ಕಣ್ಮುಂದೆ ಬಂದೊಮ್ಮೆ ನಕ್ಕುಬಿಡು

– ಸಚಿನ್ ಎಚ್‌. ಜೆ.

ಮರಗಟ್ಟಿದ ಈ ಪಟದಲಿ
ಚಳಿಗೆ ಮಂಜಾದ ಹನಿಯಂತೆ
ಹಾಲ್ಗೆನ್ನೆಗಳಲಿ ನೀ ನಗುವ ಬೀರುತ ನಿಂತೆ

ಬೆರಗು ತಾ ಮೂಡಿರಲು ತಾನೇ
ಇಲ್ಲೇ ನೋಡುತ ನಿಂತೆ
ಕಣ್ಣರಳಿಸಿ ನಾ ಮಗುವಿನಂತೆ

ಕಣ್ಮುಂದೆ
ಒಂದೇ ಒಂದು ಸಲ
ಸಿಕ್ಕಿದ್ದರೆ ನೀ

ಪಟದಿ ಅಚ್ಚಾದ ಆ ನಗುವ
ನಿನ್ನ ಮೊಗದಲಿ ಅರಳುವುದ
ಕಣ್ಣಾರೆ ಕಂಡಿದ್ದರೆ ನಾ

ನನ್ನ ಕಂಡು ನಕ್ಕ
ಆ ನಿನ್ನ ಒಂದು ನಗು
ಇಡೀ ಜೀವನಕೆ ಸಾಕಿತ್ತು

ಮತ್ತೆ ಮತ್ತೆ ಹೀಗೆ
ಕಶ್ಟ ಪಟ್ಟು ನಗುವುದು
ನನಗೇಕೆ ಬೇಕಿತ್ತು?

ಕರೆದರೂ ಅದೆಶ್ಟೋ ಬಾರಿ
ಬರಲಿಲ್ಲ ನೀನು
ಸಿಗಲಿಲ್ಲ ನೀನು
ಒಮ್ಮೆಯೂ ಸಹ

ಬೇಡಿದರೂ ಅದೆಶ್ಟೋ ಸಲ
ತಣಿಸಲಿಲ್ಲ ನೀನು
ಈ ಮನದ ಹಂಬಲ

ನಗಬೇಕಾಗಿದೆ ನಾ
ಇಂದು ಈ ಹುಸಿನಗುವ
ಸಿಗದೇ ವಂಚಿಸಿರಲು ನೀನು

ನನ್ನ ಕಣ್ಮುಂದೆ ನಗದೇ
ನನ್ನ ಜೀವನದ ನಗುವನೇ
ದೋಚಿರುವೆ ನೀನು

ಒಂದೇ ಒಂದು
ಸಲ ಸಿಗು
ಕಣ್ಣ ಮುಂದೆ

ಒಡಲಲ್ಲೆ ಸಿಕ್ಕಿಬಿಡು
ಮನಸಾರೆ ನಕ್ಕುಬಿಡು
ತುಟಿ ಅರಳಿಸಿ ಇಂದೆ

ಇನ್ನೆಂದಿಗೂ
ನಾ ಕೇಳುವುದಿಲ್ಲ
ಒಮ್ಮೆ ಸಿಕ್ಕು ಒಮ್ಮೆ ನಕ್ಕು

ಈ ನನ್ನ ಹ್ರುದಯದ
ಚಿಕ್ಕಾಸೆಯ ಒತ್ತಾಸೆಯ ನೀನು
ಅರೆಕ್ಶಣದಿ ಪೂರೈಸಿಬಿಡು

ಕಣ್ಮುಂದೆ ಬಂದೊಮ್ಮೆ
ನಕ್ಕುಬಿಡು
ಬೆಚ್ಚೆದೆಯ ತೆಕ್ಕೆಯಲಿ ಸಿಕ್ಕಿಬಿಡು

(ಚಿತ್ರ ಸೆಲೆ:  youtube)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: