ಗುರುವಾದ ದೊಡ್ಡಬಟ್ಟರು
– ಸಿ.ಪಿ.ನಾಗರಾಜ.
ಆಗ ತಾನೆ ಒಂದೆರಡು ವರುಶಗಳ ಹಿಂದೆ ಮಂಗಳೂರಿನಲ್ಲಿ ಸ್ನಾತಕೋತ್ತರ ಕೇಂದ್ರ ಹೊಸದಾಗಿ ಶುರುವಾಗಿದ್ದರಿಂದ, ವಿದ್ಯಾರ‍್ತಿಗಳಲ್ಲಿ ಕೆಲವರಿಗೆ ನಗರದ ಅತಿ ದೊಡ್ಡ ಕಾಲೇಜಿನ ವಿದ್ಯಾರ‍್ತಿನಿಲಯವೊಂದರಲ್ಲಿ ನೆಲೆಸಲು ಅವಕಾಶವನ್ನು ನೀಡಲಾಗಿತ್ತು. ಹಾಸ್ಟೆಲ್‍ಗೆ ಸೇರಿದ ಮಾರನೆಯ ದಿನ ನಡೆದ ಪ್ರಸಂಗವು ಇನ್ನೂ ನನ್ನ ಮನದಲ್ಲಿ ಅಚ್ಚೊತ್ತಿದಂತಿದೆ.
ಬೆಳಗಿನ ತಿಂಡಿಗೆ ತಡವಾಗಿ ಹೋದಾಗ, ಊಟದ ಕೊಟಡಿಯ ಬಾಗಿಲು ಮುಚ್ಚಿತ್ತು. ನಾನು ಮತ್ತು ನನ್ನ ಗೆಳೆಯರಿಬ್ಬರು ಒಟ್ಟಾಗಿ ದಡದಡನೆ ಬಾಗಿಲನ್ನು ಬಡಿದೆವು. ಕೆಲವು ಗಳಿಗೆಯ ನಂತರ ಬಾಗಿಲು ತೆರೆಯಿತು. ಒಳಕ್ಕೆ ಹೋಗಲು ನಾವು ಹೆಜ್ಜೆಗಳನ್ನು ಇಡುತ್ತಿದ್ದಂತೆಯೇ, ಬಾಗಿಲನ್ನು ತೆರೆದ ಅಡುಗೆಬಟ್ಟರೊಬ್ಬರು ನಮಗೆ ಅಡ್ಡಲಾಗಿ ತಮ್ಮ ಕಯ್ಯನ್ನು ಒಡ್ಡಿ –
“ನಿಮಗೆ ಈಗ ಒಳಕ್ಕೆ ಪ್ರವೇಶವಿಲ್ಲ. ಈಗ ಹೋಗಿ, ಮದ್ಯಾಹ್ನ ವೇಳೆಗೆ ಸರಿಯಾಗಿ ಊಟಕ್ಕೆ ಬನ್ನಿ” ಎಂದರು. ಸುಮಾರು 30-35 ವಯಸ್ಸಿನ ಬಟ್ಟರ ವರ‍್ತನೆಯಿಂದ ಕೋಪಗೊಂಡ ನಾವು, ತಲಾಗಿ ಒಂದೊಂದು ಮಾತನಾಡತೊಡಗಿದೆವು.
“ಈಗ ಯಾಕ್ರಿ ತಿಂಡಿ ಕೊಡೊಲ್ಲ?”
“ತಿಂಡಿ ಏನಾದ್ರು ಮುಗಿದುಹೋಗಿದೆಯೇನ್ರಿ?”
“ಹುಡುಗರೆಲ್ಲಾ ಈಗ ತಾನೆ ತಿಂಡಿ ತಿನ್ನೋಕೆ ಶುರು ಮಾಡಿದ್ದಾರಲ್ರಿ?”
ನಮ್ಮೆಲ್ಲರ ಮಾತುಗಳಿಂದ ತುಸುವೂ ಕಂಗೆಡದ ಬಟ್ಟರು, ಬಿರುಗಣ್ಣಿನಿಂದ ನಮ್ಮೆಲ್ಲರನ್ನೂ ಒಮ್ಮೆ ನೋಡಿ –
“ಒಳಗಡೆ ಬೇಕಾದಶ್ಟು ತಿಂಡಿ ಇದೆ. ಆದರೆ ವೇಳೆ ಮೀರಿ ಬಂದವರಿಗೆ ಕೊಡೊಲ್ಲ” ಎಂದು ಗಟ್ಟಿ ದನಿಯಲ್ಲಿ ನುಡಿದರು.
“ಏನ್ರಿ ಬಟ್ಟರೇ, ಒಂದು 10 ನಿಮಿಶ ತಡವಾಗಿ ಬಂದ್ರೆ…ಏನ್ರಿ ಆಗೋಯ್ತು?” ಎಂದು ನಾನು ಒರಟಾಗಿ ಕಿರುಚಿದೆ.
“ಅದೆಲ್ಲಾ ನಂಗೊತ್ತಿಲ್ಲ. ಈಗ ಇಲ್ಲಿಂದ ನೀವು ಹೊರಡಿ. ನನಗೆ ಕಯ್ ತುಂಬ ಕೆಲಸವಿದೆ” ಎಂದು ಶಾಂತಚಿತ್ತರಾಗಿಯೇ ಹೇಳಿದರು. ತಿಂಡಿಯನ್ನು ತಿನ್ನುತ್ತಾ ಕುಳಿತಿರುವ ಹುಡುಗರ ಮುಂದೆ, ತಿಂಡಿಗಾಗಿ ಪರದಾಡುತ್ತಿರುವ ನಮಗೆ ತುಂಬಾ ಅಪಮಾನವಾದಂತಾಯಿತು.
“ಬನ್ರೋ…ಹೋಗೋಣ. ಒಂದು ತಿಂಡಿಗಾಗಿ ಇವರ ಮುಂದೆ ಯಾಕೆ ಹಲ್‍ಕಿರಿಬೇಕು” ಎಂದು ಗೊಣಗುತ್ತಾ ಅಲ್ಲಿಂದ ಹಿಂತಿರುಗಿದೆವು.
ಅಂದು ತರಗತಿಗೆ ಬಂದಾಗ, ಅಲ್ಲಿದ್ದ ಸೀನಿಯರ್ ಎಂ.ಎ. ವಿದ್ಯಾರ‍್ತಿಗಳು ಅಡುಗೆಬಟ್ಟರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡಿದರು. ನಮ್ಮನ್ನು ತಡೆದು ಹಿಂದಕ್ಕೆ ಅಟ್ಟಿದ್ದವರೇ ವಿದ್ಯಾರ‍್ತಿನಿಲಯದ ಹೆಡ್‍ಕುಕ್. ಅವರನ್ನು ಎಲ್ಲರೂ ದೊಡ್ಡಬಟ್ಟರೆಂದೇ ಕರೆಯುತ್ತಾರೆ. ಕಾಲದ ಬಗ್ಗೆ ಬಹಳ ಕಟ್ಟುನಿಟ್ಟಿನ ವ್ಯಕ್ತಿ. ವಿದ್ಯಾರ‍್ತಿನಿಲಯದಲ್ಲಿ ಪ್ರತಿ ದಿನ ತಿಂಡಿ ಮತ್ತು ಊಟವನ್ನು ಎರಡೆರಡು ಬ್ಯಾಚ್‍ಗಳಲ್ಲಿ ನೀಡಲಾಗುತ್ತದೆ. ಪ್ರತಿಯೊಂದು ಬ್ಯಾಚಿಗೂ ಎರಡು ಸಾರಿ ಗಂಟೆ ಹೊಡೆಯಲಾಗುತ್ತದೆ. ಎರಡನೆಯ ಗಂಟೆ ಬಾರಿಸಿದ ನಂತರ, ಊಟದ ಕೊಟಡಿಯ ಒಳಬಾಗಿಲನ್ನು ಮುಚ್ಚಲಾಗುತ್ತದೆ. ಯಾವುದೇ ಕಾರಣದಿಂದಲೂ ವೇಳೆ ಮೀರಿ ಬರುವ ವಿದ್ಯಾರ‍್ತಿಗಳಿಗೆ ಊಟ ತಿಂಡಿಯನ್ನು ನೀಡುವುದಿಲ್ಲ.
ಅಂದು ಮದ್ಯಾಹ್ನ…ವೇಳೆಗೆ ಸರಿಯಾಗಿ ಊಟಕ್ಕೆ ಹೋದಾಗ, ದೊಡ್ಡಬಟ್ಟರು ನಮ್ಮನ್ನು ಬಹಳ ಪ್ರೀತಿಯಿಂದ ಕಂಡರು. ಬೆಳಗಿನ ಕಹಿ ಪ್ರಸಂಗದಿಂದ ನಾವು ಮೂವರು ಮುಕ ಗಂಟು ಹಾಕಿಕೊಂಡು ಊಟ ಮಾಡುತ್ತಿದ್ದರೆ, ದೊಡ್ಡಬಟ್ಟರು ಮಾತ್ರ ನಗುಮೊಗದಿಂದಲೇ ಉಣಬಡಿಸಿದರು.
ಇಡೀ ಒಂದು ವರುಶದ ಸಮಯದಲ್ಲಿ ಒಂದು ದಿನವಾದರೂ ದೊಡ್ಡಬಟ್ಟರು ತಮ್ಮ ಕರ‍್ತವ್ಯಕ್ಕೆ ಹಾನಿ ತಟ್ಟುವಂತೆ ನಡೆದುಕೊಂಡಿದ್ದನ್ನು ನಾನು ನೋಡಿಲ್ಲ. ಕಾಲೇಜು ಹಾಸ್ಟೆಲ್‍ನಲ್ಲಿದ್ದ ಸುಮಾರು ಇನ್ನೂರು ವಿದ್ಯಾರ‍್ತಿಗಳನ್ನು ತಮ್ಮ ಶಿಸ್ತಿನ ಮತ್ತು ಪ್ರೀತಿಪೂರ‍್ವಕವಾದ ನಡೆನುಡಿಗಳಿಂದ ನಿಯಂತ್ರಿಸುತ್ತಿದ್ದ ಅವರ ವ್ಯಕ್ತಿತ್ವಕ್ಕೆ ನಾನು ಮಾರುಹೋದೆ.
“ಕಾಲದ ಬೆಲೆಯನ್ನು ತಿಳಿದವನು , ಬಾಳಿನ ಮಹತ್ವವನ್ನು ಅರಿಯಬಲ್ಲ” ಎಂಬ ಹಿರಿಯರ ಆದರ‍್ಶದ ನುಡಿಯನ್ನು, ತಮ್ಮ ಬದುಕಿನಲ್ಲಿ ಆಚರಿಸಿ ತೋರಿಸುತ್ತಿದ್ದ ದೊಡ್ಡಬಟ್ಟರು…ನನ್ನ ಪಾಲಿಗೆ ಎಂದೆಂದಿಗೂ ಮರೆಯಲಾಗದ ಗುರುವಾದರು.
( ಚಿತ್ರ ಸೆಲೆ: barbarian-j.deviantart.com )
ಇತ್ತೀಚಿನ ಅನಿಸಿಕೆಗಳು