ಆಹಾರ ತಯಾರಿಕೆಯಲ್ಲಿ ಪಾತ್ರೆಗಳ ಬಳಕೆ

– ಶ್ಯಾಮಲಶ್ರೀ.ಕೆ.ಎಸ್.

ಹಸಿವು ಎನ್ನುವುದು ಪ್ರತಿಯೊಂದು ಜೀವರಾಶಿಗೂ ಸಾಮಾನ್ಯ. ಹಸಿವು ನೀಗಲು ಆಹಾರದ ಅಗತ್ಯತೆ ಎಶ್ಟಿದೆ ಎಂಬುದು ನಮಗೆಲ್ಲ ತಿಳಿದಿರುವ ವಿಶಯ. ಮಾನವನು ತನ್ನ ಆರೋಗ್ಯದ ನಿಮಿತ್ತ ಉತ್ತಮವಾದ ಪೌಶ್ಟಿಕ ಆಹಾರ ಸೇವನೆಗೆ ಹಿಂದಿನಿಂದಲೂ ಮಹತ್ವವನ್ನು ನೀಡುತ್ತಾ ಬಂದಿದ್ದಾನೆ. ಇಂತಹ ಆಹಾರ ತಯಾರಿಕೆಗೆ ಸೊಪ್ಪು, ತರಕಾರಿ, ಬೇಳೆಕಾಳುಗಳ ಪ್ರಾಮುಕ್ಯತೆ ಎಶ್ಟಿದೆಯೋ ಆ ಆಹಾರ ತಯಾರಿಸಲು ಬಳಸುವ ಒಳ್ಳೆ ಗುಣಮಟ್ಟದ ಪಾತ್ರೆಗಳು ಸಹ ಅಶ್ಟೇ ಮುಕ್ಯ.

ಮೊದಲಿಗೆ ಮಣ್ಣಿನ ಪಾತ್ರೆಗಳು, ನಂತರ ಮುಂದಿನ ದಿನಗಳಲ್ಲಿ ತಾಮ್ರ, ಹಿತ್ತಾಳೆ, ಕಂಚು ಈ ಬಗೆಯ ಲೋಹದ ಪಾತ್ರೆಗಳ ಬಳಕೆಯು ಆಹಾರ ತಯಾರಿಕೆಗಂತಲೇ ತಲೆಯೆತ್ತಿದವು. ಈ ಮಣ್ಣಿನ ಪಾತ್ರೆಗಳ ಜೊತೆ ಹೊಂದುವಂತಹ ಮರದ ಸೌಟುಗಳು ಆಗ ಬಳಕೆಯಲ್ಲಿದ್ದವು. ಕಾಲಕ್ರಮೇಣ ತಾಮ್ರ, ಹಿತ್ತಾಳೆ, ಕಬ್ಬಿಣ, ಅಲ್ಯೂಮಿನಿಯಂ, ಸ್ಟೇನ್ಲೆಸ್ ಸ್ಟೀಲ್ (ತುಕ್ಕು ನಿರೋದಕ ಉಕ್ಕು), ಹಾಗೆಯೇ ನಾನ್ ಸ್ಟಿಕ್ (ಅಂಟಿಕೊಳ್ಳದ) ಪಾತ್ರೆಗಳ ಬಳಕೆಗೆ ಮೊರೆ ಹೋಗಲಾಯಿತು.

ಬಹಳ ಮಂದಿ ಅಜ್ಜ ಅಜ್ಜಿ ಊರಲ್ಲಿ ಹಿಂದೆ ಮಣ್ಣಿನ ಮಡಿಕೆ ಅತವಾ ಮಣ್ಣಿನ ಪಾತ್ರೆಗಳಲ್ಲಿ ಅಡಿಗೆ ತಯಾರಿಸುತ್ತಿದ್ದ ದ್ರುಶ್ಯಗಳನ್ನು ಕಂಡಿರಬಹುದು. ಮಣ್ಣಿನ ಓಡೆ, ಗುಡಾಣ ಇವೆಲ್ಲಾ ದವಸ ದಾನ್ಯಗಳನ್ನು ಶೇಕರಿಸಿಡಲು ನೆರವಾಗಿದ್ದವು. ತಂಪಾದ ನೀರಿಗಾಗಿ ಈಗಲೂ ಹಳ್ಳಿಗಳಲ್ಲಿ ನೀರನ್ನು ಮಡಿಕೆಗಳಲ್ಲಿ ಶೇಕರಿಸಿ ಇಡುತ್ತಾರೆ. ನಮ್ಮ ಹಿರಿಯರು ಉಪಯೋಗಿಸುತ್ತಿದ್ದ ಈ ಮಣ್ಣಿನ ಪಾತ್ರೆಗಳು ನೈಸರ‍್ಗಿಕ ದತ್ತವಾದ ಬೂಮಿಯ ಮಣ್ಣಿನಿಂದ ಮಾಡಲ್ಪಡುತ್ತಿದ್ದವು. ಆದ್ದರಿಂದ ಈ ಪಾತ್ರೆಗಳಲ್ಲಿ ತಯಾರಿಸಿದ ಆಹಾರಗಳು ತುಂಬಾ ರುಚಿಕರ ಮತ್ತು ಸಹಜವಾಗಿಯೇ ಎಲ್ಲಾ ಪೋಶಕಾಂಶಗಳು ಬೆರೆತು ಸ್ವಾದಬರಿತವಾಗಿರುತ್ತಿದ್ದವು. ಇದರಿಂದ ಅದೆಶ್ಟೋ ಕಾಯಿಲೆಗಳು ದೂರ ಸರಿಯುತ್ತಿದ್ದವು. ಈ ಕಾರಣಕ್ಕಾಗಿಯೇ ನಮ್ಮ ಪೂರ‍್ವಿಕರು ಬಹಳ ಆರೋಗ್ಯದಿಂದ ದೀರ‍್ಗಕಾಲ ಬಾಳಿ ಬದುಕುತ್ತಿದ್ದರು. ಈ ಮಣ್ಣಿನ ಪಾತ್ರೆಗಳನ್ನು ಬಹಳ ನಾಜೂಕಾಗಿ ಬಳಸಬೇಕಿತ್ತು. ಒಮ್ಮೆ ಬಿದ್ದರೆ ಈ ಪಾತ್ರೆಗಳು ಬಹು ಬೇಗ ಹೊಡೆದು ಹೋಗುವ ಸಾದ್ಯತೆಗಳಿದ್ದವು. ಆ ಕಾರಣದಿಂದಲೋ ಏನೋ ತಾಮ್ರ, ಹಿತ್ತಾಳೆ ಪಾತ್ರೆಗಳು ಬಳಕೆಗೆ ಬಂದವು. ಇವು ಹೆಚ್ಚು ಶಾಕವಾಹಕಗಳು ಹಾಗೂ ತುಂಬಾ ಬಾಳಿಕೆ ಬರುತ್ತಿದ್ದವು. ಈ ಪಾತ್ರೆಗಳಲ್ಲಿ ತಯಾರಿಸಿ ಸೇವಿಸುತ್ತಿದ್ದ ಆಹಾರಗಳಿಂದಲೂ ಯಾವುದೇ ಅಡ್ಡಪರಿಣಾಮಗಳು ಇರುತ್ತಿರಲಿಲ್ಲ. ಬದಲಾಗಿ ಆರೋಗ್ಯ ವರ‍್ದಕವೇ ಆಗಿದ್ದವು. ನಮ್ಮ ಹಿರಿಯರು ತಾಮ್ರ, ಹಿತ್ತಾಳೆ ಪಾತ್ರೆಗಳ ಹೊಳಪಿಗೆ ಹುಣಸೆಹಣ್ಣನ್ನು ಬಳಸುತ್ತಿದ್ದುದ್ದನ್ನು ನೋಡಿರಬಹುದು.

ಕೆಲವು ಸಂಪ್ರದಾಯಸ್ತ ಮನೆತನಗಳಲ್ಲಿ ಈಗಲೂ ಕಲಾಯಿ ಹಾಕಿದ ತಾಮ್ರ ಹಿತ್ತಾಳೆ ಪಾತ್ರೆಗಳ ಬಳಕೆ ಇರುವುದು ಕುಶಿ ವಿಚಾರ. ಪಾತ್ರೆಗಳಿಗೆ ತುಕ್ಕು ಹಿಡಿಯಬಾರದೆಂದು ಕಲಾಯಿ ಹಾಕುತ್ತಿದ್ದರು. ಈ ಬಗೆಯ ತಾಮ್ರ, ಹಿತ್ತಾಳೆಯ ಪಾತ್ರೆಗಳು, ತಟ್ಟೆಗಳ ಬಳಕೆಯನ್ನು ಕೆಲವೊಂದು ಹೋಟೆಲ್ಗಳಲ್ಲಿ ಕಾಣಬಹುದು. ಇವು ತುಂಬಾ ಬಾರ ಮತ್ತು ಇವುಗಳ ನಿರ‍್ವಹಣೆ ಕಟಿಣವಾಗಿತ್ತು. ಬ್ರಿಟೀಶರ ಕಾಲದಲ್ಲಿ ನಮ್ಮ ಸ್ವಾತಂತ್ರ್ಯ ಹೋರಾಟಗಾರರನ್ನು ಬಂದಿಸಿ ಜೈಲುಗಳಲ್ಲಿ ಇರಿಸಿ ಅವರಿಗೆ ಅಲ್ಯೂಮಿನಿಯಂ ತಟ್ಟೆಗಳಲ್ಲಿ ಊಟ ಮತ್ತು ಅಲ್ಯೂಮಿನಿಯಂ ಲೋಟಗಳಲ್ಲಿ ನೀರನ್ನು ನೀಡುತ್ತಿದ್ದರಂತೆ. ಹೀಗೆ ಪರಿಚಯವಾದ ಅಲ್ಯೂಮಿನಿಯಂ ನ ನಿರ‍್ವಹಣೆ ಸುಲಬ ಮತ್ತು ಬೆಲೆಯೂ ಅಗ್ಗ ಎನ್ನುವ ಕಾರಣಗಳಿಂದ ಎಲ್ಲರ ಮನೆಗಳಲ್ಲೂ ಅಲ್ಯೂಮಿನಿಯಂ ಪಾತ್ರೆಗಳು ಯತೇಚ್ಚವಾಗಿ ಬಳಸಲ್ಪಟ್ಟವು.

ವಿಜ್ನಾನಿಗಳ ಶ್ರಮದ ಪಲವಾಗಿ ಆಹಾರ ತಯಾರಿಕೆಗೆ ಉಪಯೋಗಿಸುವ ಅಲ್ಯೂಮಿನಿಯಂ ಆರೋಗ್ಯಕ್ಕೆ ಮಾರಕವೆಂದು ದ್ರುಡಪಟ್ಟಿದೆ. ನಮ್ಮ ನರವ್ಯೂಹಗಳಿಗೆ ಹಾನಿ ಮಾಡುವ ಇದೊಂದು ನ್ಯೂರೋಟಾಕ್ಸಿಕ್ ಲೋಹ. ಅಲ್ಯೂಮಿನಿಯಂ ಪಾತ್ರೆಗಳಲ್ಲಿ ಆಹಾರ ಬೇಯಿಸುವಾಗ ವಿಶಕಾರಿ ಲೋಹದ ಅಂಶ ಬಿಡುಗಡೆಯಾಗುತ್ತದೆ. ಆದಶ್ಟೂ ಇದನ್ನು ಬಳಸದಿರುವುದೆ ಒಳ್ಳೆಯದು ಎಂಬ ಅಬಿಪ್ರಾಯ ಹಲವು ವರ‍್ಶಗಳಿಂದ ಕೇಳಿಬರುತ್ತಿವೆ. ಇದರ ನಿರ‍್ವಹಣೆ ಸುಲಬವಾದ್ದರಿಂದ ದೇವಸ್ತಾನ, ಕೇಟರಿಂಗ್, ಕೆಲವು ಹೋಟೆಲ್ಗಳಲ್ಲೂ ಅಲ್ಯೂಮಿನಿಯಂ ನ ದೊಡ್ಡ ದೊಡ್ಡ ಗಾತ್ರದ ಪಾತ್ರೆಗಳು ಬಳಕೆಯಲ್ಲಿವೆ. ಮನೆಗಳಲ್ಲೂ ಅಲ್ಲೊಂದು ಇಲ್ಲೊಂದು ಕುಕ್ಕ‍ರ್ ಈ ಬಗೆಯ ಇಂಡಾಲ್ಯೂಮಿನಿಯಂ ಪಾತ್ರೆಗಳ ಬಳಕೆ ಇದ್ದಿರಬಹುದು. ಕೆಲವು ದೇಶಗಳಲ್ಲಿ ಅಲ್ಯೂಮಿನಿಯಂನ ಬಳಕೆ ರದ್ದುಗೊಳಿಸಲಾಗಿದೆ ಎಂಬ ಮಾಹಿತಿ ಇದೆ. ಇದರ ವಿಶಕಾರಿ ಅಡ್ಡಪರಿಣಾಮಗಳನ್ನು ತಡೆಯಲು ತಜ್ನರು ಪರ‍್ಯಾಯವಾಗಿ ಕಂಡುಹಿಡಿದ ಪಾತ್ರೆಗಳೇ ಸ್ಟೇನ್ಲೆಸ್ ಸ್ಟೀಲ್ ಪಾತ್ರೆಗಳು. ಇವು ತುಕ್ಕು ನಿರೋದಕ ಪಾತ್ರೆಗಳು. ಇವುಗಳ ನಿರ‍್ವಹಣೆ ಸುಲಬ. ಇವುಗಳಲ್ಲಿ ತಯಾರಿಸಿದ ಆಹಾರಗಳು ಆರೋಗ್ಯಕ್ಕೂ ಹಿತವೆನಿಸಿ ಜನಪ್ರಿಯವಾಗಿವೆ.

ಸಾಮಾನ್ಯವಾಗಿ ಎಲ್ಲಾ ಬಾರತೀಯರ ಮನೆಗಳಲ್ಲಿ ಸ್ಟೇನ್ಲೆಸ್ ಸ್ಟೀಲ್ ತಟ್ಟೆಗಳಲ್ಲಿ ತಿನ್ನುವ ಪದ್ದತಿ ಹಲವು ವರ‍್ಶಗಳಿಂದ ಇದೆ. ಈ ಪ್ಲೇಟ್ಗಳು ಕ್ರೋಮಿಯಂ, ನಿಕ್ಕಲ್ ನಿಂದ ಆವ್ರುತವಾಗಿವೆ. ಇವು ಉತ್ತಮ ಆರೋಗ್ಯವರ‍್ದಕಗಳು. ಕಳಪೆ ದರ‍್ಜೆಯ ಸ್ಟೀಲ್ಗಳು ಎಂದೆಂದೂ ಹಾನಿಕಾರಕಗಳು. ಸ್ಟೀಲ್ ಪಾತ್ರೆಗಳು ಅತ್ಯಂತ ಶಾಕವಾಹಕಗಳಾದ್ದರಿಂದ ಬಹಳಶ್ಟು ಸ್ಟೀಲ್ ಪಾತ್ರೆಗಳು ಆಹಾರ ತಯಾರಿಸುವಾಗ ಬಹು ಬೇಗ ತಳ ಹಿಡಿಯುತ್ತವೆ. ಆ ಸಮಯದಲ್ಲಿ ಮುಂಜಾಗ್ರತೆ ವಹಿಸುವುದು ಸೂಕ್ತ. ಇತ್ತೀಚೆಗೆ ತಳ ಅಂಟದ ನಾನ್ ಸ್ಟಿಕ್ ಪಾತ್ರೆಗಳು ಸುಮಾರು ವರ‍್ಶಗಳಿಂದ ಯತೇಚ್ಚವಾಗಿ ಬಳಕೆಯಲ್ಲಿವೆ. ಇವು ಟೆಪ್ಲಾನ್ ಪಾತ್ರೆಗಳು. ಟೆಪ್ಲಾನ್ ಪಾತ್ರೆಗಳಿಗೆ ಪಾಲಿಟೆಟ್ರಾಪ್ಲೋರೋಎತಲೀನ್ (PTFE) ಎನ್ನುವ ಅಂಶವನ್ನು ಲೇಪನ ಮಾಡಲಾಗುತ್ತದೆ. ಈಗಿನ ನವಯುಗದಲ್ಲಿ ಸ್ಟೇನ್ಲೆಸ್ ಸ್ಟೀಲ್ ಪಾತ್ರೆಗಳ ಜೊತೆಗೆ ಪುರುಸೊತ್ತಿಲ್ಲದ ಈ ಜೀವನಶೈಲಿಗೆ ತಕ್ಕಂತೆ ಅಡಿಗೆ ಕೆಲಸ ಸ್ವಲ್ಪ ಬೇಗ ಮುಗಿಸಲೆಂದೇ ಸಾಮಾನ್ಯವಾಗಿ ದೋಸೆ ತವಾ, ಪಲ್ಯಗಳನ್ನು ತಯಾರಿಸಲು ನಾನ್ ಸ್ಟಿಕ್ ಪ್ಯಾನ್, ನಾನ್ ಸ್ಟಿಕ್ ಕುಕ್ಕ‍ರ್ ಈ ತರಹದ ಪಾತ್ರೆಗಳೇ ಹೆಚ್ಚೆಚ್ಚು ಬಳಕೆಯಲ್ಲಿವೆ. ಉಳಿದಂತೆ ಪಿಂಗಾಣಿ, ಪ್ಲಾಸ್ಟಿಕ್, ಗಾಜಿನ ಪಾತ್ರೆಗಳು ನೋಡಲು ಅಲಂಕಾರಿಕವಾಗಿ ಇರುವುದರಿಂದ ವಿಶೇಶವಾದ ದಿನಗಳಲ್ಲಿ ಊಟ ತಿಂಡಿ ಸವಿಯಲು ಜೊತೆಯಾಗುತ್ತವೆ. ಟೆಪ್ಲಾನ್ ಪಾತ್ರೆಗಳಲ್ಲಿ 300ಡಿಗ್ರಿ ಸೆಲ್ಸಿಯಸ್ ಗಿಂತಲೂ ಹೆಚ್ಚು ಉಶ್ಣತೆ ಮೀರಿದರೆ ಕ್ಯಾನ್ಸ‍ರ್ ನಂತಹ ಮಾರಣಾಂತಿಕ ಕಾಯಿಲೆಗಳು ತಗುಲಬಹುದು. ಆದಶ್ಟು ಇದರ ಮೇಲ್ಮೈ ಪದರ ಹಾಳಾಗದಂತೆ ನೋಡಿಕೊಳ್ಳಬೇಕು. ಅಕಸ್ಮಾತ್ ಅವು ಬೇಗನೆ ಹಾಳಾದರೆ ಬಳಸದಿರುವುದೇ ಒಳಿತು. ಹಾಗಾಗಿ ಈ ಎಲ್ಲ ಅಂಶಗಳಿಂದ ನಮ್ಮ ಆರೋಗ್ಯಕ್ಕೆ ಆಹಾರವಶ್ಟೇ ಅಲ್ಲದೆ ಆಹಾರ ತಯಾರಿಸುವ ಪಾತ್ರೆಗಳ ಬಗ್ಗೆಯೂ ನಾವು ಕಾಳಜಿ ವಹಿಸಬೇಕು ಎಂಬುದನ್ನು ತಿಳಿಯುತ್ತೇವೆ.

(ಚಿತ್ರಸೆಲೆ: pixabay.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks