ಇಗೊ ಬಂದಿದೆ ಹೊಸ ಪಿಗೊ

ಜಯತೀರ‍್ತ ನಾಡಗವ್ಡ.

front

ಈ ವರುಶ ಹೊಸ ಬಂಡಿಗಳ ವರುಶವೆಂದೇ ಕರೆಯಬಹುದು. ಈ ಮೊದಲಿನ ಬರಹವೊಂದರಲ್ಲಿ ಹೇಳಿದಂತೆ ಒಂದರ ಹಿಂದೊಂದು ಬಂಡಿಗಳು ಸಾಲಾಗಿ ಬಿಡುಗಡೆಯಾಗುತ್ತಲೇ ಇವೆ. ಕಳೆದ ಬುದವಾರ ಸೆಪ್ಟೆಂಬರ್ 23 ರಂದು ಅತ್ತ ಅಗ್ಗದ ಕ್ವಿಡ್ ಕಾರು ಬಿಡುಗಡೆಗೊಳ್ಳಲಿರುವ ಗಳಿಗೆಯ ಎಣಿಕೆ ಹಾಕುತ್ತಿದ್ದರೆ ಇತ್ತ ಹೊಸ ಮೊಗ ತೊಟ್ಟ ಎರಡನೇ ತಲೆಮಾರಿನ ಪೋರ‍್ಡ್ ಪಿಗೊ (Ford Figo) ದೆಹಲಿಯಲ್ಲಿ ಸುದ್ದಿಹಾಳೆ ಮತ್ತು ಮಾದ್ಯಮದ ಮಂದಿಯ ಮುಂದೆ ಪಿಳಿ ಪಿಳಿ ಕಣ್ಣು ಬಿಡುತ್ತಿತ್ತು. ಸರಿ ಸುಮಾರು ಒಂದು ತಿಂಗಳ ಹಿಂದೆ ಪಿಗೊ ಅಸ್ಪಾಯರ್ (Figo Aspire) ಬೀದಿಗಿಳಿಸಿದ್ದ ಪೋರ‍್ಡ್ , ಅದೇ ಅಸ್ಪಾಯರ್‌ನ ಕಿರು ಹಿಂಗದ (hatchback) ಮಾದರಿಯನ್ನು ಇದೀಗ ಹೊರ ತಂದಿದೆ.

ಇತ್ತಿಚೀನ ದಿನಗಳಲ್ಲಿ ಪೋರ‍್ಡ್ ಒಳ್ಳೊಳ್ಳೆ ಬಂಡಿಗಳನ್ನು ಬಾರತದಲ್ಲಿ ಹೊರತರುತ್ತ ಹೆಸರುವಾಸಿಯಾಗಿದೆ. ಸಾಟಿಯಿಲ್ಲದ ಪರಿಚೆಗಳ ಮೂಲಕ ಬಿಡುಗಡೆಗೊಂಡ ಅಸ್ಪಾಯರ್ ಮೊದಲ ತಿಂಗಳಲ್ಲೇ ಕಿರು ಸೇಡಾನ್ ಮಾದರಿಗಳಲ್ಲಿ ಎರಡನೇ ಸ್ತಾನಕ್ಕೇರಿದೆ.  ಪಿಗೊ ಅಸ್ಪಾಯರ್ ಬೆನ್ನಲ್ಲೇ ಹೊಸದಾಗಿಸಿದ ಪಿಗೊ ಬಂದಿದ್ದು ಹಬ್ಬದ ದಿನಗಳಲ್ಲಿ ಮಾರಾಟವನ್ನು ಹೆಚ್ಚಿಸುವಲ್ಲಿ ನೆರವಾಗಬಹುದು. ಈ ಮೂಲಕ ಹೆಚ್ಚಿನ ಮಾರುಕಟ್ಟೆಯನ್ನು ಕಬಳಿಸುವ ತವಕದಲ್ಲಿದೆ ಪೋರ‍್ಡ್.

ಆರು ವರುಶಗಳ ಹಿಂದೆ ಅಂದರೆ 2009ರ ಸೆಪ್ಟೆಂಬರ್ 23 ರಂದು ಮೊದಲ ತಲೆಮಾರಿನ ಪಿಗೊ ಬಾರತದಲ್ಲಿ ಕಾಣಿಸಿಕೊಂಡಿತ್ತು. ಹೊಸ ಪೀಳಿಗೆಯ ಪಿಗೊ ಕಾರಿಗೂ ಕೂಡ ಅದೇ ದಿನಾಂಕವನ್ನೇ ಮುಹೂರ‍್ತವಾಗಿ ಆಯ್ದುಕೊಂಡಿದ್ದು ವಿಶೇಶ. ಕಳೆದ 5-6 ವರುಶಗಳಲ್ಲಿ ಮೂರು ಲಕ್ಶಕ್ಕೂ ಹೆಚ್ಚು ಪಿಗೊ ಬಂಡಿಗಳು ಬಾರತದ ಹಾದಿಬೀದಿಗಳಲ್ಲಿ ಸಾಗುತ್ತಿವೆ. ಅಲ್ಲದೇ ಹೊರ ದೇಶಗಳಿಗೂ ಕಳುಹಿಸಲ್ಪಟ್ಟಿವೆ. ಈ ಗೆಲುವನ್ನೇ ಮರುಕಳಿಸುವ ಗುರಿ ನಮ್ಮದು ಎಂದು ಪೋರ‍್ಡ್ ಇಂಡಿಯಾದ ಮೇಲಾಳು ನಯ್ಜೆಲ್ ಹ್ಯಾರಿಸ್ (Nigel Harris) ಬಿಡುಗಡೆಯ ಸಮಾರಂಬದಲ್ಲಿ ಹೇಳಿಕೊಂಡಿದ್ದಾರೆ. ಹೊಸ ತಲೆಮಾರಿನ ಪಿಗೊ ಮಯ್ಮಾಟ ಹೇಗಿದೆ? ಮಯ್ಲಿಯೋಟ ಎಶ್ಟು? ಬೆಲೆ ಮೂಲಕ ಎದುರಾಳಿಗಳ ನಿದ್ದೆಗೆಡಸಲಿದೆಯೇ? ಈ ಎಲ್ಲ ಕೇಳ್ವಿಗಳ ಉತ್ತರ ಕೆಳಗಿನ ವಿವರದಲ್ಲಿ ತಿಳಿದುಕೊಳ್ಳಬಹುದು.

ಬಿಣಿಗೆ (Engine):

ಪಿಗೊ ಬಂಡಿ ಒಟ್ಟು ಮೂರು ಬಗೆಯ ಬಿಣಿಗೆಯಲ್ಲಿ ತಯಾರುಗೊಂಡಿದೆ. ಅಸ್ಪಾಯರ್ ಬಂಡಿಯಲ್ಲಿರುವ ಅದೇ ಬಿಣಿಗೆಗಳನ್ನು ಇದರಲ್ಲೂ ಉಳಿಸಿಕೊಳ್ಳಲಾಗಿದೆ. ಇಂದಿನ ಬಹುತೇಕ ಬಂಡಿ ಕೂಟಗಳು ಇದನ್ನೇ ಮುಂದುವರೆಸಿಕೊಂಡು ಬರುತ್ತಿವೆ. ಸೇಡಾನ್, ಕಿರು ಹಿಂಗದ ಎರಡು ಮಾದರಿಗಳನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿರುತ್ತಾರೆ ಆದರೆ ಎರಡರಲ್ಲೂ ಅದೇ ಬಿಣಿಗೆಗಳ ಆಯ್ಕೆ ನೀಡಿರುತ್ತಾರೆ. ಎತ್ತುಗೆಗೆ: ಸುಜುಕಿರವರ ಸ್ವಿಪ್ಟ್ (Swift) ಮತ್ತು ಸ್ವಿಪ್ಟ್ ಡಿಜಾಯರ್ (Swift Dzire), ಟಾಟಾ ಬೋಲ್ಟ್ ಮತ್ತು ಜೇಸ್ಟ್ (Bolt & Zest), ಟೊಯೊಟಾ ಲಿವಾ (Liva) ಮತ್ತು ಲಿವಾ ಇಟಿಯೊಸ್ (Liva Etios). ಇದನ್ನೇ ಪೋರ‍್ಡ್ ಕೂಡ ಮುಂದುವರೆಸಿದೆ.

ಪೆಟ್ರೋಲ್ ಮಾದರಿಗಳಿಗಾಗಿ ಹೊಚ್ಚ ಹೊಸ ಟಿಆಯ್-ವಿಸಿಟಿ(Ti-VCT) ಬಿಣಿಗೆಯು 87 ಹಾಗೂ 110 ಕುದುರೆಬಲ ಹೀಗೆ ಎರಡು ಕಸುವಿನ ಆಯ್ಕೆಗಳಲ್ಲಿ ಇರಲಿದೆ. ಇದರ ಮಯ್ಲಿಯೋಟ(Mileage) ಲೀಟರ್‌ಗೆ 18.1 ಕಿಲೋಮೀಟರ‍್. ಡಿಸೇಲ್ ಉರುವಲಿನ ಟಿಡಿಸಿಆಯ್(TDCI) ಬಿಣಿಗೆ 100 ಕುದುರೆಬಲದ ಕಸುವಿನದಾಗಿದೆ. ಲೀಟರ್‌ವೊಂದಕ್ಕೆ 25.83 ಕಿಲೋಮೀಟರ್ ಓಡುವ ಇದು ಪೋರ‍್ಡ್‌ಕೂಟದವರು ಬೆಳೆಸಿದ ಒಳ್ಳೆಯ ಬಿಣಿಗೆಗಳಲ್ಲೊಂದು.

table1
ಸಾಗಣಿ (Transmission):

ಪಿಗೊ ಬಂಡಿಯ ಡಿಸೇಲ್ ಮತ್ತು ಪೆಟ್ರೋಲ್ ಮಾದರಿಗಳಲ್ಲಿ 5-ವೇಗದ ಓಡಿಸುಗನ ಹಿಡಿತದ ಸಾಗಣಿ ಅಳವಡಿಸಿದ್ದಾರೆ.  ಪೆಟ್ರ‍ೋಲ್ ಬಂಡಿಯ ಹಿರಿಯ ಮಾದರಿಯೊಂದರಲ್ಲಿ 6-ವೇಗದ ತನ್ನಿಡಿತದ ಸಾಗಣಿಯ ಆಯ್ಕೆಯಿದೆ. ಡಿಸಿಟಿ(DCT) ಚಳಕದ ಸುದಾರಿತ ಹಲ್ಲುಗಾಲಿಯನ್ನು(Gear box) ಈ ತನ್ನಿಡಿತದ ಸಾಗಣಿಯ ಬಂಡಿಯಲ್ಲಿ ಕೊಡಲಾಗಿದೆ. ಪೋಕ್ಸ್‌ವ್ಯಾಗನ್ ಪೊಲೊ ಜಿಟಿ ಟಿಎಸ್‌ಆಯ್ (Polo GT TSI) ಬಂಡಿಯ ಬಿಟ್ಟರೆ ಇಶ್ಟು ಕಡಿಮೆಯ ಬೆಲೆಯ ಕಾರುಗಳಲ್ಲಿ ಡಿಸಿಟಿ ಚಳಕದ ಹಲ್ಲುಗಾಲಿ ಸಿಗುತ್ತಿರುವುದು ಪೋರ‍್ಡ್ ಪಿಗೊದಲ್ಲಿ ಮಾತ್ರ.

ಹೊರನೋಟ:

Figo

ಹಳೆಯ ಪಿಗೊಗಿಂತ ಹೊಸ ಪಿಗೊದ ಮಯ್ಮಾಟ ಸಾಕಶ್ಟು ಬೇರೆಯಾಗಿದೆ. ಉದ್ದ, ಅಗಲ, ಎತ್ತರ ಮತ್ತು ಗಾಲಿಗಳ ನಡುವಿರುವ ದೂರ ಹೀಗೆ ಎಲ್ಲದರಲ್ಲೂ ಹೊಸ ಪಿಗೊ ದೊಡ್ಡದಾಗಿದೆ. ಸರಕು ಚಾಚಿಕೆಯಲ್ಲಿ ಹಳೆಯ ಪಿಗೊಗಿಂತ ತುಸು ಕಡಿಮೆಯಿದ್ದದ್ದು ಬಿಟ್ಟರೆ ಹೊಸ ಪಿಗೊ ಗಟ್ಟಿಮುಟ್ಟಾಗಿದೆ. ಅಸ್ಪಾಯರ್ ಕಾರಿನ ಅಡಿಕಟ್ಟನ್ನೇ ಉಳಿಸಿಕೊಂಡು ಹೊಸ ತಲೆಮಾರಿನ ಪಿಗೊ ತಯಾರಿಸಿದ್ದು ನೋಡುಗರಿಗೆ ಸೊಗಸಾಗಿ ಕಾಣುವಂತೆ ಮಾಡಿದೆ.

table2

ಇಂದಿನ ಹೆಚ್ಚಿನ ತಯಾರಕರು ತಾವು ಬಿಡುಗಡೆ ಮಾಡಿದ್ದ ಕಾರುಗಳಿಗೆ 2-3 ವರುಶಗಳ ನಂತರ ಹೊಸ ಮೊಗ ತೊಡಿಸಿ ಮರು ಬಿಡುಗಡೆ ಮಾಡಿರುತ್ತಾರೆ. ಇದರಲ್ಲಿ ಕೇವಲ ಮುಂದೀಪ (Head lamp), ಹಿಂದೀಪ (Tail lamp) ಇಲ್ಲವೇ ಮುನ್ಕಂಬಿ ತೆರೆ (Front Grill) ಇಂತಹ ಚಿಕ್ಕ ಪುಟ್ಟ ಬದಲಾವಣೆ ಮಾಡಿರುತ್ತಾರೆ. ಎರಡನೇಯ ತಲೆಮಾರಿನ ಪಿಗೊ ಕೇವಲ ಹೊಸ ಮೊಗ ತೊಟ್ಟು ಬಂದಿಲ್ಲ. ಇದು ಹಲವು ರೀತಿಯಲ್ಲಿ ಬದಲಾಗಿದೆ.

ಪೋರ‍್ಡ್ ಪಿಗೊ 7 ಚೆಂದ ಚಿತ್ತಾರದ ಬಣ್ಣಗಳಲ್ಲಿ ಬರುತ್ತಿದೆ.  ಬಿಳಿ, ಕಪ್ಪು, ಕೆಂಪು, ಕಡು ನೀಲಿ, ಬೆಳ್ಳಿ, ಕಂದು ಮತ್ತು ತಾಮ್ರದಂತೆ ಹೊಳೆಯುವ ಕೇಸರಿ ಬಣ್ಣಗಳಲ್ಲಿ ಪಿಗೋ ಬಲು ಅಂದವಾಗಿ ಕಾಣುತ್ತದೆ.

ಒಳನೋಟ:

ದಿಟ್ಟ ಹೊರಮಯ್ ಹೊಂದಿರುವ ಪಿಗೊ ಕಾರಿನಲ್ಲಿ ಒಳಮಯ್ ಕೂಡ ಅಶ್ಟೇ ಹದವಾಗಿಸಲಾಗಿದೆ. ಸಿಂಕ್ (SYNC) ಹೆಸರಿನ ತಿಳಿನಲಿ ಏರ‍್ಪಾಟು (Infotainment system) ಬಂಡಿಯಲ್ಲಿ ನೀಡಿದ್ದು ವಿಶೇಶ. ಓಡಿಸುಗರಿಗೆ ಇದು ಹೆಚ್ಚು ಹಿಡಿಸಲಿದೆ. ನಿಮ್ಮ ಚೂಟಿಯುಲಿಯನ್ನು ಇದಕ್ಕೆ ಜೋಡಿಸಿದರೆ ಸಾಕು, ತೋರುಮಣೆಯೇ ನಿಮ್ಮ ಚೂಟಿಯುಲಿಯಾಗಿ ಮಾರ‍್ಪಡುತ್ತದೆ. ಪಿಗೊ ಅಸ್ಪಾಯರ್ ಬಂಡಿಯನ್ನು ಕೊಂಡಿರುವ ಗೆಳೆಯರೊಬ್ಬರು ಈ ಸಿಂಕ್ ತಿಳಿನಲಿ ಏರ‍್ಪಾಟಿನ ಬಗ್ಗೆ ಬಲು ಮೆಚ್ಚುಗೆಯ ಮಾತನಾಡಿದ್ದಾರೆ. ಇದು ತುಂಬಾ ಗುಣಮಟ್ಟದ್ದು, ಇತರೆ ಹಿಂಗದ ಕಾರುಗಳಲ್ಲಿ ಬರುವಂತದಲ್ಲ. ಅಗ್ಗದ ಬೆಲೆಯ ಕಾರೊಂದರಲ್ಲಿ ಇದನ್ನು ನೀಡಿದ್ದು ಕಂಡಿತವಾಗಿಯೂ ಕೊಳ್ಳುಗರ ಮನಸೂರೆಗೊಳ್ಳಲಿದೆಯಂತೆ.

ಮೊದಲಿನ ಪಿಗೊಗಿಂತ ದೊಡ್ಡದಾಗಿರುವ ಹೊಸ ಪಿಗೊದಲ್ಲಿ ಕಯ್, ಕಾಲು ಮತ್ತು ತಲೆ ಚಾಚಲು ಹೆಚ್ಚಿನ ಜಾಗವಿದೆ. ಓಡಿಸುಗ ಸೇರಿದಂತೆ ಒಟ್ಟು ಅಯ್ವರು ಸಾಗಲು ಇದೊಳ್ಳೆ ಬಂಡಿ. ಮುಂಬಾಗದ ಸರಕು ಗೂಡಿನಲ್ಲಿ (Glove box) ಎರಡು ಬಾಟಲ್ ಸೇರುವೆಗಳನ್ನು ನೀಡಲಾಗಿದೆ. ಹಿಂಬಾಗದಲ್ಲಿ ಕೇವಲ ಒಂದು ಬಾಟಲ್ ಸೇರುವೆ ಅಶ್ಟೇ ನೀಡಿದ್ದು ಹಿಂದೆ ಕೂರುವ ಪಯಣಿಗರಿಗೆ ತುಸು ನಿರಾಶೆಯಾಗಬಹುದು.

ಪೋರ‍್ಡ್ ಮಾಯ್ ಡಾಕ್ (My Dock) ಎಂಬ ಚೂಟಿಯುಲಿ ಗೂಡೊಂದು ಓಡಿಸುಗರಿಗೆ ನೆರವಾಗಲು ತೋರುಮಣೆಯ ಮೇಲ್ಬಾಗದಲ್ಲಿ ಮಾಡಲಾಗಿದೆ. ಇದರಲ್ಲಿ ನಿಮ್ಮ ಚೂಟಿಯುಲಿಯನ್ನು ಬೀಳದಂತೆ ಇಟ್ಟುಕೊಳ್ಳಬಹುದು. ತಮ್ಮ ಚೂಟಿಯುಲಿಯ ತಲುಪುದಾರಿ ಏರ‍್ಪಾಟನ್ನೇ (Navigation System) ಬಳಸಿಕೊಂಡು ಸಾಗುವವರಿಗೆ ಇದು ಬಲು ಸಹಾಯವಾಗಲಿದೆ. ಬಂಡಿಯ ಒಳಬಾಗದಲ್ಲಿ ಕೆಲವೆಡೆ ಬಳಕೆ ಮಾಡಿರುವ ಪ್ಲ್ಯಾಸ್ಟಿಕ್ ಪರವಾಗಿಲ್ಲ ಎನ್ನುವ ಮಟ್ಟಿಗಿದೆ. ಇನ್ನೂ ಕೆಲವೆಡೆ ಪರಿಚೆಗಳನ್ನು ಕಡಿಮೆಗೊಳಿಸಿ ಕೊಳ್ಳುಗರ ಜೇಬಿಗೆ ಕತ್ತರಿ ಬೀಳದಂತೆ ನೋಡಿಕೊಂಡಿದ್ದಾರೆ ಎನ್ನುವುದು ಎದ್ದು ಕಾಣುತ್ತದೆ.
table3

ಪಿಗೊ ಬಂಡಿಯ ಮಗದೊಂದು ವಿಶೇಶವೆಂದರೆ ಅದರರಲ್ಲಿನ ಕಾಪಿನ (safety) ಪರಿಚೆಗಳು. ಕಾಪಿನ ವಿಶಯದಲ್ಲಿ ರಾಜಿಮಾಡಿಕೊಳ್ಳುವ ಮಾತೇ ಇಲ್ಲ ಎನ್ನುತ್ತ ಎದುರಾಳಿಗಳಿಗೆ ಸೆಡ್ಡು ಹೊಡೆದಿದೆ ಪಿಗೊ. ಹವ್ದು ಪಿಗೊ ಬಂಡಿಯ ಎಲ್ಲ ಬಗೆಗಗಳಲ್ಲೂ ಕಡಿಮೆಯೆಂದರೂ 2 ಗಾಳಿಚೀಲ (Airbag) ಮತ್ತು ಇತರೆ ಮೇಲ್ಮಟ್ಟದ ಬಗೆಗಳಲ್ಲಿ ಒಟ್ಟು ಆರು ಗಾಳಿಚೀಲ ಒದಗಿಸಿರುವುದು ಈ ಮಾತನ್ನು ದಿಟವಾಗಿಸಿದೆ.

ಕೆಲವು ಮೇಲ್ಮಟ್ಟದ ಮಾದರಿಗಳಲ್ಲಿ ಸಿಲುಕಿನ ತಡೆತ (ABS) ಮುಂತಾದ ಹೆಚ್ಚಿನ ಕಾಪಿನ ಪರಿಚೆಗಳನ್ನು ಆಯ್ಕೆಯಾಗಿ ಕೊಟ್ಟಿದ್ದಾರೆ.

ಪಯ್ಪೋಟಿ:

ಸುಜುಕಿಯವರ ಸ್ವಿಪ್ಟ್ (Suzuki Swift),  ಹ್ಯುಂಡಾಯ್ ರವರ ಗ್ರ್ಯಾಂಡ್ ಆಯ್-10 (Hyundai Grand i-10) ಗಳಿಗೆ ಹೊಸ ಪಿಗೊ ನೇರಾನೇರ ಎದುರಾಳಿ.  ಎತ್ತರದಲ್ಲಿ ಸ್ವಿಪ್ಟ್ ಗಿಂತ 5 ಮಿಲಿಮೀಟರ್ ಕಿರಿದಾಗಿರುವ ಪಿಗೊ ಅಗಲ, ಉದ್ದ, ಮತ್ತು ಗಾಲಿಗಳ ನಡುವಿನ ದೂರ ಇವುಗಳಲ್ಲಿ ಎದುರಾಳಿಗಳಿಗಿಂತ ಹೆಚ್ಚಿದೆ.  ಗ್ರ್ಯಾಂಡ್ ಆಯ್-10 ಗಿಂತ 9 ಮಿಲಿಮೀಟರ್, ಸ್ವಿಪ್ಟ್ ಗಿಂತ ನಾಲ್ಕು ಮೀಲಿಮೀಟರ್ ಹೆಚ್ಚಿನ ನೆಲತೆರವು ಪಿಗೊವನ್ನು ಮುಂಚೂಣಿ ಸ್ತಾನದಲ್ಲಿರಿಸಿದೆ.

table5

ಪಿಗೊದಲ್ಲಿರುವ ಟಿಆಯ್-ವಿಸಿಟಿ ಪೆಟ್ರೋಲ್ ಬಿಣಿಗೆ ಸ್ವಿಪ್ಟ್, ಆಯ್-10 ಗಳಲ್ಲಿನ ಬಿಣಿಗೆಯಶ್ಟೇ ಅಳತೆಯದ್ದು ಆದರೂ ಅವುಗಳಿಗಿಂತ ಕೊಂಚ ಹೆಚ್ಚಿನ ಕಸುವಿನದ್ದಾಗಿದೆ. 110 ಹೆಚ್‌ಪಿಯ ಇನ್ನೊಂದು ಪೆಟ್ರ‍ೋಲ್ ಬಿಣಿಗೆಯ ಆಯ್ಕೆ ಇತರೆ ಎದುರಾಳಿಗಳಲ್ಲಿ ಕಾಣದು.

table4ಬೆಲೆಯ ವಿಶಯದಲ್ಲೂ ಎದುರಾಳಿಗಳನ್ನು ಬಗ್ಗು ಬಡಿದಿರುವ ಪಿಗೊ, ಸ್ವಿಪ್ಟ್ ಇಲ್ಲವೇ ಆಯ್-10 ಕೊಳ್ಳುಬೇಕೆನ್ನುವವರನ್ನು ತನ್ನತ್ತ ಸೆಳೆದುಕೊಳ್ಳುವುದು ನಿಜ.

ಬೆಲೆ:

ಪೆಟ್ರೋಲ್ ಮಾದರಿ ಆರಂಬಿಕ ಬೆಲೆಯು 4.29 ಲಕ್ಶ ರೂಪಾಯಿಗಳಾಗಿರುತ್ತದೆ. ಪೆಟ್ರ‍ೋಲ್ ಮಾದರಿಯ ಇತರೆ ಬಗೆಗಳಾದ ಅಂಬಿಯಂಟ್ (Ambiente), ಟ್ರೆಂಡ್ (Trend), ಟಯ್ಟಾನಿಯಮ್ (Titanium) ಮತ್ತು ಟಯ್ಟಾನಿಯಮ್ ಪ್ಲಸ್ (Titanium Plus) ಗಳು 4.56, 5, 5.75 ಮತ್ತು 6.40 ಲಕ್ಶ ರೂಪಾಯಿಗಳ ಬೆಲೆ ಹೊಂದಿವೆ. ತನ್ನಿಡಿತದ ಸಾಗಣಿಯ ಪೆಟ್ರೋಲ್ ಬಂಡಿ 6.91 ಲಕ್ಶ ರೂ.ಗಳಲ್ಲಿ ದೊರೆಯಲಿದೆ.

ಡಿಸೇಲ್ ಮಾದರಿ ಬೇಸ್‌ನದ್ದು 5.29 ಲಕ್ಶ ರೂಪಾಯಿಗಳು. ಇದರಲ್ಲಿ ಅಂಬಿಯಂಟ್, ಟ್ರ‍ೆಂಡ್, ಟಯ್ಟಾನಿಯಮ್ ಮತ್ತು ಟಯ್ಟಾನಿಯಮ್ ಪ್ಲಸ್ ಬಗೆಗಳು 5.62, 5.97, 6.72 ಮತ್ತು 7.40 ಲಕ್ಶ ರೂ.ಗಳಲ್ಲಿ ದೊರೆಯಲಿವೆ.  ಇವೆಲ್ಲವೂ ಎಕ್ಸ್ ಶೋರೂಮ್ ದೆಹಲಿಯ ಬೆಲೆಗಳಾಗಿರುತ್ತವೆ.

table6ಬೆಳಗಾವಿ, ಕಲ್ಬುರ‍್ಗಿ, ಬಳ್ಳಾರಿ, ಬೆಂಗಳೂರು ಸೇರಿದಂತೆ ಕರ‍್ನಾಟಕದಲ್ಲಿ ಮಾರಾಟ ಬೆಲೆಯು ಇಂತಿದೆ:  ಪೆಟ್ರೋಲ್ ಬೇಸ್ -4.38, ಅಂಬಿಯಂಟ್ – 4.66, ಟ್ರೆಂಡ್- 5.10, ಟಯ್ಟಾನಿಯಮ್-5.87 ಮತ್ತು ಟಯ್ಟಾನಿಯಮ್ ಪ್ಲಸ್- 6.53 ಲಕ್ಶ ರೂ.ಗಳು. ತನ್ನಿಡಿತದ ಸಾಗಣಿಯ ಪೆಟ್ರ‍ೋಲ್ ಬಂಡಿ 7.05 ಲಕ್ಶಕ್ಕೆ ದೊರೆಯಲಿದೆ.

ಡಿಸೇಲ್ ಬೇಸ್ -5.40, ಅಂಬಿಯಂಟ್ – 5.74, ಟ್ರೆಂಡ್- 6.09, ಟಯ್ಟಾನಿಯಮ್-6.86 ಮತ್ತು ಟಯ್ಟಾನಿಯಮ್ ಪ್ಲಸ್- 7.55 ಲಕ್ಶ.ರೂಗಳು.

ಎಲ್ಲವೂ ಎಕ್ಸ್ ಶೋ ರೂಮ್ ಬೆಲೆಗಳಾಗಿವೆ.  ನೀವು ಬಂಡಿ ಕೊಳ್ಳುವಾಗ ಇದಕ್ಕೆ ರಸ್ತೆ ತೆರಿಗೆ, ಮುನ್ಗಾಪು (insurance), ನೋಂದಾಯಿಸುವಿಕೆ ಬೆಲೆಗಳು ಸೇರಿಸಬೇಕಾಗುತ್ತದೆ. ಇವುಗಳು ಆಯಾ ನಾಡಿನ ತೆರಿಗೆಗೆ ತಕ್ಕಂತೆ ಬದಲಾಗುತ್ತವೆ. ಬಂಡಿ ಕೊಳ್ಳಲು ಆಸಕ್ತಿ ಇದ್ದವರು ಹತ್ತಿರದ ಪೋರ‍್ಡ್ ಮಳಿಗೆಗಳಲ್ಲಿ ವಿಚಾರಿಸಿ ವಿವರ ಪಡೆಯಬಹುದು.

ಮಂದಿಗೆ ಹಿಡಿಸುವಂತೆ ಹಳೆಯ ಪಿಗೊವನ್ನು ತಯಾರಿಸಿ, ಅದನ್ನು ಗೆಲುವಿನ ಕುದುರೆಯನ್ನಾಗಿ ಮಾಡಿದ್ದ ಪೋರ‍್ಡ್ ಇಂಡಿಯಾ ಕೂಟಕ್ಕೆ ಅದನ್ನೇ ಹೊಸ ಪಿಗೊದಲ್ಲಿ ಮರುಕಳಿಸುವಾಸೆ. ಒಳಿತಾಗಲಿ.

(ಮಾಹಿತಿ ಮತ್ತು ತಿಟ್ಟ ಸೆಲೆ: www.india.ford.com, www.autocarindia.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: