ನೆನಪುಗಳ ಸಂತೆಯಲಿ ನನ್ನಪ್ಪನಂಗಡಿಗೆ ಬೆಲೆಕಟ್ಟುವವರಾರು?
– ಶ್ವೇತ ಪಿ.ಟಿ.
ದೊಡ್ದ ಬಾಗಿಲಿನ ಅಂಗಡಿ ನನ್ನಪ್ಪನದು. ನಾಲ್ಕು ಹಲಗೆ ಸಿಗಿಸಿ ಒಂದು ಕಬ್ಬಿಣದ ಚಿಲಕ ಬಿಗಿದರೆ ಬಾಗಿಲು ಹಾಕಿದೆ ಎಂಬ ಸಮಾದಾನ. ಆದರೆ ಮೊದಲ ಬಾರಿಗೆ ಊರಿಗೆ ಬಂದ ಹೊಸ ಕಳ್ಳನಿಗೂ ಕೂಡ ಬಾಗಿಲು ಒಡೆಯುವ ಚಿಂತೆಯೇ ಬೇಡ. ಒಮ್ಮೆ ಬಲವಾಗಿ ಜಾಡಿಸಿದರೆ ಸಾಕು ನಾಲ್ಕು ಹಲಗೆಗಳು ಪಕ್ಕ ಸರಿದು ಕಿಂಡಿ ಮಾಡಿಕೊಡುತ್ತವೆ. ಒಳ ನುಗ್ಗಿದ ಕಳ್ಳನಿಗಾದರೂ ಏನು ಗಿಟ್ಟೀತು? ಒಂದು ಮರದ ಕುರ‍್ಚಿ ಅದರ ಎತ್ತರಕೆ, ಸಮಕ್ಕೆ ಒಂದು ದೊಡ್ದ ಕನ್ನಡಿ – ಕುಳಿತವರು ಪೂರ‍್ತಿಯಾಗಿ ಕಾಣುವಂತೆ. ಹಿಂದೆ ನೇತು ಹಾಕಿದ್ದ ಸಣ್ಣ ಕನ್ನಡಿ ಹಾಗು ದೇವರ ಪಟಗಳು ದೊಡ್ಡ ಕನ್ನಡಿಯ ಒಳ ಸೇರಿದಂತೆ ಬಿಂಬಿತವಾಗುತ್ತಿತ್ತು.
ಇನ್ನು ಅಲ್ಲೇ ಇದ್ದ ಡ್ರಾಯರನ್ನು ತಡಕಿದರೆ ಸಿಕ್ಕಿದವು ಕ್ರೀಂ ಪೋಡರು, ಕತ್ರಿ ಹಾಗು ಎರಡು ಕೋಮುಗಳು – ಒಂದು ಹೊಸತು, ಮತ್ತೊಂದು ಹಳೆಯದು. ಹಳೆಯದು ಅನ್ನುವುದಕ್ಕಿಂತ ಕೊಳೆಯದು ಎನ್ನಬಹುದು. ಏಕೆಂದರೆ ಇದು ತಂದಾಗಿನಿಂದ ತೊಳೆಯದೇ ಇದ್ದದ್ದು. ಹೊಸತು ಜಮೀನಿರುವ ಗಿರಾಕಿಗಳಿಗೆ, ಹಳೆಯದು ಕೂಲಿ ಕಾರ‍್ಮಿಕರಿಗೆ. ಗಿರಾಕಿಗಳ ವಿಂಗಡಣೆ ವ್ರುತ್ತಿಯಿಂದಲ್ಲ, ಅವರು ಕೊಡುವ ಕಾಸಿನಲ್ಲಿಯೂ ವ್ಯತ್ಯಾಸವಿತ್ತು. ಅದಿರಲಿ ಇದನ್ನು ಕೊಂಡು ಹೋದ ಕಳ್ಳನಾದರೂ ಮತ್ತೊಂದು ಅಂಗಡಿ ತೆರೆಯಬಹುದಿತ್ತೇ ಹೊರತು, ಮಾರಲು ಹೋದರೆ ಯಾರೂ ಕೊಳ್ಳುವವರಿರಲಿಲ್ಲ. ಇದ್ದ ಅಶ್ಟರಲ್ಲೇ ನನ್ನಪ್ಪ ಎಂಬತ್ತರಿಂದ ನೂರು ರುಪಾಯಿ ದುಡಿಯುತ್ತಿದ್ದರು. ದಿನಕ್ಕೆ ಬೇಕಾಗುವಶ್ಟು ದುಡ್ದು – ಅದು ಹದಿನೇಳು ವರುಶಗಳ ಹಿಂದೆ.
ಆಗ ಶಾಲೆಗಳಲ್ಲಿ ಒಂದು ನಿಯಮವಿತ್ತು. ಬಲಗೈಯ ಬೆರಳುಗಳು ತಲೆಯ ಬಳಸಿ ಎಡಗಿವಿಯ ತಾಗಿಸಿದರೆ ಮಾತ್ರ ಶಾಲೆ ಪ್ರವೇಶ. ನನ್ನ ಈ ಪ್ರಯತ್ನ ಪಲಿಸದೆ ದಿನವೆಲ್ಲಾ ಅತ್ತಾಗಲೆ ನನ್ನಪ್ಪ ಅಂಗಡಿಯಲಿ ಶಾಲೆ ತೆರೆದಿದ್ದು. ಒಂದು ಗಟ್ಟಿ ಬಳಪ, ಒದ್ದೆ ಬಟ್ಟೆ. ಅಂಗಡಿಯ ಕೆಂಪು ನೆಲದ ಮೇಲೆ ಬರೆದು ಒರೆಸಲು ಅದೇನೋ ಕುಶಿ. ದಿನವೂ ‘ಅ’ ಇಂದ ‘ಳ’ ತನಕ ಬರೆದರೆ ಕೆನ್ನೆಗೊಂದು ಮುತ್ತು. ಎರಡರಿಂದ ಇಪ್ಪತ್ತರವರೆಗಿನ ಮಗ್ಗಿಯನ್ನು ಶಾಲೆ ಓದುವ ಮಕ್ಕಳ ಮುಂದೆ ಹೇಳಿಸಿ ಹೆಮ್ಮೆಯಿಂದ ಹಿಗ್ಗಿದಾಗಲೆ ಅಪ್ಪನ ಶಾಲೆಗೆ ಐದು ಮಕ್ಕಳಾದರು. ಬಂದ ಕೆಲವು ಗಿರಾಕಿಗಳು ಅಪ್ಪನೆಡೆಗೆ ಚೇಡಿಸುವ ನಗೆ ಬೀರಿದರೆ, ಕೆಲವರು “ಮೇಶ್ಟ್ರಾಗ್ ಬಿಟ್ರಲ್ಲಾ ” ಎಂಬ ಮಾತಿನ ಚೇಡಿಕೆಯೊಂದಿಗೆ ನಗೆ ಹಾರಿಸುತ್ತಿದ್ದರು. ಅಪ್ಪನಿಗೆ ಇದ್ಯಾವುದು ಕಿವಿಗೆ ಬೀಳದ ಮಾತಾಗಿದ್ದವು.
ಹೆಸರು-ವೇಳೆ-ನಿಯಮ-ಶುಲ್ಕ ಯಾವುದೂ ಇಲ್ಲದ ಶಾಲೆ. ತರಗತಿಗಳ ವಿಂಗಡನೆಯಿಲ್ಲದೆ ಎಲ್ಲರಿಗೂ ಒಂದೇ ಪಾಟ. ಇದೆಲ್ಲವನ್ನು ಮೀರಿ ಅಪ್ಪನಿಗೆ ಒಂದು ಹೆಮ್ಮೆಯಿತ್ತು, ಆತ್ಮ ತ್ರುಪ್ತಿಯಿತ್ತು. ಅವರು ಕಲಿಸಿದ್ದ ಒಂದಂದು ಅಕ್ಶರ, ಪದ, ಪಾಟಗಳೂ ಜೀವನದ ಮೌಲ್ಯವನ್ನು ಬಿಂಬಿಸುವಂತಿತ್ತು. ಅಪ್ಪ ಹೇಳಿದ್ದ ಈಜಿಕೊಲ್ಟು, ಈಗ ಈಕ್ವಲ್ಟು ಎಂದು ತಿಳಿದಿದೆ. ಆದರೆ ಅವರು ಹೇಳಿದ್ದ ಲೆಕ್ಕದಲ್ಲಿ ತಪ್ಪಿರಲಿಲ್ಲ. ಇದೆಲ್ಲವೂ ಈಗ ಜೀವನ ಪುಸ್ತಕದ ಕಳೆದ ಹಾಳೆಗಳಾಗಿವೆ. ನಾಳೆಯ ಚಿಂತೆಯಲಿ ಹೋದ ನೆನ್ನೆಯೆಲ್ಲವೂ ಸರಳವೆನಿಸಿದೆ. ಆದರೆ ಬರುವ ನಾಳೆಯಲಿ ನೆನ್ನೆಗಳ ನೆನೆದಾಗ ನನಗೆ ಕಾಡುವ ಪ್ರಶ್ನೆಯೊಂದಿದೆ “ನೆನಪುಗಳ ಸಂತೆಯಲಿ ನನ್ನಪ್ಪನಂಗಡಿಗೆ ಬೆಲೆಕಟ್ಟುವವರಾರು…? ”
(ಚಿತ್ರ ಸೆಲೆ: betterthansurviving.me )
ಅಪ್ಪ ಹೇಳಿದ್ದ ಈಜಿಕೊಲ್ಟು, ಈಗ ಈಕ್ವಲ್ಟು ಎಂದು ತಿಳಿದಿದೆ
good finishing
channagide ri story, simple aagi