‘ಓರಿಯಂಟಲ್ ಲಯನ್’ – ಒಂದೇ ಮರದಲ್ಲಿ ಕೆತ್ತಿರುವ ಅತಿದೊಡ್ಡ ಶಿಲ್ಪ
– ಕೆ.ವಿ.ಶಶಿದರ.
‘ಓರಿಯಂಟಲ್ ಲಯನ್‘ – ಇದು ಒಂದೇ ಮರದ ಕಾಂಡದಲ್ಲಿ ಕೆತ್ತಿರುವ ವಿಶ್ವದ ಅತಿ ದೊಡ್ಡ ಶಿಲ್ಪ. ಗರ‍್ಜಿಸುತ್ತಿರುವ ಸಿಂಹದ ಈ ಪ್ರತಿಕ್ರುತಿ ಚೀನಾದ ಸಿಟಿ ಸ್ಕ್ವೇರ್‌ನಲ್ಲಿ ರಾರಾಜಿಸುತ್ತಿದೆ. ಇಂತಹ ದೈತ್ಯ ಶಿಲ್ಪ ಕಡೆದಲ್ಲಿಂದ ಅಲ್ಲಿಗೆ ತಂದ ವಿಶಯ ನಿಜಕ್ಕೂ ಅದ್ಬುತ.
20 ಶಿಲ್ಪಿಗಳ 3 ವರುಶ ಪರಿಶ್ರಮ ಇದರ ಹಿಂದಿದೆ
ಓರಿಯಂಟಲ್ ಸಿಂಹ ಎಂದು ಕರೆಯಲಾಗುವ ಈ ಶಿಲ್ಪವನ್ನು ಬ್ರುಹತ್ ರೆಡ್‍ವುಡ್ ಮರದ ಕಾಂಡದಿಂದ ಕೆತ್ತಲಾಗಿದೆ. ಚೀನಾದ ಪ್ರಕ್ಯಾತ ವಾಸ್ತು ಶಿಲ್ಪಿ ಡೆಂಗ್‍ಡಿಂಗ್ ರುಯಿ ಯೋ ಇದರ ಮುಕ್ಯ ಶಿಲ್ಪಿ. ರುಯಿ ಯೋ ಜೊತೆ 20 ಸಹಾಯಕ ಶಿಲ್ಪಿಗಳು ಕೆತ್ತನೆ ಕಾರ‍್ಯದಲ್ಲಿ ತೊಡಗಿಸಿಕೊಂಡಿದ್ದರು. ಇವರೆಲ್ಲರ ಮೂರು ವರ‍್ಶಗಳ ಪರಿಶ್ರಮದಿಂದ ರೂಪುಗೊಂಡ ‘ಓರಿಯಂಟಲ್ ಸಿಂಹ’ ಇಂದು ಜಗದ್ವಿಕ್ಯಾತವಾಗಿದೆ.
ಮಯನ್ಮಾರ‍್ನಿಂದ ಚೀನಾಕ್ಕೆ ಬಂದ ದೈತ್ಯ
ಈ ದೈತ್ಯ ಸಿಂಹದ ಕೆತ್ತನೆಗೆ ಬಳಸಿದ್ದ ರೆಡ್‍ವುಡ್ ಮರ ಸಿಕ್ಕಿದ್ದು ಮಯನ್ಮಾರ‍್ನಲ್ಲಿ , ಇದರ ಕೆತ್ತನೆ ಆಗಿದ್ದೂ ಅಲ್ಲಿಯೇ. 2015ರಲ್ಲಿ ಪೂರ‍್ಣಗೊಂಡ ಈ ಬ್ರುಹತ್ ಸಿಂಹದ ಕೆತ್ತನೆಯನ್ನು 3,000 ಮೈಲುಗಳಶ್ಟು ದೂರವಿರುವ ಸ್ತಳಕ್ಕೆ ಸಾಗಿಸುವುದೇ ಪ್ರಯಾಸದ ಕೆಲಸವಾಗಿತ್ತು. ಆದುನಿಕ ತಂತ್ರಗ್ನಾನದ ಸಹಾಯದಿಂದ ಈ 47.5 ಅಡಿ ಉದ್ದ, 16.5 ಅಡಿ ಎತ್ತರ ಮತ್ತು 13 ಅಡಿ ಅಗಲದ ಓರಿಯಂಟಲ್ ಸಿಂಹವನ್ನು ಮಯನ್ಮಾರ್‌ನಿಂದ ಚೀನಾ ದೇಶಕ್ಕೆ ಸಾಗಿಸಿ ವೂಹಾನ್ಸ್ ಪಾರ‍್ಚೂನ್ ಪ್ಲಾಜಾ ಟೈಮ್ ಸ್ಕೇರ್‍ನಲ್ಲಿ, ಡಿಸೆಂಬರ್ 2015ರಲ್ಲಿ ಸ್ತಾಪಿಸಲಾಯಿತು.
ಒಣಗಿ ಉರುವಲಾಗಲಿದ್ದ ಕಟ್ಟಿಗೆಯನ್ನೇ ಬಳಸಿದ್ದು ಇದರ ವಿಶೇಶತೆ
ಈ ಪ್ರತಿಕ್ರುತಿಯ ಇನ್ನೊಂದು ವಿಶೇಶವೆಂದರೆ, ‘ಓರಿಯಂಟಲ್ ಸಿಂಹ’ವನ್ನು ಮಾಡಲಿಕ್ಕಾಗಿ ಹಸಿರು ತುಂಬಿ ನಿಂತ ಮರವನ್ನು ಗುರುತಿಸುವುದಾಗಲೀ, ಕಡಿಯುವುದಾಗಲೀ ಮಾಡಿಲ್ಲ. ಬದಲಾಗಿ ಒಣಗಿ ಉರುವಲಿಗೆ ಯೋಗ್ಯ ಸ್ತಿತಿಯಲ್ಲಿದ್ದ ಮರವನ್ನೇ ಈ ಬ್ರುಹತ್ ಕೆತ್ತನೆಯ ಕೆಲಸಕ್ಕೆ ಬಳಸಿರುವುದು.
ಓರಿಯಂಟಲ್ ಸಿಂಹದ ಯಾವುದೇ ದೇಹ ಬಾಗವನ್ನೂ ಕಸಿ ಮಾಡಿಲ್ಲ. ಬಹಳಶ್ಟು ಬಾಗದಲ್ಲಿ ಮೂಲ ಕಾಂಡದಲ್ಲಿ ಅಂತರ‍್ಗತವಾಗಿ ಇದ್ದ ಒರಟು ವಿನ್ಯಾಸವನ್ನು ಹಾಗೆಯೇ ಉಳಿಸಿಕೊಳ್ಳಲಾಗಿದೆ. ಮುಕ, ತಲೆ, ಉಗುರುಗಳು ಮತ್ತು ಬಾಲ ಮಾತ್ರ ಪಾಲೀಶ್ ಮಾಡಿ ನೈಜ್ಯತೆಯ ಸನಿಹಕ್ಕೆ ತರಲಾಗಿರುವುದು ವಿಶಿಶ್ಟ.
ಚೀನೀ ಸಂಸ್ಕ್ರುತಿಯಲ್ಲಿ ಸಿಂಹದ ಸ್ತಾನಮಾನ
ಚೀನೀಯರ ಸಂಸ್ಕ್ರುತಿಯಲ್ಲಿ ಸಿಂಹಕ್ಕೆ ವಿಶೇಶ ಸ್ತಾನವಿದೆ. ಅದರ ಗಾಂಬೀರ‍್ಯ, ತೂಕದ ನಡೆಯಿಂದಾಗಿ ಚೀನೀಯರು ಅದನ್ನು ರಕ್ಶಕ ಸ್ತಾನದಲ್ಲಿಟ್ಟಿದ್ದಾರೆ. ಸಿಂಹವು ಚೀನಾ ದೇಶಕ್ಕೆ ಬರಲು ಮೂಲ ಕಾರಣ ಬೌದ್ದ ದರ‍್ಮ. ಈ ದರ‍್ಮ ಬಾರತದಿಂದ ಚೀನಾಕ್ಕೆ ಹರಡಿಕೊಂಡಾಗ ಬೌದ್ದ ದರ‍್ಮೀಯರು ಅನುಸರಿಸುತ್ತಿದ್ದ ಸಂಕೇತಗಳು ಸಹ ಅದರ ಜೊತೆ ಕೂಡಿಕೊಂಡಿತು. ಇದರಲ್ಲಿ ಪ್ರದಾನವಾದ ಸಂಕೇತ ಸಿಂಹ. ಚೀನಾದಲ್ಲಿ ಸಿಂಹಕ್ಕೆ ವಿಶೇಶ ಸ್ತಾನಮಾನ ಕಲ್ಪಿಸಿಕೊಟ್ಟಿದ್ದಾರೆ. ಇದರ ಕುರುಹಾಗಿ ಪ್ರತಿಯೊಂದು ಅರಮನೆಯ ಬಾಗಿಲಿನ ಎರಡೂ ಬದಿಯಲ್ಲಿ ಸಿಂಹದ ಪ್ರತಿಮೆಗಳು ರಾರಾಜಿಸುವುದನ್ನು ಕಾಣಬಹುದು. ಸಿಂಹ ದುಶ್ಟ ಶಕ್ತಿಗಳನ್ನು ದೂರವಿಡುತ್ತದೆ ಎಂಬುದು ಅವರ ನಂಬಿಕೆ.
ಗಿನ್ನೆಸ್ ಬುಕ್ ಸೇರಿದ ಬ್ರುಹತ್ ಸಿಂಹ
ಒಂದೇ ಮರದ ಕಾಂಡದಿಂದ ತಯಾರಾದ ಬ್ರುಹತ್ ಗಾತ್ರದ ರೆಡ್‌ವುಡ್ ಮರದ ಶಿಲ್ಪ ಎಂದು ಗಿನ್ನೆಸ್ ಬುಕ್ ಆಪ್ ವಲ್ರ್ಡ್ ರೆಕಾಡ್ರ್ಸ್‌ನಲ್ಲೀ ಈ ಬ್ರುಹತ್ ಪ್ರತಿಕ್ರುತಿ ಸ್ತಾನ ಪಡೆದಿದೆ.
(ಮಾಹಿತಿ ಮತ್ತು ಚಿತ್ರ ಸೆಲೆ: hypeblaze.com, pastemagazine.com, charismaticplanet.com)
ಇತ್ತೀಚಿನ ಅನಿಸಿಕೆಗಳು