ಹೀಗೊಂದು ವೀಕೆಂಡ್!

ಸುನಿಲ್ ಮಲ್ಲೇನಹಳ್ಳಿ.

halli-sante
ಪ್ರತೀ ವಾರದ ವೀಕೆಂಡ್ ಬರುತ್ತಿದ್ದಂತೆಯೇ, ಬಿಡುವಿನ ಆ 2 ದಿನಗಳಲ್ಲಿ ಮಾಡಿ ಮುಗಿಸಬೇಕೆಂದುಕೊಂಡ ಕೆಲಸಗಳ ದೊಡ್ಡಪಟ್ಟಿನೇ ಸಿದ್ದವಾಗುತ್ತೆ ತಲೆಯಲ್ಲಿ. ಆದರವು ಕಾರ‍್ಯರೂಪಕ್ಕೆ ಬಂದು, ನಾನು ಮಾಡಿ ಮುಗಿ‌ಸೋ ಕೆಲಸಗಳು ಮಾತ್ರ ಒಂದು ಅತವಾ ಎರಡು! ಸುಮಾರು ವರ‍್ಶಗಳಿಂದ ಈ ತೆರನಾದ ಪದ್ದತಿಯನ್ನು ಚಾಚು ತಪ್ಪಿಸದೆ ಪಾಲಿಸಿಕೊಂಡು ಬರ‍್ತೀದ್ದೀನಿ. ಅಂದುಕೊಂಡ ಎಲ್ಲ ಕೆಲಸಗಳನ್ನು ನಾನು ಮಾಡಿ, ಮುಗಿಸಿರೋ ವೀಕೆಂಡ್ ಇಲ್ವೇ ಇಲ್ಲ! ಅಂದಹಾಗೆ, ಸಿಗೋ ಆ 2 ದಿನಗಳು ಅಶ್ಟು ಬೇಗ, ಅದು ಹೇಗೆ ನಾಗಲೋಟದಲ್ಲಿ ಕಳೆದು ಹೋಗ್ತವೆ ಎನ್ನುವ ಯಕ್ಶಪ್ರಶ್ನೆಗೆ ಆ ದೇವ್ರೇ ಉತ್ತರಿಸಬೇಕು. ಆದರೆ ವಾರದ ದಿನಗಳು ಮಾತ್ರ ಹಾಗಲ್ಲ, ಅವು ನಿದಾನವಾಗಿ ಆಮೆಯೋಟದ ಬಗೆಯಲ್ಲಿ ಸಾಗ್ತವೆ ಎಂಬುದನ್ನು ನಾನೇನು ವಿಶೇಶವಾಗಿ ಹೇಳಬೇಕಾಗಿಲ್ಲ. ಅದೇನೋ ಗೊತ್ತಿಲ್ಲ, ಮೊನ್ನೆಯ ವೀಕೆಂಡ್ ಮಾತ್ರ ಸ್ವಲ್ಪ ಬಿನ್ನ ರೀತಿಯಲ್ಲಿ ಕಳೆದುಹೋಯ್ತು. ಅಲ್ದೆ ಅಂದುಕೊಂಡ ಕೆಲಸಗಳು ತಕ್ಕಮಟ್ಟಿಗೆ ಮುಗಿದವೂ ಕೂಡ!

ಶನಿವಾರ ಬೆಳಗ್ಗೆ ಅಮ್ಮನ ಆಸೆಯಂತೆ, ನಮ್ಮ ಮನೆ ಹತ್ತಿರ ಇರೋ ಆಂಜನೇಯ ಸ್ವಾಮಿ ದೇವಸ್ತಾನಕ್ಕೆ ಹೋಗಿದ್ವಿ. ಸುಮಾರು 3-4 ತಿಂಗಳುಗಳಿಂದ ಪ್ರತಿ ಶನಿವಾರ ಬೆಳಗ್ಗೆ ಆಂಜನೇಯ ಸ್ವಾಮಿಯ ಸನ್ನಿದಿಗೆ ಹೋಗಿಬರೋದು ಕಟ್ಟುನಿಟ್ಟಾಗಿ ಪರಿಪಾಲಿಸುತ್ತಿರುವ ನೇಮವಾಗಿದೆ ನಮ್ಮ ಮನೆಯಲ್ಲಿ. ಅಲ್ಲಿಗೆ ಹೋಗಿ ಬರಬೇಕೆಂಬುದು ಮುಕ್ಯವಾಗಿ ನನ್ನಮ್ಮನ ಒತ್ತಾಸೆ ಅತವಾ ಹರಕೆ. ನಾನಿರುವ ಗುಂಜೂರು ಪಾಳ್ಯ ಒಂದು ಹಳ್ಳಿ ಸೊಬಗಿರುವ ಊರು. ಈ ಊರನ್ನು ನಾನು ಹಳ್ಳಿಯೆಂದು ಕರೆಯುವುದಕ್ಕೆ ಪೂರಕವಾದ ಅಂಶಗಳು ಬಹಳಶ್ಟಿವೆ: ಮುಕ್ಯವಾಗಿ ಈ ಊರ ಸುತ್ತಮುತ್ತ ಹೊಲಗದ್ದೆಗಳಿವೆ, ಅಚ್ಚಹಸಿರನ ಹೊದಿಕೆ ತೊಟ್ಟ ಗಿಡಗಂಟೆ-ಮರಗಳು ಸಹ ಇಲ್ಲಿವೆ. ಸಾಮಾನ್ಯ ಹಳ್ಳಿಗಳಂತೆ ಇಲ್ಲಿ ದಿನಕ್ಕೆ ಏನಿಲ್ಲೆಂದರೂ 4-5 ಸಲ ವಿದ್ಯುತ್ ತೆಗೆಯುತ್ತಾರೆ.

ನಮ್ಮ ಮನೆ ಮುಂದಿನ ಹಾದಿಯಲ್ಲಿ ಪ್ರತಿದಿನ ಸಂಜೆ ಗೋದೂಳಿಯನ್ನು ನೋಡಬಹುದು, ಆಗಾಗ್ಗೆ ಹಕ್ಕಿಗಳ ಚಿಲಿಪಿಲಿ ನಿನಾದವನ್ನು ಕೇಳ್ಬಹುದು, ಸಂಜೆ ವೇಳೆ ರಕ್ತ ಹೀರುವ ಸೊಳ್ಳೆಗಳ ಕಾಟವನ್ನು ಸಹ ಅನುಬವಿಸ್ಬಹುದು, ಅಶ್ಟೇ ಏಕೆ? ಹಳ್ಳಿಗರಲ್ಲಿರುವ ಸಹಜ ಮುಗ್ದತೆ ಅತವಾ ಸಹಜ ಹಳ್ಳಿತನವನ್ನು ಇಲ್ಲಿನ ಜನರಲ್ಲಿ ಕಾಣಬಹುದು. ಆದರೆ ಮೇಲೆ ಹೇಳಿದ ಈ ಎಲ್ಲ ದ್ರುಶ್ಯಗಳು ಹಾಗೂ ಸದ್ದುಗದ್ದಲ ಇಲ್ಲದ ವಾತಾವರಣವಿನ್ನು ಇಲ್ಲಿ ಬಹಳ ದಿನ ಇರೋಲ್ಲ ಎಂದು ಈಗಾಗಲೇ ಸಾಬೀತಾಗುತ್ತಾ ಬಂದಿದೆ. ಇದಕ್ಕೆ ಕಾರಣಗಳೆಂದರೇ, ರಕ್ಕಸ ನಡಿಗೆಯಲ್ಲಿ ಈ ಊರುಗಳನ್ನು ಸುತ್ತುವರೆದು ಬರುತ್ತಿರುವ ಬ್ರುಹದಾಕಾರದ ಅಪಾರ‍್ಟ್‌ಮೆಂಟ್‌ಗಳು, ಇಲ್ಲಿನ ಕಾಯ್ದಿಟ್ಟ ಅರಣ್ಯವಂತೂ ಸರಿಯಾದ ರಕ್ಶಣೆಯಿಲ್ಲದೆ ಈಗೀಗ ಕಸದ ತೊಟ್ಟಿಯಾಗಿ ಮಾರ‍್ಪಾಡಾಗುತ್ತಿರುವುದು, ಅಂತರ‍್ಜಲದ ಪ್ರಮಾಣ ಗಣನೀಯವಾಗಿ ಕಡಿಮೆಯಾಗುತ್ತಿರುವುದು ಇತ್ಯಾದಿ..

ಗುಂಜೂರು ಮತ್ತು ಗುಂಜೂರು ಪಾಳ್ಯದ ಊರುಗಳಲ್ಲಿ ಬಹುಪಾಲು ಮಕ್ಕಳು ಕನ್ನಡ ಸರ‍್ಕಾರಿ ಶಾಲೆಗಳಿಗೆ ಹೋಗುವುದನ್ನು ನಾನು ಕಣ್ಣಾರೆ ನೋಡಿದ್ದೇನೆ. ಈ ಸಂಗತಿಯಿಂದಾಗಿ ಆ ಮಕ್ಕಳನ್ನು ಕಂಡಾಗ, ನನ್ನಲ್ಲಿ ಅವರ ಬಗ್ಗೆ ಇನ್ನಿಲ್ಲದ ಅಕ್ಕರೆ, ಅಬಿಮಾನದ ಬಾವ ಮನೆ ಮಾಡುತ್ತೆ. ಅಲ್ಲದೇ, ಈ ಊರಗಳ ಸುತ್ತಲೂ ಹತ್ತಾರು ಇಂಗ್ಲೀಶ್ ಮಾದ್ಯಮದ ಶಾಲೆಗಳಿವೆ. ಹೆಸರುವಾಸಿಯಾದ ಶಾಲೆಗಳು ಅವು. ಆದರೂ ಆ ಶಾಲೆಗಳಿಗೆ ತಮ್ಮ ಮಕ್ಕಳನ್ನು ಕಳುಹಿಸಿದೆ ಕನ್ನಡ ಶಾಲೆಗೆ ಕಳುಹಿಸುವ ಆ ಹೆತ್ತವರ ಮನೋಬಾವಕ್ಕೊಂದು ಹ್ರುದಯಸ್ಪರ‍್ಶಿ ನಮನ. ಆಂಜನೇಯ ಸ್ವಾಮಿಯ ಸನ್ನಿದಿಗೆ ಪ್ರತಿ ಶನಿವಾರ ಹೋಗಿಬರುವ ವಿಚಾರದಲ್ಲಿ ಇನ್ನೊಂದು ಆಸಕ್ತಿಯ ಅಂಶವೆಂದರೆ, ಇಲ್ಲಿ ಪ್ರತಿ ಶನಿವಾರ ಪ್ರಸಾದ ವ್ಯವಸ್ತೆ ಇರುತ್ತೆ. ಪ್ರಸಾದವೆಂದರೆ ಬರೀ ಸ್ವಾಮಿಯ ಸನ್ನಿದಿಗೆ ಬರುವ ಬಕ್ತರಿಗೆ ಮಾತ್ರವಲ್ಲ, ಸಮಸ್ತ ಗ್ರಾಮಸ್ತರಿಗೆ ಇರತ್ತೆ. ವಾರಕ್ಕೊಬ್ಬರೋ ಅತವಾ ಇಬ್ಬರೋ ಸೇವಾರ‍್ತದಾರರು ಇರುತ್ತಾರೆ. ಗ್ರಾಮದ ಜನರೆಲ್ಲ ದೇವಸ್ತಾನದ ಕೆಲಸ-ಕಾರ‍್ಯಗಳಲ್ಲಿ ಸಕ್ರಿಯವಾಗಿ ಬಾಗವಹಿಸುತ್ತಾರೆ ಮತ್ತು ಕನಿಶ್ಟ ಪಕ್ಶ 500 ಅತವಾ ಅದಕ್ಕೂ ಹೆಚ್ಚುಮಂದಿ ಇಲ್ಲಿ ಪ್ರಸಾದವನ್ನು ಸ್ವೀಕರಿಸುತ್ತಾರೆ. ಬಡ ಹಾಗೂ ಮದ್ಯಮ ಕುಟುಂಬಗಳೇ ಹೆಚ್ಚಿರುವ ಈ ಗ್ರಾಮದ ಜನರಲ್ಲಿರುವ ಉದಾರತೆ ಹಾಗೂ ಸೇವಾಮನೋಬಾವ ಕಂಡು ಕುಶಿ ಮತ್ತು ಮೆಚ್ಚುಗೆಯಾಯಿತು. ನನ್ನಮ್ಮನ ಇಚ್ಚೆಯಂತೆ ನಾನೂ ಕೂಡ ಒಂದು ಶನಿವಾರದ ಪೂಜೆ ಹಾಗೂ ಪ್ರಸಾದದ ಸೇವಾರ‍್ತದಾರನಾಗಿದ್ದೆ.

ಮೊನ್ನೆ ಕಳೆದಹೋದ ವೀಕೆಂಡಿನ ವಿಚಾರವಾಗಿ ಹೇಳ ಹೊರಟು ನಾನು, ಅಲ್ಲಿಂದ ಎಲ್ಲೆಲ್ಲೊ ಹೋದಂತಾಯಿತು! ಸರಿ, ವೀಕೆಂಡಿನ ವಿಚಾರಕ್ಕೆ ಬರುವೆ. ಎಂದಿನ ಶನಿವಾರದಂತೆ, ಈ ಬಾರಿಯೂ ಪೂಜೆ ಹಾಗೂ ಪ್ರಸಾದ ಮುಗಿಸಿಕೊಂಡು, ಬಹಳ ದಿನಗಳಿಂದ ಮುಗಿಸದೆ ಬಾಕಿ ಉಳಿದಿದ್ದ ಕೆಲಸಗಳನ್ನು ಮುಗಿಸಿ, ಕೆಲ ದಿನಗಳಿಂದ ನೋಡಬೇಕೆಂದುಕೊಂಡಿದ್ದ ‘ತಿತಿ’ ಹಾಗೂ ‘ಗೋದಿಬಣ್ಣ ಸಾದಾರಣ ಮೈಕಟ್ಟು’ ಚಲನಚಿತ್ರಗಳನ್ನು ನೋಡಿಕೊಂಡು ಬರಲು ಹೋಗಿದ್ದೆವು. ನಿಜವಾಗಿಯೂ ಮನಸ್ಸಿನಲ್ಲಿ ಉಳಿಯುವಂತಹ ಚಿತ್ರಗಳು ಅವು. ನಾಮಾಂಕಿತರಲ್ಲದ, ಗ್ರಾಮೀಣ ಸೊಗಡಿರುವ ನಟರಿಂದ ಅಬಿನಯ ಅನ್ನೋ ಪ್ರತಿಬೆಯನ್ನು ಉಜ್ಜಿ,ಉಜ್ಜಿ ಹೊರತೆಗೆದಿದ್ದಾರೆ ‘ತಿತಿ’ ಚಲನಚಿತ್ರದಲ್ಲಿ. ‘ತಿತಿ’ ಅಶ್ಟೊಂದು ಜನಮನ್ನಣೆ ಹಾಗೂ ಪ್ರಶಸ್ತಿಗಳನ್ನು ಗೆದ್ದಿರುವುದು ನ್ಯಾಯಸಮ್ಮತವಾಗಿಯೇ ಇದೆ. ಸಾಮಾನ್ಯವಾಗಿ ರಾಶ್ಟ್ರೀಯ ಹಾಗೂ ಅಂತರರಾಶ್ಟ್ರೀಯ ಪ್ರಶಸ್ತಿ ಪಡೆದ ಸಿನಿಮಾಗಳು ಜನಪ್ರಿಯವಾಗೋದು ತೀರ ವಿರಳ ಹಾಗೂ ಜನಸಾಮಾನ್ಯರಿಗೆ ಅರ‍್ತವಾಗೊದು ಸ್ವಲ್ಪ ಕಶ್ಟ. ಆದರೆ ‘ತಿತಿ’ ಇದಕ್ಕೆ ಹೊರತಾದ ಚಲನಚಿತ್ರ. ಇನ್ನೂ ‘ಗೋದಿ ಬಣ್ಣ ಸಾದಾರಣ ಮೈಕಟ್ಟು’ ಸಿನಿಮಾವೂ ಅಶ್ಟೇ, ಉತ್ತಮವಾದ ಕತೆ, ಅದನ್ನು ಪ್ರಸ್ತುತ ಪಡಿಸಿರುವ ರೀತಿ ಕೂಡ ಉತ್ತಮವಾಗಿದೆ. ಇದೇ ತರಹ ಹೊಸ ದ್ರುಶ್ಟಿಕೋನವಿರುವ ಕನ್ನಡ ಚಲನಚಿತ್ರಗಳು ಹೆಚ್ಚೆಚ್ಚು ಮೂಡಿಬರಲಿ. ‘ಯು-ಟರ‍್ನ್’ ಮತ್ತು ‘ಕರ‍್ವ’ ಚಲನಚಿತ್ರಗಳ ಬಗ್ಗೆಯೂ ಕೂಡ ಒಳ್ಳೆಯ ಹಾಗೂ ಹೊಸತನದ ಚಲನಚಿತ್ರಗಳೆಂದು ತಿಳಿದುಕೊಂಡಿರುವೆನು. ಮುಂದಿನ ಬಾರಿ ಅವುಗಳನ್ನು ನೋಡೋಣ ಎಂದುಕೊಂಡಿದ್ದೇನೆ.

ಈ ಚಲನಚಿತ್ರಗಳ ಗುಂಗಲ್ಲೇ ಬಾನುವಾರ ಬೆಳಗ್ಗೆ ಎದ್ದು, ಸುಮಾರು 8 ರ ಹೊತ್ತಿಗೆ ವರ‍್ತೂರು ಸಂತೆಗೆ ಹೋಗಿ, ಅಲ್ಲಿಂದ ಒಂದು ವಾರಕ್ಕೆ ಬೇಕಾಗುವ ಸೊಪ್ಪು,ತರಕಾರಿಗಳನ್ನು ತೆಗೆದುಕೊಂಡು ಬಂದೆವು. ಸೂಪರ್ ಮಾರ‍್ಕೆಟ್, ಬಜಾರುಗಳಲ್ಲಿ ಅವರು ಹಾಕಿದಶ್ಟು ರೇಟು ಕೊಟ್ಟು ಸೊಪ್ಪು, ತರಕಾರಿಗಳನ್ನು ತರುವುದಕ್ಕಿಂತ, ನಮ್ಮ ಸಂತೆಗಳು ಬಹುಪಾಲು ಮೇಲು ಎಂದು ಅನ್ಸುತ್ತೆ ನನಗೆ. ಇಲ್ಲಿ ನೂರಾರು ಬಡ ಅತವಾ ಮದ್ಯಮ ವರ‍್ಗದವರು ಅಂಗಡಿಯನ್ನಿಟ್ಟಿರುತ್ತಾರೆ. ಅವರಿಗೆ ಹಣದ ಬೆಲೆ ಏನು ಗೊತ್ತಿರುತ್ತೆ ಮತ್ತು ಸೂಪರ್ ಬಜಾರಗಳಲ್ಲಿ ಹಾಕುವಂತೆ ಒಂದಕ್ಕೆ ಎರಡು ರೇಟು ಹಾಕಲ್ಲ. ಇವುಗಳೆಲ್ಲದರ ನಡುವೆ ಈ ವೀಕೆಂಡ್‌ನಲ್ಲಿ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರು ಬರೆದಿರುವ “ಹಳೆಯ ಪಳೆಯ ಮುಕಗಳು” ಅನ್ನುವ ಹೊತ್ತಿಗೆಯನ್ನು ಓದಿ ಮುಗಿಸಿದೆ ಕೂಡ. 60-70ನೇ ದಶಕಗಳಲ್ಲಿನ ಹಳ್ಳಿ ಜನರ ಬದುಕು, ಆಗ ಜಾರಿಯಲ್ಲಿದ್ದ ಶಾನಬೋಗತನ, ಹಳ್ಳಿಗಳಲ್ಲಿನ ಜಾತ್ರೆಗಳು, ಜಾತ್ರಾ ಸಂದರ‍್ಬದಲ್ಲಿ ಜರುಗುತ್ತಿದ್ದ ನಾಟಕಗಳು, ಜೂಜಾಟಗಳು, ಟೂರಿಂಗ್ ಸಿನಿಮಾಗಳು ಇತ್ಯಾದಿ ವಿಶಯಗಳ ಬಗ್ಗೆ ಮನಮುಟ್ಟುವಂತೆ ಬರೆದಿದ್ದಾರೆ. ಎಲ್ಲೂ ನಿಲ್ಲಿಸದೆ ಸರಾಗವಾಗಿ ಓದಿಸಿಕೊಂಡು ಹೋಗುವ ಬರಹಗಳು, ವಾಕ್ಯ ರಚನೆಯಲ್ಲಿ ಅವರಿಗಿದ್ದ ಹಿಡಿತ ಹಾಗೂ ಅವರಲ್ಲಿದ್ದ ಕನ್ನಡ ಬಾಶಾ ಪ್ರೌಡಿಮೆ ಎಲ್ಲವೂ ಈ ಹೊತ್ತಿಗೆಯಲ್ಲಿ ವ್ಯಕ್ತವಾಗಿವೆ. ಮುಂಬರುವ ನನ್ನೆಲ್ಲ ವಾರಂತ್ಯಗಳಿಗೆ ಸ್ಪೂರ‍್ತಿದಾಯಕವಾದುದು ಮೊನ್ನೆ ಕಳೆದುಹೋದ ವಾರಂತ್ಯ ಎಂದುಕೊಂಡಿದ್ದೇನೆ. ಏಕೆಂದರೆ ಆ ಎರಡು ದಿನಗಳಲ್ಲಿ ಪ್ರತಿಗಳಿಗೆಯೂ ಸುಕಾಸುಮ್ಮನೆ ವ್ಯರ‍್ತವಾಗಿ ಕಳೆದು ಹೋಗಲಿಲ್ಲ!

( ಚಿತ್ರಸೆಲೆ:  www.etsy.com

2 ಅನಿಸಿಕೆಗಳು

  1. ಒಳ್ಳೆಯ ಬರಹ ಸುನಿಲ್, ಚೆನ್ನಾಗಿ ಓದಿಸಿಕೊಂಡು ಹೋಗುತ್ತದೆ.

    “ನಮ್ಮ ಮನೆ ಮುಂದಿನ ಹಾದಿಯಲ್ಲಿ ಪ್ರತಿದಿನ ಸಂಜೆ ಗೋದೂಳಿಯನ್ನು ನೋಡಬಹುದು, ಆಗಾಗ್ಗೆ ಹಕ್ಕಿಗಳ ಚಿಲಿಪಿಲಿ ನಿನಾದವನ್ನು ಕೇಳ್ಬಹುದು, ಸಂಜೆ ವೇಳೆ ರಕ್ತ ಹೀರುವ ಸೊಳ್ಳೆಗಳ ಕಾಟವನ್ನು ಸಹ ಅನುಬವಿಸ್ಬಹುದು” – ಇಲ್ಲಿ ನೀವು ಬಳಸಿರುವ ವಾಕ್ಯಗಳು ಒಂದು ಸೊಗಸಾದ ಲಲಿತ ಪ್ರಬಂದದ ದಾಟಿಯಲ್ಲಿವೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.