ಆಯ್ದಕ್ಕಿ ಮಾರಯ್ಯನ ವಚನದ ಓದು

– ಸಿ.ಪಿ.ನಾಗರಾಜ.

ಆಯ್ದಕ್ಕಿ ಮಾರಯ್ಯನು ಹನ್ನೆರಡನೆಯ ಶತಮಾನದಲ್ಲಿ ಕನ್ನಡ ನಾಡಿನಲ್ಲಿದ್ದ ಶಿವಶರಣ. ಆಯ್ದಕ್ಕಿ ಮಾರಯ್ಯನ ಬಗ್ಗೆ ಸಾಹಿತ್ಯ ಚರಿತ್ರಕಾರರು ಈ ಕೆಳಕಂಡ ವಿವರಗಳನ್ನು ನಮೂದಿಸಿದ್ದಾರೆ.

ಹೆಸರು: ಆಯ್ದಕ್ಕಿ ಮಾರಯ್ಯ.

ಊರು: ಅಮರೇಶ್ವರ ಗ್ರಾಮ, ಲಿಂಗಸುಗೂರು ತಾಲ್ಲೂಕು, ರಾಯಚೂರು ಜಿಲ್ಲೆ.

ಹೆಂಡತಿ: ಆಯ್ದಕ್ಕಿ ಲಕ್ಕಮ್ಮ.

ಕಸುಬು: ಮಾರಯ್ಯನು ಕಲ್ಯಾಣ ಪಟ್ಟಣದಲ್ಲಿದ್ದ ಬಸವಣ್ಣನವರ ಮಹಾಮನೆಯ ಅಂಗಳದಿಂದ ಆಯ್ದುಕೊಂಡು ತಂದ ಅಕ್ಕಿಯಿಂದ, ಉಣಿಸು ತಿನಸುಗಳನ್ನು ತಯಾರಿಸಿ ಮಾರಯ್ಯ ಮತ್ತು ಲಕ್ಕಮ್ಮ ದಂಪತಿ ಶಿವಶರಣಶರಣೆಯರಿಗೆ ದಾಸೋಹವನ್ನು ಮಾಡುತ್ತಿದ್ದರು.

ದೊರೆತಿರುವ ವಚನಗಳು: 31

ವಚನಗಳ ಅಂಕಿತನಾಮ: ಅಮರೇಶ್ವರಲಿಂಗ

————————————————————-

ಕಾಯಕದಲ್ಲಿ ನಿರತನಾದಡೆ

ಗುರುದರ್ಶನವಾದಡೂ ಮರೆಯಬೇಕು

ಲಿಂಗಪೂಜೆಯಾದಡೂ ಮರೆಯಬೇಕು

ಜಂಗಮ ಮುಂದೆ ನಿಂದಿದ್ದಡೂ ಹಂಗ ಹರಿಯಬೇಕು

ಕಾಯಕವೆ ಕೈಲಾಸವಾದ ಕಾರಣ

ಅಮರೇಶ್ವರಲಿಂಗವಾಯಿತ್ತಾದಡೂ ಕಾಯಕದೊಳಗು.

ವ್ಯಕ್ತಿಯು ತಾನು ಕಯ್ಗೊಂಡಿರುವ ಕಾಯಕದಲ್ಲಿ ತಲ್ಲೀನತೆಯಿಂದ ತೊಡಗಿಕೊಳ್ಳಬೇಕೆಂಬುದನ್ನು ಈ ವಚನದಲ್ಲಿ ಹೇಳಲಾಗಿದೆ.

ಹನ್ನೆರಡನೆಯ ಶತಮಾನದಲ್ಲಿದ್ದ ಶಿವಶರಣಶರಣೆಯರ ನಿಲುವಿನಲ್ಲಿ ‘ಕಾಯಕ‘ ಎಂದರೆ “ವ್ಯಕ್ತಿಯು ಮಾಡುವ ಕಸುಬು/ಕೆಲಸವು ಅವನಿಗೆ ಮತ್ತು ಅವನ ಕುಟುಂಬಕ್ಕೆ ಒಲವು ನಲಿವು ನೆಮ್ಮದಿಯನ್ನು ತಂದುಕೊಡುವಂತೆಯೇ , ಸಹಮಾನವರಿಗೆ ಮತ್ತು ಸಮಾಜಕ್ಕೆ ಒಳಿತನ್ನು ಉಂಟುಮಾಡುವಂತಿದ್ದು , ಒಟ್ಟು ಜನಸಮುದಾಯದ ಹಿತಕ್ಕೆ ನೆರವಾಗುವಂತಿರುವ ದುಡಿಮೆ”.

( ಕಾಯಕ+ಅಲ್ಲಿ; ಕಾಯಕ=ಕಸುಬು/ಕೆಲಸ/ಗೆಯ್ಮೆ/ದುಡಿಮೆ; ನಿರತನ್+ಆದಡೆ; ನಿರತ=ಮಗ್ನವಾಗುವುದು/ತಲ್ಲೀನಗೊಳ್ಳುವುದು/ತೊಡಗಿಸಿಕೊಳ್ಳುವುದು; ನಿರತನ್=ತಲ್ಲೀನಗೊಂಡವನು/ತೊಡಗಿಸಿಕೊಂಡವನು/ಮಗ್ನನಾದವನು; ಆದಡೆ=ಆದರೆ/ಆಗಿರುವಾಗ; ಕಾಯಕದಲ್ಲಿ ನಿರತನಾದಡೆ=ಕೆಲಸವೊಂದನ್ನು ಕಯ್ಗೊಂಡು, ಅದನ್ನು ಒಲವು ನಲಿವುಗಳಿಂದ ಮಾಡಬೇಕೆಂಬ ಆಸೆಯಿಂದ ಕೂಡಿ, ಅದರಲ್ಲಿಯೇ ತನ್ನ ಮಯ್ ಮನಗಳನ್ನು ತೊಡಗಿಸಿಕೊಂಡು ದುಡಿಯುತ್ತಿರುವಾಗ;

ಗುರುದರ್ಶನ+ಆದಡೂ; ಗುರು=ವಿದ್ಯೆಯನ್ನು ಕಲಿಸುವ/ಅರಿವನ್ನು ಮೂಡಿಸುವ/ಒಳ್ಳೆಯ ವ್ಯಕ್ತಿತ್ವವನ್ನು ರೂಪಿಸುವ ವ್ಯಕ್ತಿ; ದರ್ಶನ=ನೋಡುವಿಕೆ/ಕಾಣುವಿಕೆ; ಆದಡೂ=ಆದರೂ; ಮರೆ=ನೆನಪಿಲ್ಲದಿರುವುದು/ನೆನಪಾಗದಿರುವುದು/ಗಮನವಿಲ್ಲದಿರುವುದು; ಗುರುದರ್ಶನವಾದಡೂ ಮರೆಯಬೇಕು=ದುಡಿಮೆಯ ಸಮಯದಲ್ಲಿ ಗುರು ತನ್ನ ಬಳಿ ಬಂದರೂ, ದುಡಿಮೆಯನ್ನು ಕಯ್ ಬಿಟ್ಟು, ಗುರುವನ್ನು ಉಪಚರಿಸಲು ಹೋಗಬಾರದು. ಏಕೆಂದರೆ ಗುರುಸೇವೆಗಿಂತಲೂ ಕಯ್ಗೊಂಡಿರುವ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸುವುದು ಮೊದಲ ಗುರಿಯಾಗಿರಬೇಕು ಎಂಬ ತಿರುಳಿನಲ್ಲಿ ಈ ಸೊಲ್ಲು ಬಳಕೆಯಾಗಿದೆ;

ಲಿಂಗ+ಪೂಜೆ+ಆದಡೂ; ಲಿಂಗ=ದೇವರೆಂದು ನಂಬಿರುವ ಶಿವನ ಸಂಕೇತದ ಕಲ್ಲು/ಮಣ್ಣು/ಮರ/ಲೋಹದ ವಿಗ್ರಹ; ಪೂಜೆ=ದೇವರನ್ನು ಒಲಿಸಿಕೊಳ್ಳಲು/ದೇವರ ಬಗ್ಗೆ ಒಲವನ್ನು ತೋರಿಸಲು ಮಾಡುವ ಬಹುಬಗೆಯ ಆಚರಣೆಗಳು; ಲಿಂಗಪೂಜೆಯಾದಡೂ ಮರೆಯಬೇಕು=ಲಿಂಗವನ್ನು ಪೂಜಿಸುವುದಕ್ಕಿಂತಲೂ ಈಗ ಮಾಡುತ್ತಿರುವ ದುಡಿಮೆಯು ದೊಡ್ಡದು ಎಂಬುದನ್ನು ಅರಿತಿರಬೇಕು;

ಜಂಗಮ=ಶಿವನನ್ನು ಒಲಿದವನು/ಒಳ್ಳೆಯ ನಡೆನುಡಿಗಳನ್ನೇ ಶಿವನೆಂದು ನಂಬಿ ಜನಸಮುದಾಯದ ಒಳಿತಿಗಾಗಿ ಬಾಳುತ್ತಿರುವವನು; ಮುಂದೆ=ತನ್ನ ಎದುರಿಗೆ/ಬಳಿಯಲ್ಲಿ; ನಿಂದು+ಇದ್ದಡೂ; ನಿಂದು=ನಿಂತುಕೊಂಡು; ಇದ್ದಡೂ=ಇದ್ದರೂ; ಹಂಗು=ನಂಟು/ಒಡನಾಟ; ಹಂಗ=ಹಂಗನ್ನು/ಯಾವುದೇ ಬಗೆಯ ವ್ಯವಹಾರವನ್ನು/ಒಡನಾಟವನ್ನು/ನಂಟನ್ನು; ಹರಿ=ಕಡಿ/ಕತ್ತರಿಸು/ತುಂಡುಮಾಡು; ಜಂಗಮ ಮುಂದೆ ನಿಂದಿದ್ದಡೂ ಹಂಗ ಹರಿಯಬೇಕು=ಜಂಗಮನು ತನ್ನ ಬಳಿಸಾರಿ ಬಂದು ನಿಂದಿದ್ದರೂ, ಅವನೊಡನೆ ಯಾವುದೇ ಮಾತುಕತೆಯನ್ನಾಡದೆ, ಅವನತ್ತ ಗಮನ ಹರಿಸದೆ, ವ್ಯಕ್ತಿಯು ತಾನು ಮಾಡುತ್ತಿರುವ ಕೆಲಸದಲ್ಲಿ ತೊಡಗಿರಬೇಕು;

ಕಾಯಕವೆ=ಕಯ್ಗೊಂಡಿರುವ ಕೆಲಸವೇ/ಮಾಡುತ್ತಿರುವ ದುಡಿಮೆಯೇ; ಕೈಲಾಸ+ಆದ; ಕೈಲಾಸ=ಹಿಮಾಲಯ ಗಿರಿಯ ಸಾಲುಗಳಲ್ಲಿರುವ ಒಂದು ಬೆಟ್ಟ/ಶಿವನನ್ನು ಪೂಜಿಸುವ ವ್ಯಕ್ತಿಗಳಿಗೆ, ಈ ಗಿರಿ ಪ್ರಾಂತ್ಯದಲ್ಲಿ ಶಿವನು ತನ್ನ ಗಣಗಳ ಜತೆಗೂಡಿ ನೆಲೆಸಿದ್ದಾನೆ. ಆದುದರಿಂದ ತಾವು ಸಾವನ್ನಪ್ಪಿದ ನಂತರ, ಶಿವನ ಬಳಿಸಾರಬೇಕೆಂಬ ಹಂಬಲವಿದೆ. ಏಕೆಂದರೆ ಇದು ಮಾನವಜೀವಿಗೆ ಒಲವು ನಲಿವು ನೆಮ್ಮದಿಯನ್ನು ನೀಡುವ ನೆಲೆ ಎಂಬ ನಂಬಿಕೆ ಜನಮನದಲ್ಲಿದೆ;

ಕಾಯಕವೇ ಕೈಲಾಸ=ಇದು ಒಂದು ನುಡಿಗಟ್ಟಾಗಿ ಬಳಕೆಯಲ್ಲಿದೆ. ವ್ಯಕ್ತಿಯು ತನ್ನ ಪಾಲಿನ ಕಾಯಕವನ್ನು ಒಲವು ನಲಿವು ಮತ್ತು ಪ್ರಾಮಾಣಿಕತನದಿಂದ ಮಾಡಿದರೆ, ಅದು ಅವನ ಬದುಕಿನ ಏಳಿಗೆಗೆ ಕಾರಣವಾಗುವುದರ ಜತೆಜತೆಗೆ ಸಹಮಾನವರಿಗೆ ಮತ್ತು ಸಮಾಜಕ್ಕೂ ಒಳಿತನ್ನುಂಟುಮಾಡಿ, ಜನರು ವಾಸಮಾಡುತ್ತಿರುವ ನೆಲೆಯನ್ನೇ ನೆಮ್ಮದಿಯ ಬೀಡನ್ನಾಗಿ ಮಾಡುತ್ತದೆ ಎಂಬ ತಿರುಳನ್ನು ಒಳಗೊಂಡಿದೆ;

ಅಮರೇಶ್ವರಲಿಂಗ+ಆಯಿತ್ತು+ಆದಡೂ; ಅಮರೇಶ್ವರಲಿಂಗ=ಶಿವನ ಹೆಸರು/ಆಯ್ದಕ್ಕಿ ಮಾರಯ್ಯನ ವಚನಗಳಲ್ಲಿ ಬಳಕೆಯಾಗಿರುವ ಅಂಕಿತನಾಮ/ಆಯ್ದಕ್ಕಿ ಮಾರಯ್ಯನ ಮೆಚ್ಚಿನ ದೇವರು; ಆಯಿತ್ತು=ಆಗಿರುವುದು; ಆಯಿತ್ತಾದಡೂ=ಆಗಿರುವುದಾದರೂ; ಕಾಯಕದ+ಒಳಗು; ಒಳಗು=ಒಳಪಟ್ಟಿದೆ/ಸೇರಿದೆ; ಅಮರೇಶ್ವರಲಿಂಗವಾಯಿತ್ತಾದಡೂ ಕಾಯಕದೊಳಗು=ದೇವರಾದ ಅಮರೇಶ್ವರಲಿಂಗದ ಪೂಜೆಯಾಗಿದ್ದರೂ ಅದು ಕೂಡ ಮಾಡುವ ಕಾಯಕದಲ್ಲೇ ಸೇರಿಕೊಂಡಿದೆ. ಅಂದರೆ ಮಾಡುತ್ತಿರುವ ಕಾಯಕವನ್ನು ಬಿಟ್ಟು ಅಮರೇಶ್ವರಲಿಂಗವನ್ನು ಪೂಜಿಸಬೇಕಾದ ಅಗತ್ಯವಿಲ್ಲ)

( ಚಿತ್ರ ಸೆಲೆ: lingayatreligion.com )

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. Prasanna Kumar Bidh says:

    ಇಂತ ಹೊನ್ನಿನ ಬೆಳಗುವ, ಸತ್ವಯುತ ಮೌಲ್ಯಯುತ ವಿಚಾರಗಳನ್ನು ತಲುಪಿಸುತ್ತಿರು ಹೊನಲು ನಿಜಕ್ಕೂ ಕನ್ನಡಿಗರ ಆಸ್ತಿ ಯೇ ಸರು ಶರಣು ಹೊನಲು ಬಳಗಕ್ಕೆ..

ಅನಿಸಿಕೆ ಬರೆಯಿರಿ:

Enable Notifications OK No thanks