ಚಂದಿಮರಸನ ವಚನಗಳ ಓದು

– ಸಿ.ಪಿ.ನಾಗರಾಜ.

ಚಂದಿಮರಸನು ಹನ್ನೆರಡನೆಯ ಶತಮಾನದಲ್ಲಿ ಕನ್ನಡ ನಾಡಿನಲ್ಲಿದ್ದ ಒಬ್ಬ ಶಿವಶರಣ. ಈತನ ಬಗ್ಗೆ ಸಾಹಿತ್ಯಚರಿತ್ರಕಾರರು ಈ ಕೆಳಕಂಡ ಸಂಗತಿಗಳನ್ನು ನಮೂದಿಸಿದ್ದಾರೆ:

ಹೆಸರು: ಚಂದಿಮರಸ

ಕಾಲ : ಕ್ರಿ.ಶ.1160.

ಊರು: ಚಿಮ್ಮಲಿಗೆ ಗ್ರಾಮ, ಬೀಳಗಿ ತಾಲ್ಲೂಕು, ಬಾಗಲಕೋಟೆ ಜಿಲ್ಲೆ.

ಕಸುಬು: ತಿಳಿದು ಬಂದಿಲ್ಲ.

ದೊರೆತಿರುವ ವಚನಗಳು: 157

ವಚನಗಳ ಅಂಕಿತನಾಮ: ಸಿಮ್ಮಲಿಗೆಯ ಚೆನ್ನರಾಮಾ.

=================================================

ಬಟ್ಟೆಗೊಂಡು ಹೋಗುತಿಪ್ಪ ಮನುಜನೊಬ್ಬ
ಹುಲಿ ಕಾಡುಗಿಚ್ಚು ರಕ್ಕಸಿ ಕಾಡಾನೆಗಳು
ನಾಲ್ಕೂ ದೆಸೆಯಲಟ್ಟುತ ಬರೆ
ಕಂಡು ಭಯದಿಂದ ಹೋಗ ದೆಸೆಯಿಲ್ಲದೆ
ಬಾವಿಯ ಕಂಡು ತಲೆಯನೂರಿ ಬೀಳುವಲ್ಲಿ
ಹಾವ ಕಂಡು ಇಲಿಗಡಿದ ಬಳ್ಳಿಯ ಹಿಡಿದು ನಿಲೆ
ಜೇನುಹುಳು ಮೈಯನೂರುವಾಗ
ಮೂಗಿನ ತುದಿಯಲೊಂದು ಹನಿ ಮಧು ಬಂದು ಬೀಳೆ
ಆ ಮಧುವ ಕಂಡು ಹಿರಿದಪ್ಪ ದುಃಖವೆಲ್ಲವೆಲ್ಲವ ಸೈರಿಸಿ
ನಾಲಗೆಯ ತುದಿಯಲ್ಲಿ ಆ ಮಧುವ ಸೇವಿಸುವಂತೆ
ಈ ಸಂಸಾರಸುಖ ವಿಚಾರಿಸಿ ನೋಡಿದಡೆ ದುಃಖದಾಗರ
ಇದನರಿದು ಸಕಲ ವಿಷಯಂಗಳಲ್ಲಿ ಸುಖವಿಂತುಟೆಂದು
ನಿರ್ವಿಷಯನಾಗಿ ನಿಂದ ನಿಲವು ನೀನೇ
ಸಿಮ್ಮಲಿಗೆಯ ಚೆನ್ನರಾಮಾ.

ಈ ಜಗತ್ತಿನಲ್ಲಿ ಹುಟ್ಟಿ ಬೆಳೆದು ಬಾಳಿ ಸಾಯುತ್ತಿರುವ ಮಾನವರಲ್ಲಿ ಬಹುತೇಕ ಮಂದಿಯ ಬದುಕಿನಲ್ಲಿ ನಾನಾ ರೀತಿಯ ಸಂಕಟ/ವೇದನೆ/ಸೋಲು/ಅಪಮಾನ/ನೋವಿನ ಪ್ರಸಂಗಗಳೇ ಹೆಚ್ಚಾಗಿದ್ದರೂ , ಇವುಗಳ ನಡುವೆಯೇ ತಮ್ಮ ಜೀವನದಲ್ಲಿ ದೊರೆಯುವ ಒಲವು ನಲಿವಿನ ಅವಕಾಶವನ್ನು ಕಳೆದುಕೊಳ್ಳದೆ, ಅದನ್ನು ಪಡೆದು ಆನಂದಪಡುವಂತಹ ಆಸಕ್ತಿಯನ್ನು ಮನದಲ್ಲಿ ಹೊಂದಿರಬೇಕೆಂಬುದನ್ನು ರೂಪಕ/ಶಬ್ದಚಿತ್ರವೊಂದರ ಮೂಲಕ ಈ ವಚನದಲ್ಲಿ ಹೇಳಲಾಗಿದೆ.

( ಬಟ್ಟೆ+ಕೊಂಡು; ಬಟ್ಟೆ=ದಾರಿ/ಹಾದಿ/ಮಾರ‍್ಗ; ಕೊಂಡು=ಹಿಡಿದು; ಹೋಗುತ+ಇಪ್ಪ; ಹೋಗು=ನಡೆ/ತೆರಳು/ಸಾಗು; ಇಪ್ಪ=ಇರುವ; ಮನುಜನ್+ಒಬ್ಬ; ಮನುಜ=ಮಾನವ/ವ್ಯಕ್ತಿ; ಬಟ್ಟೆಗೊಂಡು ಹೋಗುತಿಪ್ಪ ಮನುಜನೊಬ್ಬ=ದಟ್ಟವಾದ ಕಾಡಿನ ಹಾದಿಯಲ್ಲಿ ಒಬ್ಬ ವ್ಯಕ್ತಿಯು ನಡೆದುಕೊಂಡು ಹೋಗುತ್ತಿದ್ದಾಗ;

ಹುಲಿ=ಕಾಡಿನಲ್ಲಿ ನೆಲೆಸಿರುವ ಪ್ರಾಣಿ ; ಕಾಡು+ಕಿಚ್ಚು; ಕಾಡು=ಅಡವಿ/ಕಾನನ/ಅರಣ್ಯ ; ಕಿಚ್ಚು=ಬೆಂಕಿ/ಅಗ್ನಿ ; ಕಾಡುಗಿಚ್ಚು=ಕಾಡಿನ ಮರಗಿಡಪೊದೆಬಳ್ಳಿಗಳಿಗೆ ಬೆಂಕಿ ತಗುಲಿ , ಅದು ಎಲ್ಲೆಡೆಯಲ್ಲಿಯೂ ಹಬ್ಬಿ , ದಗದಗನೆ ಹತ್ತಿಕೊಂಡು ಮುಗಿಲನ್ನು ಮುಟ್ಟುವಂತೆ ಬೆಂಕಿಯು ದೊಡ್ಡದಾಗಿ ಉರಿಯುತ್ತಿರುವುದು; ರಕ್ಕಸಿ=ಕಾಡಿನಲ್ಲಿ ನೆಲೆಸಿರುವ ಬುಡಕಟ್ಟಿನ ಸಮುದಾಯಕ್ಕೆ ಸೇರಿದ ಹೆಣ್ಣು. ರಕ್ಕಸ ಸಮುದಾಯದ ವ್ಯಕ್ತಿಗಳು ಮಾನವರನ್ನು ತಿನ್ನುತ್ತಿದ್ದರು ಎಂಬ ಒಂದು ಕಲ್ಪನೆಯು ಜನಮನದಲ್ಲಿತ್ತು ; ಕಾಡು+ಆನೆ+ಗಳು; ಆನೆ=ಕಾಡಿನಲ್ಲಿ ನೆಲೆಸಿರುವ ಒಂದು ಪ್ರಾಣಿ ; ದೆಸೆಯಲ್+ಅಟ್ಟುತ; ದೆಸೆ=ದಿಕ್ಕು/ಎಡೆ/ಜಾಗ/ಮಗ್ಗಲು ; ದೆಸೆಯಲ್=ದಿಕ್ಕಿನಲ್ಲಿ/ದಿಕ್ಕಿನಿಂದ ; ಅಟ್ಟು=ಮೇಲೆ ನುಗ್ಗು/ಬೆನ್ನು ಹತ್ತಿ ಬರುವುದು ; ನಾಲ್ಕೂ ದೆಸೆಯಲಟ್ಟುತ ಬರೆ=ನಾಲ್ಕು ದಿಕ್ಕಿಗಳಿಂದಲೂ ಸುತ್ತುವರಿದು ಬೆನ್ನಟ್ಟಿಬರಲು / ಮಯ್ ಮೇಲೆ ನುಗ್ಗುತ್ತಿರಲು;

ಕಂಡು=ನೋಡಿ ; ಬಯ+ಇಂದ; ಭಯ=ಹೆದರಿಕೆ/ಅಂಜಿಕೆ/ಪುಕ್ಕಲುತನ ; ಹೋಗ=ಹೋಗಲು/ತಪ್ಪಿಸಿಕೊಳ್ಳಲು/ಪಾರಾಗಲು ; ದೆಸೆ+ಇಲ್ಲದೆ; ದೆಸೆ=ದಿಕ್ಕು/ಎಡೆ/ಜಾಗ ; ಹೋಗ ದೆಸೆಯಿಲ್ಲದೆ=ತಪ್ಪಿಸಿಕೊಳ್ಳಲು ದಾರಿ ಕಾಣದೆ/ಅವಕಾಶವಿಲ್ಲದೆ/ದಿಕ್ಕು ತೋಚದೆ; ಬಾವಿ=ನೀರಿನಿಂದ ತುಂಬಿರುವ ದೊಡ್ಡ ಗುಂಡಿ/ಕೂಪ ; ತಲೆಯನ್+ಊರಿ; ಊರಿ=ಇಟ್ಟು/ಒಡ್ಡಿ/ಮಡಗಿ ; ತಲೆಯನೂರಿ=ತಲೆಯನ್ನು ಬಗ್ಗಿಸಿಕೊಂಡು/ತಲೆ ಮರೆಸಿಕೊಂಡು/ಮೇಲೆ ಬೀಳಲು ಬಂದವರ ಕಣ್ಣು ತಪ್ಪಿಸಿ; ಬೀಳುವ+ಅಲ್ಲಿ; ಬೀಳುವಲ್ಲಿ=ಬಾವಿಯ ಒಳಕ್ಕೆ ಇಳಿಯುವ ಸಮಯದಲ್ಲಿ/ಜಾಗದಲ್ಲಿ; ಹಾವು=ನಂಜಿನಿಂದ ಕೂಡಿದ ಒಂದು ಪ್ರಾಣಿ ; ಕಂಡು=ನೋಡಿ; ಇಲಿ+ಕಡಿದ; ಇಲಿ=ಒಂದು ಬಗೆಯ ಪ್ರಾಣಿ ; ಕಡಿದ=ಅಗಿದ/ಕಚ್ಚಿರುವ ; ಬಳ್ಳಿ=ಹಂಬು/ಲತೆ/ಗಾತ್ರದಲ್ಲಿ ಸಣ್ಣನೆಯದಾಗಿದ್ದು ಉದ್ದವಾಗಿ ಹಬ್ಬಿರುವ ಸಸ್ಯ ; ಇಲಿಗಡಿದ ಬಳ್ಳಿ=ಇಲಿಯ ಕಡಿತದಿಂದ ಇನ್ನೇನು ಕತ್ತರಿಸಿ ತುಂಡಾಗುವಂತಹ ನೆಲೆಯಲ್ಲಿರುವ ಬಳ್ಳಿ; ಹಿಡಿದು=ಹಿಡಿದುಕೊಂಡು/ಅವಲಂಬಿಸಿ/ಆಶ್ರಯಿಸಿ/ನೆಚ್ಚಿಕೊಂಡು ; ನಿಲೆ=ನಿಲ್ಲಲು/ಜೋತಾಡುತ್ತಿರಲು/ಬಾವಿಯ ಒಳಗಡೆ ನೇತಾಡುತ್ತಿರಲು;

ಜೇನುಹುಳು=ಮರದ ಕೊಂಬೆರೆಂಬೆಗಳ ಮೇಲೆ/ಕಲ್ಲಿನ ಪೊಟರೆಗಳಲ್ಲಿ ಗೂಡನ್ನು ಕಟ್ಟಿ ಹೂವುಗಳ ಮಕರಂದವನ್ನು ಹೀರಿ ತಂದು ಸಿಹಿಯಾದ ತುಪ್ಪವನ್ನು ತಯಾರಿಸುವ ಒಂದು ಬಗೆಯ ಹುಳು ; ಮೈಯನು+ಊರುವಾಗ; ಮೈಯನು=ದೇಹವನ್ನು/ಶರೀರವನ್ನು; ಊರು=ಕಚ್ಚು/ಚುಚ್ಚು ; ಮೈಯನೂರುವಾಗ=ಜೇನುಹುಳು ತನ್ನ ಚೂಪಾದ ಹಾಗೂ ಹರಿತವಾದ ಮುಳ್ಳಿನ ಮೊನೆಯಂತಹ ಕೊಂಡಿಯಿಂದ ಮಯ್ಯನ್ನು ಕಚ್ಚುವಾಗ; ಇಲಿಗಡಿದ ಬಳ್ಳಿಯ ಹಿಡಿದು ನಿಲೆ ಜೇನುಹುಳು ಮೈಯನೂರುವಾಗ=ಇಲಿಯ ಕಡಿತದಿಂದ ಇನ್ನೇನು ತುಂಡಾಗುವಂತೆ ಹಿಂಜಿಹೋಗುತ್ತಿದ್ದ ಬಳ್ಳಿಯನ್ನೇ ಹಿಡಿದುಕೊಂಡು ನೇತಾಡುತ್ತಿದ್ದಾಗ ಉಂಟಾದ ಸದ್ದಿನಿಂದ , ಬಾವಿಯ ದಡದ ಅಂಚಿನಲ್ಲಿ ಕಟ್ಟಿದ್ದ ಜೇನುಗೂಡಿನಲ್ಲಿದ್ದ ಜೇನುಹುಳುಗಳು ಕೆರಳಿ ಹೊರಬಂದು ಅವನ ಮಯ್ಯನ್ನು ಕಚ್ಚತೊಡಗಿದವು. ಆಗ ಜೇನಿನ ಹುಟ್ಟಿಯಿಂದ ಜೇನುತುಪ್ಪವು ಹನಿಹನಿಯಾಗಿ ಬೀಳತೊಡಗಿತು; ತುದಿಯಲ್+ಒಂದು; ತುದಿ=ಕೊನೆ/ಅಂಚು ; ಹನಿ=ತೊಟ್ಟು/ಒಂದು ಬಿಂದು ; ಮಧು=ಜೇನು ತುಪ್ಪ/ಸಿಹಿಯಾದ ಜೇನು ; ಮೂಗಿನ ತುದಿಯಲೊಂದು ಹನಿ ಮಧು ಬಂದು ಬೀಳೆ=ಮೂಗಿನ ತುದಿಯಲ್ಲಿ ಜೇನುತುಪ್ಪದ ಹನಿಯೊಂದು ಬೀಳಲು;

ಹಿರಿದು+ಅಪ್ಪ; ಹಿರಿ=ದೊಡ್ಡದು/ಹೆಚ್ಚಿನದು; ಅಪ್ಪ=ಆಗಿರುವ/ಆದಂತಹ; ದುಃಖ+ಎಲ್ಲವ; ದುಃಖ=ಸಂಕಟ/ನೋವು/ವೇದನೆ/ಯಾತನೆ/ತೊಂದರೆ/ಕಳವಳ; ಹಿರಿದಪ್ಪ ದುಃಖವೆಲ್ಲವ=ಹಿಡಿದುಕೊಂಡಿರುವ ಬಳ್ಳಿಯು ತುಂಡಾದರೆ ಬಾವಿಯ ಒಳಕ್ಕೆ ಬಿದ್ದು ಪ್ರಾಣವನ್ನೇ ಕಳೆದುಕೊಳ್ಳವಂತಹ ನೆಲೆಗೆ ಒಳಗಾಗಿ , ಅತಿ ಹೆಚ್ಚಿನ ಅಪಾಯಕ್ಕೆ ಗುರಿಯಾಗಿ ಒದ್ದಾಡುತ್ತಿರುವ ಸಂಕಟವನ್ನು; ಸೈರಿಸಿ=ಸಹಿಸಿಕೊಂಡು/ತಾಳಿಕೊಂಡು; ನಾಲಗೆಯ ತುದಿಯಲ್ಲಿ=ನಾಲಗೆಯ ತುದಿಯಿಂದ ಜೇನಿನ ಹನಿಯಿರುವ ಮೂಗಿನ ಜಾಗವನ್ನು ; ಸೇವಿಸುವ+ಅಂತೆ; ಸೇವಿಸು=ನೆಕ್ಕು/ತಿನ್ನು; ಅಂತೆ=ಹಾಗೆ / ಆ ರೀತಿಯಲ್ಲಿ; ಸಂಸಾರ=ಮಾನವ ಬದುಕು/ಬಾಳ್ವೆ/ಜೀವನ; ಸುಖ=ಮಾನವನ ಬದುಕಿನಲ್ಲಿ ದೊರೆಯುವ ಒಲವು ನಲಿವು / ಮಯ್ ಮನಗಳಿಗೆ ಮುದ/ಆನಂದ/ಹಿಗ್ಗು ಉಂಟಾಗುವುದು; ವಿಚಾರಿಸಿ=ಚೆನ್ನಾಗಿ/ಸರಿಯಾಗಿ ಆಲೋಚಿಸಿ/ಚಿಂತಿಸಿ/ಮನನ ಮಾಡಿ; ನೋಡಿದಡೆ=ನೋಡಿದರೆ/ತಿಳಿದರೆ; ದುಃಖದ+ಆಗರ; ಆಗರ=ಮೂಲ ನೆಲೆ/ಜಾಗ ; ಇದನ್+ಅರಿದು; ಇದನು=ಇದನ್ನು/ಈ ಸಂಗತಿಯನ್ನು ; ಅರಿ=ತಿಳಿ ; ಅರಿದು=ತಿಳಿದುಕೊಂಡು/ಅರಿತುಕೊಂಡು ; ಸಕಲ=ಎಲ್ಲಾ/ಎಲ್ಲವನ್ನೂ ಒಳಗೊಂಡಂತೆ ; ವಿಷಯಂಗಳ್+ಅಲ್ಲಿ; ವಿಷಯ=ಜೀವನದ ಆಗುಹೋಗುಗಳು/ನೋವುನಲಿವಿನ ಪ್ರಸಂಗಗಳು/ಸಂಗತಿಗಳು ;

ಸುಕ+ಇಂತುಟು+ಎಂದು; ಇಂತುಟು=ಈ ರೀತಿಯದು/ಬಗೆಯದು ; ನಿರ‍್ವಿಶಯನ್+ಆಗಿ; ನಿರ‍್ವಿಶಯ=ಜೀವನದ ಆಗುಹೋಗುಗಳ/ನೋವು ನಲಿವುಗಳ ಬಗ್ಗೆ ಹೆಚ್ಚಿನ ಮೋಹ/ಆತಂಕಕ್ಕೆ ಒಳಗಾಗದಿರುವುದು; ನಿಂದ=ತಳೆದ/ಹೊಂದಿದ; ನಿಲವು=ಮನದಲ್ಲಿ ತಳೆಯುವ ತೀರ‍್ಮಾನ/ನಿರ‍್ಣಯ; ನಿರ್ವಿಷಯನಾಗಿ ನಿಂದ ನಿಲುವು=ಮಾನವನ ಬದುಕಿನಲ್ಲಿ ನೋವು ನಲಿವುಗಳು ವಾಸ್ತವವೆಂಬುದೆನ್ನು ಅರಿತುಕೊಂಡು , ಸಂಕಟ ಬಂದಾಗ ನಿರಾಶೆಗೊಂಡು ಕುಗ್ಗಿಹೋಗದೆ, ನಲಿವು ಉಂಟಾದಾಗ ಅದನ್ನು ಪಡೆದು ಬಾಳುವಂತಹ ಆಸೆಯನ್ನು ಹೊಂದಿರುವುದು/ಜೀವನದಲ್ಲಿ ಆಸಕ್ತಿಯನ್ನು ಕಳೆದುಕೊಳ್ಳದೆ ಬಾಳುವಂತಹ ಗಟ್ಟಿಮನಸ್ಸನ್ನು ಹೊಂದಿರುವುದು; ನೀನೇ=ಬದುಕಿನಲ್ಲಿ ಎದುರಾದ ಸಂಗತಿಗಳಿಗೆ ಹೊಂದಿಕೊಂಡು ಬಾಳುವುದನ್ನು ಕಲಿಸಿದವನು ನೀನಾಗಿರುವೆ/ಶಿವಶರಣಶರಣೆಯರು ಒಳ್ಳೆಯ ನಡೆನುಡಿಗಳಿಂದ ಬಾಳುವುದಕ್ಕೆ ಕಾರಣವಾಗುವ ಅರಿವನ್ನೇ ದೇವರೆಂದು ನಂಬಿದ್ದರು ; ಸಿಮ್ಮಲಿಗೆಯ ಚೆನ್ನರಾಮಾ=ದೇವರ ಹೆಸರು/ಚಂದಿಮರಸನ ಮೆಚ್ಚಿನ ದೇವರು/ಚಂದಿಮರಸನ ವಚನಗಳ ಅಂಕಿತನಾಮ)

 

ಹುಲ್ಲ ಮನುಷ್ಯನ ಕಂಡು ಹುಲ್ಲೆ ತಾ ಬೆದರುವಂತೆ
ಇಲ್ಲದ ಶಂಕೆಯನುಂಟೆಂಬನ್ನಕ್ಕ
ಅದರಲ್ಲಿಯೇ ರೂಪಾಯಿತ್ತು
ಹೇಡಿಗಳನೇಡಿಸಿ ಕಾಡಿತ್ತು
ಸಿಮ್ಮಲಿಗೆಯ ಚೆನ್ನರಾಮನೆಂಬ ಭಾವದ ಗಸಣಿ.

ಇಲ್ಲದ್ದನ್ನು ಇದೆಯೆಂದು/ಇರುವುದನ್ನು ಇಲ್ಲವೆಂದು ಮನದಲ್ಲಿ ಕಲ್ಪಿಸಿಕೊಂಡು , ಜೀವನದ ಪ್ರತಿಯೊಂದು ಗಳಿಗೆಯಲ್ಲೂ ಕಳವಳ/ತಲ್ಲಣ/ಅನುಮಾನ/ಗಾಬರಿ/ಆತಂಕಕ್ಕೆ ಒಳಗಾಗಿ ಮಾನಸಿಕ ಜಂಜಾಟದಿಂದ ನರಳುತ್ತಿರುವ ಹೇಡಿಗಳಿಗೆ/ಅಂಜುಬುರುಕರಿಗೆ/ಪುಕ್ಕಲುತನದ ವ್ಯಕ್ತಿಗಳಿಗೆ ಜೀವನದಲ್ಲಿ ಎಂದೆಂದಿಗೂ ನೆಮ್ಮದಿ ದೊರೆಯುವುದಿಲ್ಲವೆಂಬುದನ್ನು ಈ ವಚನದಲ್ಲಿ ಹೇಳಲಾಗಿದೆ.

( ಹುಲ್ಲ್+ಅ=ಹುಲ್ಲ; ಹುಲ್ಲು=ರಾಗಿ ಇಲ್ಲವೇ ಬತ್ತದ ಬೆಳೆಯ ಒಣಗಿದ ಕಡ್ಡಿ/ರಾಗಿ ಹುಲ್ಲು/ಬತ್ತದ ಹುಲ್ಲು; ಮನುಷ್ಯ=ಮಾನವ/ವ್ಯಕ್ತಿ ; ಹುಲ್ಲ ಮನುಷ್ಯ=ಬೆದರುಗೊಂಬೆ/ಬೆದರುಬೊಂಬೆ/ಮಡಕೆಯೊಂದರ ಮೇಲೆ ಕಣ್ಣು ಕಿವಿ ಮೂಗುಗಳನ್ನು ಸುಣ್ಣದಿಂದ ಬರೆದು, ಅದನ್ನು ಮಾನವನ ತಲೆಯಂತೆ ಸಿಂಗರಿಸಿ, ಅದರ ಇಕ್ಕೆಲಗಳಲ್ಲಿ ಕೋಲುಗಳನ್ನು ಬಿಗಿದು ಕಟ್ಟಿ , ಕೋಲುಗಳ ಸುತ್ತ ರಾಗಿ/ಬತ್ತದ ಹುಲ್ಲುಗಳನ್ನು ತುಂಬಿ, ಅದರ ಮೇಲೆ ಅಂಗಿ ಚಡ್ಡಿ ಬಟ್ಟೆಯನ್ನು ಬಿಗಿದುಕಟ್ಟಿ, ವ್ಯಕ್ತಿಯೊಬ್ಬನು ನಿಂತಿರುವಂತೆ ಗೊಂಬೆ/ಬೊಂಬೆಯೊಂದನ್ನು ಮಾಡಿ, ಬೆಳೆಗಳ ನಡುವೆ ಹೊಲಗದ್ದೆತೋಟಗಳಲ್ಲಿ ನಿಲ್ಲಿಸಿರುತ್ತಾರೆ. ಕಯ್ಗೆ ಬರಲಿರುವ ಬೆಳೆಯನ್ನು ಹಕ್ಕಿಗಳಿಂದ/ಪ್ರಾಣಿಗಳಿಂದ ಕಾಪಾಡಿಕೊಳ್ಳುವುದಕ್ಕಾಗಿ ಈ ರೀತಿಯಾದ ಬೊಂಬೆಯನ್ನು ಬೇಸಾಯಗಾರರು ಮಾಡಿರುತ್ತಾರೆ;

ಕಂಡು=ನೋಡಿ; ಹುಲ್ಲೆ=ಜಿಂಕೆ; ತಾ=ತಾನು ; ಬೆದರುವ+ಅಂತೆ; ಬೆದರು=ಹೆದರು/ಅಂಜು/ಪುಕ್ಕಲುಗೊಳ್ಳು ; ಅಂತೆ=ಹಾಗೆ/ರೀತಿ ; ಹುಲ್ಲ ಮನುಷ್ಯನ ಕಂಡು ಹುಲ್ಲೆ ತಾ ಬೆದರುವಂತೆ=ಬೆದರುಗೊಂಬೆಯನ್ನೇ ಜೀವಂತನಾದ ವ್ಯಕ್ತಿಯೆಂದು ತಪ್ಪಾಗಿ ತಿಳಿದುಕೊಂಡು ಜಿಂಕೆಯು ಹೆದರಿಕೆಯಿಂದ ದೂರಸರಿಯುವಂತೆ/ಕಂಗಾಲಾಗಿ ಓಡುವಂತೆ; ಇಲ್ಲದ=ವಾಸ್ತವದಲ್ಲಿ ಕಂಡುಬರದ/ ದಿಟವಾಗಿರದ ; ಶಂಕೆ+ಅನ್+ಉಂಟು+ಎಂಬ+ಅನ್ನಕ್ಕ; ಶಂಕೆ=ಅಪಾಯ/ವಿಪತ್ತು/ಹಾನಿ/ಕೇಡಾಗಬಹುದೆಂದು ಮನದಲ್ಲಿ ಹೆದರಿಕೆ/ಆತಂಕ/ಕಳವಳದಿಂದ ತಲ್ಲಣಿಸುವುದು; ಅನ್=ಅನ್ನು; ಉಂಟು=ಇದೆ ; ಎಂಬ=ಎನ್ನುವ ; ಅನ್ನಕ್ಕ=ವರೆಗೆ/ತನಕ ; ಇಲ್ಲದ ಶಂಕೆಯನುಂಟೆಂಬನ್ನಕ್ಕ=ವಾಸ್ತವವಾಗಿ ಇಲ್ಲದ ಅಪಾಯವನ್ನು ಇದೆಯೆಂದು ಊಹಿಸಿಕೊಂಡು, ಹೆದರಿಕೆಯಿಂದ ನಡುಗುತ್ತ ತಲ್ಲಣಗೊಂಡಿರುವ ತನಕ/ವರೆಗೆ; ಅದರಲ್ಲಿಯೇ=ಮನದಲ್ಲಿ ಮೂಡಿದ ಆತಂಕದ/ಆಪತ್ತಿನ/ಕೇಡಾಗುವುದೆಂಬ ಒಳಮಿಡಿತಗಳಿಂದಲೇ; ರೂಪು+ಆಯಿತ್ತು; ರೂಪು=ಆಕಾರ;

ರೂಪು ಆಯಿತ್ತು=ಮನದ ಹೆದರಿಕೆಯೇ ಒಂದು ರೂಪವನ್ನು ಪಡೆದು, ನಿಜವಾಗಿ ಎದುರಿಗೆ ಬಂದಂತೆ ಆಗುತ್ತದೆ; ಹೇಡಿಗಳನ್+ಏಡಿಸಿ; ಹೇಡಿ=ಅಂಜುಬುರುಕ/ಹೆದರಿಕೆಯಿಂದ ತತ್ತರಿಸುತ್ತಾ , ಎಲ್ಲ ಸಮಯಗಳಲ್ಲೂ/ಸನ್ನಿವೇಶಗಳಲ್ಲೂ/ಸಂಗತಿಗಳಲ್ಲಿಯೂ ಮುಂದಕ್ಕೆ ಅಡಿಯಿಡಲು ಹಿಂಜರಿಯುವವನು/ಪುಕ್ಕಲುತನವುಳ್ಳವನು ; ಏಡಿಸು=ಹೀಯಾಳಿಸು/ನಿಂದಿಸು/ಅವಹೇಳನ ಮಾಡು/ಕಡೆಗಣಿಸು ; ಕಾಡು+ಇತ್ತು; ಕಾಡು=ಪೀಡಿಸು/ತೊಂದರೆಯನ್ನು ಕೊಡು/ನರಳುವಂತೆ ಮಾಡು ; ಇತ್ತು=ಇರುವುದು; ಭಾವ=ಮನದಲ್ಲಿ ಮೂಡುವ ಒಳಮಿಡಿತ; ಗಸಣಿ=ತೊಂದರೆ/ಕಾಟ/ಹಿಂಸೆ/ತಿಕ್ಕಾಟ/ಕೋಟಲೆ ; ಭಾವದ ಗಸಣಿ=ಮನದೊಳಗೆ ಮೂಡುವಂತಹ ಅಪಾಯದ/ಕೆಡುಕಿನ/ಕೆಟ್ಟದ್ದಾಗುವುದೆಂಬ ಒಳಮಿಡಿತಗಳ ತುಡಿತ; ಸಿಮ್ಮಲಿಗೆಯ ಚೆನ್ನರಾಮನ್+ಎಂಬ; ಎಂಬ=ಎನ್ನುವ)

 

ತನ್ನದಾದಡೇನೋ ಕನ್ನಡಿ ಅನ್ಯರದಾದಡೇನೋ ಕನ್ನಡಿ
ತನ್ನ ರೂಪ ಕಂಡಡೆ ಸಾಲದೆ
ಸದ್ಗುರು ಆವನಾದಡೇನೋ
ತನ್ನನರುಹಿಸಿದಡೆ ಸಾಲದೆ
ಸಿಮ್ಮಲಿಗೆಯ ಚೆನ್ನರಾಮಾ.

ಮಾನವರ ಬದುಕಿನಲ್ಲಿ ಯಾವುದು ಸರಿ/ಯಾವುದು ತಪ್ಪು ; ಯಾವುದು ಒಳ್ಳೆಯದು/ಯಾವುದು ಕೆಟ್ಟದ್ದು ಎಂಬುದನ್ನು ವಿಂಗಡಿಸಿ ತಿಳಿಯುವಂತಹ ಅರಿವನ್ನು ಮೂಡಿಸಿ , ತಪ್ಪನ್ನು/ಕೆಟ್ಟದ್ದನ್ನು ತೊರೆದು, ಒಳಿತಿನ ಹಾದಿಯಲ್ಲಿ ನಡೆಯುವಂತೆ ಮಾಡಿ, ನಮ್ಮ ವ್ಯಕ್ತಿತ್ವವನ್ನು ರೂಪಿಸುವ ಗುರುವನ್ನು ಜಾತಿ/ಮತ/ಲಿಂಗ/ಸಂಪತ್ತಿನ ನೆಲೆಯಿಂದ ನೋಡಬಾರದು/ಅಳೆಯಬಾರದು ಎಂಬುದನ್ನು ಈ ವಚನದಲ್ಲಿ ಹೇಳಲಾಗಿದೆ.

“ ಜಾತಿ/ಮತ/ಲಿಂಗ/ಸಂಪತ್ತಿನ ನೆಲೆಯಿಂದ ನೋಡುವುದು “ ಎಂದರೆ ಮೇಲು ಜಾತಿ/ನಡುವಣ ಜಾತಿ/ಕೆಳ ಜಾತಿ; ನಮ್ಮದು ಈ ಮತ / ಬೇರೆಯವರದು ಮತ್ತೊಂದು ಮತ ; ಹೆಣ್ಣು/ಗಂಡು ; ಸಿರಿವಂತ/ಬಡವ ಎಂಬ ತಾರತಮ್ಯದಿಂದ ನೋಡಿ, ಯಾವುದೇ ವ್ಯಕ್ತಿಯನ್ನು ನಮ್ಮವನೆಂದು ಮೆರೆಸುವುದು ಇಲ್ಲವೇ ಬೇರೆಯವನೆಂದು ಕಡೆಗಣಿಸುವುದು.

( ತನ್ನದು+ಆದಡೆ+ಏನೋ; ತನ್ನದು=ತನಗೆ ಸೇರಿದ್ದು/ತನ್ನದೇ ಆಗಿರುವುದು ; ಆದಡೆ=ಆಗಿದ್ದರೆ ; ಏನೋ=ಏನು ಅನುಕೂಲ/ತೊಂದರೆ; ಕನ್ನಡಿ=ಪ್ರತಿಬಿಂಬವನ್ನು ಕಾಣಲು/ನೋಡಲು ಬಳಸುವ ಗಾಜು/ಕಂಚಿನ ಉಪಕರಣ; ಅನ್ಯರದು+ಆದಡೆ+ಏನೋ; ಅನ್ಯ=ಇತರ/ಬೇರೆಯ; ಅನ್ಯರದು=ಇತರರದು/ಬೇರೆಯವರದು; ತನ್ನದಾದಡೇನೋ ಕನ್ನಡಿ ಅನ್ಯರದಾದಡೇನೋ ಕನ್ನಡಿ=ಕನ್ನಡಿಯ ಒಡೆತನ ಯಾರಿಗೆ ಸೇರಿದ್ದರೆ ತಾನೆ ಏನು / ಕನ್ನಡಿಯು ಯಾರದಾಗಿದ್ದರೆ ತಾನೆ ಏನು; ತನ್ನ=ಕನ್ನಡಿಯಲ್ಲಿ ನೋಡಿಕೊಳ್ಳುವ ವ್ಯಕ್ತಿಯ ; ರೂಪ=ಆಕಾರ/ಪಡಿಯಚ್ಚು; ಕಂಡಡೆ=ಕಾಣಿಸಿದರೆ/ಕಾಣುವಂತಾದರೆ ; ಸಾಲು=ಸಾಕು/ಅಗತ್ಯ ಪೂರಯಿಸುವುದು; ಸಾಲದೆ=ಸಾಕಲ್ಲವೇ/ಅಗತ್ಯ ಈಡೇರುವುದಿಲ್ಲವೇ ;

ಸದ್ಗುರು=ಒಳ್ಳೆಯ ಗುರು/ಜೀವನದಲ್ಲಿ ಒಳಿತಿನ ನಡೆನುಡಿಗಳನ್ನು ತಿಳಿಯ ಹೇಳಿ , ಗುಡ್ಡನ ವ್ಯಕ್ತಿತ್ವವನ್ನು ರೂಪಿಸುವವರು; ಆವನ್+ಆದಡೆ+ಏನೋ; ಆವನ್=ಯಾವನು ; ತನ್ನನ್+ಅರುಹಿಸಿದಡೆ; ತನ್ನನ್=ವಿದ್ಯೆಯನ್ನು ಕಲಿಯಲು ಆಸೆ/ಹಂಬಲವುಳ್ಳ ವ್ಯಕ್ತಿಯನ್ನು ; ಅರುಹು=ತಿಳಿಸು/ಮನದಟ್ಟುಮಾಡು/ತಿಳಿಯ ಹೇಳು; ಅರುಹಿಸಿದಡೆ=ಮನದಟ್ಟು ಮಾಡಿಕೊಳ್ಳುವಂತೆ ತಿಳಿಯ ಹೇಳಿದರೆ/ಅರಿತು ಬಾಳುವಂತೆ ಹೇಳಿದರೆ; ಸಿಮ್ಮಲಿಗೆಯ ಚೆನ್ನರಾಮಾ=ಚಂದಿಮರಸನ ಮೆಚ್ಚಿನ ದೇವರು. )

( ಚಿತ್ರ ಸೆಲೆ:  sugamakannada.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: