ಸರ‍್ವಜ್ನನ ವಚನಗಳ ಹುರುಳು

– ಸಿ.ಪಿ.ನಾಗರಾಜ.

Sarvagna

1)  ಬಲ್ಲವರ ಒಡನಾಡೆ ಬೆಲ್ಲವನು ಸವಿದಂತೆ
ಅಲ್ಲದ ಜ್ಞಾನಿಯೊಡನಾಡೆ-ಮೊಳಕಯ್ಗೆ
ಕಲ್ಲು ಹೊಡೆದಂತೆ ಸರ್ವಜ್ಞ

ಗೆಳೆತನ/ನಂಟು/ವ್ಯವಹಾರವನ್ನು ಒಳ್ಳೆಯವರೊಡನೆ/ಕೆಟ್ಟವರೊಡನೆ ಮಾಡಿದಾಗ ಉಂಟಾಗುವ ನೋವು ನಲಿವುಗಳ ಬಗೆಯನ್ನು ಈ ವಚನದಲ್ಲಿ ಹೇಳಲಾಗಿದೆ

( ಬಲ್ಲವರ=ತಿಳಿದವರ/ಅರಿತವರ ; ಒಡನೆ+ಆಡೆ=ಜತೆಯಲ್ಲಿ ಗೆಳೆತನ/ನಂಟು/ವ್ಯವಹಾರಗಳನ್ನು ಮಾಡಿದರೆ ; ಅಲ್ಲದೆ+ಅಜ್ಞಾನಿಯ+ಒಡನೆ+ಆಡೆ ; ಅಲ್ಲದೆ=ಹಾಗೆ ಮಾಡದೆ ; ಅಜ್ಞಾನಿ=ತಿಳಿಗೇಡಿ/ಅರಿವಿಲ್ಲದವನು )

2)  ಬರೆ ಕಂಡು ಕರೆಯದನ ಇರು ಕುಳ್ಳಿರೆನ್ನದನ
ಸರಸ ಸಜ್ಜನಿಕೆಯಿರದನ-ಗೆಳೆತನವ
ಬೆರಸಲೇ ಬೇಡ ಸರ್ವಜ್ಞ

ಒಳ್ಳೆಯ ನಡೆನುಡಿಯಿಲ್ಲದ ಮತ್ತು ಇತರರನ್ನು ತನ್ನಂತೆ ತಿಳಿದು ಒಲವಿನಿಂದ ನಡೆದುಕೊಳ್ಳದ ವ್ಯಕ್ತಿಯೊಡನೆ ಗೆಳೆತನವನ್ನು ಮಾಡಬಾರದೆಂಬ ಎಚ್ಚರಿಕೆಯನ್ನು ನೀಡಲಾಗಿದೆ.

( ಬರೆ=ತನ್ನ ಬಳಿಗೆ/ಹತ್ತಿರಕ್ಕೆ ವ್ಯಕ್ತಿಯೊಬ್ಬನು ಬಂದಾಗ ; ಕರೆಯದನ=ಕರೆಯದವನ ; ಕುಳ್ಳಿರು+ಎನ್ನದನ ; ಕುಳ್ಳಿರು=ಕುಳಿತಿಕೊ ; ಎನ್ನದನ=ಎನ್ನದವನ ; ಸಜ್ಜನಿಕೆಯು+ಇರದನ ; ಸಜ್ಜನಿಕೆ=ಒಳ್ಳೆಯ ನಡೆನುಡಿ ; ಇರದನ=ಇರದವನ ; ಬೆರಸು=ಕೂಡು/ಸೇರು )

3)  ಒಳ್ಳಿದರ ಒಡನಿರ್ದು ಕಳ್ಳ ಒಳ್ಳಿದನಕ್ಕು
ಒಳ್ಳಿದ ಕಳ್ಳನೊಡನಾಡೆ-ಅವ ಶುದ್ಧ
ಕಳ್ಳನೇ ಅಕ್ಕು ಸರ್ವಜ್ಞ

ಒಳ್ಳೆಯವರ ಇಲ್ಲವೇ  ಕೆಟ್ಟವರ ಒಡನಾಟದಿಂದ ವ್ಯಕ್ತಿತ್ವ ರೂಪುಗೊಳ್ಳುವ ಬಗೆಯನ್ನು ಹೇಳಲಾಗಿದೆ.

( ಒಳ್ಳಿದರ=ಒಳ್ಳೆಯ ನಡೆನುಡಿಯುಳ್ಳವರ ; ಒಡನೆ+ಇರ‍್ದು=ಜತೆಯಲ್ಲಿ ವ್ಯವಹರಿಸುತ್ತಾ ; ಒಳ್ಳಿದನ್+ಅಕ್ಕು ; ಒಳ್ಳಿದನ್=ಒಳ್ಳೆಯ ವ್ಯಕ್ತಿ ; ಅಕ್ಕು=ಆಗುತ್ತಾನೆ ; ಕಳ್ಳನ+ಒಡನೆ+ಆಡೆ )

4)   ಜಾತಿಹೀನನ ಮನೆಯ ಜ್ಯೋತಿ ತಾ ಹೀನವೇ
ಜಾತಿ ವಿಜಾತಿಯೆನಬೇಡ-ಶಿವನೊಲಿ
ದಾತನೇ ಜಾತ ಸರ್ವಜ್ಞ

ಮೇಲು-ಕೀಳೆಂಬ ಜಾತಿ ಮೆಟ್ಟಲಿನಿಂದ ಕೂಡಿರುವ ಸಮಾಜದಲ್ಲಿ ” ಜಾತಿ ಎನ್ನುವುದು ಒಂದು ಸುಳ್ಳು/ಬ್ರಮೆ ”  ಎಂಬ ಅರಿವನ್ನು ರೂಪಕವೊಂದರ ಮೂಲಕ ಹೇಳಲಾಗಿದೆ. ರೂಪಕ ಎಂದರೆ ಓದುಗನ ಮನದಲ್ಲಿ ಮೂಡಿಬರುವ ಒಂದು ಶಬ್ದಚಿತ್ರ. ಬೆಳಗುತ್ತಿರುವ ಜ್ಯೋತಿಯು ಇಲ್ಲಿ ರೂಪಕವಾಗಿದೆ.

( ಜಾತಿಹೀನ=ಸಾಮಾಜಿಕ ರಚನೆಯಲ್ಲಿ ಕೆಳಜಾತಿಯವನೆಂದು ಜನಸಮುದಾಯದ ಕಡೆಗಣಿಸುವಿಕೆಗೆ ಗುರಿಯಾದವನು ; ವಿಜಾತಿಯು+ಎನಬೇಡ ; ವಿಜಾತಿ=ಬೇರೆ ಜಾತಿ ; ಶಿವನ+ಒಲಿದ+ಆತನೇ ; ಶಿವನ=ಶಿವನನ್ನು ; ಒಲಿದ+ಆತನೇ =ಪೂಜಿಸುವ/ನಂಬಿರುವ ವ್ಯಕ್ತಿಯೇ ; ಜಾತ=ಒಳ್ಳೆಯ ವ್ಯಕ್ತಿ )

5)   ಯಾತರ ಹೂವಾದರು ನಾತರೆ ಸಾಲದೆ
ಜಾತಿ ವಿಜಾತಿಯೆನಬೇಡ
ಶಿವನೊಲಿದಾತನೇ ಜಾತ ಸರ್ವಜ್ಞ

ಮೇಲು-ಕೀಳೆಂಬ ಜಾತಿ ಮೆಟ್ಟಲಿನಿಂದ ಕೂಡಿರುವ ಸಮಾಜದಲ್ಲಿ ” ಜಾತಿ ಎನ್ನುವುದು ಒಂದು ಸುಳ್ಳು/ಬ್ರಮೆ ”  ಎಂಬ ಅರಿವನ್ನು ರೂಪಕವೊಂದರ ಮೂಲಕ ಹೇಳಲಾಗಿದೆ . ಒಂದಲ್ಲ ಒಂದು ಬಗೆಯ ಕಂಪಿನಿಂದ ಕೂಡಿರುವ ಹೂವು ಇಲ್ಲಿ ರೂಪಕವಾಗಿದೆ.

( ಯಾತರ=ಯಾವುದೇ ಬಗೆಯ ; ಹೂವು+ಆದರು ; ನಾತ=ಕಂಪು/ವಾಸನೆ/ಪರಿಮಳ ; ನಾತರೆ=ಕಂಪಿನಿಂದ ಕೂಡಿದ್ದರೆ ; ಸಾಲದೆ=ಸಾಕಲ್ಲವೇ )

6)   ನಡೆವುದೊಂದೆ ಭೂಮಿ ಕುಡಿವುದೊಂದೆ ನೀರು
ಸುಡುವಗ್ನಿಯೊಂದೆ ಇರುತಿರಲು-ಕುಲಗೋತ್ರ
ನಡುವೆ ಎತ್ತಣದು ಸರ್ವಜ್ಞ

ಮೇಲು-ಕೀಳೆಂಬ ಜಾತಿ ಮೆಟ್ಟಲಿನಿಂದ ಕೂಡಿರುವ ಸಮಾಜದಲ್ಲಿ ” ಜಾತಿ ಎನ್ನುವುದು ಒಂದು ಸುಳ್ಳು/ಬ್ರಮೆ ”  ಎಂಬ ಅರಿವನ್ನು ಮೂಡಿಸಲು ಕಣ್ಣಮುಂದಿನ ನಿಸರ‍್ಗದಲ್ಲಿ ಕಾಣುವ ಮತ್ತು ನಡೆಯುವ ಪ್ರಸಂಗಗಳಿಂದ ಹೇಳಲಾಗಿದೆ.

( ನಡೆವುದು+ಒಂದೆ ; ಕುಡಿವುದು+ಒಂದೆ ; ಸುಡುವ+ಅಗ್ನಿಯು+ಒಂದೆ ; ಇರುತ+ಇರಲು ; ಕುಲಗೋತ್ರ=ಹುಟ್ಟಿದ ಮಗುವಿನ ಕುಟುಂಬದ ಹಿನ್ನೆಲೆಯನ್ನು ತಿಳಿಸುವ ಜಾತಿ-ಉಪಜಾತಿ-ಮತದರ‍್ಮಗಳು ; ಎತ್ತಣದು=ಯಾವ ಕಡೆಯದು )

7)   ನಿತ್ಯ ನೇಮಗಳೇಕೆ ಮತ್ತೆ ಪೂಜೆಗಳೇಕೆ
ನೆತ್ತಿ ಬೋಳೇಕೆ ಜಡೆಯೇಕೆ-ಅರಿದು ನೆರೆ
ಸತ್ಯ ಉಳ್ಳವಗೆ ಸರ್ವಜ್ಞ

ಆಡುವ ಮಾತು ಮತ್ತು ಕಯ್ಗೊಂಡ ಕೆಲಸಗಳಲ್ಲಿ ಇತರರಿಗೆ ಮತ್ತು ಸಮಾಜಕ್ಕೆ ಒಳಿತನ್ನು ಮಾಡುವ ಸತ್ಯವಂತನಾದ ವ್ಯಕ್ತಿಗೆ ದೇವರ ಬಗೆಗಿನ ಬಕುತಿಯನ್ನು  ತೋರಿಸಿಕೊಳ್ಳುವಂತಹ ಯಾವುದೇ ಬಗೆಯ ಉಡುಗೆ ತೊಡುಗೆ ಮತ್ತು ಆಚರಣೆಗಳ  ಅಗತ್ಯವಿಲ್ಲವೆಂಬುದನ್ನು ಹೇಳಲಾಗಿದೆ.

( ನೇಮಗಳು+ಏಕೆ ; ನೇಮ=ಪೂಜೆ/ಉಪವಾಸ ಮುಂತಾದ ಆಚರಣೆಗಳು ; ನೆತ್ತಿಬೋಳು= ತಲೆಕೂದಲನ್ನು ದೇವರಿಗೆ ಹರಕೆಯಾಗಿ ನೀಡುವುದು ; ಜಡೆ=ದೇವರ ಬಕುತನಂತೆ ತೋರಿಸಿಕೊಳ್ಳಲು ಉದ್ದನೆಯ ತಲೆಗೂದಲನ್ನು ತಲೆಯ ಮೇಲೆ ಎತ್ತಿಕಟ್ಟುವುದು ; ಅರಿದು=ತಿಳಿದು ; ನೆರೆ=ಚೆನ್ನಾಗಿ/ಕೂಡಿ )

8)   ಸತ್ಯರ ನಡೆ ತೀರ್ಥ ಮತ್ತೆ ಜಂಗಮ ತೀರ್ಥ
ಉತ್ತಮರ ಸಂಗವದು ತೀರ್ಥ-ಹರಿವ
ನೀರೆತ್ತಣ ತೀರ್ಥ ಸರ್ವಜ್ಞ

ದೇಗುಲಗಳ ಬಳಿ ಹರಿಯುತ್ತಿರುವ ತೊರೆಯ ನೀರು ಇಲ್ಲವೇ ಪೂಜಾರಿಯು ಕೊಡುವ ನೀರು ಪವಿತ್ರವೆಂದು ನಂಬಿರುವ ಜನರಿಗೆ , ಯಾವುದು ಪವಿತ್ರವೆಂಬುದನ್ನು ಹೇಳಲಾಗಿದೆ.

( ಸತ್ಯರ ನಡೆ=ಸತ್ಯವಂತರು ತಮ್ಮ ಜೀವನದಲ್ಲಿ ಆಡಿದ ನುಡಿ ಮತ್ತು ಮಾಡಿದ ಕೆಲಸಗಳು ; ತೀರ್ಥ=ಪವಿತ್ರವಾದುದು ; ತೀರ್ಥ=ದೇವಾಲಯಗಳಲ್ಲಿ ದೇವರ ಪೂಜೆಯ ನಂತರ ನೀಡುವ ನೀರು. ಇದನ್ನು ಬಕ್ತರು ಪವಿತ್ರವೆಂದು ನಂಬಿರುತ್ತಾರೆ ; ಸಂಗವು+ಅದು ; ಸಂಗ=ಜತೆಯಲ್ಲಿ ವ್ಯವಹರಿಸುವುದು ; ನೀರು+ಎತ್ತಣ ; ಎತ್ತಣ=ಯಾವ ರೀತಿಯಲ್ಲಿ/ಬಗೆಯಲ್ಲಿ )

9)    ಸತ್ಯವೆಂಬುದು ತಾನು ಹಿತ್ತಲದ ಗಿಡ ನೋಡ
ಮತ್ತೆಲ್ಲಿ ನೋಡಿ ಅರಸದಲೆ – ತಾನಿರ್ದ
ಹತ್ತಿರಲೇ ನೋಡ ಸರ್ವಜ್ಞ

ತನ್ನ ಮನೆಯಲ್ಲಿಯೇ / ತನ್ನ ನೆರೆಹೊರೆಯಲ್ಲಿಯೇ ಹಗಲಿರುಳು ದುಡಿಯುತ್ತಾ , ಇತರರ ಒಳಿತಿಗಾಗಿಯೇ ತಮ್ಮ ಬದುಕನ್ನೇ ಮುಡಿಪಾಗಿಟ್ಟಿರುವ ಒಳ್ಳೆಯ ವ್ಯಕ್ತಿಗಳ ನಡೆನುಡಿಗಳಿಂದಲೇ ಸತ್ಯದ ಸಂಗತಿಗಳನ್ನು ಅರಿತುಕೊಳ್ಳಬೇಕೆಂದು  ಹೇಳಲಾಗಿದೆ.

( ಸತ್ಯವು+ಎಂಬುದು ; ಹಿತ್ತಲದ ಗಿಡ= ಇದು ಒಂದು ನುಡಿಗಟ್ಟು . ನಮ್ಮ ಸುತ್ತಮುತ್ತಣ ಎಡೆಯಲ್ಲಿಯೇ ಕಾಣಬಹುದಾದ ವ್ಯಕ್ತಿಗಳು ಮತ್ತು ಸಂಗತಿಗಳು ಎಂಬ ತಿರುಳಿನಲ್ಲಿ ಬಳಕೆಯಾಗುತ್ತದೆ ; ಮತ್ತೆ+ಎಲ್ಲಿ=ಬೇರೆ ಕಡೆಗಳಲ್ಲಿ ; ಅರಸದಲೆ=ಹುಡುಕದೆಯೆ ; ಅರಸು=ಹುಡುಕು/ತಡಕಾಡು ; ತಾನು+ಇರ‍್ದ=ತಾನು ಇರುವ )

10)    ಮೀಪೊಡೆ ಪೋಪೊಡೆ ಪಾಪವೇನದು ಕೆಸರೆ
ಮೀಪೊಡೆ ಮೆಯ್ಯ ಮಲ ಹೋಹುದು-ಆ ಪಾಪ
ಲೇಪವಾಗಿಕ್ಕು ಸರ್ವಜ್ಞ

ದೇಗುಲಗಳ ಬಳಿ ಹರಿಯುವ ತೊರೆಗಳಲ್ಲಿ ಮುಳುಗೇಳುವುದರಿಂದ ಮಯ್ಯಿಗೆ ಅಂಟಿಕೊಂಡಿರುವ ಕೊಳೆ ಹೋಗುತ್ತದೆಯೇ ಹೊರತು , ಮಾಡಿದ ಪಾಪ ಹೋಗುವುದಿಲ್ಲ . ಮಾಡಿದ ಪಾಪ ಹೋಗಬೇಕಾದರೆ ಮತ್ತೆ ಅಂತಹ ಪಾಪವನ್ನು ಮಾಡದೆ , ಒಳ್ಳೆಯ ನಡೆನುಡಿಗಳಿಂದ ಬಾಳಿದಾಗ ಮಾತ್ರ ಪಾಪ ತೊಲಗುತ್ತದೆ ಎಂಬುದನ್ನು ಹೇಳಲಾಗಿದೆ.

( ಮೀಪೊಡೆ=ಜಳಕ/ಸ್ನಾನ ಮಾಡುವುದರಿಂದ ; ಮೀಯು=ಜಳಕ/ಸ್ನಾನ ; ಪೋಪೊಡೆ=ಹೋಗುವುದಾದರೆ ; ಪೋ=ಹೋಗು ; ಪೋಪ=ಹೋಗುವ ; ಪಾಪ=ಜೀವನದಲ್ಲಿ ವ್ಯಕ್ತಿಗಳಿಗೆ ಮತ್ತು ಸಮಾಜಕ್ಕೆ ಮಾಡಿದ ಮೋಸ/ಕೇಡು ; ಕೆಸರು=ನೀರಿನಿಂದ ಮುದ್ದೆಯಾಗಿರುವ ಮಣ್ಣು ; ಮಲ=ಕೊಳೆ ; ಲೇಪವು+ಆಗಿ+ಇಕ್ಕು ; ಲೇಪ=ಬಳಿದುಕೊಂಡು ; ಇಕ್ಕು=ಇರುವುದು )

( ಚಿತ್ರಸೆಲೆ: wikipedia.org )

1 ಅನಿಸಿಕೆ

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.