಯ ಒಟ್ಟೂ ಉದ್ದಕ್ಕಿಂತ ಅಮೆಜಾನ್ ನದಿಯ ಅಳಿವೆಯ ಅಗಲವೇ ಹೆಚ್ಚು. ಅಳಿವೆಯ ಬಾಯಿಯಲ್ಲಿ ಸುಮಾರು 160 ಕಿ.ಮೀ. ವರೆಗಿನ ಜಾಗವು ಹಲವು ಅರೆಮುಳುಗಿದ ನಡುಗಡ್ಡೆಗಳು ಮತ್ತು ಆಳವಲ್ಲದ ಮರಳದಂಡೆಗಳನ್ನು ಒಳಗೊಂಡಿದೆ. ಇಲ್ಲಿ ಬೋರ್ ಹಾಗು ಪೊರೊರೋಕಾ ಎಂದು ಕರೆಯಲ್ಪಡುವ ನೆರೆ ಉಂಟಾಗುತ್ತದೆ. ನೆರೆಯ ಅಲೆಗಳು ದೊಡ್ಡದಾಗಿ ಸದ್ದು ಮಾಡುತ್ತಾ ಸುಮಾರು 5 ರಿಂದ 13 ಅಡಿಗಳಶ್ಟು ಎತ್ತರದ ಅಲೆಗಳೊಂದಿಗೆ ಕಡಲಿನತ್ತ ಸಾಗುತ್ತವೆ. ನದಿಯ ಈ ಬಿರುಸು ಮಳೆಗಾಲದ ನೆರೆಯ ಹೊತ್ತಿನಲ್ಲಿ ಮೆಕ್ಕಲುಮಣ್ಣನ್ನು ಕಡಲೊಳಗೆ ತುಂಬಾದೂರದವರೆಗೆ ತಳ್ಳಿಬಿಡುತ್ತದೆ ಆದ್ದರಿಂದ ಬೇರೆ ನದಿಗಳಿಗೆ ಸಾಮಾನ್ಯವಾಗಿ ಇರುವಂತೆ ಅಮೆಜಾನ್ ನದಿಗೆ ನಡುಗುಡ್ಡೆಯ ಮಣ್ಣುರಾಶಿಯೇ(Delta) ಇಲ್ಲ.

Amazon_pic_4_spread

ಅಮೆಜಾನ್ ನದಿಯ ಹುಟ್ಟು:

ಪೆರುವಿನ ನೆವಾಡೋ ಮಿಸ್ಮಿಯ ಅರೆಕಿಪಾದ ಅಪಾಚೆಟಾ ಬೆಟ್ಟ ಅಮೆಜಾನ್ ನದಿಯ ಹುಟ್ಟುವ ಜಾಗಗಳಲ್ಲೊಂದು. ಪೆರುವಿನ ಆಂಡಿಸ್ ಬೆಟ್ಟಗಳ ಸಾಲಿನಲ್ಲಿ(Andes mountain ranges) ಹಲವು ಚಿಕ್ಕ ಚಿಕ್ಕ ನದಿಗಳು ಹುಟ್ಟುತ್ತವೆ ನೂರಾರು ಕಿಲೋ ಮೀಟರುಗಳು ಕಳೆದಂತೆ ಈ ನದಿ ಸೆಲೆಗಳೇ ಅಮೆಜಾನ್ ನದಿಯಾಗಿ ಮಾರ‍್ಪಡುತ್ತವೆ.ಅಮೆಜಾನ್ ನದಿಯು ಹಿನ್ನಡುವಳಿಯಲ್ಲಿ ತನ್ನ ಹರಿವನ್ನು ಹಲವು ಬಾರಿ ಬದಲಿಸಿಕೊಂಡಿದೆ.

ಸೇನೋಜೊಯಿಕ್ ಹೊತ್ತಿನಲ್ಲಿ (Cenozoic era) ಆಂಡಿಸ್ ಬೆಟ್ಟ ಸಾಲುಗಳ ಹುಟ್ಟಿಗೂ ಮುಂಚೆ ಪಡುವಣ ದಿಕ್ಕಿಗೆ ಹರಿಯುತ್ತಿತ್ತು ಆಗ ಅದರ ನೀರಿನ ಒರತೆಯ ಸೆಲೆ ಬೇರೆ ಆಗಿತ್ತೆಂದು ನೆಲದರಿಗರ ಅನಿಸಿಕೆ. ಈಗಿನ ಚಿಕ್ಕ ಚಿಕ್ಕ ನದಿ ಸೆಳೆಗಳೆಂದರೆ ಮೊರೋನಾ, ಪಾಸ್ತಾಜಾ, ನುಕುರೇ, ಉರಿಟುಯಾಕು, ಚಾಂಬ್ರಿಯಾ, ಟೈಗ್ರ್, ನಾನೇ, ನಾಪೋ, ಹುವಾಲ್ಲಾಗಾ ಮತ್ತು ಉಕಯಾಲಿ. ಇದರಲ್ಲಿ ಮುಕ್ಯವಾಗಿ ಮರನಾನ್ ನದಿಯು ಆಂಡಿಸ್ ಬೆಟ್ಟಗಳ ಸಾಲಿನಲ್ಲಿ ನೆವಾಡೋ ಡಿ ಯಾರುಪಾದಲ್ಲಿ ಮಂಜುನದಿಯಾಗಿ ಹುಟ್ಟಿ ಮುಂದೆ 16000 ಕಿ.ಮೀ. ಗಳವರೆಗೆ ಪೆರುವಿನ ಎತ್ತರಜಾಗದ ಕಾಡು ಮತ್ತು ಕೊಳ್ಳಗಳಲ್ಲಿ ಹರಿದು ನೌಟಾ ಎಂಬಲ್ಲಿ ಉಕಯಾಲಿ ನದಿಯನ್ನು ಕೂಡಿಕೊಂಡು ದೊಡ್ಡಮಟ್ಟದಲ್ಲಿ ಅಮೆಜಾನ್ ನದಿಯನ್ನು ಹುಟ್ಟುಹಾಕುತ್ತದೆ.

ಅಮೆಜಾನ್ ನದಿಯ ದೊಡ್ಡದಾದ ಬುಡವನ್ನು 1996 ರಲ್ಲಿ ಪೆರುವಿನ ಪೆರುವಿನ ಆಂಡಿಸ್ ಬೆಟ್ಟಗಳ ಸಾಲಿನ ನೆವಾಡೋ ಮಿಸ್ಮಿ ಎಂಬ ಬೆಟ್ಟದಿಂದ ಇಳಿಯುವ ಹಿಮನೀರಿನ ಒರತೆಗಳಿಂದ ಗುರುತಿಸಲಾಯಿತು. ಇದು ಪೆರುವಿನ ಮೇಲ್ಪಟ್ಟಣವಾದ ಲಿಮಾದಿಂದ ಸುಮಾರು ಕೊಂಗಣದಿಕ್ಕಿನಿಂದ(southeast) 700 ಕಿ.ಮೀ ದೂರದಲ್ಲಿದೆ. ಈ ಮಂಜುನೀರಿನ ಒರತೆಯ ಹರಿವು ಮುಂದೆ ಉಕಯಾಲಿ ನದಿಯ ಒಂದು ಬಾಗವಾಗುತ್ತದೆ. ಹೀಗೆ ಮರನಾನ್ ನದಿ ಮತ್ತು ಉಕಯಾಲಿ ನದಿಗಳ ಕೂಡುವಿಕೆಯಿಂದ ಹುಟ್ಟಿ ರಿಯೊ ಅಮೆಜೋನಾಸ್ ಎಂದು ಕರೆಯಲ್ಪಡುವ ಅಮೆಜಾನ್ ನದಿ ಹಲವು ಬಾರಿ ಹೆಸರನ್ನು ಸಹ ಬದಲಿಸಿಕೊಳ್ಳುತ್ತದೆ.

ಬ್ರೆಜಿಲ್, ಪೆರು ಮತ್ತು ಕೊಲಂಬಿಯ ದೇಶಗಳ ಎಲ್ಲೆಯಲ್ಲಿ ಸಾಲಿಮೋಸ್ ಎಂದು ಕರೆಯಲ್ಪಡೂವ ಈ ನದಿ ಮುಂದೆ ಮನೌಸ್ ಬಳಿ ರಿಯೊ ನಿಗ್ರೋ ನದಿಯನ್ನು ಸೇರಿಸಿಕೊಂಡು ಮತ್ತೆ ಅಮೆಜಾನ್ ನದಿ ಎನಿಸಿಕೊಳ್ಳುತ್ತದೆ! ರಿಯೊ ಅಪುರಿಮ್ಯಾಕ್ ಮತ್ತು ಉಕಯಾಲಿ ನದಿಗಳ ಕೂಡುವಿಕೆಯ ನಂತರ ಅಮೆಜಾನ್ ನದಿಯು ಬೆಟ್ಟಗಳ ಸಾಲಿನಿಂದ ಹೊರಬಿದ್ದು ಬಯಲನ್ನು ಸೇರುವುದು.ಮುಂದೆ ಮರನಾನ್ ನದಿಯ ಕೂಡುವಿಕೆಯವರೆಗೆ ಈ ಬಯಲು ಜಾಗವು ಹರಡಿದ್ದು ಹಾಗು ಇದು ಯಾವಾಗಲು ನೆರೆಯಿಂದ ಮುಳುಗಿರುತ್ತದೆ, ನಂತರದಲ್ಲಿ ಮಳೆಕಾಡಿನ ನಡುವಿನಲ್ಲಿ ಅಮೆಜಾನ್ ಹರಿಯುತ್ತದೆ.
ಅಮೆಜಾನಿನ ಮಳೆಕಾಡುಗಳು.

ಮಳೆಕಾಡುಗಳ ಹರವು ಅಮೆಜಾನಿನ ಮಳೆಕಾಡುಗಳು:

Amazon_pic_2_malekaadu

ಅಮೆಜಾನಿನ ಮಳೆಕಾಡುಗಳು ಆಂಡಿಸ್ ಬೆಟ್ಟಗಳ ಸಾಲಿನಲ್ಲಿ ಮೂಡಣದಂಚಿನಿಂದ ಹರಡಿಕೊಳ್ಳುತ್ತಾ ಹೋಗುತ್ತವೆ. ಅಮೆಜಾನಿನ ಮಳೆಕಾಡುಗಳು ನಮ್ಮ ನೆಲದಲ್ಲಿಯೇ ಹೆಚ್ಚು ದೊಡ್ಡದಾದ ಮಳೆಕಾಡು. ಈ ಮಳೆಕಾಡು ಎಲ್ಲಕ್ಕಿಂತ ಹೆಚ್ಚು ಕಾರ‍್ಬನ್ ಡೈ-ಆಕ್ಸೈಡ್ ಹೀರಿಕೊಳ್ಳುತ್ತದೆ ಎಂಬ ಹೆಚ್ಚುಗಾರಿಕೆಯನ್ನು ಹೊಂದಿದೆ. ಅಮೆಜಾನಿನ ಮಳೆಕಾಡುಗಳು ಈ ನೆಲದ ಮೇಲಿನ 20% ರಶ್ಟು ಉಸಿರ‍್ಗಾಳಿಯನ್ನು(Oxygen) ಉಂಟುಮಾಡುತ್ತವೆ!

ಅಮೆಜಾನ್ ಮಳೆಕಾಡುಗಳು ಅಮೆಜಾನ್ ಕೊಳ್ಳದ ಹೆಚ್ಚು ತೇವದ ಗಾಳಿಹೊದಿಕೆಯನ್ನು(Environment) ಹೊಂದಿವೆ, ಅಲ್ಲದೆ ಈ ಮಳೆಕಾಡಿನಲ್ಲಿ ಅಮೆಜಾನ್ ಮತ್ತು ಅದರ ನೂರಾರು ಒಳನದಿಗಳು ಮಂದಗತಿಯಲ್ಲಿ ಹರಿಯುತ್ತಿರುತ್ತವೆ ಹೀಗಾಗಿ ಕಡಲವರೆಗೆ ಮಳೆಕಾಡಿನ ನೆಲವು ಮಟ್ಟವಾಗಿದೆ. ಎತ್ತುಗೆಗೆ ಕಡಲತೀರದಿಂದ 1600 ಕಿ.ಮೀ. ದೂರದಲ್ಲಿ ಅಮೆಜಾನ್ ನದಿಯ ದಡದಲ್ಲಿರುವ ಮನೌಸ್ ಪಟ್ಟಣವು ಕಡಲ ಮಟ್ಟದಿಂದ ಕೇವಲ 144 ಅಡಿಗಳಶ್ಟು ಎತ್ತರದಲ್ಲಿದೆ.

ಅಮೆಜಾನಿನ ಜೀವಿಗಳು:

Amazon_pic_5_bio

ಅಮೆಜಾನ್ ಮಳೆಕಾಡಿನಲ್ಲಿರುವ ಬೇರೆ ಬೇರೆ ಬಗೆಯ ಜೀವಿಗಳು ನೆಲೆಸಿದ್ದು ಕೆಲವೊಂದು ಅಚ್ಚರಿಯನ್ನುಂಟುಮಾಡುತ್ತವೆ.ಇಲ್ಲಿ ಹೆಚ್ಚುಕಡಿಮೆ 25 ಲಕ್ಶ ಬಗೆಯ ಹುಳಗಳು, ಹಲವು ಸಾವಿರ ಬಗೆಯ ಗಿಡಮರಗಳು, 2000 ಕ್ಕೂ ಹೆಚ್ಚಿನ ಬಗೆಯ ಜೀವಿಗಳು ನೆಲೆಸಿವೆ. ಜಗತ್ತಿನಲ್ಲಿರುವ ಒಟ್ಟು ಹಕ್ಕಿಗಳಲ್ಲಿ ಕಾಲುಬಾಗದಶ್ಟು ಬಗೆಯವು ಇಲ್ಲಿಯೇ ಇವೆ! ನೆಲದಮೇಲಿನ ಎಲ್ಲಕ್ಕಿಂತ ಹೆಚ್ಚಿನ ಗಿಡಮರಗಳ ಬೇರ‍್ಮೆಯನ್ನು ಅಮೆಜಾನ್ ಮಳೆಕಾಡಿನಲ್ಲಿ ಕಂಡುಬರುತ್ತದೆ. ಒಂದು ಅಂದಾಜಿನಂತೆ ಒಂದು ಚದರ ಕಿ.ಮೀ.ನಶ್ಟು ಅಮೆಜಾನ್ ಮಳೆಕಾಡಿನಲ್ಲಿ 75000 ಬಗೆಯ ಮರಗಳು ಮತ್ತು 1,50,000 ಬಗೆಯ ಇತರ ಗಿಡಗಳು ಕಂಡುಬರುತ್ತವೆ. ಅಲ್ಲದೆ ಅದರ ಒಂದು ಚದರ ಕಿ.ಮೀ.ನಶ್ಟು ಜಾಗದಲ್ಲಿ ಅಮೆಜಾನ್ ಮಳೆಕಾಡಿನಲ್ಲಿರುವ ಗಿಡಮರಗಳು ಒಟ್ಟು 90000 ಟನ್ ತೂಗುತ್ತವೆ ಅಂದರೆ ಅಚ್ಚರಿಯಲ್ಲವೇ?!

ಬೋಟೊ ಎಂದು ಕರೆಯಲ್ಪಡುವ ಅಮೆಜಾನ್ ನದಿ ಡಾಲ್ಪಿನ್ ನಮ್ಮ ನೆಲದ ಮೇಲಿನ ಎಲ್ಲಕ್ಕಿಂತ ದೊಡ್ಡದಾದ ನದಿಯ ಡಾಲ್ಪಿನ್. ಹಲವು ರೀತಿಯ ಮೊಸಳೆಗಳಿಗೂ ಕೂಡ ಅಮೆಜಾನ್ ನೆಲೆಯಾಗಿದೆ. ಪಿರಾನಾ (piranha) ಮೀನಿಗೂ ಕೂಡ ಅಮೆಜಾನ್ ನದಿ ನೆಲೆ ಕೊಟ್ಟಿದೆ. ಪಿರಾನಾ ಮೀನುಗಳು ದೊಡ್ಡ ಹಿಂಡುಗಳಲ್ಲಿ ಬದುಕುತ್ತವೆ ಹಾಗು ಇತರ ಜೀವಿಗಳ ಮೇಲೆ ಬಿರುಸಿನಿಂದ ದಾಳಿಯಿಡುತ್ತವೆ. 1981 ರಲ್ಲಿ ಓಬಿಡಾಸ್ ಬಳಿ ದೋಣಿ ಮುಳುಗಿ 331 ಮಂದಿ ಈ ಪಿರಾನಾ ಮೀನುಗಳಿಗೆ ಆಹಾರವಾದರಂತೆ.

Amazon_pic_6_pirhana_fish

(ಪಿರಾನಾ ಮೀನು)

ಅಮೆಜಾನ್ ನದಿಯಲ್ಲಿ ಬದುಕುವ ಅರಪಿಮಾ ಹಾಗು ಪಿರರುಕು ಎಂಬ ಹೆಸರಿನ ಮೀನು ನೆಲದ ಮೇಲಿನ ದೊಡ್ಡ ಸಿಹಿನೀರಿನ ಮೀನುಗಳಲ್ಲಿ ಒಂದು. ಇದು ಸುಮಾರು 10 ಅಡಿಗಳ ವರೆಗೆ ಬೆಳೆದು 200 ಕಿಲೋ ವರೆಗೆ ತೂಗಬಲ್ಲದು. ನೆಲದ ಮೇಲಿನ ದೊಡ್ಡ ಹಾವುಗಳ ಪೈಕಿ ಒಂದಾದ ಅನಕೊಂಡಾ ಅಮೆಜಾನ್ ನದಿಯಲ್ಲಿ ಆಳ ಕಡಿಮೆಯಿರುವಲ್ಲಿ ನೆಲೆಸುತ್ತದೆ. ಹೆಚ್ಚಿನ ಕಾಲ ನೀರಿನ ಒಳಗೆಯೇ ಉಳಿದು ಹೊರಳೆಗಳನ್ನು ಮಾತ್ರ ನೀರಿನಿಂದ ಹೊರಗೆ ಇಟ್ಟುಕೊಂಡಿರುವ ಈ ಹಾವು ಕೆಲವು ಬಾರಿ ಮೀನುಗಾರರ ಮೇಲೆ ದಾಳಿ ಮಾಡುತ್ತದೆಯಂತೆ.

ಇಂದು ಅಮೆಜಾನ್ ಮಳೆಕಾಡಿನ ಹಲವುಬಾಗ ಅಳಿವಿನಂಚಿನಲ್ಲಿದೆ. ಹೆಚ್ಚುತ್ತಾ ಸಾಗಿರುವ ಮರಮಟ್ಟುಗಳ ವ್ಯಾಪಾರ, ಅಮೆಜಾನ್ ನದಿಯ ಸುತ್ತಮುತ್ತ ಬ್ರಜಿಲ್ ರಸ್ತೆಗಳನ್ನು ಮಾಡುತ್ತಿರುವುದು ಹಾಗು ಉಳುಮೆಗಾಗಿ ಕಾಡು ಕಡಿಯುವುದು ಇವುಗಳಿಂದಾಗಿ ಮಳೆಕಾಡಿನ ಹರವು (area) ಕುಗ್ಗುತ್ತಿದೆ. ಇದರಿಂದಾಗಿ ನೆಲದ ಗಾಳಿಹೊದಿಕೆಯಮೇಲೆ (Environment) ಕೆಟ್ಟಪರಿಣಾಮ ಬೀರಲಿದೆ. ನೆಲದ ಗಾಳಿಹೊದಿಕೆಗೆ (Environment)20% ನಶ್ಟು ಉಸಿರ‍್ಗಾಳಿ ಯನ್ನು ಅಮೆಜಾನ್ ಕಾಡೊಂದೇ ನೀಡುವುದರಿಂದ ಮಳೆಕಾಡನ್ನು ಹಾಗು ನದಿಯ ಜೀವಿಗಳನ್ನು ಕಾಪಾಡಬೇಕಿದೆ.

( ಸೆಲೆ: 1. books.google.com, 2.  google.com, 3. webcitation.org, 4. Wikipedia, 5. projectamazonas.org)

(ತಿಟ್ಟ ಸೆಲೆ: 1. mingik.com, 2. mongabay, 3. kn.wikipedia.org, 5. forestfever.weebly.com, 6. anca24)

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. 13/05/2015

    […] ನೀರಿನ ಬುಗ್ಗೆ(Glaciers)ಗಳನ್ನೂ ಕೂಡ ಹೊಂದಿದೆ. ಅಮೆಜಾನ್ ನದಿ ಆಂಡೆಸ್ ಬೆಟ್ಟಸಾಲಿನಲ್ಲಿಯೇ […]

ಅನಿಸಿಕೆ ಬರೆಯಿರಿ:

%d bloggers like this: