ಇಂದು ಜಗಮಗಿಸಲಿದೆ ಹೊಂಡಾ ಜಾಜ್

ಜಯತೀರ‍್ತ ನಾಡಗವ್ಡ.

Capture

ಜಾಜ್ (Jazz) ತಾನೋಡ ಉದ್ಯಮದಲ್ಲಿರುವ ಹೆಚ್ಚಿನವರು ಕೇಳಿರುವ ಹೆಸರು. ಹೊಂಡಾ ಕೂಟದವರು ಜಗತ್ತಿನೆಲ್ಲೆಡೆ ಬಿಡುಗಡೆ ಮಾಡಿದ ಜಾಜ್ ಕಾರು ಒಳ್ಳೆಯ ಹೆಸರುವಾಸಿ ಬಂಡಿಗಳಲ್ಲೊಂದು. 2009ರಲ್ಲಿ ಈ ಬಂಡಿ ಇಂಡಿಯಾದಲ್ಲಿ ಕೂಡ ಬೀದಿಗಿಳಿದಿತ್ತು. ಇಂಡಿಯಾದಲ್ಲಿ ಅಶ್ಟೇನು ಹೆಸರು ಮಾಡದ ಜಾಜ್ ದಿನದಿಂದ ದಿನಕ್ಕೆ ಬೇಡಿಕೆ ಕಳೆದುಕೊಳ್ಳತೊಡಗಿತ್ತು. ಕುಗ್ಗಿದ ಬೇಡಿಕೆಗೆಯಿಂದ ಬೇಸತ್ತ ಹೊಂಡಾ ಇಂಡಿಯಾ ಕೂಟದವರು 2013 ರಲ್ಲಿ ಜಾಜ್ ತಯಾರಿಕೆಯನ್ನು ನಿಲ್ಲಿಸಿದ್ದರು. ಆದರೆ ಇಲ್ಲಿಯವರೆಗೆ 55 ಲಕ್ಶ ಜಾಜ್ ಬಂಡಿಗಳನ್ನು ಜಗತ್ತಿನ 75 ದೇಶಗಳಲ್ಲಿ ಮಾರಾಟ ಮಾಡಿರುವ ಹೊಂಡಾದವರಿಗೆ ಇಂಡಿಯಾದಲ್ಲಿ ಸೋಲು ಅರಗಿಸಿಕೊಳ್ಳಲಾಗಲಿಲ್ಲವೆನ್ನಿಸುತ್ತದೆ. ಅದಕ್ಕೆ ಚಲದಂಕ ಮಲ್ಲನಂತೆ ಮರಳಿ ಯತ್ನವ ಮಾಡುವಂತೆ ಹೊಂಡಾ ತನ್ನ ಹೊಸದಾಗಿಸಿದ ಜಾಜ್ ಕಾರನ್ನು ಇಂದಿನಿಂದ ಇಂಡಿಯಾದ ಮಾರುಕಟ್ಟೆಗೆ ತರುತ್ತಿದೆ.

ಹಳೆಯ ಜಾಜ್ ಇಂಡಿಯಾದಲ್ಲಿ ಸೋಲಲು ಅದರ ನೋಟ, ಮಯ್ಮಾಟ ಮತ್ತು ಹೆಚ್ಚಿನ ಬೆಲೆ ಇವುಗಳು ಕಾರಣವಾಗಿದ್ದವು. ಇವೆಲ್ಲದರ ಕಡೆ ಹೆಚ್ಚಿನ ಗಮನಹರಿಸಿ ಇದೀಗ ಹೊಸದಾದ ಜಾಜ್ ತಯಾರಿಸಲಾಗಿದೆ. ಎಶ್ಟೇ ಆಗಲಿ ಹೊಂಡಾ ಕೂಟದವರು ಸುಲಬವಾಗಿ ಸೋಲೊಪ್ಪಿಕೊಳ್ಳದ ಮಂದಿ. ಎರಡನೇ ವಿಶ್ವ ಕಾದಾಟದ ಸಮಯದಲ್ಲಿ ನಶ್ಟ ಅನುಬವಿಸಿ ಮೇಲೆದ್ದು ಮತ್ತೆ ಸಾಲು ಸಾಲಾಗಿ ನಶ್ಟದ ಸುಳಿಗೆ ಸಿಲುಕಿದರೂ ಪಿನಿಕ್ಸ್ ಹಕ್ಕಿಯಂತೆ ಮಯ್ಗೊಡವಿ ಎದ್ದು ನಿಂತ ಹೊಂಡಾ ಕೂಟದ ಹಳಮೆಯೇ ಇದಕ್ಕೆ ಹಿಡಿದ ಕನ್ನಡಿ. ಈ ಹೊಸ ಜಾಜ್ ಕಾರಿನತ್ತ ಒಂದು ಇಣುಕು ನೋಟ ನಿಮ್ಮ ಮುಂದಿಡುತ್ತಿದ್ದೇನೆ.

ಬಿಣಿಗೆ (engine):

Engine

ಬಿಣಿಗೆಯ ವಿಶಯಕ್ಕೆ ಬಂದರೆ ಹೊಸ ಜಾಜ್ ಎರಡು ಬಿಣಿಗೆಯ ಮಾದರಿಯಲ್ಲಿ ಬರಲಿದೆ. ಪೆಟ್ರೋಲ್ ಮಾದರಿಗಾಗಿ 1.2 ಲೀಟರ್ ಆಯ್ವಿಟೆಕ್ ಬಿಣಿಗೆಯನ್ನು ನೆಚ್ಚಿಕೊಂಡಿದೆ. ಡೀಸೆಲ್ ಮಾದರಿಯಲ್ಲಿ ಅಮೇಜ್, ಮೊಬಿಲಿಯೊಗಳಲ್ಲಿ ಮಿಂಚುತ್ತಿರುವ ಆಯ್ಡಿಟೆಕ್ ಬಿಣಿಗೆಯನ್ನು ಅಳವಡಿಸಲಾಗಿದೆ.  ಪೆಟ್ರೋಲ್ ನ ಆಯ್ವಿಟೆಕ್ ಬಿಣಿಗೆ 89 ಕುದುರೆಬಲದ ಕಸುವು ನೀಡಿದರೆ, 110 ನ್ಯೂಟನ್ ಮೀಟರ್ ನಶ್ಟು ಸೆಳೆಬಲ ಉಂಟು ಮಾಡಲಿದೆ. 1.5 ಲೀಟರ್‌ನ ಆಯ್ಡಿಟೆಕ್ ಬಿಣಿಗೆ 99 ಕುದುರೆಬಲ ಹೊರಹಾಕಿದರೆ 200 ನ್ಯೂ.ಮೀ ಸೆಳೆಬಲ ನೀಡಲಿದೆ.  ಪ್ರತಿ ಲೀಟರ್ ಡೀಸೆಲ್‍ಗೆ 27.3 ಕಿಮೀ ಸಾಗುವ ಆಯ್ಡಿಟೆಕ್ ಬಿಣಿಗೆ ಮಯ್ಲಿಯೋಟದಲ್ಲಿ ಇತ್ತಿಚೀಗೆ ಬಿಡುಗಡೆಗೊಂಡ ಸೆಲೆರಿಯೊ ಡೀಸೆಲ್ ಬಿಣಿಗೆಯ ನಂತರದ ಸ್ತಾನ ಪಡೆದಿದೆ. ಅದೇ ಪೆಟ್ರ‍ೋಲ್ ಬಿಣಿಗೆಯ ಮಯ್ಲಿಯೋಟ 19 ಕಿಮೀಗಳು.

ಸಾಗಣಿ (transmission):
ಜಾಜ್‌ನ ಡಿಸೇಲ್ ಮಾದರಿ 6-ವೇಗದ ಓಡಿಸುಗನಿಡಿತದ ಸಾಗಣಿ ಅಳವಡಿಸಿಕೊಂಡಿದೆ. ಪೆಟ್ರೋಲ್‌ನಲ್ಲಿ ಎರಡು ಸಾಗಣಿಯ ಆಯ್ಕೆಗಳಿವೆ. 5-ವೇಗದ ಓಡಿಸುಗನಿಡಿತದ ಸಾಗಣಿ ಮತ್ತು ಸಿವಿಟಿ(CVT) ಚಳಕದ ಇನ್ನೊಂದು ಸಾಗಣಿಯೂ ಪೆಟ್ರೋಲ್ ಮಾದರಿಗಳಲ್ಲಿ ಇರಲಿದೆ.

ಮಯ್ಮಾಟ:
ಹೊಸ ಜಾಜ್‌ನ ಮಯ್ಮಾಟ ಸಾಕಶ್ಟು ಬದಲಾವಣೆಗೊಂಡಿದೆ. ಈ ಮುಂಚಿನ ಜಾಜ್ ಗಿಂತ ಮನಸೆಳೆಯುವ ಮಯ್ಮಾಟ ಹೊಂದಿದೆ. ಓಡಿಸುಗ ಕೂಡಲು ಸಾಕಶ್ಟು ಜಾಗವಿದೆ. ಹಿಂಬಾಗದಲ್ಲಿ ಕೂರುವವರಿಗೆ ತಕ್ಕಮಟ್ಟಿಗೆ ಜಾಗವಿದ್ದರೂ ಮೂರು ಜನ ಹಾಯಾಗಿ ಕಾಲು ಚಾಚಿ ಕುಳಿತುಕೊಳ್ಳಲು ಸ್ವಲ್ಪ ತೊಂದರೆಯಾಗಲಿದೆ. ಕಾರಿನ ತೋರುಮಣೆಗೆ ಸೋಕುತೆರೆ (touch screen) ಏರ‍್ಪಾಟು ಒದಗಿಸಲಾಗಿದೆ.

ಹೊಸ ಜಾಜ್ ಗುಲಾಬಿ ಬೆರಕೆಯ ಕೆಂಪು, ಕೇಸರಿ, ನೀಲಿ ಮತ್ತು ಬಿಳಿ ಬಣ್ಣಗಳ ಆಯ್ಕೆಗಳಲ್ಲಿ ಸಿಗಲಿದೆ. ಇನ್ನೂ ಹೆಚ್ಚಿನ ಬಣ್ಣಗಳಲ್ಲೂ ಬರಬಹುದು ಎನ್ನುವ ಸುದ್ದಿಯಿದೆ.

ಪಯ್ಪೋಟಿ:
ಹನ್ನೊಂದು ತಿಂಗಳು ಹಳೆಯದಾದ ಹ್ಯುಂಡಾಯ್ ಎಲಾಯ್ಟ್ ಆಯ್20 (i20 Elite) ಬಂಡಿಗೆ ಹೊಸ ಜಾಜ್ ಸೆಡ್ಡು ಹೊಡೆಯಲಿರುವುದು ಕಚಿತ ಎಂಬುದು ತಾನೋಡ ಉದ್ಯಮದಲ್ಲಿ ಕೇಳಿ ಬರುತ್ತಿದೆ. ಮಂದಿಯ ಅಗತ್ಯಕ್ಕೆ ತಕ್ಕಂತಿರುವ ಎಲಾಯ್ಟ್ ಆಯ್20 ಮಾರುಕಟ್ಟೆಯಲ್ಲಿ ಗೆಲುವಿನ ನಾಗಾಲೋಟ ಮುಂದುವರೆಸಿದೆ. ಇದಕ್ಕೆ ಕಡಿವಾಣ ಹಾಕುವ ಸಂಚಿನಲ್ಲಿದೆ ಹೊಂಡಾ ಜಾಜ್.

ಇವೆರಡು ಬಂಡಿಗಳನ್ನು ಹೋಲಿಕೆ ಮಾಡಿ ನೋಡಿದರೆ ಸಾಕಶ್ಟು ವಿಶಯಗಳಲ್ಲಿ ಬೇರ‍್ಮೆ ಕಂಡು ಬರುತ್ತದೆ. ಎಲಾಯ್ಟ್ ಆಯ್20 ಉದ್ದ, ಅಗಲ, ಗಾಲಿಗಳ ನಡುವಿನ ದೂರ ಮತ್ತು ನೆಲ ತೆರವು ಮುಂತಾದ ಆಯಗಳಲ್ಲಿ ಜಾಜ್ ಗಿಂತ ಸ್ವಲ್ಪ ಮುಂದಿದೆ. ಜಾಜ್ ಬಂಡಿಯು ಎತ್ತರ ಮತ್ತು ಸರಕು ಚಾಚಿಕೆಯಲ್ಲಿ ಎಲಾಯ್ಟ್ ಆಯ್20 ಯನ್ನು ಹಿಂದಿಕ್ಕುತ್ತದೆ.

Space main
ಕಸುವಿನಲ್ಲಿ ಕೊಂಚ ಮುಂದಿರುವ ಜಾಜ್ ಸೆಳೆಬಲದಲ್ಲಿ (torque) ಚೂರು ಹಿಂದೆ ಬಿದ್ದಿದೆ. ಇನ್ನು ಮಯ್ಲಿಯೋಟದಲ್ಲಿ ಜಾಜ್‌ಗೆ ಸರಿಸಾಟಿ ಯಾರಿಲ್ಲವೆಂದೇ ಹೇಳಬಹುದು. ಲೀಟರ್ ಡೀಸೆಲ್‍ಗೆ 22.54 ಕಿಮೀ ಸಾಗುವ ಹ್ಯುಂಡಾಯ್ ಆಯ್20 ಬಂಡಿಯು, 27.3 ಕಿಮೀ ಓಡುವ ಜಾಜ್‌ನ ಮುಂದೆ ಮಂಡಿಯೂರುತ್ತದೆ.

ಹೊಸ ಜಾಜ್ ಕಾರಿನ ವಿಶೇಶಗಳು ಮತ್ತು ಹ್ಯುಂಡಾಯ್ ಎಲಾಯ್ಟ್ ಆಯ್20 ಯೊಂದಿಗೆ ಹೋಲಿಕೆಯನ್ನು ಕೆಳಗಿನ ಪಟ್ಟಿಯಲ್ಲಿ ನೀಡಲಾಗಿದೆ.

Specifications table

ಬೆಲೆ:
ಜಾಜ್ ಕಾರಿನ ಬೆಲೆಯನ್ನು ಹೊಂಡಾ ಇನ್ನೂ ಹೊರಹಾಕಿಲ್ಲ. ಕೆಲವು ಮೂಲಗಳು ಹೇಳುವಂತೆ ಪೆಟ್ರೋಲ್ ಮಾದರಿ 5.5 ಯಿಂದ 7 ಲಕ್ಶ ರೂ.ಗಳಶ್ಟು ಮತ್ತು ಡಿಸೇಲ್ 6.5 ಯಿಂದ 8 ಲಕ್ಶಗಳಶ್ಟು ಇರಲಿದೆಯೆಂದು ತಿಳಿದು ಬಂದಿದೆ. ಹ್ಯುಂಡಾಯ್‌ಗೆ ಬಿರುಸಿನ ಪಯ್ಪೋಟಿ ನೀಡಲು ಹೊಂಡಾ ಕೂಟದವರು ಜಾಜ್ ಬಂಡಿಯ ಬೆಲೆಯನ್ನು ಎಲಾಯ್ಟ್ ಆಯ್20 ಗಿಂತ ಚೂರು ಕಡಿಮೆ ಮಾಡಬಹುದು ಎನ್ನಲಾಗುತ್ತಿದೆ. ಜಾಜ್ ಕೊಳ್ಳ ಬಯಸುವರು 51,000 ರೂಪಾಯಿಗಳನ್ನು ನೀಡಿ ಮುಂಗಡ ಕಾಯ್ದಿರಿಸಬಹುದು.

ಇಂದು ಮದ್ಯಾಹ್ನ 12ಕ್ಕೆ ಬಂಡಿಯ ಮಾರುಕಟ್ಟೆಗೆ ಬಿಡುಗಡೆಯಾಗುತ್ತಿರುವ ವರದಿ ಬಿತ್ತರವಾಗುತ್ತಿದ್ದು ನೇರವಾಗಿ ನೋಡವವರಿದ್ದರೆ www.hondacarindia.com/newjazz ತಾಣಕ್ಕೆ ಬೇಟಿ ನೀಡಬಹುದು.

(ಮಾಹಿತಿ ಮತ್ತು ತಿಟ್ಟ ಸೆಲೆಗಳು: www.hondacarindia.com, www.autocarindia.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: