ಈ ಇರುವೆ ಹೆಸರೇ ‘ಕ್ರೇಜಿ ಆ್ಯಂಟ್(Crazy Ant)’

– ಅನುಪಮಾ ಕೆ ಬೆಣಚಿನಮರಡಿ.

ಕ್ರೇಜಿ ಆ್ಯಂಟ್, Crazy Ant

ನನಗೂ ಇರುವೆಗೂ ಮೊದಲಿನಿಂದಲೂ ಏನೋ ವಿಚಿತ್ರ ನಂಟು. ಚಿಕ್ಕವಳಿದ್ದಾಗ ಇರುವೆ ಗೂಡಿನ ಹತ್ತಿರ ಗಂಟೆಗಟ್ಟಲೆ ಕಾಲ ಕಳೆಯುತ್ತಿದ್ದೆ. ಈಗ ಮಗನ ನೆಪ ಮಾಡಿಕೊಂಡು ಅವುಗಳ ಜೊತೆ ಆಟ ಆಡ್ತೀನಿ!! ಇದೇ ಕುತೂಹಲದಿಂದ ಇವುಗಳನ್ನು ಗಮನಿಸಿದಾಗ (ಅಬ್ಯಾಸ ಮಾಡಿದಾಗ ಅಂದರೆ ಸಮಂಜಸವಾದೀತು) ಕೆಲವು ಕುತೂಹಲ ಕೆರಳಿಸುವ ಅಂಶಗಳು ಕಂಡು ಬಂದವು. ಇರುವೆಗಳ ಬಗ್ಗೆ, ಅಂತರ‍್ಜಾಲದಲ್ಲಿ ಹುಡುಕಾಡಿದರೂ ಆ ಮಾಹಿತಿ ಬೇರೆ ದೇಶಗಳಲ್ಲಿ ಕಂಡು ಬರುವ ಮಾಹಿತಿಯಾಗಿರುತ್ತದೆ.

ಕೀಟಗಳು ಬೌಗೋಳಿಕ ಪ್ರದೇಶಗಳ ಅನುಸಾರ ಹೊಂದಿಕೊಳ್ಳುವ ಸಾಮರ‍್ತ್ಯವನ್ನು ಹೊಂದಿರುತ್ತವೆ. ಒಂದೇ ಜಾತಿಯ ಇರುವೆ ಬೇರೆ ಬೇರೆ ಗುಣಲಕ್ಶಣಗಳನ್ನು ಆ ಪ್ರದೇಶದ ಅನುಗುಣವಾಗಿ ಹೊಂದಿರುತ್ತವೆ. ಅಂದ ಹಾಗೆ ಈ ಇರುವೆಗೆ ಕ್ರೇಜಿ (crazy) ಹೆಸರು ಬಂದಿರುವುದು ಇದರ ವರ‍್ತನೆಯಿಂದ!! ಸ್ವಲ್ಪ ಚೇಡಿಸಿದರೂ, ಕೂಡಲೇ ಪ್ರತಿಕ್ರಿಯೆ ಬರುತ್ತದೆ – ಅತ್ತಿಂದಿತ್ತ ಓಡಾಡುವುದು, ನೆಗೆಯುವುದು ಹೀಗೆ. ಇದರ ವೈಗ್ನಾನಿಕ ಹೆಸರು – ಅನೋಪ್ಲೋಲೆಪಿಸ್ ಗ್ರೇಸಿಲಿಪಿಸ್ (Anoplolepis gracilipes).

ಬೌತಿಕ ಗುಣಲಕ್ಶಣಗಳು:

  • ಕೆಂಪು ಅತವಾ ಕಂದು ಬಣ್ಣದ ಇರುವೆ. ಹೊಟ್ಟೆಯ ಬಾಗ ಗಾಡ ಕಂದು ಬಣ್ಣ ಆಗಿದ್ದು ಅದರ ಮೇಲೆ ಅಡ್ಡ ಗೆರೆಗಳಿರುತ್ತವೆ
  • ದೇಹಕ್ಕೆ ಹೋಲಿಸಿದರೆ ಉದ್ದವಾಗಿರುವ 6 ಕಾಲು
  • ಉದ್ದ – 1 ಇಂಚು

ಈ ಇರುವೆಗಳು ಸಾಮಾನ್ಯವಾಗಿ ಕಂಡುಬರುವ ಜಾಗ:

  • ತಂಪು ಅತವಾ ಒಣ ಪ್ರದೇಶ
  • ಗೋಡೆಯ ಸಂದು, ಗಿಡದ ಬುಡ, ಹೂಕುಂಡ, ಕಸದ ತೊಟ್ಟಿ

ಆಹಾರ:

ಇದು ಮಾಂಸಾಹಾರಿ ಹಾಗೂ ಸಸ್ಯಾಹಾರಿ. ತಮ್ಮ ಗೂಡು ಬಿಟ್ಟು ತುಂಬಾ ದೂರ ಆಹಾರ ಅರಸುವುದಕ್ಕೆ ಇವು ಪ್ರಸಿದ್ದ. ಮಾಂಸಾಹಾರದಲ್ಲಿ  ಚಿಕ್ಕ ಕೀಟಗಳು, ಜಿರಳೆ, ಹಲ್ಲಿ ಇತ್ಯಾದಿ. ಸಸ್ಯಾಹಾರದಲ್ಲಿ ಕೆಲವು ಬೀಜಗಳು, ಅಡುಗೆ ಮನೆಯಲ್ಲಿ ಸಿಗುವ ಎಲ್ಲಾ ಬಗೆಯ ತಿಂಡಿ ತಿನಿಸುಗಳು. ಮುಕ್ಯವಾಗಿ ಇದು ಸಿಹಿತಿಂಡಿ ಪ್ರಿಯ – ಜೇನು, ಸಕ್ಕರೆಯಿಂದ ಮಾಡಿದ ಪದಾರ‍್ತಗಳು, ಸಿಹಿಯಾದ ಹಣ್ಣುಗಳು.

ಒಮ್ಮೆ ಚಿಕ್ಕು ಹಣ್ಣುಗಳನ್ನು ತಂದು ಸ್ವಲ್ಪ ಹಣ್ಣಾಗಲಿ ಎಂದು ಬುಟ್ಟಿಯಲ್ಲಿ ಇಟ್ಟಿದ್ದೆವು. ಮರುದಿನ ಬೆಳಿಗ್ಗೆ ನೋಡಿದರೆ ಹಣ್ಣಿನಲ್ಲಿ ದೊಡ್ಡ ರಂದ್ರ. ತೆಗೆದು ನೋಡಿದರೆ ಒಳಗೆಲ್ಲಾ ರಸ ಹೀರುತ್ತ ಕುಳಿತಿರುವ ಇರುವೆಗಳು!! ಅವುಗಳಿಗೆ ಸ್ವಲ್ಪ ತೊಂದರೆ ಕೊಟ್ಟರೂ ಅತಿಯಾಗಿ ಓಡಾಡುವ ಇರುವೆಗಳು, ಸಿಹಿ ಹೀರುವಾಗ ತದ್ವಿರುದ್ದವಾಗಿ ಪ್ರತಿಕ್ರಿಯಿಸುತ್ತವೆ!! ಅವುಗಳನ್ನು ಸಿಹಿ ಪದಾರ‍್ತಗಳಿಂದ ಕಿತ್ತು ಬೇರ‍್ಪಡಿಸಬೇಕು! ಇನ್ನೊಂದು ಅಚ್ಚರಿಯ ಸಂಗತಿಯೆಂದರೆ ಈ ಸಿಹಿಯನ್ನು ಕ್ರೇಜಿ ಇರುವೆಗಳು ಹೊಟ್ಟೆಯಲ್ಲಿ ಶೇಕರಿಸಿಕೊಳ್ಳುವುದು; ಬೇರೆ ಇರುವೆಗಳಿಗೆ ಅವಶ್ಯವೆನಿಸಿದಾಗ ಬಾಯಿ ಮುಕಾಂತರ ಹಂಚುತ್ತವೆ.

ಈ ಇರುವೆಗಳ ದೊಡ್ಡ ಗುಣವೆಂದರೆ, ಇವು ಕುಟುಕುವುದಿಲ್ಲ ಹಾಗು ಕಚ್ಚುವ ಪ್ರಮಾಣವೂ ಕಡಿಮೆ. ಅದಕ್ಕೆ ಏನೋ ನನ್ನ ಮಗ, “ಇರಿ ಇರಿ” (ಇರುವೆ ಅಂತ ಪೂರ‍್ತಿಯಾಗಿ ಅನ್ನಲು ಬರ‍್ತಿರಲಿಲ್ಲ)  ಎಂದು ಕೂಗುತ್ತಾ ಅವುಗಳನ್ನು ತಗೊಂಡು ನಿರ‍್ಬಯವಾಗಿ  ಬಾಯಲ್ಲಿ ಹಾಕಿಕೊಳ್ಳುತ್ತಿದ್ದ. ಇವುಗಳ ಅತಿಯಾದ ಸಂಕ್ಯೆಯೇ ಇವುಗಳ ಅಸ್ತ್ರ. ಎಲ್ಲೆಂದರಲ್ಲಿ ವೇಗವಾಗಿ ಓಡಾಡುವ ಇರುವೆಗಳನ್ನು ನೋಡಿದರೆ ಎಂತವರಿಗಾದರೂ ಹುಚ್ಚು ಹಿಡಿಯುತ್ತದೆ.

ಅತಿಯಾದ ಸಂತಾನೋತ್ಪತ್ತಿಯ ಕಾರಣ ಇದು ಬೇರೆ ಜಾತಿಯ ಇರುವೆಗಳ ಸಮೂಹವನ್ನು ಕೂಡ ಸ್ತಳಾಂತರಿಸುತ್ತದೆ. ಸಾಮಾನ್ಯವಾಗಿ ಒಂದು ಗೂಡಿನಲ್ಲಿ ಒಂದಕ್ಕಿಂತ ಹೆಚ್ಚು ರಾಣಿ ಇರುವೆಗಳಿದ್ದು ಗೂಡಿನ ಸಂಕ್ಯೆ ಕಡಿಮೆ ಇರುತ್ತದೆ. ಆದರೆ ಇವು ಚಿಕ್ಕ ಚಿಕ್ಕ ಸಮೂಹಗಳ ನಡುವೆ ಸಂಪರ‍್ಕ ಇಟ್ಟುಕೊಂಡು ದೊಡ್ಡ ಸಮೂಹವಾಗಿ (super colony) ಮಾರ‍್ಪಡುತ್ತವೆ.

ಈ ಇರುವೆಗಳು ಈಗ ನಮ್ಮ ಕುಟುಂಬದ ಸದಸ್ಯರಾಗಿವೆ. ಈಗಲೂ ಕೂಡ ನನ್ನ ಮಗನಿಗೆ ಊಟ ಮಾಡಿಸುವಲ್ಲಿ ಇವುಗಳ ಪಾಲು ದೊಡ್ಡದು. ‘ಅದರ ಕಣ್ಣು ನೋಡು’ ಎನ್ನುತ್ತಲೊ ಅತವಾ ‘ಅದು ಕೊಂಡೊಯ್ಯುವ ಆಹಾರ ಏನು?’ ಎನ್ನುತ್ತಾ ಒಂದೊಂದು ತುತ್ತು ಮಗನಿಗೆ ತಿನಿಸುವ ಕೆಲಸವಾಗುತ್ತದೆ 🙂

( ಚಿತ್ರ ಸೆಲೆ: natureloveyou.sg )

1 ಅನಿಸಿಕೆ

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.