ಸರ‍್ವಜ್ನನ ವಚನಗಳ ಹುರುಳು – 5ನೆಯ ಕಂತು

– ಸಿ.ಪಿ.ನಾಗರಾಜ.

 

41)  ಅನ್ನ ದೇವರಿಗಿಂತ ಇನ್ನು ದೇವರು ಇಲ್ಲ
ಅನ್ನಕ್ಕೆ ಮೇಲು ಹಿರಿದಿಲ್ಲ-ಲೋಕಕ್ಕೆ
ಅನ್ನವೇ ಪ್ರಾಣ ಸರ್ವಜ್ಞ

ಮಾನವನನ್ನು ಒಳಗೊಂಡಂತೆ ಎಲ್ಲಾ ಜೀವಿಗಳ ಉಳಿವಿಗೆ ಕಾರಣವಾದ ಅನ್ನದ ಮಹಿಮೆಯನ್ನು ಈ ವಚನದಲ್ಲಿ ಕೊಂಡಾಡಲಾಗಿದೆ .

(ದೇವರು+ಇಗೆ+ಇಂತ ; ಅನ್ನ=ಆಹಾರವಾಗಿ ತಿನ್ನುವ ಉಣ್ಣುವ ಎಲ್ಲಾ ಬಗೆಯ ತಿನಿಸು ಉಣಿಸುಗಳು ; ಅನ್ನ ದೇವರು= ಹಸಿವನ್ನು ತಣಿಸುವ ಉಣಿಸನ್ನೇ ದೇವರೆಂದು ತಿಳಿಯಲಾಗಿದೆ ; ಹಿರಿದು+ಇಲ್ಲ ; ಹಿರಿದು=ದೊಡ್ಡದು/ಹೆಚ್ಚಿನದು ; ಪ್ರಾಣ=ಉಸಿರು/ಜೀವ)

42)  ಅನ್ನವನಿಕ್ಕುವುದು ನನ್ನಿಯ ನುಡಿವುದು
ತನ್ನಂತೆ ಪರರ ಬಗೆವುದು-ಸ್ವರ್ಗ ತಾ
ಬಿನ್ನಾಣವಲ್ಲ ಸರ್ವಜ್ಞ

ಸಹಮಾನವರಿಗೆ ಮತ್ತು ಸಮಾಜಕ್ಕೆ ಒಳಿತನ್ನು ಮಾಡುವಂತಹ ನಡೆನುಡಿಗಳಿಂದ ನಾವಿರುವ ಎಡೆಯನ್ನೇ ಒಲವು ನಲಿವಿನ ತಾಣವನ್ನಾಗಿ ಮಾಡಬಹುದೆಂಬುದನ್ನು ಹೇಳಲಾಗಿದೆ.

(ಅನ್ನವನು+ಇಕ್ಕುವುದು ; ಇಕ್ಕುವುದು=ನೀಡುವುದು/ಹಾಕುವುದು/ಕೊಡುವುದು ; ಅನ್ನವನು ನೀಡುವುದು=ಹಸಿವಿನಿಂದ ಕಂಗೆಟ್ಟವರಿಗೆ ಉಣಿಸನ್ನು ನೀಡುವುದು ; ನನ್ನಿ=ನಿಜ/ದಿಟ/ಒಲವು/ಅಕ್ಕರೆ  ; ನನ್ನಿಯ ನುಡಿವುದು=ಅಕ್ಕರೆಯಿಂದ ಕೂಡಿದ ಸತ್ಯದ ಮಾತುಗಳನ್ನಾಡುವುದು ; ತನ್ನ+ಅಂತೆ ; ತನ್ನಂತೆ=ತನ್ನ ಹಾಗೆ ;  ಪರರ=ಇತರರನ್ನು ; ಬಗೆವುದು=ತಿಳಿಯುವುದು ; ತನ್ನಂತೆ ಪರರ ಬಗೆವುದು=ಇತರರನ್ನು ತನ್ನಂತೆ ಕಾಣುವುದು ಎಂದರೆ ತನ್ನ ಒಳಿತಿಗಾಗಿ ಹಂಬಲಿಸುವಂತೆಯೇ , ಇತರರಿಗೂ ಒಳಿತನ್ನು ಉಂಟುಮಾಡುವ ನಡೆನುಡಿಗಳನ್ನು ಹೊಂದಿರುವುದು ; ಸ್ವರ್ಗ=ನಲಿವು ಮತ್ತು ನೆಮ್ಮದಿಯ ನೆಲೆ ; ಬಿನ್ನಾಣವು+ಅಲ್ಲ ; ಬಿನ್ನಾಣ=ಚೆಲುವು/ಸೊಬಗು/ಸುಂದರ ; ಸ್ವರ್ಗ ತಾ ಬಿನ್ನಾಣವಲ್ಲ=ಮಾನವರು ಒಳ್ಳೆಯ ನಡೆನುಡಿಗಳಿಂದ ಕಟ್ಟುವ ಸಮಾಜದಲ್ಲಿ ಸ್ವರ‍್ಗಕ್ಕಿಂತಲೂ ಮಿಗಿಲಾದ  ನೆಮ್ಮದಿ-ನಲಿವು ದೊರೆಯುತ್ತದೆ)

43)   ಹಿರಿತನವು ಹೇಡಿಂಗೆ ಗುರುತನವು ಮೂಢಂಗೆ
ದೊರೆತನವು ನಾಡ ನೀಚಂಗೆ-ದೊರೆದಿಹರೆ
ಧರೆಯೆಲ್ಲ ಕೆಡುಗು ಸರ್ವಜ್ಞ

ಒಳ್ಳೆಯ ವ್ಯಕ್ತಿತ್ವವಿಲ್ಲದವನಿಗೆ ದೊಡ್ಡ ಗದ್ದುಗೆ/ಪಟ್ಟ/ಪದವಿಯು ದೊರೆಯುವಂತಾದರೆ ನಾಡು ಮತ್ತು ಜನಸಮುದಾಯದ ಬದುಕು ಹಾಳಾಗುತ್ತದೆ ಎಂಬ ಎಚ್ಚರಿಕೆಯನ್ನು ಜನಸಮುದಾಯಕ್ಕೆ ನೀಡಲಾಗಿದೆ.

(ಹಿರಿತನ=ಕುಟುಂಬ/ಸಾಮಾಜಿಕ ಒಕ್ಕೂಟಗಳನ್ನು ಒಳ್ಳೆಯ ರೀತಿಯಲ್ಲಿ ಮುನ್ನಡೆಸುವ ಜವಾಬ್ದಾರಿ ; ಹೇಡಿ=ಅಂಜುಬುರುಕ/ಪುಕ್ಕಲ/ಎದೆಗಾರಿಕೆಯಿಲ್ಲದವನು ; ಗುರುತನ=ತನ್ನ ಒಳ್ಳೆಯ ನಡೆನುಡಿಗಳಿಂದ ವ್ಯಕ್ತಿ ಹಾಗೂ ಸಮಾಜದ ಮುನ್ನಡೆಗೆ ಬೇಕಾದ ಅರಿವನ್ನು ಮೂಡಿಸುವ ಹೊಣೆಗಾರಿಕೆ  ; ಮೂಢಂಗೆ=ಮೂಡನಿಗೆ; ಮೂಢ=ಅರಿವಿಲ್ಲದವನು/ತಿಳುವಳಿಕೆಯಿಲ್ಲದವನು ;  ದೊರೆತನ=ಜನಸಮುದಾಯದ ಹಿತಕ್ಕಾಗಿ ಸದಾಕಾಲ ಎಚ್ಚರದಿಂದ ಆಡಳಿತವನ್ನು ನಡೆಸುವ ಹುದ್ದೆ ; ನಾಡ=ನಾಡಿನ/ದೇಶದ/ರಾಜ್ಯದ ; ನೀಚಂಗೆ=ಸುಳ್ಳು/ಮೋಸ/ಕೆಟ್ಟತನದ ನಡೆನುಡಿಯುಳ್ಳವನಿಗೆ ; ದೊರೆತು+ಇಹರೆ ; ದೊರೆತು=ಸಿಕ್ಕು/ಪಡೆದು ; ಇಹರೆ=ಇದ್ದರೆ ; ದೊರೆದಿಹರೆ=ದೊರಕುವಂತಾದರೆ/ಸಿಗುವಂತಾದರೆ ; ಧರೆ+ಎಲ್ಲ ; ಧರೆ=ಬೂಮಿ/ನಾಡು ; ಕೆಡುಗು=ಹಾಳಾಗುತ್ತದೆ)

44)   ಒಮ್ಮನದೆ ಬಿತ್ತಕ್ಕು ಇಮ್ಮನದೆ ಜಳ್ಳಕ್ಕು
ಒಮ್ಮನದೆ ಮೋಕ್ಷಪದವಕ್ಕು-ಜ್ಞಾನಿ ತಾ
ನಿಮ್ಮನದೆ ಕೆಡುಗು ಸರ್ವಜ್ಞ

ಚಂಚಲತೆಯಿಲ್ಲದ/ಚಂಚಲಗೊಂಡ ಮನಸ್ಸಿನಿಂದ ಉಂಟಾಗುವ ಪರಿಣಾಮಗಳನ್ನು ಹೇಳಲಾಗಿದೆ.

(ಒಮ್ಮನ=ಒಂದು+ಮನ ; ಒಮ್ಮನದೆ=ಚಂಚಲತೆಯಿಲ್ಲದೆ ಅಂದರೆ ಅತ್ತಿತ್ತ ತುಯ್ದಾಡದೆ ಮನಸ್ಸಿನಲ್ಲಿ ತಳೆಯುವ ಒಂದೇ ನಿಲುವಿನಿಂದ ; ಬಿತ್ತು+ಅಕ್ಕು ; ಬಿತ್ತು=ಬೀಜ ; ಅಕ್ಕು=ಆಗುವುದು ; ಒಮ್ಮನದೆ ಬಿತ್ತಕ್ಕು=ಬೀಜವು ಮೊಳಕೆಯೊಡೆದು ಸಸಿಯಾಗಿ ಗಿಡವಾಗಿ ಮರವಾಗಿ ಬೆಳೆದು ಹೂಹಣ್ಣುಗಳನ್ನು ನೀಡುವಂತೆ ಒಂದೇ ಮನಸ್ಸಿನಿಂದ ಕಯ್ಗೊಂಡ ಯಾವುದೇ ಕೆಲಸ ಚೆನ್ನಾಗಿ ಆಗುತ್ತದೆ ; ಇಮ್ಮನ=ಎರಡು+ಮನ ; ಇಮ್ಮನ=ಮಾಡುವುದೋ/ಬೇಡವೋ ಎಂಬ ತೊಳಲಾಟದಿಂದ ಕೂಡಿದ ಚಂಚಲ ಮನಸ್ಸು ; ಜಳ್ಳು+ಅಕ್ಕು ; ಜಳ್ಳು=ಒಳಗಡೆ ತಿರುಳಿಲ್ಲದ ಬೀಜ ; ಇಮ್ಮನದೆ ಜಳ್ಳಕ್ಕು=ಚಂಚಲವಾದ ಮನಸ್ಸಿನಿಂದ ಕಯ್ಗೊಂಡ ಯಾವುದೇ ಕೆಲಸ ಕೆಡುತ್ತದೆ ; ಮೋಕ್ಶಪದವು+ಅಕ್ಕು ; ಮೋಕ್ಷ =ಹುಟ್ಟುಬದುಕುಸಾವುಗಳೆಂಬ ಚಕ್ರದಿಂದ ಬಿಡುಗಡೆಯನ್ನು/ಮುಕ್ತಿಯನ್ನು ಹೊಂದುತ್ತದೆ ಎಂಬ ನಂಬಿಕೆ ; ಪದ=ನೆಲೆ/ಜಾಗ ; ಜ್ಞಾನಿ=ಅರಿವುಳ್ಳವನು/ತಿಳುವಳಿಕೆಯುಳ್ಳವನು ; ತಾನು+ಇಮ್ಮನದೆ ; ತಾನು=ಅವನು ; ಜ್ಞಾನಿ ತಾ ಇಮ್ಮನದೆ ಕೆಡುಗು=ಅರಿವಿದ್ದವನು ಕೂಡ ಒಮ್ಮೊಮ್ಮೆ ಚಂಚಲಮನಕ್ಕೆ ಒಳಗಾದಾಗ ಹಾಳಾಗುತ್ತಾನೆ ; ಕೆಡುಗು=ನಾಶವಾಗುವುದು/ಹಾಳಾಗುವುದು)

45)   ಪಾಪವೆಂಬುದಕೆ ತಿಳಿ ಕೋಪವೇ ನೆಲಗಟ್ಟು
ಕೂಪದೊಳು ನೇಣು ಹರಿದಂತೆ-ನರಕಕ್ಕೆ
ಕೋಪಿ ತಾನಿಳಿವ ಸರ್ವಜ್ಞ

ಮನದೊಳಗೆ ಕೆರಳುವ ಕೋಪವನ್ನು ಹತೋಟಿಯಲ್ಲಿಡದಿದ್ದರೆ ಉಂಟಾಗುವ ಹಾನಿಯನ್ನು ಹೇಳಲಾಗಿದೆ.

( ಪಾಪ+ಎಂಬುದಕೆ ; ಪಾಪ=ಇತರರಿಗೆ ಮತ್ತು ಸಮಾಜಕ್ಕೆ ಮಾಡುವ ಕೇಡಿನ ಕೆಲಸ ; ಎಂಬುದಕೆ=ಎನ್ನುವುದಕ್ಕೆ ;  ತಿಳಿ=ಅರಿತುಕೊ ; ನೆಲಗಟ್ಟು=ನೆಲ+ಕಟ್ಟು ; ನೆಲಗಟ್ಟು=ತಳಹದಿ/ಅಡಿಪಾಯ ; ಕೋಪವೇ ನೆಲಗಟ್ಟು=ಕೋಪದಿಂದ ಕೆರಳಿ ಮಯ್ ಮನಗಳ ಮೇಲಣ ಹತೋಟಿಯನ್ನು ಕಳೆದುಕೊಂಡು ಆಡುವ ನುಡಿ ಮತ್ತು ಮಾಡುವ ಕೆಲಸಗಳೇ ಪಾಪಕಾರ‍್ಯಗಳಿಗೆ ಮೂಲಕಾರಣ ; ಕೂಪದ+ಒಳು ; ಕೂಪ=ಹಳ್ಳ/ಬಾವಿ/ಗುಳಿ ; ಒಳು=ಅಲ್ಲಿ/ಒಳಗೆ ; ನೇಣು=ಬಿಂದಿಗೆ/ಕೊಡದ ಕೊರಳನ್ನು ಬಿಗಿದು ಕಟ್ಟಿರುವ ಹಗ್ಗದ ಕುಣಿಕೆ ; ಹರಿದ+ಅಂತೆ ; ಹರಿದ=ಕಿತ್ತುಹೋದ/ಕಳಚಿಹೋದ ; ಅಂತೆ=ಹಾಗೆ ; ನರಕಕ್ಕೆ=ಬಹುಬಗೆಯ ನೋವುಸಂಕಟಗಳ ಯಾತನೆಗೆ ; ಕೋಪಿ=ಕೋಪಗೊಂಡು ಕೆಟ್ಟಕೆಲಸಗಳನ್ನು ಮಾಡಿದವನು ; ತಾನು+ಇಳಿವ=ಅವನು ಗುರಿಯಾಗುತ್ತಾನೆ/ಒಳಗಾಗುತ್ತಾನೆ)

46)   ತೆಂಗಿಗೂ ಹಿರಿಯರಿಗೂ ಹಂಗು ಮಾಡಲು ಬೇಕು
ತೆಂಗಿನ ಮೊದಲ್ಗೆ ನೀರೆರೆಯೆ-ಕಡೆಯಲಿ
ಹಿಂಗದೆ ಕೊಡುಗು ಸರ್ವಜ್ಞ

ಎಳೆಯದಾಗಿರುವ ತೆಂಗಿನ ಸಸಿಯನ್ನು ಮತ್ತು ಮುಪ್ಪಿನಲ್ಲಿರುವ ಹಿರಿಯರನ್ನು ಒಲವುನಲಿವಿನಿಂದ ಆರಯ್ಕೆ ಮಾಡಬೇಕೆಂಬ ತಿಳುವಳಿಕೆಯನ್ನು ನೀಡಲಾಗಿದೆ .

( ತೆಂಗು=ನೆಟ್ಟ ಸಸಿಯನ್ನು ಅಯ್ದಾರು ವರುಶಗಳ ಕಾಲ ಚೆನ್ನಾಗಿ ನೋಡಿಕೊಂಡರೆ , ಮುಂದೆ ನೂರು ವರುಶಗಳ ಕಾಲ ಬೆಳೆ ಕೊಡುವ ಮರ ; ಹಿರಿಯರು=ನಮ್ಮ ಹುಟ್ಟಿಗೆ ಮತ್ತು ಬದುಕು ರೂಪುಗೊಳ್ಳುವುದಕ್ಕೆ ತಮ್ಮ ಮಯ್-ಮನಗಳ ಕಸುವನ್ನೆಲ್ಲಾ ನೀಡಿ , ಈಗ ಮುಪ್ಪಿನಲ್ಲಿರುವ ತಂದೆತಾಯಿ/ನಮ್ಮನ್ನು ಬೆಳೆಸಿದ ವ್ಯಕ್ತಿಗಳು ; ಹಂಗು=ನೆರವು/ಸಹಾಯ/ಉಪಚಾರ/ಸೇವೆ ; ಹಂಗು ಮಾಡಲು ಬೇಕು=ತೆಂಗಿನ ಸಸಿಯು ಮರವಾಗಿ ಬೆಳೆಯಲು ಮತ್ತು  ಹಿರಿಯರು ಮುಪ್ಪಿನಲ್ಲಿ ನೆಮ್ಮದಿಯಿಂದ ಇರಲು ಬೇಕಾದ ಆರಯ್ಕೆಯನ್ನು ಮಾಡಬೇಕು  ; ಮೊದಲ್ಗೆ=ಮೊದಲಿನಲ್ಲಿ ಅಂದರೆ ತೆಂಗು ಸಸಿಯಾಗಿದ್ದಾಗ ; ನೀರು+ಎರೆಯೆ ; ಎರೆ=ಸುರಿ/ಹಾಕು ;  ಕಡೆಯಲಿ=ಕಡೆಯಲ್ಲಿ/ಅನಂತರ ; ಹಿಂಗು=ಕಡಿಮೆಯಾಗು/ಹಾಳಾಗು/ಕೆಡು ; ಕೊಡುಗು=ಕೊಡುತ್ತದೆ/ನೀಡುತ್ತದೆ ; ಹಿಂಗದೆ ಕೊಡುಗು=ತೆಂಗಿನ ಮರವು ನಿರಂತರವಾಗಿ ಬೆಳೆಯನ್ನು ನೀಡುತ್ತದೆ/ಹಿರಿಯರ ಸೇವೆಯಿಂದ ಮನಸ್ಸಿಗೆ ನೆಮ್ಮದಿಯು ದೊರಕುತ್ತದೆ)

47)   ಎದ್ದೆದ್ದು ಮಾತಾಡದಿರು ಎದ್ದೆದ್ದು ನಿಲ್ಲದಿರು
ಇದ್ದ ಮಾನಸರ ಜರಿಯದಿರು-ಓಲಗದೊ
ಳಿದ್ದನಿಸು ಹೊತ್ತು ಸರ್ವಜ್ಞ

ಜನಸಮುದಾಯದ ಕೂಟ/ಗೊಟ್ಟಿಯ ಮಾತುಕತೆಗಳಲ್ಲಿ ಪಾಲ್ಗೊಂಡಾಗ ವ್ಯಕ್ತಿಯ ಸಾಮಾಜಿಕ ನಡೆನುಡಿಗಳು ಹೇಗಿರಬಾರದೆಂಬುದನ್ನು ಹೇಳಲಾಗಿದೆ.

(ಎದ್ದು+ಎದ್ದು ; ಮಾತಾಡದೆ+ಇರು ; ನಿಲ್ಲದೆ+ಇರು ; ಇದ್ದ=ಇರುವ ; ಮಾನಸರ=ವ್ಯಕ್ತಿಗಳನ್ನು/ಜನರನ್ನು ; ಜರಿಯದೆ+ಇರು ; ಜರಿ=ನಿಂದಿಸು/ತೆಗಳು/ಅಲ್ಲಗಳೆ ; ಓಲಗದ+ಒಳು+ಇದ್ದ+ಅನಿಸು ; ಓಲಗ=ಸಬೆ/ಸಮಾರಂಬ/ಕೂಟ/ಗೊಟ್ಟಿ ; ಒಳು=ಅಲ್ಲಿ ; ಅನಿಸು=ಅಶ್ಟು ; ಹೊತ್ತು=ಕಾಲ/ಸಮಯ/ವೇಳೆ)

48)   ಆರೈದು ನಡೆವವನು ಆರೈದು ನುಡಿವವನು
ಆರೈದು ಅಡಿಯನಿಡುವವನು-ಲೋಕಕ್ಕೆ
ಆರಾಧ್ಯನಕ್ಕು ಸರ್ವಜ್ಞ

ಯಾವುದೇ ಒಂದು ಮಾತನಾಡುವ / ಕೆಲಸವನ್ನು ಕಯ್ಗೊಳ್ಳುವ ಮೊದಲು ಚೆನ್ನಾಗಿ ಆಲೋಚಿಸಿ ಮುನ್ನಡೆಯುವವನು ಸಮಾಜದಲ್ಲಿ ಎಲ್ಲರಿಂದ ಒಲವು ನಲಿವು ಮತ್ತು ಮನ್ನಣೆಯನ್ನು ಪಡೆಯುತ್ತಾನೆ ಎಂಬುದನ್ನು ಹೇಳಲಾಗಿದೆ .

(ಆರೈದು=ಆರಯ್+ದು ; ಆರಯ್=ಯಾವುದೇ ಒಂದು ಸಂಗತಿಯಿಂದ/ಕೆಲಸದಿಂದ ಉಂಟಾಗಬಹುದಾದ ಒಳಿತು-ಕೆಡುಕುಗಳನ್ನು ಒರೆಹಚ್ಚಿನೋಡಿ ಇಲ್ಲವೇ ಸರಿ/ತಪ್ಪುಗಳನ್ನು ತಿಳಿದುನೋಡಿ ಒಳ್ಳೆಯ ನಿಲುವನ್ನು ತೆಗೆದುಕೊಳ್ಳುವುದು ; ನಡೆವವನು=ಕೆಲಸಗಳನ್ನು ಮಾಡುವವನು ; ನುಡಿವವನು=ಮಾತನಾಡುವವನು ; ಅಡಿಯನು+ಇಡುವವನು ; ಅಡಿ=ಹೆಜ್ಜೆ/ಪಾದ ; ಅಡಿಯನಿಡುವವನು=ಕೆಲಸದಲ್ಲಿ/ಮಾತಿನಲ್ಲಿ ತೊಡಗುವವನು ; ಆರಾಧ್ಯನು+ಅಕ್ಕು ; ಆರಾಧ್ಯ=ಪೂಜಿತ ವ್ಯಕ್ತಿ/ಮನ್ನಣೆಯನ್ನು ಪಡೆದ ವ್ಯಕ್ತಿ ; ಅಕ್ಕು=ಆಗುವನು)

49)   ನರಳುವಗೆ ಕಡುರೋಗ ಮೊರೆವಂಗೆ ರಾಗವು
ಬರೆವಂಗೆ ಓದು ಬರುವಂತೆ-ಸಾಧಿಪಂಗೆ
ಬರದುದೊಂದುಂಟೆ ಸರ್ವಜ್ಞ

ಜೀವನದಲ್ಲಿ ಉಂಟಾಗುವ ಒಳಿತುಕೆಡುಕು / ಏಳುಬೀಳುಗಳಿಗೆ  ನಮ್ಮ ಮಯ್ ಮನಗಳಲ್ಲಿ ತುಡಿಯುವ ಮಿಡಿತಗಳೇ ಕಾರಣವೆಂಬುದನ್ನು ಹೇಳಲಾಗಿದೆ.

(ನರಳುವಗೆ=ಮನಸ್ಸಿನಲ್ಲಿ ಯಾವಾಗಲೂ ಒಂದಲ್ಲ ಒಂದು ಬಗೆಯ ಆತಂಕ/ಸಂಕಟ/ಹೆದರಿಕೆ/ಹಿಂಜರಿಕೆಯಿಂದ ಒದ್ದಾಡುವವನಿಗೆ ;  ಕಡು=ಹೆಚ್ಚಿನ/ಅತಿಯಾದ/ದೊಡ್ಡದಾದ ; ಕಡುರೋಗ=ಕೆಟ್ಟಕಾಯಿಲೆ/ದೊಡ್ಡರೋಗ ;  ಮೊರೆವಂಗೆ=ಉಲ್ಲಾಸ/ಆನಂದ/ಲವಲವಿಕೆಯಿಂದ ಗುನುಗುತ್ತಿರುವವನಿಗೆ/ಹಾಡುತ್ತಿರುವವನಿಗೆ ; ರಾಗ=ಇಂಪಾದ ದನಿ ; ಬರೆವಂಗೆ=ಬರೆವಣಿಗೆಯನ್ನು ಕಲಿತವನಿಗೆ ; ಓದು ಬರುವಂತೆ=ವಿದ್ಯೆ ಕರಗತವಾಗುವಂತೆ ; ಸಾಧಿಪಂಗೆ=ಕಯ್ಗೊಂಡ ಕೆಲಸವನ್ನು ಮಾಡಿಮುಗಿಸುವ ತನಕ ಪಟ್ಟುಹಿಡಿದು ದುಡಿಯುವವನಿಗೆ ; ಬರದುದು+ಒಂದು+ಉಂಟೆ ; ಬರದುದು=ದೊರೆಯದಿರುವುದು ; ಒಂದು=ಯಾವುದಾದರೂ ; ಉಂಟೆ=ಇದೆಯೇ ? ; ಬರದುದೊಂದುಂಟೆ=ದೊರೆಯದಿರುವುದು ಯಾವುದೂ ಇಲ್ಲ ಎಂದರೆ ಬಯಸಿದ್ದೆಲ್ಲವೂ ದೊರೆಯುತ್ತದೆ/ಕಯ್ಗೊಂಡ ಕೆಲಸಗಳೆಲ್ಲವೂ ಈಡೇರುತ್ತವೆ)

50)    ಇದ್ದಲ್ಲಿ ಸಲುವ ಹೋಗಿದ್ದಲ್ಲಿಯೂ ಸಲುವ
ವಿದ್ಯವ ಬಲ್ಲ ಕಡುಜಾಣ-ಗಿರಿಯ ಮೇ
ಲಿದ್ದರೂ ಸಲುವ ಸರ್ವಜ್ಞ

ಒಳ್ಳೆಯ ಅರಿವನ್ನು ಪಡೆದುಕೊಂಡು ಚೆನ್ನಾಗಿ ಕೆಲಸವನ್ನು ಮಾಡುವ ಕುಶಲತೆಯುಳ್ಳ ವ್ಯಕ್ತಿಯು ಎಲ್ಲಾ ಕಡೆಗಳಲ್ಲಿಯೂ ಮನ್ನಣೆಗೆ ಪಾತ್ರನಾಗುತ್ತಾನೆ ಎಂಬುದನ್ನು ಹೇಳಲಾಗಿದೆ .

( ಇದ್ದ+ಅಲ್ಲಿ ; ಇದ್ದ=ಇರುವ ; ಇದ್ದಲ್ಲಿ=ಇರುವ ಜಾಗ/ಊರು/ನೆಲೆಯಲ್ಲಿ ; ಸಲುವ=ಎಲ್ಲರಿಂದಲೂ ಮನ್ನಣೆಯನ್ನು ಪಡೆಯುತ್ತಾನೆ/ಎಲ್ಲರಿಗೂ ಬೇಕಾದವನಾಗುತ್ತಾನೆ ; ಹೋಗಿ+ಇದ್ದ+ಅಲ್ಲಿಯೂ ; ಹೋಗಿದ್ದಲ್ಲಿಯೂ=ಇರುವ ಎಡೆಯಿಂದ ಮತ್ತೊಂದು ಕಡೆಗೆ ಹೋದರೂ ; ವಿದ್ಯೆ=ಯಾವುದೇ ಒಂದು ಸಂಗತಿಯಲ್ಲಿ ಒಳ್ಳೆಯ ತಿಳುವಳಿಕೆ ಮತ್ತು ಕೆಲಸ ಮಾಡುವ ಕುಶಲತೆ ; ಬಲ್ಲ=ತಿಳಿದಿರುವ/ಹೊಂದಿರುವ ; ಕಡು=ಹೆಚ್ಚಿನ/ಬಹಳ ; ಜಾಣ=ಚತುರ/ವಿವೇಕಿ ; ಗಿರಿ=ಬೆಟ್ಟ/ಪರ‍್ವತ ; ಮೇಲೆ+ಇದ್ದರೂ ; ಗಿರಿಯ ಮೇಲಿದ್ದರೂ=ಜಗತ್ತಿನಲ್ಲಿ ಯಾವ ಎಡೆಯಲ್ಲೇ ಇದ್ದರೂ/ಎಲ್ಲಿಗೆ ಹೋದರೂ)

( ಚಿತ್ರಸೆಲೆ: wikipedia.org )

2 ಅನಿಸಿಕೆಗಳು

  1. ಚೆನ್ನಾಗಿದೆ. ಬಹಳ ಇಷ್ಟವಾಯಿತು. ಆದರೆ, ಒಂದು ಕೋರಿಕೆ. ಸರ‍್ವಜ್ನ ವಚನಗಳ ಹುರುಳು ಎಂಬ ಶಿರೋನಾಮೆಯನ್ನು, ದಯವಿಟ್ಟು ಸರ್ವಜ್ಞ ವಚನಗಳ ಹುರುಳು ಬದಲಾಯಿಸುತ್ತೀರಾ.?

  2. ಮಾನ್ಯಶ್ರೀ ಕಿಟ್ಟಿ ಅವರೇ ,
    ಸರ್ವಜ್ಞ ಮತ್ತು ಸರ್ವಜ್ನ ಎಂಬ ಎರಡು ಪದಗಳನ್ನು ಎತ್ತರದ ದನಿಯಲ್ಲಿ ಉಚ್ಚರಿಸಿ ನೋಡಿ . ಅವೆರಡರಲ್ಲೂ ಯಾವುದೇ ವ್ಯತ್ಯಾಸ ಕೇಳಿಬರುವುದಿಲ್ಲ . ಕನ್ನಡ ಪದಗಳನ್ನು ಅವುಗಳ ಉಚ್ಚರಿಸುವಂತೆಯೇ ಬರೆಯ ತೊಡಗಿದರೆ , ಈಗಿರುವ ಅನೇಕ ಲಿಪಿಗಳ ಹೊರೆಯಿಂದ ಕನ್ನಡಿಗರು ಪಾರಾಗಬಹುದೆಂಬುದನ್ನು ಶ್ರೀ ಡಿ.ಎನ್.ಶಂಕರಬಟ್ಟರು ತಮ್ಮ ಬರಹಗಳಿಂದ ತೋರಿಸಿಕೊಟ್ಟಿದ್ದಾರೆ . ಆದುದರಿಂದ ‘ ಞ ‘ ಲಿಪಿಯನ್ನು ಬಿಟ್ಟು , ಅದರ ಜಾಗದಲ್ಲಿ ‘ ನ ‘ ಲಿಪಿಯನ್ನು ಬಳಸಿದ್ದೇನೆ .
    ಸಿ ಪಿ ನಾಗರಾಜ

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.