ಸರ‍್ವಜ್ನನ ವಚನಗಳ ಹುರುಳು – 8ನೆಯ ಕಂತು

– ಸಿ.ಪಿ.ನಾಗರಾಜ.

 

71)   ಕಡೆದ ಕಲ್ಲದು ನುಣ್ಪು ಒಡೆದರೆ ದೈವವೇ
ಜಡರ ಮಾತುಗಳು ಹುಸಿ ನೋಡು-ದಯಚಿತ್ತ
ದೆಡೆಯಲ್ಲಿ ದೈವ ಸರ್ವಜ್ಞ

ಸಹಮಾನವರಿಗೆ ಮತ್ತು ಸಮಾಜಕ್ಕೆ ಒಳಿತನ್ನುಂಟುಮಾಡುವ ಒಲವು, ಕರುಣೆ ಮತ್ತು ಕಾಳಜಿಯಿಂದ ಕೂಡಿದ ನಡೆನುಡಿಯಲ್ಲಿ ದೇವರ ಇರುವಿಕೆಯನ್ನು ಕಾಣಲಾಗಿದೆ.

(ಕಡೆ=ಕೆತ್ತು/ರೂಪಿಸು/ಬಿಡಿಸು ; ಕಲ್ಲು+ಅದು ; ಕಡೆದ ಕಲ್ಲು=ಉಳಿ ಮತ್ತು ಸುತ್ತಿಗೆಯ ಪೆಟ್ಟಿನಿಂದ ಆಕಾರವೊಂದನ್ನು ತಳೆದ ಕಲ್ಲು/ಕಂಡರಣೆಗೊಂಡ ಕಲ್ಲು ; ನುಣ್ಪು=ನಯಗೊಳ್ಳುವುದು/ಒರಟಾಗಿದ್ದುದು ನಯಗೊಂಡು ಅಂದವಾಗುವುದು ; ಒಡೆ=ಸೀಳು/ಬಿರಿ/ಕಾಣಿಸಿಕೊಳ್ಳುವುದು ; ನುಣ್ಪು ಒಡೆದರೆ=ಶಿಲ್ಪಿಯ ಉಳಿಯ ಪೆಟ್ಟಿನಿಂದ ಕಲ್ಲು ಕಲೆಯಾಗಿ ರೂಪುಗೊಂಡರೆ/ಶಿಲೆಯು ಶಿಲ್ಪವಾಗಿ ರೂಪುಗೊಂಡರೆ ; ದೈವ=ದೇವರು ; ಜಡರು=ತಿಳಿಗೇಡಿಗಳು/ಆಲಸಿಗಳು ; ಜಡರ ಮಾತುಗಳು=ದೇವರ ಇರುವಿಕೆಯನ್ನು ಸರಿಯಾಗಿ ಅರಿಯದವರ ನುಡಿಗಳು ; ಹುಸಿ=ಸುಳ್ಳು ; ದಯಚಿತ್ತದ+ಎಡೆಯಲ್ಲಿ ; ದಯ=ಕರುಣೆ/ಅನುಕಂಪ/ಕನಿಕರ/ಇತರರ ನೋವಿಗೆ ಮಿಡಿದು ನೆರವನ್ನು ನೀಡುವಿಕೆ ; ಚಿತ್ತ=ಮನಸ್ಸು ; ಎಡೆ=ಜಾಗ/ನೆಲೆ ; ದಯಚಿತ್ತದೆಡೆಯಲ್ಲಿ= ಕರುಣೆ ತುಂಬಿದ ನಡೆನುಡಿಯಿರುವ ಎಡೆಯಲ್ಲಿ/ತನ್ನನ್ನು ಒಳಗೊಂಡಂತೆ ಎಲ್ಲರಿಗೂ ಒಳಿತಾಗುವಂತೆ ಒಲವುಕರುಣೆಯಿಂದ ನಡೆದುಕೊಳ್ಳುವ ಸನ್ನಿವೇಶಗಳಲ್ಲಿ)

72)   ಮಂದಿಯನಾಳುವಡೆ ಅಂದಣವನೇರುವಡೆ
ಸಂಧಿಸಿ ಭೋಗಪಡೆವಡೆ-ಧರ್ಮವ
ಕುಂದದೆ ಮಾಡು-ಸರ್ವಜ್ಞ

ಸಂಪತ್ತು, ಗದ್ದುಗೆ ಮತ್ತು ಒಲವುನಲಿವಿನ ಬದುಕು ದೊರಕಿದಾಗ ಸಹಮಾನವರ ಮತ್ತು ಸಮಾಜದ ಒಳಿತಿಗೆ ನೆರವಾಗುವ ಕೆಲಸದಲ್ಲಿ ತೊಡಗಬೇಕೆಂಬುದನ್ನು ಹೇಳಲಾಗಿದೆ.

(ಮಂದಿಯನು+ಆಳುವಡೆ ; ಮಂದಿ=ಜನಸಮುದಾಯ/ಗುಂಪು ; ಆಳುವಡೆ=ಗದ್ದುಗೆಯಲ್ಲಿ ಕುಳಿತು ಸಮಾಜದ ನಡೆನುಡಿಯಲ್ಲಿ ಕಂಡುಬರುವ ಕೆಡುಕನ್ನು ತೊಲಗಿಸಿ , ಒಳಿತನ್ನು ಕಾಪಿಡುವ ಹೊಣೆಗಾರಿಕೆ ದೊರಕಿದರೆ ; ಅಂದಣವನು+ಏರುವಡೆ ; ಅಂದಣ=ಪಲ್ಲಕ್ಕಿ/ಮೇನೆ ; ಏರು=ಹತ್ತು ; ಅಂದಣವನೇರುವಡೆ=ಸಿರಿವಂತಿಕೆ ಬಂದು ಸಮಾಜದಲ್ಲಿ ಒಳ್ಳೆಯ ಅಂತಸ್ತು ದೊರೆತರೆ ; ಸಂಧಿಸಿ=ಜತೆಗೂಡಿ ; ಭೋಗ=ಆಸ್ತಿಪಾಸ್ತಿಹಣಕಾಸುಗದ್ದುಗೆಗಳು ದೊರೆತಾಗ ಉಂಟಾಗುವ ಹಿಗ್ಗು/ಆನಂದ ; ಪಡೆವಡೆ=ದೊರಕಿದರೆ/ಹೊಂದಿದರೆ ; ಧರ್ಮ=ಸಹಮಾನವರಿಗೆ ಮತ್ತು ಜಗದ ಜೀವನಕ್ಕೆ ಒಳಿತನ್ನುಂಟುಮಾಡುವ ನಡೆನುಡಿಗಳು ; ಕುಂದು=ಕೊರತೆ ; ಕುಂದದೆ ಮಾಡು=ಕಯ್‍ಬಿಡದೆ/ಮರೆಯದೆ/ಕೊರತೆ ಬಾರದಂತೆ ಮಾಡು)

73)   ಹುಸಿವಾತ ದೇಗುಲದ ದೆಸೆಯತ್ತ ಮುಂತಾಗಿ
ನೊಸಲೆತ್ತಿ ಕರವ ಮುಗಿದರೆ-ಇಷ್ಟುದ್ದ
ಹುಸಿವೆನೆಂದೆಂಬ ಸರ್ವಜ್ಞ

ನಿತ್ಯಜೀವನದಲ್ಲಿ ಸುಳ್ಳಿನ ನಡೆನುಡಿಗಳಿಂದ ಸಹಮಾನವರಿಗೆ ಮತ್ತು ಸಮಾಜಕ್ಕೆ ಕೇಡನ್ನು ಬಗೆಯುತ್ತಿರುವ ವ್ಯಕ್ತಿಯು ದೇವರ ಮುಂದೆ ಮಾಡುವ ತೋರಿಕೆಯ ಆಚರಣೆಯನ್ನು ಅಣಕಮಾಡಲಾಗಿದೆ.

(ಹುಸಿವ+ಆತ ; ಹುಸಿ=ಸುಳ್ಳು/ದಿಟವಲ್ಲದ್ದು/ನಿಜವಲ್ಲದ್ದು ; ಆತ=ಅವನು ; ಹುಸಿವಾತ=ಸುಳ್ಳು ಮತ್ತು ಮೋಸದ ನಡೆನುಡಿಗಳಿಂದ ಜನರನ್ನು ವಂಚಿಸುತ್ತಿರುವವನು ; ದೇಗುಲ=ದೇವ+ಕುಲ ; ಕುಲ=ಮನೆ/ಇರುವ ಜಾಗ/ಆಲಯ ; ದೇಗುಲ=ದೇವಾಲಯ ; ದೆಸೆ+ಅತ್ತ ; ದೆಸೆ=ದಿಕ್ಕು ; ಅತ್ತ=ಆ ಕಡೆ ; ಮುಂದಕ್ಕೆ+ತಾಗಿ ; ತಾಗು=ಮುಟ್ಟು ; ಮುಂತಾಗಿ=ಮುಂದೆ ನಿಂತು ; ನೊಸಲ+ಎತ್ತಿ ; ನೊಸಲು=ಹಣೆ ; ನೊಸಲೆತ್ತಿ=ಹಣೆಯನ್ನು ಮೇಲೆತ್ತಿ ; ಕರ=ಕಯ್ ; ನೊಸಲೆತ್ತಿ ಕರವ ಮುಗಿದರೆ=ಹಣೆಯ ಮೇಲೆ ಎರಡು ಕಯ್ಗಳನ್ನು ಜೋಡಿಸಿಟ್ಟುಕೊಂಡು ದೇವರಿಗೆ ನಮಿಸಿದರೆ ; ಇಷ್ಟು+ಉದ್ದ ; ಇಷ್ಟುದ್ದ=ಅವನು ಎಶ್ಟು ಎತ್ತರಕ್ಕೆ ತನ್ನ ಕಯ್ಗಳನ್ನು ಎತ್ತಿರುವನೋ ಅಶ್ಟು ದೊಡ್ಡ ಪ್ರಮಾಣದಲ್ಲಿ/ಮಟ್ಟದಲ್ಲಿ ; ಹುಸಿವೆನ್+ಎಂದು+ಎಂಬ ; ಹುಸಿವೆನ್=ಸುಳ್ಳನ್ನು ಆಡುವೆನು ; ಎಂದು+ಎಂಬ ; ಎಂಬ=ಎನ್ನುವನು/ಹೇಳುವನು ; ಎಂದೆಂಬ= ಎಂಬುದನ್ನು ತನ್ನ ಕಪಟತನದ ಆಚರಣೆಯಿಂದ ಜಗತ್ತಿಗೆ ತಿಳಿಸುವನು/ತೋರಿಸುವನು)

74)   ಕ್ಷಣಮಾತ್ರವಾದೊಡಂ ಗುಣಿಗಳೊಡನಾಡುವುದು
ಗುಣಹೀನರುಗಳ ಒಡನಾಡೆ-ಬಹುದುಃಖ
ದಣಲೊಳಿರ್ದಂತೆ ಸರ್ವಜ್ಞ

ಕೆಟ್ಟ ನಡೆನುಡಿಯುಳ್ಳವರ ಒಡನಾಟದಿಂದ ಉಂಟಾಗುವ ಹಾನಿಯ ಬಗ್ಗೆ ಎಚ್ಚರಿಕೆಯನ್ನು ನೀಡಲಾಗಿದೆ.

(ಕ್ಷಣಮಾತ್ರವು+ಆದೊಡಂ ; ಕ್ಷಣ=ಗಳಿಗೆ/ಸಮಯ ; ಕ್ಷಣಮಾತ್ರ=ತುಸು/ಕೆಲ ಸಮಯ ; ಆದೊಡಂ=ಆದರೂ ; ಗುಣಿಗಳ+ಒಡನೆ+ಆಡುವುದು ; ಗುಣಿ=ಗುಣವುಳ್ಳವನು/ಒಳ್ಳೆಯ ನಡೆನುಡಿಯುಳ್ಳ ವ್ಯಕ್ತಿ ; ಒಡನೆ=ಜತೆಯಲ್ಲಿ ; ಆಡುವುದು=ವ್ಯವಹರಿಸುವುದು/ನೆಂಟನ್ನು ಹೊಂದುವುದು ; ಗುಣ=ಒಳ್ಳೆಯ ನಡೆನುಡಿ ; ಹೀನ=ಇಲ್ಲದ/ಕೆಟ್ಟ/ಕೀಳು ; ಗುಣಹೀನ=ಕೆಟ್ಟ ನಡೆನುಡಿಯುಳ್ಳ ವ್ಯಕ್ತಿ ; ಒಡನೆ+ಆಡೆ ; ಬಹುದುಃಖದ+ಅಣಲ್+ಒಳ್+ಇರ‍್ದ+ಅಂತೆ ; ಬಹು=ಹೆಚ್ಚು/ತುಂಬ/ಅನೇಕ ; ದುಃಖ=ಸಂಕಟ/ನೋವು/ಯಾತನೆ ; ಅಣಲು=ಬಾಯಿಯ ಒಳಗಡೆ/ಬಾಯಲ್ಲಿ ; ಒಳ್=ಅಲ್ಲಿ/ಒಳಗೆ ; ಇರ್ದ=ಇದ್ದ ; ಅಂತೆ=ಹಾಗೆ ; ಬಹುದುಃಖದಣಲ್=ಯಾವಾಗಲೂ ಒಂದಲ್ಲ ಒಂದು ಬಗೆಯ ಸಂಕಟ/ಯಾತನೆ/ಅಪಮಾನ/ನೋವು ಉಂಟಾಗುತ್ತಿರುವ ನೆಲೆ/ಜಾಗ/ಎಡೆ ಎಂಬ ರೂಪಕದ ತಿರುಳಿನಲ್ಲಿ ಬಳಕೆಯಾಗಿದೆ)

75)   ಹಿರಿದು ಪಾಪವ ಮಾಡಿ ಹರಿವರು ಗಂಗೆಗೆ
ಹರಿವ ನೀರಲ್ಲಿ ಕರಗುವೊಡೆಯಾ ಪಾಪ
ಎರೆಯ ಮಣ್ಣಲ್ಲ ಸರ್ವಜ್ಞ

ನೀರಿನಲ್ಲಿ ಮುಳುಗೆದ್ದ ಮಾತ್ರದಿಂದಲೇ ಮಾಡಿದ ಪಾಪ ಹೋಗುವುದಿಲ್ಲವೆಂಬುದನ್ನು ಹೇಳಲಾಗಿದೆ.

(ಹಿರಿ=ದೊಡ್ಡ/ಅತಿ/ಹೆಚ್ಚು ; ಪಾಪ=ಸಹಮಾನವರಿಗೆ ಮತ್ತು ಸಮಾಜಕ್ಕೆ ಕೇಡು/ವಂಚನೆಯನ್ನುಂಟುಮಾಡುವ ನಡೆನುಡಿ ; ಹರಿ=ಅತ್ತ ಸಾರು/ಹೋಗು/ಓಡು ; ಗಂಗೆ=ನೀರು/ಉತ್ತರ ಇಂಡಿಯಾದಲ್ಲಿ ಹರಿಯುತ್ತಿರುವ ನದಿ ಯೊಂದರ ಹೆಸರು ; ಹರಿವರು ಗಂಗೆಗೆ=ದೇಗುಲಗಳ ಬಳಿಯ ನದಿ/ಕೊಳ/ನೀರಿನ ತಾಣಗಳಲ್ಲಿ ಮೀಯುವರು-ಇಂತಹ ಎಡೆಗಳಲ್ಲಿ ಮಿಂದೆದ್ದರೆ ಮಾಡಿದ ಪಾಪ ಹೊರಟುಹೋಗುತ್ತದೆಯೆಂಬ ನಂಬಿಕೆಯು ಜನಮನದಲ್ಲಿದೆ ; ಕರಗುವೊಡೆ+ಆ ; ಕರಗುವೊಡೆ=ಕರಗಿಹೋಗುವುದಕ್ಕೆ/ಇಲ್ಲವಾಗುವುದಕ್ಕೆ ; ಆ ಪಾಪ=ಮಾಡಿರುವ ಕೆಟ್ಟಕೆಲಸಗಳು ; ಎರೆಯ ಮಣ್ಣು=ಕಪ್ಪನೆಯ ಬಣ್ಣದ ಮಣ್ಣು/ಜೇಡಿಮಣ್ಣು/ಮುಟ್ಟಿದಾಗ ಇಲ್ಲವೇ ತುಳಿದಾಗ ಕಯ್ ಕಾಲುಗಳಿಗೆ ಅಂಟಿಕೊಳ್ಳುವ ಜಿಗುಟು ಮಣ್ಣು ; ಆ ಪಾಪ ಎರೆಯ ಮಣ್ಣಲ್ಲ=ಮಾಡಿದ ಪಾಪ ಹೋಗಬೇಕಾದರೆ , ಮಾಡಿದ ಕೇಡು/ವಂಚನೆಗಾಗಿ ಮರುಗಿ , ಮತ್ತೊಮ್ಮೆ ಅಂತಹ ಕೆಟ್ಟದ್ದನ್ನು ಮಾಡದೆ ಒಳ್ಳೆಯ ನಡೆನುಡಿಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಬಾಳತೊಡಗಿದ ಹೊರತು ಪಾಪ ತೊಲಗುವುದಿಲ್ಲ . ಪಾಪ ಹೋಗುವುದಿಲ್ಲವೆಂದರೆ ಆತ ನೀಚ/ಕೆಡುಕನಾಗಿಯೇ ಬಾಳುತ್ತಿರುತ್ತಾನೆ ಎಂಬುದನ್ನು ಈ ರೂಪಕದ ತಿರುಳು ಹೊಂದಿದೆ)

76)   ತಪ್ಪ ಸಾಧಿಪ ನೃಪನೊಳಿಪ್ಪವನವನೆಗ್ಗ
ಸರ್ಪನ ಹೆಡೆಯ ನೆಳಲೆಂದು-ಸಾರಿದ
ಕಪ್ಪೆಯಂತಕ್ಕು ಸರ್ವಜ್ಞ

ಮಾಡಿದ ತಪ್ಪನ್ನೇ ಸರಿಯೆಂದು ವಾದಮಾಡುವ ರಾಜನ/ಒಡೆಯನ/ಮೇಲಿನ ಗದ್ದುಗೆಯಲ್ಲಿರುವ ವ್ಯಕ್ತಿಯ ಜತೆಗಿನ ಒಡನಾಟ/ನೆಂಟು/ವ್ಯವಹಾರ ಒಳ್ಳೆಯದಲ್ಲವೆಂಬ ಎಚ್ಚರಿಕೆಯನ್ನು ನೀಡಲಾಗಿದೆ.

(ತಪ್ಪು=ಆಡುವ ಮಾತು/ಮಾಡುವ ಕೆಲಸದಲ್ಲಿ ಸರಿಯಲ್ಲದ್ದು ; ಸಾಧಿಪ=ಸರಿಯೆಂದು ವಾದಿಸುವವನು ; ತಪ್ಪ ಸಾಧಿಪ=ತಾನು ಮಾಡಿದ/ತನ್ನಿಂದಾಗಿರುವ ಕೇಡು/ವಂಚನೆ/ಹಾನಿಯನ್ನು ಸರಿಯೆಂದು ಮೊಂಡುಹಿಡಿದು ಮಾತನಾಡುವವನು ; ನೃಪನೊಳ್+ಇಪ್ಪವನ್+ಅವನ್+ಎಗ್ಗ ; ನೃಪ=ದೊರೆ/ಒಡೆಯ/ಯಜಮಾನ/ಮೇಲಿನ ಗದ್ದುಗೆಯಲ್ಲಿರುವವನು ; ಒಳ್=ಬಳಿಯಲ್ಲಿ ; ಇಪ್ಪ=ಇರುವ ; ಇಪ್ಪವನ್=ಇರುವವನು ; ಎಗ್ಗ=ದಡ್ಡ/ತಿಳಿಗೇಡಿ ; ಸರ್ಪನ ಹೆಡೆ=ತನ್ನ ಉಳಿವಿಗಾಗಿ/ಇತರರನ್ನು ಕಚ್ಚುವುದಕ್ಕೆ ಮೊದಲು ನಾಗರಹಾವು ತನ್ನ ತಲೆಯನ್ನು ಅಗಲಿಸುವುದು/ಬಿಚ್ಚುವುದು ; ನೆಳಲು+ಎಂದು=ನೆರಳೆಂದು ತಿಳಿದು/ನಂಬಿ ; ಸಾರು=ಸಮೀಪಿಸು/ಹತ್ತಿರಕ್ಕೆ ಹೋಗು ; ಕಪ್ಪೆ+ಅಂತೆ+ಅಕ್ಕು ; ಅಂತೆ=ಹಾಗೆ ; ಅಕ್ಕು=ಆಗುವುದು ; ಸರ್ಪನ ಹೆಡೆಯ ನೆಳಲು= ಸಾವಿನ ಸಮೀಪದಲ್ಲಿರುವುದು/ಯಾವ ಗಳಿಗೆಯಲ್ಲಾದರೂ ಸಾವಿಗೀಡಾಗುವ ತಾಣ/ಜಾಗ ಎಂಬ ತಿರುಳುಳ್ಳ ನುಡಿಗಟ್ಟು)

77)   ಕಂಡುದ ನುಡಿಯೆ ಭೂಮಂಡಲ ಮುನಿವುದು
ಕೊಂಡಾಡುತಿಚ್ಚೆಯ ನುಡಿದರೆ-ಜಗವೆಲ್ಲ
ಮುಂಡಾಡುತಿಕ್ಕು ಸರ್ವಜ್ಞ

ಜನಸಮುದಾಯದ ವ್ಯವಹಾರದಲ್ಲಿ ದಿಟದ ಮಾತಿಗೆ/ಸುಳ್ಳುಮಾತಿಗೆ ದೊರೆಯುವ ಬೆಲೆಯನ್ನು ಹೇಳಲಾಗಿದೆ.

(ಕಂಡುದ=ಕಂಡಿದ್ದನ್ನು/ನೋಡಿದುದನ್ನು/ತಿಳಿದಿರುವುದನ್ನು ; ನುಡಿಯೆ=ಹೇಳಲು ; ಕಂಡುದ ನುಡಿಯೆ=ಯಾವುದೇ ವ್ಯಕ್ತಿಯ ನಡೆನುಡಿಗಳಲ್ಲಿ ಇಲ್ಲವೇ ಸಾಮಾಜಿಕ ಸಂಗತಿಯ ಆಗುಹೋಗುಗಳಲ್ಲಿ ನಾವು ಕಂಡ ತಪ್ಪನ್ನು/ಕೆಡುಕನ್ನು ಗುರುತಿಸಿ ವಾಸ್ತವವಾಗಿರುವುದನ್ನು ಹೇಳಿದರೆ ; ಭೂ=ಜಗತ್ತು/ಲೋಕ ; ಮಂಡಲ=ಪ್ರದೇಶ ; ಭೂಮಂಡಲ=ಜನಸಮುದಾಯ/ಸಮಾಜ ; ಮುನಿ=ಕೋಪಗೊಳ್ಳು/ಸಿಟ್ಟಾಗು/ಕೆರಳುವುದು ; ಕೊಂಡಾಡುತ+ಇಚ್ಚೆಯ ; ಕೊಂಡಾಡು=ಹೊಗಳು/ಬಣ್ಣಿಸು ; ಇಚ್ಚೆ=ಆಸೆ/ಬಯಕೆ ; ಕೊಂಡಾಡುತ ಇಚ್ಚೆಯ ನುಡಿದರೆ= ಇತರರ ತಪ್ಪುಗಳನ್ನು/ಕೆಡುಕಿನ ನಡೆನುಡಿಗಳನ್ನು ಮರೆಮಾಚಿ , ಅವರು ಮೆಚ್ಚುವಂತಹ ಇಲ್ಲಸಲ್ಲದ ನುಡಿಗಳನ್ನಾಡಿದರೆ ; ಜಗವು+ಎಲ್ಲ ; ಜಗ=ಲೋಕ/ಪ್ರಪಂಚ ; ಮುಂಡಾಡುತ+ಇಕ್ಕು ; ಮುಂಡಾಡು=ಮುತ್ತಿಡು/ಒಲವಿನಿಂದ ತಬ್ಬಿಕೊಳ್ಳುವುದು/ಆಲಂಗಿಸಿಕೊಳ್ಳುವುದು ; ಇಕ್ಕು=ಇರುವುದು; ಮುಂಡಾಡುತಿಕ್ಕು=ಮೆಚ್ಚುಗೆಯಿಂದ ಓಲಯಿಸುವುದು)

78)   ಕಣ್ಣು ನಾಲಗೆ ಮನವು ತನ್ನವೆಂದೆನಬೇಡ
ಅನ್ಯರು ಕೊಂದರೆನಬೇಡ-ಇವು ಮೂರು
ತನ್ನನೇ ಕೊಲುಗು ಸರ್ವಜ್ಞ

ನೋಡುವ ನೋಟ, ಆಡುವ ಮಾತು ಮತ್ತು ಮನದ ಒಳಮಿಡಿತಗಳನ್ನು ಹತೋಟಿಯಲ್ಲಿಟ್ಟುಕೊಳ್ಳದಿದ್ದರೆ ಉಂಟಾಗುವ ಹಾನಿಯನ್ನು ಹೇಳಲಾಗಿದೆ.

(ಮನ=ಮನಸ್ಸು ; ತನ್ನವು+ಎಂದು+ಎನಬೇಡ ; ತನ್ನವು=ನನಗೆ ಸೇರಿದವು/ನನ್ನ ಹಿಡಿತದಲ್ಲಿರುವುವು ; ಎನಬೇಡ=ಎಂದುಕೊಳ್ಳಬೇಡ/ತಿಳಿಯಬೇಡ ; ಕಣ್ಣು ನಾಲಗೆ ಮನವು ತನ್ನವೆಂದೆನಬೇಡ=ತಾನು ಹುಟ್ಟಿಬೆಳೆದುಬಾಳುತ್ತಿರುವ ಪರಿಸರದಲ್ಲಿನ ವಸ್ತು/ಜೀವಿ/ಆಗುಹೋಗುಗಳ ಕಾರಣದಿಂದಾಗಿ ವ್ಯಕ್ತಿಯು ನೂರೆಂಟು ಬಗೆಯ ಆಸೆ/ತವಕ/ತಲ್ಲಣ/ಕೋಪ/ತಾಪ/ಹತಾಶೆಗಳಿಗೆ ಒಳಗಾಗಿ ಒಳಿತುಕೆಡುಕಿನ ಕೆಲಸಗಳಲ್ಲಿ ತೊಡಗುತ್ತಾನೆ. ” ಪರಿಸರದ ಮಗು ಮಾನವ ” ಎಂಬ ಸಮಾಜಶಾಸ್ತ್ರಜ್ನರ ಮಾತಿನಂತೆ ಸಮಾಜದ ರಚನೆ , ಸಂಪ್ರದಾಯ ಮತ್ತು ನೀತಿನಿಯಮಗಳು ಮಾನವನ ನಡೆನುಡಿಗಳನ್ನು ರೂಪಿಸುತ್ತವೆ/ಹತೋಟಿಯಲ್ಲಿಡುತ್ತವೆ.ಆದುದರಿಂದ ವ್ಯಕ್ತಿಯು ತನ್ನ ನಡೆನುಡಿಗಳಿಗೆ ಕಾರಣವಾಗುವ ಸಾಮಾಜಿಕ ಸಂಗತಿಗಳ ಬಗ್ಗೆ ತುಂಬಾ ಎಚ್ಚರದಿಂದ ಇರಬೇಕು ಎನ್ನುವ ಇಂಗಿತ ಈ ಮಾತುಗಳಲ್ಲಿದೆ ; ಅನ್ಯರು=ಇತರರು/ಬೇರೆಯವರು ; ಕೊಂದರು+ಎನಬೇಡ ; ಕೊಲುಗು=ಕೊಲ್ಲುತ್ತವೆ)

79)   ಒಲೆಗುಂಡನೊಬ್ಬನು ಮೆಲಬಹುದೆಂದರೆ
ಮೆಲಬಹುದೆಂದು ಎನಬೇಕು-ಮೂರ್ಖರನು
ಗೆಲಬಾರದಯ್ಯ ಸರ್ವಜ್ಞ

ತಿಳಿಗೇಡಿಗಳ ಜತೆಯಲ್ಲಿ ಮಾತಿಗೆ ಮಾತು ಬೆಳಸಬಾರದೆಂಬ ಎಚ್ಚರಿಕೆಯನ್ನು ನೀಡಲಾಗಿದೆ.

(ಒಲೆಗುಂಡನು+ಒಬ್ಬನು ; ಒಲೆ=ಅಡುಗೆಯನ್ನು ಮಾಡುವಾಗ ಬೆಂಕಿಯನ್ನು ಉರಿಸುವುದಕ್ಕಾಗಿ ಬಳಸುವ ಸಲಕರಣೆ ; ಗುಂಡು=ದಪ್ಪವಾಗಿರುವ ಕಲ್ಲು ; ಒಲೆಗುಂಡು=ಬಯಲು ಜಾಗದಲ್ಲಿ ಅಡುಗೆಯನ್ನು ಮಾಡಲು ಒಲೆಯನ್ನು ಒಡ್ಡಿದಾಗ  ಪಾತ್ರೆಗಳನ್ನು ಇಡುವುದಕ್ಕಾಗಿ ಜೋಡಿಸುವ ದಪ್ಪನೆಯ ಕಲ್ಲುಗಳು ; ಮೆಲಬಹುದು+ಎಂದರೆ ; ಮೆಲ್=ತಿನ್ನು ; ಬಹುದು=ಬರುವುದು/ಆಗುವುದು ;  ಎಂದರೆ=ಎಂದು ಹೇಳಿದರೆ ; ಮೆಲಬಹುದು+ಎಂದು ; ಎನಬೇಕು=ಅವನ ಮಾತನ್ನು ಒಪ್ಪಿಕೊಳ್ಳಬೇಕು ;ಮೂರ್ಖ=ತಿಳಿಗೇಡಿ/ಅರಿವಿಲ್ಲವದವನು ; ಗೆಲಬಾರದು+ಅಯ್ಯ ; ಗೆಲಬಾರದು=ಗೆಲ್ಲಲು ಆಗುವುದಿಲ್ಲ/ಸರಿತಪ್ಪುಗಳನ್ನು ತಿಳಿಸಿ ಅರಿವನ್ನು ಮೂಡಿಸಲಾಗುವುದಿಲ್ಲ/ತಿಳಿಗೇಡಿತನವನ್ನು ಹೋಗಲಾಡಿಸಲು ಆಗುವುದಿಲ್ಲ)

80)   ಕೋಡಿಯನು ಕಟ್ಟಿದರೆ ಕೇಡಿಲ್ಲವಾ ಕೆರೆಗೆ
ಮಾಡು ಧರ್ಮಗಳ ಮನಮುಟ್ಟಿ-ಕಾಲನಿಗೆ
ಈಡಾಗದ ಮುನ್ನ ಸರ್ವಜ್ಞ

ಸಿರಿವಂತಿಕೆಯು ಇದ್ದಾಗ ಹಸಿದವರಿಗೆ/ನೊಂದವರಿಗೆ ನೆರವನ್ನು ನೀಡುವುದರಿಂದ ನಮಗೆ ಒಳಿತಾಗುತ್ತದೆಯೆಂಬುದನ್ನು ಹೇಳಲಾಗಿದೆ.

(ಕೋಡಿ=ಹರಿಯುತ್ತಿರುವ ನೀರಿಗೆ ಅಡ್ಡಗಟ್ಟೆಯನ್ನು ಹಾಕಿ ಕೆರೆಗೆ ಏರಿಯನ್ನು ಕಟ್ಟಿದಾಗ , ಕೆರೆಯು ತುಂಬಿತುಳುಕಿ ಹೆಚ್ಚಾದ ನೀರು ಹೊರಕ್ಕೆ ಹರಿದು ಹೋಗಲು ಮಾಡಿರುವ ಜಾಗ ; ಕೇಡು+ಇಲ್ಲವು+ಆ ; ಕೇಡು=ಹಾನಿ/ತೊಂದರೆ/ಅಪಾಯ ; ಕೇಡಿಲ್ಲವಾ ಕೆರೆಗೆ=ಕೆರೆಯಲ್ಲಿ ಹೆಚ್ಚಾದ ನೀರು ಕೋಡಿಯ ಮೂಲಕ ಹೊರಹರಿದು ಏರಿಯು ಒಡೆದು ಹಾಳಾಗದೆ ಆ ಕೆರೆಯು ಉಳಿಯುತ್ತದೆ ; ಧರ್ಮ=ಸಹಮಾನವರಿಗೆ ಮತ್ತು ಸಮಾಜಕ್ಕೆ ಒಳಿತನ್ನು ಮಾಡುವ ನಡೆನುಡಿ ; ಮನಮುಟ್ಟಿ=ಒಳ್ಳೆಯ ಉದ್ದೇಶದಿಂದ ; ಮಾಡು ಧರ್ಮಗಳ ಮನಮುಟ್ಟಿ=ಒಳ್ಳೆಯ ಉದ್ದೇಶದಿಂದ ಇತರರಿಗೆ ನೆರವನ್ನು ನೀಡುವುದು ; ಕಾಲ=ಯಮ/ಸಾವು ; ಈಡು+ಆಗದ ; ಈಡು=ಗುರಿ/ವಶ ; ಮುನ್ನ=ಮೊದಲು/ಮುಂಚೆ ; ಕಾಲನಿಗೆ ಈಡಾಗದ ಮುನ್ನ=ಸಾವು ಬರುವುದಕ್ಕೆ ಮೊದಲು/ಮಯ್ ಮನಗಳಲ್ಲಿ ಕಸುವು ಇರುವಾಗ)

( ಚಿತ್ರಸೆಲೆ: wikipedia.org )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: