ಅಜ್ಜನ ಆಸೆ

– ಸಿ.ಪಿ.ನಾಗರಾಜ.

tengina-mara

ಒಂದೂರಲ್ಲಿ ಒಬ್ಬ ರಾಜ. ಅವನಿಗೆ ಒಬ್ಬ ಮಂತ್ರಿ. ರಾಜ ಮಂತ್ರಿ ಇಬ್ಬರೂ ಆಗಾಗ್ಗೆ ವೇಶ ಮರೆಮಾಡ್ಕೊಂಡು, ರೈತರ ವೇಶ ಹಾಕ್ಕೊಂಡು ಊರು ಸುತ್ತೆಲ್ಲಾ ಹೊಯ್ತಿದ್ರು. ಯಾಕಪ್ಪ ಹಿಂಗೆ ಮಾರುವೇಶದಲ್ಲಿ ಹೊಯ್ತಿದ್ರು ಅಂದ್ರೆ….ಊರಲ್ಲಿ ಇರೂ ಜನಗಳಿಗೆ ಉಣ್ಣೂಕೆ ಅನ್ನ ಇದೆಯಾ? ಉಡೂಕೆ ಬಟ್ಟೆ ಇದೆಯಾ? ಮಲಗೂಕೆ ಮನೆ ಇದೆಯಾ? ದುಡಿಯೂದಕ್ಕೆ ಕೆಲಸ ಇದೆಯಾ? ಅಂತ ತಿಳ್ಕೊಂಡು ಬರೋದಕ್ಕೆ ಹಿಂಗೆ ಹೊಯ್ತಿದ್ರು.

ಒಂದು ದಿನ ಬೆಳಗ್ಗೆ ರಾಜ ಮಂತ್ರಿ ಇಬ್ರೂ ಮಾರುವೇಶದಲ್ಲಿ ಊರಲ್ಲೆಲ್ಲಾ ತಿರುಗಾಡ್ಕೊಂಡು ಬರ‍್ತಿದ್ದಾಗ, ಅಲ್ಲೊಂದು ತೋಟದಲ್ಲಿ ಹಣ್ಣಣ್ಣು ಮುದುಕ ಒಬ್ಬ ಚಿಕ್ಕ ಗುಂಡಿ ತೋಡ್ತಾ ಇದ್ದ. ಹಣ್ಣಣ್ಣು ಮುದುಕ ಅಂದ್ರೆ ತುಂಬಾ ವಯಸ್ಸಾಗಿತ್ತು. ಇವತ್ತೋ ನಾಳೆಯೋ ಸಾಯುವಂಗೆ ಇದ್ದ. ತಲೆ ನಡುಗುತ್ತಿತ್ತು….ಹಲ್ಲೆಲ್ಲಾ ಬಿದ್ದೋಗಿದ್ದೊ…ಕೈಯೆಲ್ಲಾ ಅದುರುತ್ತಿದ್ದೊ. ಇಂತಾ ಮುದುಕ ಹಿಂಗೆ ಗುಂಡಿ ತೋಡ್ತಾ ಇರೋದನ್ನ ನೋಡಿ, ರಾಜಂಗೂ ಮಂತ್ರಿಗೂ ಬೋ ಅಚ್ಚರಿ ಆಯ್ತು. ಆ ಮುದುಕ ಯಾಕೆ ಹಿಂಗೆ ಗುಂಡಿ ತೋಡ್ತಾ ಅವನೆ…ನೋಡೋಣ ಅಂತಾ ಅವನತ್ರಕ್ಕೆ ಬಂದರು.

ಇವರಿಬ್ಬರೂ ತನ್ನ ಹತ್ರಕ್ಕೆ ಬಂದು ನಿಂತ್ಕೊಂಡರೂ, ಅವರನ್ನು ನೋಡದೆ, ತನ್ನ ಪಾಡಿಗೆ ತಾನು ಮುದುಕ ಗುಂಡಿ ತೋಡಿ, ಅದರಲ್ಲಿ ಒಂದು ತೆಂಗಿನ ಗಿಡ ನೆಟ್ಟು, ಬುಡಕ್ಕೆ ಮಣ್ಣು ತಳ್ಳಿ, ನೀರನ್ನು ಹಾಕತೊಡಗಿದ. ಮುದುಕನನ್ನ ರಾಜ “ಏನಪ್ಪಾ ಅಜ್ಜ…ಈ ಸಾಯೋ ವಯಸ್ಸಿನಲ್ಲಿ ತೆಂಗಿನ ಗಿಡ ನೆಡ್ತಾ ಇದ್ದೀರಲ್ಲಾ…ಇದು ಕಾಯಿ ಬುಡಬೇಕಾದ್ರೆ ಏನಿಲ್ಲಾ ಅಂದ್ರು ಏಳೆಂಟು ವರುಶ ಬೇಕು. ಅಲ್ಲೀತಂಕ ನೀವು ಜೀವಂತವಾಗಿ ಇರ‍್ತೀರಾ“ ಎಂದು ನಗುನಗುತ್ತಾ ಕೇಳಿದ. ಮುದುಕ ತಲೆಯೆತ್ತಿ ನೋಡಿ “ಯಾರಪ್ಪ ನೀವು?“ ಎಂದ. ಅದಕ್ಕೆ ಮಂತ್ರಿ “ನಾವು ಪಕ್ಕದ ಊರಿನೋರು…ಹಿಂಗೆ ದಾರೀಲಿ ಹೊಯ್ತಿದ್ದೊ…ನಿಮ್ಮ ಕೆಲಸ ನೋಡಿ ಅಚ್ಚರಿ ಆಯ್ತು. ಅದಕ್ಕೆ ಬಂದೊ. ಈ ವಯಸ್ಸಿನಲ್ಲಿ ತೆಂಗಿನ ಗಿಡ ನೆಡ್ತಾ ಇದ್ದೀರಲ್ಲಾ…ನೀವು ಇದರ ಎಳನೀರು ಕುಡಿಯೋ ತನಕ ಬದುಕಿ ಇರ‍್ತೀರಾ“ ಎಂದು ಕೇಳಿದ. ಆಗ ಮುದುಕ ಅವರಿಬ್ಬರಿಗೂ ತೋಟದಲ್ಲಿ ಬೆಳೆದು ನಿಂತಿರೂ ದೊಡ್ಡ ದೊಡ್ಡ ತೆಂಗಿನಮರಗಳನ್ನು ತನ್ನ ಕಯ್ ಎತ್ತಿ ತೋರಿಸುತ್ತಾ –

“ನೋಡ್ರಪ್ಪ…ಅಲ್ಲಿ ಮುಂದ್ಗಡೆ ಆಚೆ ಮಗ್ಗಲಲ್ಲಿ ಕಾಣ್ತದಲ್ಲಪ್ಪ..ಆ ತೋಟ ನಮ್ಮ ತಾತ ಮುತ್ತಾತಂದರು ನೆಟ್ಟು ಬೆಳೆಸಿದ್ರು…ನಮ್ಮ ಹಿರೀಕರು ನೆಟ್ಟು ಬೆಳೆಸಿದ ಮರಗಳು ಕೊಟ್ಟ ಎಳನೀರು ಕುಡಿದು…ತೆಂಗಿನಕಾಯ ತಿಂದು ನಾನು ಬೆಳೆದೆ. ಈಚೆ ಮಗ್ಗಲಲ್ಲಿ ಕಾಣ್ತದಲ್ಲ ಅದೆಲ್ಲಾ ನನ್ನ ಕಾಲದಲ್ಲಿ…ನಾನು ನನ್ ಹೆಂಡ್ತಿಮಕ್ಕಳ ಜೊತೆ ಸೇರ‍್ಕೊಂಡು ಸಸಿ ನೆಟ್ಟು…ನೀರು ಎರೆದು ಬೆಳ್ಸಿದ ತೋಟ ಕಣ್ರಪ್ಪ“ ಎಂದ.

ರಾಜ ಮುಗುಳ್ನಗುತ್ತಾ “ಏನು ಅಜ್ಜ …ಇಶ್ಟೆಲ್ಲಾ ಗಿಡಮರ ಇದ್ರೂ ನಿನ್ ಆಸೆಗೆ ಕೊನೆ ಇಲ್ವೇ? ಈಗ್ಲೂ ಗಿಡ ನೆಡ್ತಾ ಇದ್ದೀಯಲ್ಲ?“ ಎಂದ. ಮಾರುವೇಶದಲ್ಲಿದ್ದ ರಾಜನ ಮೊಗವನ್ನು ಅಜ್ಜ ನೆಟ್ಟನೆಯ ದಿಟ್ಟಿಯಿಂದ ನೋಡುತ್ತಾ “ಮೊಗ , ಬೇಸಾಯಗಾರರು ಬೂಮೀಲಿ ಬಿತ್ತಿದ ಬೀಜ, ನೆಟ್ಟ ಗಿಡಗಳು ಕೊಡೂ ಬೆಳೇನೆಲ್ಲಾ ಅವನ ಮನೆಯವರೇ ತಿನ್ನೂದಿಲ್ಲ ಕಣಪ್ಪ. ಇಡೀ ಸೀಮೆ ಜನಕ್ಕೆಲ್ಲಾ ಆಯ್ತದೆ. ಪ್ರಾಣಿಪಕ್ಶಿ ಮೊದಲುಗೊಂಡು ಜೀವರಾಶಿಗೆಲ್ಲಾ ಆಯ್ತದೆ ಕಣಪ್ಪ. ಈಗ ನಾನು ನೆಡ್ತಾಯಿರು ಈ ಸಸಿ ಮುಂದಕ್ಕೆ ಮರವಾಗಿ ಬೆಳೆದು ಕಾಯಿ ಕೊಡುವಾಗ ನನ್ನ ಮುಂದಿನ ತಲೆಮಾರಿನವರು ಇದರ ಎಳನೀರ್ ಕುಡೀತಾರೆ…ಕಾಯ್ ತಿಂತಾರೆ. ನಾವು ನಮ್ಮ ಮಕ್ಕಳು ಮೊಮ್ಮಕ್ಕಳಿಗೆ ಮಾತ್ರ ಅಲ್ಲ..ನಮ್ ಜೊತೇಲಿ ಇರೂ ಜನಕ್ಕೆಲ್ಲಾ ಒಳ್ಳೇದನ್ನ ಕೊಟ್ಟು ಹೋಗಬೇಕು. ನೀನ್ ಹೇಳ್ದಂಗೆ.. ನಾನು ಇನ್ನು ಹೆಚ್ಚು ದಿನ ಬದುಕಿರೂದಿಲ್ಲ ಅನ್ಕೊಂಡು..ಸಾವ್ ಬತ್ತದೆ ಅಂತ ಅದ ಎದುರು ನೋಡ್ತ ಸುಮ್ಮನೆ ಕುಂತ್ಕೊಬಾರ‍್ದು. ಜೀವ ಇರೂ ತಂಕ ಏನಾದ್ರು ನಮ್ ಕಯ್ಯಲ್ಲಾದ ಗೇಮೆ ಮಾಡ್ತಿದ್ರೆ ಉಂಡ ಹಿಟ್ಟು ಅರಗ್ತದೆ ಕಣಪ್ಪ” ಎಂದು ಹೇಳಿ ಮತ್ತೊಂದು ಗುಂಡಿಯನ್ನು ತೋಡಲೆಂದು ಪಕ್ಕಕ್ಕೆ ತೆವಳಿದ.

ಅಜ್ಜನ ಮಾತು ಮತ್ತು ಕೆಲಸವನ್ನು ನೋಡಿ ರಾಜ ಮಂತ್ರಿ ಬೋ ಆನಂದಪಟ್ಟು, ಆ ಮುದುಕನಿಗೆ ಕೈಮುಗಿದು ಮುಂದಕ್ಕೆ ಹೋದರು.

( ಚಿತ್ರ ಸೆಲೆ: floravitalights.com  )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: