ಗುರುತ್ವಕ್ಕೆ ಸಡ್ಡು ಹೊಡೆದ ಕಿಟುಲಿನಿ ಬೆಟ್ಟದ ರಸ್ತೆ!
– ಕೆ.ವಿ.ಶಶಿದರ.
ಆತ ಬೆಟ್ಟದ ಮೇಲಕ್ಕೆ ತನ್ನ ಗಾಡಿಯನ್ನು ಓಡಿಸುತ್ತಿದ್ದ. ಏರು ಮುಕವಾಗಿ ಹೋಗುತ್ತಿದ್ದುದರಿಂದ ಗಾಡಿಯ ಇಂಜಿನ್ ಬಿಸಿಯಾಯಿತು. ಇಂಜಿನ್ ಅನ್ನು ತಣ್ಣಗಾಗಿಸಲು ಬೇಕಾಗಿದ್ದ ನೀರನ್ನು ತರಲು ಗಾಡಿಯನ್ನು ಬದಿಯಲ್ಲಿ ನಿಲ್ಲಿಸಿ ಹೊರಟ. ನೀರನ್ನು ಹೊತ್ತು ತಂದಾಗ ಅವನಿಗೆ ಆಶ್ಚರ್ಯ ಕಾದಿತ್ತು. ತಾನು ನಿಲ್ಲಿಸಿದ್ದ ಸ್ತಳದಿಂದ ಗಾಡಿ ಸುಮಾರು 50 ಮೀಟರ್ ಅಶ್ಟು ದೂರ ಕ್ರಮಿಸಿತ್ತು. ಅದೂ ಏರುಮುಕವಾಗಿ. ತನ್ನನ್ನು ತಾನೇ ನಂಬದಾದ. ಈ ಅಪರೂಪದ ವಿದ್ಯಮಾನಕ್ಕೆ ಆತ ನಿಬ್ಬೆರಗಾದ. ಮತ್ತೊಮ್ಮೆ, ಮಗದೊಮ್ಮೆ ಗಾಡಿಯನ್ನು ಹಿಂದಕ್ಕೆ ತಂದು ಅದೇ ಜಾಗದಲ್ಲಿ ನಿಲ್ಲಿಸಿ ಪರೀಕ್ಶಿಸಿ ನೋಡಿದ. ಮತ್ತೂ ಹಾಗೆಯೇ, ಗಾಡಿ ಏರುಮುಕವಾಗಿಯೇ ಚಲಿಸಿತು. ಜಾಗದ ಮಹಿಮೆಯೇ ಈ ವಿದ್ಯಮಾನಕ್ಕೆ ಕಾರಣ ಎಂದು ಕೊನೆಗೆ ತೀರ್ಮಾನಿಸಿದ.
ಈ ಅಪೂರ್ವ ಗಟನೆ ನಡೆದದ್ದು ಕೀನ್ಯಾದ ಕಿಟುಲುನಿ ಬೆಟ್ಟದಲ್ಲಿ. ಒಂದು ಚದರ ಕಿಲೋ ಮೀಟರ್ ವಿಸ್ತಾರವಾಗಿರುವ ಬೆಟ್ಟದ ಮೇಲಿನ ರಸ್ತೆಯ ಆ ಜಾಗದ ಪ್ರಾರಂಬವನ್ನು ಪ್ರಯಾಣಿಕರ ಕುತೂಹಲ ತಣಿಸಲು ಗುರುತು ಮಾಡಲಾಗಿದೆ. ಈ ರಸ್ತೆಯಲ್ಲಿ ಹಾದು ಹೋಗುವ ಪ್ರಯಾಣಿಕರು ಈ ವಿಸ್ಮಯವನ್ನು ಪರೀಕ್ಶಿಸಬಹುದು. ಇಲ್ಲಿ ಗಾಡಿಗಳು ಗಂಟೆಗೆ 5 ಕಿಲೋ ಮೀಟರ್ ಅಂದಾಜು ವೇಗದಲ್ಲಿ ಏರುಮುಕವಾಗಿ ಚಲಿಸುವುದನ್ನು ನೋಡಿ ಆನಂದಿಸಬಹುದು.
ಈ ವಿದ್ಯಮಾನ ನಡೆಯುವುದು ಗುರುತಿಸಿದ ಸ್ತಳದಿಂದ ಒಂದು ಕಿಲೋಮೀಟರ್ ದೂರದವರೆಗೆ ಮಾತ್ರ. ರಸ್ತೆ ಇಲ್ಲಿ ಹೆಚ್ಚು ಏರುಮುಕವಾಗಿದೆ. ಗುರುತಿಸಿದ ಜಾಗದಲ್ಲಿ ಚೆಂಡನ್ನು ಇಟ್ಟರೆ ಅತವಾ ನೀರನ್ನು ಸುರಿದರೆ ಅತವಾ ನೀರಿನ ಬಾಟಲ್ ಇಟ್ಟರೆ ಎಲ್ಲವೂ ಏರುಮುಕವಾಗಿ ಹೋಗುತ್ತವೆ. ನಾವಂದುಕೊಂಡಂತೆ ಇಳಿಮುಕವಾಗಿ ಅಲ್ಲ.
ಅನಾದಿ ಕಾಲದಲ್ಲಿ ಈ ಪ್ರದೇಶವನ್ನು ಕಿವುಟಿನಿ ಎಂದು ಕರೆಯಲಾಗುತ್ತಿತ್ತು. ಡಾಂಬರು ರಸ್ತೆ ಆಗ ಇರಲಿಲ್ಲ. ಈ ಬಗೆಯನ್ನು ಸುತ್ತಮುತ್ತಲಿನ ಹಳ್ಳಿಯ ಜನ ತಮ್ಮದೇ ಆದ ರೀತಿಯಲ್ಲಿ ಬಣ್ಣಿಸುತ್ತಾರೆ. ಬಹಳ ವರ್ಶಗಳ ಹಿಂದೆ ಇಲ್ಲಿನವರು ಈ ಸ್ತಳದಲ್ಲಿ ತಮ್ಮ ಪೂರ್ವಜರನ್ನು ಒಲಿಸಿಕೊಳ್ಳಲು ಬಲಿ ಕೊಡುತ್ತಿದ್ದರಂತೆ. ಬಲಿಯಿಂದ ಅವರನ್ನು ತ್ರುಪ್ತಿಪಡಿಸಿ ನಂತರ ಮಳೆ ಬೆಳೆ ಕೊಡುವಂತೆ ಹಾಗೂ ದುಶ್ಟ ಶಕ್ತಿಗಳನ್ನು ನಾಶಮಾಡುವಂತೆ ಕೋರುತ್ತಿದ್ದರಂತೆ. ಬಲಿ ನೀಡಲು ಬಳಸುತ್ತಿದ್ದ ಬಲಿಪೀಟದಲ್ಲಿ ವಿಶೇಶ ಆಚರಣೆಗಳನ್ನು ನಡೆಸುತ್ತಿದ್ದರಿಂದ ಅದನ್ನು ಪವಿತ್ರ ಸ್ತಳವೆಂದು ಪರಿಗಣಿಸಿ ಪೂಜಿಸುತ್ತಿದ್ದರಂತೆ.
ಮಚಕೊಸ್ನಿಂದ ಕಲೊಲೆನಿ ಕಡೆಗೆ ರಸ್ತೆ ಸಂಪರ್ಕ ಕಲ್ಪಿಸುವಾಗ ಅದು ಈ ಬೆಟ್ಟದ ಮುಕಾಂತರ ಹಾದು ಹೋಗಬೇಕಾಗಿ ಬಂತು. ಹಾಗಾಗಿ ವಿದಿಯಿಲ್ಲದೆ ಸ್ತಳೀಯರು ತಾವು ನಡೆಸುತ್ತಿದ್ದ ಆಚರಣೆಯನ್ನು ಬೇರೆ ಸ್ತಳಕ್ಕೆ ಅಂದರೆ ಬೆಟ್ಟದ ಕೆಳಕ್ಕೆ ಸ್ತಳಾಂತರ ಮಾಡಿಕೊಂಡರಂತೆ. ನೂರಾರು ವರ್ಶಗಳ ಪೂಜೆ ಪುನಸ್ಕಾರಗಳ ಆಚರಣೆಯಿಂದ ಈ ಬಲಿ ಪೀಟವಿದ್ದ ಸ್ತಳಕ್ಕೆ ಅತಿಮಾನುಶ ಶಕ್ತಿ ಪ್ರಾಪ್ತವಾಯಿತು. ಅದರಿಂದಾಗಿ ವಾಹನಗಳು ತಂತಾನೆ ಏರುಮುಕವಾಗಿ ಚಲಿಸುವುದು ಎಂಬುದು ಹಳ್ಳಿಗರ ವ್ಯಾಕ್ಯಾನ.
ಇಲ್ಲಿ ಹರಿದಾಡುತ್ತಿರುವ ಮತ್ತೊಂದು ಕತೆಯಂತೆ ಕ್ಯಾಲೊ ಮತ್ತು ಮ್ವಿಲು ಎಂಬಿಬ್ಬರು ಒಬ್ಬಾಕೆಯನ್ನೇ ಮದುವೆಯಾಗಿ ಪತ್ನಿಯಾಗಿ ಸ್ವೀಕರಿಸಿದ್ದರಂತೆ. ಅವರಿಬ್ಬರ ಮನೆಗಳು ಬೆಟ್ಟದ ಮೇಲಿಂದ ಹರಿಯುತ್ತಿದ್ದ ಸಣ್ಣ ನದಿಯ ಆಚೀಚೆ ದಡದಲ್ಲಿದ್ದವಂತೆ. ಪ್ರತಿದಿನ ಆಕೆ ನದಿಯಲ್ಲಿ ಮಿಂದೆದ್ದ ನಂತರ ಯಾವ ಕಡೆ ಹೋಗಿ ಆ ದಿನದ ರಾತ್ರಿ ಕಳೆಯಬೇಕೆಂದು ತೀರ್ಮಾನಿಸುತ್ತಿದ್ದಳಂತೆ. ಯಾವುದೇ ಬಿನ್ನಾಬಿಪ್ರಾಯಗಳಿಗೆ ಆಸ್ಪದ ಕೊಡದೆ ಆಕೆ ಇಬ್ಬರನ್ನೂ ನಿಬಾಯಿಸಿಕೊಂಡು ಹೋಗುತ್ತಿದ್ದಳಂತೆ. ಅವರಿಬ್ಬರ ಸಾವಿನ ನಂತರ ಆಕೆ ತನ್ನ ಬಂದುಗಳ ಜೊತೆ ಹೋಗಿ ನೆಲೆಸಿದಳಂತೆ. ಕ್ಯಾಲೊ ಮತ್ತು ಮ್ವಿಲುವನ್ನು ಮಣ್ಣು ಮಾಡಿದ್ದ ಸಮಾದಿ ಸ್ತಳ ಅಲ್ಲೇ ಇದೆ. ಅವರುಗಳು ಆ ನಶ್ವರ ಸ್ತಿತಿಯಲ್ಲೂ ಆಕೆಯನ್ನು ಪಡೆಯಲು ಹೆಣಗಾಡುತ್ತಿದ್ದು, ಅದರಿಂದ ಹೊರಹೊಮ್ಮಿದ ಅತಿಮಾನುಶ ಶಕ್ತಿ ಈ ವಿದ್ಯಮಾನಕ್ಕೆ ಕಾರಣವಂತೆ.
ಕಿಟುಲಿನಿ ಕೀನ್ಯಾದ ಪೂರ್ವ ಪ್ರಾಂತ್ಯದಲ್ಲಿದ್ದು ಮಚಕೊಸ್ನಿಂದ 12 ಕಿಲೋಮೀಟರ್ ದೂರದಲ್ಲಿದೆ. ಅನೇಕ ಪ್ರವಾಸಿಗರು ಇಲ್ಲಿನ ಅಸಾಮಾನ್ಯ ವಿಚಿತ್ರ ಸಂಗತಿಗೆ ಸಾಕ್ಶಿಯಾಗಲು ಮೈಲಿಗಟ್ಟಲೇ ಪ್ರಯಾಣಿಸಿ ಬರುತ್ತಾರೆ. ಬಹುಶಹ ಕಾರು ಯಾರ ಸಹಾಯವೂ ಇಲ್ಲದೆ ತಂತಾನೆ ಬೆಟ್ಟ ಹತ್ತುವ ಏಕೈಕ ಸ್ತಳ ಪ್ರಪಂಚದಲ್ಲಿ ಇದೊಂದೇ ಇರಬಹುದು.
ಮ್ಯುಟಿಟುನಿ ಮತ್ತು ಕಿವುಟಿನಿ ನಂತರದ ಡಾಂಬರು ರಸ್ತೆಯಲ್ಲಿ ಈ ವಿಸ್ಮಯಕಾರಕ ಕಿಟುಲುನಿ ಇದೆ. ಅನೇಕ ತಿರುವುಗಳಿಂದ ಕೂಡಿರುವ, ಸುತ್ತುಬಳಸಿನ ಈ ದುರ್ಗಮ ರಸ್ತೆಯಲ್ಲಿ ಚಾಲನೆ ಮಾಡುವುದು ಸಾಹಸವೇ ಸರಿ. ಬೆಟ್ಟ ಅರ್ದ ಹತ್ತುವವರೆಗೂ ಯಾವುದೇ ರೀತಿಯ ವಿಸ್ಮಯ ಕಾಣುವುದಿಲ್ಲ. ನಂತರ ಈ ಸ್ತಳಕ್ಕೆ ಗಾಡಿ ಬಂದ ಕೂಡಲೇ ಯಾವುದೇ ವೇಗದಲ್ಲಿ ಚಲಿಸುತ್ತಿದ್ದರೂ ಜಗ್ಗಿದಂತಾಗುತ್ತದೆ ಮತ್ತು ವೇಗ ಸೂಚಕಕ್ಕೂ ತಿಳಿಯದಂತೆ ವೇಗ ಮತ್ತೂ ಹೆಚ್ಚುತ್ತದೆ.
ಈ ರಸ್ತೆ ಬಹಳ ವರ್ಶಗಳಿಂದ ಉಪಯೋಗದಲ್ಲಿದ್ದರೂ ಸಹ ಈ ವಿಸ್ಮಯಕಾರಕ ಗಟನೆ ಯಾವಾಗ ಪ್ರಾರಂಬವಾಯಿತು ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. ಆ ಸ್ತಳದಲ್ಲಿ ಬಿಳಿ ನಿಲುವಂಗಿ ದರಿಸಿದ ವಿಚಿತ್ರ ವ್ಯಕ್ತಿಗಳು ಓಡಾಡುವುದನ್ನು ಕಂಡಿರುವುದಾಗಿಯೂ, ಅವರು ಕಂಡಶ್ಟೇ ವೇಗವಾಗಿ ಕಣ್ಮರೆಯಾಗುತ್ತಾರೆ ಎಂಬುದಾಗಿ ಅಲ್ಲಿನ ಹಳ್ಳಿಗರು ಹೇಳುತ್ತಾರೆ. ಇದು ನಂಬಿಕೆಗೆ ಅರ್ಹವಲ್ಲದ ಕತೆ. ಈ ಗಟನೆಯ ಬಗ್ಗೆ ತಜ್ನರು ಸಂಶಯ ವ್ಯಕ್ತ ಪಡಿಸಿದ್ದಾರೆಯೇ ಹೊರತು ಅದರ ನಿಗೂಡತೆಯ ಹಿಂದಿನ ವೈಜ್ನಾನಿಕ ಕಾರಣದ ಸಂಶೋದನೆ ನಡೆಸಿಲ್ಲ. ಅದ್ದರಿಂದ ಇದು ವಿಸ್ಮಯಕಾರಕ ಗಟನೆಯಾಗಿಯೇ ಉಳಿದಿದೆ.
(ಚಿತ್ರ ಸೆಲೆ: wikipedia)
ಇತ್ತೀಚಿನ ಅನಿಸಿಕೆಗಳು