ಕಾಲ ಸರಿದಂತೆ ಮರೆಯಾದ ‘ಕಲಾಯಿ’ ಕಸಬು

– ಕೌಸಲ್ಯ.
history-of-copper-cookware

ಆಗ ಮನೆತುಂಬಾ ತಾಮ್ರದ ಪಾತ್ರೆಗಳೇ! ಬಚ್ಚಲು ಮನೆಯಲ್ಲಿ ನೀರು ಕಾಯಿಸುವ ಹಂಡೆಯಿಂದ ಹಿಡಿದು ಅಡುಗೆಮನೆಯಲ್ಲಿ ನೀರು ಶೇಕರಣೆಗೆಂದೇ ದೊಡ್ಡ ದೊಡ್ಡ ಹಂಡೆಗಳು ಇರ‍್ತಿದ್ವು. ಇಂದೀಗೂ ಕೆಲವು ಮನೆಗಳಲ್ಲಿ ತಲತಲಾಂತರದಿಂದ ಬಳುವಳಿಯಾಗಿ ಬಂದ ಪಾತ್ರೆಗಳು ಪ್ರದರ‍್ಶನದ ಕಪಾಟನ್ನು ಸೇರಿಕೊಂಡಿವೆಯೇ ಹೊರತು ಬಳಕೆ ತೀರಾ ವಿರಳ. ಈಗ ತಾಮ್ರದ ಪಾತ್ರೆಗಳು ಸದಾ ಹೊಳಪಿರಲು ತಾಮ್ರದ ಪಾತ್ರೆಗೆಂದೇ ಮಳಿಗೆಗಳಲ್ಲಿ ಪುಡಿ ಸಿಗುತ್ತೆ. ಆದರೆ ಕೆಲವು ವರ‍್ಶಗಳ ಹಿಂದೆ ತಾಮ್ರದ ದೊಡ್ಡ ಪಾತ್ರೆಗಳಿಗೆ ‘ಕಲಾಯಿ’ ಹಾಕ್ಸೋ ಸಂಪ್ರದಾಯವಿತ್ತು. ‘ಕಲಾಯಿ’ ಹಾಕೋರು ಮನೆ ಮನೆಗೂ ಬರ‍್ತಿದ್ರು. ಬಂದೋರು ಊರೂರು ಅಲೆಯುತ್ತಾ ತಮ್ಮ ಕಿಸೆಯನ್ನು ತುಂಬಿಸಿಕೊಂಡು ಹೋಗ್ತಿದ್ರು.

‘ಕಲಾಯಿ’ ಹಾಕೋರು ಒಂದೂರಿಗೆ ಬಂದರೆಂದರೆ, ಎಲ್ಲಾ ಮನೆಯ ಪಾತ್ರೆಗಳನ್ನು ಒಂದೆಡೆ ಬಯಲಾದ ಪ್ರದೇಶದಲ್ಲಿಟ್ಟು ಕಲಾಯಿ ಹಾಕೋರು. ಅವರು ಒಮ್ಮೆ ಬಂದರೆಂದರೆ, ವಾರಾನುಗಟ್ಟಲೆ ಕೆಲವೊಮ್ಮೆ ಹದಿನೈದು ಇಪ್ಪತ್ತು ದಿನಗಳೂ ಊರ‍್ನಲ್ಲಿ ಇರ‍್ತಿದ್ರು. ‘ಕಲಾಯಿ’ ಹಾಕೋರು ನಮ್ಮೂರಿಗೆ ಬಂದ್ರೆ ನಮಗೆಲ್ಲಾ ಏನೋ ಹಿಗ್ಗು. ಅದೆಂತದ್ದೋ ಅವ್ಯಕ್ತ ಕುಶಿ… ಹವಾಯಿ ಚಪ್ಲಿ ಹಾಕೊಂಡು, ಮಣ್ಣು ಜಿಡ್ಡುಗಟ್ಟಿದ ಪಂಚೆ ಉಟ್ಟು ಬರ‍್ತಿದ್ದ ಇವರು ನಮಗೆ ಬೇರೆ ಯಾವುದೋ ವಿದ್ಯಾಪಾರಂಗತರಂತೆ ಕಾಣುತ್ತಿದ್ದರು. ಮನೆಮನೆಗೆ ಬಂದು ‘ತಾಮ್ರದ ಪಾತ್ರೆ ಐತಾ ತಾಯಿ, ಕಲಾಯಿ ಹಾಕ್ಬೋದ ತಾಯಿ ನಿಮ್ ಪಾತ್ರೆಗೆ’ ಅಂತ ಅತೀ ನಯವಿನಯದಿಂದ ಕೇಳಿದಾಗ, ನಮ್ಮಮ್ಮನೋ ಕರಗಿ ಅಟ್ಟದ ಮೇಲಿಟ್ಟ ಪಾತ್ರೆಗಳ ಉಗ್ರಾಣದಿಂದ ತಾಮ್ರದ ಪಾತ್ರೆಯನ್ನು ತಂದು ಗುಡ್ಡೆ ಹಾಕ್ತಿದ್ರು. ನಾವೆಲ್ಲಾ ಅವರ ಸುತ್ತಾ ನೆರೆದು ಕಣ್ ಪಿಳಿಪಿಳಿ ಬಿಟ್ಟು ನೋಡ್ತಿದ್ವಿ. ಪಾತ್ರೆಗಳು ಜಾಸ್ತಿ ಇದ್ರೆ ನಮಗೇನೋ ಸಂತೋಶ. ನಮ್ಮ ಮನೆಗಳಲ್ಲಿ ಕಲಾಯಿ ಹಾಕೋರಿಗೆ ಜಾಸ್ತಿ ಕೆಲ್ಸ ಇದ್ಯಲ್ಲಾ ಅಂತ!

ನಾವೇನು ಅಶ್ಟಕ್ಕೆ ಸುಮ್ಮನಾಗ್ತಿದ್ವಾ, ನಮ್ಮ ಮನೆಯ ಪಾತ್ರೆಗಳನ್ನು ಹೊತ್ತು ಸಾಗೋ ಕಲಾಯಿ ವಿಜ್ನಾನಿಗಳ ಹಿಂದೆ ಹೋಗ್ತಿದ್ವು. ಅದು ಬೇಸಿಗೆಯಾದ್ದರಿಂದ ಶಾಲೆಗೆ ರಜೆ ಬೇರೆ, ನಾವು ಅನ್ನ ನೀರು ತೊರೆದು ಅವರ ಸುತ್ತಾ ಒಳ್ಳೆ ಚಾತಕ ಪಕ್ಶಿಗಳಂತೆ ಕಾಯ್ತಾ ಕೂರ‍್ತಿದ್ವಿ. ಆ ಊರಿನಲ್ಲಿದ್ದ ಹತ್ತಿಪ್ಪತ್ತು ಮಕ್ಕಳಿಗೆ ನಮ್ಮನೆ ರಸ್ತೆಯೇ ದೊಡ್ಡ ಜಂಕ್ಶನ್. ಕಲಾಯಿ ವಿಜ್ನಾನಿಗಳು ಬೆಂಕಿ ಹಾಕಿ ಕೆಂಡ ಕೂಡಿಸುವಾಗ ನಮಗೆಲ್ಲಾ ಕಾತುರ. ಅವರಿಗೂ ನಾವು ಅವರ ಹಿಂದೆ ಬೀಳೋದು ತುಂಬಾನೆ ಹಿಡ್ಸಿತ್ತು ಅನ್ಸುತ್ತೆ! ಕೆಂಡದ ಮೇಲೆ ಪಾತ್ರೆಗೆ ಶಾಕಕೊಡ್ತಾ ಪಾತ್ರೆಯ ಒಳಗಿಂದ ಏನನ್ನೋ ಉಜ್ಜುತ್ತಿರುವಾಗ, ಜಿಗುಟು ವಾಸನೆಯ ಹೊಗೆಯು ಮೇಲೇಳ್ತಿತ್ತು. ಕಾರ‍್ಕಾನೆಗಳಿಂದ ಹೊರಬರೋ ಹೊಗೆ ಹೀಗೇನೋ ಅಂತಾ ಸಣ್ಣ ಕಾರ‍್ಕಾನೆಯ ಕಲ್ಪನೆ ನಮಗಾಗ್ತಿತ್ತು. ನೋಡುನೋಡುತ್ತಲೇ ಆ ಮಾಂತ್ರಿಕರ ಕೈಗಳಿಂದ ನಮ್ಮನೆ ಪಾತ್ರೆಗಳು ಪಳಪಳ ಹೊಳಿಯೋಕೆ ಶುರುವಾದಾಗ ನಮ್ಮೆಲ್ಲರ ಕಣ್ಣುಗಳು ಅರಳುತ್ತಿದ್ದವು. ಅಬ್ಬಾ! ಅಂತ ಕೆಕ್ಕರಿಸಿ ಕಣ್ಣು ಮುಚ್ಚದೇ ತದೇಕಚಿತ್ತದಿಂದ ಪಾತ್ರೆಯ ರಂಗನ್ನೇ ನೋಡ್ತಾ ಕೂತಿರುತ್ತಿದ್ವಿ. ನಮ್ಮ ನಮ್ಮ ಮನೆಯ ಪಾತ್ರೆಗಳು ರಂಗೇರಿದಾಗ ನಮ್ಮ ಮುಕಾರವಿಂದವೂ ಅರಳುತಿತ್ತು. ನಮ್ಮ ಅಪ್ಪ-ಅಮ್ಮ ಮತ್ತು ಊರಿನಲ್ಲಿ ಯಾರಿಗೂ ತಿಳಿಯದ ವಿದ್ಯೆ ಇವರಿಗೆ ತಿಳಿದಿದೆ ಅಂತ ಆಶ್ಚರ‍್ಯ. ಅದಕ್ಕೆ ಏನೋ ಅವರು ಮಹಾವಿಜ್ನಾನಿಗಳಂತೆ ನಮಗೆ ಗೋಚರಿಸಿದ್ದು.

where-to-find-copper-cookware-in-france

ಬೆಳಗಿನಿಂದ ಸಂಜೆಯ ತನಕ ನಡೀತಿದ್ದ ರಸಾಯನ ಶಾಸ್ತ್ರದ ಪ್ರಯೋಗಕ್ಕೆ ನಮ್ಮದೂ ಅಳಿಲು ಸೇವೆ ಇರ‍್ತೀದ್ವು. ‘ಮರಿ ಆ ಪಾತ್ರೆ ಕೊಡೋ, ಈ ಪಾತ್ರೆ ಅಲ್ಲಿಡೊ’ ಅಂದ್ರೆ ತಾ ಮುಂದು ನೀ ಮುಂದು ಅಂತಾ ಓಡ್ತಿದ್ವಿ. ಕೆಲವೊಮ್ಮೆ ಜಗಳಗಳಾಗಿದ್ದೂ ಇದೆ. ವಾರ ಕಳೆದು ತಿಂಗಳುಗಳೂ ಕಳೆದಾಗ ಮತ್ತೆ ಬೇರೆ ಊರಿನತ್ತ ಅವರ ಪ್ರಯಾಣ ಶುರುವಾಗ್ತಿತ್ತು. ನಮಗೋ ತಂದೆತಾಯಿಯ ಹೊಡೆತ ತಪ್ಪಿಸಿಕೊಳ್ಳಲು, ಅನ್ನ ನೀರಿನ ಸಹವಾಸದಿಂದ ದೂರವಿರಲು ಕಲಾಯಿ ಕಾರ‍್ಕಾನೆಯೇ ಒಳ್ಳೆಯ ತಾಣವಾಗಿಬಿಟ್ಟಿತ್ತು. ನಮ್ಮ ಪೋಶಕರಿಗೂ ನಮ್ಮ ಉಪಟಳದಿಂದ ಮುಕ್ತಿ ಸಿಗುತಿತ್ತು. ಅವರು ಹೋಗುತ್ತಾರೆಂದರೆ ನಮಗೆಲ್ಲಾ ಏನೋ ಕಳೆದುಕೊಂಡಂತೆ. ಆ ಮಹಾನುಬಾವರು ನಮ್ಮನ್ನು ಅಗಲೋಕೆ ಮುಂಚೆ ಆಗ ಅಗ್ಗವಾಗಿ ಸಿಗ್ತಿದ್ದ ಹುಳಿ ಮಿಟಾಯಿಯನ್ನು ನಮಗೆಲ್ಲ ಹಂಚಿ ಹೋಗ್ತಿದ್ರು. ಮತ್ತೆ ಬೇಸಿಗೆಯ ರಜೆಯನ್ನೇ ಎದುರು ನೋಡ್ತಿದ್ವಿ. ಅವರ ನೆನಪಾದಗೆಲ್ಲಾ ಮನೆಯ ತಾಮ್ರದ ಹಂಡೆಗಳತ್ತ ನಮ್ಮ ಕಣ್ಗಳು ಸೆಳೆಯುತಿದ್ವು.

ಕಾಲಗರ‍್ಬದಲ್ಲೇ ಹುದುಗಿ ಹೋದ ಕಲಾಯಿ ವಿಜ್ನಾನಿಗಳು ಮತ್ತೆಲ್ಲೂ ಇತ್ತೀಚೆಗೆ ಕಾಣ್ತಿಲ್ಲ. ‘ಕಲಾಯಿ’ ಶಬ್ದ ನಿಗಂಟಿನಿಂದಲೂ ಮಾಯವಾಗಬಹುದಲ್ಲವೇ?!

(ಚಿತ್ರಸೆಲೆ: whatmyhomewants.com, foodal.com)

ಇವುಗಳನ್ನೂ ನೋಡಿ

ಅನಿಸಿಕೆ ಬರೆಯಿರಿ: