ಮಕ್ಕಳ ಕತೆ: ದಡ್ಡರಲ್ಲ ಜಾಣರು

– ವೆಂಕಟೇಶ ಚಾಗಿ.

ಅಂದು ಬಾನುವಾರ ರಂಗ, ಸೋಮ, ಶಂಕರರಿಗೆ ಆ ದಿನದಂದು ವಿಶೇಶವಾದ ಕೆಲಸವಿರುತ್ತದೆ. ಮನೆಯಲ್ಲಿ ಅಮ್ಮಂದಿರು ಅಡುಗೆ ಕೆಲಸದಲ್ಲಿ ನಿರತರಾದರೆ ಈ ಮೂವರು ತಮ್ಮ ತಮ್ಮ ಮನೆಗಳ ಎಮ್ಮೆಗಳನ್ನು ಮೇಯಿಸಲು ಹೋಗುವುದು ಪ್ರತಿ ಬಾನುವಾರದ ಕೆಲಸ.

ಬೆಳಿಗ್ಗೆ ಬೇಗ ಎದ್ದು ಸ್ನಾನ ಮಾಡಿ ಪೂಜಾ ಕಾರ‍್ಯಗಳನ್ನು ಮಾಡಿದ ನಂತರ ಅಮ್ಮ ಒಲೆಯ ಮುಂದೆ ಕುಳಿತು ಮಾಡುತ್ತಲಿದ್ದ ಬಿಸಿಬಿಸಿಯಾದ ರೊಟ್ಟಿ ಹಾಗೂ ಬೆಣ್ಣೆಯೊಂದಿಗೆ ಕೆಂಪು ಮೆಣಸಿನಕಾಯಿ ಚಟ್ನಿಯನ್ನು ಸೇರಿಸಿಕೊಂಡು ಮೂರು ನಾಲ್ಕು ರೊಟ್ಟಿಗಳನ್ನು ತಿಂದು ಬಿಟ್ಟರೆ ಅಂದಿನ ಬೆಳಗಿನ ಉಪಹಾರ ಮುಗಿಯಿತು. ಅಮ್ಮ ಕಟ್ಟಿಕೊಟ್ಟ ಬುತ್ತಿಯನ್ನು ಕೈಗೆತ್ತಿಕೊಂಡು ಎಮ್ಮೆಗಳನ್ನು ಕರೆದುಕೊಂಡು ಅರೆ ಕಾಡಿನತ್ತ ಹೊರಟುಬಿಡುತ್ತಿದ್ದರು. ಇವರ ಸ್ನೇಹಿತರು ಇವರನ್ನು ನೋಡಿ “ಇವರು ದಡ್ಡರು ಎಮ್ಮೆ ಕಾಯುವವರು. ದೊಡ್ಡವರಾದ ಮೇಲೆ ಮುಂದೆಯೂ ಎಮ್ಮೆ ಕಾಯುವುದು ಇವರ ಕೆಲಸ. ಎಂತ ದಡ್ಡರು ಇವರು, ಓದಿ ದೊಡ್ಡ ದೊಡ್ಡ ಆಪೀಸರ್ ಆಗಬೇಕು. ಅದನ್ನು ಬಿಟ್ಟು ಎಮ್ಮೆ ಕಾಯುವುದಕ್ಕೆ ಹೋಗುತ್ತಾರೆ” ಎಂದು ಹೀಯಾಳಿಸುತ್ತಿದ್ದರು. ಯಾವುದಕ್ಕೂ ತಲೆಕೆಡಿಸಿಕೊಳ್ಳದ ಈ ಮೂವರು ಗೆಳೆಯರು ತಮ್ಮಶ್ಟಕ್ಕೆ ತಾವು ಮಾತನಾಡಿಕೊಳ್ಳುತ್ತಾ ಎಮ್ಮೆಗಳೊಂದಿಗೆ ಕಾಡಿನತ್ತ ಹೊರಡುತ್ತಿದ್ದರು.

ಮದ್ಯಾಹ್ನದ ಸಮಯ ಬಿಸಿಲು ಹೆಚ್ಚಾಗಿದ್ದು ಎಮ್ಮೆಗಳೆಲ್ಲ ಸಾಕಶ್ಟು ಮೇಯ್ದಿದ್ದವು. ಪಕ್ಕದಲ್ಲೇ ಇದ್ದ ಕೆರೆಗೆ ಎಮ್ಮೆಗಳನ್ನೆಲ್ಲ ವಿಶ್ರಾಂತಿಗಾಗಿ ಗೆಳೆಯರು ಬಿಟ್ಟರು. ಗೆಳೆಯರೆಲ್ಲಾ ದಂಡೆಯ ಮೇಲೆ ಕುಳಿತು ಮಾತನಾಡುತ್ತಿದ್ದರು .“ಶಂಕರ, ನಿನಗೆ ಗೊತ್ತಾ, ನಮ್ಮ ಕ್ಲಾಸಿನಲ್ಲಿ ಓದುತ್ತಿರುವ ಕೋಮಲಾಗೆ ಮದುವೆಯಂತೆ. ಅವಳಿಗೆ ಇನ್ನೂ ಚಿಕ್ಕ ವಯಸ್ಸು ಈಗಲೇ ಮದುವೆ ಮಾಡ್ತಾರಂತೆ ಕಣೋ” ಎಂದು ಸೋಮ ಹೇಳಿದ. “ಅಯ್ಯೋ ಪಾಪ, ಅವಳು ಚೆನ್ನಾಗಿ ಓದುತ್ತಾಳಲ್ಲೋ ಇನ್ನು ಚಿಕ್ಕ ವಯಸ್ಸು. ಇಶ್ಟು ಬೇಗ ಯಾಕೆ ಮದುವೆ ಮಾಡುತ್ತಾರಂತೆ?” ಎಂದ ರಂಗ.

ಆಗ ಸೋಮ “ಅವಳ ತಂದೆಯ ಆರೋಗ್ಯ ಚೆನ್ನಾಗಿಲ್ಲ. ಹೆಚ್ಚು ದಿನ ಬದುಕುವುದಿಲ್ಲವಂತೆ. ಕೋಮಲಾಳ ಮದುವೆಯನ್ನು ನೋಡಿ ತಾನು ಸಾಯಬೇಕು” ಎಂದು ಅವಳ ತಂದೆ ಹಟ ಹಿಡಿದಿದ್ದಾರಂತೆ. ಅದಕ್ಕಾಗಿ ಅವಳ ಮದುವೆ ಮಾಡುತ್ತಾರಂತೆ. ಈಗಾಗಲೇ ಅವಳಿಗೆ ಹುಡುಗನನ್ನು ನೋಡಿದ್ದಾರೆ ಗೊತ್ತಾ, ನಮ್ಮ ಪಕ್ಕದ ಊರಿನಿಂದ ನಮ್ಮ ಶಾಲೆಗೆ ಬರುತ್ತಾನಲ್ಲ 8ನೇ ತರಗತಿ ಗಣೇಶ, ಅವನೇ ಕಣೋ” ಎಂದನು.

ಆಗ ರಂಗ “ಗಣೇಶನೂ ತುಂಬಾ ಚೆನ್ನಾಗಿ ಓದುತ್ತಾನೆ. ಅವರಿಬ್ಬರೂ ಚಿಕ್ಕವರು. ಬಾಲ್ಯ ವಿವಾಹ ಮಾಡುವುದು ತಪ್ಪಲ್ವಾ. ಅವರ ತಂದೆಯವರಿಗೆ ಗೊತ್ತಿಲ್ವಾ?”ಎಂದು ಕೇಳಿದ. “ಕೆಲವರು ಬುದ್ದಿ ಮಾತು ಹೇಳಿದರಂತೆ. ಆದರೆ ಅವರು ಯಾರ ಮಾತನ್ನು ಕೇಳಲಿಲ್ಲ. ಈ ಬೇಸಿಗೆಯಲ್ಲಿ ಮದುವೆ ಪಿಕ್ಸ್ ಅಂತೆ. ಯಾರಿಗೂ ಗೊತ್ತಾಗದ ಹಾಗೆ ಮದುವೆ ಮಾಡಿಬಿಡುತ್ತಾರಂತೆ” ಎಂದನು ಸೋಮ. “ಈ ಮದುವೆ ಆಗಬಾರದು. ಮದುವೆಯಾದರೆ ಅವರ ಬವಿಶ್ಯವೇ ಹಾಳಾಗುತ್ತದೆ. ಇದಕ್ಕೆ ನಾವೇನಾದರೂ ಮಾಡಲೇಬೇಕು” ಎಂದು ಒಟ್ಟಾಗಿ ತೀರ‍್ಮಾನಕ್ಕೆ ಬಂದರು.

ಮರುದಿನ ಶಾಲೆಗೆ ಬಂದ ಮೂವರು, ಗುರುಗಳ ಬಳಿ ವಿಶಯ ತಿಳಿಸಿದರು. ಆಗ ಗುರುಗಳು, “ಬೇರೆಯವರ ವಿಶಯ ನಿಮಗೆ ಯಾಕೆ? ಸಮಾಜದ ಹಿರಿಯರು ಅವರಿಗೆ ಈಗಾಗಲೇ ತಿಳಿಸಿ ಹೇಳಿದ್ದಾರೆ. ಆದರೆ ಅವರು ಯಾರ ಮಾತನ್ನು ಕೇಳುತ್ತಿಲ್ಲ. ನೀವು ಓದಿ, ಬೇರೆ ಚಿಂತೆ ಮಾಡಬೇಡಿ” ಎಂದು ಹೇಳಿ ಕಳಿಸಿದರು. ಆಗ ಶಂಕರ “ನಾವೇ ಒಂದು ಉಪಾಯ ಮಾಡಬೇಕು. ಇಲ್ಲದಿದ್ದರೆ ನಮ್ಮ ಗೆಳೆಯರ ಬಹುಶ್ಯ ಹಾಳಾಗುತ್ತದೆ. ನಮಗೆ ತೊಂದರೆಯಾಗದಂತೆ ಅವರ ಮದುವೆಯನ್ನು ತಪ್ಪಿಸಬೇಕು” ಎಂದನು. “ನಾವು ಈ ವಿಶಯವನ್ನು ಯಾರ ಮುಂದೆ ಚರ‍್ಚಿಸುವುದು ಬೇಡ. ನಮಗೆ ಏನು ಮಾಡಬೇಕೆಂದು ಅನಿಸುವುದೋ ಅದನ್ನು ಮಾಡೋಣ” ಎಂದು ಹೇಳಿ ತನ್ನ ಗೆಳೆಯರನ್ನು ಸಮಾದಾನ ಪಡಿಸಿದ.

ಅಂದು ಬಾನುವಾರ ಬಾಲ್ಯವಿವಾಹ ನಡೆಯುವ ಸಂದರ‍್ಬ. ಊರ ಹೊರಗಿನ ದೇವಸ್ತಾನದಲ್ಲಿ ಮದುವೆ ತಯಾರಿ ನಡೆದಿತ್ತು. ಯಾರಿಗೂ ವಿಶಯ ತಿಳಿಸದೆ ಹುಡುಗ ಹಾಗೂ ಹುಡುಗಿಯ ಕಡೆಯವರು ಮದುವೆ ತಯಾರಿ ನಡೆಸಿದ್ದರು. ರಂಗ ಸೋಮ ಶಂಕರ ಮೂವರು ದೇವಸ್ತಾನದಲ್ಲಿ ದೇವರ ಎದುರು ನಿಂತು, “ದೇವರೇ, ನಮ್ಮ ಗೆಳೆಯರನ್ನು ಹೇಗಾದರೂ ಮಾಡಿ ಕಾಪಾಡು. ಅವರ ಬವಿಶ್ಯವನ್ನು ಇಂದು ಹಾಳಾಗದಂತೆ ತಡೆದು ಕ್ರುಪೆ ಮಾಡು” ಎಂದು ಮನದಲ್ಲಿ ಪ್ರಾರ‍್ತಿಸುತ್ತಿದ್ದರು. ಅಶ್ಟೊತ್ತಿಗೆ ಎರಡು ಮೂರು ವಾಹನಗಳು ಅಲ್ಲಿಗೆ ದೌಡಾಯಿಸಿ ಬಂದವು. ಎಲ್ಲರಿಗೂ ಆಶ್ಚರ‍್ಯ. ಯಾರು ಎಂದು ವಿಚಾರಿಸಲು ಅವರೆಲ್ಲ ಬಾಲ್ಯವಿವಾಹವನ್ನು ತಡೆಯುವ ಅದಿಕಾರಿಗಳು ಎಂದು ಗೊತ್ತಾಯಿತು. ಅವರಿಗೆ ಹೇಗೋ ವಿಶಯ ತಿಳಿದಾಗಿತ್ತು. ಅದಿಕಾರಿಗಳು ಪಾಲಕರನ್ನು ಕರೆಯಿಸಿ ಬುದ್ದಿವಾದ ಹೇಳಿದರು. ಸರಕಾರದ ಕಾಯ್ದೆ ಕಾನೂನುಗಳ ಬಗ್ಗೆ ತಿಳಿ ಹೇಳಿದರು. ಬಾಲ್ಯವಿವಾಹ ಮಾಡುವುದರಿಂದ ವಿದಿಸಬಹುದಾದ ಶಿಕ್ಶೆಯ ಬಗ್ಗೆ ಹಾಗೂ ಮಕ್ಕಳಿಗೆ ಉಂಟಾಗುವ ತೊಂದರೆಗಳ ಬಗ್ಗೆ ತಿಳಿಸಿ, ಮಕ್ಕಳು ಪ್ರಾಪ್ತ ವಯಸ್ಸಿಗೆ ಬರುವವರೆಗೂ ಮದುವೆ ಮಾಡಬಾರದೆಂದು ತಿಳಿಸಿದರು. ಪಾಲಕರಿಗೆ ತಮ್ಮ ತಪ್ಪಿನ ಅರಿವಾಗಿ, ಅದಿಕಾರಿಗಳ ಮಾತಿನಂತೆ ಮಕ್ಕಳು ಪ್ರಾಪ್ತ ವಯಸ್ಸಿಗೆ ಬರುವವರೆಗೂ ಮದುವೆ ಮಾಡುವುದಿಲ್ಲವೆಂದು ಪ್ರಮಾಣ ಪತ್ರ ಬರೆದುಕೊಟ್ಟರು. ಹಾಗೂ ಅವರ ವಿದ್ಯಾಬ್ಯಾಸಕ್ಕೆ ತೊಂದರೆ ಆಗದಂತೆ ಎಚ್ಚರ ವಹಿಸುವುದಾಗಿ ಅದಿಕಾರಿಗಳಿಗೆ ಮಾತು ಕೊಟ್ಟರು.

ಮರುದಿನ ಶಾಲೆಯಲ್ಲಿ ಇದರ ಬಗ್ಗೆಯೇ ಚರ‍್ಚೆ. “ಯಾರೋ ಅದಿಕಾರಿಗಳಿಗೆ ಬಾಲ್ಯವಿವಾಹ ನಡೆಯುತ್ತಿರುವುದರ ಬಗ್ಗೆ ತಿಳಿಸಿದ್ದಾರೆ. ಒಳ್ಳೆಯ ಕೆಲಸವನ್ನೇ ಮಾಡಿದ್ದಾರೆ. ಅವರ ಬುದ್ದಿವಂತಿಕೆಯನ್ನು ಮೆಚ್ಚಲೇಬೇಕು” ಎಂದು ಗುರುಗಳು ಮಕ್ಕಳಿಗೆ ಹೇಳುತ್ತಿದ್ದರು. ಗುರುಗಳು ತಮ್ಮ ಕೋಣೆಗೆ ಬಂದಾಗ ರಂಗ, ಸೋಮ ಹಾಗೂ ಶಂಕರರು ಬಂದು ನಡೆದ ಗಟನೆಯ ಬಗ್ಗೆ ಹೇಳಿದರು. “ಗುರುಗಳೇ ಆಸ್ಪತ್ರೆ ಎದುರು ಬಿತ್ತಿ ಪತ್ರದಲ್ಲಿ ಬಾಲ್ಯವಿವಾಹ ಕುರಿತು ಬರೆಯಲಾಗಿತ್ತು. ಅದನ್ನು ನಾವು ಓದಿದೆವು. ಅದರಲ್ಲಿ ಅದಿಕಾರಿಗಳ ಪೋನ್ ಸಂಕ್ಯೆ ಇತ್ತು. ನಾವು ಅವರಿಗೆ ಕರೆ ಮಾಡಿ ವಿಶಯ ತಿಳಿಸಿದೆವು. ಕ್ಶಮಿಸಿ ಸರ್” ಎಂದರು. ಆಗ ಗುರುಗಳು “ಮಕ್ಕಳೇ ನಿಮ್ಮ ದೈರ‍್ಯವನ್ನು ಮೆಚ್ಚಲೇಬೇಕು. ನಿಮ್ಮನ್ನು ದಡ್ಡರು ಎನ್ನುವವರು ದಡ್ಡರು. ಸಮಾಜದಲ್ಲಿ ನಡೆಯುವ ಅನ್ಯಾಯಗಳ ವಿರುದ್ದ ಪ್ರತಿಬಟಿಸುವ ಗುಣ ಬೆಳೆಸಿಕೊಳ್ಳಬೇಕು. ನಿಮಗೆಲ್ಲ ನನ್ನ ಕಡೆಯಿಂದ ಒಂದು ಪುಟ್ಟ ಬಹುಮಾನ ಸ್ವೀಕರಿಸಿ” ಎಂದು ಬಹುಮಾನ ನೀಡಿದರು. ರಂಗ, ಸೋಮ ಹಾಗೂ ಶಂಕರ ತಮ್ಮ ಈ ಕೆಲಸದ ಬಗ್ಗೆ ಹೆಮ್ಮೆಪಟ್ಟರು.

(ಚಿತ್ರ ಸೆಲೆ: pixabay.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks