ಬಂದಿದೆ ಹೊಸದೊಂದು ಬಗೆಯ ಬಂಡಿ!

ಜಯತೀರ‍್ತ ನಾಡಗವ್ಡ.
Multix

ದಿನೇ ದಿನೇ ಹೊಸದೊಂದು ಬಗೆಯ ಕಾರುಗಳು ಬಂಡಿಗಳು ಮಾರುಕಟ್ಟೆಗೆ ಬರುತ್ತಲಿವೆ. ಇವುಗಳಲ್ಲಿ ಹೆಚ್ಚಿನವು ಸಾಮಾನ್ಯ ಮಂದಿ ಸಾಗುವ ಹಲವು ಗಾತ್ರದ ಕಾರುಗಳು ಇಲ್ಲವೇ ಸರಕು ಸಾಗಿಸುವ ಬಂಡಿಗಳು. ಬಂಡಿಯೊಂದು ಸರಕು ಮತ್ತು ಮಂದಿ ಸಾಗಿಸುವ ಎರಡು ವಿಶೇಶತೆ ಹೊಂದಿದ್ದರೆ ಎಶ್ಟೊಂದು ಅನುಕೂಲ ಅಲ್ಲವೇ. ಇದೀಗ ಹೊಸದೊಂದು ಬಗೆಯ ಬಂಡಿಯೊಂದು ಮಾರುಕಟ್ಟೆಗೆ ಅಪ್ಪಳಿಸಿದೆ. ಇವೆರಡು ವಿಶೇಶತೆಯಲ್ಲದೇ ನಿಮ್ಮ ಮನೆಯನ್ನು ಬೆಳಗಬಲ್ಲದು, ನಿಮ್ಮ ಹೊಲಗದ್ದೆಗೆ ನೀರುಣಿಸಲೂಬಲ್ಲುದು. ಈ ಬಂಡಿಯ ಹೆಸರೇ ಮಲ್ಟಿಕ್ಸ್ (Multix).

ರಾಯಲ್ ಎನ್‌ಪೀಲ್ಡ್ (Royal Enfield) ಹೆಸರಿನಡಿ ಪಟಪಟ ಸದ್ದು ಮಾಡುವ ಇಗ್ಗಾಲಿ ಬಂಡಿಗಳು, ಟ್ರ್ಯಾಕ್ಟರ್‌ಗಳು ಮತ್ತು ವಿವಿದ ಗಾತ್ರದ ಲಾರಿ, ಬಸ್‍ಗಳನ್ನು ತಯಾರಿಸುವ ಬಾರತದ ಹೆಸರುವಾಸಿ ತಾನೋಡ ಕೂಟ ಆಯ್ಶರ್ (Eicher). ಆಯ್ಶರ್ ವೋಲ್ವೊ ಸಂಸ್ತೆಯೊಂದಿಗೆ ಸೇರಿ ಲಾರಿ-ಬಸ್ ತಯಾರಿಸುವ ಬೇರೆ ಕೂಟವನ್ನು ಕೂಡ ನಡೆಸುತ್ತಿದೆ. ಪೋಲಾರಿಸ್ (Polaris) ಎಂಬುದು ಮರಳುಗಾಡು ಮತ್ತು ಗುಡ್ಡಗಾಡುಗಳಲ್ಲಿ ಓಡಾಡುವ ಬಂಡಿ ತಯಾರಿಸುವ ಜಗತ್ತಿನ ದೊಡ್ಡ ಕೂಟ.  ಬಾರತ ಮೂಲದ ಆಯ್ಶರ್ ಮತ್ತು ಅಮೇರಿಕಾ ಮೂಲದ ಪೋಲಾರಿಸ್ ಈ ಎರಡು ಕೂಟಗಳು ಸೇರಿ ಹೊರತಂದಿರುವ ಬಂಡಿಯೇ ಮಲ್ಟಿಕ್ಸ್.

Multix Ax+

ಮಲ್ಟಿಕ್ಸ್ ಬಂಡಿ ಅತ್ತ ಮಂದಿ ಸಾಗಣೆ ಬಂಡಿಯೂ ಅಲ್ಲ ಇತ್ತ ಸರಕು ಸಾಗಣೆಯ ಬಂಡಿಯೂ ಅಲ್ಲ. ಇವೆರಡರ ಸರಿಯಾದ ಬೆರಕೆಯಿಂದಾದ ಬಂಡಿ ಎನ್ನಬಹುದು. ಬರೀ ಇಶ್ಟೇ ಅಲ್ಲದೇ ಈ ಬಂಡಿಯ ಹಿಂಬಾಗದಲ್ಲಿ ಮೂರು ಕಿಲೋವ್ಯಾಟ್ ಮಿಂಚು ತಯಾರಿಸುವ ಮಿಂಚುಟ್ಟುಕವೊಂದನ್ನು (Generator) ನೀಡಲಾಗಿದೆ. ಇದರ ಮೂಲಕ ನೀವು ನಿಮ್ಮ ಮನೆಯ ದೀಪ ಬೆಳಗಬಹುದು, ಹೊಲಗದ್ದೆಯಲ್ಲಿ ನೀರಿನೊತ್ತುಕಗಳಿಗೆ (water pump set) ಮಿಂಚು ನೀಡಿ ನೀರುಣಿಸಬಹುದು, ಬೂಮಿಯಾಳಕೆ ಚಿಕ್ಕ ಕೊಳವೆ ಬಾವಿ ಕೊರೆಯಲು ಬಳಸಬಹುದು.

arrangement

ಕೇವಲ ಸಾಗಣೆಯ ಬಂಡಿಯಶ್ಟೇ ಅಲ್ಲದೇ ಹೀಗೆ ಹತ್ತು ಹಲವು ಕೆಲಸಗಳಿಗೆ ಈ ಬಂಡಿಯ ಬಳಕೆ ಮಾಡಬಹುದಾದುರಿಂದ ಇದಕ್ಕೆ ಸ್ವತಂತ್ರ ಮಂದಿಯ ಬಳಕೆಯ ಬಂಡಿ ಎಂಬ ಹೆಸರು ನೀಡಲಾಗಿದೆ. ಸ್ವತಂತ್ರವಾಗಿ ಸಣ್ಣ ಪುಟ್ಟ ವಹಿವಾಟು ನಡೆಸುವವರು, ಸಣ್ಣ ಮತ್ತು ಗುಡಿ ಕಯ್ಗಾರಿಕೆ ನಡೆಸುವವರ ಅಗತ್ಯಗಳಿಗೆ ತಕ್ಕಂತೆ ಈ ಬಂಡಿ ತಯಾರಿಸಲಾಗಿದೆ ಎಂದು ಆಯ್ಶರ್ ಪೋಲಾರಿಸ್ ಜಂಟಿ ಕೂಟದ ಮೇಲಾಳುಗಳಲ್ಲೊಬ್ಬರಾದ ಸಿದ್ದಾರ‍್ತ್ ಲಾಲ್ ಹೇಳಿಕೊಂಡಿದ್ದಾರೆ. ಸಿದ್ದಾರ‍್ತ್ ಲಾಲ್ ಹೇಳುವಂತೆ ಇಂಡಿಯಾದಲ್ಲಿ ಸುಮಾರು 5.8 ಕೋಟಿಯಶ್ಟು ಸ್ವತಂತ್ರ ಜಂಬರ(Business) ನಡೆಸಿಕೊಂಡು ಹೋಗುವವರಿದ್ದಾರೆ. ಇಂತವರ ಅಗತ್ಯಗಳಿಗೆ ತಕ್ಕ ಬಂಡಿಗಳ ಕೊರತೆಯಿದ್ದು ಇದೇ ನಿಟ್ಟಿನಲ್ಲಿ ಕೆಲಸ ಮಾಡಿ ಈ ಬವಣೆ ನೀಗಿಸಲು ಮಲ್ಟಿಕ್ಸ್ ಬಂಡಿ ಹೊರತರಲಾಗಿದೆ ಎಂದು ಶ್ರೀ ಲಾಲ್ ವಿವರಿಸಿದ್ದಾರೆ.

ಇದು ರಯ್ತಾಪಿ ಜನತೆಗೆ ಹೆಚ್ಚು ಅನುಕೂಲವಾಗಲಿದೆ ಎಂದು ಹಲವರ ಅನಿಸಿಕೆ.  ತಾವು ಗದ್ದೆಯಲ್ಲಿ ಬೆಳೆದ ಇಳುವರಿಯನ್ನು ಮಾರುಕಟ್ಟೆಗೆ ಸಾಗಿಸಲು, ಮಿಂಚು ಇಲ್ಲದಾಗ ಗದ್ದೆಗೆ ನೀರುಣಿಸಲು ಇದರ ಮಿಂಚುಟ್ಟುಕ ಬಳಸಲು, ಪ್ರತಿದಿನ ಹೊಲಗದ್ದೆಗೆ ಬೇಟಿ ನೀಡಲು ಮತ್ತು ತಮ್ಮ ಕುಟುಂಬದವರ ಜೊತೆ ಸುತ್ತಾಡಲೂ ಈ ಮಲ್ಟಿಕ್ಸ್ ಒಂದಿದ್ದರೆ ಸಾಕು. ಈ ವಿಶೇಶತೆಯಿಂದ ಹಲವು ಮಂದಿಯನ್ನು ಈ ಬಂಡಿ ತನ್ನತ್ತ ಸೆಳೆಯುತ್ತಿದ್ದು, ಇದೇ ಬಗೆಯ ಸರಕು ಮತ್ತು ಮಂದಿ ಸಾಗಣೆ ಬಂಡಿ ತಯಾರಿಸಿ ಮುಂಚೂಣಿಯಲ್ಲಿರುವ ಟಾಟಾ(TATA), ಮಹೀಂದ್ರಾ(Mahindra) ಮತ್ತು ಪಿಯಾಜಿಯೊ(Piaggio) ಮುಂತಾದ ಕೂಟಗಳು ಇದೀಗ ಚಿಂತೆಗೀಡಾಗಿವೆ.

3in1

ಇಗ್ಗಾಲಿ ಬಂಡಿ ನಡೆಸಿಕೊಂಡು ಹೋಗುವ ಬೆಲೆಯಲ್ಲೇ ಇದನ್ನು ನಡೆಸಿಕೊಂಡು ಹೋಗಬಹುದು ಎಂಬುದು ಬಂಡಿ ತಯಾರಕ ವಾದ. ಲೀಟರ್ ಒಂದಕ್ಕೆ 28.45 ಕಿಮೀ ಸಾಗುವ ಮಲ್ಟಿಕ್ಸ್‌ನ ಮಯ್ಲಿಯೋಟ ಈ ವಾದಕ್ಕೆ ಬಲ ತುಂಬಿದೆ. ಎಯಕ್ಸ್ ಪ್ಲಸ್(AX+) ಮತ್ತು ಎಮ್‌ಎಕ್ಸ್(MX) ಎಂಬ ಎರಡು ಬಗೆಯ ಮಾದರಿಯಲ್ಲಿ ಮಲ್ಟಿಕ್ಸ್ ಸಿಗಲಿದೆ. ಬೆಲೆ ರೂ.2.32 ರಿಂದ 2.72 ಲಕ್ಶಗಳಾಗಿರಲಿವೆ. ಎಯಕ್ಸ್‌‌ಪ್ಲಸ್ ಬಾಗಿಲು ಹೊಂದಿರದೆ ತೆರದ ಬಂಡಿಯಂತಿದೆ, ಎಮ್‌ಎಕ್ಸ್ ಮಾದರಿಯಲ್ಲಿ ಬಾಗಿಲು ನೀಡಲಾಗಿದೆ. ಎರಡು ಬಂಡಿಯ ತೂಕ ಕ್ರಮವಾಗಿ 650, 750 ಕೆಜಿಗಳು. ಇದಿಶ್ಟು ಬಿಟ್ಟರೆ ಎರಡು ಮಾದರಿಗಳಲ್ಲಿ ಯಾವುದೇ ಬೇರ‍್ಮೆಯಿಲ್ಲ.

ಬಂಡಿಯಲ್ಲಿ 5 ಮಂದಿ ಕೂಡಲು ಜಾಗವಿದೆ. ಒಂದಿಬ್ಬರು ಓಡಾಡುವಾಗ ಹೆಚ್ಚಿನ ಸರಕು ಸಾಗಿಸಲು ಅನುವಾಗುವಂತೆ ಹಿಂದಿನ ಕೂರುವ ಜಾಗವನ್ನು ಮಡಚಿ ಹೆಚ್ಚು ಸರಕು ತುಂಬುವ ಅವಕಾಶವಿದೆ. ಹಿಂಬಾಗದಲ್ಲಿ ಕವರ್ ಸೇರಿಸಿದರೆ ಸರಕು ಚಾಚಿಕೆಯ ಬಾಗ 418 ಲೀಟರ್ ನಿಂದ 840 ಲೀಟರ್‌ನಶ್ಟು ದೊಡ್ಡದಾಗಲಿದೆ. ಎಯಕ್ಸ್‌‌ಪ್ಲಸ್ ಕಡುಗೆಂಪು ಮತ್ತು ಬಿಳಿ ಬಣ್ಣಗಳಲ್ಲಿ ಮಾತ್ರ ಸಿಗಲಿದೆ. ಎಮ್‌ಎಕ್ಸ್ ಮಾದರಿ ಬಿಳಿ, ಕಡುಗೆಂಪು, ಹಳದಿ ಮತ್ತು ಬೆಳ್ಳಿ ಬಣ್ಣ ಸೇರಿದಂತೆ ಒಟ್ಟು 4 ಬಣ್ಣಗಳಲ್ಲಿ ಬರಲಿದೆ. ಕೆಳಗಿನ ಹೋಲಿಕೆ ಪಟ್ಟಿಯನ್ನು ನೋಡಿ ಎರಡು ಮಾದರಿಗಳ ನಡುವಣ ಬೇರ‍್ಮೆಯನ್ನು ತಿಳಿಯಬಹುದು.

specs22

ಈ ಬಂಡಿಯಲ್ಲಿ ಗ್ರೀವ್ಸ್(Greaves) ಕೂಟದವರು ತಯಾರಿಸಿದ ಬಿಣಿಗೆ ಅಳವಡಿಸಲಾಗಿದೆ. 0.51 ಲೀಟರ್ ಅಳತೆಯ ಈ ಬಿಣಿಗೆ ಕೇವಲ ಒಂದು ಉರುಳೆಯನ್ನು ಮಾತ್ರ ಹೊಂದಿದೆ. ಹತ್ತು ಕುದುರೆಬಲದ ಬಿಣಿಗೆ (horse power engine), 27 ನ್ಯೂಟನ್ ಮೀಟರ್ ಸೆಳೆಬಲ (torque) ನೀಡಲಿದೆ. ಬಿಣಿಗೆಯ ಕೆಡುಗಾಳಿ ಬಿ.ಏಸ್-3 ಮಟ್ಟಕ್ಕೆ ಸರಿ ಹೊಂದುತ್ತದೆ. ಮಲ್ಟಿಕ್ಸ್‌ನಲ್ಲಿ 5 ವೇಗದ ಓಡಿಸುಗನಿಡಿತದ ಸಾಗಣಿಯಿರುತ್ತದೆ (transmission). ಮಲ್ಟಿಕ್ಸ್‌ನ ಬಿಣಿಗೆಯ ಗಾಲಿತೂಕದ ಬದಿಗೆ ಒಂದು ಗುಣಿ (shaft) ನೀಡಲಾಗಿದ್ದು ಬಿಣಿಗೆಯಿಂದ ಬರುವ ಕಸುವನ್ನು  ಗುಣಿ ಮೂಲಕ ಮಿಂಚುಟ್ಟುಕಕ್ಕೆ (electric generator) ನೀಡಿ ಮಿಂಚು ತಯಾರಿಸಬಹುದಾಗಿದೆ. ಈ ಗುಣಿಗೆ ಎಕ್ಸ್‌ಪೋರ‍್ಟ್ ಶಾಪ್ಟ್ (X-Port Shaft) ಎಂಬ ಹೆಸರಿನಿಂದ ಕರೆಯಲಾಗುತ್ತಿದೆ.

specs11

ಈ ಬಂಡಿಗೆಂದೇ ಆಯ್ಶರ್-ಪೋಲಾರಿಸ್ ಕೂಟಗಳು ಪಾಲುದಾರಿಕೆಯಲ್ಲಿ ರಾಜಸ್ತಾನದ ಜಯ್ಪುರ್ ಬಳಿ 350 ಕೋಟಿ ರೂಪಾಯಿಗಳ ಹೂಡಿ ಕಾರ‍್ಕಾನೆಯೊಂದನ್ನು ಸ್ತಾಪಿಸಿವೆ. ಈ ಕಾರ‍್ಕಾನೆಯಿಂದ ವರುಶವೊಂದಕ್ಕೆ ಸುಮಾರು 60,000 ಬಂಡಿಗಳು ಹೊರಬರಲಿವೆಯಂತೆ. ಇದೀಗ ಇಂಡಿಯಾದ 8 ನಾಡುಗಳಲ್ಲಿ ಈಗಾಗಲೇ 30 ಮಾರಾಳಿಗರನ್ನು ನೇಮಿಸಿ ಮಲ್ಟಿಕ್ಸ್‌ನ ಮುಂಗಡ ಕಾಯ್ದಿರಿಸುವಿಕೆ ಚುರುಕುಗೊಂಡಿದೆ. ಆಗಸ್ಟ್‌ನಿಂದ ಈ ಬಂಡಿಗಳು ಕೊಳ್ಳುಗರ ಮನೆ ಸೇರಲಿವೆ ಎಂಬ ಸುದ್ದಿ ತಿಳಿದು ಬಂದಿದೆ. ಕರ‍್ನಾಟಕದಲ್ಲಿ ಈ ಬಂಡಿ ಮಾರಾಟ ಇನ್ನೂ ಶುರುವಾಗಿಲ್ಲ. ಬರುವ ದಿನಗಳಲ್ಲಿ ನಮ್ಮ ಕರ‍್ನಾಟಕ ಸೇರಿದಂತೆ ಇಂಡಿಯಾದ ಇತರೆ ನಾಡುಗಳಲ್ಲಿ ಬಂಡಿ ಮಾರಾಳಿಗರನ್ನು ನೇಮಿಸಲಾಗುವುದೆಂದು ಮಲ್ಟಿಕ್ಸ್ ಕೂಟ ತಿಳಿಸಿದೆ. ಬಂಡಿ ಕೊಳ್ಳಲು ಆಸಕ್ತಿಯಿದ್ದವರು ಕೂಟದ www.multix.in ಮಿಂದಾಣಕ್ಕೆ ಬೇಟಿ ನೀಡಬಹುದು.

(ಮಾಹಿತಿ ಮತ್ತು ತಿಟ್ಟ ಸೆಲೆಗಳು: www.multix.in)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: