ಕನ್ನಡವೇ ನಮ್ಮ ಉಸಿರು, ಕರ‍್ನಾಟಕವೇ ನಮ್ಮ ತವರು

 

– ದೀಕ್ಶಿತ್ ಜೆ. ನಾಯಕ್.

kannada flag

“ದುಡಿ, ಮೈ ಮುರಿದು ದುಡಿ. ಹೆಚ್ಚು ಹೆಚ್ಚಾಗಿ ದುಡಿ. ಆ ನಿನ್ನ ದುಡಿಮೆಯಲ್ಲಿ ಶ್ರಮವಿರಲಿ, ನಿಯಮವಿರಲಿ, ಗುರಿ ಇರಲಿ, ವಿವೇಚನೆ ಇರಲಿ, ದಕ್ಶತೆ ಇರಲಿ. – ಇದು ಸರ್. ಎಂ. ವಿಶ್ವೇಶ್ವರಯ್ಯನವರ ಮನದಾಳದ ಮಾತು. ಆದರೆ ‘ಎಲ್ಲದಕ್ಕೂ ಮುನ್ನ ಕನ್ನಡ ತಾಯಿಯ ಆಶೀರ‍್ವಾದ ತೆಗೆದುಕೊಂಡು ದುಡಿಯುವುದು ಮೊದಲಿರಲಿ’ ಎಂಬ ಮಾತನ್ನು ಮಾತ್ರ ಪ್ರತಿಯೊಬ್ಬ ಕನ್ನಡಿಗನು ಅನುಸರಿಸಬೇಕು.

ತನ್ನ ಕೋಟಿ ಕೋಟಿ ಮಕ್ಕಳಿಗೆ ಆಶ್ರಯ ನೀಡುವುದರೊಂದಿಗೆ, ಬೇರೆ ತಾಯಿಯಂದಿರ ಮಕ್ಕಳಿಗೂ ತನ್ನ ಒಡಲಲ್ಲಿ ಆಶ್ರಯವಿತ್ತಿರುವ ನಮ್ಮೆಲ್ಲರ ಜನ್ಮದಾತೆ ಈಕೆ. ಯಾವ ನಾಡು-ನುಡಿ, ಕಲೆ-ಸಂಸ್ಕ್ರುತಿಯಲ್ಲಿ ಕಾಣದ, ಇರದ, ವಿಶಾಲ ಹ್ರುದಯವುಳ್ಳಂತಹ ಹಲವಾರು ಕವಿವರ‍್ಯರು, ಶರಣರು, ಸಾಹಿತಿಗಳಿಗೆ ಜನ್ಮ ನೀಡಿರುವ ಕನ್ನಡಾಂಬೆಯ ಮಕ್ಕಳಾಗಿರುವ ನಾವೇ ದನ್ಯರು. ಕವಿಗಳು, ಶರಣರು, ದಾಸರು, ಸಾಹಿತಿಗಳು, ಲೇಕಕರು, ಚಿಂತಕರು, ಇವರೆಲ್ಲರೂ ಕನ್ನಡ ಜ್ನಾನ ಸರಸ್ವತಿಯನ್ನು ತದೇಕಚಿತ್ತದಿಂದ ಆರಾದನೆಗೈದು ಆ ತಾಯಿಯ ಆಶೀರ‍್ವಾದ ತೆಗೆದುಕೊಂಡು, ಅವಳ ವಿಸ್ತಾರವಾದ ಮನದಂಗಳವನ್ನೊಕ್ಕು ತಮ್ಮ ಹ್ರುದಯದಿಂದ ಬರೆದಿರುವ ವಚನಗಳು, ರಸಗವನಗಳು, ಗದ್ಯಪದ್ಯಗಳು, ದಾಸಸಾಹಿತ್ಯಗಳು, ಕತೆ, ಕವನ, ಕಾದಂಬರಿಗಳು, ಅದೆಶ್ಟು ಚಂದವೆಂದರೆ ದೇಶ ವಿದೇಶದಲ್ಲೂ ಪ್ರಸಿದ್ದಿ ಹೊಂದಿವೆ. ಇವುಗಳನ್ನು ನಮ್ಮ ತುಂಬು ಮನಸ್ಸಿನಿಂದ ಓದಿರುವ, ಓದುತ್ತಿರುವ ನಾವುಗಳೇ ದನ್ಯರು, ಪುಣ್ಯವಂತರು.

ಇಂದಿನ ದಿನಗಳಲ್ಲಿ ನಮ್ಮ ಕರ‍್ನಾಟಕ ರಾಜ್ಯದಲ್ಲಿಯೇ ಕನ್ನಡ ಬಾಶೆಯ ಸ್ತಿತಿಗತಿಯನ್ನು ನೋಡಿದರೆ ಕನ್ನಡಿಗರು ಕಣ್ಣೀರು ಸುರಿಸಬೇಕಾದಂತಹ ಪರಿಸ್ತಿತಿ ನಿರ‍್ಮಾಣಗೊಂಡಿದ್ದು ಬೇಗನೆ ಎಚ್ಚೆತ್ತುಕೊಳ್ಳದಿದ್ದರೆ, ಬವಿಶ್ಯದಲ್ಲಿ ಕನ್ನಡ ನಾಡು, ನುಡಿ, ಕಲೆ, ಸಂಸ್ಕ್ರುತಿಗೆ ಬೆಲೆ ಇಲ್ಲದಂತಾಗುವುದು ಹಾಗೂ ನಶ್ಟವುಂಟಾಗುವುದರಲ್ಲಿ ಸಂಶಯವಿಲ್ಲ. ಬೂಗೋಳದಲ್ಲಿ ಒಂದು ಪವಿತ್ರವಾದ ಸ್ತಾನ ಹೊಂದಿರುವ ಬಾರತಮಾತೆಯ ಒಂದು ಅತ್ಯುನ್ನತ ಜ್ಯೋತಿಯು ಕನ್ನಡಮಾತೆಯ ಮಡಿಲು. ಅಂತಹ ಮಡಿಲಲ್ಲಿ ಹುಟ್ಟಿ ಬೆಳೆದಿರುವ ನಾವು ಕನ್ನಡತನ, ಕನ್ನಡ ಸಂಸ್ಕ್ರುತಿ, ಜಾನಪದ ಕಲೆ, ನಡೆ, ನುಡಿಯನ್ನು ಉಸಿರಿರುವವರೆಗೂ ಆರಾದಿಸಬೇಕು. ಅದನ್ನು ಬಿಟ್ಟು ಕನ್ನಡರಾಜ್ಯೋತ್ಸವ ಬರುವ ಸಂದರ‍್ಬದಲ್ಲಿ ನವೆಂಬರ್ ತಿಂಗಳಲ್ಲಿ ಮಾತ್ರ ನಮ್ಮ ಕರುನಾಡ ಅಬಿಮಾನವನ್ನು ತೋರಿಸಿಕೊಳ್ಳಬಾರದು.

ಕನ್ನಡದ ನೆಲ-ಜಲದ ರಕ್ಶಣೆ ಮಾಡಬೇಕಾಗಿರುವುದು ಪ್ರತಿಯೊಬ್ಬ ಕನ್ನಡಿಗನ ಮೊದಲ ಕರ‍್ತವ್ಯವಾಗಿದ್ದು, ಇಂದಿನ ನಮ್ಮ ಯುವಪೀಳಿಗೆಗಳು ಇದಕ್ಕೆ ಹೆಚ್ಚು ಶ್ರಮಿಸಬೇಕು. ಕನ್ನಡ ನಾಡಿಗೆ ವಲಸೆ ಬಂದಿರುವ ಅನ್ಯ ಬಾಶಿಕರಿಗೂ, ಕನ್ನಡ ಬಾಶೆಯೊಂದಿಗೆ ಇಲ್ಲಿನ ಸಂಸ್ಕ್ರುತಿ, ಕಲೆಯನ್ನು ಕಲಿಸಬೇಕು. ಕುವೆಂಪು, ಮಾಸ್ತಿ, ಕಾರಂತರು, ಶಿವರುದ್ರಪ್ಪನವರಂತಹ ಮಹಾನ್ ಕವಿಗಳ ಕಾವ್ಯದ ರುಚಿಯನ್ನು ತಿಳಿಸಬೇಕು.

ಕನ್ನಡ ನಾಡು ನುಡಿಯ ಬಗ್ಗೆ ನನ್ನ ಮನಸಲ್ಲಿ ಮೂಡಿದ ಕವಿತೆಗಳು.

1) ಓ ಕನ್ನಡ ಮಾತೆ,
ಕವಿವರ‍್ಯರು, ಜ್ನಾನಪೀಟ ಪ್ರಶಸ್ತಿಯಿಂದ ಜಗತ್ತಿನಾದ್ಯಂತ ಪ್ರಸಿದ್ದಿಯಾಗಿರುವೆ
ಮುನಿ, ರುಶಿಗಳ ತವರಾಗಿ, ಶೌರ‍್ಯ ವೀರತನಕ್ಕೆ ಹೆಸರಾಗಿರುವೆ
ಕಲೆ-ಸಂಸ್ಕ್ರುತಿ, ನಡೆ, ನುಡಿ, ಪ್ರೀತಿ, ತ್ಯಾಗ, ಸಮ್ರುದ್ದಿಯಿಂದ ಕಂಗೊಳಿಸುತ್ತಿರುವೆ
ಇದ್ದರೆ ಮತ್ತೊಂದು ಜನುಮ, ನಾ ಕನ್ನಡದ ಮಣ್ಣಲ್ಲೇ ಹುಟ್ಟಿ ಬರುವೆ|

2) ನಮ್ಮ ನಾಡು ದಾಸರು, ಸಂತರು, ಕವಿಕೋಗಿಲೆಗಳ ತವರು
ಅಮ್ರುತಕ್ಕಿಂತ ಹೆಚ್ಚು ಇಲ್ಲಿನ ಕಾವೇರಿ ನೀರು
ಬೇಡಿಕೊಳ್ಳುತ್ತೇನೆ ದೇವರ ಬಳಿ, ಸತ್ತಾಗ ಆಗಲಿ ನನ್ನ ಕೊನೆಯ ಉಸಿರು
ಪ್ರೀತಿಯಿಂದ ನನಗೆ ತುತ್ತು ಅನ್ನಕೊಟ್ಟು ಬೆಳೆಸಿದ ನನ್ನತಾಯಿ ಕನ್ನಡಾಂಬೆಯ ಹೆಸರು|

3) ಓ ಕನ್ನಡತಾಯಿ, ಪೂಜಿಸುತ್ತೇನೆ ನಾನೆಂದು ಮರೆಯುವುದಿಲ್ಲ ನಿನ್ನ
ಕೊನೆಯವರೆಗೂ ಕನ್ನಡಿಗನಾಗೇ ಬಾಳುತ್ತೇನೆ ನಾ ಮೇಲೆ ಹೋಗುವ ಮುನ್ನ
ಮೇಲೆ ಹೋದರೂ ಯಾರಿಗೂ ಕೊಡುವುದಿಲ್ಲ ಹ್ರುದಯದಲ್ಲಿರೋ ಆ ನಿನ್ನ ಜಾಗವನ್ನು
ಎಶ್ಟೇ ಕಶ್ಟವಾದರೂ, ದೇವರ ಅಪ್ಪಣೆ ತೆಗೆದುಕೊಂಡು
ಮತ್ತೆ ಕನ್ನಡನಾಡಲ್ಲೇ ಹುಟ್ಟಿ ಸಾರುವೆ ಕನ್ನಡದ ಕಂಪನ್ನು|

4) ಓ ಮನುಜ, ನಿನ್ನಲ್ಲಿರುವ ಜಾತಿ, ಮತ ದರ‍್ಮ ಎಂಬ ಬೇದಬಾವವನ್ನು ಇಂದೇ ಅಳಿಸಿಬಿಡು
ತುಂಬಿತುಳುಕುತ್ತಿರುವ ಮೋಸ ದರೋಡೆ, ವಂಚನೆಯನ್ನು ಈ ಕ್ಶಣವೇ ಸುಡು
ಕನ್ನಡದ ಕಲೆ, ನಾಡು, ನುಡಿ ಸಂಸ್ಕ್ರುತಿಯನ್ನು ಎಲ್ಲಾಕಡೆ ಹರಡು
ಕನ್ನಡ ತಾಯಿಯ ಶ್ರೀರಕ್ಶೆಯಿಂದ ಒಳ್ಳೆ ಕೆಲಸಮಾಡಿ ಅನುದಿನವು ಹರುಶಪಡು|

5) ನಿನ್ನ ಒಳ್ಳೆಯ ಕೆಲಸಕ್ಕೆ ಎಶ್ಟಾದರು ಕಶ್ಟ ಬರಲಿ
ಚಲಬಿಡಬೇಡ ಹೋರಾಡು ಆತ್ಮಸ್ತೈರ‍್ಯ ಜೊತೆಗಿರಲಿ
ನಿನ್ನಲ್ಲಿ ಅಡಗಿರುವ ನಾನು ಎಂಬತನವು ಇಂದೇ ಹೋಗಲಿ
ಕನ್ನಡದ ಕೀರ‍್ತಿ ಪತಾಕೆ ಎಂದೆಂದೂ ನಿನ್ನ ಹ್ರುದಯದಲ್ಲಿ ಹಾರುತಿರಲಿ|

(ಚಿತ್ರ ಸೆಲೆ: kannadakavi.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: