ಇಂಟರ್‌ನೆಟ್ ಆಪ್ ತಿಂಗ್ಸ್: ಬದುಕು ಹೆಣೆಯಲಿದೆಯೇ ಮಿಂಬಲೆ?

ಜಯತೀರ‍್ತ ನಾಡಗವ್ಡ.

InternetOfThings1

ಸೋಮವಾರದ ಮುಂಜಾವು ಬೆಳಿಗ್ಗೆ ಅಲಾರ‍್ಮ್ ಸದ್ದಿಗೆ ಎದ್ದು ಅಡುಗೆಮನೆಯತ್ತ ಕಾಲಿಡುತ್ತೀರಿ, ಕೂಡಲೇ ಬಿಸಿ ಬಿಸಿ ಕಾಪಿ ನಿಮ್ಮ ನೆಚ್ಚಿನ ಲೋಟದಲ್ಲಿ ತಯಾರು. ಕಾಪಿ ಕುಡಿದು ಮುಗಿಸಿ ಜಳಕಕ್ಕೆಂದು ಬಚ್ಚಲಮನೆಯ ನಲ್ಲಿ ಶುರುಮಾಡುತ್ತಲೇ ಬಿಸಿಕ (Geyser/Heater) ದಿಂದ ಬಿಸಿ ನೀರು ಸಿದ್ದ. ಇಲ್ಲಿ ನೀವಾಗಲಿ ನಿಮ್ಮ ಮನೆಯವರಾಗಲಿ ಕಾಪಿ ಪೆರ‍್ಚೂಟಿ ಶುರು ಮಾಡಿಲ್ಲ, ಬಿಸಿಕದ ಗುಂಡಿ ಒತ್ತಿ ನೀರು ಕಾಯುವಂತೆ ಮಾಡಿಲ್ಲ. ಆದರೂ ಕಣ್ಣು ಮುಚ್ಚಿ ತೆಗೆಯುವುದರಲ್ಲಿ ಇವೆಲ್ಲ ನಡೆದು ಹೋಗಿರುತ್ತವೆ. ಅಯ್ಯೋ ಏನಿದು ಅಚ್ಚರಿ ಇದೆಲ್ಲ ಹೇಗೆ ಅಂದೀರಾ? ಹವ್ದು ಎಲ್ಲವೂ ಸಾದ್ಯವಾಗಲಿದೆ. ಇದನ್ನು ಸಾದ್ಯವಾಗಿಸಲಿದೆ ಇಂಟರ್‌ನೆಟ್ ಆಪ್ ತಿಂಗ್ಸ್ (Internet of Things) ಅಂದರೆ ಇರುಕಗಳ ಮಿಂಬಲೆ.

ಇಂಟರ್‌ನೆಟ್ ಆಪ್ ತಿಂಗ್ಸ್ ಇತ್ತಿಚೀನ ದಿನಗಳಲ್ಲಿ ಹೆಚ್ಚಾಗಿ ಕೇಳಿ ಬರುತ್ತಿರುವ ಪದಗಳಿವು. ಯಾವುದೇ ಕಯ್ಗಾರಿಕೆ ಆಗಿರಲಿ ಅಲ್ಲಿ ಈ ಪದಗಳ ಬಳಕೆ ಕಂಡು ಬರುತ್ತಿದೆ. ಆದರೆ ಇದು ಏನು ಎತ್ತ? ಹೇಗೆ ಕೆಲಸ ಮಾಡುತ್ತದೆ? ಇವೆಲ್ಲವೂಗಳ ಬಗ್ಗೆ ಸಾಕಶ್ಟು ಕೇಳ್ವಿಗಳು ನಮ್ಮಲ್ಲಿ ಮನೆ ಮಾಡಿವೆ. ಇಂಟರ್‌ನೆಟ್ ಆಪ್ ತಿಂಗ್ಸ್ ಬಗ್ಗೆ ನಾವುಗಳು ತಿಳಿಯುವುದು ಅಗತ್ಯವಾಗಿದೆ ಯಾಕೆಂದರೆ ಬರುವ ದಿನಗಳಲ್ಲಿ ಇದು ನಮ್ಮ ಬದುಕಿನ ಬಾಗವಾಗಿರಲಿದೆ ಎನ್ನುತ್ತಾರೆ ಅರಿಮೆಗಾರರು.

ಕಳೆದ ಹತ್ತಾರು ವರುಶಗಳಿಂದ ಮಿಂಬಲೆ ನಮ್ಮ ಬದುಕಿನ ಒಂದು ಬಾಗವೇ ಆಗಿಹೋಗಿದೆ ಎನ್ನಬಹುದು. 1990ರ ಈಚೆಗೆ ಜಗತ್ತಿನಲ್ಲಾದ ಹಲವು ಬದಲಾವಣೆಗಳನ್ನು ನೋಡಿದರೆ ಯಾರು ಇದನ್ನು ತಳ್ಳಿಹಾಕುವಂತಿಲ್ಲ. ಮೊದಲೆಲ್ಲ ಬ್ಯಾಂಕುಗಳಿಗೆ ತೆರಳಿ ಹಣ ಪಡೆಯಲು ರಸೀತಿ ತುಂಬಿ ಸರತಿ ಸಾಲಿನಲ್ಲಿ ನಿಂತು ಹಣ ಪಡೆದು ಮನೆಗೆ ಬರುವುದು ಸಾಹಸವಾಗಿತ್ತು. ಆದರೆ ಈಗ ದುಡ್ಡು ಬೇಕೆಂದಾಗ ಚಕ್ಕನೆ ನಾವಿರುವ ಮನೆ, ಕೆಲಸದೆಡೆ, ಬಸ್ ನಿಲ್ದಾಣ ಹೀಗೆ ಎಲ್ಲೆ ಇರಲಿ ಬಳಿಯಿರುವ ಹಣದ ಮನೆಯಿಂದ (ATM) ದುಡ್ಡು ಸಲೀಸಾಗಿ ಪಡೆಯಬಹುದು. ಅಶ್ಟೇ ಚಕ್ಕನೆ ಕಣ್ಣ ರೆಪ್ಪೆ ಬಡಿಯುವುದರಲ್ಲಿ ನಿಮ್ಮ ಅಲೆಯುಲಿಗೆ ನಿಮ್ಮ ಬ್ಯಾಂಕ್ ಕಾತೆಯಿಂದ ಹಣ ಪಡೆದ ವಿವರಗಳು ಬಂದಿರುತ್ತವೆ. ಈಗಲಂತೂ ಮಿಂಬಲೆಯ ಹರವೂ ಹೆಚ್ಚಿದೆ ಮತ್ತು ಅಗ್ಗದ ಬೆಲೆಯಲ್ಲಿ ಕಯ್ಗೆಟಕುತ್ತಿರುವ ಕಾರಣ ಪೇಸ್ಬುಕ್, ಟ್ವಿಟರ್ ನಂತಹ ಕೂಡತಾಣಗಳಿಂದ ಮಂದಿಯ ಕೂಡುವಿಕೆ ಚುಟಿಕೆ ಹೊಡೆದಶ್ಟು ಸುಳು. ಹೆಚ್ಚುತ್ತಿರುವ ವಾಯ್-ಪಾಯ್ ಅಳವುತನ ಹಾಗೂ ಅರಿವಿಕಗಳು ಹೊಸ ಚಳಕಗಳ ಬೆಲೆಯನ್ನು ಇಳಿಮುಕ ಮಾಡಿವೆ. ಇನ್ನೂ ಚೂಟಿಯುಲಿಗಳಂತು (Smartphones) ಹೆಚ್ಚು ಕಡಿಮೆ ಎಲ್ಲರ ಕಯಲ್ಲೂ ಬಂದು ಸೇರಿವೆ. ಇವೆಲ್ಲವೂ ಇರುಕಗಳ ಮಿಂಬಲೆಗೆ ತಕ್ಕ ಅಡಿಪಾಯ ಹಾಕಿವೆ.

ಚುಟುಕಾಗಿ ಹೇಳಬೇಕೆಂದರೆ ಮನುಶ್ಯರಿಂದ ವಸ್ತುಗಳಿಗೆ, ವಸ್ತುಗಳಿಂದ (Things) ವಸ್ತುಗಳಿಗೆ ಇಲ್ಲವೇ ಮನುಶ್ಯರಿಂದ ಮನುಶ್ಯರಿಗೆ ಮಿಂಬಲೆಯ ಮೂಲಕ ಕೊಂಡಿ ಬೆಸೆದು ಮಾಹಿತಿಯನ್ನು ಕಳಿಸುವುದು ಇಲ್ಲವೇ ಹಂಚಿಕೊಳ್ಳುವುದೇ ಇರುಕಗಳ ಮಿಂಬಲೆ (Internet of Things). ನಡುಬಲೆ ಇಲ್ಲವೇ ಮಿಂಬಲೆಯೊಂದಿಗೆ ಕೂಡಿಕೊಳ್ಳಬಲ್ಲ ಎಲ್ಲ ವಸ್ತುಗಳು, ಇದರ ಬಾಗವೆನ್ನಬಹುದು. ಅವು ನಮ್ಮ ಚೂಟಿಯುಲಿ, ಕಾಪಿ ಮಾಡುವ ಪೆರ‍್ಚೂಟಿ (Coffee Maker), ಇಸ್ತ್ರೀ ಪೆಟ್ಟಿಗೆ, ಗೋಡೆ ಗಡಿಯಾರ, ಕಯ್ ಗಡಿಯಾರ, ಒಗೆಬಿಣಿಗೆ (Washing machine), ಟಿವಿ, ನಾವು ಓಡಿಸುವ ಇಗ್ಗಾಲಿ ಬಂಡಿ, ಬಾನೋಡ ಯಾವುದೇ ಆಗಿರಬಹುದು. ಆದರೆ ಇವೆಲ್ಲ ವಸ್ತುಗಳು ಮಿಂಬಲೆಯೊಂದಿಗೆ ಕೂಡಬಲ್ಲವಂತವಾಗಿದ್ದರೆ, ಅವುಗಳ ನಡುವೆ ಮಾತುಕತೆಯಾಡಿಸಬಹುದು. ಗಾರ‍್ಟ್‌ನರ್ (Gartner) ಎಂಬ ಬಿಡಿನೋಡುಗ (Analyst) ಕೂಟವೊಂದು ಹೇಳುವಂತೆ 2020ರ ಹೊತ್ತಿಗೆ ಜಗತ್ತಿನೆಲ್ಲೆಡೆ ಸುಮಾರು 2600 ಕೋಟಿ ವಸ್ತುಗಳು-ಮನುಶ್ಯರು ಒಂದಕ್ಕೊಂದು ಕೂಡಿ ತಮ್ಮ ನಡುವೆ ಮಾಹಿತಿ ಹಂಚಿಕೆ ಮಾಡಲಿವೆಯಂತೆ. ಇದು ಹತ್ತುಸಾವಿರ ಕೋಟಿಯೂ ದಾಟಲಿದೆ ಎಂಬುದು ಇನ್ನೂ ಕೆಲವರ ಅಂಬೋಣ.

ಇಂಟರ್‌ನೆಟ್ ಆಪ್ ತಿಂಗ್ಸ್‌ಗೆ ಸಂಬಂದಪಟ್ಟ ಇನ್ನಶ್ಟೂ ಅಂಕಿ ಸಂಕ್ಯೆ ಬಗ್ಗೆ ನೋಡಿದಾಗ, ಜಗತ್ತಿನ ಶೇಕಡಾ 87ರಶ್ಟು ಮಂದಿಗೆ ಇದು ಏನೆಂಬುದೇ ಗೊತ್ತಿಲ್ಲವಂತೆ. 1974ರಲ್ಲಿ ಕಾಲಿಟ್ಟ ಹಣಮನೆಯ ಪೆರ‍್ಚೂಟಿಗಳು (ATM) ಇರುಕಗಳ ಮಿಂಬಲೆಯ ಮೊಟ್ಟ ಮೊದಲ ಹೆಜ್ಜೆ ಎನ್ನಬಹುದು. ಒಂದು ಅಂದಾಜಿನ ಪ್ರಕಾರ 2020ರ ಹೊತ್ತಿಗೆ ಸುಮಾರು 2.5 ಲಕ್ಶಕ್ಕೂ ಹೆಚ್ಚಿನ ಬಂಡಿಗಳು ಮಿಂಬಲೆಗೆ ಸೇರಿಕೊಳ್ಳಲಿವೆಯಂತೆ. ಮುಂಬರುವ ದಿನಗಳಲ್ಲಿ ಗೂಗಲ್‌ನ ತನ್ನಿಂದ ತಾನೇ ಓಡುವ ಕಾರು ಒಂದು ವಾರದಲ್ಲಿ ಹತ್ತು ಸಾವಿರ ಮಯ್ಲಿ ಸಾಗಲಿವೆ. ಕಳೆದ ವರುಶ 2015ರಲ್ಲಿ ಕಯ್‌ಗೆ ತೊಡಬಲ್ಲ ಚೂಟಿ ಗಡಿಯಾರದಂತ ವಸ್ತುಗಳ ಬೇಡಿಕೆ 223% ರಶ್ಟು ಏರಿದೆ. ಆಪಲ್ (Apple) ಕೂಟ ಸುಮಾರು 36ಲಕ್ಶದಶ್ಟು ಚೂಟಿ ಕಯ್ಗಡಿಯಾರ ಮಾರಿದ್ದರೆ ಪಿಟ್‌ಬಿಟ್ (Fitbit) ಎಂಬ ಇನ್ನೊಂದು ಕೂಟ ಸುಮಾರು 44ಲಕ್ಶದಶ್ಟು ಕಯ್ ತೊಡಬಲ್ಲ ಚೂಟಿ ಎಣಿಗಳನ್ನು (Smart wearing devices) ಕೊಳ್ಳುಗರಿಗೆ ತಲುಪಿಸಿದೆ. ಗೂಗಲ್ ಕೂಟ ನೇಸ್ಟ್‌ಲ್ಯಾಬ್ಸ್ (Nest Labs) ಎನ್ನುವ ಬಿಸಿತೊಡಗುಗ (Thermostat) ತಯಾರಿಸುವ ಸಂಸ್ತೆಯನ್ನು 3.2 ಬಿಲಿಯನ್ ಡಾಲರ್‌ಗೆ ಕರೀದಿ ಮಾಡಿದೆ. ತೆಂಕಣ ಕೊರಿಯಾ ಮೂಲದ ಸ್ಯಾಮಸಂಗ್ ಕೂಡ “ಕನೆಕ್ಟೆಡ್ ಹೋಮ್ಸ್” (Connected homes) ಎಂಬ ಹೆಸರುವಾಸಿ ಕೂಟವನ್ನು 200 ಮಿಲಿಯನ್ ಡಾಲರ್‌ಗೆ ಕೊಂಡು ಕೊಂಡಿದೆ. ಈ ಮೇಲಿನ ಎಲ್ಲ ಅಂಕಿ ಸಂಕ್ಯೆ ಮತ್ತು ಹೂಡಿಕೆಯ ವಿವರ ನೋಡಿದಾಗ ಮುಂಬರುವ ದಿನಗಳಲ್ಲಿ ಇಂಟರ್‌ನೆಟ್ ಆಪ್ ತಿಂಗ್ಸ್ ಹೆಚ್ಚಾಗುವಿಕೆಯ ಕುರುಹುಗಳೇ ಇವು. ಮಿಂಬಲೆ, ಮೆದುಜಾಣ್ಮೆಯ ವ್ಯವಹಾರದಲ್ಲಿರುವ ಗೂಗಲ್ ಕೂಟಕ್ಕೂ ಬಿಸಿತೊಡುಗುಗ ಕೂಟ ನೇಸ್ಟ್‌ಲ್ಯಾಬ್‌ಗೂ ಯಾವುದೇ ನೇರ ಸಂಬಂದವೇ ಇಲ್ಲ. ಆದರೆ ಇವರಿಬ್ಬರ ನಡುವಿನ ಈ ವ್ಯವಹಾರ ನೋಡಿದರೆ ಗೂಗಲ್ ಕೂಟ ಇಂಟರ್‌ನೆಟ್ ಆಪ್ ತಿಂಗ್ಸ್‌ನತ್ತ ಚಿತ್ತವಿರಿಸಿದೆ ಎಂಬುದನ್ನು ಹೇಳುತ್ತದೆ. ಅದೇ ರೀತಿ ಸ್ಯಾಮ್‌ಸಂಗ್‌ನ ಕತೆ.

ಎಲ್ಲವೂ ಒಪ್ಪುವಂತದ್ದೇ ಆದರೆ ಇಶ್ಟೆಲ್ಲ ವಸ್ತುಗಳು ತಮ್ಮ ನಡುವೆಯೇಕೆ ಮಾತನಾಡಿಕೊಳ್ಳಬೇಕು? ಇವುಗಳ ಲಾಬವೇನು? ಇದನ್ನರಿಯಲು ಮೊದಲಿನ ಎತ್ತುಗೆಯನ್ನೇ ವಿವರವಾಗಿ ನೋಡೋಣ. ನಿಮ್ಮ ಅಲಾರ‍್ಮ್ ಗಡಿಯಾರ ಬೆಳಿಗ್ಗೆ 6 ಗಂಟೆಗೆ ನಿಮ್ಮನ್ನು ಎಬ್ಬಿಸುತ್ತದೆ ಎನ್ನಿ. ನಿಮ್ಮನ್ನು ಎಬ್ಬಿಸುತ್ತ ಅದು ನಿಮ್ಮ ಕಾಪಿ ಮಾಡುವ ಪೆರ‍್ಚೂಟಿಗೆ ಕಾಪಿ ತಯಾರಿಸುವಂತೆ ಮಾಹಿತಿ ನೀಡುತ್ತದೆ. ಕಣ್ಣು ತೆರೆದು ಅಡುಗೆಮನೆಗೆ ಹೆಜ್ಜೆ ಇಡುತ್ತಲೇ ಬಿಸಿ ಬಿಸಿ ಕಾಪಿ ನಿಮ್ಮ ಮುಂದೆ. ಹಾಗೆಯೇ ಕಾಪಿ ಕುಡಿಯುತ್ತಿದ್ದಂತೆ ಕಾಪಿ ಮಾಡುವ ಪೆರ‍್ಚೂಟಿ ನಿಮ್ಮ ಬಿಸಿಕಕ್ಕೊಂದು ಸಂದೇಶ ಕಳುಹಿಸಿ ಜಳಕ ಮಾಡಲು ಬಿಸಿ ನೀರು ಕಾಯುವಂತೆ ಮಾಡುತ್ತದೆ. ಇನ್ನೇನು ಕೆಲಸದೆಡೆಗೆ ತೆರಳಲು ಸಿದ್ದರಾಗಿ ಕಾರನ್ನು ಏರಿದ್ದೀರಿ ಒಯ್ಯಾಟದ ದಟ್ಟಣೆಯಿಂದ ನೀವು ಕೆಲಸದೆಡೆಯ ಮಾತುಕತೆಯೊಂದರಲ್ಲಿ ಬಾಗವಹಿಸಲಾಗುತ್ತಿಲ್ಲ, ಕೂಡಲೇ ನಿಮ್ಮ ಬಂಡಿ ನೀವು ಟ್ರಾಪಿಕ್‌ನಲ್ಲಿ ಸಿಲುಕಿ ಹಾಕಿಕೊಂಡಿರುವ ಬಗ್ಗೆ ಚೂಟಿಯುಲಿಗೆ ಮಾಹಿತಿ ಕಳುಹಿಸಿ ಕೊಡುತ್ತದೆ. ನಿಮ್ಮ ದಿನದ ಕ್ಯಾಲೆಂಡರ್‌ ಬಗ್ಗೆ ಅರಿತಿರುವ ನಿಮ್ಮ ಚೂಟಿಯುಲಿ ನೀವು ತಡವಾಗಿರುವುದನ್ನು ಕೆಲಸದೆಡೆಯ ಗೆಳೆಯರಿಗೆ ಮಾಹಿತಿಯೊಂದರ ಮೂಲಕ ತಿಳಿಸಿದರೆ ಹೇಗಿರುತ್ತದೆ? ಹೆಚ್ಚಿನ ನಮ್ಮ ಕೆಲಸಗಳು ಸುಳುವಾಗುತ್ತ ಹೋಗುತ್ತವೆ. ಹಲವಾರು ಮಂದಿ ತಮ್ಮ ಕಚೇರಿಗೆ ತೆರಳದೇ ಮನೆಯಲ್ಲೇ ಕುಳಿತು ಕೆಲಸ ಮಾಡಬಹುದು. ಸಾರಿಗೆ, ಒದಗಿಕೆ (Infrastructure), ಉಳುಮೆ ಹೀಗೆ ಮುಂತಾದೆಡೆ ಇದನ್ನು ಬಳಸಿಕೊಂಡು ಹೆಚ್ಚಿನ ಬೆಳವಣಿಗೆ ಸಾದಿಸಬಹುದಾಗಿದೆ. ಇವೆಶ್ಟೇ ಅಲ್ಲದೇ ಹಲವು ವಲಯಗಳಲ್ಲಿ ಹೊಸ ಅವಕಾಶಗಳು ತೆರೆದುಕೊಳ್ಳಲಿವೆ. ಮಂದಿ ಮತ್ತು ವಸ್ತುಗಳ ನಡುವೆ ಕೊಂಡಿ ಬೆಸೆಯಲಿದೆ.

ಈ ರೀತಿ ಹೆಚ್ಚುತ್ತಿರುವ ಇಂಟರ್‌ನೆಟ್ ಆಪ್ ತಿಂಗ್ಸ್ ನಿಂದ ನಮ್ಮ ಕೆಲಸಗಳು ಸುಳುವಾಗುವುದೇನೋ ಸರಿ ಆದರೆ ಇದರ ಇನ್ನೊಂದು ಮುಕ ನಮಗೆ ಕೆಡುಕುಂಟು ಮಾಡುವುದು ಅಶ್ಟೇ ದಿಟ.  ಕೋಟಿಗಟ್ಟಲೆ ವಸ್ತುಗಳು ತಮ್ಮ ತಮ್ಮ ನಡುವೆ ಮಿಂಬಲೆ ಮೂಲಕ ಮಾಹಿತಿ ಹಂಚಿಕೊಳ್ಳತೊಡಗಿದರೆ ಕೆಲವು ಗುಟ್ಟಾದ ಮಾಹಿತಿಗಳನ್ನು ಕಾಪಾಡಿಕೊಳ್ಳುವುದು ಹೇಗೆ? ಮಿಂಬಲೆ ಸುಲಿಗೆಕೋರರು (Internet Hawkers) ನಿಮ್ಮ ಕಾಪಿ ಪೆರ‍್ಚೂಟಿ ಮೂಲಕ ನಿಮ್ಮ ಎಣ್ಣುಕವನ್ನು (Computer) ತಮ್ಮ ಹಿಡಿತಕ್ಕೆ ತೆಗೆದುಕೊಂಡರೆ? ಇದರಿಂದ ಗುಟ್ಟಾದ ಮತ್ತು ಪಚ್ಚುಗೆಯ (Private) ಮಾಹಿತಿಗಳನ್ನು ಮಂದಿ ಕಾಪಾಡಿಕೊಳ್ಳುವುದು ಕಶ್ಟದ ಕೆಲಸವಾಗಬಹುದು ಎನ್ನುತ್ತಾರೆ ಮಿಂಬಲೆ ಪಂಡಿತರು. ಜಗತ್ತಿನೆಲ್ಲೆಡೆ ಈಗಾಗಲೇ ಮಿಂಬಲೆ ಸುಲಿಗೆಕೋರರ ಹಾವಳಿ ತಡೆಯಲಾಗುತ್ತಿಲ್ಲ, ಇದು ಹೆಚ್ಚಾಗುವಿಕೆಯಿಂದ ಇಂತವರ ಸಂಕ್ಯೆ ಆಗಸದೆತ್ತರಕ್ಕೇರಿ ಇವರನ್ನು ಮಟ್ಟ ಹಾಕುವುದು ಕಶ್ಟದ ಕೆಲಸವೇ ಸರಿ. ಇದಕ್ಕಾಗಿ ಜಗತ್ತಿನೆಲ್ಲೆಡೆ ಹಲವು ಲಕ್ಶ ಕೋಟಿ ರೂಪಾಯಿಗಳನ್ನು ಕರ‍್ಚು ಮಾಡಬೇಕಾಗಿ ಬರುತ್ತದೆ. ಇವುಗಳ ಪರಿಣಾಮ ಇದೀಗ ಅಗ್ಗವೆನಿಸಿರುವ ಮಿಂಬಲೆ ಮುಂದೊಮ್ಮೆ ದುಬಾರಿಯಾಗಲೂಬಹುದು. ಇತ್ತಿಚೀಗೆ ಇಂತ ಸುಲಿಗೆಕೋರರು ಬಂಡಿಯ ಎಣ್ಣುಕವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡು ಅಡ್ಡಾದಿಡ್ಡಿಯಾಗಿ ಬಂಡಿ ಓಡಾಡುವಂತೆ ಮಾಡಿದ್ದು ಕೆಲ ತಿಂಗಳ ಹಿಂದೆ ದೊಡ್ಡ ಸುದ್ದಿಯಾಗಿತ್ತು. ಇಂತಹ ಕೆಟ್ಟ ಕೆಲಸಗಳಿಗೂ ಇದು ದಾರಿಯಾಗಲಿದೆ. ಇನ್ನೂ ದಿಗಿಲುಕೋರರು ಈ ಚಳಕದ ಬಳಕೆ ಮಾಡಿ ಹೆಚ್ಚು ಕಡಿಮೆ ಇಡೀ ಜಗತ್ತನ್ನೇ ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುವ ಸಾದ್ಯತೆ ತಳ್ಳಿ ಹಾಕಲಾಗದು. ಈ ಮಾಹಿತಿ ಸೋರಿಕೆಯ ಸಮಸ್ಯೆ ಒಂದೆಡೆಯಾದರೆ ಇಶ್ಟೆಲ್ಲ ವಸ್ತುಗಳು ಹಂಚಿಕೊಳ್ಳಬಹುದಾದ ಮಾಹಿತಿಗಳನ್ನು ಕೂಡಿಡುವುದು, ಬೇಕೆಂದಾಗ ಬಳಸಿಕೊಳ್ಳುವುದು, ಬೇಕಿಲ್ಲದ ಮಾಹಿತಿಗಳನ್ನು ಬೇರ‍್ಪಡಿಸಿ ಜಾಲಾಡುವುದು ಕೂಡ ಅಂದುಕೊಂಡಶ್ಟು ಸುಲಬವಲ್ಲ.

ಈ ಎಲ್ಲ ಕೇಳ್ವಿಗಳು ಸಾಕಶ್ಟು ತಲೆನೋವನ್ನು ಹುಟ್ಟುಹಾಕಿವೆ. ನಾಡು, ಹೊರನಾಡು ಮುಂತಾದೆಡೆ ಸಬೆ, ಸಮಾರಂಬ ಮತ್ತು ಮಾತುಕತೆ ಕೂಟಗಳಲ್ಲಿ ಈ ಮೇಲ್ಕಂಡ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಬಗ್ಗೆ ಮಾತುಕತೆ ನಡೆಯುತ್ತಿವೆ. ಇನ್ನೂ ತಕ್ಕ ಹೇಳ್ವಿಗಳು ಕಂಡುಕೊಳ್ಳುವ ಯತ್ನಗಳು ನಡೆಯುತ್ತಿವೆ. ಇವರು ಆದಶ್ಟು ಬೇಗ ಸರಿಯಾದ ಹೇಳ್ವಿ ಕಂಡುಕೊಂಡರೆ ಇಂಟರ್‌ನೆಟ್ ಆಪ್ ತಿಂಗ್ಸ್ ನಿಜಕ್ಕೂ ನಮ್ಮ ಬದುಕನ್ನು ಸುಳುವಾಗಿಸುವಲ್ಲಿ ಎರಡು ಮಾತಿಲ್ಲ.

 

(ಮಾಹಿತಿ ಮತ್ತು ತಿಟ್ಟ ಸೆಲೆ: forbes.com, 3dnews.ru)

 

 

 

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: