ಸವಲತ್ತುಗಳನ್ನು ಕೊಡುತ್ತಾ ‘ಹರೇಡಿ’ಗಳನ್ನು ಸಾಕಲಾಗದು – ಇಸ್ರೇಲ್

– ಅನ್ನದಾನೇಶ ಶಿ. ಸಂಕದಾಳ.

haredis

ಟೋರಾಹ್ (torah) – ಯಹೂದಿ ದರ‍್ಮದ ನಡವಳಿಯನ್ನು (tradition) ತಿಳಿಸುವ ತಿರುಳು. ದೇವರ ಪಾತ್ರ, ಯಹೂದಿಗಳ ಹುಟ್ಟಿನ ಹಿನ್ನೆಲೆ, ಸರಿ -ತಪ್ಪುಗಳ ಒರೆ ಹಚ್ಚುವಿಕೆ, ದೇವರ ಜೊತೆಗಿರುವ ಒಡಂಬಡಿಕೆ (covenant), ಬಾಳ್ವೆಯಲ್ಲಿ ಸಂಬಾಳಿಸಬೇಕಾದ ದಾರ‍್ಮಿಕ ಮತ್ತು ಸರಿ-ತಪ್ಪಿನ ಹೊಣೆಗಾರಿಕೆಗಳು. ಒಳ್ಳೆಯ ನಡತೆಯ ಕಟ್ಟಲೆಗಳು – ಇವೆಲ್ಲವನ್ನೂ ತಿಳಿಸುವುದೇ ಟೋರಾಹ್. ಇದನ್ನೆಲ್ಲಾ ಬರವಣಿಗೆಗೆ ಇಳಿಸಿ ತಿಳಿಯ ಪಡಿಸುವುದೇ ಟಾಲ್ಮಡ್ (talmud). ಯಹೂದಿ ದರ‍್ಮದ ಟೋರಾಹ್ ಮತ್ತು ಟಾಲ್ಮಡ್ ಗಳನ್ನು ಕಲಿಸುವ ಕಲಿಕೆಯ ಕೂಟಗಳು (institutions) – ಯೆಶಿವಾಗಳು (yeshiva). ಟಾಲ್ಮಡ್ ಗಳ ಬಗ್ಗೆ ಮೇಲ್ಮಟ್ಟದ ತಿಳುವಳಿಕೆಯನ್ನು ನೀಡುವ ಕೂಟಗಳು – ಹೆಬ್ರೋನ್ ಯೆಶಿವಾಗಳು (hebron yeshiva). ಇಸ್ರೇಲ್ ನಾಡಿನಲ್ಲಿ ಯಹೂದಿ ದರ‍್ಮದ ಬಗೆಗಿನ ಹೆಚ್ಚಿನ ಕಲಿಯುವಿಕೆಗೆ ಮಾಡಿಕೊಂಡಿರುವ ಏರ‍್ಪಾಡು ಇದಾಗಿದೆ.

ದಿನಕ್ಕೆ 15-18 ತಾಸುಗಳ ಕಾಲ ಟಾಲ್ಮಡ್ ಗಳ ಬಗ್ಗೆ ಗಮನವಹಿಸುವ ಯೆಶಿವಾಗಳಲ್ಲಿ ಕಲಿಯುವವರು, ಮದುವೆ ಆದ ಮೇಲೆ ‘ಕೊಲ್ಲೇಲ್’ (kollel) ಎಂಬ ಕಲಿಕೆಯ ಬೀಡುಗಳಿಗೆ ಕಾಲಿಡುತ್ತಾರೆ. ಕೊಲ್ಲೇಲ್ ಗಳಲ್ಲಿ ಕಡಿಮೆ ಸಂಬಳ (stipend) ಸಿಗುತ್ತಿದ್ದರೂ, ಸರಕಾರದ ಸವಲತ್ತುಗಳೂ ಸಿಗುವದರಿಂದ ಬಾಳ್ವೆ ನಡೆಸುವಿಕೆಗೆ ಇವರಿಗೆ ಅಶ್ಟಾಗಿ ತೊಂದರೆಯಾಗಿಲ್ಲ. ದೇವರ ಇರುವನ್ನು ಜನರಿಗೆ ಹೆಚ್ಚು ತಿಳಿಸುತ್ತಾ ಯಹೂದಿ ದರ‍್ಮದ ನಂಬಿಕೆಗಳನ್ನು ಇಸ್ರೇಲ್ ನಲ್ಲಿ ನೆಲೆಗೊಳಿಸುವ ಯೆಶಿವಾದ ವಿದ್ಯಾರ‍್ತಿಗಳಿಗೆ, ದಾರ‍್ಮಿಕ ಕಟ್ಟಲೆಗಳನ್ನು ನಂಬುವ ಮತ್ತು ಪಾಲಿಸುವ ಇಸ್ರೇಲಿಗಳಿಂದ ಹೆಚ್ಚಿನ ಮರ‍್ಯಾದೆ ಸಿಗುತ್ತದೆ. ಹೊಸತನ್ನು ಒಪ್ಪದ, ಹಳೆಯ ಸಂಪ್ರದಾಯಗಳನ್ನೇ ಮುಂದುವರೆಸಿಕೊಂಡು ಬರುವ ಇವರಿಗೆ ‘ಹರೇಡಿಗಳು’ (haredi) ಅಂತಲೂ ಕರೆಯುತ್ತಾರೆ.

ಹೆಚ್ಚಿನ ಸಮಯ ದರ‍್ಮವನ್ನು ಅರಿಯುವ ಮತ್ತು ಇತರರಿಗೆ ತಿಳಿಸುವ ಕೆಲಸ ಮಾಡುವ ಹರೇಡಿಗಳಿಗೆ ಹೆಚ್ಚಿನ ಸರಕಾರಿ ಸವಲತ್ತು ಸಿಗುವುದಕ್ಕೆ ಹಿನ್ನೆಲೆಯೊಂದಿದೆ. 1948 ರಲ್ಲಿ ತನ್ನನ್ನು ದೇಶವೆಂದು ಇಸ್ರೇಲ್ ಕರೆದುಕೊಂಡ ಮೇಲೆ, ಯುರೋಪಿಯನ್ನರ ಕೈಯಲ್ಲಿ ನಲುಗಿದ್ದ ಯೆಶಿವಾಗಳನ್ನು ಮತ್ತೆ ಕಟ್ಟಲು, ಇಸ್ರೇಲ್ ನ ಮೊದಲ ಪ್ರದಾನ ಮಂತ್ರಿಯನ್ನು ರಾಬಿಗಳು [ rabbis – ಯಹೂದಿ ದರ‍್ಮದ ತಿಳಿವಿಗರು (scholars) ] ಮನವೊಲಿಸುತ್ತಾರೆ. ‘ಇಸ್ರೇಲಿನ ನಾಡಿನವರೆಲ್ಲರೂ 18 ವಯಸ್ಸು ದಾಟಿದ ಮೇಲೆ ಕಡ್ಡಾಯವಾಗಿ ನಾಡಿನ ಮಿಲಿಟರಿಯಲ್ಲಿ ಸೇವೆ ಸಲ್ಲಿಸಬೇಕು’ ಎಂಬ ಕಟ್ಟಳೆಯಿಂದ, ಮೊದಲಿಗೆ 400 ಯೆಶಿವಾ ವಿದ್ಯಾರ‍್ತಿಗಳಿಗೆ ವಿನಾಯಿತಿ ಕೊಡಿಸುವಲ್ಲಿ ರಾಬಿಗಳು ಯಶಸ್ವಿಯಾಗುತ್ತಾರೆ. ಹಾಗೇ, ತಮ್ಮ ಎಣಿಕೆ ಹೆಚ್ಚಿಸಿಕೊಳ್ಳುತ್ತಾ ‘ರಾಜಕೀಯ ಪಂಗಡ’ಗಳನ್ನು ಕಟ್ಟಿಕೊಳ್ಳುವ ಮತ್ತು ಆಳುವ ಸರಕಾರದ ಮೇಲೆ ಪ್ರಬಾವ ಬೀರುವ ಮಟ್ಟಕ್ಕೆ ಹರೇಡಿಗಳು ಬೆಳೆಯುತ್ತಾರೆ. ಕಡ್ಡಾಯ ಮಿಲಿಟರಿ ಸೇವೆಯಿಂದ ವಿನಾಯಿತಿಯನ್ನು ಎಲ್ಲ ಹರೇಡಿಗಳಿಗೆ ಕೊಡಿಸಿದ್ದಾರೆ. ಸರಕಾರಗಳು ಬದಲಾದರೂ ಸಂಪ್ರದಾಯವಾದಿಗಳಿಗೆ ಕೊಡುತ್ತಿರುವ ಸವಲತ್ತುಗಳಿಗೆ ಕುತ್ತು ಬರದಂತೆ ಹರೇಡಿಗಳ ಪಂಗಡಗಳು ನೋಡಿಕೊಂಡಿವೆ. ದಾರ‍್ಮಿಕ ಶಾಲೆಗಳಲ್ಲಿ ಗಣಿತ ಮತ್ತು ಅರಿಮೆಯನ್ನು ಕಲಿಸುವುದಕ್ಕೂ ‘ದಾರ‍್ಮಿಕ ರಾಜಕಾರಣಿಗಳು’ ತಡೆ ಹಾಕಿದ್ದಾರೆ.

haredis1ದಾರ‍್ಮಿಕ ರಾಜಕಾರಣದ ಬಿಸಿ ಹರೇಡಿಗಳಿಗೆ ಮೆಲ್ಲನೆ ತಟ್ಟುತ್ತಿದೆ. ಹರೇಡಿಗಳಿಗೆ ಹೆಚ್ಚಿನ ಸವಲತ್ತುಗಳು ಸಿಗುತ್ತಿರುವದರಿಂದ ಮತ್ತು ದರ‍್ಮದ ಬಗ್ಗೆ ತಿಳಿಯುವುದಕ್ಕೆ ಹೆಚ್ಚು ಒತ್ತು ಕೊಡುತ್ತಿರುವುದರಿಂದ, ‘ಅವರಿಗೆ ಅರಿಮೆ ಅತವಾ ಬೇರೆ ವಿಶಯಗಳ ಬಗ್ಗೆ ಅರಿವಿರುವುದಿಲ್ಲ’ ಎಂಬ ಅನಿಸಿಕೆ ಕೆಲಸ ಕೊಡುವವರಲ್ಲಿ ಮನೆ ಮಾಡಿದೆ. ಆದರಿಂದ, ಡಿಗ್ರಿಗಳನ್ನು ಪಡೆದಿದ್ದರೂ ಯೆಶಿವಾದಲ್ಲಿ ಓದಿದ್ದಾರೆಂದು ಗೊತ್ತಾಗುತ್ತಲೇ ಹರೇಡಿಗಳಿಗೆ ಕೆಲಸವನ್ನು ಕೊಡದೇ ತಡೆಹಿಡಿಯಲಾಗುತ್ತದೆ. ಕಟ್ಟಾ ಸಂಪ್ರದಾಯವಾದಿಗಳು ಮಿಲಿಟರಿಯಲ್ಲೂ ಕೆಲಸ ಮಾಡದೇ ಇರುವದರಿಂದ ಉಳಿದ ಮಂದಿಯ ಜೊತೆ ನಂಟು ಹೊಂದಿಲ್ಲದವರಾಗಿದ್ದಾರೆ. ಈ ಎಲ್ಲಾ ಕಾರಣಗಳಿಂದ ಹರೇಡಿಗಳಲ್ಲಿ ಕೆಲಸವಿಲ್ಲದಿಕೆ ಹೆಚ್ಚೇ ಇದೆ.

ಇಸ್ರೇಲಿನಲ್ಲಿ ಒಟ್ಟುಮಂದಿಯ ಕೆಲಸದ ಮಟ್ಟ (employment rate) ಶೇ 60.4 ಇದ್ದರೆ, ಹರೇಡಿಯವರಲ್ಲಿ ಶೇ 45.7 ಇದೆ. ಕಾರಣ, ಕಟ್ಟಾ ಸಂಪ್ರದಾಯವಾದಿಗಳಾದ ಹರೇಡಿ ಮಂದಿ ಬೇರೆ ಕೆಲಸ ಮಾಡಲು ಮನಸ್ಸಿಲ್ಲದವರು. 2009 ರ ಇಸ್ರೇಲಿನ ಮಂದಿಯೆಣಿಕೆ ಪ್ರಕಾರ ಶೇ 10 ರಶ್ಟಿದ್ದ ಹರೇಡಿಗಳು, ಮುಂದಿನ 50 ವರುಶಗಳಲ್ಲಿ ಆ ನಾಡಿನ ಮಂದಿಯೆಣಿಕೆಯ ಶೇ 27 ರಶ್ಟಾಗಬಹುದು ಎಂದು ಇಸ್ರೇಲಿನ ಸೆಂಟ್ರಲ್ ಬ್ಯೂರೋ ಆಪ್ ಸ್ಟ್ಯಾಟಿಸ್ಟಿಕ್ಸ್ (Central Bureau of Statistics) ಹೇಳುತ್ತದೆ. ಕೆಲಸ ಮಾಡಲು ಮನಸ್ಸಿಲ್ಲದ ಮತ್ತು ಹೆಚ್ಚು ಮಕ್ಕಳನ್ನು ಹೆರುವ ಹರೇಡಿಗಳು ಇಸ್ರೇಲಿನ ಹಣಕಾಸಿನ ಏಳಿಗೆಗೆ ಅಡ್ಡವಾಗಿದ್ದಾರೆ ಎಂಬುದು ಇಸ್ರೇಲಿನ ಹಣಕಾಸರಿಗರ (economists) ಅನಿಸಿಕೆ. ಇಸ್ರೇಲಿನ ಹಣಕಾಸು ಇಲಾಕೆಯ ವರದಿಯ ಪ್ರಕಾರ ಇಸ್ರೇಲಿನ ಸಾಲ, ಆ ನಾಡಿನ ‘ಒಟ್ಟು ಮಾಡುಗೆಯ ಬೆಲೆ’ ಯ (GDP) ಶೇ 67 ರಶ್ಟಿದೆ. ಅದು ಮುಂದಿನ 50 ವರುಶಗಳಲ್ಲಿ ಶೇ 170 ತಲುಪಬಹುದು ಎಂದು ಅಂದಾಜಿಸಲಾಗಿದೆ. ಹೀಗೆ ಮುಂದುವರೆದರೆ ನಾಡಿನ ಮುಂದಿನ ದಿನಗಳಲ್ಲಿ ಹಣಕಾಸಿನ ಗೊತ್ತುಪಾಡಿಗೆ (economic condition) ತೊಡಕಾಗುವುದರಿಂದ, ಕಟ್ಟಾ ಸಂಪ್ರದಾಯವಾದಿಗಳಿಗೆ ಸವಲತ್ತುಗಳನ್ನು ಕೊಡುತ್ತಾ ಅವರನ್ನು ಸಾಕಲಾಗದು ಎನ್ನುವ ನಿಲುವಿಗೆ ಇಸ್ರೇಲ್ ನ ಹಣಕಾಸರಿಗರು ಬರುತ್ತಿದ್ದಾರೆ.

(ಚಿತ್ರ ಸೆಲೆ : israelnationalnews.comterrasanta.net)

(ಮಾಹಿತಿ ಸೆಲೆ : economist.comwikipedia)Categories: ನಾಡು

ಟ್ಯಾಗ್ ಗಳು:, , , , , , , , , , , , , , , , , , , , , , , , , , , , , , , , , , , ,

2 replies

  1. ಬರವಣಿಗೆ ಬಹಳ ಸರಳವಾಗಿದ್ದು , ಬಹುಜನರ ಅರಿವಿಗೆ ಬರುವಂತಿದೆ. ತಿಳಿವಿಗರು (scholars) ಎಂಬ ಪದಕ್ಕೆ ಅರಿತವರು ಎಂಬುದು ಹೆಚ್ಚು ಸಮಂಜಸ ಅನಿಸುತ್ತದೆ. ಹಾಗೆಯೇ, ಕಡಿಮೆ ಸಂಬಳ (stipend) ಎಂಬುದಕ್ಕೆ ಕಲಿಕೆ ವೇತನ ಸರಿಯಾಗಬಹುದೇನೋ!

  2. ಬರಹ ಓದಿ ನಿಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಕ್ಕೆ ನನ್ನಿ ಜಗದೀಶ್ ಅವರೇ.
    scholars ಗೆ ತಿಳಿವಿಗರು, ಅರಿತವರು, ಬಲ್ಲವರು ಎಂಬ ಹುರುಳುಗಳಿವೆ, ‘ತಿಳಿವಿಗರು’ ಪದ ಬಳಸಿಕೊಳ್ಳಲಾಗಿದೆ.
    stipend ಗೆ ‘ಕಲಿಕೆ ಸಂಬಳ’ ಪದ ಸರಿ ಹೊಂದುತ್ತದೆ.

ಅನಿಸಿಕೆ ಬರೆಯಿರಿ

Please log in using one of these methods to post your comment:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s