ಮಹೀಂದ್ರಾ ಹೊರತಂದ ಜಗಜಟ್ಟಿ ಮಲ್ಲ – TUV3OO

ಜಯತೀರ‍್ತ ನಾಡಗವ್ಡ.

tuv_gallery-photos_big02

ಮಹೀಂದ್ರಾ ಮತ್ತು ಮಹೀಂದ್ರಾ ಹೆಚ್ಚು ಕಡಿಮೆ ಇಂಡಿಯಾದಲ್ಲಿ ಎಲ್ಲರಿಗೂ ಗೊತ್ತಿರುವ ಹೆಸರು. ಇಂಡಿಯಾದ ಬಲು ದೊಡ್ಡ ಕೂಟಗಳಲ್ಲೊಂದಾದ ಮಹೀಂದ್ರಾ ಮತ್ತು ಮಹೀಂದ್ರಾ ಆಯ್‌ಟಿ, ಹಣಕಾಸು, ತಾನೋಡ ಉದ್ಯಮವಲ್ಲದೇ ಇತ್ತೀಚಿಗೆ ಬಾನೋಡಗಳ ಉದ್ಯಮದಲ್ಲಿ ತೊಡಗಿಕೊಳ್ಳುವ ಮೂಲಕ ತನ್ನ ಹರವನ್ನೂ ಎಲ್ಲೆಡೆ ಚಾಚಿಕೊಂಡಿದೆ.

ಕಾರು, ಹಲಬಳಕೆ ಬಂಡಿ, ಲಾರಿ, ಬಸ್ಸು, ಟ್ರ್ಯಾಕ್ಟರ್  ಒಳಗೊಂಡ ತಾನೋಡದ ಉದ್ಯಮದಲ್ಲಿ ಮಹೀಂದ್ರಾ ಕೂಟಕ್ಕೆ ಇತ್ತೀಚಿನ ಕೆಲವು ವರುಶಗಳು ಅಶ್ಟೊಂದು ಹೇಳಿಕೊಳ್ಳುವಂತ ಲಾಬ ತಂದು ಕೊಟ್ಟಿಲ್ಲ. ಮಹೀಂದ್ರಾ ಕೂಟದವರಿಂದ ಬಗೆಬಗೆಯ ಹೊಸ ಬಂಡಿಗಳು ಹೊರಬಂದರೂ ಮಾರುತಿ ಸುಜುಕಿ, ಟಾಟಾ ನಂತಹ ಪಳಗಿದ ದೇಶಿ ಪಯ್ಪೋಟಿಗಾರರು ಒಂದೆಡೆಯಾದರೆ ರೆನೊ(Renault), ಹ್ಯುಂಡಾಯ್(Hyundai), ಪೋರ‍್ಡ್(Ford), ಟೊಯೊಟಾ(Toyota) ನಂತ ಹೊರನಾಡಿನ ಬಂಡಿ ತಯಾರಕರು ಇನ್ನೊಂದೆಡೆ ಬಿರುಸಿನ ಪಯ್ಪೋಟಿ ನೀಡುತ್ತಿದ್ದಾರೆ.

ಕಳೆದ ವರುಶದವರೆಗೆ ಇಂಡಿಯಾದ ಮೂರನೇ ಅತಿದೊಡ್ಡ ಬಂಡಿ ತಯಾರಕ ಕೂಟವಾಗಿದ್ದ ಮಹೀಂದ್ರಾ, ಜಪಾನಿನ ಹೊಂಡಾ ಮುಂದೆ ಮಂಡಿಯೂರಿ ನಾಲ್ಕನೇಯ ಸ್ತಾನಕ್ಕೆ ಕುಸಿದು ಕಂಗೆಟ್ಟಿದೆ. ಈ ಕುಸಿತದಿಂದ ಮತ್ತೆ ಮೇಲೆದ್ದು ಬರುವ ಯತ್ನದಲ್ಲಿಯೇ ಮೊನ್ನೆ ಸೆಪ್ಟೆಂಬರ್-10 ರಂದು ಹೊಸದೊಂದು ಬಂಡಿಯನ್ನು ಹೊರತಂದಿದೆ. ಅದೇ ಮಹೀಂದ್ರಾ ಟಿಯುವಿ 3ಒಒ (TUV3OO).

TUV_gallery-photos_big05

ಮೊದಲಿನಿಂದಲೂ ಹಲಬಳಕೆಯ ಬಂಡಿಗಳ ತಯಾರಿಕೆಯಲ್ಲಿ ಮಹೀಂದ್ರಾ ಹೆಸರುವಾಸಿ. ಡಸ್ಟರ್, ಎಕೊ ಸ್ಪೋರ‍್ಟ್, ಕ್ರ‍ೇಟಾ ಮುಂತಾದ ಕಿರು ಹಲಬಳಕೆಯ ಬಂಡಿಗಳ(Compact SUV) ಮಾರುಕಟ್ಟೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿರುವ ಕಾರಣ ಟಿಯುವಿ 3ಒಒ ಎಂಬ ಕಿರು ಹಲಬಳಕೆಯ ಬಂಡಿಗಳ ತಯಾರಿಸಿ ಮೇಲೇಳುವ ಹವಣಿಕೆಯಲ್ಲಿದೆ.

ಮೂರು ವರುಶಗಳ ಹಿಂದೆ ಯೂ301(U301) ಹೆಸರಿನಲ್ಲಿ ಶುರುವಾದ ಹಮ್ಮುಗೆಯೇ ಇಂದು “ಟಿಯುವಿ 3ಒಒ” ಬಂಡಿಯಾಗಿ ಹೊರಹೊಮ್ಮಿದೆ. ಇಂಡಿಯಾದಲ್ಲಿನ ಒರಟು ಬೀದಿಗಳಿಗೆಂದೇ ಗಟ್ಟಿ ಬಂಡಿಯೊಂದನ್ನು ತಯಾರಿಸಿದ್ದೇವೆ “ಟಿಯುವಿ” ಹೆಸರಿನ ಮೊದಲಲ್ಲಿರುವ ಟಿ ಎಂದರೆ ಟಪ್(Tough), ಟಪ್ ಉಟಿಲಿಟಿ ವೆಹಿಕಲ್(Tough Utility Vehicle) ನಿಮ್ಮ ಮುಂದಿದೆ ಎಂದು ಕೂಟದ ಹಿರಿಯ ಮೇಲಾಳುಗಳಾದ ಆನಂದ ಮಹೀಂದ್ರಾ (Anand Mahindra), ಪವನ್ ಗೊಯಂಕಾ (Pawan Goenka) ಪುಣೆಯ ಬಳಿಯ ಚಾಕಣ್‍ನ ಮಹೀಂದ್ರಾ ಕಾರ‍್ಕಾನೆಯಲ್ಲಿ ನಡೆದ ಬಿಡುಗಡೆ ಸಮಾರಂಬದಲ್ಲಿ ಹೇಳಿಕೊಂಡಿದ್ದಾರೆ.

tuv_gallery-photos_big06

ಇಟಲಿಯ ಪ್ರಮುಕ ಪಿನಿನ್ ಪರಿನಾ(Pinin Farina) ಸಂಸ್ತೆಯ ಈಡುಗಾರರ(designers) ಜೊತೆಗೂಡಿ ಟಿಯುವಿ 3ಒಒ ಮಾಡಲಾಗಿದ್ದು ವಿಶೇಶ. ಒರಟಾದ ಈ ಕಿರು ಹಳಬಳಕೆಯ ಬಂಡಿಯಲ್ಲಿ ಏನಿರಲಿದೆ ಎಂಬುದನ್ನು ನೋಡೋಣ ಬನ್ನಿ.

ಬಿಣಿಗೆ:
ಕ್ವಾಂಟೋ(Quanto) ಬಂಡಿಯಲ್ಲಿ ಬಳಸಲಾಗಿದ್ದ ಎಮ್‌ಹಾಕ್80 (mHawk80) 3 ಉರುಳೆಯ ಬಿಣಿಗೆಯನ್ನೇ ಇಲ್ಲೂ ಕೂಡ ಬಳಸಲಾಗಿದೆ. ಇಲ್ಲಿನ ವಿಶೇಶವೆಂದರೆ ಈ 1.5 ಲೀಟರ್‌ನ ಬಿಣಿಗೆಗೆ 2 ಗಾಳಿದೂಡುಕಗಳನ್ನು (twin turbocharger) ಅಳವಡಿಸಿ ತಿರುಗುಬಲವನ್ನು 230 ನ್ಯೂಟನ್ ಮೀಟರ್‌ಗೆ ಹೆಚ್ಚಿಸಲಾಗಿದೆ. 84 ಕುದುರೆಬಲ ನೀಡುವ ಬಿಣಿಗೆ ಇದಾಗಿರಲಿದೆ. ಎಎಮ್‌ಟಿ (AMT) ಮಾದರಿಗಳ ಕುದುರೆಬಲ ಸ್ವಲ್ಪ ಕಡಿತಗೊಂಡು 81 ಕುದುರೆಬಲದಶ್ಟಿರಲಿದೆ. ಬಿಣಿಗೆ ಬಿಎಸ್-4 ಕೆಡುಗಾಳಿ ಗುಣಮಟ್ಟಕ್ಕೆ  ತಕ್ಕಂತೆ ಮಾಡಲಾಗಿದೆ. ಬಂಡಿಯ ಮಯ್ಲಿಯೋಟ ಪ್ರತಿ ಲೀಟರ್‌ಗೆ 18.49 ಕಿ.ಮೀ. ಆಗಲಿದೆ.
ಸ್ಪೆಕ್೩ಸಾಗಣಿ (Transmission):
ಟಿಯುವಿ ಬಂಡಿ ಒಟ್ಟು 7 ಬಗೆಗಳಲ್ಲಿ ಮಾರಾಟಗೊಳ್ಳುತ್ತಿದೆ. ಎಲ್ಲ ಮಾದರಿಗಳಲ್ಲಿ 5 ವೇಗದ ಸಾಗಣಿ ಕೊಡಲಾಗಿದೆ.
ಟಿ-4, ಟಿ-4+,ಟಿ-6, ಟಿ-6+, ಟಿ-8 ಬಗೆಗಳಲ್ಲಿ ಓಡಿಸುಗನ ಹಿಡಿತದ ಸಾಗಣಿಯಿದ್ದರೆ,  ಟಿ-‍6+ ಎಎಮ್‌ಟಿ , ಟಿ-8 ಎಎಮ್‌ಟಿ ಮಾದರಿಗಳಿಗೆ ಎಎಮ್‌ಟಿ ಎಂಬ ಅರೆ ಓಡಿಸುಗನಿಡಿತದ ಸಾಗಣಿ ಅಳವಡಿಸಿ ಹೆಚ್ಚಿನ ಮಯ್ಲಿಯೋಟ ದೊರಕುವಂತೆ ಮಾಡಲಾಗಿದೆ.

ಮಯ್ಮಾಟ:
ಕಾದಾಟದ ಟ್ಯಾಂಕರ್‌ನಿಂದ ಹುರುಪುಗೊಂಡು ಟಿಯುವಿಯ ಮಯ್ಮಾಟವನ್ನು ಅದನ್ನು ಹೋಲುವಂತೆ ಗಟ್ಟಿ ಮುಟ್ಟಾಗಿಸಲಿದೆ. ಕೆಲವು ವಾರಗಳ ಹಿಂದೆ ಈ ಸುದ್ದಿಯನ್ನು ಹೊರ ಹಾಕಿ ಟಿಯುವಿ ಬಂಡಿಯ ಕಯ್ತಿಟ್ಟವನ್ನು ಮಹೀಂದ್ರಾ ಕೂಟದವರು ಬಿಡುಗಡೆಗೊಳಿಸಿದ್ದರು.

ಸ್ಕೆಚ್

ಟಿಯುವಿಯ ಹೊರಮಯ್ ನೋಟ ಮಹೀಂದ್ರಾದವರ ಬೊಲೆರೊದಂತೆ(Bolero) ಪೆಟ್ಟಿಗೆಯಾಕಾರ ಕಂಡರೆ ಮುಂಬಾಗದ ಮುನ್ಕಂಬಿ ತೆರೆ(Front Grill) ನಿಮಗೊಮ್ಮೆ ಕ್ರಾಯ್ಸ್ಲರ್‌ನ ಜೀಪ್(Chrysler Jeep) ಬಂಡಿಯನ್ನು ನೆನೆಪಿಗೆ ತರಬಹುದು. ಹೊಸ ಸ್ಕಾರ‍್ಪಿಯೊ(Scorpio) ಬಂಡಿಯ 3ನೇ ಪೀಳಿಗೆಯ ಅಡಿಗಟ್ಟನ್ನೇ(Chassis) ಈ ಬಂಡಿಯಲ್ಲೂ ಬಳಸಿಕೊಂಡು, ನಮ್ಮ ಬಂಡಿ ಇತರರಿಗಿಂತ ಬೇರೆಯಾಗಿದೆ ಎಂದು ಮಹೀಂದ್ರಾ ಕೂಟದವರು ಹೇಳಹೊರಟಂತಿದೆ.

ಒಳಮಯ್ ಸ್ಕಾರ‍್ಪಿಯೊ ಮತ್ತು ಬೊಲೆರೊ ಬಂಡಿಗಿಂತ ಸಾಕಶ್ಟು ಸುದಾರಣೆಗೊಂಡಿವೆ. ಸ್ಕಾರ‍್ಪಿಯೊ ಬಂಡಿಗಿಂತ ಹೆಚ್ಚಿನ ನೆಲತೆರವು(Ground Clearance) ಹೊಂದಿದ್ದರೂ ಕೂರುಗಳನ್ನು(Seats) ಅಚ್ಚುಕಟ್ಟಾಗಿ ಜೋಡಿಸಿಲಾಗಿದೆ. ಬಂಡಿಯ ಒಳಗಡೆ ಕಾಲು ಚಾಚಿಕೆ(Leg room), ತಲೆಯೊರುಗಗಳು (Head rest) ಪಯಣಿಗರ ಹಿತಕ್ಕೆ ತಕ್ಕಂತೆ ಮಾಡಲಾಗಿದ್ದು ಮನಸೆಳೆಯಲಿದೆ. ಮುಂದಿನ ಬಾಗಿಲುಗಳಿಗೆ ನೀರಿನ ಬಾಟಲ್ ಇಡಲು ಜಾಗ ಮಾಡಿಕೊಟ್ಟಿದ್ದರೆ, ಕಾಪಿಯ ದೊಡ್ಡ ಲೋಟಗಳನ್ನು ಓಡಿಸುಗರ ಪಕ್ಕದಲ್ಲಿ ಇಡುವ ಸೇರುವೆಗಳನ್ನು ನೀಡಲಾಗಿದೆ.

ಸ್ಪೆಕ್೨ಟಿಯುವಿ ಬಂಡಿಯಲ್ಲಿ 7 ಮಂದಿಗೆ ಕೂಡಲು ಸ್ತಳಾವಕಾಶವಿದೆ. 5 ಮಂದಿ ಪಯಣಿಗರಿದ್ದರೆ ಹಿಂಬಾಗದ ಕೂರುಗಳನ್ನು ಮಡಿಸಿ ಸರಕು ಚಾಚಿಕೆಯನ್ನು 384 ಲೀಟರ್ ನಿಂದ 720 ಲೀಟರ್‌ಗೆ ಹಿಗ್ಗಿಸಿಕೊಳ್ಳಬಹುದು.

ಟಿ-4 ಬಿಟ್ಟು ಮಿಕ್ಕಿದ್ದೆಲ್ಲ ಮಾದರಿಗಳಲ್ಲಿ ಎರಡು ಗಾಳಿಚೀಲಗಳನ್ನು ನೀಡಲಾಗಿದೆ. ಕೆಲವು ಮಾದರಿಗಳಲ್ಲಿ ಸಿಲುಕು ತಡೆತದ ಏರ‍್ಪಾಟನ್ನು (ABS-Anti lock Braking System) ನೀಡಲಾಗುತ್ತಿದೆ.

ಟಿಯುವಿ ಹಲಬಳಕೆಯ ಬಂಡಿ ಒಟ್ಟು 6 ಬಗೆಯ ಬಣ್ಣಗಳಲ್ಲಿ ಸಿಗಲಿದೆ. ಬಿಳಿ, ಬೆಳ್ಳಿ, ಕಡುನೀಲಿ, ಕೆಂಪು, ಕಿತ್ತಳೆ ಮತ್ತು ಕಪ್ಪು ಇವೇ ಆ ಬಣ್ಣಗಳು.

ಸ್ಪೆಕ್೧
ಪಯ್ಪೋಟಿ:
ಟಿಯುವಿ ಬಂಡಿ ಎಕೊಸ್ಪೋರ‍್ಟ್, ಡಸ್ಟರ್‌, ಟೆರ್ರಾನೊ ಬಂಡಿಗಳಿಗೆ ನೇರ ಪಣವೊಡ್ಡಲಿದೆ.

ಬೆಲೆ:
ಟಿಯುವಿ 3ಒಒ ಬಂಡಿಯ 7 ವಿವಿದ ಬಗೆಗಳು 6.92 ಲಕ್ಶ ರೂಪಾಯಿಗಳಿಂದ 9.12 ಲಕ್ಶ ರೂಪಾಯಿಗಳವರೆಗಿರಲಿದೆ. ವಿವಿದ ಬಗೆಗಳ ಬೆಲೆಯನ್ನು ಪಟ್ಟಿಯಲ್ಲಿ ನೀಡಲಾಗಿದೆ.

Priceಕ್ವಾಂಟೋ ಮೂಲಕ ಮಹೀಂದ್ರಾ ಕಿರು ಹಲಬಳಕೆಯ ಬಂಡಿಯನ್ನು ಮೊದಲಿಗೆ ಇಂಡಿಯಾದಲ್ಲಿ ಪರಿಚಯಿಸಿದ ಕ್ಯಾತಿ ಹೊಂದಿದೆ. ಕ್ವಾಂಟೋನ ಸೋಲಿನ ಸುಳಿಯಿಂದ ಹೊರಬರಲು  ಟಿಯುವಿ 3ಒಒ ನೆರವಾಗದಿದ್ದರೆ ಮುಂಬರುವ ದಿನಗಳಲ್ಲಿ ಮಹೀಂದ್ರಾ ಕೂಟಕ್ಕೆ ಕಶ್ಟದ ದಿನಗಳು ಕಟ್ಟಿಟ್ಟ ಬುತ್ತಿಯೆನ್ನುತ್ತಾರೆ ಉದ್ಯಮದ ಮಂದಿ.

(ಮಾಹಿತಿ ಮತ್ತು ತಿಟ್ಟ ಸೆಲೆ: www.mahindratuv300.com, www.autocarindia.com)Categories: ಅರಿಮೆ

ಟ್ಯಾಗ್ ಗಳು:, , , , , , , , , ,

ಅನಿಸಿಕೆ ಬರೆಯಿರಿ

Please log in using one of these methods to post your comment:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s