ದುಡಿಮೆಯ ಬೆಲೆ – ಮಗ ಕಲಿತ ಪಾಟ

 ಸಿ.ಪಿ.ನಾಗರಾಜ.

Farmers

ಒಂದೂರಿನಲ್ಲಿ ಒಬ್ಬ ಬೇಸಾಯಗಾರ ಇದ್ದ. ಅವನಿಗೆ ಹೊಲ-ಗದ್ದೆ-ತೋಟ ಎಲ್ಲಾ ಬೇಕಾದಂಗೆ ಇತ್ತು. ಅವನು ಊರಿಗೆ ದೊಡ್ಡ ಕುಳವಾಗಿದ್ದ. ಅವನ ಮನೇಲಿ ಚಿನ್ನ ಬೆಳ್ಳಿ ಹಣಕಾಸು ತುಂಬಿ ತುಳುಕಾಡುತ್ತಿತ್ತು. ಅವನಿಗೆ ಒಬ್ಬ ಮಗ ಇದ್ದ. ಮಗನಿಗೆ ಹದಿನೇಳು ತುಂಬಿ ಹದಿನೆಂಟಕ್ಕೆ ಕಾಲಿಡುತ್ತಿದ್ದರೂ ಏನೊಂದು ಜವಾಬ್ದಾರಿ ಇರಲಿಲ್ಲ. ಅವನು ಶಾಲೆಗೆ ಹೋಗದೆ ಓದುಬರಹ ಕಲಿಯದೆ ಉಣ್ಕೊಂಡು ತಿನ್ಕೊಂಡು ಪೋಲ್ ಪೋಲಿ ತಿರೀಕೊಂಡು ಕಾಲ ಕಳೀತಿದ್ದ. ಮಗನಿಗೆ ಒಳ್ಳೇ ಬುದ್ದಿ ಬಂದು ತನ್ನಂಗೆ ದುಡಿಮೆ ಮಾಡೋದನ್ನ ಕಲ್ತು ಉದ್ದಾರ ಆಗ್ಲಿ ಅಂತ ಅಪ್ಪ ಒಂದು ಉಪಾಯ ಮಾಡ್ದ. ಮಗನನ್ನ ತನ್ನ ಗೆಳೆಯನಾಗಿದ್ದ ಮತ್ತೊಬ್ಬ ದೊಡ್ಡ ಜಮೀನ್ದಾರನ ಬಳಿಗೆ ಕರ‍್ಕೊಂಡೋಗಿ, ಮಗನಿಗೆ ಕೆಲಸಕಾರ‍್ಯ ಕಲ್ಸು ಅಂತ ಹೇಳಿ, ಅವನ ಸುಪರ‍್ದಿನಲ್ಲಿ 3 ತಿಂಗಳು ಬಿಟ್ಟುಬಂದ.

ಆ ಜಮೀನ್ದಾರ ಈ ಹುಡುಗನಿಗೆ ಯಾವುದೇ ಕೆಲಸಕಾರ‍್ಯವನ್ನು ಹೇಳಿ ಮಾಡಿಸದೆ, ತನ್ನ ಮನೆಯಲ್ಲಿ ಆರಾಮವಾಗಿ ಇರೂಕೆ ಬಿಟ್ಟುಬಿಟ್ಟ. ಈ ಹುಡುಗ ದಿನಬೆಳಗಾದರೆ ಆರಾಮವಾಗಿ ಒಳ್ಳೊಳ್ಳೆ ಊಟ ತಿಂಡಿ ತಿನ್ಕೊಂಡು, ಮೂರೊತ್ತು ಟಿ.ವಿ.ನೋಡ್ಕೊಂಡು 3 ತಿಂಗ್ಳು ತುಂಬಿಸಿದ. ಅಲ್ಲಿಂದ ಹೊರಡುವಾಗ ಜಮೀನ್ದಾರನು ಇವನ ಕಯ್ಗೆ 5 ಚಿನ್ನದ ನಾಣ್ಯಗಳನ್ನು ಉಡುಗೊರೆಯಾಗಿ ಕೊಟ್ಟುದ್ದಲ್ಲದೇ, ಹೊಸಬಟ್ಟೆ ಉಡಿಸಿ ಕಳುಹಿಸಿಕೊಟ್ಟ.

ಊರಿಗೆ ಹಿಂತಿರುಗಿ ಬಂದ ಮಗನನ್ನು ಕಂಡು ಅಪ್ಪನು “ಏನೇನು ಕಲ್ತೆ?” ಎಂದು ಕೇಳಿದಾಗ, “ಏನು ಇಲ್ಲ ಕಣಪ್ಪ. ಇಲ್ಲಿಗಿಂತ ಅಲ್ಲೇ ಆರಾಮವಾಗಿದ್ದೆ” ಎಂದು ಹೇಳಿ, ತನ್ನ ಜೇಬಿನಿಂದ 5 ಚಿನ್ನದ ನಾಣ್ಯಗಳನ್ನು ಹೊರತೆಗೆದು “ಇದನ್ನು ನಂಗೆ ಅವರು ಕೊಟ್ಟರು” ಎಂದು ತೋರಿಸಿದ. ಕೂಡಲೇ ಅಪ್ಪ ಅವನ್ನು ಅವನ ಕಯ್ಯಿಂದ ಈಸಿಕೊಂಡು, ಮನೆಯ ಪಕ್ಕದಲ್ಲೇ ಇದ್ದ ಬಾವಿಯೊಳಕ್ಕೆ ಚಿನ್ನದ ನಾಣ್ಯಗಳನ್ನು ಎಸೆದ. ಅದನ್ನು ನೋಡುತ್ತಿದ್ದ ಮಗ ನಸುನಗುತ್ತ ಮನೆಯೊಳಕ್ಕೆ ಹೋದ.

ತುಂಬಾ ಕಳವಳಕ್ಕೆ ಒಳಗಾದ ಅಪ್ಪ ಈಗ ಮತ್ತೊಮ್ಮೆ ಮಗನನ್ನು ತಿದ್ದಲು ಯೋಚಿಸಿದ. ಈ ಸಾರಿ ಮಗನನ್ನು ಬಡತನದಲ್ಲಿ ಬೇಯುತ್ತಿದ್ದ ಸಣ್ಣ ಬೇಸಾಯಗಾರನ ಬಳಿಗೆ ಕರೆದುಕೊಂಡು ಹೋಗಿ, ಅವನಿಗೆ ತನ್ನ ಮಗನಿಗೆ ಬೇಸಾಯದ ಕೆಲಸನೆಲ್ಲಾ ಚೆನ್ನಾಗಿ ಹೇಳ್ಕೊಟ್ಟು, ಕಶ್ಟಪಟ್ಟು ದುಡಿಯೋದನ್ನ ಕಲಿಯುವಂತೆ ಮಾಡು ಅಂತ ತಾಕೀತು ಮಾಡಿ, ಅವನ ಬಳಿ 3 ತಿಂಗಳು ಬಿಟ್ಟುಬಂದ.

ಇತ್ತ ಅಪ್ಪ ಊರಿಗೆ ಹೊಯ್ತಿದ್ದಂಗೆ ಅತ್ತ ಪಡಸಾಲೆ ಮ್ಯಾಲೆ ಕುಂತ್ಕೋಕೆ ಹೊಯ್ತಿದ್ದ ಹುಡುಗನನ್ನು ಆ ಬೇಸಾಯಗಾರ “ಹಂಗೆ ಕುಂತ್ಕೊಂಡರೆ ತಿನ್ನೋಕೆ ಉಣ್ಣೋಕೆ ನಮಗೆ ಯಾರು ಕೊಟ್ಟಾರಪ್ಪ! ಎದ್ದು ಬಾ ಇತ್ತಾಗೆ. ಹೊತ್ತಕೊ ಆ ನೊಗನಾ. ಹಿಡ್ಕೊ ಎತ್ತುಗಳನ್ನ” ಎಂದು ಅಬ್ಬರಿಸಿ ಅವನನ್ನು ಹೊಲಕ್ಕೆ ಕರೆದುಕೊಂಡು ಹೋಗಿ ಉಳುಮೆ ಮಾಡುವುದನ್ನು ಹೇಳಿಕೊಡಲು ತೊಡಗಿದ. ಅಂದಿನಿಂದ ದಿನಬೆಳಗಾದರೆ ಸಾಕು ಹೊಲ ಗದ್ದೆ ತೋಟಗಳಿಗೆ ಕರ‍್ಕೊಂಡು ಹೋಗಿ, ಬೇಸಾಯದ ಎಲ್ಲಾ ಗೇಮೆಗಳನ್ನು ಚೆನ್ನಾಗಿ ಕಲಿಸಿದ. 3 ತಿಂಗಳು ಮುಗಿಯುವ ಹೊತ್ತಿಗೆ ಹುಡುಗನು ದುಡಿಮೆಯನ್ನು ಮಾಡುವುದನ್ನು ಕಲಿಯುವುದರ ಜೊತೆಗೆ, ದುಡಿದು ತಿನ್ನಬೇಕೆಂಬ ಒಳ್ಳೇ ಬುದ್ದಿಯನ್ನು ಕಲಿತ.

3 ತಿಂಗಳ ನಂತರ ಹುಡುಗನು ಹಿಂತಿರುಗಿ ಮನೆಗೆ ಬಂದಾಗ ಅಪ್ಪ ಕೇಳಿದ “ಮೊಗ, ಏನೇನು ಕಲ್ತಪ್ಪ?”

“ಅಪ್ಪ, ಈಗ ನಾನು ನಿನ್ನಂಗೆ ಆರಂಬದ ಎಲ್ಲಾ ಗೇಮೇನೂ ಮಾಡ್ತೀನಿ. ಇನ್ನು ಮ್ಯಾಲೆ ನೀನು ಅಟ್ಟೀಲಿ ನೆಮ್ಮದಿಯಾಗಿರು. ನಾನೇ ಎಲ್ಲಾ ನೋಡ್ಕೊತೀನಿ” ಎಂದು ಹೇಳಿ, ಆ ಬೇಸಾಯಗಾರನು ಉಡುಗೊರೆಯಾಗಿ ಕೊಟ್ಟಿದ್ದ 5 ತಾಮ್ರದ ನಾಣ್ಯಗಳನ್ನು ಅಪ್ಪನ ಕಯ್ಯಲ್ಲಿಟ್ಟ. ಕೂಡಲೇ ಅಪ್ಪ ಅವನ್ನು ಮನೆಯ ಪಕ್ಕದಲ್ಲಿದ್ದ ಬಾವಿಯೊಳಕ್ಕೆ ಎಸೆಯಲು ಹೊರಟಾಗ, ಮಗ ಅವನನ್ನು ತಡೆಯುತ್ತಾ “ಅಪ್ಪ, ಅಪ್ಪ, ಬ್ಯಾಡ ಕಣಪ್ಪ. ದುಡ್ಡ ಬಾವೀಗೆ ಹಾಕ್ಬೇಡ ಕಣಪ್ಪ” ಎಂದು ಬೇಡಿಕೊಂಡ.

ಅದಕ್ಕೆ ಅಪ್ಪನು “ಇದ್ಯಾಕ್ಲ ಮೊಗ, ಅವತ್ತು ಚಿನ್ನದ ನಾಣ್ಯ ಬಾವೀಗೆ ಹಾಕ್ದಾಗ ನಗನಗ್ತಾ ಸುಮ್ಮನಿದ್ದೆ. ಇವತ್ತು ಯಾಕೆ ಹಿಂಗಾಡೀಯೆ” ಎಂದು ಮುಂದಕ್ಕೆ ಹೆಜ್ಜೆಯಿಟ್ಟ. ಆಗ ಮಗನು ಅಪ್ಪನಿಗೆ ಅಡ್ಡಲಾಗಿ ನಿಂತು “ಅಪ್ಪೋ…ಆ ಚಿನ್ನದ ನಾಣ್ಯಗಳನ್ನ ನಾನು ಸಂಪಾದನೆ ಮಾಡಿರಲಿಲ್ಲ. ಅದು ಸುಮ್ಮನೆ, ಕೆಲಸ ಮಾಡದೇ, ಬಂದಿತ್ತು. ಈ ದುಡ್ಡು ನಾನು 3 ತಿಂಗಳು ಹಗಲು ರಾತ್ರಿ ಅನ್ನದೇ ಬೆವರು ಹರ‍್ಸಿ ದುಡ್ದು ಸಂಪಾದಿಸಿದ್ದು . ಇವ ಬಾವಿಗೆ ಹಾಕ್ಬೇಡ ಕಣಪ್ಪ. ನಿನ್ ದಮ್ಮಯ್ಯ ಅಂತೀನಿ” ಎಂದು ಗೋಗರೆದ.

ಬಾವಿಯೊಳಕ್ಕೆ ತಾಮ್ರದ ನಾಣ್ಯಗಳನ್ನು ಎಸೆಯದೆ, ಅಪ್ಪನು ಆನಂದದಿಂದ ಮುಗುಳ್ನಗುತ್ತಾ “ನಿಂಗೆ ಈಗ ದುಡ್ಡಿನ ಬೆಲೆ…ದುಡಿಮೆಯ ಬೆಲೆ ಏನು ಅಂತ ತಿಳ್ದದೆ. ಇನ್ನು ಮುಂದಕ್ಕೆ ಜೀವನದಲ್ಲಿ ನೀನು ಚೆಂದಾಗಿ ಬಾಳ್ತೀಯೆ” ಎಂದು ಹರಸುತ್ತಾ, ಮಗನ ಕಯ್ಯಲ್ಲಿ ನಾಣ್ಯಗಳನ್ನು ಇಟ್ಟನು.

( ಚಿತ್ರ ಸೆಲೆ: arti-artindia.blogspot.in )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: