ಅವನು ಯಾರು ಬಲ್ಲಿರಾ?

– ಅಜಿತ್ ಕುಲಕರ‍್ಣಿ.

shishunala-sharifa

ಅವರಿವರ ನಡುವಿದ್ದರೂ
ಇರದಂತಿರುವವನು ಅವನು
ಸಾವಿನ ಅಂಚಲಿದ್ದರೂ
ನಗುವವನು ಅವನು
ಮಗುವಿನ ದುಕ್ಕಕೂ ಕೂಡ
ಮರುಗುವವನು ಅವನು

ಅವನು ಯಾರು ಬಲ್ಲಿರಾ?
ಅವನು ಸಂತ
ಅವನ ಅನುಬಾವ ಅನಂತ
ಕುಂತಲ್ಲೆ ಕುಂತಿದ್ದರೂ ಮಹಂತ
ಪ್ರೇಮ ಮಹಲು ಕಟ್ಟುವ ಜಗತ್ತಿನಾದ್ಯಂತ

ಅವನು ನಗುವವರಲ್ಲಿ ನಕ್ಕು
ಅಳುವ ಬರಿಸಬಲ್ಲ
ಅಳುವವರಲ್ಲಿ ಅತ್ತು
ನಗುವ ಉಕ್ಕಿಸಬಲ್ಲ

ಅಲೆಯುತ್ತ ನಡೆಯುವವನು
ಅಲೆಯಾಗಿ ಅಪ್ಪಳಿಸಬಲ್ಲ
ಬೇಡಿಯೇ ತಿನ್ನುವನು
ಬೇಡಿದ ವರಗಳ ನೀಡಬಲ್ಲ

ಅವನ ಕಣ್ಣಲ್ಲಿ ಪಿಚ್ಚು
ಅವನು ಒಂದ್ ಸ್ವಲ್ಪ ಹುಚ್ಚು
ಮನಸು ಮಾನಸ ಸರೋವರ
ಜೋಳಿಗೆಯೊಂದರಲ್ಲಿ ಹಿಟ್ಟು
ಇನ್ನೊಂದರಲಿ ಪುಸ್ತಕದ ಕಟ್ಟು
ಹೀಗೆ ತಿರುಗುವನು ದೇಶಾಂತರ

ಸ್ನಾನವಿಲ್ಲದೆ ಮಾಡುವ ಸಂದ್ಯಾವಂದನೆ
ಸ್ವೀಕರಿಸಲೆಂದು ಸೂರ‍್ಯನೇ ಬಂದನೆ?
ಮಸಣದಲಿ ಕುಂತರವನು ಮಹಾಯೋಗಿ
ಅವನ ಹೊಳಪಿಗೆ ಇರುಳಲಿ ಬೆಳ್ಗದಿರನೂ ಮಂಕಾದನೆ?

ಅವನು ನೂರೇಡುಗಳ ಹಿಂದೆ
ಆಗಿಹೋದವನು
ಹತ್ತೇಡುಗಳ ಹಿಂದೆ ಬದುಕಿ ಹೋದವವನು
ನಿನ್ನೆ ಮೊನ್ನೆ ನಮ್ಮ ನಡುವೆಯೇ
ಹಾಯ್ದು ಹೋದವನು
ನೊಡಿಯೂ ನೋಡದಂತಿದ್ದ
ನಮ್ಮ ನೋಡಿ ನಕ್ಕು ಹೋದವನು!

ಅವನು ಯಾರು ಬಲ್ಲಿರಾ?
ಅವನು ಸಂತ…

(ಬರಹಗಾರರ ಮಾತು : ನಮ್ಮ ನಾಡಿನಲ್ಲಿ ಬಾಳಿಹೋದ ಶಿಶುನಾಳ ಶರೀಪ, ಮುಕುಂದೂರು ಸ್ವಾಮಿಯಂತಹ ಹಲವು ಸಂತರನ್ನು ಕುರಿತು ಬರೆದ ನಲ್ಬರಹ ಇದಾಗಿದೆ)

(ಚಿತ್ರ ಸೆಲೆ: youtube.com )

 

 

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. ರವಿಚಂದ್ರ ಹರ್ತಿಕೋಟೆ says:

    ಸೊಗಸಾಗಿದೆ ನಮ್ಮ ನಾಡಿನ ಸಾದು ಸಂತರ ಕುರಿತ ಕವನ … ಕನ್ನಡಿಗರ ಹಿರಿಮೆ..‌

ಅನಿಸಿಕೆ ಬರೆಯಿರಿ:

%d bloggers like this: