ರಜೆಯ ಮಜಾ ಹೆಚ್ಚಿಸುವುದು ಹೇಗೆ?
– ರತೀಶ ರತ್ನಾಕರ.
ಎಡಬಿಡದ ಕೆಲಸದ ನಡುವೆ ಕೆಲವು ದಿನಗಳ ರಜೆಹಾಕಿ ದಣಿವಾರಿಸಿಕೊಳ್ಳಲು ಬೇರೊಂದು ಊರಿಗೆ ಹೋಗುವುದು, ಇಲ್ಲವೇ ಹಿತವೆನಿಸುವ ಕೆಲಸದಲ್ಲಿ ಕಾಲಕಳೆಯುವುದು ತುಂಬಾ ಸಾಮಾನ್ಯ. ನೆಮ್ಮದಿ, ನಲಿವು ಮತ್ತು ಹುರುಪನ್ನು (ನೆನಹು – ನೆಮ್ಮದಿ, ನಲಿವು, ಹುರುಪು) ಪಡೆಯುವುದು ರಜೆಯ ಗುರಿಯಾಗಿರುತ್ತದೆ. ಒಂದು ವೇಳೆ ರಜೆಯ ದಿನಗಳಲ್ಲಿಯೂ ಒತ್ತಡದ ಮನಸ್ಸು, ಕೆಲಸದ ಚಿಂತೆ, ಜೊತೆಕೆಲಸಗಾರರೊಂದಿಗೆ ಕೆಲಸದ ಕುರಿತು ಮಾತುಕತೆ, ಇಂತಹವುಗಳಿಂದ ಉಲ್ಲಾಸ ಸಿಗದೇ ಹೋದರೆ ನೆಮ್ಮದಿ, ನಲಿವು ಮತ್ತು ಹುರುಪು ಬಿಸಿಲುಗುದುರೆ ಆದಂತೆ. ರಜೆಯಲ್ಲಿ ಬಯಸಿದಂತಹ ದಣಿವಾರಿಕೆ ಸಿಗದೇ ಕೆಲಸಕ್ಕೆ ಹಿಂದಿರುಗಿದರೆ, ಕೆಲಸ ಮಾಡಲು ಯಾವುದೇ ಹುರುಪಿರುವುದಿಲ್ಲ. ಹಾಗಾದರೆ, ರಜೆಯ ‘ನೆನಹು’ ಗುರಿಯನ್ನು ಮುಟ್ಟುವುದು ಹೇಗೆ?
ರಜೆಯ ದಿನಗಳಿಗೆ ಅಣಿಯಾಗಿ:
ರಜೆಗೆ ಹೋಗುವ ಮುನ್ನ ಕಚೇರಿಯ ಕೆಲಸಗಳನ್ನೆಲ್ಲಾ ಮುಗಿಸಲು ಒದ್ದಾಡುವುದು ಒಳ್ಳೆಯದಲ್ಲ. ಕೆಲಸವನ್ನು ಹೇಗೆ ಮುಗಿಸುವುದು? ಮತ್ತೊಬ್ಬರಿಗೆ ವಹಿಸುವುದಾದರೆ ಯಾರಿಗೆ ವಹಿಸುವುದು? ಎಶ್ಟು ಕೆಲಸ ವಹಿಸಿವುದು? ಕೆಲಸವನ್ನು ಮುಂದೆಹಾಕುವುದೇ? ಇಲ್ಲವೇ ಕೈಬಿಟ್ಟುಬಿಡುವುದೇ? ಇಂತಹ ಹಲವಾರು ಯೋಚನೆಗಳಿಂದ ಒತ್ತಡ, ಆತಂಕ ಹಾಗು ಸಿಟ್ಟು ಮನೆಮಾಡುತ್ತವೆ. ಇವೆಲ್ಲವೂ ಸೇರಿ ಮೆದುಳಿನ ಮಾಡುಗತನವನ್ನು (productivity) ಕಡಿಮೆಗೊಳಿಸುತ್ತವೆ, ಮತ್ತು ಕೆಲಸವೂ ಮುಗಿಯುವುದಿಲ್ಲ. ಇದು ನಿಮ್ಮ ರಜೆಯ ದಿನಗಳನ್ನು ಚಿಂತೆಯಲ್ಲಿ ಕಳೆಯುವಂತೆ ಮಾಡುತ್ತದೆ. ಇದರಿಂದ ರಜೆಯ ಗುರಿಯಾದ ‘ನೆನಹು’ ಅನ್ನು ಮುಟ್ಟಲಾಗುವುದಿಲ್ಲ.
ಇದರ ಬದಲಾಗಿ, ರಜೆಗೆ ಹೋಗುವ ಮುನ್ನ ತುಂಬಾ ಅರಿದಾದ(important) ಕೆಲಸವನ್ನು ಮಾತ್ರ ಮುಗಿಸುವ ಗುರಿಯಿರಲಿ. ಗೊಂದಲಗೊಳಿಸುವ ಯೋಚನೆ ಹಾಗು ಕೆಲಸಗಳು ದೂರವಿದ್ದರೆ ಒಳ್ಳೆಯದು. ಎಂದಿನ ಕೆಲಸದ ನಡುವೆ ಚಿಕ್ಕ ಚಿಕ್ಕ ಬಿಡುವನ್ನು ಪಡೆಯಿರಿ. ಇದು ಮೆದುಳಿನ ಒತ್ತಡವನ್ನು ಹತೋಟಿಗೆ ತರುತ್ತದೆ. ಆಗ ರಜೆಗೆ ಹೋಗುವ ಮುನ್ನ ಬೇಕಾಗುವ ಒಳ್ಳೆಯ ಬಗೆಯ ಇರವು (State of mind) ಸಿಗುತ್ತದೆ.
ಹೊನ್ನೇಸರ:
ಒಮ್ಮೆ ಊಹಿಸಿಕೊಳ್ಳಿ; ಕತ್ತಲಿನಿಂದ ಬೆಳಕಾಗುವಾಗ ನೇಸರನ ಬೆಳಕು ಒಮ್ಮೆಲೆ ಉರಿಬಿಸಿಲಾಗಿದ್ದರೆ ನಮಗೆ ಕಣ್ಣು ಬಿಡಲು ಎಶ್ಟು ಕಶ್ಟವಾಗುತ್ತಿತ್ತು. ಕತ್ತಲಿಗೆ ಒಗ್ಗಿಹೋದ ಕಣ್ಣು ಹಾಗು ಮೈ, ಕೂಡಲೇ ಉರಿಬಿಸಿಲಿಗೆ ಒಗ್ಗಿಕೊಳ್ಳಲಾಗದೆ ಎಶ್ಟು ತೊಂದರೆಗಳಾಗುತ್ತಿತ್ತು. ಅದಕ್ಕಾಗಿಯೇ ಬೆಳಗಿನ ನೇಸರ ‘ಹೊನ್ನೇಸರ’. ಅದು ಉರಿಬಿಸಿಲನ್ನು ಒಮ್ಮೆಲೆ ಹರಡದೇ ಮೊದಲು ಹೊನ್ನಿನ ತಂಬೆಳಕು, ಬಳಿಕ ಬಿಸಿಲನ್ನು ಹರಡುತ್ತದೆ, ಅದಕ್ಕೆ ತಕ್ಕಂತೆ ನಮ್ಮ ಕಣ್ಣು ಹಾಗು ಮೈ ಮೆಲ್ಲಗೆ ಒಗ್ಗಿಕೊಳ್ಳುತ್ತವೆ.
ಇದೇ ಬಗೆಯಲ್ಲಿ, ಕೆಲಸದ ಚಟುವಟಿಕೆಯಲ್ಲಿರುವ ಮೈ ಹಾಗು ಮೆದುಳನ್ನು ಒಮ್ಮೆಲೆ ಬಿಡುವಿಗೆ ಬಿಟ್ಟರೆ ಏನಾದೀತು? ರಜೆಯ ಮೊದಲ ದಿನದಿಂದಲೇ ನಾವು ಪೂರ‍್ತಿಯಾಗಿ ಬಿಡುವನ್ನು ಬಯಸುತ್ತೇವೆ. ಆದರೆ ಈ ಬಗೆಯ ಬಿಡುವನ್ನು ಬಯಸುವುದು ತಪ್ಪು ಎಂದು ಅರಕೆಗಳು ತಿಳಿಸುತ್ತವೆ. ನಾವು ಎಂದಿನ ಕೆಲಸದಲ್ಲಿ ಇದ್ದಾಗ ಚಿಕ್ಕ ಪುಟ್ಟ ಕೆಲಸದೊತ್ತಡ ಇದ್ದೇ ಇರುತ್ತದೆ. ಅದರಲ್ಲೂ ರಜೆಯ ಹಿಂದಿನ ದಿನಗಳಲ್ಲಿ ಒತ್ತಡವು ಕೊಂಚ ಹೆಚ್ಚೇ ಇರುತ್ತದೆ. ಈ ಒತ್ತಡದ ಹೊತ್ತಿನಲ್ಲಿ, ಅಡ್ರಿನಲ್ ಸುರಿಗೆ (adrenal gland)ಯು ಕೊರ‍್ಟಿಸಾಲ್ (Cortisol) ಎಂಬ ಸೋರುಗೆ(hormone)ಯನ್ನು ಒಸರುತ್ತದೆ. ಒತ್ತಡವನ್ನು ಹತ್ತಿಕ್ಕುವುದಕ್ಕಾಗಿ ನಮ್ಮ ಮೈಯೊಳಗೆ ಈ ಸೋರುಗೆಯನ್ನು ಒಸರಲಾಗುತ್ತದೆ. ಆದರೆ ಈ ಕೊರ‍್ಟಿಸಾಲ್ ಸೋರುಗೆಯು ನಮ್ಮ ಕಾಪೇರ‍್ಪಾಟಿನ (immune system) ಕಸುವನ್ನು ಕುಗ್ಗಿಸಿರುತ್ತದೆ. ಹಾಗಾಗಿ, ಕೆಲಸದಿಂದ ಒಮ್ಮೆಲೆ ಬಿಡುವನ್ನು ಪಡೆಯುವುದರಿಂದ ಸಣ್ಣಪುಟ್ಟ ಬೇನೆಗೆ (illness) ಬೇಗನೆ ತುತ್ತಾಗುತ್ತೇವೆ. ಇದು ರಜೆಯನ್ನು ಹಾಳುಗೆಡುವುತ್ತದೆ.
ಕೆಲಸದ ದಿನದಿಂದ ರಜೆಯ ಮೊದಲ ಕೆಲವು ದಿನಗಳವರೆಗೆ ಮೆದುಳು ಮತ್ತು ಮೈ ಚಟುವಟಿಕೆ ಒಂದೇ ಹಂತದಲ್ಲಿರಲಿ. ಕೆಲಸದ ದಿನದಿಂದ ರಜೆಯ ದಿನದತ್ತ ಚಟುವಟಿಕೆಗಳು ಮೆಲ್ಲಗೆ ಕಡಿಮೆಯಾಗಲಿ, ಬಳಿಕ ಪೂರ‍್ತಿಯಾಗಿ ಬಿಡುವಿನ ಹಂತಕ್ಕೆ ಹೋಗಿ. ಹೊನ್ನೇಸರನ ನೆನಪಿರಲಿ.
ರಜಾ-ಮಜಾ:
ಒಮ್ಮೆ ರಜೆಯ ಬಿಡುವಿನ ಹಂತಕ್ಕೆ ಮೆದುಳು ಮತ್ತು ಮೈ ಒಗ್ಗಿಕೊಂಡಾಗ ‘ನೆನಹು’ ಗುರಿಯನ್ನು ಮುಟ್ಟಲು ಮರೆಯದಿರಿ. ಅದಕ್ಕಾಗಿ ಕೆಲವು ಸಲಹೆಗಳು ಕೆಳಗಿವೆ.
– ಕೊಂಡಿ ಕಳಚಿಕೊಳ್ಳಿ (Disconnect): ಕಚೇರಿಯ ಮಿಂಚೆ, ಕರೆಗಳು ಮತ್ತು ಚುಟುಕೋಲೆಗಳನ್ನು ನೋಡುವುದು ನಿಲ್ಲಿಸಿಬಿಡಿ. ಕಚೇರಿಯ ನಂಟನ್ನು ಸದ್ಯಕ್ಕೆ ಕಳಚಿಕೊಳ್ಳಿ. ಆದರೆ ತುರ‍್ತುಕರೆಗಳಿಗೆ ಓಗೊಡುವುದನ್ನು ಮರೆಯದಿರಿ.
– ಒಂದೊಂದು ಗಳಿಗೆಯೂ ನಿಮ್ಮದಾಗಿರಲಿ: ನಿಮ್ಮ ರಜೆಯಲ್ಲಿ ನಿಮ್ಮದೇ ಮೇಲುಗೈ ಇರಲಿ. ಮೈ-ಕೈ ಮೇಲೆ ನಿಗಾ ಇರಲಿ, ಆಗಾಗ ಉದ್ದನೆಯ ಉಸಿರಾಟವನ್ನು 10 ಸೆಕೆಂಡುಗಳ ಕಾಲ ನಡೆಸಿ, ಮೈ-ಕೈ-ಕಾಲುಗಳನ್ನು ಹರವಿ (Stretch) ಸಡಿಲಗೊಳಿಸಿಕೊಳ್ಳಿ. ಮನಸ್ಸು ತಿಳಿಯಾಗಿರಲಿ. ಬೆಂಬಲಿಸುವಂತಹ (positive) ಯೋಚನೆಗಳು ಹೊರಹೊಮ್ಮಲಿ. ನೀವಿರುವ ಒಂದೊಂದು ಗಳಿಗೆಯನ್ನು ಮೆಚ್ಚಿರಿ, ಆ ಗಳಿಗೆಯು ನಿಮ್ಮದಾಗಿರುವುದಕ್ಕೆ ನನ್ನಿಯಿರಲಿ (gratitude).
– ಮಯ್ಯೊಳಿತಿನ ಮೇಲೆ ಗಮನವಿರಲಿ: ಹೆಚ್ಚಿನ ಆರಯ್ಕೆ(nutrition) ಇರುವ ತಿನಿಸನ್ನು ತಿನ್ನಿ. ಹೆಚ್ಚು ಹೆಚ್ಚು ನೀರನ್ನು ಕುಡಿಯಿರಿ. ಚೆನ್ನಾಗಿ ಮೈಪಳಗಿಸಿ (exercise) ಮತ್ತು ಒಳ್ಳೆಯ ನಿದ್ದೆ ಮಾಡಿ. ನಿಮ್ಮ ಆರಯ್ಕೆಯನ್ನು ನೀವು ಮಾಡಿಕೊಳ್ಳಿ.
– ಸಕ್ಕತ್ ಮಜಾ ಮಾಡಿ: ಒಂದೊಂದು ದಿನವು ನಗು ಹಾಗು ನಲಿವು ಇರುವಂತೆ ನೋಡಿಕೊಳ್ಳಿ. ನಾನು ನಲಿವಿನಿಂದಿರಲು ಏನುಮಾಡಬೇಕು? ಈ ರಜೆಯು ನೆನಪಿನಲ್ಲಿರುವಂತೆ ಮಾಡುವುದು ಹೇಗೆ? ಇಂತಹ ಕೇಳ್ವಿಗಳನ್ನು ಕೇಳಿಕೊಳ್ಳಿ. ನಲಿವಿನ ಮತ್ತು ನೆನಪಿನಲ್ಲಿರುವಂತಹ ರಜೆಯನ್ನು ಕಳೆಯಿರಿ.
ರಜೆಗಿಂತ ಮುಂಚೆ ಹಾಗು ರಜೆಯ ದಿನಗಳಲ್ಲಿನ ಬಗೆಯ ಇರವು(state of mind) ಚೆನ್ನಾಗಿದ್ದರೆ ರಜೆಯಿಂದ ನೆಮ್ಮದಿ, ನಲಿವು ಮತ್ತು ಹುರುಪನ್ನು ಪಡೆಯಲು ಸಾದ್ಯ. ನಿಮ್ಮ ರಜೆಯಿಂದ ಈ ‘ನೆನಹು’ ಸಿಕ್ಕು ದಣಿವಾರುವಂತೆ ನೋಡಿಕೊಳ್ಳಿ. ರಜೆಯನ್ನು ಕಳೆದು ಕೆಲಸಕ್ಕೆ ಹೊರಟಾಗ ಹೊಸ ಹುರುಪಿರಲಿ. ಮಾಡುಗತನವು ಮತ್ತಶ್ಟು ಹೆಚ್ಚುವಂತಿರಲಿ.
(ಮಾಹಿತಿ ಸೆಲೆ: hbr.org)
(ಚಿತ್ರ ಸೆಲೆ: ವೀಕಿಮೀಡಿಯ)
1 Response
[…] ಕೆಲಸ, ವಾರದ ಕೊನೆಯಲ್ಲಿ ಬಿಡುವು ಹಾಗು ಆಗಾಗ ರಜೆಯ ತಿರುಗಾಟಗಳು ಕೆಲಸಗಾರರ ಮಾಡುಗತನವನ್ನು (productivity) […]