ಕಡಲಾಳದಲ್ಲಿ ಮುತ್ತುಗಳು ಹೇಗೆ ಮೂಡುತ್ತವೆ?

– ರತೀಶ ರತ್ನಾಕರ.

pearls-in-oyster-shell

‘ನುಡಿದರೆ ಮುತ್ತಿನ ಹಾರದಂತಿರಬೇಕು…’ ಹನ್ನೆರಡನೇ ನೂರೇಡಿನಲ್ಲಿ ಹುಟ್ಟಿದ ವಚನಗಳನ್ನು ಕೇಳಿದರೆ ಮುತ್ತು-ರತ್ನಗಳ ಪರಿಚಯ ನಮಗೆ ತುಂಬಾ ಹಿಂದಿನಿಂದ ಇರುವುದು ತಿಳಿಯುತ್ತದೆ. ಕಡಲ ತೀರದಲ್ಲಿ ಮಾನವನು  ಊಟಕ್ಕಾಗಿ ಹುಡುಕಾಟ ನಡೆಸುತ್ತಿದ್ದಾಗ ಮುತ್ತುಗಳು ಕಣ್ಣಿಗೆ ಬಿದ್ದವು, ಬಳಿಕ ಅವು ಒಡವೆಗಳಾಗಿ ನಮ್ಮ ಬದುಕಿನಲ್ಲಿ ಬಳಕೆಗೆ ಬಂದವು. ಚೀನಾದ ಹಳಮೆಯ ಪ್ರಕಾರ ಸುಮಾರು ಕ್ರಿಸ್ತಪೂರ‍್ವ 2300 ರಲ್ಲಿಯೇ ಮುತ್ತುಗಳ ಪರಿಚಯವಿತ್ತೆಂದು ಹೇಳಲಾಗುತ್ತದೆ. ಇಂಡಿಯಾದ ಹಳಮೆಯಲ್ಲಿ ಮುತ್ತುಗಳ ಬಗ್ಗೆ ದೊರೆತಿರುವ ಮೊದಲ ಗುರುತು ಎಂದರೆ, ಕ್ರಿಸ್ತಪೂರ‍್ವ 600 ರಲ್ಲಿ ತೆಂಕಣ ಇಂಡಿಯಾವನ್ನು ಆಳುತ್ತಿದ್ದ ಪಾಂಡ್ಯರು ಮುತ್ತುಗಳ ವ್ಯಾಪಾರ ಮಾಡುತ್ತಿದ್ದರು ಎಂಬುದು. ಒಟ್ಟಾರೆಯಾಗಿ ಸುಮಾರು 4000 ವರುಶಗಳ ಹಿಂದಿನಿಂದ ಮುತ್ತುಗಳು ಬಳಕೆಯಲ್ಲಿರುವುದನ್ನು ನಾವು ಕಾಣಬಹುದು.

ತನ್ನದೇ ಆದ ನೋಟ, ಹೊಳಪು ಹಾಗು ಎಣೆಯಿಲ್ಲದ ಚೆಲುವಿನಿಂದ ಮುತ್ತುಗಳು ಬೆಲೆಬಾಳುವ ಒಡವೆಗಳಾಗಿವೆ. ಹಳಮೆಯ ಹಲವಾರು ದೊರೆಗಳ, ಒಡತಿಯರ ಕಿರೀಟದಲ್ಲಿ ಇವು ಮಿನುಗಿವೆ. ಕಡಲ ಆಳದಲ್ಲಿರುವ ಚಿಪ್ಪಿನಲ್ಲಿ ಮುತ್ತುಗಳು ಹೇಗೆ ಮೂಡುವುದು ಎಂಬುವುದಕ್ಕೆ ಹಲವಾರು ಕಟ್ಟುಕತೆಗಳೂ ಇವೆ. ಅವುಗಳಲ್ಲಿ ಒಂದು ಕತೆಯೆಂದರೆ ‘ಸ್ವಾತಿಮಳೆಯ ಹನಿಗಳು ಕಡಲಿಗೆ ಬಿದ್ದು ಆ ಹನಿಗಳು ಚಿಪ್ಪಿನಲ್ಲಿ ಕೂತು ಮುತ್ತುಗಳಾಗುತ್ತವೆ’ ಎಂಬುದು. ಮೊದಲೇ ಹೇಳಿದಂತೆ ಇದೊಂದು ಕತೆ ಆದರೆ ದಿಟವಾಗಿಯು ಮುತ್ತುಗಳು ಆಗುವುದು ಬೇರೆಯ ಬಗೆಯಲ್ಲಿ. ಸ್ವಾತಿಮಳೆಗೂ ಮುತ್ತಿಗೂ ಯಾವ ನಂಟು ಇಲ್ಲ!

ಕಡಲಿನಲ್ಲಿರುವ ಕೆಲವು ಬಗೆಯ ಮುತ್ತಿನ ಚಿಪ್ಪುಸಿರಿ(pearl oyster)ಯ ಚಿಪ್ಪಿನ ಒಳಗೆ ಮರಳಿನ ಕಣ ಇಲ್ಲವೇ ಚಿಕ್ಕ ಹೊರಕುಳಿ(parasite)ಗಳು ಹೊಕ್ಕುತ್ತವೆ. ಆ ಹೊರಕುಳಿಗಳು ಚಿಪ್ಪುಸಿರಿಯ ಮೈಯೊಳಗೆ ಬಂದು ತೊಂದರೆಯನ್ನು ನೀಡುವ ಸಾದ್ಯತೆಗಳಿರುತ್ತವೆ. ಈ ತೊಂದರೆಯಿಂದ ತಪ್ಪಿಸಿಕೊಂಡು ತನ್ನ ಮೈಯನ್ನು ಕಾಪಾಡಿಕೊಳ್ಳಲು ಚಿಪ್ಪುಸಿರಿಯು ಮರಳಿನಕಣ/ಹೊರಕುಳಿಯನ್ನು, ಕ್ಯಾಲ್ಸಿಯಂ ಕಾರ‍್ಬೊನೇಟ್‍ನಿಂದಾದ ಮಡಿಕೆ(layer)ಗಳಿಂದ ಸುತ್ತುವರೆಯುತ್ತದೆ. ಹೀಗೆ ಹಲವಾರು ಮಡಿಕೆಗಳಿಂದ ಸುತ್ತುವರೆದಿರುವ ಹೊರಕುಳಿಯು ಚಿಪ್ಪುಸಿರಿಯ ಮಯ್ಯಿಗೆ ಯಾವುದೇ ತೊಂದರೆಯನ್ನು ನೀಡಲು ಆಗುವುದಿಲ್ಲ. ಹೀಗೆ ಹೊರಕುಳಿ ಮತ್ತು ಅದನ್ನು ಸುತ್ತುವರೆದಿರುವ ಕ್ಯಾಲ್ಸಿಯಂ ಕಾರ‍್ಬೊನೇಟ್ ನ ಮಡಿಕೆಗಳು ಗಟ್ಟಿಯಾಗಿ ‘ಮುತ್ತು’ಗಳಾಗಿ ಮಾರ‍್ಪಾಡುಗೊಳ್ಳುತ್ತವೆ.

ಮುತ್ತುಗಳನ್ನು ಮೂಡಿಸುವ ಚಿಪ್ಪುಸಿರಿಗಳು:
ಎಲ್ಲಾ ಬಗೆಯ ಚಿಪ್ಪುಸಿರಿಗಳಲ್ಲಿ ಮುತ್ತುಗಳು ಸಿಗುವುದಿಲ್ಲ. ಮುತ್ತುಗಳನ್ನು ಕೊಡುವ ಚಿಪ್ಪಿನ ಕೆಲವು ಪಂಗಡಗಳೆಂದರೆ;
-ಪಿಂಕ್ಟಡ ವುಲ್ಗರಿಸ್ (Pinctada vulgaris)
-ಪಿಂಕ್ಟಡ ಮಾರ‍್ಗರಿಟಿಪೆರಾ (Pinctada margaritifera)
-ಪಿಂಕ್ಟಡ ಕೆಮ್ನಿಟ್ಜಿ (Pinctada chemnitzi)

ಪಿಂಕ್ಟಡ ತಳಿಯಲ್ಲಿ ಇರುವ ಎಲ್ಲಾ ಪಂಗಡಗಳು(species) ಮುತ್ತುಗಳನ್ನು ಮೂಡಿಸುತ್ತವೆ.

ಮುತ್ತುಗಳನ್ನು ಮೂಡಿಸುವ ಚಿಪ್ಪುಸಿರಿಯ ಮೈ ಬಾಗಗಳು:

Thitta 2ಚಿಪ್ಪುಸಿರಿಯ ಹೊರ ಪದರವು ಗಟ್ಟಿಯಾದ ಚಿಪ್ಪಿನಿಂದ ಕೂಡಿರುತ್ತದೆ. ಈ ಚಿಪ್ಪಿನ ಪದರದ ಕೆಳಗೆ ತೆಳುವಾದ ಹೊದಿಕೆ(mantle) ಇರುತ್ತದೆ, ಚಿಪ್ಪು ಹಾಗು ಹೊದಿಕೆಯ ನಡುವೆ ಮುತ್ತುಗಳು ಮೂಡುತ್ತವೆ.

ಗಟ್ಟಿಯಾದ ಚಿಪ್ಪಿನ ಸೀಳುನೋಟದಲ್ಲಿ ಮೂರು ಮಡಿಕೆಗಳನ್ನು ನೋಡಬಹುದು;
1. ಚಿಪ್ಪುಸಿಪ್ಪೆ (Periostracum): ಇದು ಚಿಪ್ಪಿನ ಮೇಲ್ಪರೆ. ಕಾನ್ಕಿಯೋಲಿನ್ (Conchiolin) ಎನ್ನುವ ತಿರುಳಿನಿಂದ ಮಾಡಲ್ಪಟ್ಟಿರುತ್ತದೆ.
2. ಒಡೆಕದ ಮಡಿಕೆ(Prismatic layer): ಈ ಮಡಿಕೆಯು ಕ್ಯಾಲ್ಸಿಯಂ ಕಾರ‍್ಬೊನೇಟ್ ನ ಸಣ್ಣ ಸಣ್ಣ ಹರುಳಗಳಿಂದ ಆಗಿದೆ. ಈ ಹರಳುಗಳು ಒಂದರ ಮೇಲೊಂದು ನೆಟ್ಟಗೆ ಕಂಬದಂತೆ ಜೋಡಿಸಲ್ಪಟ್ಟ್ರಿರುತ್ತವೆ. ಒಂದೊಂದು ಕಂಬಗಳು ಕಾನ್ಕಿಯೋಲಿನ್ ತಿರುಳಿನಿಂದ ಬೇರ‍್ಪಟ್ಟಿರುತ್ತವೆ. ಈ ಮಡಿಕೆಯು ಚಿಪ್ಪಿಗೆ ಬೇಕಾದ ಗಟ್ಟಿತನವನ್ನು ಒದಗಿಸುತ್ತವೆ.
3. ಮುತ್ತೊಡಲ ಮಡಿಕೆ (Nacreous Layer): ಚಿಪ್ಪಿನ ಒಳಗಿನ ಮಡಿಕೆ ಇದು. ಇದನ್ನು ಮುತ್ತಿನ ತಾಯಿ (mother of pearl) ಇಲ್ಲವೇ ಮುತ್ತಿನ ಒಡಲು ಎಂದು ಕರೆಯುತ್ತಾರೆ. ಈ ಮಡಿಕೆಯೇ ಮುತ್ತನ್ನು ಮೂಡಿಸುವಲ್ಲಿ ಅರಿದಾದದ್ದು. ಕ್ಯಾಲ್ಸಿಯಂ ಕಾರ‍್ಬೊನೇಟ್ ಮತ್ತು ಕಾನ್ಕಿಯೋಲಿನ್ ನ ಸಣ್ಣ ಮಡಿಕೆಗಳು ಒಂದರ ಮೇಲೆ ಒಂದರಂತೆ ಇದರಲ್ಲಿರುತ್ತವೆ.

thitta 1

ಹೊದಿಕೆ(Mantle)ಯ ಬಾಗಗಳು: ಹೊದಿಕೆಯು ಕೂಡ ಮೂರು ಮಡಿಕೆಗಳನ್ನು ಹೊಂದಿದೆ.
1. ಕಂಬದಂತಿರುವ ಮೇಲ್ಪರೆ (Columnar epithelium): ಮುತ್ತೊಡಲನ್ನು (Nacre) ಒಸರುವ ಸುರಿಗೆಗಳನ್ನು ಇದು ಹೊಂದಿದೆ.
2. ಕೂಡಿಸುವ ಗೂಡುಕಟ್ಟಿನ ಮಡಿಕೆ (Connective tissue layer:): ಕೂಡಿಸುವ ಗೂಡುಕಟ್ಟುಗಳನ್ನು ಹೊಂದಿರುವ ಮಡಿಕೆ.
3. ಮುಂಚಾಚಿನ ಮೇಲ್ಪರೆ (Ciliated epithelium): ಲೋಳೆಯನ್ನು ಒಸರುವ ಸೂಲುಗೂಡನ್ನು ಇದು ಹೊಂದಿದೆ.

ಮುತ್ತು ಮೂಡುವ ಹಂತಗಳು:

Thitta 31. ಮರಳಿನ ಕಣ ಇಲ್ಲವೇ ಹೊರಕುಳಿಯೊಂದು ಚಿಪ್ಪಿನ ಗಟ್ಟಿಯಾದ ಮೇಲ್ಪರೆಯನ್ನು ಕೊರೆದುಕೊಂಡು ಒಳಗೆ ಬರುತ್ತದೆ.
2. ಇಂತಹ ಹೊರಕುಳಿಯು ಚಿಪ್ಪಿನ ಒಳಬಾಗ ಮತ್ತು ಹೊದಿಕೆಯ ನಡುವೆ ಸಿಕ್ಕಿಹಾಕಿಕೊಳ್ಳುತ್ತದೆ.
3. ಎರಡು ಮಡಿಕೆಗಳ ನಡುವೆ ಇರುವ ಕಣವು ಮೈಯಲ್ಲಿ ಕಿರಿಕಿರಿಯನ್ನು ಉಂಟುಮಾಡುತ್ತದೆ ಇದರಿಂದ ಕಾಪಾಡಿಕೊಳ್ಳಲು ಹೊದಿಕೆಯ ಕಂಬದಂತಿರುವ ಮೇಲ್ಪರೆಯು (Columnar epithelium) ಹೆಚ್ಚು ಹೆಚ್ಚು ಮುತ್ತೊಡಲನ್ನು(Nacre) ಮುತ್ತೊಡಲ ಮಡಿಕೆಗೆ ಒಸರುತ್ತದೆ.
4. ಮುತ್ತೊಡಲು ಹಲವು ಚಿಕ್ಕ ಚಿಕ್ಕ ಮಡಿಕೆಗಳಾಗಿ ಕಣವನ್ನು ಸುತ್ತುವರಿಯುತ್ತವೆ. ಹೊದಿಕೆಯ ಮೇಲ್ಪರೆಯು ಮುತ್ತೊಡಲು ಸುತ್ತುವರೆದಿರುವ ಕಣವನ್ನು ಮೇಲಿನ ಚಿತ್ರದಲ್ಲಿ ತೋರಿಸಿದಂತೆ ಸುತ್ತುವರೆದು ಹೊದಿಕೆಯತ್ತ ಎಳೆದುಕೊಳ್ಳುತ್ತದೆ.
5. ಕೊನೆಗೆ ಮುತ್ತೊಡಲ ಪದರಗಳು ಗಟ್ಟಿಯಾಗಿ ‘ಮುತ್ತು’ ಮೂಡುತ್ತದೆ.
6. ಸುಮಾರು 90% ನಶ್ಟು ಮುತ್ತು ಕ್ಯಾಲ್ಸಿಯಂ ಕಾರ‍್ಬೋನೇಟ್, 5% ಕಾನ್ಕಿಯೋಲಿನ್ ಮತ್ತು 5% ನೀರನ್ನು ಹೊಂದಿರುತ್ತದೆ.

ಮುತ್ತು ಎಶ್ಟು ದೊಡ್ಡದಿಂದೆ ಎಂಬುದು ಹೊರಕುಳಿಯು ಎಶ್ಟು ಕಿರಿಕಿರಿ ಉಂಟುಮಾಡುತ್ತದೆ ಎಂಬುದನ್ನು ಅವಲಂಬಿಸಿರುತ್ತದೆ. ಹೆಚ್ಚು ಕಿರಿಕಿರಿಯಾದರೆ ಹೆಚ್ಚು ಹೆಚ್ಚು ಮುತ್ತೊಡಲನ್ನು ಒಸರಿ, ಹಲವು ಮಡಿಕೆಗಳಿಂದ ಕಣವನ್ನು ಸುತ್ತುವರೆದು ದೊಡ್ಡದಾದ ಮುತ್ತನ್ನು ಮೂಡಿಸುತ್ತದೆ. ಒಂದು ಸಾಮಾನ್ಯ ಮುತ್ತು ಮೂಡಲು ಸುಮಾರು 3-5 ವರುಶ ತಗುಲುತ್ತದೆ.

ಕಡಲಿನಲ್ಲಿ ಸಿಗುವ ಎಲ್ಲಾ ಮುತ್ತುಗಳು ದುಂಡಗಿರುವುದಿಲ್ಲ, ಮರಳಿನ ಕಣ/ಹೊರಕುಳಿಯ ಆಕಾರ ಮತ್ತು ಚಿಪ್ಪಿನೊಳಗೆ ಮೂಡುವ ಮುತ್ತೊಡಲ ಮಡಿಕೆಗಳ ಆದಾರದ ಮೇಲೆ ಮುತ್ತುಗಳು ಬೇರೆ ಬೇರೆ ಆಕಾರದಲ್ಲಿ ಇರುತ್ತವೆ. ದುಂಡಾಗಿರುವ ಮುತ್ತಿಗೆ ಎಲ್ಲಿಲ್ಲದ ಬೇಡಿಕೆ ಇದೆ. ಹಲವಾರು ವರುಶಗಳಿಂದ ಮುತ್ತಿನ ಉದ್ದಿಮೆ ಬೆಳೆಯುತ್ತಿರುವುದರಿಂದ, ಚಿಪ್ಪುಸಿರಿಗಳ ಸಾಕಣೆಯನ್ನು ಮಾಡಿ ಮುತ್ತುಗಳನ್ನು ಪಡೆಯುತ್ತಾರೆ. ಇದರಲ್ಲಿ ಸಾಕಿದ ಚಿಪ್ಪುಸಿರಿಗಳ ಚಿಪ್ಪಿಗೆ ಹೊರಕುಳಿಗಳು ಹೊಕ್ಕುವಂತೆ ಮಾಡಿ ಮುತ್ತುಗಳನ್ನು ಮೂಡಿಸುವಂತೆ ಮಾಡಲಾಗುತ್ತದೆ. ಉದ್ದಿಮೆಯ ಗುರಿಯಿಂದ ಬೆಳೆಯುವ ಮುತ್ತುಗಳು ಕಡಲಿನಲ್ಲಿ ತಾನಾಗಿಯೇ ಸಿಗುವ ಮುತ್ತುಗಳಿಗಿಂತ ಕಡಿಮೆ ಗುಣಮಟ್ಟದಲ್ಲಿರುತ್ತವೆ.

(ಮಾಹಿತಿ ಸೆಲೆ: yourarticlelibrary.com, wikipedia)
(ಚಿತ್ರ ಸೆಲೆ: yourarticlelibrary.com, saffronart.com)

ನಿಮಗೆ ಹಿಡಿಸಬಹುದಾದ ಬರಹಗಳು

1 Response

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *