ಅಲ್ಲಮನ ವಚನಗಳ ಓದು – 2ನೆಯ ಕಂತು

– ಸಿ.ಪಿ.ನಾಗರಾಜ.

allamprabhu

ಜಾಲಗಾರನ ಕಾಲು ಮುಳ್ಳು ತಾಗಿ ನೊಂದಿತ್ತೆಂಬಂತೆ
ಸೂನೆಗಾರನ ಮನೆಯಲ್ಲಿ ಹೆಣ ಹೋಗಿ ಅಳುವಂತೆ
ಕನ್ನಗಳ್ಳನ ಮನೆಯಲ್ಲಿ ಬಟ್ಟಲು ಹೋಗಿ ಮರುಗುವಂತೆ
ಠಕ್ಕನ ಪೂಜೆಗೆ ಮೆಚ್ಚುವನೆ ನಮ್ಮ ಗುಹೇಶ್ವರನು.

ಈ ವಚನದಲ್ಲಿ ಅಲ್ಲಮನು ಎರಡು ಸಂಗತಿಗಳನ್ನು ಹೇಳಿದ್ದಾನೆ.

1) ಸಾಮಾಜಿಕ ವ್ಯಕ್ತಿಗಳಲ್ಲಿ ಹೆಚ್ಚಿನವರು ತಮ್ಮ ನಡೆನುಡಿಗಳಿಂದ ಸಹಮಾನವರಿಗೆ ಮತ್ತು ಸಮಾಜಕ್ಕೆ ಆಗುತ್ತಿರುವ ತೊಂದರೆ/ಕಿರುಕುಳ/ಸಾವು/ನೋವು/ಅಪಮಾನ/ಹಾನಿಯ ಬಗ್ಗೆ ಎಂದೂ ಯಾವುದೇ ಬಗೆಯ ಆತಂಕಕ್ಕೆ ಒಳಗಾಗುವುದಿಲ್ಲ ಹಾಗೂ ತಮ್ಮ ವರ‍್ತನೆಯಿಂದ ಉಂಟಾದ ಆಗುಹೋಗುಗಳನ್ನು ಒರೆಹಚ್ಚಿ ನೋಡಿಕೊಳ್ಳುವುದಿಲ್ಲ. ಆದರೆ ಇತರರಿಂದ ತಮಗೆ ನೋವು/ಹಾನಿಯುಂಟಾದಾಗ, ಅದಕ್ಕಾಗಿ ಮನನೊಂದು ಒದ್ದಾಡುತ್ತಾರೆ/ಕಳವಳಗೊಳ್ಳುತ್ತಾರೆ. ಸಾಮಾಜಿಕ ವ್ಯಕ್ತಿಗಳಲ್ಲಿರುವ ಈ ಬಗೆಯ ಇಬ್ಬಂದಿತನದ ನಡವಳಿಕೆಯನ್ನು ಅಂದರೆ “ತಮ್ಮಿಂದ ಇತರರಿಗೆ ಕೇಡಾದರೂ ಚಿಂತೆಯಿಲ್ಲ; ತಮಗೆ ಮಾತ್ರ ಯಾವ ಬಗೆಯಿಂದಲೂ ಕೇಡಾಗಬಾರದು” ಎಂಬುದನ್ನು ಮೂರು ಪ್ರಸಂಗಗಳ ಮೂಲಕ ಅಲ್ಲಮನು ಗುರುತಿಸಿದ್ದಾನೆ.

ಚೂಪಾದ ಮೊನೆಯುಳ್ಳ ಲೋಹದ ಗಾಳಕ್ಕೆ ಎರೆಹುಳವನ್ನು ಸಿಕ್ಕಿಸಿ, ಅದನ್ನು ನೀರಿನಲ್ಲಿ ಇಳಿಬಿಟ್ಟು ಮೀನನ್ನು ಹಿಡಿಯುವ ಜಾಲಗಾರ/ಬೆಸ್ತನಿಗೆ ಒಮ್ಮೆ ಮುಳ್ಳೊಂದು ಕಾಲಿಗೆ ಚುಚ್ಚಿದಾಗ, ನೋವನ್ನು ತಾಳಲಾರದೆ ನೊಂದುಕೊಳ್ಳುತ್ತಾನೆ. ಮುಳ್ಳಿನ ಮೊನೆಯಿಂದ ತನಗಾದ ನೋವಿಗೆ ಮಿಡುಕಾಡುವ ಅವನ ಮನಕ್ಕೆ ತನ್ನಿಂದ ಪ್ರತಿನಿತ್ಯವೂ ಗಾಳದ ಮೊನೆಗೆ ಸಿಲುಕಿ ಒದ್ದಾಡುವ ಎರೆಹುಳವಿನ ನೋವಾಗಲಿ ಇಲ್ಲವೇ ಗಾಳದ ಕೊಕ್ಕೆಯು ಗಂಟಲಿನಲ್ಲಿ ಸಿಕ್ಕಿಕೊಂಡಾಗ ನೋವಿನಿಂದ ವಿಲವಿಲನೆ ಒದ್ದಾಡುವ ಮೀನಿನ ಸಂಕಟವಾಗಲಿ ತಟ್ಟುವುದಿಲ್ಲ.

ಕುರಿಕೋಳಿ ಮುಂತಾದ ಜೀವಿಗಳನ್ನು ಕೊಂದು ಮಾರಾಟಮಾಡುವ ಸೂನೆಗಾರ/ಕಟುಕನ ಮನೆಯಲ್ಲಿ ಒಂದು ದಿನ ಅವನ ಕುಟುಂಬಕ್ಕೆ ಸೇರಿದ ವ್ಯಕ್ತಿಯೊಬ್ಬರು ಸಾವನ್ನಪ್ಪಿದಾಗ, ಅವರ ಅಗಲಿಕೆಯನ್ನು ತಾಳಲಾರದೆ ಸೂನೆಗಾರನು ಸಂಕಟದಿಂದ ಕಣ್ಣೀರುಗರೆಯುತ್ತಾನೆ. ಆದರೆ ತಾನು ನಿತ್ಯವೂ ಹತ್ತಾರು ಜೀವಿಗಳ ಕೊರಳನ್ನು ಕತ್ತರಿಸಿ ಅವುಗಳ ಜೀವ ತೆಗೆದು ಸಾಯಿಸುತ್ತಿರುವುದು ಅವನ ಮನವನ್ನು ಎಂದೂ ಕಾಡುವುದಿಲ್ಲ.

ಕಂಡಕಂಡವರ ಮನೆಯ ಗೋಡೆಯನ್ನು ಕೊರೆದು, ಒಳನುಗ್ಗಿ ಅವರ ಮನೆಯ ಒಡವೆವಸ್ತುಗಳನ್ನು ದೋಚಿ, ಅದರಿಂದಲೇ ಜೀವನ ನಡೆಸುವ ಕಳ್ಳನ ಮನೆಯಲ್ಲಿ ಒಮ್ಮೆ ಒಂದು ಚಿಕ್ಕ ಬಟ್ಟಲು ಕಳುವಾದಾಗ, ಅದನ್ನು ಕಳೆದುಕೊಂಡ ಸಂಕಟದಿಂದ ಆ ಕಳ್ಳನ ಮನ ತಳಮಳಗೊಳ್ಳುತ್ತದೆ. ಆದರೆ ತಾನು ಮಾಡುವ ಕನ್ನ ಕೊರೆಯುವ ಕಸುಬಿನಿಂದ ಹಾನಿಗೊಳಗಾಗಿ ಸಂಕಟಕ್ಕೆ ಒಳಗಾದವರ ಬಗ್ಗೆ ಒಂದು ಗಳಿಗೆಯಾದರೂ ಈ ಕಳ್ಳ ಎಂದೂ ಚಿಂತಿಸುವುದಿಲ್ಲ.

2) ಸಮಾಜದಲ್ಲಿನ ಜನಸಮುದಾಯದ ಬದುಕಿಗೆ ಹಾನಿಯನ್ನುಂಟುಮಾಡಿ, ಅವರನ್ನು ಹಸಿವು, ಬಡತನ, ಅಪಮಾನದ ಸಂಕಟಕ್ಕೆ ಗುರಿಮಾಡಿ ಗೋಳಾಡಿಸುವುದಲ್ಲದೇ, ಅವರ ದುಡಿಮೆಯ ಗಳಿಕೆಯೆಲ್ಲವನ್ನೂ ದೋಚಿ ಕೂಡಿಟ್ಟ ಸಂಪತ್ತಿನಿಂದ ದೇವರ ಪೂಜೆಯನ್ನು ಮಾಡುವ ನಯವಂಚಕರನ್ನು/ಕ್ರೂರಿಗಳನ್ನು ಹನ್ನೆರಡನೆಯ ಶತಮಾನದಲ್ಲಿದ್ದ ಶಿವಶರಣಶರಣೆಯರು ತಿರಸ್ಕರಿಸಿದ್ದರು. ಏಕೆಂದರೆ ದೇವರನ್ನು ಪೂಜಿಸುವವರು ಸಹಮಾನವರಿಗೆ ಮತ್ತು ಸಮಾಜಕ್ಕೆ ಒಳಿತನ್ನು ಮಾಡುವ ನಡೆನುಡಿಗಳನ್ನು ಹೊಂದಿರಬೇಕೆಂಬ ನಿಲುವನ್ನು ಶಿವಶರಣಶರಣೆಯರು ತಳೆದಿದ್ದರು.

ಈ ಹಿನ್ನೆಲೆಯಲ್ಲಿ ಅಲ್ಲಮನು ಈ ವಚನದ ಕೊನೆಯ ಸಾಲಿನಲ್ಲಿ “ಕಳ್ಳನು ಮಾಡುವ ಪೂಜೆಯನ್ನು ಗುಹೇಶ್ವರನು ಮೆಚ್ಚುವುದಿಲ್ಲ/ಒಪ್ಪುವುದಿಲ್ಲವೆಂದು” ಹೇಳಿದ್ದಾನೆ.

( ಜಾಲ+ಕಾರ=ಜಾಲಗಾರ ; ಜಾಲ=ಕೆರೆಕಟ್ಟೆಹೊಳೆನದಿ ಮುಂತಾದ ನೀರಿನ ತಾಣದಲ್ಲಿ ವಾಸಿಸುವ ಮೀನು ಮತ್ತು ಇತರ ಜೀವಿಗಳನ್ನು  ಹಿಡಿಯಲು ಬಳಸುವ ಬಲೆ/ಗಾಳ  ; ಕಾರ=ಮಾಡುವವನು/ತೊಡಗುವವನು ; ಜಾಲಗಾರ=ನೂಲಿನಿಂದ ಮಾಡಿದ ಬಲೆ ಇಲ್ಲವೇ ಲೋಹದಿಂದ ಮಾಡಿದ ಕೊಕ್ಕೆಯನ್ನು ಬಳಸಿ ಜಲಚರಗಳನ್ನು ಹಿಡಿಯುವವನು/ಬೆಸ್ತ ; ತಾಗಿ=ಚುಚ್ಚಿಕೊಂಡು/ಹೊಕ್ಕಿಕೊಂಡು ; ಮುಳ್ಳು ತಾಗಿ=ಹರಿತವಾದ ಮೊನೆಯುಳ್ಳ ಮುಳ್ಳು ನಾಟಿಕೊಂಡು  ; ನೊಂದು+ಇತ್ತು+ಎಂಬ+ಅಂತೆ ; ನೊಂದಿತ್ತು=ನೋವಾಯಿತು ; ಎಂಬ=ಎನ್ನುವ ; ಅಂತೆ=ಹಾಗೆ ; ಸೂನೆ+ಕಾರ=ಸೂನೆಗಾರ ; ಸೂನೆ=ಪ್ರಾಣಿಗಳನ್ನು ಕೊಲ್ಲುವ ಜಾಗ/ಕಟುಕರ ಅಂಗಡಿ ; ಸೂನೆಗಾರ=ಪ್ರಾಣಿಗಳ ಮಾಂಸವನ್ನು ಮಾರುವವನು/ಪ್ರಾಣಿಗಳನ್ನು ಕತ್ತರಿಸುವ ಕಸುಬುಳ್ಳವನು/ಕಟುಕ ; ಹೆಣ ಹೋಗಿ=ವ್ಯಕ್ತಿಗೆ ಸಾವು ಉಂಟಾಗಿ ; ಅಳುವ+ಅಂತೆ ; ಅಳು=ಸಂಕಟಪಡು/ಕಣ್ಣೀರು ಸುರಿಸು ; ಕನ್ನ+ಕಳ್ಳ=ಕನ್ನಗಳ್ಳ ; ಕನ್ನ=ಗೋಡೆಯಲ್ಲಿ ಕೊರೆದ ಕಂಡಿ/ಒಬ್ಬ ವ್ಯಕ್ತಿ ನುಗ್ಗಿಹೋಗಲು ಆಗುವಂತೆ ಗೋಡೆಯಲ್ಲಿ ಕೊರೆದಿರುವ ಜಾಗ ; ಕನ್ನಗಳ್ಳ=ಮನೆಯ ಗೋಡೆಯನ್ನು ಕೊರೆದು , ಅದರ ಎಡೆಯಲ್ಲಿ ಮನೆಯೊಳಕ್ಕೆ ನುಗ್ಗಿ ಒಡವೆ ವಸ್ತುಗಳನ್ನು ದೋಚುವವನು ; ಬಟ್ಟಲು=ಗುಂಡಾಗಿರುವ ಚಿಕ್ಕದಾದ ಪಾತ್ರೆ ; ಬಟ್ಟಲು ಹೋಗಿ=ಬಟ್ಟಲು ಕಳುವಾಗಿ/ಕಳೆದುಹೋಗಿ ; ಮರುಗುವ+ಅಂತೆ ; ಮರುಗು=ಸಂಕಟಪಟು/ಕಳವಳಿಸು/ಚಿಂತಿಸು ; ಠಕ್ಕ=ಮೋಸಗಾರ/ವಂಚಕ/ಕಳ್ಳ/ನೀಚ ; ಮೆಚ್ಚು=ಒಲಿಯುವುದು/ಒಪ್ಪುವುದು/ಹೊಗಳುವುದು  ; ಗುಹಾ+ಈಶ್ವರ=ಗುಹೇಶ್ವರ ; ಗುಹಾ=ಗುಹೆ/ಬೆಟ್ಟಗುಡ್ಡಗಳಲ್ಲಿರುವ ಕಲ್ಲಿನ ಪೊಟರೆ ; ಈಶ್ವರ=ಶಿವ ; ಗುಹೇಶ್ವರ=ಶಿವನ ಮತ್ತೊಂದು ಹೆಸರು/ಅಲ್ಲಮನ ಮೆಚ್ಚಿನ ದೇವರು/ಅಲ್ಲಮನ ವಚನಗಳಲ್ಲಿ ಕಂಡುಬರುವ ಅಂಕಿತನಾಮ)

( ಚಿತ್ರ ಸೆಲೆ: lingayatreligion.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: