ವಿಂಬಲ್ಡನ್ – ಇದನ್ನು ಗೆಲ್ಲುವುದೇ ಒಂದು ಹೆಗ್ಗಳಿಕೆ

ರಾಮಚಂದ್ರ ಮಹಾರುದ್ರಪ್ಪ.

wimbledon-icon

ಜಗತ್ತಿನಾದ್ಯಂತ ಇರುವ ಟೆನ್ನಿಸ್ ಪ್ರಿಯರಿಗೆ ವಿಂಬಲ್ಡನ್ ಅನ್ನೋ ಹೆಸರು ಕೇಳುತ್ತಿದ್ದಂತೆ ಅವರ ಕಿವಿಗಳು ನಿಮಿರದೆ ಇರದು. ಹೌದು, ವಿಂಬಲ್ಡನ್ ಟೆನ್ನಿಸ್ ಪೋಟಿಯ ಶಕ್ತಿಯೇ ಅಂತಹದು, ಟೆನ್ನಿಸ್ ನ ಮುಡಿ ಅರಿವು ಇಲ್ಲದವರನ್ನೂ ತನ್ನತ್ತ ಸೆಳೆದುಕೊಳ್ಳುತ್ತದೆ. ಅಸಲಿಗೆ ವಿಂಬಲ್ಡನ್ ಅನ್ನೋದು ಬಡಗಣ ಲಂಡನ್ನಿನ ಒಂದು ಜಿಲ್ಲೆ. ಇಲ್ಲಿರುವ ‘ಆಲ್ ಇಂಗ್ಲೆಂಡ್ ಕ್ಲಬ್’ನಲ್ಲಿ ಪ್ರತಿ ವರ‍್ಶ ಜೂನ್ ತಿಂಗಳ ಕೊನೆಯ ವಾರದಿಂದ ಜುಲೈ ತಿಂಗಳ ಎರಡನೇ ವಾರದ ತನಕ ನಡೆಯುವ ಟೆನಿಸ್ ಪೋಟಿಯೇ “ವಿಂಬಲ್ಡನ್ ಗ್ರಾಂಡ್‍ಸ್ಲಾಮ್“. ಟೆನಿಸ್ ಪೋಟಿಗಳ ನಾಲ್ಕು ಮುಕ್ಯ ಗ್ರಾಂಡ್‍ಸ್ಲಾಮ್ ಗಳಾದ ಆಸ್ಟ್ರೇಲಿಯನ್ ಓಪನ್, ಪ್ರೆಂಚ್ ಓಪನ್, ಅಮೆರಿಕ ಓಪನ್ ಗಳಲ್ಲಿ ವಿಂಬಲ್ಡನ್ ಕೂಡ ಒಂದು. ಆದರೆ ಟೆನ್ನಿಸ್ ಪಂಡಿತರ ಪ್ರಕಾರ ವಿಂಬಲ್ಡನ್ ಇನ್ನುಳಿದ ಮೂರು ಗ್ರಾಂಡ್‍ಸ್ಲಾಮ್ ಗಳಿಗಿಂತ ಶ್ರೇಶ್ಟವಾದುದು. ಹೇಗೆ ಒಬ್ಬ ಬ್ಯಾಟ್ಸ್ ಮೆನ್ ಕ್ರಿಕೆಟ್ಟಿನ ಎಲ್ಲಾ ಆಟದ ಅಂಕಣಗಳಲ್ಲಿ ಶತಕ ಬಾರಿಸಿ ಲಾರ‍್ಡ್ಸ್ ನಲ್ಲಿ ಕನಿಶ್ಟ ಒಂದು ಶತಕ ಕೂಡ ಮಾಡದ್ದಿದ್ದರೆ, ಅವನ ಆಟದ ಬದುಕು ನಿರರ‍್ತಕ ಹಾಗು ಅಪೂರ‍್ಣ ಎಂಬ ನಂಬಿಕೆ ಇದೆಯೋ ಹಾಗೇ ಟೆನ್ನಿಸ್ ನಲ್ಲೂ ಸಹ ಬೇರೆಲ್ಲ ಗ್ರಾಂಡ್‍ಸ್ಲಾಮ್ ಗಳನ್ನು ಎಶ್ಟೇ ಸಾರಿ ಗೆದ್ದಿದ್ದರೂ, ಒಂದು ವಿಂಬಲ್ಡನ್ ಗೆಲ್ಲದ್ದಿದ್ದರೆ, ಆ ಆಟಗಾರನ ಟೆನ್ನಿಸ್ ಬದುಕು ಅಪೂರ‍್ಣ ಎಂದೇ ಪ್ರತೀತಿ. ಯಾಕೆ ಅಂತೀರಾ? ವಿಂಬಲ್ಡನ್ ನ ಇತಿಹಾಸವೇ ಅಂತಹುದು ಸ್ವಾಮಿ.

ವಿಂಬಲ್ಡನ್ ಪೋಟಿ ಮೊದಲ ಸಾರಿ ನಡೆದಿದ್ದು 1877 ರಲ್ಲಿ. ಆ ವರ‍್ಶ ನಡೆದದ್ದು ಗಂಡಸರ ಸಿಂಗಲ್ಸ್ ಪೋಟಿ ಮಾತ್ರ. ಅಂದರೆ ಬರೋಬ್ಬರಿ 139 ವರ‍್ಶಗಳ ಹಿಂದೆ. ಇನ್ನುಳಿದ ಗ್ರಾಂಡ್‍ಸ್ಲಾಮ್ ಗಳಿಗಿಂತ ಹಳೆಯದಲ್ಲದೆ, ಒಂದು ಟೆನ್ನಿಸ್ ಸಂಪ್ರದಾಯಕ್ಕೆ ಮುನ್ನುಡಿ ಬರೆದ ಕಾರಣಕ್ಕೆ ಐತಿಹಾಸಿಕವಾಗಿ ವಿಂಬಲ್ಡನ್ ನನ್ನು ಟೆನ್ನಿಸ್ ನ ಹೆಗ್ಗಳಿಕೆ ಎಂದೇ ಹೇಳುತ್ತಾರೆ. 1988 ರಿಂದ ಆಸ್ಟ್ರೇಲಿಯನ್ ಓಪನ್ ಆಟವು ಗಟ್ಟಿನೆಲದಂಕಣ(hard court)ಕ್ಕೆ ಬದಲಾದ ಮೇಲೆ ಹುಲ್ಲು ಹಾಸಿನ ಮೇಲೆ ನಡೆಯುವ ಏಕೈಕ ಟೆನ್ನಿಸ್ ಪೋಟಿ ವಿಂಬಲ್ಡನ್ ಆಗಿದೆ. ಹೆಂಗಸರು ಹಾಗು ಗಂಡಸರ ಪ್ರತ್ಯೇಕ ಪೋಟಿಗಳ ಜೊತೆಗೆ ಡಬಲ್ಸ್(ಇಬ್ಬರು ಒಂದೇ ತಂಡವಾಗಿ ಆಡುವ) ಹಾಗು ಮಿಕ್ಸೆಡ್ ಡಬಲ್ಸ್ (ಹೆಂಗಸರು ಗಂಡಸರು ಒಂದು ತಂಡವಾಗಿ ಆಡುವ) ಪ್ರಕಾರಗಳು ವಿಂಬಲ್ಡನ್ ನಲ್ಲಿವೆ. ಇದರ ಜೊತೆಗೆ ಕಿರಿಯರಿಗೆ ಹಾಗು ಅಂಗವಿಕಲರಿಗೂ ಪೋಟಿಗಳು ನಡೆಯುತ್ತವೆ. ಗಂಡಸರ ಪೋಟಿ 5 ಸೆಟ್ ಗಳದಾದರೆ ಹೆಂಗಸರ ಪೋಟಿ 3 ಸೆಟ್ ಗೆ ಸೀಮಿತ. ವಿಂಬಲ್ಡನ್ ನಲ್ಲಿ ಇನ್ನೊಂದು ವಿಶಿಶ್ಟತೆ ಇದೆ, ಇಲ್ಲಿ ಪಾಲ್ಗೊಳ್ಳೋ ಎಲ್ಲಾ ಆಟಗಾರರು ವಿಂಬಲ್ಡನ್ ನ ಬಟ್ಟೆ ನಿಯಮವನ್ನು ಪಾಲಿಸಲೇಬೇಕು. ಅಂದರೆ ಆಟಗಾರರು ಪೋಟಿಯಲ್ಲಿ ಬಿಳಿ ಬಟ್ಟೆಗಳನ್ನೇ ತೊಡಬೇಕು, ಇಲ್ಲದ್ದಿದ್ದರೆ ಅಂತವರನ್ನು ಕಣಕ್ಕಿಳಿಯಲು ಬಿಡುವುದಿಲ್ಲ. ಇಲ್ಲಿ ಒಂದು ಅಪರೂಪದ ಗಟನೆಯನ್ನು ನೆನೆಯಲೇಬೇಕು, ಅಮೇರಿಕಾದ ಆಂಡ್ರೆ ಅಗಾಸ್ಸಿ ಈ ಬಟ್ಟೆ ನಿಯಮವನ್ನು ಒಪ್ಪದೇ 1988 ರಿಂದ 1990 ರ ತನಕ ವಿಂಬಲ್ಡನ್ ನಲ್ಲಿ ಪಾಲ್ಗೊಳ್ಳಲೇ ಇಲ್ಲ. ತಮ್ಮ ಆಟದ ದಿನಗಳಲ್ಲಿ ವಿಶಿಶ್ಟ ಹಾಗು ವಿಚಿತ್ರ ಜೀವನ ಶೈಲಿಗೆ ಹೆಸರುವಾಸಿಯಾಗಿದ್ದ ಅಗಾಸ್ಸಿ ಅಲ್ಲದೆ ಈ ರೀತಿಯ ಹುಚ್ಚು ತೀರ‍್ಮಾನ ಮತ್ಯಾರಿಂದಲು ಸಾದ್ಯವಿಲ್ಲ ಅನ್ನೋದು ಟೆನ್ನಿಸ್ ಪಂಡಿತರ ಅಂಬೋಣ. ಆದರೆ ಈ ಬಿಳಿ ಬಟ್ಟೆ ಸಂಪ್ರದಾಯಕ್ಕೆ ತಲೆಬಾಗಿ ಇದೇ ಅಗಾಸ್ಸಿ 1992ರ ವಿಂಬಲ್ಡನ್ ನ ಗೆಲ್ಲುಗರಾಗಿದ್ದು ಈಗ ಇತಿಹಾಸ.

ಪೋಟಿಗಳು ನಡೆಯುವ ‘ಆಲ್ ಇಂಗ್ಲೆಂಡ್ ಕ್ಲಬ್’ ನಲ್ಲಿ ಒಟ್ಟು 18 ಆಟದ ಅಂಕಣ(court)ಗಳಿವೆ. ಒಮ್ಮೆ ವಿಂಬಲ್ಡನ್ ಶುರುವಾದರೆ ಎರಡು ವಾರ ಸತತವಾಗಿ ಒಂದೇಕಾಲಕ್ಕೆ ಎಲ್ಲಾ ಪ್ರಕಾರದ ಪೋಟಿಗಳು ಎಲ್ಲಾ ಅಂಕಣಗಳಲ್ಲಿ ನಡೆಯುತ್ತವೆ. ಕೊನೆಯ ಪೋಟಿ (final) ಮಾತ್ರ ಸೆಂಟರ್ ಕೋರ‍್ಟ್(ಕೋರ‍್ಟ್ 1) ನಲ್ಲಿ ನಡೆಯುತ್ತದೆ. ಎಲ್ಲಾ ಆಟಗಳಂತೆಯೇ ಟೆನ್ನಿಸ್ ಕೂಡ ಒಂದು ತಂತ್ರಗಾರಿಕೆಯ ಆಟ, ಎಂತ ಒಳ್ಳೆ ಆಟಗಾರನಾದರೂ ಸಹ ಆಟ ನಡೆಯುವ ಮೇಲ್ಮಯ್(surface)ಗೆ ಅನುಗುಣವಾಗಿ ತನ್ನ ಆಟವನ್ನು ಹೊಂದಿಸಿಕೊಳ್ಳದ್ದಿದ್ದರೆ ಸೋಲು ಕಟ್ಟಿಟ್ಟ ಬುತ್ತಿ. ಪ್ರೆಂಚ್ ಓಪನ್‍ನಲ್ಲಿ 2005 ರಿಂದ 2014ರ ತನಕ ಒಟ್ಟು 9 ಬಾರಿ ಗೆಲ್ಲುಗರಾದ ಸ್ಪೇನ್ ನ ರಪೈಲ್ ನಡಾಲ್ ವಿಂಬಲ್ಡನ್ ಅಂಕಣದಲ್ಲಿ ಮಂಕಾಗುತ್ತಾರೆ ಅಂದರೆ ಅಚ್ಚರಿ ಆಗಲೇಬೇಕು. ಅದಕ್ಕೆ ಕಾರಣವೂ ಇದೆ, ಪ್ರೆಂಚ್ ಓಪನ್ ನಡೆಯುವ ಮೇಲ್ಮಯ್ ಜೇಡಿಮಣ್ಣು ನೆಲ(clay court)ನದು. ಇಲ್ಲಿ ಚೆಂಡು ಪುಟಿದ ಮೇಲೆ ಇನ್ನೂ ಹೆಚ್ಚು ಉರುಬಾಗಿ ನುಗ್ಗುತ್ತದೆ. ಇಂತಹ ಮೇಲ್ಮಯ್ ಮೇಲೆ ತನ್ನ ಆಟದ ಪಟ್ಟುಗಳನ್ನು ಕಲಿತ ನಡಾಲ್ ರಿಗೆ, ಚೆಂಡು ಪುಟಿದ ಮೇಲೆ ತನ್ನ ಉರುಬು ಕಳೆದುಕೊಂಡು ನಿದಾನವಾಗಿ ಬರುವ ಹುಲ್ಲು ಹಾಸಿನ ವಿಂಬಲ್ಡನ್ನಲ್ಲಿ ತೊಂದರೆ ಆಗಲೇಬೇಕಲ್ಲವೇ? ಹೀಗಿದ್ದರೂ 2 ಸಾರಿ ವಿಂಬಲ್ಡನ್ ಗೆಲ್ಲುಗರಾದ ನಡಾಲ್ ರನ್ನು ಮೆಚ್ಚಲೇಬೇಕು. ನಡಾಲ್ ರ ಕತೆ ಹೀಗಾದರೆ ವಿಂಬಲ್ಡನ್ ನ ದಿಗ್ಗಜ ಸ್ವಿಟ್ಜರ‍್ಲ್ಯಾಂಡ್ ನ ರೋಜರ್ ಪೆಡರರ್ ರದು ಇನ್ನೊಂದು ಕತೆ. ವಿಂಬಲ್ಡನ್ ನಲ್ಲಿ 7 ಬಾರಿ ಗೆಲ್ಲುಗರಾಗಿರೋ ಇವರು ಪ್ರೆಂಚ್ ಓಪನ್ನಲ್ಲಿ ಒಂದೇ ಒಂದು ಸಾರಿ ಗೆಲ್ಲಲು, 2009 ರಲ್ಲಿ ನಡಾಲ್ ರ ಅನುಪಸ್ತಿತಿಯ ಸಲೆ ಬೇಕಾಯಿತು. ಅಮೇರಿಕಾದ ಮತ್ತೊಬ್ಬ ದಿಗ್ಗಜ, ಆಗಿನ ಕಾಲಕ್ಕೆ ಅತಿ ಹೆಚ್ಚು 14 ಗ್ರಾಂಡ್‍ಸ್ಲಾಮ್ ಗಳನ್ನು ಗೆದ್ದಿದ್ದ ಪೀಟ್ ಸಾಂಪ್ರಾಸ್, ಪ್ರೆಂಚ್ ಓಪನ್ ಗೆಲ್ಲುವುದಿರಲಿ ಒಮ್ಮೆಯೂ ರೋಲಂಡ್ ಗಾರೋಸ್ ನಲ್ಲಿ ಪೈನಲ್ ಕೂಡ ತಲುಪಲಿಲ್ಲ ಅಂದರೆ ಟೆನ್ನಿಸ್ ಎಂತ ತಂತ್ರಗಾರಿಕೆಯ ಆಟ ಎಂಬುದರ ಎತ್ತುಗೆ ನಮಗೆ ಸಿಗುತ್ತದೆ.

1877 ರಲ್ಲಿ ನಡೆದ ಮೊದಲ ವಿಂಬಲ್ಡನ್ ನಲ್ಲಿ ಇಂಗ್ಲೆಂಡ್ ನ ಸ್ಪೆನ್ಸರ್ ಗೋರ್ ಗಂಡಸರ ಮೊದಲ ಗೆಲ್ಲುಗರಾದರು. ಇಲ್ಲಿ ತನಕ ನಡೆದಿರುವ ಒಟ್ಟು 139 ವಿಂಬಲ್ಡನ್ ಪೋಟಿಗಳಲ್ಲಿ ಗ್ರೇಟ್ ಬ್ರಿಟನ್ನಿನ ವಿಲಿಯಮ್ ಚಾರ‍್ಲ್ಸ್ ರೆಂಶಾ, ಅಮೇರಿಕಾದ ಪೀಟ್ ಸಾಂಪ್ರಾಸ್ ಹಾಗೂ ಸ್ವಿಟ್ಜರ‍್ಲ್ಯಾಂಡ್ ನ ರೋಜರ್ ಪೆಡರರ್ ಅತ್ಯದಿಕ (7) ಬಾರಿ ಗೆಲ್ಲುಗರಾಗಿದ್ದಾರೆ. ಹೆಂಗಸರ ವಿಬಾಗದಲ್ಲಿ ಜೆಕೋಸ್ಲೋವಾಕಿಯಾದ ಮಾರ‍್ಟಿನಾ ನವರಾಟಿಲೋವ 9 ಬಾರಿ ಗೆಲ್ಲುಗರಾಗಿದ್ದಾರೆ. ಇವರ ಹಿಂದೆ ಜರ‍್ಮನಿಯ ಸ್ಟೆಪಿ ಗ್ರಾಪ್ 7 ಬಾರಿ ಹಾಗು ಅಮೇರಿಕಾದ ಸೆರೀನಾ ವಿಲಿಯಮ್ಸ್ 6 ಬಾರಿ ವಿಂಬಲ್ಡನ್ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.

350ಕ್ಕೂ ಹೆಚ್ಚು ಆಟಗಾರರು ಈ ಪೋಟಿಯಲ್ಲಿ ಪಾಲ್ಗೊಳ್ಳುತ್ತಾರೆ. ಈ ಆಟಗಾರರು ಯಾರು ಯಾರ ಮೇಲೆ ಸೆಣಸಲಿದ್ದಾರೆ ಅನ್ನೋದು ಅವರವರ ಹಾಲಿ ರ‍್ಯಾಂಕಿಂಗ್ ಮೇಲೆ ತೀರ‍್ಮಾನ ಆಗುತ್ತದೆ. ಇದಲ್ಲದೆ ಬಹಳ ದಿನಗಳಿಂದ ಆಟದಿಂದ ಹೊರಗುಳಿದು ರ‍್ಯಾಂಕಿಂಗ್ ಕಳೆದುಕೊಂಡ ಯೋಗ್ಯ ಆಟಗಾರರು ಹಾಗು ರ‍್ಯಾಂಕಿಂಗ್ ಇಲ್ಲದ ಉದಯೋನ್ಮುಕ ಹೊಸ ಆಟಗಾರರು ‘ವೈಲ್ಡ್ ಕಾರ‍್ಡ್ ‘ಮೂಲಕ ವಿಂಬಲ್ಡನ್ ನಲ್ಲಿ ಪಾಲ್ಗೊಳ್ಳಬಹುದು. ಪ್ರತಿ ವರ‍್ಶ 8 ಆಟಗಾರರಿಗೆ ವೈಲ್ಡ್ ಕಾರ‍್ಡ್ ಪ್ರವೇಶ ನೀಡಲಾಗುವುದು. ವಿಂಬಲ್ಡನ್ ನಲ್ಲಿ ಪ್ರತಿಯೊಂದು ಪಂದ್ಯವು ನಾಕೌಟ್ ಆಗಿರುತ್ತದೆ, ಅಂದರೆ ಯಾವುದೇ ಹಂತದಲ್ಲಿ ಒಂದೇ ಒಂದು ಪಂದ್ಯ ಸೋತರು ಹೊರನಡೆಯ ಬೇಕಾಗುತ್ತದೆ. ಕೊನೆಯ (final) ಪೋಟಿ ಸೆಂಟರ್ ಕೋರ‍್ಟ್ ನಲ್ಲಿ ನಡೆಯುತ್ತದೆ. ಹೆಂಗಸರ ಪೈನಲ್ ಶನಿವಾರದಂದು ನಡೆದರೆ ಗಂಡಸರ ಪೈನಲ್ ಅದರ ಮರುದಿನ ಬಾನುವಾರ ನಡೆಯುತ್ತದೆ.

ಬಾರತೀಯರ ಸಾದನೆ:

paes-bhupathi_660_070312110817

ವಿಂಬಲ್ಡನ್ ನಲ್ಲಿ ಬಾರತೀಯರು ಸಹ ಸಾದನೆ ಮಾಡಿದ್ದಾರೆ. 1999ರಲ್ಲಿ ಬಾರತದ ಲಿಯಾಂಡರ್ ಪೇಸ್ ಹಾಗು ಮಹೇಶ್ ಬೂಪತಿ ಒಟ್ಟಾಗಿ ವಿಂಬಲ್ಡನ್ ಜೋಡಿ ಪೋಟಿಯಲ್ಲಿ ಗೆಲ್ಲುಗರಾಗಿದ್ದರು. 2003ರ ಕಿರಿಯರ ವಿಬಾಗದ ಜೋಡಿ ಪೋಟಿಯಲ್ಲಿ ಸಾನಿಯಾ ಮಿರ‍್ಜಾ ಕೂಡ ಗೆಲುವಿನ ನಗೆ ಬೀರಿದ್ದರು. ಆದರೆ ಅವರ ಜೊತೆಗಾರ‍್ತಿ ಬಾರತೀಯರಾಗಿರಲಿಲ್ಲ. ಹಾಗಾಗಿ ಇಲ್ಲಿಯ ತನಕ ಬಾರತಕ್ಕೆ ಸಂದಿರೋ ಪರಿಪೂರ‍್ಣ ವಿಂಬಲ್ಡನ್ ಗೆಲುವು ಪೇಸ್ ಬೂಪತಿಯರ 1999ರ ವಿಂಬಲ್ಡನ್ ಒಂದೇ. 2015ರ ವಿಂಬಲ್ಡನ್ನಲ್ಲಿ ಪೇಸ್ ಅವರು ಮಾರ‍್ಟಿನಾ ಹಿಂಗೀಸ್ ರ ಜೋಡಿ ಮಿಕ್ಸೆಡ್ ಡಬಲ್ಸ್ ನಲ್ಲಿ ಗೆದ್ದಿದ್ದರು. ಹೆಂಗಸರ ಜೋಡಿ ಪೋಟಿಯಲ್ಲಿ ಬಾರತದ ಸಾನಿಯಾ ಸ್ವಿಟ್ಜರ‍್ಲ್ಯಾಂಡ್ ನ ಹಿಂಗೀಸ್ ರ ಜೊತೆ ಆಡಿ ವಿಂಬಲ್ಡನ್ ಡಬಲ್ಸ್ ಪ್ರಶಸ್ತಿ ತಮ್ಮದಾಗಿಸಿಕೊಂಡರು. ಬಾರತದ ಲಿಯಾಂಡರ್ ಪೇಸ್ ಹೆಚ್ಚು ಮಿಕ್ಸೆಡ್ ಡಬಲ್ಸ್ (4)ಬಾರಿ ಗೆದ್ದು ವಿಂಬಲ್ಡನ್ನಲ್ಲಿ ಬಾರತೀಯರ ಕೀರ‍್ತಿ ಪತಾಕೆ ಹಾರಿಸಿದ್ದಾರೆ.

ಮೈನವಿರೇಳಿಸಿದ ಆಟಗಳು!

roger-federer-rafael-nadal

ಕಿಕ್ಕಿರಿದು ತುಂಬಿರುವ ಸೆಂಟರ್ ಕೋರ‍್ಟ್ ನಲ್ಲಿ ಒಂದಾದರು ಪಂದ್ಯ ನೋಡಬೇಕೆಂಬುವುದು ಪ್ರತಿ ಒಬ್ಬ ಟೆನ್ನಿಸ್ ಅಬಿಮಾನಿಯ ಕನಸಾಗಿರುತ್ತದೆ. ವಿಂಬಲ್ಡನ್ ನ ಮಾಯೆಯೇ ಅಂತಹದು. ಈ ಸೆಂಟರ್ ಕೋರ‍್ಟ್ ನಲ್ಲಿ ಇತ್ತೀಚಿಗೆ ನಡೆದ ಪಂದ್ಯಗಳಲ್ಲಿ 2007 ಹಾಗು 2008 ರ ಪೈನಲ್ ಪೋಟಿಗಳು ಇತಿಹಾಸದ ಪುಟಗಳನ್ನು ಸೇರಿದವು, ಅದಕ್ಕೆ ಕಾರಣ ಇಬ್ಬರು ದಿಗ್ಗಜರಾದ ಪೆಡರರ್ ಹಾಗು ನಡಾಲ್ ರ ಅಗ್ರ ದರ‍್ಜೆಯ ಆಟ. 2007 ರಲ್ಲಿ ನಡೆದ ಇವರಿಬ್ಬರ ಪೈನಲ್ ಪೋಟಿ ಮೂರು ಮುಕ್ಕಾಲು ಗಂಟೆ ನಡೆಯಿತು, ತಮ್ಮ ಆಟದ ಉತ್ತುಂಗದಲ್ಲಿದ್ದ ಪೆಡರರ್ ರನ್ನು ಐದನೇ ಸೆಟ್ ತನಕ ಕರೆದುಕೊಂಡು ಹೋಗಿದ್ದೆ ನಡಾಲ್ ರ ಸಾದನೆಯಾಗಿತ್ತು. ಇನ್ನೇನು ನಡಾಲ್ ಪಂದ್ಯದ ಮೇಲೆ ಹತೋಟಿ ಸಾದಿಸುತ್ತಿದ್ದಾರೆ ಅನ್ನುವಶ್ಟರಲ್ಲಿ ಪೆಡೆರರ್ ಕೊನೆ ಸೆಟ್ ಅನ್ನು 6-2 ರಿಂದ ನಿರಾಯಾಸವಾಗಿ ಗೆದ್ದರು. ಹುಲ್ಲು ಹಾಸು ಮೇಲ್ಮಯ್ ತಗ್ನ ಎಂದೇ ಹೆಸರಾಗಿದ್ದ ಪೆಡರರ್ ರಿಗೆ ಇದು ಸತತ 5ನೇ ವಿಂಬಲ್ಡನ್ ಗ್ರಾಂಡ್ಸ್ಲಾಮ್ ಆಗಿತ್ತು. ಈ ಪೋಟಿಗೂ ಕರ‍್ನಾಟಕಕ್ಕೂ ಸಂಬಂದ ಇದೆ ಅಂದರೆ ನಂಬುತ್ತೀರಾ? ಏನು ಅಂತೀರಾ? ಈಗ ಪ್ರಸ್ತುತ ದಕ್ಶಿಣ ಆಪ್ರಿಕಾ ಕ್ರಿಕೆಟ್ ತಂಡದ ತಾಂತ್ರಿಕ ಸಲಹೆಗಾರರಾಗಿ ಕೆಲಸ ಮಾಡುತ್ತಿರುವ ಬೆಂಗಳೂರಿನ ಪ್ರಸನ್ನ ರಾಮನ್ 2007ರ ವಿಂಬಲ್ಡನ್ ನಲ್ಲಿ ನಡಾಲ್ ರ ತಾಂತ್ರಿಕ ಸಲಹೆಗಾರರಾಗಿ ಕೆಲಸ ಮಾಡಿದ್ದರು ಅನ್ನೋದು ಬಹಳ ಜನರಿಗೆ ಗೊತ್ತಿಲ್ಲದ ವಿಶಯ. ಈ ಸೋಲಿನಿಂದ ಎದೆಗುಂದದ ನಡಾಲ್ 2008 ರಲ್ಲಿ ಇನ್ನೂ ಪಳಗಿ ಕಣಕ್ಕಿಳಿದರು. ಆ ವರ‍್ಶ ನಡೆದ ಪೈನಲ್ ಪಂದ್ಯ ಎಲ್ಲಾ ಟೆನ್ನಿಸ್ ಪಂಡಿತರ ಪ್ರಕಾರ ಸಾರ‍್ವಕಾಲಿಕ ಶ್ರೇಶ್ಟ ಪಂದ್ಯ. ನಾಲ್ಕು ಗಂಟೆ 48 ನಿಮಿಶಗಳ ಕಾಲ ನಡೆದ ಈ ಪಂದ್ಯದ ಒಂದೊಂದು ಕ್ಶಣವೂ ಟೆನ್ನಿಸ್ ಪ್ರಿಯರ ಮನದಲ್ಲಿ ಅಚ್ಚಳಿಯದೇ ಇನ್ನೂ ಉಳಿದಿದೆ. ಮೊದಲ ಎರಡು ಸೆಟ್ ನಡಾಲ್ ಗೆದ್ದರೆ, ನಂತರದ ಎರಡು ಸೆಟ್ ಟೈ ಬ್ರೇಕರ್ ಮೂಲಕ ಪೆಡರರ್ ಪಾಲಾಯಿತು. ನಿರ‍್ಣಾಯಕ 5ನೇ ಸೆಟ್ ನಲ್ಲಿ ನಡಾಲ್ 9-7 ರಿಂದ ಪೆಡೆರರ್ ರನ್ನು ಮಣಿಸುವ ಮೂಲಕ ಇತಿಹಾಸ ಬರೆದರು. ಈ ಪಂದ್ಯ ಸೋತು ಸತತ 6ನೇ ವಿಂಬಲ್ಡನ್ ಗೆಲ್ಲಲಾಗದೆ ಬಾವುಕರಾಗಿ ಬಿಕ್ಕಿ ಬಿಕ್ಕಿ ಅತ್ತಿದ್ದ ಪೆಡರರ್ ರನ್ನು ಕಂಡು ಸೆಂಟರ್ ಕೋರ‍್ಟ್ ನಲ್ಲಿ ನೆರೆದಿದ್ದ ಎಲ್ಲರ ಕಣ್ಣಾಲೆಗಳು ಒದ್ದೆಯಾಗಿದ್ದವು. ಗೆದ್ದ ನಡಾಲ್ ತಮ್ಮ ಸ್ಪರ‍್ದಿ ಪೆಡರರ್ ರನ್ನು ಸಂತೈಸಿದ ಪರಿ ಮಾತ್ರ ಶ್ಲಾಗನೀಯ. ಅದೇ ವಿಂಬಲ್ಡನ್ ಸಂಪ್ರದಾಯಕ್ಕೆ ಇರುವ ಮರ‍್ಯಾದೆ.

ಅಮೇರಿಕಾ ಓಪನ್ ನಲ್ಲಿ ಸಿಗುವಶ್ಟು ಹಣ ವಿಂಬಲ್ಡನ್ ನಲ್ಲಿ ಸಿಗದ್ದಿದ್ದರೂ ಒಂದಾದರೂ ವಿಂಬಲ್ಡನ್ ಗ್ರಾಂಡ್‍ಸ್ಲಾಮ್ ಗೆಲ್ಲಲೇ ಬೇಕು ಎಂದು ಪ್ರತಿಯೊಬ್ಬ ಆಟಗಾರನು ಬಯಸುತ್ತಾನೆ, ಇದೇ ವಿಂಬಲ್ಡನ್ ನ ತಾಕತ್ತು. ಗಂಡಸರ ವಿಬಾಗದಲ್ಲಿ ಗೆದ್ದವರಿಗೆ ಟ್ರೋಪಿ ಜೊತೆ ಪ್ರಶಸ್ತಿ ಹಣ ಸಿಕ್ಕರೆ ಹೆಂಗಸರ ವಿಬಾಗದಲ್ಲಿ ಶೀಲ್ಡ್ ಜೊತೆ ಪ್ರಶಸ್ತಿ ಹಣ ಸಿಗುತ್ತದೆ. 2015 ರ ಗೆಲ್ಲುಗರಿಗೆ ಸಿಕ್ಕ ಪ್ರಶಸ್ತಿಹಣ ಬರೋಬ್ಬರಿ £18,80,000 (ಸುಮಾರು 17.5 ಕೋಟಿ ರೂಪಾಯಿಗಳು!).

ಈ ವರ‍್ಶದ ವಿಂಬಲ್ಡನ್ ನನ್ನು ಬಾರತೀಯರು ಕೂಡ ಬಹಳ ನಿರೀಕ್ಶೇಯಿಂದ ಎದುರು ನೋಡುತ್ತಿದ್ದಾರೆ. ಅದಕ್ಕೆ ಕಾರಣ ಮಿಕ್ಸೆಡ್ ಡಬಲ್ಸ್ ನಲ್ಲಿ ಲಿಯಾಂಡರ್ ಪೇಸ್ ಹಾಗು ಹೆಂಗಸರ ಡಬಲ್ಸ್ ನಲ್ಲಿ ಸಾನಿಯಾ ಮಿರ‍್ಜಾ ಸೆಣಸಿಲಿದ್ದಾರೆ. ಈ ವರ‍್ಶದ ವಿಂಬಲ್ಡನ್ ಇದೇ ಜೂನ್ ತಿಂಗಳ 27ರ ಸೋಮವಾರದಿಂದ ಎರಡು ವಾರಗಳ ಕಾಲ ನಡೆಯಲಿದೆ. ಎಲ್ಲಾ ಆಟಗಾರಿಗೂ ಶುಬ ಕೋರುತ್ತಾ ಟೆನ್ನಿಸ್ ಆಟವನ್ನು ಸವಿಯಲು ಸಜ್ಜಾಗೋಣ.

(ಚಿತ್ರಸೆಲೆ: beerandskittlesbar.co.ukviralchronics.com, indiatoday.in,)

ಇವುಗಳನ್ನೂ ನೋಡಿ

ಅನಿಸಿಕೆ ಬರೆಯಿರಿ: