ದಿಗಿಲು ಹುಟ್ಟಿಸಿದ ಆ ಇರುಳು!

 ಬಾಸ್ಕರ್ ಡಿ.ಬಿ.

ಅದೊಂದು ರಾತ್ರಿ ತಾಳಿಕೋಟೆಯ ಆಸ್ಪತ್ರೆಯ ಕಟ್ಟಿಗೆ ಬೆಂಚಿನಮೆಲೆ ಕುಳಿತಿದ್ದೆ. ಸಮಯ ಸುಮಾರು 11 ಗಂಟೆಯಾದ್ರು ಅದ್ಯಾಕೊ ನಿದ್ದೆ ಬಂದಿರ‍್ಲಿಲ್ಲಾ. ಡೇ ಕೇರ್ ಸೆಂಟರ್ ಆಗಿದ್ರಿಂದ ರಾತ್ರಿ ಯಾರು ಇರ‍್ತಾ ಇರಲಿಲ್ಲ. ಚುಮು ಚುಮು ಚಳಿ ಬೇರೆ ಇತ್ತು. ನಿಶ್ಯಬ್ದ ತನ್ನಶ್ಟಕ್ಕೆ ತಾನೆ ಹೊತ್ತನ್ನು ಮುಂದೆ ತಳ್ಳುತ್ತಿತ್ತು.

ಮೆಟ್ಟಿಲ ಬಳಿಯಿಂದ ಟಕ್ ಟಕ್ ಅಂತ ಯಾರೋ ಬರುತ್ತಿರುವ ಶಬ್ದ ಕೇಳಿಸ್ತು. ಸ್ವಲ್ಪ ಮುಂದೆ ಹೋಗಿ ಮೆಟ್ಟಿಲ ಕಡೆಗೆ ನೋಡಿದೆ. ಅದೊಂದು ಅದ್ಬುತವೇ ಆಗಿತ್ತು! ದೇವಲೋಕದ ಕಿನ್ನರಿಯನ್ನ ನೋಡಿದಂಗಾಯ್ತು. ಎದುರಿಗೆ ಬಂದವಳೇ ನನ್ನ ಕಡೆಗೆ ಕೈ ಬೀಸಿದಳು. ಯಾರ ಅಪ್ಪಣೆಯನ್ನೂ ಕೇಳದೆ ನನ್ನ ಕೈ ತನ್ನಶ್ಟಕ್ಕೆ ತಾನೇ ಬೀಸಿ ಅವಳಿಗೆ ಮರುನುಡಿದಿತ್ತು. ಗಾಳಿ ಬೀಸಿದಂತೆ ಸಮುದ್ರದ ಅಲೆಯಂತೆ ತೇಲಾಡ್ತಿರುವ ಮುಂಗುರುಳು, ಹಾಗೆಯೇ ಚಂದ್ರನನ್ನು ನಾಚಿಸುವ ಸೊಬಗು ಅವಳದು. ತನ್ನ ಮುಂಗುರುಳನ್ನ ತೋರು ಬೆರಳಿನಿಂದ ಸರಿಪಡಿಸಿಕೊಳ್ಳುತ್ತಾ ಮುಗುಳ್ನಗೆಯಿಂದ “ಒಳಗಡೆ ಯಾರೂ ಇಲ್ವ?” ಅಂತ ಕೇಳಿದ್ಲು. “ಇಲ್ಲಾ ಒಳಗಡೆ ಯಾರೂ ಇಲ್ಲಾ, ಏನಾಗ್ಬೇಕಿತ್ತು ಹೇಳಿ?” ಅಂತ ಕೇಳ್ದೆ. ಅದಕ್ಕವಳು “ಕಾಲಿಗೆ ಗಾಯ ಅಗಿದೆ ಸ್ವಲ್ಪ ಔಶದಿ ಬೇಕಾಗಿತ್ತು” ಎಂದಳು. ಸೌಂದರ‍್ಯಕ್ಕೆ ಸವಾಲೊಡ್ಡುವ ಸೌಂದರ‍್ಯ ಅವಳದು ಒಂದು ಕ್ಶಣ ಮಾರುಹೋದೆ. ಅವಳಿಗೆ ಸನ್ನೆ ಮಾಡಿ ಚೇರ್ ಮೇಲೆ ಕೂತ್ಕೊಳ್ಳೊಕೆ ಹೇಳಿ, ಲ್ಯಾಬ್ ಕೋಣೆಯಲ್ಲಿದ್ದ ಔಶದಿ ಮತ್ತು ಮುಲಾಮಿನ ಪೆಟ್ಟಿಗೆ ತರಲು ಒಳಗಡೆ ಹೋದೆ.

ಕರೆಂಟಿನ ಬೆಳಕಿಗೆ ಕಿಟಕಿಯ ಗಾಜುಗಳು ಕನ್ನಡಿಯಂತೆ ಕಾಣಿಸ್ತಿದ್ವು, ಅದರಲ್ಲಿ ನನ್ನನ್ನೊಮ್ಮೆ ನೋಡಿಕೊಂಡೆ. ಚಾರ‍್ಮಾಡಿ ರಸ್ತೆಯಂತೆ ನನ್ನ ಬೈತಲೆ ಕಂಡಿತು. ಮಹಿಶ್ಮತಿ ವೀರರಾಜ ತನ್ನ ಕತ್ತಿಯನ್ನು ಹೊರತೆಗೆದಂತೆ ಹಿಂದಿನ ಜೇಬಿನಿಂದ ನನ್ನ ಬಾಚಣಿಕೆಯನ್ನು ಹೊರತೆಗೆದು ಕೂದಲನ್ನ ಸರಿಪಡಿಸ್ಕೊಂಡೆ. ಬೇಗ ಬನ್ನಿ ಅನ್ನೊ ಶಬ್ದ ಕೇಳಿಸ್ತು. ಹೋಗ್ಬಿಡ್ತಳೇನೊ ಅನ್ನೊ ಆತಂಕದಿಂದ ಓಡೋಡಿ ಬಂದೆ. ನಿಮ್ಮ ಕಾಲನ್ನ ತೋರಿಸಿ ಅಂತಾ ಕೆಳ್ಗಡೆ ಕೂತ್ಕೊಂಡೆ. ಆಶ್ಚರ‍್ಯವೇ ಕಾದಿತ್ತು ಕಾಲುಗಳೆ ಕಾಣಸ್ತಿಲ್ಲಾ! ದಿಟ್ಟಿಸಿ ನೋಡ್ದೆ, ಕಣ್ಣುಗಳಿಗೆ ಏನೋ ಆಗಿಬಿಟ್ಟಿದೆ ಅನ್ನೊ ಹಾಗಾಯ್ತು. ಸರಿಯಾಗಿ ಅದೇ ಸಮಯಕ್ಕೆ ಕರೆಂಟ್ ಕೈ ಕೊಡ್ತು. ಆಸ್ಪತ್ರೆ ಹಿಂದ್ಗಡೆ ಇದ್ದ ಇನ್ವರ‍್ಟರ್ ಬಳಿ ಓಡಿಹೋದೆ. ಇನ್ವರ‍್ಟರ್ ಬಟನ್ ಟ್ರಿಪ್ ಆಗಿದ್ದನ್ನ ಸರಿಪಡಿಸಿ, ಅದೇ ವೇಗದಲ್ಲಿ ಓಡಿ ಬಂದೆ. ಮತ್ತೆ ಕಾಲುಗಳ ಕಡೆಗೆ ಕಣ್ಣು ಹಾಯಿಸಿದರೆ ಆಗಲೂ ಕಾಣಸ್ಲಿಲ್ಲಾ. ಬಯದಿಂದ ಮೆಲ್ಲಗೆ ಅವಳ ಮುಕ ನೋಡಿದೆ ಆ ಮುಕದಲ್ಲಿ ಅದೇ ಮುಗುಳ್ನಗು. ಅದನ್ನ ನೋಡಿ ನನ್ನ ಹಣೆಯ ಮೇಲೆ ಬೆವರಿನ ಬುಗ್ಗೆ ಚಿಮ್ಮಿತು. “ಮೇಡಮ್ ನಿಮ್ಮ ಕಾಲ್ಗಳೆ ಕಾಣಸ್ತಿಲ್ಲಾ!” ಅಂದೆ. “ಇಲ್ಲೆ ಇದಾವೆ ನೋಡ್ರಿ, ಬೇಗ ಔಶದಿ ಹಾಕ್ರಿ ಸಾಯೋವಶ್ಟು ನೋವಾಗ್ತಿದೆ” ಅಂತ ಹೇಳ್ತಿದ್ಲು.

ಬಯದ ಬಾಗಿಲಲ್ಲಿ ಬಂದು ನಿಂತಿದಿನಿ ಅಂತಾ ಗೊತ್ತಾಯ್ತು. ತೊದಲು ನುಡಿಯಿಂದ ಹೇಳ್ದೆ “ದಯವಿಟ್ಟು ನನ್ನ ಕ್ಶಮಿಸಿ ಮೇಡಮ್ ನಿಮ್ಮ ಸೌಂದರ‍್ಯಕ್ಕೆ ಮರುಳಾಗಿ ಈ ರೀತಿ ನಡ್ಕೊಂಡೆ. ನಾನೊಬ್ಬ ಅಕೌಂಟರ್, ಡೇ ಕೇರ್ ಸೆಂಟರ್ ಆಗಿದ್ರಿಂದ ರಾತ್ರಿ ಹೊತ್ತಿನಲ್ಲಿ ಇಲ್ಲಿ ಯಾವ ವಾರ‍್ಡಬಾಯ್ ನೂ ಇರೋದಿಲ್ಲಾ” ಅಂದೆ. ಸರಿ ಬಿಡಿ ಹಾಗಾದ್ರೆ ನಾಳೆ ಬರ‍್ತಿನಿ ಅಂತಾ ಹೊರಟ್ಬಿಟ್ಲು. ಬಯ ಅಂತು ಕಡಿಮೆ ಆಗ್ಲಿಲ್ಲಾ ಇಡೀ ರಾತ್ರಿ ನಿದ್ದೇನೆ ಬರ‍್ಲಿಲ್ಲ.

ಮರುದಿನ ಬೆಳಗ್ಗೆ ತಿಂಡಿ ತಿನ್ನೋಕೆ ಹೋಟೆಲ್ಲಿಗೆ ಹೋಗಿದ್ದೆ. ನನ್ನೆದುರಿಗಿನ ಗೋಡೆ ಮೇಲೆ ಒಂದು ಪೋಸ್ಟರ್ ಅಂಟಿಸಿದ್ರು, ಅದನ್ನೆ ದಿಟ್ಟಿಸಿ ನೋಡ್ಡೆ. ಅದು ಯಾರದ್ದೋ ಶ್ರದ್ದಾಂಜಲಿಯ ಪೋಸ್ಟರ್ ಆಗಿತ್ತು. ಮತ್ತೆ ಬಯ ಶುರುವಾಯಿತು. ಅದರಲ್ಲಿರುವ ಪೋಟೊ ನಿನ್ನೆ ರಾತ್ರಿ ಆಸ್ಪತ್ರೆಗೆ ಬಂದಿದ್ದ ಆ ಹುಡುಗಿಯದ್ದೇ ಆಗಿತ್ತು. ಬಯದ ಜೊತೆಗೆ ಕುತೂಹಲವೂ ಉಂಟಾಯಿತು. ಹೋಟೆಲ್ಲಿನ ಮಾಲಿಕ ಪರಿಚಯಸ್ತನೆ ಆಗಿದ್ರಿಂದ ಎಲ್ಲಾ ವಿಶಯವನ್ನು ತಿಳ್ಕೊಂಡೆ. ಅವಳು ಇದೇ ದಿನಕ್ಕೆ ಸರಿಯಾಗಿ ಮೂರು ವರ‍್ಶದ ಹಿಂದೆ ಸತ್ತು ಹೋಗಿದ್ದಾಳೆಂದು ಗೊತ್ತಾಯ್ತು. ಕಣ್ಣಲ್ಲಿ ಕಂಬನಿಯೊಂದು ಇಣುಕಿತ್ತು. ಅವಳಿಗೆ ಮನದಲ್ಲೆ ಶ್ರದ್ದಾಂಜಲಿ ತಿಳಿಸಿದೆ. ಹಾಗಾದ್ರೆ ನಿನ್ನೆ ರಾತ್ರಿ ಆಸ್ಪತ್ರೆಗೆ ಬಂದಿದ್ದು ದೆವ್ವಾನಾ? ಇಲ್ಲಾ ನಿಜವಾಗ್ಲು ಅವಳೇನಾ? ಮನಸ್ಸಿನಲ್ಲಿ ಮತ್ತೆ ಗೊಂದಲ ಶುರುವಾಯ್ತು.

ಮತ್ತದೇ ಟಕ್ ಟಕ್ ಸದ್ದು ದೂರದಲ್ಲೆಲ್ಲೋ ಕೇಳಿದಂತಾಯಿತು. ಸದ್ದು ಜೋರಾಯಿತು! ಹತ್ತಿರದಲ್ಲೇ ಕೇಳುತ್ತಿದೆ. ಕಣ್ಣುಬಿಟ್ಟು ನೋಡಿದೆ. ಇನ್ನೂ ಹಾಸಿಗೆಯಲ್ಲೇ ಇದ್ದೇನೆ! ಕಣ್ಣುಗಳು ಒದ್ದೆಯಾಗಿವೆ. ಅತ್ತ ಕೆಲಸದಾಕೆ ಬಂದು ಬಾಗಿಲನ್ನು ಟಕ್ ಟಕ್ ಎಂದು ಬಡಿಯುತ್ತಿದ್ದಾಳೆ. ಕೂಡಲೆ ಹಾಸಿಗೆಯಿಂದ ಎದ್ದೆ. ನಾನು ಇಶ್ಟು ಹೊತ್ತು ಕಂಡದ್ದು ಕನಸು ಎಂದು ನಂಬೋಕೆ ಆಗದೆ, ಬಾಗಿಲನ್ನು ತೆರೆಯಲು ಹೆಜ್ಜೆಹಾಕಿದೆ.

(ಚಿತ್ರ ಸೆಲೆ: maxpixel)

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.