ಕಡುಬಿಸಿಲಿಗೆ ತಂಪಾದ ರಾಗಿ ಅಂಬಲಿ

ಸುನಿತಾ ಹಿರೇಮಟ.

Ragi Ambali

“ಬ್ಯಾಸಿಗಿನಾಗ್ ಹೊಟ್ಟಿಗಿ ತಂಪ ಕೊಡೊದು ರಾಗಿ ಅಂಬ್ಲಿ, ಕರೆ ಇದು ಮಾಡುದು ಸತಿ ಬಾಳ್ ಸುಲಬ.”

ಇದನ್ನ ಸಿಹಿಯಾಗಿ ಇಲ್ಲ ಉಪ್ಪಿನ ರುಚಿಯಲ್ಲಿ ಮಾಡಿಕೊಳ್ಳಬಹುದು. ಇದಕ್ಕೆ ಬೇಕಾಗುವ ಸಾಮಾನುಗಳು ಸಹ ಕೆಲವೇ ಕೆಲವು.

ಒಂದು ಬಟ್ಟಲು ಅಂಬಲಿಗೆ ಬೇಕಾಗುವ ಸಾಮಾನುಗಳು:
4 ಚಮಚ ರಾಗಿ ಹಿಟ್ಟು
4 ಚಮಚ ಬೆಲ್ಲದ ಪುಡಿ (ಅಂಬಲಿ ಸಿಹಿಯಾಗಿ ಬೇಕಾದಲ್ಲಿ)
ಏಲಕ್ಕಿ ಪುಡಿ 2 ಚಿಟಿಕೆ
ಹಾಲು (ನಿಮಗೆ ಬೇಕಾದಲ್ಲಿ ಮಾತ್ರ)

ರಾಗಿ ಹಿಟ್ಟನ್ನು ಸಣ್ಣನೆ ಉರಿಯಲ್ಲಿ ಗಮ್ಮನೆ ಹುರಿದುಕೊಳ್ಳಿ. ಒಂದು ದಪ್ಪನೆ ತಳ ಇರುವ ಪಾತ್ರೆಯಲ್ಲಿ, ಎರಡು ಲೋಟ ತಣ್ಣನೆ ನೀರಿನಲ್ಲಿ, ಹುರಿದ ರಾಗಿ ಹಿಟ್ಟು ಹಾಕಿ ಗಂಟಿಲ್ಲದ ಹಾಗೆ ಕಲೆಸಿ (ಅಂಬಲಿಯ ಹದ ನಿಮಗೆ ಬೇಕಾದಂತೆ ಸರಿ ಮಾಡಲು ನೀರಿನ ಅಳತೆ ನಿರ‍್ದರಿಸಿ) ನಂತರ ಸಣ್ಣ ಉರಿಯ ಮೇಲೆ ಅಂಬಲಿ ಹದಕ್ಕೆ ಕುದಿಸಿ. ಇದಕ್ಕೆ ಪುಡಿಯಾದ ಬೆಲ್ಲ ಮತ್ತು ಏಲಕ್ಕಿ ಪುಡಿ ಸೇರಿಸಿ ಕೆಳಗಿಳಿಸಿ. ಅದು ತಣ್ಣಗಾದ ನಂತರ ನಿಮಗೆ ಬೇಕಾಗುವಶ್ಟು ಹಾಲನ್ನು ಹಾಕಿ ಕುಡಿಯಿರಿ.

ಅಂಬಲಿಯನ್ನು ಉಪ್ಪಿನ ರುಚಿಯಲ್ಲಿ ಮಾಡಬೇಕಾದರೆ ಹೀಗೆ ಮಾಡಿ.
4 ಚಮಚ ರಾಗಿ ಹಿಟ್ಟು
ರುಚಿಗೆ ತಕ್ಕಸ್ಟು ಉಪ್ಪು
1/2 ಚಮಚ ಹುರಿದು ಪುಡಿ ಮಾಡಿದ ಜೀರಿಗೆ ಪುಡಿ
2 ಬಟ್ಟಲು ಮಜ್ಜಿಗೆ
ಸಣ್ಣಗೆ ಹಚ್ಚಿದ ಕೊತ್ತಂಬರಿ ಸ್ವಲ್ಪ
ಕಾರದ ಮಜಾ ಬೇಕೆಂದರೆ ಒಂದು ಮೆಣಸಿನಕಾಯಿ ಸಣ್ಣಗೆ ಹಚ್ಚಿದ್ದು

ರಾಗಿ ಹಿಟ್ಟನ್ನು ಸಣ್ಣನೆ ಉರಿಯಲ್ಲಿ ಗಮ್ಮನೆ ಹುರಿದುಕೊಳ್ಳಿ. ಒಂದು ದಪ್ಪನೆ ತಳ ಇರುವ ಪಾತ್ರೆಯಲ್ಲಿ, ಎರಡು ಲೋಟ ತಣ್ಣನೆ ನೀರಿನಲ್ಲಿ, ಹುರಿದ ರಾಗಿ ಹಿಟ್ಟು ಹಾಕಿ ಗಂಟಿಲ್ಲದ ಹಾಗೆ ಕಲೆಸಿ (ಅಂಬಲಿಯ ಹದ ನಿಮಗೆ ಬೇಕಾದಂತೆ ಸರಿ ಮಾಡಲು ನೀರಿನ ಅಳತೆ ನಿರ‍್ದರಿಸಿ) ನಂತರ ಸಣ್ಣ ಉರಿಯ ಮೇಲೆ ಅಂಬಲಿ ಹದಕ್ಕೆ ಕುದಿಸಿ. ಇದಕ್ಕೆ ರುಚಿಗೆ ತಕ್ಕಸ್ಟು ಉಪ್ಪು ಸೇರಿಸಿ ಕೆಳಗಿಳಿಸಿ. ಅದು ತಣ್ಣಗಾದ ನಂತರ ತಿಳಿಯಾದ ಮಜ್ಜಿಗೆ, ಜೀರಿಗೆ ಪುಡಿ, ಸಣ್ಣಗೆ ಹಚ್ಚಿದ ಕೊತ್ತಂಬರಿ, ಸಣ್ಣಗೆ ಹೆಚ್ಚಿದ ಮೆಣಸಿನಕಾಯಿ, ಎಲ್ಲವನ್ನು ಹಾಕಿ ಚೆನ್ನಾಗಿ ಕಲೆಸಿ ಕುಡಿದರೆ ಬೇಸಿಗೆಯಲ್ಲೂ ತಣ್ಣನೆ ಅನುಬವ.

ಈ ಅಂಬಲಿಯನ್ನು ಮಣ್ಣಿನ ಗಡಿಗೆಯಲ್ಲಿ ಬಳಸಿದರೆ ಸಕ್ಕತ್ತಾಗಿರುತ್ತದೆ. ನನಗೆ ನನ್ನ ಹಿರಿಯರು ಹೇಳುತ್ತಿದ್ದ ಮಾತು: ವಚನಗಳು ಯಾವಾಗಲು ದಿನದ ಜೀವನಕ್ಕೆ ಹತ್ರ ಆಗ್ತಾವೆ ಅಂತ. ನಮ್ಮ ದಿನದ ಬದುಕಿನಲ್ಲಿ ಬಳಸುವ ಅಂಬಲಿಯ ಉಪಯೋಗ ಅರಿತ ಮೇಲೆ ಅವರ ಮಾತುಗಳು ಎಸ್ಟು ನಿಜ ಅನಿಸುತ್ತೆ. ಅಂಬಲಿ ಕುರಿತ ಕೆಲವು ವಚನಗಳನ್ನು ನೋಡಿದರೆ ನಿಮಗೂ ಆ ಅನುಬವ ಆಗುವುದು.

ನಡೆ ಚೆನ್ನ, ನುಡಿ ಚೆನ್ನ, ಎಲ್ಲಿ ನೋಡಿದಡಲ್ಲಿ ಚೆನ್ನ,
ಪ್ರಮಥರೊಳಗೆ ಚೆನ್ನ, ಪುರಾತರೊಳಗೆ ಚೆನ್ನ.
ಸವಿದು ನೋಡಿ ಅಂಬಲಿ
ರುಚಿಯಾಯಿತ್ತೆಂದು
ಕೂಡಲಸಂಗಮದೇವಂಗೆ ಬೇಕೆಂದು
ಕೈದೆಗೆದ ನಮ್ಮ ಚೆನ್ನ.
                                                      – ಬಸವಣ್ಣ

ಕಾಳಗದೊಳು ಜೆಡೆದಲೆಗೆ ಮುಡಿದಲೆಯಕೊಟ್ಟ.
ಭಾಳಾಂಬಕನ ಪಾದವ ಕಂಡು ಚೋಳರಾಯ,
ಏಳುನೂರುಯೆಪ್ಪತ್ತೇಳು ಚಿನ್ನದ ಹರಿವಾಣದಲ್ಲಿ
ಮೇಳೈಸಿ ಪಂಚಪಾಯಸ ಪಂಚಕಜ್ಜಾಯ
ಪರಿಪರಿ ಪದಾರ್ಥ ಭಕ್ಷ್ಯನ್ನವನೆಡೆ ಮಾಡಿ
ಘೃತವ ನೀಡಿ ಕಣ್ಣುತುಂಬಿ ನೋಡಿ
ಹಮ್ಮನಾಡಿದರೆ ಅವನ ಜರದು
ಮಾದಾರ ಚೆನ್ನಯ್ಯನಲ್ಲಿಗೆ ಹೋಗಿ
ಜುರುಜುರುತ ಅಂಬಲಿ ಸೊಂಡಿಲಿಕ್ಕೆನೆ
ಸುರುಕು ಸುರುಕು ಸುರುಕೆನೆ ಸುರಿದು
ಅಮೃತಕ್ಕೆ ಸರಿಯೆಂದು ಪರಿಶಿವನೊಲಿದುಕೊಂಡಾಡಿದ
ಮಾದಾರ ಚೆನ್ನಯ್ಯಂಗೆ ಶರಣು ಶರಣಾರ್ಥಿ
ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ
ಶಿವಸಾಕ್ಷಿಯಾಗಿ.
                                                    – ಕುಷ್ಟಗಿ ಕರಿಬಸವೇಶ್ವರ

(ವಚನಗಳ ಸೆಲೆ : vachana.sanchaya.net)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: