ಹಳ್ಳಿಯೆಂಬ ಜಾನಪದ ಕಲಾ ಬಂಡಾರ

– ವೀರೇಶ.ಅ.ಲಕ್ಶಾಣಿ.

ಜಾನಪದ ಕಲೆ, Folk Art

ಬೆಳಗಾಗಿ ನಾನೆದ್ದು ಯಾರ‍್ಯಾರ ನೆನೆಯsಲಿ
ಎಳ್ಳು-ಜೀರಿಗೆ ಬೆಳೆಯೋಳ||
ಬೂಮ್ತಾಯಿ ಎದ್ದೊಂದು ಗಳಿಗೆ ನೆನೆದೇನ|

ಕತ್ತಲು ಕಳೆದು ಚುಮುಚುಮು ನಸುಕು ಹರಿಯುತ್ತಿದ್ದಂತೆ ಅವ್ವನೋ, ಅಜ್ಜಿಯರೋ ಕುಟ್ಟುತ್ತ ಬೀಸುತ್ತ ಹಾಡು ಹಾಡುತ್ತ, ಆ ಹಾಡುಗಳಲ್ಲೇ ಜಾನಪದ ಕಲಾಲೋಕವನ್ನೇ ಬುವಿಗಿಳಿಸುತ್ತಿದ್ದರು. ಇದು ಇಶ್ಟಕ್ಕೇ ಸೀಮಿತವಾಗಿರಲಿಲ್ಲ. ದಾನ್ಯ ಹಸನು ಮಾಡುವಾಗ, ಹೊಲಗದ್ದೆಗಳಲ್ಲಿ ಕೆಲಸ ಮಾಡುವಾಗ, ತಾವು ಮಾಡುತ್ತಿರುವ ಕೆಲಸದಲ್ಲಿ ದಣಿವಾಗದಿರಲೆಂದು  ಮಹಿಳೆಯರು ಗುಂಪಾಗಿಯೋ, ಮರುದನಿಗೂಡಿಸಿಯೋ, ಕೆಲವೊಮ್ಮೆ ಸ್ವತಹ ತಾವೇ ಹಾಡು ಕಟ್ಟಿ ಹೇಳುತ್ತಿದ್ದರು. ಅವರ ಜನಪದ ಹಾಡುಗಳಲ್ಲಿ ನವರಸಗಳೂ ತುಂಬಿ ಕೇಳಿದವರ ಮನಸನ್ನು ಒಂದರೆಗಳಿಗೆ ತನ್ನ ಲೋಕದೆಡೆ ಸೆಳೆಯುತ್ತಿತ್ತು. ಈ ಹಾಡುಗಳು ಇತಿಹಾಸ ಪ್ರಸಿದ್ದ ರಾಜ-ಮಹಾರಾಜರ, ಸ್ವತಂತ್ರ ಹೋರಾಟಗಾರರ, ತ್ಯಾಗಮಯಿಗಳ, ವೀರಮಹಿಳೆಯರ, ರಾಮಾಯಣ, ಮಹಾಬಾರತದಂತಹ ಕತೆಗಳನ್ನೂ ಒಳಗೊಂಡಿರುತ್ತಿದ್ದವು. ಇಶ್ಟಲ್ಲದೆ, ಸವಾಲು-ಜವಾಬಿನಹಾಡುಗಳು, ವಿನೋದಮಯ ಹಾಡುಗಳೂ ಸಹ ಕೇಳುಗರ ಮನರಂಜಿಸುತ್ತಿದ್ದವು.

ಸಂಪ್ರದಾಯದ ಪದಗಳೆಂಬ ಜನಪದ ಹಾಡುಗಳು, ಹಳ್ಳಿಗಳ ಮನೆ ಮನೆಗಳಲ್ಲಿ ನಡೆಯುತ್ತಿದ್ದ ಸಾಂಪ್ರದಾಯಿಕ ಕಾರಣಗಳಾದ ಮದುವೆ-ಮುಂಜಿ, ಸೀರಿ(ಸೀರೆ) ಕಾರಣ, ಹೆಣ್ಣುಮಕ್ಕಳು ರುತುಮತಿಯಾದ ಸಂದರ‍್ಬ, ನಾಮಕರಣ, ವಿಶೇಶ ಪೂಜೆ-ಪುನಸ್ಕಾರಗಳಂತಹ ಆಚರಣೆಗಳ ಸಂದರ‍್ಬಗಳಲ್ಲಿ ಸಂದರ‍್ಬಾನುಸಾರವಾಗಿ ಅಂತಹುದೇ ಹಾಡು ಕಟ್ಟಿ ಹಾಡುತ್ತಿದ್ದರು. ಊರ ದೇವಿಯ ಉತ್ಸವ, ಜಾತ್ರೆಗಳಂತಹ ಸಮಯದಲ್ಲಿ ಎಂದೂ ಮುಗಿಯದ ಹಾಡುಗಳ ಲೆಕ್ಕದಲ್ಲಿ ಗ್ರಾಮದ ಮಹಿಳೆಯರು ಸಂಪ್ರದಾಯದ ಹಾಡುಗಳನ್ನು ಹಾಡುವ ರೀತಿ ಕೇಳುವದೇ ಸೊಗಸು.

ಇನ್ನು ಪುರುಶರೂ ಸಹ ಸ್ತ್ರೀಯರಿಗಿಂತ ತಾವೇನು ಕಡಿಮೆ ಎಂಬಂತೆ, ಹೊಲ-ಗದ್ದೆಗಳಲ್ಲಿ ಉತ್ತು-ಬಿತ್ತುವಾಗ, ವಿಶೇಶವಾಗಿ ಸುಗ್ಗಿಯ ಸಮಯದಲ್ಲಿ ಒಕ್ಕಲಿ ಮಾಡುವಾಗ ಹಂತಿಪದಗಳನ್ನು ಹಾಡುತ್ತ, ಎತ್ತುಗಳನ್ನು ಗದರಿಸಿ ಹಂತಿ ಹೊಡೆಯುತ್ತ –

“ಎಂಟೆತ್ತು ಹೊಡಕೊಂಡು ಕಂಟ್ಯಾಗ ಬರುವಾಗ|
ಗಂಟುಬಿದ್ದಾಳೊ ಇದಿಮಾಯಿ||
ಗಂಟುಬಿದ್ದಾಳೊ ಇದಿಮಾಯಿ ಹೊಟ್ಟೀಲೆ ಬಂಟ ಹುಟ್ಯಾನೋ
ನಮ್ ಬಸವಣ್ಣ||”

“ಬೆಳ್ಳೀಯ ಬಾರ‍್ಕೋಲು,
ಬಂಗಾರದ ಸೆಡ್ಡಿ ಬಲಗೈಯ|
ಬಂಗಾರದ ಸೆಡ್ಡಿ ಬಲಗೈಯ್ಯಾಗ್ ಹಿಡಕೊಂಡು,
ಹೊನ್ನ ಬಿತ್ಯಾರೋ ಹೊಳಿಸಾಲ||”

ಎಂದು ಹಾಡುತ್ತಿದ್ದ ರೀತಿ ಇಂದು ಕೇವಲ ಕನಸು ಮಾತ್ರವಾಗಿ ಉಳಿದಿರುವುದು ವಿಶಾದನೀಯ.

“ಕರಿ ಎತ್ತು ಕಾಳಿಂಗ
ಬಿಳಿ ಎತ್ತು ಮಾಲಿಂಗಾss
ಸರಕಾರsದೆತ್ತು ಸಾರಂಗ ಅಳುವುದೋ”

ಎಂದು ಬಾನುಲಿಯ ಕ್ರುಶಿರಂಗ ಕಾರ‍್ಯಕ್ರಮದ ಪ್ರಾರಂಬ ಗೀತೆ ಆ ದಿನಗಳನ್ನು ಮತ್ತೆ ಮತ್ತೆ ನೆನಪಿಸುತ್ತದೆ.

ತೊಗಲುಗೊಂಬೆ ಆಟ ಆಡಿಸುತ್ತ ರಾಮಾಯಣ ಮಹಾಬಾರತದ ಕತಾನಕಗಳನ್ನು ಹೇಳುತ್ತ ಸುಂದರವಾದ ಯಕ್ಶಗಾನ ಪ್ರಸಂಗದಂತಹ ದ್ರುಶ್ಯಗಳನ್ನು ಸ್ರುಶ್ಟಿಸಿ, ತೊಗಲುಗೊಂಬೆಗಳನ್ನು ಲೀಲಾಜಾಲವಾಗಿ ಕುಣಿಸಿ ತೋರಿಸುತ್ತಿದ್ದ ರೀತಿ ಚಿತ್ತಾಕರ‍್ಶಕವಾಗಿತ್ತು. ಇವರೇ ಕಿಳ್ಳಿಕ್ಯಾತ ಉರುಪ್ ಸಿಳ್ಳಿ(ಶಿಳ್ಳೆ)ಕ್ಯಾತರು. ಮಳೆ ಬಾರದೆ ಬರಗಾಲದ ಚಾಯೆ ಆವರಿಸಿದರೆ ಜನರು ಇವರನ್ನು ಕರೆಯಿಸಿ ಊರೂರಿನ ಕೇರಿ-ಕೇರಿಗಳಲ್ಲಿ ತೊಗಲುಗೊಂಬೆಯಾಟ ಆಡಿಸುತ್ತಿದ್ದರು. ಇದರಿಂದ ಸಮ್ರುದ್ದವಾಗಿ ಮಳೆ-ಬೆಳೆಯಾಗುತ್ತದೆಂಬ ನಂಬಿಕೆ ಜನರಲ್ಲಿತ್ತು. ಇದಕ್ಕೆ ಪ್ರತಿಯಾಗಿ ಮನೆ ಮನೆಗಳಿಂದ ಜನರೇ ಹಣ ಸಂಗ್ರಹಿಸಿ ಅವರಿಗೆ ಕೊಡುತ್ತಿದ್ದರು. ಇಶ್ಟಲ್ಲದೇ ಇದೇ ಸಂದರ‍್ಬದಲ್ಲಿಯೇ ಕೆಲವೊಮ್ಮೆ ಗ್ರಾಮದ ಅನುಬವಿಕ ಜನಪದ ಹಾಡುಗಾರ ಮಹಿಳೆಯರಿಂದ “ಚನ್ನಮ್ಮನ ಪದ” ಹಾಡಿಸುತ್ತಿದ್ದುದೂ ಉಂಟು.

ಅಶ್ಟಲ್ಲದೇ ಚಿಕ್ಕ ಮಕ್ಕಳು, ಕೆಲವೊಮ್ಮೆ ಯುವಕರೂ ಸೇರಿ ತಂಬಿಗೆಯ ತುಂಬ ನೀರು ತುಂಬಿ ಅದರ ಮೇಲೇ ಎಕ್ಕದ ಎಲೆ ಮುಚ್ಚಿ ಬೋರಲು ಹಿಡಿದು – “ಬರಲಿ ಬರಲಿ, ಮಳೆಬರಲಿ” ಎಂದು ಕೂಗುತ್ತ ಹಳ್ಳಿಯ ಓಣಿ ಓಣಿಗಳಲ್ಲಿ ಗುಂಪು ಗುಂಪಾಗಿ ಓಡಾಡುತ್ತಿದ್ದರು. ಎಕ್ಕದ ಎಲೆ ಉದುರಿ ಬಿದ್ದು ತಂಬಿಗೆಯೊಳಗಿನ ನೀರು ಚೆಲ್ಲಿದಾಗ ಎಲ್ಲ ಮಕ್ಕಳೂ ಲಬೋ ಲಬೋ ಎಂದು ಹೊಯ್ಕೊಳ್ಳುತ್ತಾ (ಬಾಯಿ ಬಡಿದುಕೊಳ್ಳುತ್ತಾ) ಪುನಹ ಮೊದಲಿನಂತೆ ತಂಬಿಗೆಗೆ ನೀರು ತುಂಬಿ ಎಕ್ಕದ ಎಲೆ ಮುಚ್ಚಿ ತಂಬಿಗೆ ಬೋರಲಾಗಿ ಹಿಡಿದು ಮಳೆ ಗೋಶಣೆ ಕೂಗುತ್ತಾ ಸಾಗುತ್ತಿದ್ದರು. ಇದರಿಂದಲೂ ಮಳೆಬರುತ್ತದೆಂಬ ನಂಬಿಕೆ ಜನಪದರಲ್ಲಿತ್ತು.

ಚಿಕ್ಕ ಚಿಕ್ಕ ಮಕ್ಕಳು ಹಳ್ಳಿಯ ಗಲ್ಲಿ ಗಲ್ಲಿಗಳ ಬಯಲಲ್ಲಿ ತಮ್ಮ ಮೈ ಸಮೇತ  ದುಂಡಾಕಾರವಾಗಿ ಸುತ್ತುತ್ತಾ – “ಕಪ್ಪಟ್ಟ ಮಳಿ, ಕಾರ ಮಳಿ ದೇವರ ಗುಡಿಯಾಗ ನೀರಿಲ್ಲೋ ನೀರಿಲ್ಲೋ”,  “ಮಳೆ ಬಂತೋ ಮಾರಾಯ, ಗುಡಿ ಕಟ್ಟೋ ಶಿವರಾಯ” ಎಂದು ಹಾಡುತ್ತಾ ಮಳೆ ಬರುತ್ತದೆಂಬ ನಂಬಿಕೆಯಲ್ಲಿ ಹಾಡಿ ನಲಿಯುತ್ತಿದ್ದರು. ಕೆಲವೊಮ್ಮೆ ಗುರ‍್ಜಿಯಾಟ, ಕಪ್ಪೆ, ಕತ್ತೆಗಳ ಮದುವೆಗಳು, ತುಂಬಿದ ಕೊಡ ಪೂಜಿಸಿ ಮಳೆ ಕೇಳುವ ಹರಕೆ, ಸಪ್ತಬಜನೆ, ಬಜನೆ ಮಾಡುತ್ತ ದೇವರಲ್ಲಿ ಮಳೆಗಾಗಿ ಬೇಡಿಕೆ ಇಡುವಂತಹ ಆಚರಣೆಗಳು, ಮಳೆ ಬಂದಾಗ ಜನರಲ್ಲಿ ಆಚರಣೆಗಳ ಬಗೆಗಿನ ನಂಬಿಕೆಯನ್ನು ಗಟ್ಟಿಗೊಳಿಸುತ್ತಿದ್ದವು.

ಹಬ್ಬ-ಹರಿದಿನಗಳಂತಹ ವಿಶೇಶ ಸಂದರ‍್ಬಗಳಲ್ಲಿ ನಡೆಸುವ ಪುರಾಣ ಪ್ರವಚನಗಳು ಜನರಲ್ಲಿ ಬಕ್ತಿಬಾವವನ್ನು ಗಟ್ಟಿಗೊಳಿಸುತ್ತಿದ್ದರೆ, ನಾಟಕ, ಮೂಡಲಪಾಯದ ಬಯಲಾಟ, ಡಪ್ಪಿನ ಕತೆಗಳು ಜನರ ಕಲಾ ಪ್ರಾವೀಣ್ಯತೆಗೆ ಸಾಕ್ಶಿಯಾಗುತ್ತಿದ್ದವು. ಕೆಲವೊಮ್ಮೆ ಹಳ್ಳಿಗಳ ಯುವಕರು ಮಕ್ಕಳು ಊರ ಬಯಲಲ್ಲಿ ಸೇರಿ ಹಬ್ಬದ ಸಡಗರದಲ್ಲಿ ಆಡುತ್ತಿದ್ದ ಹಳ್ಳಿ ಆಟಗಳು, ಉತ್ಸವದ ಮೆರವಣಿಗೆಯಲ್ಲಿನ ಯುವಕರ ಕೋಲಾಟ, ಅದರಲ್ಲೇ ಕೈಚಳಕದಿಂದ ಹಗ್ಗ ಹೆಣೆಯುತ್ತ ಕೋಲಾಟವಾಡುತ್ತಿದ್ದ ಪರಿ, ಡೊಳ್ಳಿನ ಕುಣಿತ, ಡೊಳ್ಳಿನ ಪದಗಳು, ಶಹನಾಯಿ, ಬಾಜಾ ಬಜಂತ್ರಿ ಮೇಳ ಕಣ್ಮುಂದೆ ಬೆರಗಿನ ಲೋಕವನ್ನೇ ಸ್ರುಶ್ಟಿಸುತ್ತಿದ್ದವು.

ಇನ್ನು ಹಳ್ಳಿಗಳಲ್ಲಿ ಮುಸ್ಲಿಂ ಬಾಂದವರ ಹಬ್ಬವಾಗಿದ್ದರೂ ಹಿಂದೂಗಳೂ ಸಹ ಅವರೊಂದಿಗೆ ಸೇರಿ ಸಾಮರಸ್ಯದಿಂದ ಆಚರಿಸುತ್ತಿದ್ದ ಮೊಹರಂನ ಸಡಗರದ ಹುಲಿವೇಶದ ಕುಣಿತ, ಕರಡಿ ವೇಶ, ಕಳ್ಳಳ್ಳಿಬವ್ವ (ಚಿಕ್ಕ ಮಕ್ಕಳಾಗಿದ್ದಾಗ ನಾವು ಹೇಳುತ್ತಿದ್ದ ಒಂದು ಬಗೆಯ ವೇಶ. ವಿದೂಶಕ ಯಾ ಕೋಡಂಗಿಯನ್ನು ಹೋಲುತ್ತಿದ್ದ ಪಾತ್ರ), ಹಲಾಯಿ ಹಾಡು ಹಾಗೂ ಕುಣಿತ, ದೀಪಾವಳಿಯ ‘ಅಂಟಿಗೋ ಪಿಂಟಿಗೋ’, ಜೋಕುಮಾರನ ಹಾಡುಗಳೊಂದಿಗೆ ಮೂರ‍್ತಿಯನ್ನು ಊರಲ್ಲಿ ಹೊತ್ತು ಸಾಗುತ್ತ ಮಾಡುವ ಆಚರಣೆ, ಸೀಗವ್ವ ಗೌರವ್ವರ ಹಬ್ಬದಲ್ಲಿನ ಆಚರಣೆಗಳು – ಒಂದೇ ಎರಡೇ! ನೆನೆಯುತ್ತ ಹೋದಂತೆ ಸಡಗರದ ಜನಪದ ಲೋಕದ ಸುಗ್ಗಿಗೆ ಕೊನೆಯಿಲ್ಲ.

ಇಂದು ಬಾನುಲಿಯಲ್ಲಿ ಪ್ರಸಾರವಾಗುವ ಜನಪದ ಕಲಾ ಪ್ರಕಾರಗಳಾದ ಸಂಪ್ರದಾಯದ ಹಾಡುಗಳು, ಕರಡಿ ಮಜಲು, ವೀರಬದ್ರದೇವರ ಒಡಪುಗಳು, ಶಹನಾಯಿ ವಾದನ, ಗೊಂದಲಿಗರ ಹಾಡು, ಡೊಳ್ಳಿನ ಕೈ ಪೆಟ್ಟು, ಡೊಳ್ಳಿನ ಹಾಡು, ಲಂಬಾಣಿ ಹಾಡುಗಳು, ಯಕ್ಶಗಾನ ಪ್ರಸಂಗಗಳು, ಯಕ್ಶಗಾನದ ಹಾಡುಗಳು ಮುಂತಾದ ಜನಪದ ಕಲಾ ಪ್ರಕಾರಗಳು ಮನಸಿಗೆ ಮುದ ನೀಡುವುದರ ಜೊತೆಗೆ ಕಣ್ಮುಂದೆ ಜನಪದ ಕಲಾ ಲೋಕವನ್ನೇ ತೆರೆದಿಡುತ್ತವೆ.

ಜನಪದ ಲೋಕದ ಬೀಡಾಗಿದ್ದ ಹಳ್ಳಿಗಳಲ್ಲಿ ಇಂದು ದೂರದರ‍್ಶನಗಳು ಲಗ್ಗೆ ಇಟ್ಟು ಜನಪದ ಕಲೆಗಳೇ ನಶಿಸಿ ಹೋಗುತ್ತಿವೆ. ಮುಂದಿನ ಪೀಳಿಗೆ ಜನಪದ ಕಲಾ ಸಂಸ್ಕ್ರುತಿಯನ್ನು ಮರೆಯುವ ಮುನ್ನ ಅವುಗಳಿಗೆ ಮತ್ತೆ ಜೀವ ಕೊಡುವ ಕೆಲಸಗಳು ಕೆಲವು ಉತ್ಸವಗಳಲ್ಲಿ ಅಲ್ಲಲ್ಲಿ ಆಗುತ್ತಿದ್ದರೂ, ಹಳ್ಳಿಗಳ ಕಲಾ ಜೀವಾಳದ ಪುನರುಜ್ಜೀವನ ಹಳ್ಳಿಗಳಿಂದಲೇ ಪ್ರಾರಂಬಗೊಳ್ಳಬೇಕಿದೆ.

( ಚಿತ್ರ ಸೆಲೆ: kannada.oneindia.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: