ತೇಜಸ್ವಿ – ಜಗದ ಮಾಂತ್ರಿಕನು ದಿಟದಲ್ಲಿ!

– ಚಂದ್ರಗೌಡ ಕುಲಕರ‍್ಣಿ.

 

ಮೂಡಿಗೆರೆಯಲಿ ನಿಂತು ಮೋಡಿಯ ಹಾಕಿದನು
ಕಾಡಿನ ಸಂತ ತೇಜಸ್ವಿ | ನುಡಿಗಳು
ನಾಡಿಗರ ನಾಡಿ ಮಿಡಿಯುವವು |

ಅಡವಿ ಆರ‍್ಯಾಣದ ಒಡವಿ ಒಯ್ಯಾರದ
ಗಿಡಮರ ಹಕ್ಕಿ ಕೀಟಗಳ| ಬೆನ್ನತ್ತಿ
ಬೆಡಗ ತಿಳಿಸಿದನು ತೇಜಸ್ವಿ |

ಹಕ್ಕಿಗಳ ಚಿಲಿಪಿಲಿ ಪುಕ್ಕಗಳ ಎಣಿಸಿದನು
ದಿಕ್ಕುದೆಶೆ ಕಂಡು ಬಂದಂತ | ವಲಸಿಗರ
ಲೆಕ್ಕ ಹೇಳಿದನು ತೇಜಸ್ವಿ |

ಮಗುವಿನ ಮನಸಲ್ಲಿ ಚಿಗುರು ಚೇತನ ತುಂಬಿ
ಬಗೆ ಬಗೆಯ ಕತೆಯ ಹೇಳಿದನು | ತೇಜಸ್ವಿ
ಜಗದ ಮಾಂತ್ರಿಕನು ದಿಟದಲ್ಲಿ |

ಜಗದ ವಿಸ್ಮಯ ಜೀವಿ ತೊಗಲ ಬಾವಲಿ ಬದುಕ
ಬಗೆದು ತೋರುತ್ತ ಶಬ್ದದ | ಅಲೆಗಳ
ದಿಗಿಲು ಸಾರಿದನು ತೇಜಸ್ವಿ |

ಹಾರುವ ಓತಿಯನು ತೋರಿಸಿದ ಮಂದಣ್ಣಗೆ
ನೂರು ಸಾವಿರ ವರುಶದ | ಚರಿತೆಯನು
ಸಾರಿ ಹೇಳಿದ ತೇಜಸ್ವಿ |

ಮುಗಿಲಲ್ಲಿ ತೇಲುತ್ತ ದಿಗಿಲು ಹುಟ್ಟಿಸಿದಂತ
ಮಿಗಿಲಾದ ಹಾರೋ ತಟ್ಟೆಗಳ | ಕತೆಯನ್ನು
ಬರೆದು ತೋರಿದನು ತೇಜಸ್ವಿ |

ಗಡಿಯಾಚೆ ಅರಿಮೆಯನು ಹಿಡಿದಿಟ್ಟು ಕನ್ನಡದಿ
ಸಡಗರವ ತಂದ ತಾಯ್ನುಡಿಗೆ | ತೇಜಸ್ವಿ
ಬೆಡಗನ್ನು ಅರಿತು ಸವಿಬೇಕು |

ಕನ್ನಡದ ನುಡಿಬಲಕೆ ಮುನ್ನುಡಿಯ ಬರೆದಂತ
ಅಣ್ಣನ ಹಾದಿ ವಿಸ್ತಾರ | ಮಾಡಿದ
ಚೆನ್ನಿಗನು ನಮ್ಮ ತೇಜಸ್ವಿ |

( ಚಿತ್ರ ಸೆಲೆ: wikipedia )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: