ಕಾಪಿತೋಟದ ಕರಿಬೋರ

– ಸಿ.ಪಿ.ನಾಗರಾಜ.

old-man
ಕೊಡಗಿನ ಕಾಪಿತೋಟವೊಂದರಲ್ಲಿ ಹತ್ತಾರು ವರುಶಗಳ ಕಾಲ ಕೂಲಿಯಾಳಾಗಿ ದುಡಿದು ಬರಿಗಯ್ಯಲ್ಲಿ ಊರಿಗೆ ಹಿಂತಿರುಗಿದ್ದರೂ, ಕರಿಬೋರ ಅವರ ಹೆಸರಿನ ಜತೆಯಲ್ಲಿ ಕಾಪಿತೋಟ ಸೇರಿಕೊಂಡಿತ್ತು . ಚಿಕ್ಕಂದಿನಲ್ಲಿ ನಾನು ಅವರನ್ನು ಗಮನಿಸುವ ಹೊತ್ತಿಗೆ, ಅವರು ಮುಪ್ಪಿನಿಂದ ಹಣ್ಣಾಗಿದ್ದರು. ವಾರದಲ್ಲಿ ಒಂದೆರಡು ದಿನ ದಲಿತರ ಕೇರಿಯಿಂದ ನಮ್ಮ ತೋಟದ ಮನೆಗೆ ತಮ್ಮ ಪುಟ್ಟ ಮೊಮ್ಮಗನೊಡನೆ ದೊಣ್ಣೆಯೂರಿಕೊಂಡು ಬಂದು, ನಮ್ಮ ತಾಯಿಯವರಿಂದ ಒಂದು ಹೊತ್ತಿನ ಅನ್ನವನ್ನು ಪಡೆದುಕೊಂಡು ಹೋಗುತ್ತಿದ್ದರು.

ಅನ್ನವನ್ನು ಪಡೆಯುವುದಕ್ಕೆ ಮೊದಲು, ನಮ್ಮ ದನಗಳ ಗೊಂತಿನಲ್ಲಿ ಬಿದ್ದಿರುವ ಸಗಣಿಯನ್ನು ಕುಕ್ಕುರುಗಾಲಿನಲ್ಲಿ ಕುಳಿತುಕೊಂಡು, ತಮ್ಮ ನಡುಗುವ ಕಯ್ಗಳಿಂದ ಗಂಜಲವನ್ನು ಬಳಿದು ತೊಪ್ಪೆಯನ್ನು ತಳ್ಳಿ, ಕಡ್ಡಿಬರಲಿನಿಂದ ಗುಡಿಸಿ ಕೊಟ್ಟಿಗೆಯ ಕಸತೆಗೆಯುತ್ತಿದ್ದರು. ಒಂದೊಂದು ದಿನ ತೋಟದ ತೆವರಿಯಲ್ಲಿ ಬೆಳೆದು ನಿಂತಿದ್ದ ಹುಲ್ಲನ್ನು ಕುಯ್ದು ಸಣ್ಣಕರುಗಳ ಮುಂದೆ ಹಾಕುತ್ತಿದ್ದರು. ನಮ್ಮ ತಾಯಿ ಎಶ್ಟೇ ಬೇಡವೆಂದು ಹೇಳಿದರೂ ಕೇಳದೆ, ಅವರು ಏನಾದರೊಂದು ಬಗೆಯ ಕೆಲಸವನ್ನು ಮಾಡಿದ ನಂತರವೇ ಅನ್ನವನ್ನು ಈಸಿಕೊಳ್ಳುತ್ತಿದ್ದರು.

“ಈ ಕರಿಬೋರನಂತಹ ಒಳ್ಳೆಯ ಮನುಶ್ಯರು ಬಹಳ ಅಪರೂಪ. ಈತ ಎಂತಹ ನಿಯ್ಯತ್ತಿನ ವ್ಯಕ್ತಿ ಅಂದ್ರೆ, ಇವನು ಗಟ್ಟಿಮುಟ್ಟಾಗಿ ದುಡಿಯುವ ಆಳಾಗಿದ್ದಾಗ, ಕಣದಲ್ಲಿ ಒಕ್ಕಣೆ ಮಾಡಿದ ರಾಶಿಯನ್ನು ಕಾಯುವುದಕ್ಕೆ ನಮ್ಮ ಗವುಡರಾಗಲಿ ಮನೆಮಕ್ಕಳಾಗಲಿ ರಾತ್ರಿ ಹೊತ್ತು ಕಣದಲ್ಲಿ ಮಲಗುತ್ತಿರಲಿಲ್ಲ . ಕರಿಬೋರ ಕಣದ ತಾವು ಅವ್ನೆ ಅಂದ್ರೆ, ಒಂದು ಕಾಳು-ಕಡ್ಡಿಯೂ ಅಲ್ಲಿಂದ ಕಳುವಾಗುವುದಿಲ್ಲವೆಂಬ ನಂಬಿಕೆ ನಮ್ಮೆಲ್ಲರಲ್ಲಿತ್ತು” ಎಂದು ಅವರ ಒಳ್ಳೆಯ ನಡೆನುಡಿಗಳನ್ನು ಚಿಕ್ಕಮಕ್ಕಳಾದ ನಮ್ಮೆಲ್ಲರ ಮುಂದೆ ನಮ್ಮ ತಾಯಿ ಹಾಡಿಹೊಗಳುತ್ತಿದ್ದರು.

ಹಣಕಾಸಿನ ವ್ಯವಹಾರದಲ್ಲಿ ಅವರ ಪ್ರಾಮಾಣಿಕತನವನ್ನು ಎತ್ತಿಹಿಡಿಯುವ ಮತ್ತೊಂದು ಸಂಗತಿಯು ಈ ರೀತಿಯಿತ್ತು. ಒಂದು ದಿನ ನಮ್ಮ ತಾಯಿ ಎರಡು ಕುಡ್ಲು ಮತ್ತು ಎರಡು ರೂಪಾಯಿಯನ್ನು ಕರಿಬೋರ ಅವರಿಗೆ ಕೊಟ್ಟು, ಆಚಾರಿ ಕಯ್ಯಲ್ಲಿ ಕುಡ್ಲು ತಟ್ಟಿಸಿಕೊಂಡು ಬರಲು ಕಳುಹಿಸಿದರು. ತುಸು ಸಮಯದ ನಂತರ ಹಿಂತಿರುಗಿ ಬಂದು, ತಟ್ಟಿಸಿಕೊಂಡು ತಂದ ಕುಡ್ಲುಗಳನ್ನು ನಮ್ಮ ತಾಯಿಯ ಕಯ್ಗೆ ನೀಡಿದ ನಂತರ –

” ತಕೊಳ್ರವ್ವ…ನಿಮ್ಮ ಎರಡು ರೂಪಾಯ್ನ ” ಎಂದರು.

” ಯಾಕ್ ಕರಿಬೋರ…ಆಚಾರಿಗೆ ದುಡ್ಡು ಕೊಡಲಿಲ್ವೆ? ”

” ನಿಮ್ಮ ಮನೆ ಕುಡ್ಲು ಅಂತ ಗೊತ್ತಾದ್ಮೇಲೆ…ಗವುಡರು ಮನೇಲೆ ವರ‍್ಸಕ್ಕೊಂದು ದಪ ಹಡದೆ ಈಸ್ಕೊತಿನಿ…ಅದಕ್ಕೆ ದುಡ್ಡು ಬ್ಯಾಡ ಅಂದ ಕಣ್ರವ್ವ” ಎಂದು ಹೇಳಿ, ಹಣವನ್ನು ಹಿಂತಿರುಗಿಸುತ್ತಿದ್ದಾಗ, ಅವರ ಕಯ್ಯಲ್ಲಿದ್ದ ಮತ್ತೊಂದು ಕುಡ್ಲನ್ನು ಕಂಡು –

” ಇದ್ಯಾವುದು…ಇನ್ನೊಂದು ಕುಡ್ಲು ?”

” ನಂದೆ ಕಣ್ರವ್ವ…ಯಾತಕ್ಕಾದ್ರೂ ಬೇಕಾಯ್ತದೆ ಅಂತ…ಇದನ್ನೂ ಒಸಿ ತಟ್ಟಿಸಿಕೊಂಡು ಬಂದೆ. ಇದಕ್ಕೆ ಬ್ಯಾರೆಯಾಗಿ ನಂದೊಂದು ರೂಪಾಯಿ ಕೊಟ್ಟೆ ಕಣ್ರವ್ವ” ಎಂದರು.

“ಗವುಡರ ಮನೇದೆ ಅಂತ ಹೇಳಿ ಅದನ್ನೂ ತಟ್ಟಿಸಿಕೊಂಡಿದ್ರೆ ಆಯ್ತಿರಲಿಲ್ವೆ…ಅದಕ್ಕೆ ಯಾಕೆ ದುಡ್ಡು ಕೊಟ್ಟೆ ?”

“ಯಾಕ್ರವ್ವ ಹಂಗೆ ಸುಳ್ಳು ಹೇಳ್ಬೇಕು ?…ಇಕ್ಕೊಂಡು ಉಣ್ಣು ತಾವು ಕದ್ಕೊಂಡು ಉಣ್ಣಬೇಕೆ” ಎಂದು ನುಡಿದ ಕರಿಬೋರ ಅವರ ಪ್ರಾಮಾಣಿಕತನದ ನಡೆನುಡಿಯನ್ನು ಕಂಡು, ನಮ್ಮ ತಾಯಿ ಅಚ್ಚರಿ ಹಾಗೂ ಗವುರವದ ಒಳಮಿಡಿತದಿಂದ ಮೂಕರಾಗಿದ್ದರು.

ಬೇಸಿಗೆಯ ರಜೆಯಲ್ಲಿ ನಾನು ಊರಿಗೆ ಹೋದಾಗಲೆಲ್ಲಾ ಕರಿಬೋರ ಅವರನ್ನು ನೋಡುತ್ತಿದ್ದೆ. ಇಂದಿಗೆ ಸುಮಾರು ಅಯ್ವತ್ತು ವರುಶಗಳ ಹಿಂದೆ ಅವರು ನನ್ನೊಡನೆ ಆಡಿದ್ದ ಒಂದು ಮಾತು…ಇಂದು ಅವರು ಕಣ್ಮರೆಯಾಗಿದ್ದರೂ, ನನ್ನ ಮನದಲ್ಲಿ ಅಚ್ಚಳಿಯದೆ ಉಳಿದಿದೆ . ಒಂದು ದಿನ ಅವರು ನಮ್ಮ ಮನೆಗೆ ಬಂದು, ಎಂದಿನಂತೆ ದನದ ಕೊಟ್ಟಿಗೆಯ ಒಳಕ್ಕೆ ಹೋಗಿ ಸಗಣಿಯನ್ನು ಬಾಚುತ್ತಿದ್ದಾಗ –

“ಇದೇನು…ಇಂತಹ ಇಳಿವಯಸ್ಸಿನಲ್ಲೂ ನೀವು ಹಿಂಗೆ ಕೆಲಸ ಮಾಡ್ಬೇಕೆ ?…ಸುಮ್ಮನೆ ಊಟ ತೆಗೊಂಡು ಹೋದ್ರೆ ಆಗೂದಿಲ್ವೆ ?” ಎಂದು ಕೇಳಿದೆ .

“ಅಪ್ಪಾಜಿ”- ಅವರು ನನ್ನನ್ನು ಒಲವಿನಿಂದ ಕರೆಯುತ್ತಿದ್ದ ಪದ .

“ಅಪ್ಪಾಜಿ…ನಾನು ನಿಮ್ಮಟ್ಟಿ ತಕೆ ಬಂದಾಗಲೆಲ್ಲಾ ಅವ್ವಾವ್ರು ಒಂದು ಮುಂದೆ ಹಿಟ್ಟೋ…ಒಂದು ತುತ್ತು ಅನ್ನನೋ ಕೊಡ್ತರೆ ಸರಿ. ಆದ್ರೆ ನನ್ನ ಕಯ್ಯಲ್ಲಾದ ಒಂದು ಚೂರು ಗೇಮೆ ಮಾಡ್ದೆ…ಅದನ್ನ ಉಣ್ಣುಕೋದ್ರೆ…ಅದು ನನ್ ಗಂಟಲಲ್ಲಿ ಇಳಿಯೂದಿಲ್ಲ ಕಣ್ರಪ್ಪ” ಎಂದು ಹೇಳಿ, ಮತ್ತೆ ಕೊಟ್ಟಿಗೆಯಲ್ಲಿನ ಗಂಜಲವನ್ನು ಬಳಿಯತೊಡಗಿದರು.

ಕನ್ನಡದ ಪದ್ಯ ಮತ್ತು ಗದ್ಯ ಬರಹಗಳ ಮೂಲಕ ಕನ್ನಡದ ಓದುಗರಲ್ಲಿ ಒಳ್ಳೆಯ ಹೆಸರನ್ನು ಪಡೆದಿದ್ದ ಡಿ.ವಿ.ಗುಂಡಪ್ಪನವರು ತಮ್ಮ “ಮಂಕುತಿಮ್ಮನ ಕಗ್ಗ ” ಹೊತ್ತಿಗೆಯಲ್ಲಿ “ಅನ್ನವನು ಉಣುವಂದು ನೀನ್ ಕೇಳ್…ಅದನು ಬೇಯಿಸಿದ ನೀರು…ನಿನ್ನ ಬೆವರಿನ ಹನಿಯೋ…ಅನ್ಯರ ಕಣ್ಣೀರೋ” ಎಂದು ಹೇಳಿರುವ ನುಡಿಗಳು…ಕಾಪಿತೋಟದ ಕರಿಬೋರ ಅವರ ಬದುಕಿನ ನಡೆಯಲ್ಲಿ ಒಡಮೂಡಿದ್ದವು.

ಚಿಕ್ಕಂದಿನಲ್ಲಿ ನಾನು ಕರಿಬೋರ ಅವರ ಬದುಕಿನ ರೀತಿನೀತಿಗಳನ್ನು ಕುತೂಹಲದಿಂದ ಗಮನಿಸುತ್ತಿದ್ದೆನೆ ಹೊರತು ಅವರ ಕಡು ಬಡತನದ ಬಾಳಿಗೆ ಕಾರಣಗಳು ಏನೆಂಬುದನ್ನು ಕುರಿತು ಚಿಂತಿಸಿರಲಿಲ್ಲ . ಈಗ ಒಮ್ಮೆ ಅವರ ಬದುಕಿನ ಹಾದಿಯತ್ತ ತಿರುಗಿ ನೋಡಿದಾಗ –

ಮೇಲು-ಕೀಳಿನ ಜಾತಿ ಮೆಟ್ಟಿಲುಗಳಿಂದ ಕೂಡಿರುವ ನಮ್ಮ ಸಾಮಾಜಿಕ ವ್ಯವಸ್ತೆ, ಬೂಮಿಯ ಒಡೆತನದ ಜಮೀನ್ದಾರಿ ಪದ್ದತಿ ಮತ್ತು ಬಂಡವಾಳಶಾಹಿಯ ಹಣಕಾಸಿನ ವಹಿವಾಟುಗಳ ನಡುವೆ ಕಾಪಿತೋಟದ ಕರಿಬೋರ ಅವರಂತೆ ಮಯ್ ಬೆವರಿನ ಹನಿಗಳನ್ನು ಚೆಲ್ಲುತ್ತ ದುಡಿಯುವ ಕೋಟಿಗಟ್ಟಲೆ ಶ್ರಮಜೀವಿಗಳು…ತಮ್ಮ ಪ್ರಾಮಾಣಿಕವಾದ ದುಡಿಮೆಗೆ ತಕ್ಕ ಕೂಲಿ ಇಲ್ಲವೇ ವೇತನವನ್ನು ಪಡೆಯಲಾಗದೆ , ತಮ್ಮ ಜೀವನದ ಉದ್ದಕ್ಕೂ ಹುಟ್ಟಿನಿಂದ ಸಾವಿನ ತನಕ ಬಡತನ ಮತ್ತು ಅಪಮಾನಗಳ ಬೇಗೆಯಲ್ಲೇ ಬೆಂದು ನರಳುತ್ತಿರುವ ಕಟು ಸತ್ಯದ ಅರಿವಾಗುತ್ತದೆ .

(ಚಿತ್ರ ಸೆಲೆ: hrdesignstudio.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications