ಕಪ್ಪೆಗಳು ಕಂಡುಕೊಂಡ ಸತ್ಯ

– ಪ್ರಕಾಶ ಪರ‍್ವತೀಕರ.

ಒಂದು ಬೇಸಿಗೆಯ ಮುಂಜಾನೆಯಂದು ಗಂಡು ಕಪ್ಪೆ ಹೆಣ್ಣು ಕಪ್ಪೆಗೆ ಹೀಗೆ ನುಡಿಯಿತು.

“ನಮ್ಮ ರೊಕ್ ರೊಕ್ ಸಪ್ಪಳದ ರಾತ್ರಿಯ ಹಾಡಿನಿಂದ ಈ ತೀರದ ಬಳಿ ವಾಸಿಸುವ ಜನರಿಗೆ ಕಂಡಿತವಾಗಿಯೂ ತೊಂದರೆಯಾಗುತ್ತದೆ ಎಂದು ನನಗೆ ಅನಿಸುತ್ತದೆ“

ಹೆಣ್ಣು ಕಪ್ಪೆ ನುಡಿಯಿತು,

“ ಆದರೆ ಈ ಮನುಶ್ಯರು ಹಗಲೆಲ್ಲ ವ್ಯರ‍್ತವಾದ ಮಾತುಗಳನ್ನು ಆಡುತ್ತ ನಮ್ಮ ಮೌನಕ್ಕೆ ಅಡ್ಡಿಪಡಿಸುತ್ತಾರೆ ಎಂಬುದು ಅಶ್ಟೇ ಸತ್ಯವಾದದ್ದು “

“ ಅದು ಏನೇ ಇರಲಿ. ನಮ್ಮ ಹಾಡಿನ ಸದ್ದು ದೊಡ್ಡ ಪ್ರಮಾಣದ್ದು. ನಮ್ಮ ನೆರೆಹೊರೆಯವರಿಗೆ ಇದರಿಂದ ಅನಾನುಕೂಲವಾಗುತ್ತದೆ ಎಂಬುದನ್ನು ನಾವು ಮರೆಯಬಾರದು “

“ ದಿನದ ವೇಳೆಯಲ್ಲಿ ಈ ಮಾನವರು ಅವಶ್ಯಕತೆಗಿಂತ ಹೆಚ್ಚಾಗಿ ಒದರುವುದು, ಕೂಗುವುದು ಮಾಡುತ್ತಾ ನಮಗೆ ತೊಂದರೆ ಕೊಡುತ್ತಾರೆ ಎಂಬುದನ್ನೂ ನೀವು ಮರೆಯಬೇಡಿ ”

“ ಇರಲಿ ಬಿಡು. ಈ ಮನುಶ್ಯರಿಗಿಂತ ನಾವು ಶ್ರೇಶ್ಟರು ಎಂದು ತೋರಿಸೋಣ. ರಾತ್ರಿ ಸುಮ್ಮನಿರೋಣ. ನಮ್ಮ ಹಾಡುಗಳನ್ನು ನಮ್ಮ ಮನಸಿನಲ್ಲೇ ಗುನುಗೋಣ. ಇನ್ನೂ 2-3 ರಾತ್ರಿ ಹೀಗೇ ಮುಂದುವರೆಸಿ ನೋಡೋಣ”

ಅಂದು ರಾತ್ರಿ ಕಪ್ಪೆಗಳು ಸುಮ್ಮನಿದ್ದವು. ಹಾಗೇ 2ನೇ, 3ನೆಯ ರಾತ್ರಿಯೂ ಕೂಡ ಮೌನವಹಿಸಿದವು. ಆದರೆ ಮಾರನೇ ದಿನ ಬೆಳಿಗ್ಗೆ ಅಲ್ಲಿ ಒಂದು ವಿಚಿತ್ರವಾದ ಗಟನೆ ನಡೆಯಿತು. ಕೆರೆಯ ದಂಡೆಯ ಬಳಿಯೇ ವಾಸ ಮಾಡುತ್ತಿದ್ದ ಗಟ್ಟಿಗಿತ್ತಿ ವಾಚಾಳಿಯೊಬ್ಬಳು ತನ್ನ ಗಂಡನ ಮೇಲೆ ಕೂಗಾಡುತ್ತಿದ್ದಳು,

“ ಆ ಕಪ್ಪೆಗಳು ಅರಚುವದು ಮೂರು ದಿನದಿಂದ ನಿಂತು ಹೋಗಿದೆ. ಕಳೆದ ಮೂರು ದಿನಗಳಿಂದ ನನಗೆ ಕಣ್ಣು ಮುಚ್ಚಲಾಗಿಲ್ಲ. ಸರಿಯಾಗಿ ನಿದ್ದೆ ಮಾಡಲಾಗಿಲ್ಲ. ಕಪ್ಪೆಗಳು ಅಪಶ್ರುತಿಯಿಂದ ಕಿರುಚುತ್ತಿದ್ದಾಗ ಚೆನ್ನಾಗಿ ನಿದ್ದೆ ಬರುತ್ತಿತ್ತು. ಅವುಗಳ ರೊಕ್ ರೊಕ್ ಶಬ್ದ ಕೇಳಿಸಲೊಲ್ಲದು. ಸರಿಯಾಗಿ ನಿದ್ದೆ ಇಲ್ಲದೆ ನನ್ನ ತಲೆ ಸಿಡಿದು ಹೋಗುತ್ತಿದೆ ”

ಇದನ್ನು ಕೇಳಿ ಗಂಡು ಕಪ್ಪೆ ಹೆಣ್ಣು ಕಪ್ಪೆಗೆ ಕಣ್ಣು ಮಿಟುಕಿಸಿ ಹೇಳಿತು,

”ರಾತ್ರಿಯ ಶಾಂತತೆಯಿಂದ ನಾವೂ ಹುಚ್ಚರಾಗಿದ್ದೆವು ಅಲ್ಲವೇ?”

ಆಗ ಹೆಣ್ಣು ಕಪ್ಪೆ ನುಡಿಯಿತು. “ಹೌದು. ರಾತ್ರಿಯ ಈ ಶಾಂತತೆ ನಮ್ಮ ಪಾಲಿಗೆ ನರಕವೇ ಆಗಿತ್ತು. ಇನ್ಮೇಲೆ ಮೌನವಾಗಿ ಇರುವುದರ ಅವಶ್ಯಕತೆ ಇಲ್ಲ ಎಂಬುದು ನಿನ್ನ ಗಮನಕ್ಕೆ ಬಂದಿರಬೇಕು”

ಅಂದಿನಿಂದ ರಾತ್ರಿ ಹಾಡುವುದನ್ನು ಮತ್ತೆ ಶುರು ಮಾಡಿದವು ಕಪ್ಪೆಗಳು.

( ಮಾಹಿತಿ ಸೆಲೆ: gutenberg.net.au)

(ಚಿತ್ರ ಸೆಲೆ: bp2.blogger.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: