ಬೂಲೋಕ ಸ್ವರ‍್ಗ ನಮ್ಮ ಊರು ಕೊಡಗು

– ಕೆ.ಚರಣ್ ಕುಮಾರ್ (ಚಾಮರಾಜಪೇಟೆ).

ಬೂಲೋಕ ಸ್ವರ‍್ಗವಿದು ನಮ್ಮ ಊರು ಕೊಡಗು
ಸ್ವೆಟರ್ ಹಾಕಿದರೂ ನಿಲ್ಲದ ನಡುಗು
ಎಶ್ಟು ವರ‍್ಣಿಸಿದರೂ ಸಾಲದು ಈ ಸೊಬಗು
ದೇವರೇ ಸ್ರುಶ್ಟಿಸಿದ ಅನನ್ಯ ಬೆರಗು

ಹಸಿರು ಹೊದ್ದ ಬೆಟ್ಟಗುಡ್ಡ ಸಾಲುಗಳು
ಮುಗಿಲೆತ್ತರಕ್ಕೆ ಬೆಳೆದಿರುವ ಮರಗಿಡಗಳು
ದ್ರುಶ್ಟಿ ನೆಟ್ಟಶ್ಟು ದೂರ ಕಾಪಿ ಗಿಡಗಳು
ಮರ ತಬ್ಬಿಕೊಂಡು ಹಬ್ಬಿರುವ ಮೆಣಿಸಿನ ಬಳ್ಳಿಗಳು

ಮೋಡದ ಮರೆಯಲ್ಲೆ ಅವಿತೇ ಇರುವ ಸೂರ‍್ಯ
ಆಗೊಮ್ಮೆ ಈಗೊಮ್ಮೆ ಬಂದು ಸುರಿವ ಮಳೆರಾಯ
ತಂಪಾದ ಗಾಳಿ, ಬೋರ‍್ಗರೆದು ಹರಿವ ನದಿಗಳು
ಹೆಬ್ಬಾವಿನಂತೆ ಅಂಕು ಡೊಂಕಾದ ರಸ್ತೆಗಳು

ಶಾಂತತೆ, ಪ್ರಶಾಂತತೆಗೆ ಹೆಸರುವಾಸಿ ನಮ್ ಊರು
ಸಂಜೆಯಾಗುತ್ತಲೆ ಗರಿಗೆದರುವ ಬಾರುಗಳು
ಸದಾ ಮುಚ್ಚಿರುವ ಕಿಟಕಿ ಬಾಗಿಲುಗಳು
ಬೆರಳೆಣಿಕೆಯಲ್ಲಿ ಸಾಗುವ ಜನರ ಓಡಾಟಗಳು

ನಿಶ್ಯಬ್ದದಲ್ಲಿ ಶಬ್ದ ಮಾಡುವ ಜೀರುಂಡೆಗಳು
ಹೆಚ್ಚು ಶಬ್ದ ಮಾಡದ ಗಾಡಿಗಳು
ಜೀವನದಿ ಹುಟ್ಟುವ ಪುಣ್ಯ ತಾಣ
ಈ ನಾಡಲಿ ಜನ್ಮ ಕೊಟ್ಟ ದೇವನಿಗೆ ಕೋಟಿ ನಮನ

(ಚಿತ್ರ ಸೆಲೆ: wikimedia.org)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: