ಸಣ್ಣಕತೆ: ನಿರ‍್ದಾರ
ವ್ಯವಹಾರದ ಸಲುವಾಗಿ ಬೆಂಗಳೂರಿಗೆ ಹೋಗಿದ್ದ ಗೋವಿಂದರಾಯರು ವಾಪಸ್ಸು ಮೈಸೂರಿಗೆ ಹೊರಡಲು ರೈಲು ನಿಲ್ದಾಣಕ್ಕೆ ಬರುವ ಹೊತ್ತಿಗೆ ಜೋರಾದ ಮಳೆ ಶುರುವಾಗಿತ್ತು. ಮದ್ಯಾಹ್ನದ ರೈಲು ತಪ್ಪಿದರೆ ಮನೆ ತಲುಪುವ ಹೊತ್ತಿಗೆ ತಡವಾಗುತ್ತದೆಂದು ಮಳೆಯಲ್ಲೇ ತೊಯ್ದು ರೈಲು ಹತ್ತಿ ಕಿಟಕಿ ಪಕ್ಕ ಕುಳಿತರು. ತೊಯ್ದಿದ್ದ ತಲೆ, ಕೈ, ಮುಕ ಒರಸಿಕೊಳ್ಳುವಶ್ಟರಲ್ಲಿ ರೈಲು ಹೊರಟಿತು.
ರೈಲು ಚನ್ನಪಟ್ಟಣ ತಲುಪುವ ಹೊತ್ತಿಗೆ ಸಂಜೆಯಾಗಿತ್ತು, ಸಾಲದ್ದಕ್ಕೆ ಮಳೆ. ರೈಲಿನಲ್ಲೇ ಟೀ ಕುಡಿದು ಕಿಟಕಿಯ ಆಚೆ ನೋಡುತ್ತಾ ಕುಳಿತರು. ರೈಲಿನ ವೇಗಕ್ಕೆ ತಕ್ಕಂತೆ ತಮ್ಮ ಬದುಕಿನಲ್ಲಿ ನಡೆದ ಗಟನೆಗಳು ಒಮ್ಮೆ ಕಣ್ಣ ಮುಂದೆ ಬಂದು ಹೋದಂತೆ ಅನ್ನಿಸಿಬಿಟ್ಟಿತ್ತು. ಹಾಗೆ ಯೋಚನೆಯಲ್ಲಿ ಮುಳುಗಿದ್ದರು!
ಗೋವಿಂದರಾಯರದು ಅವಿಬಕ್ತ ಕುಟುಂಬ. ಚಿಕ್ಕ ವಯಸ್ಸಿನಲ್ಲೇ ತಾಯಿಯನ್ನು ಕಳೆದುಕೊಂಡ ರಾಯರು, ಚಿಕ್ಕಮ್ಮ-ದೊಡ್ಡಮ್ಮನ ಅಶ್ರಯದಲ್ಲೇ ಬೆಳೆದರು. ತಂದೆ ಶಾಲೆಯ ಶಿಕ್ಶಕರು, ರಾಯರು ಎಂ.ಕಾಮ್. ಮುಗಿಸುವ ವೇಳೆಗೆ ತಮ್ಮ ಬಿ.ಎ. ಕೊನೆಯ ವರ‍್ಶ ಓದುತ್ತಿದ್ದ. ಎಂ.ಕಾಮ್. ಮುಗಿಸಿದ ಕೆಲವೇ ದಿನಗಳಲ್ಲಿ ರಾಯರು ಕೆಲಸಕ್ಕೆ ಸೇರಿದ್ದರು. ಕೆಲಸಕ್ಕೆ ಸೇರಿದ 2-3 ವರ‍್ಶದಲ್ಲೇ ಮದುವೆ ಮಾಡಬೇಕೆಂದು ತೀರ‍್ಮಾನಿಸಿದ ರಾಯರ ತಂದೆ, ಹುಡುಗಿಯನ್ನು ಹುಡುಕಿ, ರಾಯರ ಒಪ್ಪಿಗೆಯೊಂದಿಗೆ ನಿಶ್ಚಿತಾರ‍್ತವನ್ನೂ ಗೊತ್ತು ಮಾಡಿಯೇ ಬಿಟ್ಟಿದ್ದರು.
ಇದೆಲ್ಲ ನಡೆದು ಇಂದಿಗೆ ಹದಿನಾಲ್ಕು ವರ‍್ಶಗಳೇ ಕಳೆದು ಹೋದವು. ತಮ್ಮಲ್ಲೇ ಲೆಕ್ಕ ಹಾಕತೊಡಗಿದರು, ತಮಗೀಗ 42 ವರ‍್ಶ! ಹಾಗೇ ಮುಗುಳ್ನಕ್ಕು ಯೋಚನೆಯಲ್ಲಿ ಮುಳುಗಿದರು.
ನಿಶ್ಚಿತಾರ‍್ತಕ್ಕೆ ಇನ್ನೇನು ಮೂರು ದಿನ ಬಾಕಿ ಇರುವಾಗ, ತಂದೆಯೊಂದಿಗೆ ಮೋಟಾರ್ ಸೈಕಲ್ ಮೇಲೆ ಹೋಗುತ್ತಿದ್ದಾಗ ನಡೆದ ಗಟನೆ, ಮನೆಗೆ ಸಾಮಾನು ತರಲು ತಂದೆಯೊಂದಿಗೆ ಹೋಗುತ್ತಿದ್ದಾಗ ಮೋಟಾರ್ ಸೈಕಲ್‍ನಿಂದ ಬಿದ್ದು ತಮಗೆ ಗಾಯವಾಗಿತ್ತು, ವಯಸ್ಸಾಗಿದ್ದರಿಂದ ತಂದೆಯವರಿಗೆ ಬಲಗಾಲು ಮೂರುಕಡೆ ಮುರಿದಿತ್ತು. ಪರೀಕ್ಶಿಸಿದ ಡಾಕ್ಟರ್, ತಡಮಾಡದೇ ಆಪರೇಶನ್ ಮಾಡಬೇಕಾಗಿದ್ದರಿಂದ ಮಾರನೆಯ ದಿನ ಹತ್ತು ಗಂಟೆಗೆಂದು ನಿಗದಿಮಾಡಿದ್ದರು. ರಾಯರು ಅಂದುಕೊಂಡಂತೆ ಮಾರನೆಯ ದಿನ ಬೀಗರ ಮನೆಯವರು, ನೆಂಟರು ಸ್ನೇಹಿತರೆಲ್ಲ ಅಸ್ಪತ್ರೆಗೆ ಬಂದಿದ್ದರು. ಆಪರೇಶನ್‍ಗೆ ಇನ್ನೂ ಸಮಯವಿದ್ದಿದ್ದರಿಂದ ಎಲ್ಲರೂ ಮಾತುಕತೆಯಲ್ಲಿ ತೊಡಗಿದ್ದರು. ರಾಯರು ಯಾರ ಪರಿವಿಲ್ಲದೇ ಹುಡುಗಿಯೊಂದಿಗೆ ಮಾತನಾಡುತಿದ್ದರು. ಇವರಿಬ್ಬರ ಮಾತಿನ ನಡುವೆ ಆಪರೇಶನ್ ನಂತರ ತಂದೆಯವರನ್ನು ಅಶ್ರಮಕ್ಕೆ ಸೇರಿಸುವಂತೆಯೂ, ನಂತರ ಮದುವೆಯಾಗುವುದಾಗಿ ರಾಯರಿಗೆ ತಿಳಿಸಿದಳು. ನಿಶ್ಚಿತಾರ‍್ತಕ್ಕೆ ಮೂರು ದಿನ ಬಾಕಿಯಿದ್ದಿದ್ದರಿಂದ ಆ ಕ್ಶಣಕ್ಕೆ ಏನನ್ನು ಉತ್ತರಿಸದ ರಾಯರು, ಆಪರೇಶನ್ ಅಗುವವರೆಗೂ ಸುಮ್ಮನಿರಲು ತೀರ‍್ಮಾನಿಸಿದರು.
ಆಪರೇಶನ್ ನಂತರ ಡಾಕ್ಟರ್ ಎರಡು ವರ‍್ಶಗಳ ಕಾಲ ವಿಶ್ರಾಂತಿ ಬೇಕೆಂದು ಹೇಳಿಬಿಟ್ಟರು. ತಕ್ಶಣವೇ ಗೋವಿಂದರಾಯರು ತಮ್ಮ ಮುಂದಿನ ಬದುಕನ್ನು ತೀರ‍್ಮಾನಿಸಿಬಿಟ್ಟರು. ಕೆಲಸಕ್ಕೆ ರಾಜೀನಾಮೆ ಕೊಟ್ಟು, ಜೀವನಕ್ಕೆ ಸ್ವಂತ ವ್ಯವಹಾರ ಶುರು ಮಾಡಿ ತಂದೆಯನ್ನು ನೋಡಿಕೊಳ್ಳತೊಡಗಿದರು. ರೈಲು ನಿಲ್ದಾಣಕ್ಕೆ ಸಮೀಪಿಸುತ್ತಿತ್ತು, ಇಂದಿಗೆ ತಂದೆಯವರು ತೀರಿಹೋಗಿ ಐದು ತಿಂಗಳುಗಳಾಗಿದ್ದವು. ಜೀವನದ 14 ವರ‍್ಶದ ಸಾರ‍್ತಕತೆಯನ್ನು ತಂದೆಯವರ ಸೇವೆಯಲ್ಲಿ ಕಳೆದಿದ್ದ ರಾಯರಿಗೆ ಈಗ ತಾವು ಒಂಟಿ ಎನ್ನಿಸುತ್ತಿತ್ತು. ರೈಲಿನಿಂದ ಇಳಿದ ಬಾರವಾದ ಹೆಜ್ಜೆಯಿಟ್ಟು ನಿಲ್ದಾಣದ ಹೊರಗೆ ಬಂದ ಗೋವಿಂದರಾಯರು ಮಳೆಯನ್ನೂ ಲೆಕ್ಕಿಸದೆ ಆಟೋ ಹಿಡಿದು ಮನೆಯಕಡೆ ಹೊರಟರು…
(ಚಿತ್ರ ಸೆಲೆ: freegreatpicture.com)
ಇತ್ತೀಚಿನ ಅನಿಸಿಕೆಗಳು