ಮಕ್ಕಳ ಕಾರ‍್ಯಕ್ರಮ

– ಸುಮುಕ  ಬಾರದ್ವಾಜ್

lil-champs

( ಬರಹಗಾರರ ಮಾತು : ರಿಯಾಲಿಟಿ ಶೋ ಹೆಸರಲ್ಲಿ ಪುಟಾಣಿಗಳನ್ನು ಹಾಕಿಕೊಂಡು ನಡೆಸುವ ಕಾರ‍್ಯಕ್ರಮಗಳ ಕುರಿತು ಈ ಕವಿತೆ )

ಸಮಯ ಸಂಜೆ ಐದು
ಕೈಯಲ್ಲಿ ಬ್ಯಾಟನ್ನು ಹಿಡಿದು
ಆಡಲು ಓಡುವ ಸಮಯ

ಆದರೆ ಇಲ್ಲಿ ಯಾಕೆ ನಿಂತಿದ್ದಾನೆ
ಕೈಯಲ್ಲಿ ಮೈಕು ಹಿಡಿದು
ಈ ಪುಟ್ಟ ಪೋರ?

ಕೊಂಚ ಸಮಯವೂ
ಒಂದೆಡೆ ನಿಲ್ಲದ ಕಣ್ಣುಗಳು
ಈಗ ಏಕೆ ಸ್ತಬ್ದವಾಗಿವೆ
ತೀರ‍್ಪುಗಾರರ ದಿಕ್ಕಿನಲ್ಲೇ ನೋಡುತ್ತಾ ?

ಮುಳುಗುವ ಸೂರ‍್ಯನ ನೋಡಿ
ಆಟದ ಸಮಯ ಮುಗಿಯಿತು ಎಂದು
ಚಿಂತೆ ಪಡಬೇಕಿರುವ ಪೋರನಿಗೆ
ಎಶ್ಟು ಅಂಕ ಸಿಗುವುದೋ ಎಂಬ ಚಿಂತೆ

ಹೊಗಳಿ ಹೊಗಳಿ
ಅಟ್ಟಕ್ಕೆ ಏರಿಸಿದರು ತೀರ‍್ಪುಗಾರರು
ತನ್ನ ಬಾರಕ್ಕೆ ತಾನೇ ಬೀಳದಿರಲಿ
ಒಂದು ದಿನ ಅಟ್ಟ ಕುಸಿದು

ಸ್ಕೂಲ್ ಬ್ಯಾಗಿನ
ಬಾರದ ಜೊತೆ
ಹೊಗಳಿಕೆಯ ಬಾರವೂ
ಬೇಕೇ ಇವನಿಗೆ?

ಕ್ಯಾಮರಾ ನೋಡಿ ನಗುವ
ಕ್ಯಾಮರಾ ನೋಡಿ ಅಳುವ
ಇವನ ಮುಗ್ದತೆ ಈ ಕ್ಯಾಮರಾಕ್ಕೆ
ಗುಳುಂ ಸ್ವಾಹ

(ಚಿತ್ರ ಸೆಲೆ: in.reuters.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: