ತಿರುತಿರುಗಿ ಬರುವ ಮೈಮರೆವ ನಲಿವು

– ರತೀಶ ರತ್ನಾಕರ.

romantic-couple

ಬೆಟ್ಟದೂರ ಚೆಲುವೆ ಹೂವಂತೆ ನಗುವೆ
ಮಿಂಚಿಗೂ ನಾಚಿಕೆ ಬರುವಂತೆ ಹೊಳೆವೆ
ಒಮ್ಮೆಯಾದರು ನೀ
ಚಂದಗಾಣದಿರು ನಲ್ಲೆ
ನನ್ನ ಕಣ್ಣಿಗಾದರೂ ಕೊಂಚ ಬಿಡುವು ಬೇಡವೆ?

ಮೆಚ್ಚಿದವಳೆದುರು ಮುಚ್ಚುಮರೆಯೇನು?
ಬಚ್ಚಿಟ್ಟ ಬಯಕೆಗಳ ನಾ ಬಿಚ್ಚಿ ಇಡುವೆ
ಹೂವಿಂದ ಹೀರಿದ
ದುಂಬಿಯಿಂದ ಕದ್ದ
ಜೇನನ್ನು ಬಚ್ಚಿಟ್ಟ ತುಟಿಯನ್ನು ಕಚ್ಚುವೆ

ಚೆಲುವ ತೋಟದಲಿ ಒಲವ ಹಕ್ಕಿಗಳೆರೆಡು
ಬಯಕೆ ಹಣ್ಣನು ಸವಿಯೆ ಕುಕ್ಕದೆ ಕಚ್ಚುತ
ಗುಳಿಕೆನ್ನೆ ಇಳಿಗಲ್ಲ
ನೀಳ ಕೊರಳಿನ ಮೇಲೆಲ್ಲ
ಹಲ್ಲುಗಳ ಮಳೆಬಿಲ್ಲ ತೆಳು ಗುರುತನಿಡುತ

ಕಚಗುಳಿಯ ತಡೆಯೆ ಮೈಮುರಿದೆ ನಾನು
ಹಣೆ ಬೆವರಿತೇನೆ ಬಿಸಿಯುಸಿರಿಗೆ
ಕಣ್ಣಂಚ ಮಿಂಚು
ಎದೆಗೂಡ ಗುಡುಗು
ನೆನೆದೆವಲ್ಲಾ ನಾವು ಮುತ್ತುಗಳ ಮಳೆಗೆ

ತಿರುತಿರುಗಿ ಬರುವ ಮೈಮರೆವ ನಲಿವು
ಸಿಹಿತುತ್ತು ತಿನಿಸಿ ಅರೆಹೊತ್ತು ಮೆರೆದಿತ್ತು
ಎರಡುಸಿರ ಬಯಕೆ
ಒಲವಿನ ಬಾಳ್ಮೆಯ
ಕೊನೆತನಕ ಉಳಿಸುವ ಮಾತಿತ್ತು ಹೋಗಿತ್ತು

( ಚಿತ್ರ ಸೆಲೆ: freewallpapersbackgrounds.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: