ಹಬ್ಬಗಳ ಹೊಸ್ತಿಲು ‘ಕಾರಹುಣ್ಣಿಮೆ’

– ರೂಪಾ ಪಾಟೀಲ್.

ಕನ್ನಡ ನಾಡು  ರೂಡಿ, ಸಂಪ್ರದಾಯ, ಹಬ್ಬ-ಹರಿದಿನ ಹೀಗೆ ಆಚರಣೆಗಳಿಗೆ ತುಂಬಾ ಪ್ರಸಿದ್ದವಾದ ನಾಡು. ಅದರಲ್ಲೂ ಉತ್ತರ ಕರ‍್ನಾಟಕದಲ್ಲಿ ಹಬ್ಬಗಳ ಆಚರಣೆಯ ಬಗೆ ಇನ್ನೂ ವಿಶೇಶ.

ನಮ್ಮ ಕಡೆ ಜನ ಕಾರಹುಣ್ಣಿಮೆ ಹಬ್ಬವನ್ನು ತುಂಬಾ ಕುಶಿಯಿಂದ ಆಚರಣೆ ಮಾಡುವುದುಂಟು. ಯಾಕಂದ್ರೆ ಆಚರಣೆಯ ಹಬ್ಬಗಳ ಸಾಲಿನಲ್ಲಿ ಬರುವ ಮೊದಲ ಹಬ್ಬ ಇದು. “ಕಾರಹುಣ್ಣಿಮೆ ಕರಕೊಂಡು ಬಂದ್ರ ಉಗಾದಿ ಉಡುಕ್ಕೊಂಡು(ಗುಡಿಸಿಕೊಂಡು) ಹೋಗ್ತದ” ಅಂತಾ ಹೇಳ್ತರ. ಅಂದರೆ ಕಾರಹುಣ್ಣಿಮೆಯಿಂದ ಶುರುವಾಗುವ ಆಚರಣೆಯ ಹಬ್ಬಗಳ ಸಾಲು ಕೊನೆಯಾಗುವುದು ಉಗಾದಿಗೇನೆ. ಅದಕ್ಕಾಗೇ ಈ ಹಬ್ಬವನ್ನ ಎಲ್ಲಾ ಹಬ್ಬಗಳ ಹೊಸ್ತಿಲು ಅಂತ ಕೂಡ ಕರೆಯೋದು. ಹಾಗಾದ್ರೆ ಕಾರಹುಣ್ಣಿಮೆ ಹಬ್ಬದ ವಿಶೇಶಗಳನ್ನು ತಿಳಿಯೋಣ ಬನ್ನಿ.

ಮದುವೆ ಅನ್ನೋದು ಹೆಣ್ಣು-ಗಂಡಿಗೆ ಎಶ್ಟು ಸಂಬ್ರಮವೋ, ರೈತಾಪಿ ಮಂದಿಗೆಲ್ಲ ಈ ಹಬ್ಬ ಅನ್ನೋದು ಅಶ್ಟೇ ಸಂಬ್ರಮ ಹೌದು.ಈ ಹಬ್ಬದ ದಿನ ಬೆಳಿಗ್ಗೆ ಬೇಗ ಎದ್ದು ಸಾರಿಸಿ-ಗುಡಿಸಿ,ರಂಗೋಲಿ ಹಾಕಿ, ಸಿಹಿ ಅಡುಗೆ ಮಾಡುವುದು ಹೆಣ್ಮಕ್ಕಳ ಸಂಬ್ರಮ ಆದರೆ, ಇನ್ನು ತಾವು ನಂಬಿದ ಬೂಮಿತಾಯಿ, ಉಳುಮೆಯಲ್ಲಿ ನೆರವಾಗುವ ಎತ್ತುಗಳಿಗೆ ಪೂಜೆ ಮಾಡುವುದೇ ಗಂಡಸರಿಗೆಲ್ಲ ಸಂಬ್ರಮ.

ಕಾರಹುಣ್ಣಿಮೆ ಮೊದಲ ದಿನ ಹೊನ್ನುಗ್ಗಿ ಅಂತಾ ಮಾಡುವುದುಂಟು. ಹೊನ್ನುಗ್ಗಿಯ ದಿನವನ್ನು ಹಬ್ಬದ ತಯಾರಿಯ ದಿನ ಎನ್ನಬಹುದು. ಈ ದಿನ ರೈತಾಪಿ ಮಂದಿ ಬಸವಣ್ಣ ಅಂತ ನಂಬಿರುವ ಎತ್ತುಗಳಿಗೆ ಹೊಸ ಹಗ್ಗ, ಕಾಂಡಾ(ಕೊರಳಿಗೆ ಕಟ್ಟುವ ಹಗ್ಗ), ಮೂಗುದಾಣಿ(ಎತ್ತುಗಳ ಹತೋಟಿಗೆ ಮೂಗಿನ ಮೂಲಕ ಹಾಕುವ ಹಗ್ಗ), ಬಾಸಿಂಗ(ಹಣೆಗೆ ಕಟ್ಟುವ ಹೂವಿನ ಇಲ್ಲವೇ ಬಣ್ಣದ ಹಾಳೆಯ ಮಾಲೆ), ಕೋಡಿಗೆ ಕಟ್ಟಲು ಬಣ್ಣದ ಬಟ್ಟೆ ಇಲ್ಲವೇ ರಿಬ್ಬನ್ನು ಎಲ್ಲವನ್ನೂ ಕೊಂಡು ತಂದು ತಯಾರಿ ಮಾಡಿಕೊಳ್ಳುವರು. ಅಶ್ಟೇ ಅಲ್ಲದೆ ಈ ದಿನ ಸಾಯಂಕಾಲ ಎತ್ತುಗಳಿಗೆ ಮೈತೊಳೆದು ಮೈಗೆಲ್ಲ ಅರಿಸಿನ ಹಚ್ಚಿ ಮದುಮಕ್ಕಳು ಅಂತಾ ಮಾಡ್ತಾರೆ. ಇದಾದ ನಂತರ ಎತ್ತುಗಳಿಗೆ ಅಂತ ಮಾಡಿರುವ ವಿಶೇಶ ತಿಂಡಿ ಕಿಚಡಿ-ಅಗಸಿಪುಡಿ ತಿನ್ನಿಸುವುದು.

ಹೊನ್ನುಗ್ಗಿ ಆದ ಮಾರನೇ ದಿನವೇ ಕಾರಹುಣ್ಣಿಮೆ. ಅಂದು ಬೆಳಿಗ್ಗೆ ಎತ್ತುಗಳಿಗೆ ಸ್ನಾನ ಮಾಡಿಸಿ, ಮೈಗೆಲ್ಲ ಒದ್ದೆ ಬಟ್ಟೆಯನ್ನು ಬಣ್ಣದ ನಿರೀನಿಲ್ಲಿ ಅದ್ದಿ ಚುಕ್ಕೆ ತರಹ ಇಡುವುದು, ನಂತರ ಅದಕ್ಕೆ ಹೊಸದಾಗಿ ತಯಾರಿಸಿರುವ ಕಾಂಡಾ, ಮೂಗುದಾಣಿ, ಬಣ್ಣದ ರಿಬ್ಬನ್ನು ಹೂ-ಹಾರಗಳಿಂದ ಮದುವೆ ಗಂಡಿನ ಹಾಗೆ ಸಿಂಗರಿಸುತ್ತಾರೆ. ಎತ್ತುಗಳಿಗೆ ಸಿಹಿ ಅಡುಗೆ ನೈವೇದ್ಯ ಸಲ್ಲಿಸುತ್ತಾರೆ.

ಎತ್ತುಗಳ ಹಬ್ಬದ ಸಡಗರ ಇಶ್ಟಕ್ಕೇ ಮುಗಿಯುವುದಿಲ್ಲ, ಇನ್ನುಮುಂದೆ ಇರೋದು ಮೆರವಣಿಗೆ, ಶಕ್ತಿಯ ಕಸರತ್ತು. ಮೆರವಣಿಗೆ ಅಂದ್ರೆ ಊರಲ್ಲಿರುವ, ಸುತ್ತಲಿನ ಊರುಗಳಿಂದ ಬಂದಿರುವ ಎತ್ತುಗಳು ಮತ್ತು ಅದರ ಮಾಲೀಕರು ಸೇರಿ ಊದುವುದು-ಬಾರಿಸುವುದರ ಜೊತೆಗೆ ಊರು ಸುತ್ತುವುದು, ನಂತರ ಊರ ಅಗಸಿಯೊಳಗ ಎತ್ತಿನ ಶಕ್ತಿಯ ಕಸರತ್ತು. ಅದೇನಂದ್ರೆ ಓಟದ ಸ್ಪರ‍್ದೆ. ಈ ಓಟದ ಸ್ಪರ‍್ದೆ ಬರಿ ಸ್ಪರ‍್ದೆಯಾಗಿರದೆ ವಿಶೇಶ ಆಚರಣೆ ಆಗಿದೆ. ಊರಿನ ಅಗಸಿಯೊಳಗ ಬೇವಿನೆಲೆಯ ತೋರಣ ಕಟ್ಟಿರುತ್ತಾರೆ. ಅದಕ್ಕೆ ಸ್ವಲ್ಪ ದೂರದಿಂದ ಒಂದು ಬಿಳಿ ಎತ್ತು-ಒಂದು ಕರಿ ಎತ್ತು ಓಡಿಸ್ತಾರೆ. ಈ ಎತ್ತುಗಳು ಹೋಗಿ ಬೇವಿನೆಲೆಯ ತೋರಣ ಹರಿದರೆ ಕಾರಹುಣ್ಣಿಮೆ ಕರಿ ಹರಿಯಿತು ಅಂತ ಹೇಳುತ್ತಾರೆ. ಇದರ ಆದಾರದ ಮೇಲೆ ತಿಳಿದವರು, ಹಿರಿಯರು ಮಳೆ-ಬೆಳೆ ಹೇಳುವುದು ವಾಡಿಕೆ.

ಕರಿ ಎತ್ತು ಕರಿ ಹರಿದ್ರ ಜೋಳ ಕರಿ ಆಗ್ತದ, ಬಿಳಿ ಎತ್ತು ಕರಿ ಹರಿದ್ರ ಜೋಳದ ರಾಶಿಗಿ ಯಾವ ಕಂಟಕ ಇಲ್ಲ ಅಂತ. ಎತ್ತುಗಳು ಓಡುವಾಗ ಅವುಗಳ ಕಾಲು ಹೆಜ್ಜೆಗಳೂ ಮಳೆ ಬೆಳೆಯ ಹೇಳಿಕೆಯಾಗುತ್ತವೆ. ಕಾಲು ಹಿಂದೆ ಇಡೋದು, ಕಾಲು ಸಿಕ್ಕಿಸಿಕೊಳ್ಳುವುದು ಮಾಡಿದ್ರೆ “ಮುಂಗಾರಿ ಮಳೆ ಕೈ ಕೊಟ್ಟಿತು, ಹಿಂಗಾರಿ ಐತಿ” ಅಂತಾ. ಇನ್ನು ಸರಾಗವಾಗಿ ಓಡಿತು ಅಂದ್ರ “ಹಿಂಗಾರಿ ಮುಂಗಾರಿ ಎರಡೂ ಚಲೋ ಐತಿ” ಅಂತಾ ಹೇಳ್ತಾರೆ.

ಇನ್ನೂ ಮೊದಲು ಓಡಿದ ಎತ್ತಿಗೆ ಪ್ರಶಸ್ತಿ ರೂಪದಲ್ಲಿ ಹಣ, ಬೆಳ್ಳಿ ಹೀಗೆ ಏನಾದರೂ ಕೊಟ್ಟು ಎತ್ತಿನ ಮಾಲೀಕರಿಗೆ ಕುಶಿ ಪಡಿಸೋದು ವಾಡಿಕೆ. ಈ ದಿನ ಎತ್ತುಗಳಿಗೆ ಸ್ಪರ‍್ದೆಗೆ ತಯಾರಿ ಮಾಡಿಕೊಂಡು ಅದರಲ್ಲಿ ಬಾಗವಹಿಸುವದರ ಜೊತೆಗೆ ರೈತಾಪಿ ಮಂದಿ ತಾವೂ ಸ್ಪರ‍್ದೆಯಲ್ಲಿ ಬಾರ ಎತ್ತುವುದು, ಕುಸ್ತಿ, ಹೀಗೆ ಹಲವಾರು ರೀತಿಯ ಕಸರತ್ತು ಪ್ರದರ‍್ಶನ ಮಾಡ್ತಾರೆ. ಇದಾದ ನಂತರ ಇಶ್ಟೇಲ್ಲಾ ಕಸರತ್ತು ಮಾಡಿ ಬಂದ ಎತ್ತುಗಳಿಗೆ ಆರತಿ ಎತ್ತಿ ಬರ ಮಾಡಿಕೊಳ್ಳುವುದು.

ಇಶ್ಟೆಲ್ಲಾ ಆದ್ರೆ ಕಾರ ಹುಣ್ಣಿಮೆ ಮುಗಿತು ಅಂದು ಕೊಂಡ್ರಾ? ಇನ್ನೂ ಇಲ್ಲ. ಇನ್ನು ಕಾರ ಹುಣ್ಣಿಮೆ ದಿನ ಸಿಹಿ ಊಟ, ಮರುದಿನ ಬಾಡೂಟ ಮಾಡಿ ಕರಿ ದಿನ ಅಂತಾ ಆಚರಣೆ ಮಾಡ್ತಾರೆ. ಈ ಕರಿಯ ದಿನ ಊರಿನ ಯುವಕರೆಲ್ಲ ಸೇರಿ ಬೇಟೆಗೆ ಹೋಗ್ತಾರೆ. ಬೇಟೆಯಾಡಿ ತಂದಂತಹ ಯಾವುದಾದರೂ ಒಂದು ಪ್ರಾಣಿಯ ತಲೆಯನ್ನು ಊರ ಅಗಸಿಯೊಳಗ ಹುಗಿದು ಹಾಕೋದು ರೂಡಿ. ಇದಾದ ಮೇಲೆ ಬರ‍್ಜರಿ ಬಾಡೂಟ ಮಾಡುವುದು. ಇಶ್ಟೆಲ್ಲಾ ಮಾಡಿದ್ರೆ ಮುಗಿಯಿತು ಕಾರಹುಣ್ಣಿಮೆಯ ಮೂರು ದಿನದ ಸಂಬ್ರಮದ ಆಚರಣೆ.

ಈ ತರಹ ಆಚರಣೆಯಲ್ಲೇ ಅಡಗಿದೆ ನಿಜವಾದ ಕುಶಿ.

(ಚಿತ್ರ ಸೆಲೆ: thehindu.com)

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *