ಚಪಾತಿಯಿಂದ ವಿವಿದ ಕಾದ್ಯಗಳು
ಬಾರತೀಯ ಪರಂಪರೆಯಲ್ಲಿ ಅನ್ನ ಅಂದರೆ ದೇವರು, ಅದಕ್ಕೆ ‘ಅನ್ನ ದೇವರಿಗಿಂತ ಅನ್ಯ ದೇವರಿಲ್ಲ’ ಗಾದೆ ಅತ್ಯಂತ ಸಮಂಜಸ. ಅಡುಗೆ ಮಾಡುವಾಗ ಎಶ್ಟೇ ಲೆಕ್ಕಾಚಾರ ಹಾಕಿ ಮಾಡಿದ್ರು ಒಂದೊಮ್ಮೆ ಮಾಡಿದ ಅಡುಗೆ ಉಳಿದುಬಿಡುತ್ತದೆ. ಮಾರನೆಯ ದಿನ ಕೆಡದೇ ಚೆನ್ನಾಗಿದ್ದ ಅಡುಗೆಯನ್ನು ಕಸದ ಬುಟ್ಟಿಗೆ ಎಸೆಯಲು ಮನಸಾಗಲ್ಲ. ಹೀಗೆ, ಮಾಡಿದ ಚಪಾತಿ ಮಿಕ್ಕಿದ್ದು, ಅದಕ್ಕೆ ಮತ್ತದೇ ಪಲ್ಯ ಮಾಡಿ ತಿನ್ನಲು ಬೇಜಾರಾಗಿದ್ದರೆ, ನಾನಾ ಬಗೆಯ ಹೊಸ ಕಾದ್ಯಗಳಿಂದ ಚಪಾತಿ ರುಚಿಸಬಹುದು.
ಚಪಾತಿ ಉಪ್ಪಿಟ್ಟು :
ಏನು ಬೇಕು?
ಚಪಾತಿ, ಈರುಳ್ಳಿ, ಟೊಮೇಟೊ, ಹಸಿಮೆಣಸಿನಕಾಯಿ, ಕರಿಬೇವು, ಕೊತಂಬರಿ ಸೊಪ್ಪು, ಕಡಲೆಬೀಜ, ಹುರಿಗಡಲೆ, ಉದ್ದಿನಬೇಳೆ.
1. ಚಪಾತಿಯನ್ನು ಸಣ್ಣಗೆ ತುಂಡರಿಸಿ ಅದಕ್ಕೆ ಉಪ್ಪು, ಸಕ್ಕರೆ, ಕಡಲೆಬೀಜದ ಪುಡಿಯನ್ನು ಬೆರೆಸಿಟ್ಟುಕೊಳ್ಳಬೇಕು.
2. ಎಣ್ಣೆಗೆ ಸಾಸಿವೆ, ಜೀರಿಗೆ, ಕರಿಬೇವು, ಉದ್ದಿನಬೇಳೆ, ಕಡಲೆಬೀಜ, ಹುರಿಗಡಲೆ ಹಾಕಿ ಸ್ವಲ್ಪ ಬೇಯಿಸಬೇಕು.
3. ನಂತರ ಹಸಿಮೆಣಸಿನಕಾಯಿ, ತುಂಡರಿಸಿದ ಈರುಳ್ಳಿ, ಟೊಮೇಟೊ ಹಾಕಿ ಚೆನ್ನಾಗಿ ಬೇಯಿಸಬೇಕು. ಸಿದ್ದಪಡಿಸಿದ ಚಪಾತಿಯ ಮಿಶ್ರಣವನ್ನು ಒಗ್ಗರಣೆಗೆ ಹಾಕಬೇಕು. ಸ್ವಲ್ಪ ಹೊತ್ತು ಚೆನ್ನಾಗಿ ಬೇಯಿಸಿ, ಕೊತಂಬರಿ ಸೊಪ್ಪನ್ನು ಬೆರೆಸಿ.
ಈಗ ಚಪಾತಿ ಉಪ್ಪಿಟ್ಟು ರುಚಿಸಲು ಸಿದ್ದ.
ಚಪಾತಿ ಮಾಲೆದಿ(ಮಾದಲಿ) :
ಏನು ಬೇಕು?
ಚಪಾತಿ, ಒಣ ಕೊಬ್ಬರಿ, ಗಸಗಸೆ, ಕಡಲೆಬೀಜದ ಪುಡಿ, ಹುರಿಗಡಲೆ ಪುಡಿ, ಏಲಕ್ಕಿ ಪುಡಿ, ಬೆಲ್ಲ.
1. ಚಪಾತಿ ಮತ್ತು ಬೆಲ್ಲವನ್ನು ಹಾಕಿ ಮಿಕ್ಸಿಯಲ್ಲಿ ನುಣ್ಣಗೆ ಪುಡಿಮಾಡಿಕೊಳ್ಳಬೇಕು.
2. ಹೀಗೆ ಸಿದ್ದಪಡಿಸಿದ ಮಿಶ್ರಣಕ್ಕೆ ಒಣ ಕೊಬ್ಬರಿ, ಗಸಗಸೆ, ಕಡಲೆಬೀಜ, ಹುರಿಗಡಲೆ ಮತ್ತು ಏಲಕ್ಕಿ ಪುಡಿಯನ್ನು ಹಾಕಿ ಎಲ್ಲವನ್ನು ಚೆನ್ನಾಗಿ ಬೆರೆಸಬೇಕು.
ಈ ಮಿಶ್ರಣವನ್ನು ಬೇಕಾದರೆ ಉಂಡೆಗಳಾಗಿಯೂ ಮಾಡಿಕೊಳ್ಳಬಹುದು. ಇದನ್ನು ತುಪ್ಪದೊಂದಿಗೆ ತಿಂದರೆ ಸ್ವಾದ ಹೆಚ್ಚು.
ಚಪಾತಿ ವೆಜ್ ರೋಲ್ :
ಏನು ಬೇಕು?
ಚಪಾತಿ, ಆಲೂಗಡ್ಡೆ, ಗಜ್ಜರಿ ದಪ್ಪಮೆಣಸಿನಕಾಯಿ, ಟೊಮೇಟೊ, ಪನೀರ್ ಚೂರುಗಳು, ಈರುಳ್ಳಿ, ಬೆಳ್ಳುಳ್ಳಿ, ಗರಂ ಮಸಾಲಾ.
1. ಚಪಾತಿಯನ್ನು ಬಾಣಲೆಯಲ್ಲಿ ಬಿಸಿಮಾಡಿಕೊಳ್ಳಬೇಕು.
2. ಮೇಲೆ ತಿಳಿಸಿದ ಸಾಮಗ್ರಿಗಳಿಂದ ಅತವಾ ಅವರವರ ಅಗತ್ಯಕ್ಕನುಗುಣವಾಗಿ ವಿವಿದ ತರಕಾರಿಗಳಿಂದ ಪಲ್ಯ ಮಾಡಿಕೊಂಡು ಗರಂ ಮಸಾಲಾ ಹಾಕಿ ಬೇಯಿಸಬೇಕು.
3. ಬಿಸಿಮಾಡಿದ ಚಪಾತಿಗೆ ತುಪ್ಪ ಸವರಿ, ಚಟ್ನಿ ಪುಡಿ ಉದುರಿಸಿ, ಸಿದ್ದಪಡಿಸಿದ ಪಲ್ಯವನ್ನು ಚಪಾತಿಯ ಎಲ್ಲ ಬದಿಗೂ ತುಂಬಿ, ಟೊಮೇಟೊ ಮತ್ತು ಮಯೋನೀಸ್ ಸಾಸ್ ಹಾಕಿ ಸುರುಳಿ ಸುತ್ತಬೇಕು.
ಹೀಗೆ ಸಿದ್ದಪಡಿಸಿದ ರೋಲ್ ಅನ್ನು ಟೊಮೇಟೊ ಕೆಚಪ್ ನೊಂದಿಗೆ ಸವಿಯಬಹುದು.
( ಚಿತ್ರ ಸೆಲೆ: ಬರಹಗಾರರ ಆಯ್ಕೆ )
ಇತ್ತೀಚಿನ ಅನಿಸಿಕೆಗಳು