ನಾಟಕ: ಕಳ್ಳರಿದ್ದಾರೆ, ಎಚ್ಚರಿಕೆ!
– ಸಿ.ಪಿ.ನಾಗರಾಜ.
ಈರಯ್ಯ—(ಬಸ್ ನಿಲ್ದಾಣದಲ್ಲಿದ್ದ ಲೆಕ್ಕವಿಲ್ಲದಶ್ಟು ಬಸ್ಸುಗಳನ್ನು ನೋಡುತ್ತಾ) ಓಹೋಹೋ…ಏನ್ಲಾ ಮೊಗ…ಈಪಾಟಿ ಬಸ್ಗೊಳು! ನಮ್ಮ ಹಳ್ಳಿಗೆ ಒಂದು ಕೆಂಪು ಬಸ್ ಬುಡಿ ಅಂದ್ರೆ, ಇಲ್ಲ ಅಂತಾರೆ. ಎಲ್ಲಾನು ತಂದು ಇಲ್ಲೇ ನಿಲ್ಲಿಸ್ಕೊಂಡವ್ರಲ್ಲ ಬೊಡ್ಡಿಹೈಕ್ಳು.
ರಮೇಶ—ಬೆಂಗಳೂರು ರಾಜದಾನಿ ಅಲ್ವೇನಪ್ಪ! ಅದ್ಕೆ ಎಲ್ಲಾ ಕಡೆಯಿಂದ್ಲು ಸಾವಿರಾರು ಜನ ದಿನ ಬೆಳಗಾದ್ರೆ ಇಲ್ಲಿಗೆ ಬತ್ತರೆ-ಹೊಯ್ತರೆ. ಅಪ್ಪ…
ಪುಟ್ಟಸ್ವಾಮಿ—ಬೆಂಗಳೂರು ಅಂದ್ರೆ ಏನು ತಿಳ್ಕೊಂಡಿದ್ದೀರಿ? ಇಡೀ ಕರ‍್ನಾಟಕದ ಅದಿಕಾರವೆಲ್ಲಾ ಇಲ್ಲೇ ಇರೋದು!
ಈರಯ್ಯ—ದುಡ್ಡು ಎಲ್ಲಾ ಇಲ್ಲೇ ಸೇರ‍್ಕೊಂಡಿರುವಂಗೆ ಕಾಣ್ತದೆ ಬುಡಪ್ಪ. ಊರೊಳಕ್ಕೆ ಬಸ್ಸು ಬರೋಕೆ ಶುರು ಮಾಡುತ್ತಾವಿಂದ್ಲೂ ನೋಡುತ್ಲೆ ಇವ್ನಿ. ಎಂತೆಂತಾ ಬಿಲ್ಡಿಂಗೊಳು! ಅಬ್ಬಬ್ಬಾ…ಎಂತೆಂತಾ ಬಂಗ್ಲೆಗೊಳು! ಏನು…ಇವ್ನೆಲ್ಲಾ ಮನುಸ್ರೆ ಕಟ್ಟುದ್ರೊ…ಇಲ್ದೇದ್ರೆ ಮ್ಯಾಲಿಂದ್ಲೆ ಎತ್ಕೊಂಡು ಬಂದು ಕುಂಡುಸ್ಬುಟ್ರೋ!
ಪುಟ್ಟಸ್ವಾಮಿ—ಈಗೇನು ಕಂಡ್ರಿ?…ಇನ್ನು ಮುಂದಕ್ಕೆ ನಗರದೊಳಕ್ಕೆ ಕರ‍್ಕೊಂಡು ಹೋಯ್ತಿನಿ ಬನ್ನಿ… ಒಂದೊಂದು ಹೋಟೆಲ್ ಕಟ್ಟಡವ…ಕೋಟಿ ಕೋಟಿ ಕರ‍್ಚು ಮಾಡಿ ಕಟ್ಟವ್ರೆ. ನಮ್ಮೂರ ಒಚ್ಚರಿಯಿಂದ ಮಾರ‍್ಕೊಂಡು ಬಂದ್ರು…ಅಂತಾದೊಂದು ಕಟ್ಟಡ ತಕೋಕಾಗೂದಿಲ್ಲ. ಒಂದು ಗಳ್ಗೆ ಇಲ್ಲೆ ನಿಂತಿರಿ. ಹೋಗಿ ಒಂದು ಪೇಪರ್ ತಕೊಂಡು ಬಂದುಬುಡ್ತೀನಿ.
[ರಂಗದ ಎಡಬದಿಯಿಂದ ಒಳಕ್ಕೆ ಹೋಗುತ್ತಾನೆ. ಈರಯ್ಯನವರು ಅತ್ತ-ಇತ್ತ ನೋಡುತ್ತಾ, ಅಲ್ಲಿ ನೇತುಹಾಕಿದ್ದ ಬೋರ‍್ಡ್ ಒಂದರಲ್ಲಿ ಅಂಟಿಸಿದ್ದ ಇಪ್ಪತ್ತು-ಮೂವತ್ತು ಪೋಟೊಗಳನ್ನು ಕಂಡು ಅಚ್ಚರಿಗೊಳ್ಳುತ್ತಾರೆ. ಅದರ ಮುಂದಕ್ಕೆ ಹೋಗಿ, ಆ ಪೋಟೊಗಳಲ್ಲಿನ ವ್ಯಕ್ತಿಗಳನ್ನೇ ನೋಡುತ್ತ ನಿಲ್ಲುತ್ತಾರೆ. ಅಶ್ಟರಲ್ಲಿ ರಮೇಶ ಬರುತ್ತಾನೆ]
ಈರಯ್ಯ—ಇದೇನ್ಲಾ ಮೊಗ!…ಇಲ್ಲಿ ಇಶ್ಟೊಂದು ಜನ ತಮ್ಮ ಪಟ ಹಾಕೊಂಡವ್ರೆ! ಈ ಬಸ್‍ಸ್ಟ್ಯಾಂಡ್ ಬಿಲ್ಡಿಂಗೆಲ್ಲಾ ಇವರ‍್ದೆಯೊ?
ರಮೇಶ—ನೀನು ಚೆನ್ನಾಗಿ ಹೇಳ್ದೆ ಕಣಪ್ಪ…ಇವರೆಲ್ಲಾ ಕಳ್ಳರು.
ಈರಯ್ಯ—ಏನಾ ಕಳ್ಳರೇ!….ಕಳ್ಳರ ಪಟವ ಇಲ್ಲ್ಯಾಕೆ ಹಿಂಗೆ ಹಾಕಿದ್ದರು?
[ ಪೇಪರ್ ತೆಗೆದುಕೊಂಡು ಪುಟ್ಟಸ್ವಾಮಿ ಅಲ್ಲಿಗೆ ಬರುತ್ತಾನೆ]
ರಮೇಶ—ಪುಟ್ಟಸ್ವಾಮಣ್ಣ…ಕಳ್ಳರ ಪೋಟೊಗಳ…ಇಲ್ಲಿ ಯಾಕೆ ಹಾಕವ್ರೆ ಅಂತ ನಮ್ಮಪ್ಪ ಕೇಳ್ತಾವ್ರೆ…ನೀವೇ ಹೇಳಿ.
ಪುಟ್ಟಸ್ವಾಮಿ—ಓ…ನೀವು ಯಾವತ್ತು ಬೆಂಗಳೂರ‍್ಗೆ-ಮೈಸೂರ‍್ಗೆ ಬಂದೋರೆ ಅಲ್ಲ. ಅದಕ್ಕೆ ನಿಮಗೆ ಗೊತ್ತಿಲ್ಲ.
[ಪೋಟೊಗಳ ಕಡೆ ಕಯ್ ತೋರಿಸುತ್ತಾ]
ಇವರೆಲ್ಲ ಒಂದಲ್ಲ ಒಂದ್ಸತಿ ಪಿಕ್‍ಪಾಕೆಟ್ ಮಾಡಿ…ಪೋಲಿಸರ ಕಯ್ಗೆ ಸಿಗಾಕೊಂಡು, ಜಯ್‍ಲ್ಗೆ ಹೋಗಿರೋ ಕಳ್ಳರು.
ಈರಯ್ಯ—ಜಯ್‍ಲ್ಗೆ ಹೋದ್ಮೇಲೆ…ತಿರ‍್ಗ ಇಲ್ಲಿಗೆ ಹೆಂಗ್ ಬಂದರು?
ಪುಟ್ಟಸ್ವಾಮಿ—ಜಯ್‍ಲ್ಗೆ ಹೊಯ್ತರೆ ಅಂದ್ರೆ…ಅಲ್ಲೆ ಜೀವಮಾನವೆಲ್ಲ ಇರೂದಿಲ್ಲ. ಎರಡು ತಿಂಗಳು ಮೂರು ತಿಂಗಳು ಸೆರೆಮನೆಗೆ ತಳ್ತರೆ. ಆಮೇಲೆ ಈಚ್ಗೆ ಬುಟ್‍ಬುಡ್ತರೆ . ಇವರು ತಿರ‍್ಗ ಪಿಕ್‍ಪಾಕೆಟ್ ಮಾಡ್ಕೊಂಡೆ ಜೀವನ ಕಳೀತಾರೆ. ಇದೇ ಕಸುಬು ಇವರ‍್ಗೆ.
ರಮೇಶ—ಅದಕ್ಕೆ “ಇಂತಾವರ ಬಗ್ಗೆ ಹುಶಾರಾಗಿರಿ” ಅಂತ ಜನಕ್ಕೆ ಎಚ್ಚರಿಕೆ ಕೊಡೂಕೆ…ಇವರ ಪೋಟೊಗಳನ್ನ ಸರ‍್ಕಾರದೋರು ಹಾಕವ್ರೆ. ಅಲ್ನೋಡಿ…ಆ ಪೋಟೊಗಳು ಇರೂ ಬೋರ‍್ಡ್ ಮೇಲೆ ಬರ‍್ದದೆ “ಕಳ್ಳರಿದ್ದಾರೆ…ಎಚ್ಚರಿಕೆ” ಅಂತ.
ಈರಯ್ಯ—ನಂಗೆ ಓದೋಕೆ ಬರಿಯೋಕೆ ಬಂದಿದ್ರೆ, ನಾನೇ ತಿಳ್ಕೊಬೊದಾಗಿತ್ತು. ನಿಮ್ಮ ಕೇಳ್ವಂಗೆ ಇರಲಿಲ್ಲ. ಹೋಗ್ಲಿ. ನಿನ್ತಾವು ಇರೂ ದುಡ್ಡು ಹುಶಾರು ಕಣ್ ಮಗ. ಎಲ್ಲಿಟ್ಟುಕೊಂಡಿದ್ದೀಯೆ ತೋರ‍್ಸು?
ರಮೇಶ—ನನ್ತಾವು ಯಾವ ಮಹಾ ದುಡ್ಡಿದ್ದದು? ಬೆಳಗ್ಗೆ ಊರಲ್ಲಿ ನೀವು ಕೊಟ್ಟಿದ್ದ ಅಯ್ನೂರು ತಾನೆ?
ಈರಯ್ಯ—ಎಶ್ಟಾರ ಆಗ್ಲಿ. ಅದು ದುಡ್ಡಲ್ಲವೇ? ತೋರ‍್ಸು. ಯಾವ ಜೋಬಲ್ಲಿ ಇಟ್ಕೊಂಡಿದ್ದೀಯೆ? ಸರ‍್ಕಾರದೋರು ಈಪಾಟಿ ಎಚ್ಚರಿಕೆ ಕೊಟ್ಟವ್ರೆ ಅಂದ್ಮೇಲೆ ನಮ್ಮ ಹುಶಾರಲ್ಲಿ ನಾವಿರ‍್ಬೇಕು.
[ರಮೇಶನು ತನ್ನ ಬುಶ್‍ಶರ‍್ಟ್ ಮೇಲಿನ ಜೇಬನ್ನು ಅಪ್ಪನಿಗೆ ತೋರಿಸತೊಡಗುತ್ತಾನೆ. ಅದೇ ಸಮಯದಲ್ಲಿ ರಂಗದ ಎಡಬದಿಯಿಂದ ಇಪ್ಪತ್ತರ ಹರೆಯದ ಒಬ್ಬ ತರುಣ ಅಲ್ಲಿಗೆ ಬರುತ್ತಾನೆ. ಅವನು ತೊಟ್ಟಿರುವ ಉಡುಗೆ ಅಲ್ಲಲ್ಲಿ ಹರಿದಿದೆ ಮತ್ತು ತುಂಬಾ ಕೊಳಕಾಗಿದೆ. ಬಗಲಲ್ಲಿ ಒಂದು ಚಿಕ್ಕ ಚೀಲ ನೇತಾಡುತ್ತಿದೆ. ತನ್ನಲ್ಲಿಯೇ ಏನೇನೋ ಗೊಣಗಿಕೊಳ್ಳುತ್ತಾ. ರಂಗದ ಬಲಬದಿಗೆ ಬಂದು ನಿಲ್ಲುತ್ತಾನೆ. ಈರಯ್ಯ ಮತ್ತು ರಮೇಶ ತಮ್ಮ ಮಾತುಗಳಲ್ಲೇ ಮಗ್ನರಾಗಿದ್ದಾರೆ]
ರಮೇಶ—[ತನ್ನ ಜೇಬಿನ ಬಾಯನ್ನು ತೋರಿಸುತ್ತ] ಇಲ್ಲೆ ಅದೆ ಕಣಪ್ಪ.
(ಮೆಲ್ಲನೆಯ ದನಿಯಲ್ಲಿ)
ನಂದು ಇರ‍್ಲಿ…ನಿಮ್ತಾವಿರು ದುಡ್ಡು ಹುಶಾರು ಕಣಪ್ಪ.
ಈರಯ್ಯ—[ತನ್ನ ನಡುವಿನ ಉಬ್ಬಿದ ಜಾಗದ ಮೇಲೆ ಕೈಯಾಡಿಸುತ್ತ]
ಇಲ್ಲಿಗೆ ಕಯ್ ಹಾಕಿ ಕೀಳೂ ಮಗ ಯಾವೋನು ಇದ್ದನು? ಅಯ್ಯನ ಗುಡಿ ಜಾತ್ರೇಲಿ, ಮುಡುಕುತೊರೆ ಜಾತ್ರೇಲಿ ದನ ತೆಗಿಯೋಕೆ ಹೋದಾಗಲೆಲ್ಲಾ ನನ್ ಒಬ್ಬನದೆ ಅಲ್ಲ…ನಮ್ಮೂರಿನ ನಾಲ್ಕಾರು ಜನದ ದುಡ್ಡು ಎರಡು ಮೂರು ಲಕ್ಶ ಇಟ್ಕೊಂಡು ತಿರುಗಾಡಿವ್ನಿ. ಯಾವತ್ತು ಒಂದು ಕಾಸು ಕಳ್ಕೊಂಡೋನಲ್ಲ. ನಿಂತಾವಿರು ದುಡ್ಡ ಹುಶಾರಾಗಿ ನೋಡ್ಕೊ.
[ಪುಟ್ಟಸ್ವಾಮಿಯು ಈಗ ಇವರಿಬ್ಬರ ಗಮನವನ್ನು ಆ ತರುಣನತ್ತ ತಿರುಗಿಸುತ್ತಾನೆ]
ಪುಟ್ಟಸ್ವಾಮಿ—ಅಲ್ನೋಡಿ, ಅವನ್ಯಾರೊ, ಏನು ಮಾಡ್ತಾವ್ನೆ?
[ಎಲ್ಲರು ಅತ್ತ ನೋಡತೊಡಗುತ್ತಾರೆ. ಆ ತರುಣನು ತನ್ನ ಬಗಲಲ್ಲಿದ್ದ ಚೀಲದಿಂದ ನಾಲ್ಕಾರು ಪೇಪರ್ ಕಟಿಂಗ್ ಪೋಟೊಗಳನ್ನು ತೆಗೆದು, ಅವಕ್ಕೆ ಗೋಂದನ್ನು ಸವರಿ, ಬಸ್‍ಸ್ಟ್ಯಾಂಡಿನ ಗೋಡೆಯ ಮೇಲೆ ಅಂಟಿಸುತ್ತಾನೆ. ಅನಂತರ ಆ ಪೋಟೊಗಳನ್ನು ನೋಡುತ್ತ. ಚಪ್ಪಾಳೆ ತಟ್ಟುತ್ತಾನೆ. ಮರುಗಳಿಗೆಯಲ್ಲಿಯೇ ಗಟ್ಟಿಯಾಗಿ ನಗುತ್ತಾನೆ. ಕೆಲವು ಗಳಿಗೆಯ ನಂತರ ಜೋರಾಗಿ ಅಳತೊಡಗುತ್ತಾನೆ. ಅನಂತರ ಗಟ್ಟಿಯಾದ ದನಿಯಿಂದ ಅರಚತೊಡಗುತ್ತಾನೆ. ಜೋರಾದ ಈ ಗದ್ದಲವನ್ನು ಕೇಳಿ, ಬಸ್‍ಸ್ಟ್ಯಾಂಡಿನ ವಾಚ್‍ಮನ್ ಲಾಟಿಯೊಂದನ್ನು ಕಯ್ಯಲ್ಲಿ ಹಿಡಿದು ಅದನ್ನು ನೆಲಕ್ಕೆ ಬಡಿದು ಗದ್ದರಿಸುತ್ತಾ, ರಂಗದ ಎಡಬದಿಯಿಂದ ಬರುತ್ತಾನೆ ]
ವಾಚ್‍ಮನ್—ಏ…ಏ…ಏನ್ ಮಾಡ್ತ ಇದ್ದೀಯೋ ಅಲ್ಲಿ?
[ವಾಚ್‍ಮನ್ನನ ಅಬ್ಬರವನ್ನು ಕೇಳಿದ ಕೂಡಲೇ, ಆ ತರುಣ ಅಲ್ಲಿಂದ ಬಿದ್ದಂಬೀಳ ಓಡುತ್ತಾ, ರಂಗದ ಬಲಬದಿಯಿಂದ ಒಳಕ್ಕೆ ಸರಿಯುತ್ತಾನೆ]
ವಾಚ್‍ಮನ್—[ತರುಣನು ಓಡಿ ಹೋದ ಕಡೆಗೆ ನೋಡುತ್ತ] ಏ…ಲುಚ್ಚಾ …ನಿಂತ್ಕೋ ಇಲ್ಲಿ….ನೀನು ಕಯ್ಗೆ ಸಿಕ್ಕು…ಸರಿಯಾಗಿ ಮಾಡ್ತೇನೆ.
(ಎನ್ನುತ್ತಾ ಮತ್ತೊಮ್ಮೆ ಲಾಟಿಯನ್ನು ನೆಲಕ್ಕೆ ಬಡಿಯುತ್ತಾನೆ)
ಪುಟ್ಟಸ್ವಾಮಿ—ಅವನ್ಯಾರು ?
ವಾಚ್‍ಮನ್—ಅವನ್ಯಾರೊ ತಲೆ ಕೆಟ್ಟೋನು ಕಣ್ರಿ. ನೆನ್ನೆಯಿಂದ ಇಲ್ಲೆ ಸಾಯ್ತಾವ್ನೆ.
ಪುಟ್ಟಸ್ವಾಮಿ—(ಬಸ್‍ಸ್ಟ್ಯಾಂಡಿನ ಗೋಡೆಯ ಕಡೆಗೆ ಕಯ್ಯನ್ನು ತೋರಿಸುತ್ತಾ) ಅಲ್ಲಿ…ಅದೇನ್ ಅಂಟಿಸವ್ನಲ್ಲ?
ವಾಚ್‍ಮನ್—ಪೇಪರ್‍ಗಳಲ್ಲಿ ಬಂದಿರೂ ಪೋಟೊಗಳು ಕಣ್ರಿ. ಎಲ್ಲಾ ಕಡೆ ಹಿಂಗೆ ಅಂಟಿಸ್ಕೊಂಡು ಹೊಯ್ತಿರ‍್ತನೆ. ಅವನ ಚೀಲದ ತುಂಬಾ ಬರಿ ಪೋಟೋಗಳೆ ಅವೆ!
ಪುಟ್ಟಸ್ವಾಮಿ—ಯಾರ ಪೋಟೊಗಳು ?
ವಾಚ್‍ಮನ್—“ಕೋಟಿಗಟ್ಟಲೆ ಹಣ ನುಂಗಿ, ಆಸ್ತಿ-ಪಾಸ್ತಿ ಮಾಡವ್ರೆ” ಅನ್ನುವ ಆರೋಪಕ್ಕೆ ಗುರಿಯಾಗವ್ರಲ್ಲ…ಅಂತಾ ರಾಜಕಾರಣಿಗಳ…ದೊಡ್ಡ ದೊಡ್ಡ ಆಪೀಸರ್‍ಗಳ ಪೋಟೊಗಳು ಕಣ್ರಿ. ಇಂಗ್ಲಿಶು , ಕನ್ನಡ ಎಲ್ಲಾ ಪೇಪರ್‍ಗಳಲ್ಲೂ, ಮ್ಯಾಗಜಿನ್‍ಗಳಲ್ಲೂ ಬಂದಿರೋದ್ನ ಕತ್ರಿಸಿ ಕತ್ರಿಸಿ ಇಟ್ಕೊಂಡವ್ನೆ.
ಪುಟ್ಟಸ್ವಾಮಿ—ಇದೊಂದು ತರ ಹುಚ್ಚು!
ವಾಚ್‍ಮನ್—ಅವನ್ಗೆ ಹುಚ್ಚು. ನಮಗೆ ಗ್ರಾಚಾರ. ಬಸ್‍ಸ್ಟ್ಯಾಂಡಿನಲ್ಲಿ ಯಾರ‍್ಯಾರೋ…ಏನೇನೊ ಅಂಟಿಸ್ತಾ ಇದ್ರೆ, ನೀನೇನು ಕತ್ತೆ ಮೇಯಿಸ್ತಾ ಇದ್ದೀಯ ಅಂತ ನಮ್ಮ ಸಾಹೇಬರು ಉಗೀತಾವ್ರೆ.[ಮತ್ತೆ ಆ ತರುಣನನ್ನು ಬಯ್ಯುತ್ತಾ, ಗೋಡೆಯ ಮೇಲೆ ಅವನು ಅಂಟಿಸಿದ್ದ ಪೋಟೊಗಳನ್ನು ಕಿತ್ತು ಹಾಕಿ, ರಂಗದ ಬಲಬದಿಯಿಂದ ವಾಚ್‍ಮನ್ ಒಳಸರಿಯುತ್ತಾನೆ]
ಈರಯ್ಯ—ಏನೋ ವಿಚಿತ್ರ!
ಪುಟ್ಟಸ್ವಾಮಿ—ನಡೀರಿ ಮತ್ತೆ ಹೋಗೋಣ.
ಈರಯ್ಯ—ನೀನು ಮುಂದಕ್ಕೆ ನಡೆದರಲ್ಲವೇ, ನಾವು ಬರೋದು.
ರಮೇಶ—ಪುಟ್ಟಸ್ವಾಮಣ್ಣ, ಈಗ ಮೊದಲು ಎಲ್ಲಿಗೆ ಹೋಗೋಣ?
ಪುಟ್ಟಸ್ವಾಮಿ—ಈಗ ಮೊದ್ಲು ದೊಡ್ಡ ಕಚೇರಿ ಹತ್ರ ಹೋಗಿ, ‘ಇಂಟರ್‍ವ್ಯೂ ಕಾರ‍್ಡ್’ ಕಳಿಸವ್ರಲ್ಲ, ಆ ಆಪೀಸರ‍್ನ ನೋಡ್ಮ. ಇವತ್ಗೆ ಇಪ್ಪತ್ತು ದಿವಸದ ಹಿಂದೆ, ನಾನು ಬಂದು ಅವರ‍್ನ ಕಂಡಿದ್ದಾಗ “ಇಂಟರ್‍ವ್ಯೂ ಕಾರ‍್ಡ್ ಬಂದ ಕೂಡ್ಲೆ ನನ್ನ ಬಂದು ನೋಡಿ” ಅಂತ ಹೇಳಿದ್ರು.
ಈರಯ್ಯ—ಹಂಗಾದ್ರೆ ನಡೀರಿ, ಅಲ್ಗೆ ಹೋಗುವ.
[ರಂಗದ ಬಲಬದಿಯತ್ತ ಎಲ್ಲರೂ ಅಡಿಯಿಡತೊಡಗುತ್ತಾರೆ]
ಪುಟ್ಟಸ್ವಾಮಿ—ರಮೇಶ, ಹಂಗೆ ಹೊಯ್ತಿರುವಾಗ ನಿಂಬೆಹಣ್ಣು ಮಾರ‍್ತಾಯಿರೋದು ಕಂಡ್ರೆ, ನಂಗೊಸಿ ಹೇಳು.
ಈರಯ್ಯ—ನಿಂಬೆಹಣ್ಣು ಯಾಕೆ?
ಪುಟ್ಟಸ್ವಾಮಿ—ದೊಡ್ಡ ದೊಡ್ಡ ಆಪೀಸರ್‍ಗಳನ್ನ, ಎಂ.ಎಲ್.ಎ.,ಗಳನ್ನ, ಮಂತ್ರಿಗಳನ್ನ ನೋಡೋಕೆ ಹೋದಾಗ, ನನ್ನ ಜೇಬ್ನಲ್ಲಿ ಯಾವಾಗ್ಲು ನಿಂಬೆಹಣ್ಣು ಇರ‍್ತದೆ. ಅವರನ್ನು ನೋಡಿದ ಕೂಡಲೇ, ಅವರ ಕಯ್ಗೆ ಒಂದು ಹಣ್ಣು ಕೊಟ್ಬುಟ್ಟು , ನಮಸ್ಕಾರ ಮಾಡುದ್ರೆ, ಅವರ‍್ಗೆ ಏನೋ ಒಂತರಾ ಆನಂದ ಆಯ್ತದೆ.
ಈರಯ್ಯ—ನೀನು ಬುಡಪ್ಪ, ಅಯ್ನಾತಿ ಕುಳ. ಬರಿ ಮಾತಲ್ಲೆ ಮಂಗ್ರಮಾಯ ಮಾಡಿ, ತಿಂಗಳು ಬೆಳಕ ತೋರಿಸ್ಬುಡ್ತೀಯೆ!
ಪುಟ್ಟಸ್ವಾಮಿ—ಹಂಗಿಲ್ದೇದ್ರೆ ಈಗಿನ ಕಾಲದಲ್ಲಿ ಬದುಕಾದದೇ?
[ರಂಗದ ಒಳಬದಿಯ ಕಡೆಗೆ ನೋಡುತ್ತಾ]
ರಮೇಶ, ಅಲ್ಲಿ ಹೊಯ್ತಾದಲ್ಲ…ಆ ಆಟೋ ಕರಿ…ಅದರಲ್ಲೇ ಹೋಗೋಣ.
ರಮೇಶ—ಆಟೋ…ಆಟೋೀ…[ಎಂದು ಕೂಗುತ್ತ, ರಂಗದ ಒಳಬದಿಗೆ ಸರಿಯುತ್ತಾನೆ. ಈರಯ್ಯ ಮತ್ತು ಪುಟ್ಟಸ್ವಾಮಿ ಅದೇ ದಿಕ್ಕಿನಲ್ಲಿ ನಡೆಯುತ್ತಿದ್ದಂತೆಯೇ ರಂಗದ ಮೇಲೆ ಕತ್ತಲು ಆವರಿಸುತ್ತದೆ. ಮತ್ತೆ ತುಸು ಸಮಯದ ನಂತರ ರಂಗದ ಮೇಲೆ ಬೆಳಕು ಹರಡಿದಾಗ, ಕಚೇರಿಯ ಪರಿಸರ ಕಂಡು ಬರುತ್ತದೆ. ಕುರ‍್ಚಿಯೊಂದರಲ್ಲಿ ಆಪೀಸರ್ ಒಬ್ಬರು ಕುಳಿತಿದ್ದಾರೆ. ಅಲ್ಲಿಗೆ ಮೊದಲು ಪುಟ್ಟಸ್ವಾಮಿ ಬರುತ್ತಾನೆ]
ಪುಟ್ಟಸ್ವಾಮಿ—(ನಿಂಬೆಹಣ್ಣನ್ನು ಅವರ ಕಯ್ಗೆ ನೀಡುತ್ತಾ) ನಮಸ್ಕಾರ ದೇವರು, ಚೆನ್ನಾಗಿದ್ದೀರಾ?
ಆಪೀಸರ‍್—ಹೂ…ಚೆನ್ನಾಗಿದ್ದೀನಿ. ಇಂಟರ್‍ವ್ಯೂ ಕಾರ‍್ಡ್ ಬತ್ತೇನ್ರಿ?
ಪುಟ್ಟಸ್ವಾಮಿ—ನೆನ್ನೇನೆ ಬಂತು ದೇವರು. ಅದಕ್ಕೆ ಇವತ್ತು ತಮ್ಮನ್ನ ನೋಡ್ಕೊಂಡು ಹೋಗೋಣ ಅಂತ ಬಂದೊ.
ಆಪೀಸರ‍್—ಏನು ಬರಿ ಕಯ್ಯಲ್ಲಿ ನೋಡ್ಕೊಂಡು ಹೋಗೋಕೆ ಬಂದ್ರ?
ಪುಟ್ಟಸ್ವಾಮಿ—ಇಲ್ಲ ದೇವರು. ಆ ಹುಡುಗನ ತಂದೇನೂ, ಆ ಹುಡುಗನನ್ನೂ ಜೊತೇಲಿ ಕರ‍್ಕೊಂಡು ಬಂದಿದ್ದೀನಿ. ನೀವು ಹೇಳಿದ್ದಕ್ಕೆ ಏರ‍್ಪಾಡು ಮಾಡಿದ್ದೀನಿ.
ಆಪೀಸರ‍್—ಮೊದಲು ಮಾತಾಡಿದಶ್ಟು ತಂದಿದ್ದೀರಿ ತಾನೆ?
ಪುಟ್ಟಸ್ವಾಮಿ—ಇವತ್ತು ಹತ್ತು ಸಾವಿರ ಕೊಡಿಸ್ತೀನಿ. ಈಸ್ಕೊಳಿ ದೇವರು.
ಆಪೀಸರ‍್—ಏನು, ಹತ್ತು ಸಾವಿರವ? ಇಪ್ಪತ್ತು ಅಂತ ಅವತ್ತೆ ಹೇಳಿರಲಿಲ್ವೇನ್ರಿ?
ಪುಟ್ಟಸ್ವಾಮಿ—ಹೇಳಿದ್ರಿ ದೇವರು, ಆದ್ರೆ…
ಆಪೀಸರ‍್—ಆದರೆ ಅಂದ್ರೆ ಏನ್ರಿ? “ಯಾರ‍್ಯಾರ ಹತ್ರ ಹೋಗ್ಬೇಕು? ಯಾರ‍್ಯಾರ‍್ನ ಹಿಡಿಬೇಕು? ನಮಗೆ ಎಲ್ಲಾ ದಾರೀನು ಹೇಳ್ಕೊಡಿ ಸಾರ‍್” ಅಂತ ನೀವು ಅವತ್ತು ಕೇಳ್ಕೊಂಡಿರಲಿಲ್ವೇನ್ರಿ?
ಪುಟ್ಟಸ್ವಾಮಿ—ಇಲ್ಲ ಅಂತೀನಾ ದೇವರು.
ಆಪೀಸರ‍್—ನೋಡ್ರಿ…ನಿಮ್ಮ ಹುಡುಗನಿಗೆ ಇಂಟರ್‍ವ್ಯೂ ಕಾರ‍್ಡ್ ಬಂದ ಮಾತ್ರಕ್ಕೆ ಕೆಲ್ಸ ಗ್ಯಾರಂಟಿಯಾಗಿ ಸಿಗುತ್ತೆ ಅಂತ ನಂಬ್ಕೊಬೇಡಿ. ಎಂಬತ್ತೇಳು ಪರ‍್ಸೆಂಟ್ ತಕೊಂಡು, ಮೂರನೆಯ ರ‍್ಯಾಂಕ್ ಬಂದಿರೋ ನಿಮ್ಮ ಹುಡುಗನಿಗೆ ಕಳಿಸ್ದಂಗೆ, ಎಪ್ಪತ್ತು ಪರ‍್ಸೆಂಟ್ ತಕೊಂಡು, ಪಸ್ಟ್ ಕ್ಲಾಸ್ ಬಂದಿರೋ ಹುಡುಗನಿಗೂ ಇಂಟರ್‍ವ್ಯೂ ಕಾರ‍್ಡ್ ಕಳ್ಸಿದೆ. ಇವರಲ್ಲಿ ಯಾರು ಬೇಕಾದ್ರು ಸೆಲೆಕ್ಟ್ ಆಗಬಹುದು, ಗೊತ್ತಾ?
ಪುಟ್ಟಸ್ವಾಮಿ—ನಂಬರು, ರ‍್ಯಾಂಕು, ಚಿನ್ನದ ಪದಕ ಇವೆಲ್ಲಾನು ನೋಡುದಿಲ್ವೆ ದೇವರು?
ಆಪೀಸರ‍್—ಇಂಟರ್‍ವ್ಯೂ ಮಾಡೋದು ಯಾಕೆ ಅಂತ ಗೊತ್ತೇನ್ರಿ ನಿಮಗೆ?
ಪುಟ್ಟಸ್ವಾಮಿ—ಅದೇ ಕೆಲಸಕ್ಕೆ ತಕೋಕೆ.
ಆಪೀಸರ‍್—ಯಾರ‍್ನ?
ಪುಟ್ಟಸ್ವಾಮಿ—ಮೆರಿಟ್ ಇರೋರ‍್ನ.
ಆಪೀಸರ‍್—ದಡ್ ದಡ್ಡರಂಗೆ ಮಾತಾಡ್ಬೇಡ್ರಿ. ಇಂಟರ್‍ವ್ಯೂ ಮಾಡೋದು ಮೆರಿಟ್ ಬಂದೋರ‍್ನ ತುಳಿಯೋಕೆ; ತಮಗೆ ಬೇಕಾದೋರ‍್ನ ಸೆಲೆಕ್ಟ್ ಮಾಡೋಕೆ. ‘ಬೇಕಾದವರು’ ಅಂದ್ರೆ ಗೊತ್ತು ತಾನೆ?
ಪುಟ್ಟಸ್ವಾಮಿ—ಗೊತ್ತು ದೇವರು. ಅವತ್ತು ನೀವೇ ಹೇಳಿದ್ರಲ್ಲ. ಆಯ್ಕೆ ಮಾಡೋ ಮೆಂಬರುಗಳ ಜಾತಿ ಹುಡುಗರು, ಅವರಲ್ಲೂ ದುಡ್ಡು ಕೊಟ್ಟೋರು.
ಆಪೀಸರ‍್—ನೋಡುದ್ರಾ, ಎಲ್ಲಾನು ತಿಳ್ಕೊಂಡಿದ್ದೀರಿ. ಮತ್ತೆ ದುಡ್ಡು ಉಳಿಸ್ಬೇಕು ಅಂತ ಏನೇನೂ ಸಬೂಬು ಹೇಳ್ಬೇಡಿ. ನೀವು ಈಗ ಇಪ್ಪತ್ತು ಸಾವಿರ ಕೊಡಲಿಲ್ಲ ಅಂದ್ರೆ, ಮುಂದಕ್ಕೆ ನಿಮ್ಮ ಹುಡುಗನಿಗೆ ತೊಂದರೆಯಾದ್ರೂ ಆಗಬಹುದು. ಹೀಗೆ ಹೇಳ್ತೀನಿ ಅಂತ ಏನೂ ತಿಳ್ಕೊಬೇಡಿ. (ತನ್ನಲ್ಲಿಯೇ) ತುತ್, ನಮ್ಮ ಜನವೇ ಹಿಂಗೆ. ಕೆಲ್ಸ ಆಗೋತನಕ ಒಂದು ಮಾತು, ಆದ್ಮೇಲೆ ಮತ್ತೊಂದು ಮಾತು.
ಪುಟ್ಟಸ್ವಾಮಿ—ಇಶ್ಟೊಂದು ಬೇಜಾರು ಮಾಡ್ಕೊಂಡ್ರೆ ಹೆಂಗೆ ದೇವರು? ಆಗ್ಲಿ ಮೊದಲು ಮಾತಾಡಿದ್ದಶ್ಟನ್ನೇ ಕೊಡಿಸ್ತೀನಿ. ದಯವಿಟ್ಟು ಮುಂದುಕ್ಕೂ ನೀವೇ ದಾರಿ ತೋರಿಸ್ಬೇಕು.
ಆಪೀಸರ‍್—ಮೊದಲು ತಕೊಂಡು ಬನ್ನಿ.
[ರಂಗದ ಎಡಬದಿಯಿಂದ ಪುಟ್ಟಸ್ವಾಮಿಯು ಒಳಕ್ಕೆ ಸರಿದು, ಮತ್ತೆ ಕೆಲವೇ ಗಳಿಗೆಯಲ್ಲಿ ಈರಯ್ಯ ಮತ್ತು ರಮೇಶರ ಜೊತೆಗೂಡಿ ಬಂದು ಆಪೀಸರ್ ಅವರ ಮುಂದೆ ನಿಂತುಕೊಂಡು, ಈರಯ್ಯನವರನ್ನು ಕುರಿತು]
ಪುಟ್ಟಸ್ವಾಮಿ—ಈಗ ಅದರಲ್ಲಿ ಇಪ್ಪತ್ತು ಸಾವಿರ ಈಚೆಗೆ ತಗೊಳಿ. ಇವರ‍್ಗೆ, ಇಲ್ಲಿ ಕೊಡ್ಬೇಕು.
ಈರಯ್ಯ—ಎಶ್ಟು ಅಂದಪ್ಪ? ಇಪ್ಪತ್ತು ಸಾವಿರವೇ?
ಪುಟ್ಟಸ್ವಾಮಿ—ಹೂ. ಬೇಗ ಬೇಗ ತಗೀರಿ. ಇವರ‍್ತಕೆ ಹತ್ತಾರು ಜನ ಬತ್ತಾಯಿರ‍್ತರೆ-ಹೊಯ್ತಾಯಿರ‍್ತರೆ. ಇವತ್ತು ಏನು ಬಗೆಯೊ ಒಸಿ ಪುರ‍್ಸೊತ್ತಾಗವ್ರೆ.
[ತನ್ನ ಅಂಗಿಯನ್ನು ಈರಯ್ಯ ಮೇಲಕ್ಕೆ ಎತ್ತಿ , ನಡುವಿನಲ್ಲಿ ಬಿಗಿದು ಕಟ್ಟಿದ್ದ ಹಣದ ಗಂಟನ್ನು ಬಿಚ್ಚಿ, ಅದರೊಳಗಿನಿಂದ ಇಪ್ಪತ್ತು ಸಾವಿರ ರೂಗಳನ್ನು ತೆಗೆದು, ಮತ್ತೆ ಗಂಟನ್ನು ಹಾಗೆಯೆ ನಡುವಿಗೆ ಬಿಗಿದು ಕಟ್ಟಿ, ಅಂಗಿ ಬಟ್ಟೆಯನ್ನು ಮೇಲೆ ಬಿಡುತ್ತಾರೆ. ಈಗ ಮತ್ತೊಮ್ಮೆ ದುಡ್ಡನ್ನು ಎಣಿಸಿ]
ಈರಯ್ಯ—ಹೂ, ತಕೊಳಪ್ಪ.
[ಹಣವನ್ನು ಪುಟ್ಟಸ್ವಾಮಿಯ ಕಯ್ಗೆ ನೀಡಲು ಮುಂದಾಗುತ್ತಾರೆ]
ಪುಟ್ಟಸ್ವಾಮಿ—ನನ್ನ ಕಯ್ಗೆ ಒಂದ್ಸತಿ ಯಾಕೆ? ಹೆಂಗಿದ್ರು ನೀವೇ ಬಂದಿದ್ದೀರಲ್ಲ, ಕೊಡ್ಬನ್ನಿ ನೀವೆ.
ಈರಯ್ಯ—ಒಪ್ಪಿಸ್ಕೊಬೇಕು ಬುದ್ದಿ.
( ಆಪೀಸರ್ ಅವರಿಗೆ ಹಣವನ್ನು ನೀಡಿ, ಕಯ್ ಮುಗಿಯುತ್ತಾರೆ)
ಆಪೀಸರ‍್—[ನೋಟುಗಳನ್ನು ಎಣಿಸಿಕೊಂಡು, ಜೇಬಿನಲ್ಲಿಟ್ಟುಕೊಂಡ ನಂತರ]
ಎಲ್ಲಾ ಒಳ್ಳೇದಾಗ್ಲಿ…ಪುಟ್ಟಸ್ವಾಮಿ ಅವರ‍್ಗೆ ಯಾರ‍್ಯಾರನ್ನು ನೋಡ್ಬೇಕು ಅಂತ ಅವತ್ತೆ ಹೇಳಿದ್ದೇನೆ. ನೀವು ಅವರ‍್ನೆಲ್ಲಾ ಸರಿಯಾಗಿ ನೋಡ್ಕೊಂಡ್ರೆ, ನಿಮ್ಮ ಹುಡುಗನಿಗೆ ಕೆಲ್ಸ ಗ್ಯಾರಂಟಿ ಸಿಗುತ್ತೆ. ನಿಮ್ಮ ಹುಡುಗ ಸೆಲೆಕ್ಟ್ ಆದ್ಮೇಲೆ, ನಮ್ಮ ಕಚೇರಿಯಿಂದ ಏನೇನು ಅನುಕೂಲ ಬೇಕೊ ಅದ್ನೆಲ್ಲಾ ಮಾಡ್ಕೊಡ್ತೀನಿ.
ಈರಯ್ಯ—ಹೆಂಗೊ ನಿಮ್ಮ ದಯ ಬುದ್ದಿ. ನಿಮ್ಮ ಉಪ್ಕಾರನ ನಾ ಸಾಯೂಗಂಟ ಮರಿಯೂದಿಲ್ಲ.
ಪುಟ್ಟಸ್ವಾಮಿ—ಅವರು ಇರೂದೆ ಹಿಂಗೆ ಹತ್ತಾರು ಜನಕ್ಕೆ ಒಳ್ಳೇದು ಮಾಡೋಕೆ.
(ರಮೇಶನನ್ನು ತೋರಿಸುತ್ತಾ)
ಇವನೇ ದೇವರು, ನಮ್ಮ ಹುಡುಗ.
[ರಮೇಶ ಕಯ್ ಮುಗಿಯುತ್ತಾನೆ]
ಆಪೀಸರ‍್—ಇಂಟರ್‍ವ್ಯೂನಲ್ಲಿ ಹೆದರಿಕೊಳ್ಳದೆ ಹಿಂಜರಿಯದೆ ಚೆನ್ನಾಗಿ ಮಾಡ್ಬೇಕ್ರಿ.
ರಮೇಶ—ಮಾಡ್ತೀನಿ ಸಾರ್.
ಆಪೀಸರ‍್—ನಿನಗೆ ಎಲ್ಲಾ ಒಳ್ಳೆಯದಾಗಲಿ . ಇನ್ನು ಹೋಗ್ಬನ್ನಿ.
ಈರಯ್ಯ—ಇನ್ನೂ ಯಾರ‍್ಯಾರ‍್ತಕೆ ಹೋಗ್ಬೇಕು ಬುದ್ದಿ?
ಆಪೀಸರ‍್—ನಿಮ್ಮ ಜಿಲ್ಲಾ ಮಂತ್ರಿಗಳು ಹೆಂಗಿದ್ರು ನಿಮ್ಮ ಜನವೇ. ಅವರನ್ನ ನೀವು ಬಿಗಿಯಾಗಿ ಹಿಡ್ಕೊಂಡ್ರೆ ನಿಮ್ಮ ಕೆಲಸ ಆದಂಗೆ.
ಪುಟ್ಟಸ್ವಾಮಿ—(ಈರಯ್ಯನವರತ್ತ ನೋಡುತ್ತಾ)
ನಂಗೆಲ್ಲಾನು ಆಗ್ಲೆ ಹೇಳವ್ರೆ ಬನ್ನಿ. ಅಲ್ಲೆಲ್ಲಾ ಹೋಗವ.
(ಆಪೀಸರ್ ಅವರನ್ನು ಕುರಿತು)
ದೇವರು, ಮುಂದಿನ ಶನಿವಾರ ತಿರ‍್ಗ ಬಂದು ನೋಡ್ಲೆ ನಿಮ್ಮನ್ನ.
ಆಪೀಸರ‍್—ಇಂಟರ್‍ವ್ಯೂ ಯಾವತ್ತು?
ರಮೇಶ—ಇಪ್ಪತ್ಮೂರನೆ ತಾರೀಕು ಮಂಗಳವಾರ ಸಾರ್.
ಪುಟ್ಟಸ್ವಾಮಿ—ಇವತ್ಗೆ ಎಂಟು ದಿವಸಕ್ಕೆ ಅದೆ ದೇವರು.
ಆಪೀಸರ‍್—ಹಾಗಾದ್ರೆ ಶನಿವಾರ ಬರೋದು ಬೇಡಿ. ಇಪ್ಪತ್ತೆರಡನೆ ತಾರೀಕು ಸೋಮವಾರ ಸಾಯಂಕಾಲ ನಾಲ್ಕು ಗಂಟೆಗೆ ಬಂದು ನೋಡಿ. ಅದಕ್ಕೂ ಮುಂಚೆ ನಾನು ಹೇಳಿದ ಕಡೆಯಲ್ಲೆಲ್ಲಾ ಹೋಗಿ ಬಂದೋಬಸ್ತು ಮಾಡ್ಕೊಳಿ.
ಪುಟ್ಟಸ್ವಾಮಿ—ಆಗ್ಲಿ ದೇವರು. ನಾವು ಬರ‍್ತೀವಿ.
[ಎಲ್ಲರೂ ಕಯ್ ಮುಗಿದು,ಅಲ್ಲಿಂದ ತೆರಳುತ್ತಾರೆ. ರಂಗದ ಬಲಬದಿಯ ಅಂಚಿಗೆ ಬರುತ್ತ]
ಈಗ ಸೀದಾ ಇಲ್ಲಿಂದ ನಮ್ಮ ಮಂತ್ರಿಗಳ ಬಂಗ್ಲೇತಕೆ ಹೋಗೋಣ.
ಈರಯ್ಯ—ನಡೀರಿ ಮತ್ತೆ, ದೊಡ್ಡಜ್ಜೆ ಹಾಕೊಂಡು.
ಪುಟ್ಟಸ್ವಾಮಿ—ಬಂಗ್ಲೆ ಇಲ್ಲೆ ಅದೆ ಅಂತ ತಿಳ್ಕೊಂಡ್ರ. ಸಕನೆ ದೂರ ಅದೆ. ಒಂದು ಆಟೋ ಹಿಡ್ದು ಹೋಗೋಣ. ರಮೇಶ, ಹಂಗೆ ಹೊಯ್ತಾ ಹಾರ ತಕೋಬೇಕು ಕಣಪ್ಪ, ನೆಪ್ ಮಾಡು.
[ರಂಗದ ಬಲಬದಿಯಿಂದ ಒಳಕ್ಕೆ ಅವರೆಲ್ಲರೂ ಸರಿಯುತ್ತಿದ್ದಂತೆಯೇ, ರಂಗದ ಮೇಲೆ ಕತ್ತಲು ತುಂಬಿಕೊಳ್ಳುತ್ತದೆ]
(ಮುಂದುವರೆಯುವುದು : ಎರಡನೆ ಕಂತು ನಾಳೆಗೆ)
1 Response
[…] ಕಂತು-1 ಕಂತು-2 […]