ಆಂಡೆಸ್ ಬೆಟ್ಟಸಾಲಿನ ಬೆರಗು

ಕಿರಣ್ ಮಲೆನಾಡು.

Andes_Mountain_Betta

ತೆಂಕಣ ಅಮೇರಿಕಾ ಪೆರ‍್ನೆಲದ(South American continent) ಪಡುವಣ ಕರಾವಳಿಯುದ್ದಕ್ಕೂ ಸುಮಾರು 7000 ಕಿ.ಮೀ ವರೆಗೆ ಹಬ್ಬಿದ ಬೆಟ್ಟದ ಸಾಲೆ ಈ ಆಂಡೆಸ್ (Andes). ಆಂಡೆಸ್ ನೆಲದ ಮೇಲಿರುವ ಎಲ್ಲಕ್ಕಿಂತ ಹೆಚ್ಚು ಉದ್ದದ ಬೆಟ್ಟಸಾಲು (Mountain Range). ಆಂಡಿಸ್ ಸಾವಿರಾರು ಚಿಕ್ಕದಾದ ಮತ್ತು ದೊಡ್ಡದಾದ ಬೆಟ್ಟಗಳಿಂದ ಕೂಡಿದೆ ಹಾಗು ಹೇರಳವಾದ ಜೀವಿಗಳ ಬೇರ‍್ಮೆಯನ್ನು (Bio Diversity) ಹೊಂದಿದೆ. ನೆಲದ ಮೇಲಿನ ಹೆಚ್ಚು ಎತ್ತರದ ಬೆಟ್ಟಸಾಲುಗಳಾದ ಏಶ್ಯಾದ ಹಿಮಾಲಯ, ಕಾರಕೊರಂ(Karakoram Ranges) ಹಾಗು ಇನ್ನಿತರ ಬೆಟ್ಟಸಾಲುಗಳನ್ನು ಬಿಟ್ಟರೆ ಆಂಡೆಸ್ ಬೆಟ್ಟಸಾಲು ಹೆಚ್ಚು ಎತ್ತರದ ಬೆಟ್ಟಗಳನ್ನು ಹೊಂದಿದೆ.

ಆಂಡೆಸ್ ಹೆಸರಿನ ಹಿನ್ನೆಲೆ:

ತೆಂಕಣ ಅಮೇರಿಕಾ ಪೆರ‍್ನೆಲದಲ್ಲಿ ನೆಲೆಸಿರುವ ಕ್ವೆಚುವಾ ಜನರು ‘ಅಂಟೀ’ (Anti) ಎಂಬ ಪದವನ್ನು ಮೂಡಣ ದಿಕ್ಕನ್ನು ತೋರಿಸಲು ಬಳಸುತ್ತಿದ್ದರಂತೆ ಹಾಗು ಅವರು ಆಂಡೆಸ್ ಜಾಗವನ್ನು ‘ಅಂಟಿಸುಯು’ ಎಂದು ಕರೆಯುತ್ತಿದ್ದರಂತೆ ಹೀಗಾಗಿ ಹೊತ್ತುಸರಿದಂತೆ ಆಂಡೆಸ್ ಪದ ಬಳಕೆಯಾಗಿರಬಹುದು. ಆಂಡೆಸ್ ಬಾಗವು ಕ್ವೆಚುವಾ ನುಡಿಯನ್ನಾಡುವ ಇಂಕಾ ಜನರ ನಾಲ್ಕು ಬಾಗಗಳಲ್ಲೊಂದಾಗಿತ್ತು. ಕೆಲವು ಹಳಮೆಯರಿಗರು ಇದು ಸ್ಪಾನಿಶ್ ನುಡಿಯ ‘ಆಂಡೆನ್'(Anden)ನಿಂದ ಬಂದಿರಬಹುದೆಂಬ ಅನಿಸಿಕೆ ಮುಂದಿಟ್ಟಿದ್ದಾರೆ. ಸ್ಪಾನಿಶಿನಲ್ಲಿ ಆಂಡೆನ್ ಎಂದರೆ ಮೆಟ್ಟಿಲುಗಳ ರೀತಿಯ ಒಕ್ಕಲು ಗದ್ದೆ.

ನಾಡುಗಳು ಮತ್ತು ಆಂಡೆಸ್ ಬೆಟ್ಟಸಾಲು:

Andes_Mountain_Betta_spread_2
ಪ್ರೋಟೆರೋಜೋಯಿಕ್(Proterozoic era) ಮತ್ತು ಪಾಲಿಯೋಜೋಯಿಕ್ ಹೊತ್ತಿನ ಮೊದಲಿನಲ್ಲಿ(Early Paleozoicn era) ಹೆಚ್ಚು ತೂಕದ ‘ನಾಜ್ಕ’ ಗಟ್ಟಿತೆರಳೆಯ ಹಿರಿಗಡಲ ತೊಗಟೆ(Oceanic crust of Nazca tectonic plate) ‘ತೆಂಕಣ ಅಮೇರಿಕಾ’ ಗಟ್ಟಿತೆರಳೆಯ ತಗಡಿನ(South American tectonic plate) ಪಡುವಣದಂಚಿಗೆ ಒತ್ತಲ್ಪಟ್ಟು ಕೆಳ-ಕದಲಿಕೆಯಾಯಿತು (Subducted).

ಹೀಗೆ ನಾಜ್ಕ ಗಟ್ಟಿತೆರಳೆಯ ತಗಡು ಮತ್ತು ತೆಂಕಣ ಅಮೇರಿಕಾ ಗಟ್ಟಿತೆರಳೆಯ ತಗಡುಗಳು ಒಂದೆಡೆಸೇರುವಿಕೆಯಿಂದ(Convergence) ಸಾಲುಗಳಲ್ಲಿ ಆಂಡೆಸ್ ಬೆಟ್ಟಗಳು ಹುಟ್ಟಿದವು. ನಾಜ್ಕ ತಗಡಿನ ಕೆಳ-ಕದಲಿಕೆಯಿಂದಾಗಿ (Subduction), ಹಗುರವಾದ ತೆಂಕಣ ಅಮೇರಿಕಾ ಗಟ್ಟಿತೆರಳೆಯ ತಗಡಿನಲ್ಲಿ ಕಲ್ಲುಗಳಿಂದ ಕೂಡಿದ ಕೆಳಬಾಗ ಮೇಲೆದ್ದು ಮಡಚಿಕೊಂಡಿತು(Folded).

ಈ ಮಾರ‍್ಪಾಟಿನ ನಂತರದ ಮಾರ‍್ಪಾಡುಗಳನ್ನು ಹೊಸ ಆಂಡೆಸ್(Modern Andes) ಎಂದು ಕರೆಯುವರು ಈ ಮಾರ‍್ಪಾಡು ತ್ರಿಯಾಸಿಕ್(Triassic) ಹೊತ್ತಿನಲ್ಲಿ ಮೊದಲುಗೊಂಡು ಜುರಾಸಿಕ್(Jurassic) ಹೊತ್ತಿನವರೆಗೂ ಮುಂದುವರೆಯಿತು. ಕಡಲಾಳದಲ್ಲೂ ಕೂಡ ಈ ಪೆರ‍್ನೆಲದ ತಗಡುಗಳು ಬೆಸೆದುಕೊಂಡಿವೆ ಹಾಗು ಹೆಚ್ಚು ಕಡಲಾಳವಿರುವ ಜಾಗವನ್ನು ‘ಪೆರು-ಚಿಲಿ ಕಂದಕ'(Peru-Chile trench) ಎಂದು ಕರೆಯುವರು. ಇದು ಕಡಲಮಟ್ಟದಿಂದ 8066 ಮೀ ಆಳವಿದೆ. ಈ ಪೆರ‍್ನೆಲದ ತೊಗಟೆಗಳ ಕೆಳ-ಕದಲಿಕೆಯಿಂದ(Subduction) ಆಂಡಿಸ್ ಬೆಟ್ಟಸಾಲಿನಲ್ಲಿ ಉರಿಬೆಟ್ಟಗಳು ಇನ್ನು ಬುಸುಗುಡುತ್ತಿವೆ. ಪೆರ‍್ನೆಲದ ಜರಗುವಿಕೆಯಲ್ಲಿ (Continental drift) ಹಳೆಯ ಗೊಂಡ್ವಾನ(Gondwana) ಬಾಗದ ಜತೆಗೂ ಆಂಡೆಸ್ ನಂಟು ಹೊಂದಿತ್ತೆಂದು ಹಲವು ನೆಲದರಿಗರ ಅನಿಸಿಕೆ.

ಈ ಸಾಲುಗಳ ಉದ್ದ 7000 ಕಿ. ಮೀ., ಅಗಲ 200 ರಿಂದ 700 ಕಿ.ಮೀ ಮತ್ತು ಸರಾಸರಿ ಎತ್ತರ 4000 ಮೀ. (13000 ಅಡಿ). ಆಂಡೆಸ್ ಬೆಟ್ಟದ ಸಾಲು ಎರಡು ಹಿರಿಗವಲುಗಳನ್ನು ಹೊಂದಿದೆ. ಕಾರ‍್ಡಿಲ್ಲೇರಾ ಓರಿಯೆಂಟಲ್ ಮತ್ತು ಕಾರ‍್ಡಿಲ್ಲೇರಾ ಆಸ್ಸಿದೆಂಟಲ್ ಎಂಬುವುದು ಈ ಎರಡು ಕವಲುಗಳ ಹೆಸರು. ಆಂಡೆಸ್ ಬೆಟ್ಟಗಳು ತೆಂಕಣ ಅಮೇರಿಕಾದ ಏಳು ನಾಡುಗಳಲ್ಲಿ ಹಾದು ಹೋಗಿವೆ. ಅವುಗಳೆಂದರೆ ಅರ‍್ಜೆಂಟೀನಾ, ಚಿಲಿ, ಪೆರು, ಬೊಲಿವಿಯ, ಕೊಲೊಂಬಿಯ, ಈಕ್ವೆಡಾರ‍್‌ ಮತ್ತು ಟ್ರಿನಿಡಾಡ್.

ನೆಲದ ಮೇಲಿನ ಹೆಚ್ಚು ಎತ್ತರದ ಬೆಟ್ಟಸಾಲುಗಳಾದ ಏಶ್ಯಾದ ಹಿಮಾಲಯ, ಕಾರಕೊರಂ ಹಾಗಿ ಇನ್ನಿತರ ಬೆಟ್ಟಸಾಲುಗಳನ್ನು ಬಿಟ್ಟರೆ ಆಂಡೆಸ್ ಬೆಟ್ಟಸಾಲು ನೆಲದ ಹೆಚ್ಚು ಎತ್ತರದ ಬೆಟ್ಟಗಳನ್ನು ಹೊಂದಿದೆ. ಆಂಡೆಸ್ ಬೆಟ್ಟಸಾಲಿನಲ್ಲಿ ಹೆಚ್ಚು ಎತ್ತರವಾದ ಬೆಟ್ಟವೆಂದರೆ ಅಕೊನ್‌ಕಾಗುವಾ ಇದು 6962 ಮೀ. (22,841 ಅಡಿ) ಎತ್ತರವಾಗಿದೆ. ಈಕ್ವೆಡಾರ‍್‌ನ ಚಿಂಬೊರಾಜೋ ಉರಿಬೆಟ್ಟವು ನೆಲದ ನಡುವಿಂದ ಅತಿ ಹೆಚ್ಚು ದೂರದಲ್ಲಿರುವ ನೆಲದ ಮೇಲಿನ ಮಟ್ಟವಾಗಿದೆ (Farthest point on Erath surface from Earth centre).

ಆಂಡೆಸ್ ಬೆಟ್ಟಗಳನ್ನು ತೆಂಕಣ ಚಿಲಿ ಮತ್ತು ಅರ‍್ಜೆಂಟಿನಾಗಳಲ್ಲಿ ‘ತೆಂಕಣ ಆಂಡೆಸ್’, ನಡು ಚಿಲಿ, ಪೆರು ಮತ್ತು ಬೊಲಿವಿಯಗಳಲ್ಲಿ ‘ನಡು ಆಂಡೆಸ್’ ಹಾಗೂ ವೆನೆಜುವೇಲಾ ಮತ್ತು ಕೊಲೊಂಬಿಯಗಳಲ್ಲಿ ‘ಬಡಗಣ ಆಂಡೆಸ್’ ಎಂದು ಮೂರು ಬೌಗೋಳಿಕ (Geographically) ಬಾಗಗಳಾಗಿ ಗುರುತಿಸಲಾಗಿದೆ. ಕೆರಿಬ್ಬಿಯನ್ ಕಡಲಿನಲ್ಲಿರುವ ಅರೂಬಾ, ಬೊನೈರ್ ಮತ್ತು ಕುರಕಾವ್ ನಡುಗುಡ್ದೆಗಳು ಕಡಲಿನಲ್ಲಿ ಮುಳುಗಿರುವ ಆಂಡೆಸ್ ಬೆಟ್ಟಗಳ ಬಡಗಣದಂಚಿನ ತುದಿಗಳಾಗಿವೆ.

ನೆಲದ ಮೇಲಿನ ಟೆಕ್ಟಾನಿಕ್ ತಟ್ಟೆಗಳ (ಗಟ್ಟಿತೆರಳೆಯ ತಗಡುಗಳು) ಸರಿಯುವಿಕೆಯಿಂದ ಹುಟ್ಟಿರುವ ಆಂಡೆಸ್ ಬೆಟ್ಟಸಾಲುಗಳು ಹಲವಾರು ಬೆಂಕಿಯುಗುಳುತ್ತಿರುವ ಉರಿಬೆಟ್ಟಗಳನ್ನು(Volcanic mountains) ಒಳಗೊಂಡಿವೆ ಇವುಗಳೆಂದರೆ ಹೆಸರಾಂತ ಕಟೋಪಾಕ್ಶಿ(Cotopaxi) ಉರಿಬೆಟ್ಟ, ಚಿಂಬೊರಾಜೋ ಉರಿಬೆಟ್ಟ, ಕಯಾಮ್ಬೆ ಮತ್ತು ಇನ್ನಿತರ ಉರಿಬೆಟ್ಟಗಳು.

ಆಂಡಿಸ್ ಬೆಟ್ಟಸಾಲು ತನ್ನ ಮೂಡಣ ದಿಕ್ಕಿಗೆ ಹಲವಾರು ಗೋಡುಮಣ್ಣಿನ ಬೋಗುಣಿಯನ್ನು(Sedimentary Basins) ಹೊಂದಿದೆ ಅವುಗಳೆಂದರೆ ಒರಿನೋಕೋ, ಅಮೆಜಾನ್ ಬೋಗುಣಿ, ಮ್ಯಾಡ್ರೆ ಡೀ ಡಿಯೋಸ್ ಮತ್ತು ಗ್ರಾನ್ ಚಾಕೋ. ಆಂಡೆಸ್ ಬೆಟ್ಟಸಾಲು ತೆಂಕಣ ದಿಕ್ಕಿನ ಪೆಟಗೊನಿಯಾ ಬಾಗದ(Patagonian Terrane) ಜೊತೆ ಎಲ್ಲೆಯನ್ನು ಹಂಚಿಕೊಂಡಿದೆ. ಆಂಡೆಸ್ ನ ಆಲ್ಟಿಪ್ಲೇನೋ ಕುರುಂಬುವು(Altiplano Plateau) ಟಿಬೆಟಿನ ಕುರುಂಬುವಿನ(Tibetian Plateau) ನಂತರದ ದೊಡ್ದಾದ ಕುರುಂಬುವಾಗಿದೆ.

ಬಿಸಿಹವೆಯ ಆಂಡೆಸ್(Tropical), ಒಣನೆಲದ ಆಂಡೆಸ್(Dry) ಮತ್ತು ಒದ್ದೆನೆಲದ(Wet) ಆಂಡೆಸ್ ಎಂದು ಹವೆಯರಿಮೆಯಂತೆ(Climataology) ಮೂರು ರೀತಿಯ ಬೇರ‍್ಮೆಯನ್ನು ಹೊಂದಿದೆ. ಬಡಗಣ ಆಂಡೆಸ್ ಬೆಟ್ಟಗಳಲ್ಲಿ ಹೆಚ್ಚಾಗಿ ಮಳೆಹೊಯ್ಯೂತ್ತದೆ ಹಾಗು ಮಳೆಯಿಲ್ಲದ ಹೊತ್ತಿನಲ್ಲಿ ಬೆಚ್ಚಗಿರುತ್ತದೆ ಮತ್ತು ಇಲ್ಲಿನ ಸರಾಸರಿ ಬಿಸಿಯಳತೆ 18 degC. ಆಂಡೆಸ್ ತೆಂಕಣದ ಜೋನ-ಆಸ್ಟ್ರಲ್(Zona Austral) ಬಾಗವು 0 degC ಗಿಂತ ತಂಪಾಗಿರುತ್ತದೆ.

ಬಡಗಣ ಆಂಡೆಸ್ ನ ಹಲವು ಬೆಟ್ಟಗಳಲ್ಲಿ 4,500 ಮತ್ತು 4,800 ಮೀ ಎತ್ತರದಲ್ಲಿ ಮಂಜು ಉದುರುತ್ತದೆ ಈ ಎತ್ತರದ ಎಲ್ಲೆಯನ್ನು ಮಂಜಿನ ಗೀರು(Snow line) ಎನ್ನುವರು. ಈ ಗೀರು ತೆಂಕಣ ಆಂಡೆಸ್ ನಲ್ಲಿ ಕೇವಲ 0 ಮೀ(ಕಡಲ ಮಟ್ಟದಿಂದ) ನಿಂದ 2000 ಮೀ ಎತ್ತರದಲ್ಲಿರುತ್ತದೆ. ಆಂಡೆಸ್ ಬೆಟ್ಟಸಾಲು ಹಲವಾರು ನೀರಿನ ಬುಗ್ಗೆ(Glaciers)ಗಳನ್ನೂ ಕೂಡ ಹೊಂದಿದೆ. ಅಮೆಜಾನ್ ನದಿ ಆಂಡೆಸ್ ಬೆಟ್ಟಸಾಲಿನಲ್ಲಿಯೇ ಹುಟ್ಟುತ್ತದೆ.

ಆಂಡೆಸ್ ಬೆಟ್ಟಸಾಲಿನ ಎತ್ತರದ ಬೆಟ್ಟಗಳು:

ಬೆಟ್ಟದ ಹೆಸರು ಎತ್ತರ (ಮೀ) ಒಳ ಸಾಲು ನಾಡು
ಅಕೊನ್‌ಕಾಗುವಾ 6,962 ನಡು ಆಂಡೆಸ್ ಅರ‍್ಜೆಂಟಿನಾ
ಒಜೋಸ್ ಡೆಲ್ ಸಾಲಡೋ 6,891 ಪುನ ಡಿ ಅಟಕಾಮ ಅರ‍್ಜೆಂಟಿನಾ ಮತ್ತು ಚಿಲಿ
ಮೊಂಟಿ ಪಿಸ್ಸಿಸ್ 6,792 ಪುನ ಡಿ ಅಟಕಾಮ ಅರ‍್ಜೆಂಟಿನಾ
ಹುವಾಸ್ಕಾರನ್ 6,768 ಕೊರ‍್ಡಿಲೆರಾ ಬ್ಲಾಂಕ ಪೆರು
ಬೊನೆಟೆ 6,759 ಪುನ ಡಿ ಅಟಕಾಮ ಅರ‍್ಜೆಂಟಿನಾ
ಟ್ರೆಸ್ ಕ್ರೂಜಸ್ 6,758 ಪುನ ಡಿ ಅಟಕಾಮ ಅರ‍್ಜೆಂಟಿನಾ ಮತ್ತು ಚಿಲಿ
ಲೂಲಾಯಿಲಾಕೋ 6,739 ಪುನ ಡಿ ಅಟಕಾಮ ಅರ‍್ಜೆಂಟಿನಾ ಮತ್ತು ಚಿಲಿ
ಮರ‍್ಸೆಡಾರಿಯೋ 6,720 ಕೊರ‍್ಡಿಲೆರಾ ಡಿ ಲಾ ರಮಡ ಅರ‍್ಜೆಂಟಿನಾ
ಕಾಜಡೆರೋ 6,658 ಪುನ ಡಿ ಅಟಕಾಮ ಅರ‍್ಜೆಂಟಿನಾ
ಇಂಕಾಹುವಾಸಿ 6,638 ಪುನ ಡಿ ಅಟಕಾಮ ಅರ‍್ಜೆಂಟಿನಾ ಮತ್ತು ಚಿಲಿ
ಏರುಪಾಜಾ 6,634 ಕೊರ‍್ಡಿಲೆರಾ ಬ್ಲಾಂಕ ಪೆರು
ತುಪುಂಗಾಟೊ 6,565 ಪುನ ಡಿ ಅಟಕಾಮ ಅರ‍್ಜೆಂಟಿನಾ ಮತ್ತು ಚಿಲಿ
ಸಾಜಾಮ 6,542 ಕೊರ‍್ಡಿಲೆರಾ ಓಕ್ಸಿಡೆಂಟಲ್ ಬೊಲಿವಿಯಾ
ರಮಡ ನೋರ‍್ಟೆ 6,500 ಕೊರ‍್ಡಿಲೆರಾ ಡಿ ಲಾ ರಮಡ ಅರ‍್ಜೆಂಟಿನಾ
ಎಲ್ ಮುಯೆರ‍್ಟೋ 6,488 ಪುನ ಡಿ ಅಟಕಾಮ ಅರ‍್ಜೆಂಟಿನಾ ಮತ್ತು ಚಿಲಿ
ಡೆಲ್ ವೆಲಾಡೆರೋ 6,471 ನಡು ಆಂಡೆಸ್ ಅರ‍್ಜೆಂಟಿನಾ
ಲಾಂಪು 6,485 ಕೊರ‍್ಡಿಲೆರಾ ರಿಯಲ್ ಬೊಲಿವಿಯಾ
ಲಿಮಾನಿ 6,462 ಕೊರ‍್ಡಿಲೆರಾ ರಿಯಲ್ ಬೊಲಿವಿಯಾ
ಆಂಟೋಪಾಲ 6,437 ಪುನ ಡಿ ಅಟಕಾಮ ಅರ‍್ಜೆಂಟಿನಾ
ಸೇರ‍್ರೋ ಡೆಲ್ ನಾಸಿಮಿಯೆಂಟೋ 6,436 ಕೊರ‍್ಡಿಲೆರಾ ಡಿ ಲಾ ರಮಡ ಅರ‍್ಜೆಂಟಿನಾ

ಆಂಡೆಸ್ ಬೆಟ್ಟಸಾಲಿನ ಜೀವಿಗಳ ಬೇರ‍್ಮೆ:

ಆಂಡೆಸ್ ಬೆಟ್ಟಗಳು ಹೇರಳವಾದ ಗಿಡಮರಗಳ ಬೇರ‍್ಮೆಯನ್ನು ಹೊಂದಿವೆ. ಸುಮಾರು 30000 ಬಗೆಯ ಗಿಡಮರಗಳು ಈ ನೆಲದಲ್ಲಿ ಬದುಕುತ್ತಿವೆ. ಇವುಗಳ ಪೈಕಿ ಸುಮಾರು 15000 ತಳಿಗಳು ನೆಲದ ಬೇರೆ ಕಡೆಗಳಲ್ಲಿ ಕಂಡುಬರುವುದಿಲ್ಲ. ಆಂಡೆಸ್ ಬೆಟ್ಟಗಳ ಜೀವಿಗಳ ಬೇರ‍್ಮೆಯು ನೆಲದ ಮೇಲಿನ ಇನ್ನಾವುದೇ ಜಾಗಕ್ಕಿಂತ ತುಂಬಾ ಹೆಚ್ಚಾಗಿದೆ.

ಹಿಂದೆ ಆಂಡೆಸ್ ಬೆಟ್ಟಗಳ ಬಡಗಣಬಾಗವನ್ನು ಆವರಿಸಿದ್ದ ಮಳೆಕಾಡುಗಳು ಇಂದು ಹೆಚ್ಚಿನ ಪ್ರಮಾಣದಲ್ಲಿ ಕುಗ್ಗಿವೆ. ಆಂಡೆಸ್ ಬೆಟ್ಟ ಸಾಲು ಹರವಿಕೊಂಡಿರುವ ತೆಂಕಣ ಅಮೇರಿಕಾ ಪೆರ‍್ನೆಲದ ನಾಡುಗಳಲ್ಲಿ ಕಾಡುಕಡಿಯುವಿಕೆ ಹೆಚ್ಚಿದ್ದು ಇದರಿಂದ ಕಾಡುಗಳ ದಟ್ಟಣೆ ಕಡಿಮೆಯಾಗುತ್ತಿದೆ. ಮಲೇರಿಯಾ ರೋಗವನ್ನು ಗುಣಪಡಿಸುವ ಕ್ವಿನೈನ್‌ ಮದ್ದಿನ ಮೂಲವಾದ ಸಿಂಕೋನಾ ಮರಗಳು ಹೆಚ್ಚಾಗಿ ಆಂಡೆಸ್ ಬೆಟ್ಟಗಳಲ್ಲಿ ಕಂಡುಬರುತ್ತವೆ. ತಂಬಾಕು ಗಿಡ ಮತ್ತು ಆಲೂಗಡ್ಡೆ ಸಹ ಆಂಡೆಸ್ ಬೆಟ್ಟಗಳಿಂದಗಳಿಂದ ನೆಲದ ಇತರೆಡೆಗೆ ಪರಿಚಯವಾದವು ಎಂಬುವುದು ಗಿಡದರಿಗರ(botanist) ಅನಿಸಿಕೆ.

ಗಿಡಮರಗಳ ಬೇರ‍್ಮೆಯಂತೆ ಆಂಡಿಸ್ ಬೆಟ್ಟಸಾಲು ಹೆಚ್ಚಿನ ಪ್ರಮಾಣದ ಪ್ರಾಣಿ ಮತ್ತು ಹಕ್ಕಿಗಳ ಬೇರ‍್ಮೆಯನ್ನು ಕೂಡ ಹೊಂದಿದೆ, ಸುಮಾರು 600 ತಳಿಗಳ ಮೊಲೆಯೂಡಿಗಳು(Mammals), 1700 ಬಗೆಯ ಹಕ್ಕಿಗಳು ಮತ್ತು 600 ಬಗೆಯ ಹಾವುಗಳು ಇಲ್ಲಿ ನೆಲೆಸಿವೆ. ಜೊತೆಗೆ 400 ತಳಿಗಳ ಮೀನುಗಳು ಕೂಡ ಆಂಡೆಸ್ ಬೆಟ್ಟಗಳ ತಪ್ಪಲಿನಲ್ಲಿರುವ ನೀರಿನ ಸೆಲೆಗಳಲ್ಲಿ ಬದುಕುತ್ತಿವೆ. ಲಾಮಾಗಳು ಆಂಡೆಸ್ ಬೆಟ್ಟಗಳಲ್ಲಿ ಮಾತ್ರ ಕಂಡುಬರುವ ಪ್ರಾಣಿ ಹಾಗು ಇವನ್ನು ಇಲ್ಲಿನ ಮಂದಿ ಪಳಗಿಸಿ ಬಾರ ಹೊರಲು ಬಳಸುತ್ತಾರೆ, ಜೊತೆಗೆ ಇವುಗಳ ತುಪ್ಪಳ ಮತ್ತು ಮಾಂಸ ಕೂಡ ಲಾಬದಾಯಕ ವಹಿವಾಟಾಗಿದೆ. ಪಡುವಣ ಅರೆಗೋಳದಲ್ಲಿ(Western hemisphere) ದೊಡ್ಡದಾದ ಹಕ್ಕಿ ಆಂಡೀಯನ್ ಕಾಂಡರ್ ಆಂಡೆಸ್ ಬೆಟ್ಟಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ.

Andes_Mountain_Betta_Bio_diversity

(ಆಂಡೆಸ್ ಪ್ರಾಣಿ,ಹಕ್ಕಿ,ಗಿಡಮರಗಳ ಬೇರ‍್ಮೆ) 

ಆಂಡೆಸ್ ಮತ್ತು ಮಂದಿಯ ಒಡನಾಟ:
ಇಂಕಾ,ಟಿವನಾಕು, ನೋರ‍್ಟಿ ಚಿಕೋ, ನಾಜ್ಕ, ಮುಯಿಸ್ಕಾ ಮತ್ತು ಇನ್ನಿತರ ಪೋಳಲಿಕೆಯ ತವರು ಈ ಆಂಡೆಸ್ ಬೆಟ್ಟಸಾಲು. ಈ ಪೋಳಲಿಕೆಗಳು ಬಡಗಣದ ಕೊಲಂಬಿಯಾದಿಂದ ತೆಂಕಣದ ಆಟಕಾಮದವರೆಗೆ (Atacama desert) ಹರಡಿಕೊಂಡಿದ್ದವು. ಈಗಲೂ ಹಲವಾರು ಬುಡಕಟ್ಟಿನ ಜನರು ಆಂಡೆಸ್ ಬೆಟ್ಟಗಳ ತಪ್ಪಲಿನ ಜಾಗದಲ್ಲಿ ಹಾಗು ಮೂಡಣದಲ್ಲಿರುವ ಅಮೆಜಾನ್ ಕಾಡುಗಳಲ್ಲಿ ಬದುಕುತ್ತಿದ್ದಾರೆ.

Andes_Mountain_Betta_machu_pichu(ಮಾಚು-ಪಿಚು)

ಪೆರು ನಾಡಿನ ಮಾಚು-ಪಿಚುವಿನಲ್ಲಿ ಇಂಕಾ ಪೊಳಲಿಕೆಯ ಪಳೆಯುಳಿಕೆಗಳನ್ನು ನೋಡಬಹುದು. ಸರಿಸುಮಾರು ಕ್ರಿ.ಶ1500 ರ ಹೊತ್ತಿನಲ್ಲಿ ಸ್ಪಾನಿಶ್,ಪೋರ‍್ಚುಗೀಸ್ ಮತ್ತು ಪ್ರೆಂಚರು ತೆಂಕಣ ಅಮೇರಿಕಾ ಪೆರ‍್ನೆಲಕ್ಕೆ ಕಾಲಿಟ್ಟರು. ಹಲವಾರು ಬೆಲೆಬಾಳುವ ಅದಿರುಗಳನ್ನು ತನ್ನೊಡಲೊಳಗೆ ಇರಿಸಿಕೊಂಡ ಆಂಡೆಸ್ ಬೆಟ್ಟಸಾಲುನ್ನು ಸ್ಪಾನಿಶರು ತಮ್ಮನೆಲೆಯನ್ನಾಗಿ ಮಾಡಿಕೊಂಡರು. ಹೀಗಾಗಿ ಆಂಡೆಸ್ ಬೆಟ್ಟಸಾಲಿನಲ್ಲಿ ಬರುವ ನಾಡುಗಳಲ್ಲಿ ಸ್ಪಾನಿಶ್ ನುಡಿಯನ್ನಾಡುತ್ತಾರೆ.

(ತಿಳಿವಿನ ಸೆಲೆಗಳು: Teofilo Laime Ajacopa, Diccionario Bilingüe Iskay simipi yuyayk’ancha, La Paz, 2007 [Quechua-Spanish dictionary], gseis.rice.edu, blueplanetbiomes.org, biodiversityhotspots.org, Wikipedia.com, study.com)

(ತಿಟ್ಟ ಸೆಲೆಗಳು: redorbit.com, antpitta.com, carlascovers.com, 4.bp.blogspot.com, coolgeography.co.uk, cloudfront.net)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: