ಬಾನಿಗೆ ಏಣಿ ಇಲ್ಲದಿದ್ದರೆ ಏನಂತೆ? ದಾರಿಯಿದೆ!

– ವಿಜಯಮಹಾಂತೇಶ ಮುಜಗೊಂಡ.

Coiling-Dragon-Cliff-1

ಬದುಕಿನಲ್ಲಿ ಈಡೇರಿಸಲಾಗದಶ್ಟು ಅತಿದೊಡ್ಡ ಆಸೆಗಳನ್ನು ಹೊಂದಿರುವುದನ್ನು ಅತವಾ ಕಲ್ಪನೆಗೆ ಮೀರಿದ ಯೋಜನೆಗಳನ್ನು, ಸಾಮಾನ್ಯವಾಗಿ ಆಕಾಶಕ್ಕೆ ಏಣಿ ಹಾಕುವುದು ಎನ್ನುತ್ತೇವೆ. ಅಂದರೆ ಆಕಾಶಕ್ಕೆ ಏಣಿ ಹಾಕುವುದು ಹೇಗೆ ಅಸಾದ್ಯವೋ ಹಾಗೆ ಸಾಮಾನ್ಯವಾಗಿ ಮಂದಿಯ ಕಸುವಿಗೆ ಮೀರಿದ ಕೆಲಸಗಳನ್ನು ಅಸಾದ್ಯ ಎನ್ನುವ ಅರ‍್ತದಲ್ಲಿ ಆಕಾಶಕ್ಕೆ ಏಣಿ ಹಾಕುವುದು ಎನ್ನುವ ನುಡಿಕಟ್ಟು ಬಳಕೆಯಲ್ಲಿದೆ. ಇಂದು ಮನುಶ್ಯ ಏನೇನು ಸಾದಿಸಿದ್ದಾನೆ ಎನ್ನುವುದಕ್ಕೆ ಎಣಿಕೆಯಿಲ್ಲ. ಹೊಸ ಹೊಸ ಅರಕೆಗಳು ನಡೆಯುತ್ತಿರುವ ಇಂದು ಏನು ಬೇಕಾದರೂ ಸಾದಿಸಬಲ್ಲ. ಆಗದು ಅಂದುಕೊಂಡ ಕೆಲಸಗಳನ್ನು ಮಾಡುವುದು ತುಂಬಾ ಹಳೆಯ ಮಾತು. ಇಂದು ಆಕಾಶಕ್ಕೆ ಏಣಿಯನ್ನು ಹಾಕುವ ಕೆಲಸವನ್ನೂ ಮಾಡಿದ್ದಾನೆ! ಏಣಿ ಅಲ್ಲದಿದ್ದರೂ ಬಾನಿನೆತ್ತರದಲ್ಲಿ ದಾರಿಯೊಂದನ್ನು ಮಾಡಿದ್ದಾನೆ.

ಕಡಲ ಮಟ್ಟದಿಂದ 1000 ಮೀಟರ್ ಎತ್ತರದಲ್ಲಿರುವ ಈ ದಾರಿ ನೆಲದಿಂದ ಸುಮಾರು 300 ಮೀಟರ್ ಎತ್ತರದಲ್ಲಿದೆ.

ಚೀನಾದ ಹುನಾನ್ ನಾಡಿನ ಬೆಟ್ಟಗಳ ಚೆಲುವನ್ನು ನೋಡಿ ಕಣ್ತುಂಬಿಕೊಳ್ಳಲು ಈಗ ಹೊಸ ದಾರಿಯೊಂದನ್ನು ಕಟ್ಟಲಾಗಿದೆ. ಅದೇ ಬಾನಿನೆತ್ತರದ ಬೆಟ್ಟದ ತುದಿಯಲ್ಲಿರುವ ದಾರಿ. ತೆಂಕಣ ಚೀನಾದ ಜಾಂಗ್-ಜಾ-ಜಿಎ(Zhangjiajie) ನ್ಯಾಶನಲ್ ಪಾರೆಸ್ಟ್‌ನ ಟಿಯಾನ್ಮೆನ್ ಬೆಟ್ಟದ ಅಂಚಿನಲ್ಲಿ ಕಟ್ಟಲಾದ ದಾರಿ ಇತ್ತೀಚಿಗೆ ಸುತ್ತಾಡುಗರಿಗೆ ನೋಡಲು ತೆರೆದಿದೆ. ಕಡಲ ಮಟ್ಟದಿಂದ 1000 ಮೀಟರ್ ಎತ್ತರದಲ್ಲಿರುವ ಈ ದಾರಿ ನೆಲದಿಂದ ಸುಮಾರು 300 ಮೀಟರ್ ಎತ್ತರದಲ್ಲಿದೆ. 5 ಅಡಿ ಅಗಲ ಇರುವ ಈ 100 ಮೀಟರ್ ಉದ್ದದ ದಾರಿ, ಗಾಜಿನಿಂದ ಮಾಡಲ್ಪಟ್ಟಿದ್ದು ಎಂದರೆ ಅದರ ಮೇಲೆ ನಡೆಯುವುದು ಅದೆಶ್ಟು ರೋಮಾಂಚಕ ಮತ್ತು ಬಯಾನಕ ಎಂದು ನೀವು ಊಹಿಸಿರಬಹುದು. ಕೆಳಗೆ ನೋಡಿದರೆ 300 ಮೀಟರ್ ಆಳದ ಕಣಿವೆ  ತಲೆ ಸುತ್ತಿಸದೇ ಇರದು.

ಕಾಯ್ಲಿಂಗ್ ಡ್ರ್ಯಾಗನ್ ಕ್ಲಿಪ್(Coiling Dragon Cliff) ಎನ್ನುವ ಹೆಸರಿನ ಗಾಜಿನ ಹಾದಿ ನೋಡುಗರಿಗೆ ತೆರೆದಿದ್ದು ಇತ್ತೀಚಿಗೆ. ಮೊದಲು ಕಟ್ಟಿಗೆಯ ಸೇತುವೆ ಆಗಿದ್ದ ಇದನ್ನು ಇತ್ತೀಚಿಗಶ್ಟೇ ಗಾಜಿನ ಹಾದಿಯನ್ನಾಗಿ ಹೊಸದಿಸಲಾಗಿದೆ. ಈ ಹಾದಿಯಲ್ಲಿ 99 ಅಂಕುಡೊಂಕು ತಿರುವುಗಳಿರುವ ಇದು ಟಿಯಾನ್ಮೆನ್ ಬೆಟ್ಟದಲ್ಲಿ ಮೂರನೆಯ ಬಾನೆತ್ತರದ ಹಾದಿ.

ಜಗತ್ತಿನ ಅತಿ ಉದ್ದದ ಗಾಜಿನ ತಳದ ಸೇತುವೆ ಇರುವುದೂ ಇಲ್ಲಿಯೇ!

ಜಾಂಗ್-ಜಾ-ಜಿಎ(Zhangjiajie) ನ್ಯಾಶನಲ್ ಪಾರೆಸ್ಟ್ ನ ಮತ್ತೊಂದು ಸೆಳವು ಎಂದರೆ ಜಗತ್ತಿನ ಅತಿ ಉದ್ದದ ಗಾಜಿನ ತಳದ ಸೇತುವೆ ಇರುವುದೂ ಇಲ್ಲಿಯೇ. 1420 ಅಡಿ ಉದ್ದದ ಈ ಗಾಜಿನ ಸೇತುವೆ 20 ಅಡಿ ಅಗಲ ಇದ್ದು 984 ಅಡಿ ಎತ್ತರದಲ್ಲಿದೆ. ಅಲ್ಲದೇ ಜಗತ್ತಿನ ಅತೀ ಉದ್ದದ ಕೇಬಲ್ ಕಾರ್ ಇರುವುದೂ ಇಲ್ಲಿಯೇ. ಈ ಕೇಬಲ್ ಕಾರ್‍ನ ಉದ್ದ 7 ಕಿ.ಮೀ. ಇದ್ದು 30 ನಿಮಿಶದ ರೋಮಾಂಚಕತೆಯನ್ನು ನೀವು ಒಮ್ಮೆ ಅನುಬವಿಸಬೇಕು.

Glass-Brdge

 

ಅದೇಕೋ ಚೀನೀಯರಿಗೆ ಎತ್ತರದ ಬಯ ಇದ್ದಂತಿಲ್ಲ. ಸುತ್ತಾಡುಗರನ್ನು ಸೆಳೆಯಲೆಂದೇ ಹಲವು ಕಡೆ ಇರುವ ಗಾಜಿನ ತಳದ ಇನ್ನಶ್ಟು ಕಟ್ಟಡಗಳ ಚೂರು ಮಾಹಿತಿ ಇಲ್ಲಿದೆ –

ಶಿಲಿಂಕ್ಸಿಯಾ ಗಾಜು ತಳದ ತಟ್ಟೆ(Shilinxia glass-bottomed disk)

Glass-Bottomed-Disc

  • ಸ್ತಳ – ಬೀಜಿಂಗ್‍ನ ಜಿಂಗ್‍ಡಾಂಗ್ ಸ್ಟೋನ್ ಪಾರೆಸ್ಟ್
  • ಅಳತೆ – 4470 ಚದರ ಮೀಟರ್
  • ಎತ್ತರ – 1300 ಅಡಿ

ಶೈನಿ‍ಅಜಾಯ್(Shiniuzhai) ಗಾಜಿನ ಸೇತುವೆ

glass-bridge-shiniuzhai

  • ‘ಸ್ಟೋನ್ ಬುದ್ದ’ ಬೆಟ್ಟ, ಹುನಾನ್ ನಾಡು
  • ಉದ್ದ – 984 ಅಡಿ
  • ಎತ್ತರ – 590 ಅಡಿ

ಯೂಂತಾಯ್(Yuntai) ಬೆಟ್ಟದ ದಾರಿ

yuntai

  • ಜಿಯಾಜುಓ(Jiaozuo), ಹುನಾನ್ ನಾಡು
  • ಉದ್ದ – 853 ಅಡಿ
  • ಎತ್ತರ – 3450 ಅಡಿ

( ಮಾಹಿತಿ ಮತ್ತು ಚಿತ್ರ ಸೆಲೆ: cnn.com, dailymail.co.uk, lonelyplanet.com, boredpanda.com )

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.