ಮಾಡಿ ಸವಿಯಿರಿ ಬೇಳೆ ಒಬ್ಬಟ್ಟು

ಕಲ್ಪನಾ ಹೆಗಡೆ.

?

ಬೇಳೆ ಒಬ್ಬಟ್ಟು ಮಾಡಿ ತಿಂದು ನೋಡಿ!!!

ಬೇಕಾಗುವ ಸಾಮಗ್ರಿಗಳು:

1 ಸೇರು ಕಡ್ಲೆಬೇಳೆ, 1/2 ಸೇರು ತೊಗರಿಬೇಳೆ, 1/2 ಕೆ.ಜಿ ಮೈದಾ ಹಿಟ್ಟು, 100 ಗ್ರಾಂ ಚಿರೋಟಿ ರವೆ, ಎಣ್ಣೆ, ಬೆಲ್ಲ, ಹಳದಿ ಪುಡಿ, ರುಚಿಗೆ ತಕ್ಕಶ್ಟು ಉಪ್ಪು.

ಮಾಡುವ ಬಗೆ:

ಮೊದಲು ತೊಗರಿಬೇಳೆ ಹಾಗೂ ಕಡ್ಲೆಬೇಳೆಯನ್ನು ಬೇಯಿಸಿಕೊಳ್ಳಿ. ಬೇಯಿಸಿದ ಬೇಳೆಗಳನ್ನು ಸೌಟಿನಿಂದ ಜಜ್ಜಿ ಅದಕ್ಕೆ ಬೆಲ್ಲ ಹಾಕಿ ಸ್ವಲ್ಪ ಪಾಕ ಮಾಡಿಕೊಳ್ಳಿ. ಆರಿದ ನಂತರ ಗ್ರೈಂಡರ್ ಇಲ್ಲವೇ ಕಡೆಯುವ ಕಲ್ಲಿಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ರುಬ್ಬಿದ ಹಿಟ್ಟನ್ನು ಒಂದು ನಡುಗಾತ್ರದಲ್ಲಿ ಉಂಡೆಗಳನ್ನಾಗಿ ಮಾಡಿಕೊಳ್ಳಿ.
ಚಿರೋಟಿ ರವೆಯನ್ನು ಒಂದು ಪಾತ್ರೆಯಲ್ಲಿ ನೀರು ಹಾಕಿ 5 ನಿಮಿಶ ನೆನೆಸಿಕೊಂಡು, ಬಳಿಕ ಕಾಲು ಚಮಚ ಹಳದಿ ಪುಡಿ, ರುಚಿಗೆ ತಕ್ಕಶ್ಟು ಉಪ್ಪು ಹಾಗೂ ಮೈದಾಹಿಟ್ಟನ್ನು ಹಾಕಿ ಚೆನ್ನಾಗಿ ಕಲಸಿಕೊಳ್ಳಿ. ಆಮೇಲೆ ಸ್ವಲ್ಪ ಎಣ್ಣೆಯನ್ನು ಹಾಕಿ ಚೆನ್ನಾಗಿ ಕಲಸಿ 1 ಗಂಟೆಗಳ ಕಾಲ ನೆನಸಿಡಿ. ಆನಂತರ ಕಲಸಿದ ಹಿಟ್ಟನ್ನು ಸ್ವಲ್ಪ ಅಂಗೈಯಲ್ಲಿ ಹಾಕಿ ಅಗಲ ಮಾಡಿ ಅದರಲ್ಲಿ ನೀವು ಮೊದಲು ತಯಾರಿಸಿದ ಉಂಡೆಯು ಮುಚ್ಚುವಂತೆ ತುಂಬಿ. ಆಮೇಲೆ ಒಬ್ಬಟ್ಟಿನ ಎಲೆಯಲ್ಲಿ ಎಣ್ಣೆ ಸವರಿ ತುಂಬಿದ ಬಾಗವನ್ನು ಕೆಳಮುಕ ಮಾಡಿ ಇಟ್ಟುಕೊಂಡು ಲಟ್ಟಣಗೆಯಿಂದ ಲಟ್ಟಿಸಿಕೊಳ್ಳಿ. ಆನಂತರ ಕಾವಲಿಯಲ್ಲಿ ನಿದಾನವಾಗಿ ಹಾಕಿ ಎರಡು ಕಡೆ ಬೇಯಿಸಿ ತಟ್ಟೆಯಲ್ಲಿ ಅತವಾ ಕಾಗದದ ಮೇಲೆ ಬಿಡಿ ಬಿಡಿ ಹಾಕಿರಿ.
2 ಲೋಟ ಸಕ್ಕರೆ, ಅರ‍್ದ ಲೋಟ ನೀರು ಹಾಕಿ ಸಕ್ಕರೆ ಪಾಕ ಮಾಡಿಕೊಳ್ಳಿ. ಆಮೇಲೆ ನೀವು ತಯಾರಿಸಿದ ಒಬ್ಬಟ್ಟಿಗೆ ಸಕ್ಕರೆ ಪಾಕ ಹಾಗೂ ತುಪ್ಪ ಹಾಕಿ ತಿನ್ನಲು ನೀಡಿ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: